ಅಮ್ಮನ ಮಹತ್ವ ಬಣ್ಣಿಸುವ ‘ಅಮ್ಮ ಮರೆಯಲಾಗದ ಅನುಭೂತಿ’ ‘ದೀವಾರಾ’ ಎಂಬ ಹಿಂದಿ ಸಿನಿಮಾದಲ್ಲಿ ಒಂದು ಸಂಭಾಷಣೆ ಇದೆ -ನನ್ನ ಬಳಿ ಆಸ್ತಿ ಇದೆ, ಹಣವಿದೆ, ಕಾರಿದೆ, ಬಂಗಲೆ ಇದೆ, ನಿನ್ನ ಹತ್ತಿರ ಏನಿದೆ ಎಂದು ಸಹೋದರ ಶಶಿಕಪೂರ್ ಅಮಿತಾ ಬಚ್ಚನ್‌ನಲ್ಲಿ ಕೇಳುತ್ತಾನೆ . ಆಗ ಆತ ಹೇಳುತ್ತಾನೆ- ನನ್ನ ಬಳಿ ಅಮ್ಮ ಇದ್ದಾಳೆ. ಇನ್ನೊಂದು ಕವಿತೆಯ ಸಾಲು ಹೀಗಿದೆ- ಕೋಟಿ ದೇವರೆಲ್ಲ ಕೂಡಿ ನಿಂತರೇನು, ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು? ಇನ್ನೊಂದು ಚಲನಚಿತ್ರಗೀತೆ ಹೀಗಿದೆ- ಅಮ್ಮಾ ಎಂದರೆ ಏನೋ ಹರುಷವು, ನಮ್ಮ ಪಾಲಿಗೆ ಅವಳೇ ದೈವವು..... ಈ ಸಾಲುಗಳು ಅಮ್ಮನ ಪರಿಚಯ ಮಾಡಿಕೊಡಲು ಸಾಕು. ಕಾರ್ಕಳದ ನಿವೃತ್ತ ಶಿಕ್ಷಕಿ ನಿವೃತ್ತ ಶಿಕ್ಷಕಿ ಅನುಪಮಾ ಚಿಪ್ಳೂಣಕರ್ ಅವರ ‘ಅಮ್ಮ ಮರೆಯಲಾಗದ ಅನುಭೂತಿ’ ಎನ್ನುವ ಈ ಕೃತಿ ಓದುವಾಗ ಮೇಲಿನ ಸಾಲುಗಳು ನೆನಪಾಗುತ್ತವೆ. ಜೊತೆಗೆ ನಮ್ಮ ಅಮ್ಮಂದಿರು ಈ ಕೃತಿಯನ್ನು ಓದುವಾಗ ನಮ್ಮೆದುರು ಪ್ರತ್ಯಕ್ಷರಾಗುತ್ತಾರೆ. ಅಮ್ಮ ನಮ್ಮ ಎದೆಯಾಳದಲ್ಲಿ ಅವಿತಿರುವವಳು. ಲೇಖಕಿ ಅನುಪಮಾ ನಮಗೆಲ್ಲಾ ಈ ಕೃತಿಯ ಮೂಲಕ ಅಮ್ಮನ ನೆನಪಿನ ಸವಿ, ಅವಳ ವಿರಾಟ್ ರೂಪ, ಅವಳ ದೈವತ್ವದ ಶಕ್ತಿ, ಅವಳು ಕಷ್ಟಪಟ್ಟು ನಮ್ಮನ್ನು ಬೆಳೆಸಿದ ರೀತಿ, ಹೃದಯ ವೈಶಾಲ್ಯತೆ, ನಿಷ್ಕಲ್ಮಶ ಪ್ರೇಮವನ್ನು ೧೩ ಕಿರು ಲೇಖನಗಳ ಮೂಲಕ ತೋರಿಸಿದ್ದಾರೆ. ಅಮ್ಮನ ಪಾತ್ರವನ್ನ...