ಭಾವಜೀವಿಗಳ
‘ಅವಳ ಹೆಜ್ಜೆ ಗುರುತು’
‘ಅವಳ ಹೆಜ್ಜೆ ಗುರುತು’ ಇದು ಭರವಸೆಯ ಬರಹಗಾರ್ತಿ ಮೂಲತಃ. ಸಾಗರದವರಾದ ಸೌಮ್ಯಾ ಕಾಶಿ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಹೆಣ್ಣಿನ ಪಾತ್ರವೇ ಅಧಿಕವಿದೆ. ಕೃತಿಯ ಹೆಸರಿನಲ್ಲೂ ಹೆಣ್ಣೇ ಇದೆ. ಬದುಕಿನ ದಾರಿಯಲ್ಲಿ ಜೊತೆಯಲ್ಲಿರುವ, ಜೊತೆಯಾಗುವ, ಕೆಲವೊಂದಷ್ಟು ದೂರ ಜೊತೆಯಾಗಿ ನಂತರ ಮರೆಯಾಗುವ, ಹೆಣ್ಣು, ತಾಯಿ, ಅಕ್ಕ, ತಂಗಿಯಾಗಿಯೋ, ಗೆಳತಿಯಾಗಿಯೋ, ಹೆಂಡತಿಯಾಗಿಯೋ ಪಾತ್ರ ವಹಿಸುತ್ತಾಳೆ. ಆ ದಾರಿಯಲ್ಲಿನ ‘ಅವಳ ಹೆಜ್ಜೆಯ ಗುರುತು’ ನ್ನು ಇಲ್ಲಿ ತೋರಿಸಿದ್ದಾರೆ.
ಇಲ್ಲಿರುವ ಪಾತ್ರಗಳು ಬಹುತೇಕವಾಗಿ ಎಲ್ಲರಿಗೂ ಗೊತ್ತಿರುವಂತಹುದೇ. ಸಹಜ ಪಾತ್ರಗಳ ಮೂಲಕ ಚೆಂದದ ಕಥೆಯನ್ನು ಹೆಣೆದಿದ್ದಾರೆ. ಆದ್ದರಿಂದ ಇವು ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಬರವಣಿಗೆಯ ಶೈಲಿಯೂ ಚೆಂದವಾಗಿದೆ. ಹವ್ಯಕ ಕನ್ನಡವು ಹೆಚ್ಚಾಗಿ ಬಳಕೆಯಾಗಿದೆ. ಇದು ಕಥೆಯ ತೂಕ, ಶೈಲಿಗೆ ಮೆರುಗು ತಂದಿದೆ. ಇಲ್ಲಿನ ಪಾತ್ರಗಳೆಲ್ಲಾ ನಮ್ಮ ಮನಸ್ಸಿನಲ್ಲಿ ಸದಾ ಉಳಿಯುವಂತಹವು.
ಕೃತಿಯ ಕುರಿತು:
ಅಮ್ಮನ ಹಾಗೆ ಕಂಡವಳು
ಈ ಕಥೆಯಲ್ಲಿ ಹಳ್ಳಿ ಜನರ ಮೌಢ್ಯ, ಆಧುನಿಕತೆಗೆ ತೆರೆದುಕೊಳ್ಳದೇ ಇರುವುದು, ತಮ್ಮದೇ ಹಠ, ಮುಟ್ಟಿನ ಬಗ್ಗೆ ಇರುವ ವಿಚಾರದ ಕೊರತೆ, ಇನ್ನೊಬ್ಬರು ಸಲಹೆ ಕೊಟ್ಟರೂ ಅದನ್ನು ಒಪ್ಪದಿರುವುದು, ಚಾಡಿ ಹೇಳುವುದು, ನೈಜ ಕಾರಣ ಅರಿಯದೆ ಮೊಂಡುತನ ಪ್ರದರ್ಶಿಸುವುದು... ಮೊದಲಾದವುಗಳ ಬಗ್ಗೆ ಕಥೆಯ ನಿರೂಪಕಿ ತನ್ನ ತಾಯಿಯ ಉದಾಹರಣೆಗೆ ಜೊತೆಗೆ ಇನ್ನೊಬ್ಬ ಸಂಬಂಧಿಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.
ಶೇ. ೪ರಷ್ಟು ಹೆಣ್ಣುಮಕ್ಕಳಿಗೆ ಪ್ರಿಮೆಚುರ್ ಮೆನ್ಯುಪಾಸ್ ಎದುರಾಗುತ್ತದೆ. ಅಂದರೆ ೨೭-೨೮ರ ಹರಯಕ್ಕೇ ಮುಟ್ಟು ನಿಂತುಹೋಗುತ್ತದೆ. ಇದರಿಂದ ಅವರಲ್ಲಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಸೈಕಿಯಾಟಿಕ್ ಡಿಸಾರ್ಡರ್ ಆಗುತ್ತದೆ. ಕೋಪ, ಹಠ, ಟೆನ್ಶನ್, ತಮ್ಮನ್ನೇ ತಾವು ನಂಬದಿರುವುದು, ಸುಮ್ಮನೆ ಅಳುವುದು, ಕಂಡವರ ಮೇಲೆಲ್ಲ ಅನುಮಾನಪಡುವುದು, ಎಗರಾಡುವುದನ್ನು ಮಾಡುತ್ತಾರೆ. ಇದನ್ನು ಅರಿಯದೆ ಮನೆಯವರು ಮತ್ತು ಸಂಬಂಧಿಕರು, ಅಕ್ಕಪಕ್ಕದವರು ದೇವರಿಗೆ ಹರಕೆ ಹೊರುವುದು, ಆಸ್ಪತ್ರೆಗೆ ಕರೆದೊಯ್ದ ಸರಿಯಾಗಿ ಚಿಕಿತ್ಸೆ ಕೊಡಿಸದೆ ಅವರ ಭವಿಷ್ಯವನ್ನೇ ಅಲ್ಲಾಡಿಸುವುದು, ಈ ಬಗ್ಗೆ ಮಾಹಿತಿ ಇದ್ದವರು ತಿಳಿಹೇಳಿದರೂ ಒಪ್ಪದೇ ಮೊಂಡುತನ ಮಾಡುವುದನ್ನು ನಿರೂಪಕಿ ವಿವರಿಸಿದ್ದಾರೆ. ಅವರ ತಾಯಿಗೆ ಇದೇ ಸಮಸ್ಯೆ ಆಗಿದ್ದರೂ ಜನ ಏನೇನೋ ಮಾತನಾಡುತ್ತಿದ್ದುದು, ಅಮ್ಮನಿಗೆ ಯಕ್ಷಿ ಅಥವಾ ಚೌಡಿ ಹತ್ತಿರ ಹರಕೆ ಕಟ್ಟಿದ್ದರೆ ಸರಿ ಹೋಗುತ್ತಿತ್ತು. ಆದರೆ ನಿಮ್ಮ ಅಪ್ಪ ಹಠ ಹಿಡಿದು ಆಸ್ಪತ್ರೆಗೆ ಹೋದ. ಅಲ್ಲಿ ಆ
ಆಕೆಗೆ ಗುಣವಾಗಲಿಲ್ಲ. ಇದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಳೆಂದು ಗಂಭೀರವಾದ ಆರೋಪ ಮಾಡುತ್ತಾರೆ.
ಇದೇ ಸಮಸ್ಯೆ ಸಂಬಂಧಿ ಶಾಂತಕ್ಕ ಎನ್ನುವವರಿಗೂ ಆದಾಗ ನಿರೂಪಕಿ ಅವರ ಮನೆಯವರಿಗೆ ನೈಜ ವಿಚಾರವನ್ನು ಅರುಹಿದರೂ ಏನೇನೋ ಕತೆ ಕಟ್ಟುತ್ತಾರೆ. ಮದುವೆ ಆಗಬಾರದೆಂದು ಆಕೆ ಹಠ ಹಿಡಿದಿದ್ದಾಳೆ. ಜೊತೆಗೆ ಯಾವನನ್ನೋ ಲವ್ ಮಾಡಿ ಕೆಲಸಕ್ಕೆ ಸೇರಿ ಮರ್ಯಾದೆ ಹೋಯಿತು. ಇದಕ್ಕೆಲ್ಲ ಹೆದರಿ ಡಾಕ್ಟರ್ ಹತ್ತಿರ ಹೋಗಿ ಹಣವನ್ನು ಖರ್ಚು ಮಾಡುವುದು ವ್ಯರ್ಥ ಎನ್ನುತ್ತಾನೆ ಅವಳ ಅಪ್ಪ. ಶಾಂತಕ್ಕನಿಗೆ ಕೌನ್ಸಿಲಿಂಗ್ ಮಾಡಿಸೋಣ ನನ್ನ ಅಮ್ಮನಿಗೂ ಹೀಗೆ ಆಗಿತ್ತಂತೆ ಶಾಂತಕ್ಕಳ ತಾಯಿ ಬೇಡ ಎಂದು ವಾದ ಮಾಡುತ್ತಾಳೆ.
ಕಡಲ ತೀರದ ಕಥೆ
ರೆಸಾರ್ಟಿನಲ್ಲಿ ಪರಿಚಯವಾದ ವಿದೇಶಿ ಹುಡುಗಿಯನ್ನು ನಂಬಿ ತನ್ನ ಮನೆಯ ಅಡುಗೆ ಮಾಡಿ ಬಡಿಸಿದ ಹುಡುಗ ಆಕೆ ಬೇರೆಯವನ ಜೊತೆ ಹೋದಾಗ ನಂಬಿ ಕೆಟ್ಟೆ ಎಂದುಕೊಳ್ಳುತ್ತಾನೆ. ಅದೇ ವೇಳೆ ಗಂಡ ಬಿಟ್ಟು ಹೋದರೂ ಕೊರಗದೆ, ಹೆದರದೆ, ಕಣ್ಣೀರು ಸುರಿಸದೆ ಬದುಕುತ್ತಿರುವ ನನ್ನ ಅಜ್ಜಿ ನಿಜಕ್ಕೂ ಗಟ್ಟಿಗಿತ್ತಿ ಅಂದುಕೊಳ್ಳುತ್ತಾನೆ.
ಕಡಲಂಚಿನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್‌ಗೆ ೩೭ ವರ್ಷವಾದರೂ ಮದುವೆಗೆ ಯುವತಿ ಸಿಕ್ಕಿರಲಿಲ್ಲ. ಅಲ್ಲಿಗೆ ಬಂದಿದ್ದ ವಿದೇಶಿ ಯುವತಿಯೊಬ್ಬಳ ಸ್ನೇಹ ಸಂಪಾದಿಸುತ್ತಾನೆ. ಅಲ್ಲೇ ಸನಿಹದಲ್ಲಿರುವ ತನ್ನ ಮನೆಯ ಹತ್ತಿರ ಆಕೆಯನ್ನು ಕರೆತಂದು ಮನೆಯಿಂದ ರುಚಿಯಾದ ಮೀನು ಊಟವನ್ನು ಮಾಡಿಕೊಡುತ್ತಾನೆ. ಕೆಲವು ದಿನದ ನಂತ ಈಕೆ ರೆಸಾರ್ಟಿನಿಂದ ಹೋಗುತ್ತಾಳೆ. ಇದು ಗೊತ್ತಾಗದೆ ಆತ ಬೇಸರಗೊಳ್ಳುತ್ತಾನೆ. ಹಲವು ದಿನಗಳ ಬಳಿಕ ಬೀಚಿನಲ್ಲಿ ಮತ್ತೊಬ್ಬನ ಜೊತೆ ಅದೇ ವಿದೇಶಿ ಹುಡುಗಿ ಕಂಡು ಬರುತ್ತಾಳೆ. ಅಲ್ಲಿಗೆ ಗಣೇಶ ಹೋದಾಗ ಆಕೆ ಆ ಯುವಕನನ್ನು ತನ್ನ ಗಂಡ ಎಂದು ಪರಿಚಯಿಸುತ್ತಾಳೆ. ಅಲ್ಲಿಂದ ಗಣೇಶ್ ವಾಪಸ್ಸಾಗಿ ಮನೆಗೆ ಬಂದಾಗ ಮನೆಯಲ್ಲಿ ಯಾವುದೇ ಅಡುಗೆ ಸಾಮಾನುಗಳು ಇಲ್ಲ. ಮನೆಯಲ್ಲಿರುವ ವಸ್ತುಗಳನ್ನೆಲ್ಲ ಆ ಬಿಳಿ ಹುಡ್ಗಿಗೆ ರುಚಿಯಾದ ಅಡುಗೆ ಮಾಡಲು ಖಾಲಿ ಮಾಡಿದೆ ಎಂದು ಅಜ್ಜಿ ಬಯ್ಯುತ್ತಾಳೆ. ಹುಡುಗಿ ಮೋಸ ಮಾಡಿದಳು ಎಂದೆನಿಸಿದರೂ ತಾನೇಕೆ ಅವಳನ್ನು ನಂಬಿದೆ ಎಂದುಕೊಳ್ಳುತ್ತಾನೆ.
ಡೇರೆ ಹೂವು
ವಯಸ್ಸು ಮಾಗಿದ ದಂಪತಿಯ ಅನ್ಯೋನ್ಯ ಪ್ರೀತಿಯನ್ನು ಕಟ್ಟಿಕೊಡುವ ಕಥೆ ಇದು. ಇಲ್ಲಿ ಪ್ರೀತಿಯನ್ನು ಡೇರೆ ಹೂವಿಗೆ ಹೋಲಿಸಲಾಗಿದೆ. ಏಕೆಂದರೆ ಡೇರೆ ಹೂವು ಮಳೆಗಾಲದಲ್ಲಿ ಅರಳುತ್ತದೆ. ಮಳೆಗೆ ಕೊಳೆಯುವುದಿಲ್ಲ, ಜೋರು ಮಳೆಗೆ ಬಾಗುತ್ತದೆ ಅಷ್ಟೇ. ನೋಡಲು ಚೆಂದ. ಇಂತಹ ಹೂವನ್ನು ಹೆಂಡತಿ ಜಾನಕ ಮ್ಮಳಿಗೆ ಗಂಡ ಗೋಪಾಲಯ್ಯ ತಂದು ಮುಡಿಸುತ್ತಾನೆ. ನಿನ್ನ ಮೇಲೆ ಕಾಳಜಿ ಜಾಸ್ತಿ. ಅದಕ್ಕೆ ಬೇರೆ ಹೂ ತಂದಿದ್ದೇನೆ ಎನ್ನುತ್ತಾನೆ. ಇಂತಹ ಇಳಿವಯಸ್ಸಲಿ ಅದೇನು ಪ್ರೀತಿ ಎಂದು ಕಿಚಾಯಿಸುತ್ತಾಳೆ. ಮನೆಯಲ್ಲಿ ಇಬ್ಬರೇ ಕೆಲಸ ಮಾಡುತ್ತಾ, ಪರಸ್ಪರ ನೆರವಾಗುತ್ತಾ, ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾ ಸಂತಸದಿಂದ ಕಾಲ ಕಳೆಯುತ್ತಾರೆ. ಮೊಬೈಲ್ ಹಿಡಿದು ಒಬ್ಬರಿಗೊಬ್ಬರು ಒರಗಿ ಕುಳಿತು ಏನೋ ನೋಡುತ್ತಾ ನಗುತ್ತಾರೆ. ಮಾಗಿದ ಪ್ರೀತಿ ಇಬ್ಬರಲ್ಲಿ ತುಂಬಿದ್ದರಿಂದ ನಗು ಹೆಚ್ಚಾಗಿ ಕಂಡುಬರುತ್ತಿತು.
ಭಾನುವಾರ ಕಂಡ ಬದುಕು
ಒಂದು ಕಡೆ ನಿತ್ಯದಂತೆ ತನ್ನಿಷ್ಟದ ಹಾಗೆ ಬದುಕುತ್ತಿರುವ ಗಂಡನಿಲ್ಲದ ಒಂಟಿ ಜೀವ ಮೀರಾ, ಇನ್ನೊಂದೆಡೆ ಇಷ್ಟು ವರ್ಷ ತನ್ನ ಸುತ್ತ ತಾನೇ ಬೇಲಿ ಹಾಕಿಕೊಂಡು ತನ್ನ ಪ್ರಪಂಚವೇ ಗಂಡ, ಮನೆ, ಮಕ್ಕಳು ಎಂದುಕೊಂಡ ಶೈಲಜಾ. ಮೊದಲ ಬಾರಿಗೆ ಆ ಬೇಲಿಯಿಂದ ಹೊರಗೆ ಬರಲು ಶುರು ಮಾಡುತ್ತಾಳೆ. ಪರಿಚಯವಾದ ನಂತರ ಇಬ್ಬರು ಸೇರಿ ಮಂಗಳೂರಿನತ್ತ ಪ್ರವಾಸ ಹೊರಡುತ್ತಾರೆ. ರೈಲಿನಲ್ಲಿ ಇಬ್ಬರು ಹೋಗುವಾಗ ತಮ್ಮ ಜೀವನದ ಕಥೆಗಳು, ಬದುಕು, ರೀತಿ- ನೀತಿ, ಇಷ್ಟ- ಕಷ್ಟ, ಹವ್ಯಾಸ ಮೊದಲಾದವುಗಳ ಕಥೆಗಳನ್ನು ಹೇಳಿಕೊಳ್ಳುತ್ತಾ ಮಂಗಳೂರು ತಲುಪುತ್ತಾರೆ. ಕಥೆಯ ಇನ್ನೊಂದೆಡೆ, ಅನುರಾಧ ಮತ್ತು ಕಾಜಲ್ ಎಂಬ ಹುಡುಗಿಯರು ಬೆಂಗಳೂರಿನ ಕೆಫೆ ಒಂದರಲ್ಲಿ ಕುಳಿತು ಸ್ವಾತಂತ್ರ್ಯ, ಸಮಾನತೆಯ ಅರ್ಥದ ನೆಪದಲ್ಲಿ ಒಂದಾದ ಮೇಲೆ ಮತ್ತೊಂದರಂತೆ ಸಿಗರೇಟ್‌ನ್ನು ಸುಡುತ್ತಾರೆ. ಸ್ವಾತಂತ್ರ್ಯ, ಸಮಾನತೆಯ ಪದಗಳೇ ಅರ್ಥವಾಗದ ಆ ಒಂದು ಭಾನುವಾರ ಬೇರೆ ರೀತಿಯ ಬದುಕನ್ನು ತನ್ನ ಮಡಿಲಿನಲ್ಲಿ ಹಾಕಿಕೊಳ್ಳುತ್ತಾ ಯಾವುದು ಸರಿ, ಯಾವುದು ತಪ್ಪು ಎಂದು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಭಾನುವಾರ ಅದೆಷ್ಟೋ ಮಾತುಗಳಿಗೆ, ಭಾವಗಳಿಗೆ, ಹೊಸ ಅನುಭವಗಳಿಗೆ, ಹಳೆಯ ಚಾಳಿಗಳಿಗೆ, ಕನಸುಗಳಿಗೆ, ನೆನಪುಗಳಿಗೆ, ಆಡಂಬರಕ್ಕೆ ಎಲ್ಲದಕ್ಕೂ ಸಾಕ್ಷಿಯಾಗುತ್ತದೆ
ಅಪ್ರಯೋಜಕ ಕವಿಯ ಪ್ರೇಮ ಪತ್ರ
ತಾನು ಪ್ರೀತಿಸಿದ ಹುಡುಗರಿಬ್ಬರೂ ತನ್ನನ್ನು ಮದುವೆಯಾಗದೆ ಬಿಟ್ಟುಹೋದ ಬಗ್ಗೆ ಯುವತಿಯೊಬ್ಬಳು ನಿರಾಶೆಗೊಳ್ಳುವ, ಆಕೆಯ ಗೆಳತಿ ಸಮಾಧಾನಿಸುವ ಕಥೆ ಇದು.
ಮೈತ್ರಿ ಮತ್ತು ಖುಷಿ ಒಂದೇ ಪಿಜಿಯಲಿದ್ದವರು. ಮೈತ್ರಿ ಎಂ. ಟೆಕ್ ಮಾಡುತ್ತಿದ್ದರೆ, ಖುಷಿ ಪಿಎಚ್‌ಡಿ ಮಾಡುತ್ತಿದ್ದಳು. ಮೈತ್ರಿಗೆ ಕ್ಲಾಸ್‌ಮೇಟ್ ರೋಹನ್ ಜೊತೆ ಲವ್ ಆಗಿ ಬ್ರೇಕಪ್ ಆಗಿತ್ತು. ನಂತರ ಈಕೆಗೆ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಶಿವಮೊಗ್ಗದ ಹಳ್ಳಿಯೊಂದರ ಗೌರವ್ ಜೊತೆ ಸ್ನೇಹವಾಗುತ್ತದೆ. ಒಂದು ದಿನ ಮೆಸೇಜ್ ಮಾಡಿದ ಆತ ಆಕೆಯ ಬಗ್ಗೆ ಪ್ರೀತಿ ಉಕ್ಕುವ ಕವನ ಕಳಿಸುತ್ತಾನೆ. ಇದನ್ನು ಓದಿದ ಆಕೆ ನಾಚಿ ನೀರಾಗಿ ತಿರುಗಿ ಉತ್ತರಿಸುತ್ತಾಳೆ. ಹೀಗೆ ಇಬ್ಬರ ಮಧ್ಯೆ ಮೆಸೇಜುಗಳು ಓಡಾಡುತ್ತಿರುವಾಗ ಇಬ್ಬರೂ ಭೇಟಿಯಾಗಲು ನಿರ್ಧರಿಸುವರು. ಗೆಳತಿ ಖುಷಿಯೊಂದಿಗೆ ಬಂದ ಆಕೆ, ಆತನಲ್ಲಿ ತನ್ನ ಪ್ರೇಮ ನಿವೇದನೆ ಮಾಡುತ್ತಾಳೆ. ಇದಕ್ಕೆ ಉತ್ತರವಾಗಿ ಗೌರವ್, ನನ್ನದು ಹಳ್ಳಿ ಜೀವನ. ಊರಿಗೆ ಹೋಗಿ ತೋಟವನ್ನು ಚೆನ್ನಾಗಿ ನೋಡಿಕೊಂಡು ಅಲ್ಲಿಯೇ ನೆಲೆಸುವ ನಿಶ್ಚಯ ಮಾಡಿದ್ದೇನೆ. ಪ್ರೀತಿ ಬಗ್ಗೆ ಯೋಚನೆನೇ ಮಾಡಿಲ್ಲ. ಮದುವೆ ಬಗ್ಗೆಯೂ ಕೂಡ ಎನ್ನುತ್ತಾನೆ. ಈ ಮಧ್ಯೆ ಗೌರವ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಹೊರಡುತ್ತಾನೆ. ಅದಕ್ಕೂ ಮುನ್ನ ಇಬ್ಬರಿಗೂ ಪಾರ್ಟಿ ಕೊಡುತ್ತಾನೆ. ಊರಿಗೆ ಹೋಗುವ ದಿನ ರಾತ್ರಿ ಗೆಳತಿಯರಿಬ್ಬರೂ ಸೇರಿ ಆತನನ್ನು ಬಸ್‌ಗೆ ಬೀಳ್ಕೊಡುತ್ತಾರೆ. ಊರಿಗೆ ಹೋಗಿ ಒಂದು ಲವ್ ಲೆಟರ್ ಬರೆಯುತ್ತಾನೆ -ಅದರಲ್ಲಿ ನಾನು ಅಪ್ರಯೋಜಕ ಕವಿ. ನಿನ್ನ ಭಾವನೆ ಅರ್ಥಮಾಡಿಕೊಳ್ಳಲಿಲ್ಲ. ಕ್ಷಮಿಸಿ ಬಿಡು. ನಿನಗಾಗಿ ಇಲ್ಲಿ ಪುಟ್ಟ ಅರಮನೆ ಕಟ್ಟುತ್ತೇನೆ. ಇದನ್ನು ಒಪ್ಪಿದರೆ ಬಂದುಬಿಡು ಎಂದು ಪ್ರ್ರೊಪೋಸ್ ಮಾಡಿದ ರೀತಿ ಇರುತ್ತದೆ. ಇದನ್ನೂ ಓದಿದ ಮೈತ್ರಿಯ ಕಣ್ಣುಗಳು ಅರಳುತ್ತವೆ.
- ದತ್ತಾತ್ರೇಯ ಹೆಗಡೆ
....................

Comments
Post a Comment