ಬದುಕಿನ ತಲ್ಲಣದಿಂದ ಬೆಂದ ಮಹಿಳೆಯ  


‘ಸಾಕು ಈ ಜನಮ’



  ತಾಂಡಾದ ಹೆಣ್ಣಿನ ಜೀವನದಲ್ಲಿ ನಡೆದ ಈ ನೈಜ ಘಟನೆಯನ್ನು ಸ್ತ್ರೀವಾದಿ, ಕಾದಂಬರಿಗಾರ್ತಿ ಡಾ. ಶ್ರೀದೇವಿ ರಾಥೋಡ್ ‘ಸಾಕು ಈ ಜನಮ’ದಲ್ಲಿ ನಿರೂಪಿಸಿದ್ದಾರೆ. ಶಾರೀಬಾಯಿ ಎಂಬ ಯುವತಿಯ ಬದುಕಿನ ಚಿತ್ರಣ ಇಲ್ಲಿದೆ. ಎಲ್ಲರಂತೆ ತನ್ನ ಬದುಕನ್ನು ರೂಪಿಸಿಕೊಳ್ಳಲು ಹೋದ ಈಕೆ ಕೆಲವು ಅನಿರೀಕ್ಷಿತ ಘಟನೆಗಳಿಂದ ಜೀವನದಲ್ಲಿ ನೊಂದುಕೊಳ್ಳುವಂತಾಗುತ್ತದೆ.  ಬದುಕು ಬೇಡ ಎನಿಸಿಬಿಡುತ್ತದೆ. ಆದರೂ ತನ್ನ ಬದುಕನ್ನು ಮುನ್ನಡೆಸಲು ಪ್ರಯತ್ನಿಸಿದಾಗ ಅವಳಿಗೆ ಸಮಾಜದಲ್ಲಿ ಅವಮಾನ, ಅಪಮಾನ ಅಲ್ಲದೆ ಬೇರೇನೂ ಸಿಗುವುದಿಲ್ಲ. ಹೆಣ್ಣಿನ ಮನದಾಳದ ದುಃಖವನ್ನು ಯಾರೂ ಅರಿಯುವುದಿಲ್ಲ ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗಿದೆ.

 ತನ್ನ ಜೀವನದಲ್ಲಿ ನಡೆದ ಬದುಕಿನ ತಲ್ಲಣದಿಂದಾಗಿ ಬದುಕನ್ನೇ ಅಂತ್ಯಗೊಳಿಸಲು ಹೋದ ಶಾರಿಗೆ ಈ ಸಮಾಜ ಬದುಕಲು ಬಿಡುವುದಿಲ್ಲ. ಮೊದಲು ಅವಳ ನಡತೆಯ ಬಗ್ಗೆ, ನಂತರ ಆಕೆ ಬೆಂಕಿಯಿಂದ ವಿಕಾರವಾದಾಗ ತಾಂಡಾದ ವಾಸಿಗಳು ಕುಹಕವಾಡುತ್ತಾರೆ. ಸಾಮಾಜಿಕ ವ್ಯವಸ್ಥೆಯನ್ನು ನೋಡಿ ಆಕೆ ತುಂಬಾ ಬೇಸರಗೊಂಡು  ಈ ಜನಮ ಸಾಕು ಎಂದು ಹೇಳುತ್ತಾಳೆ. ತನಗಿರುವ ಮೂರು ಚಿಕ್ಕ ಮಕ್ಕಳ ಮುಖವನ್ನು ನೋಡಿ ಅವರಿಗಾಗಿಯಾದರೂ ತಾನು ಜೀವಂತವಾಗಿ ಇರಬೇಕು ಎಂದು ಎಲ್ಲಾ ದುಃಖ-ದುಮ್ಮಾನ, ಕಷ್ಟ -ಕಾರ್ಪಣ್ಯಗಳನ್ನು ಸಹಿಸಿಕೊಂಡು, ಬಂದ ಅವಮಾನವನ್ನು ನುಂಗಿಕೊಳ್ಳುತ್ತಾಳೆ.

 ಸಮಾಜ ಹಿಂದಿನ ಎಲ್ಲ ಘಟನೆಯನ್ನು ಸದಾ ಕೆದಕುತ್ತಲೇ ಇರುತ್ತದೆ. ಮುಂದಡಿ ಇಡದಂತೆ  ಮಾಡಿಬಿಡುತ್ತದೆ. ಸಂಪ್ರದಾಯ, ಕಟ್ಟಳೆಗಳೇ ತುಂಬಿರುವ ಸಮಾಜದಲ್ಲಿ ಹೆಣ್ಣು ಹೀಗೆಯೇ ಇರಬೇಕೆಂಬ ನಿಯಮ ಇನ್ನೂ ಇದೆ. ಹೆಣ್ಣು ಪುರುಷನ ಅಧೀನದಲ್ಲಿರಬೇಕು, ಸಾಮಾಜಿಕ ಕಟ್ಟಳೆ ಮುರಿಯಬಾರದು,  ಹಿರಿಯರು ಹಾಕಿದ ಮಾರ್ಗದಲ್ಲೇ ನಡೆಯಬೇಕು. ಜೊತೆಗೆ ತನ್ನ ಸ್ವಂತ ಹಿತಾಸಕ್ತಿಯನ್ನು ವ್ಯಕ್ತಪಡಿಸುವಂತಿಲ್ಲ. ಒಂದು ವೇಳೆ ಇದನ್ನು ದಾಟಿದರೆ ತನ್ನ ಅಧೋಗತಿಗೆ ತಾನೇ ಕಾರಣಳು ಎಂದು  ಹೇಳುವ ವ್ಯವಸ್ಥೆ ಇಲ್ಲಿರುವುದನ್ನು ಕಾದಂಬರಿ ಬಹುಸುಂದರವಾಗಿ ತೆರೆದಿಡುತ್ತದೆ. 

ಕಥಾ ಸಾರಾಂಶ: 

 ಬಡ ಕುಟುಂಬ ಒಂದರಲ್ಲಿ ಜನಿಸುವ ಶಾರೀಬಾಯಿ ಆ ದಂಪತಿಯ ಕೊನೆಯ ಪುತ್ರಿಯಾಗಿರುತ್ತಾಳೆ. ಶಾಲೆಗೆ ಕಳಿಸುವುದನ್ನು ಬಿಟ್ಟು ಕುರಿ ಕಾಯಲು ಈಕೆಯನ್ನು ಕಳಿಸುತ್ತಾರೆ. ತನ್ನ ಆಸೆಗಳಿಗೆಲ್ಲ ಅಂತ್ಯ ಹಾಡಿ ಜವಾಬ್ದಾರಿಗಳ ಮೂಟೆ ಹೊತ್ತು ಜೀವನ ಸಾಗಿಸುತ್ತಾಳೆ. ಮನೆಯಲ್ಲಿ ತಂದೆ- ತಾಯಿ ಹೊಲದ ಕೆಲಸಕ್ಕೆ ಹೋದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಸಾಧಿಸಿ ಆಕೆಯ ಹಿರಿಯಕ್ಕನ ಗಂಡ ಶಂಕರ ಅತ್ಯಾಚಾರ ಎಸಗುತ್ತಾನೆ. ಜೊತೆಗೆ ಬೇಕಾದಾಗ ಸಹಕರಿಸುವಂತೆ ಬೆದರಿಕೆ ಹಾಕಿ, ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಎಚ್ಚರಿಸುತ್ತಾನೆ.

 ಹೀಗೆ ಹಲವು ಸಲ ಆಕೆಯನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಾನೆ. ಈ ಮಧ್ಯೆ ಆಕೆಯ ಮದುವೆಯನ್ನು ಸಂಜು ಎನ್ನುವವನೊಂದಿಗೆ ನಿರ್ಧರಿಸುತ್ತಾರೆ. ಇದನ್ನು ಅರಿತ ಆಕೆಯ ಭಾವ ಶಂಕರ ಆತನನ್ನು ಮದುವೆಯಾಗದಂತೆ ಎಚ್ಚರಿಸುತ್ತಾನೆ. ‘ತನ್ನ ಜೊತೆ ಬಾ, ಇಬ್ಬರೂ ಬಾಂಬೆಗೆ ಓಡಿ ಹೋಗಲು  ಯತ್ನಿಸಿದಾಗ  ಸ್ಥಳೀಯರು ಇಬ್ಬರನ್ನು ಹಿಡಿದು ಮತ್ತೆ ವಾಪಸ್ ಊರಿಗೆ ಕರೆತರುತ್ತಾರೆ. ಶಂಕರನಿಗೆ ಚೆನ್ನಾಗಿ ಥಳಿಸಿ ಆಕೆಯ ವಿಷಯಕ್ಕೆ ಬರದಂತೆ ತಾಕೀತು ಮಾಡುತ್ತಾರೆ. 

ಮುಂದೆ ಶಂಕರ ಏನು ಮಾಡಿದ, ಶಾರಿಗೆ ಆತನಿಂದ ಕಿರುಕುಳ ತಪ್ಪಿತೇ? ಶಂಕರ ಮಾವನ ಮನೆಗೆ ಬರುವುದನ್ನು ನಿಲ್ಲಿಸಿದನೇ? ಎನ್ನುವುದಕ್ಕೆ ಉತ್ತರ ಈ ಭಾಗದಲ್ಲಿದೆ. 

  ಸಂಜು ಎನ್ನುವವನ  ಜೊತೆ ಆಕೆಯ ಮದುವೆಯಾಗುತ್ತದೆ. ಮದುವೆಯಾದ ೨೦ ದಿನಕ್ಕೆ ಗಂಡನ ಮನೆಯಲ್ಲಿ ಆಕೆ ವಾಂತಿ ಮಾಡಿಕೊಳ್ಳುತ್ತಾಳೆ. ಎರಡು ತಿಂಗಳ ಗರ್ಭಿಣಿ ಎನ್ನುವುದು ವೈದ್ಯರ ತಪಾಸಣೆಯಿಂದ ಗೊತ್ತಾಗುತ್ತದೆ.  ಇದರಿಂದ ಅತ್ತೆ, ಮಾವ, ಗಂಡ ಸೇರಿ ಮನಬಂದಂತೆ ಹೊಡೆದು  ಬಡಿದು ಮಾಡಿ  ತವರು ಮನೆಗೆ ಕರೆದುಕೊಂಡು ಬರುತ್ತಾರೆ. ಅಲ್ಲಿಯೂ ಸಹ ಆಕೆಯ ತಂದೆ, ತಾಯಿ ತಮ್ಮ ಕುಟುಂಬದ ಮಾನ ಮರ್ಯಾದೆ ತೆಗೆದಿದ್ದಕ್ಕೆ ಇನ್ನಷ್ಟು ಥಳಿಸುತ್ತಾರೆ. ಈ ವೇಳೆ ಜೀವನದಲ್ಲಿ ನಡೆದ ಘಟನೆಯನ್ನೆಲ್ಲ ಆಕೆ ವಿವರಿಸುತ್ತಾಳೆ. ವಿವಾಹ ವಿಚ್ಛೇದನವಾಗುತ್ತದೆ. ಈ ಎಲ್ಲ ಬೆಳವಣಿಗೆಗಳ ನಂತರ ಆಕೆಯ ತಂದೆ ರಾಮ ಅಳಿಯ ಶಂಕರನಿಗೆ ಛೀಮಾರಿ ಹಾಕಿ  ಮನೆಯತ್ತ ಕಾಲಿಡದಂತೆ ಸೂಚಿಸುತ್ತಾನೆ. ನೊಂದು, ಹಾಸಿಗೆ ಹಿಡಿದು ಕೆಲವೇ ದಿನದಲ್ಲಿ ತಂದೆ ಸಾವಿಗೀಡಾಗುತ್ತಾನೆ.

ಈ ಸಾವಿನಿಂದವನ್ನು ಶಾರಿ ಮಾನಸಿಕವಾಗಿ ಆಘಾತಕ್ಕೊಳಗಾಗುತ್ತಾಳೆ, ಮನೆಯಿಂದ ಹೊರಗೆ ಕಾಲಿಡಲಾಗದ ಸ್ಥಿತಿಯನ್ನು ಎದುರಿಸುತ್ತಾಳೆ. ಕೇರಿಯ ಜನ ಮನಬಂದಂತೆ ಮಾತನಾಡುತ್ತಾರೆ. ಆಗ ತಾಯಿಯೂ ಹಾಸಿಗೆ ಹಿಡಿದು ಸಾವನ್ನಪ್ಪುತ್ತಾಳೆ. ಇದಕ್ಕೂ ಮುನ್ನ  ಮನೆಯ ಹೊಲವನ್ನು ಆಕೆಯ ಹೆಸರಿಗೆ ಬರೆದು ಹೊಲದಲ್ಲಿ ದುಡಿದು ಜೀವನ ಸಾಗಿಸುವಂತೆ ಮಾಡುತ್ತಾಳೆ.

  ಮುಂಬೈನಲ್ಲಿದ್ದ  ಅವಳ ದೊಡ್ಡಣ್ಣ ತನ್ನೊಟ್ಟಿಗೆ  ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅತ್ತಿಗೆ ಕಿರಿಕಿರಿ ಆರಂಭವಾಗುತ್ತದೆ. ಶಾರಿಯ ಮುಂದಿನ ಬದುಕು ಹೇಗೆ ಸಾಗಿತು? ಅಲ್ಲಿ ಕೆಲಸಕ್ಕೆ ಸೇರಿದಳೇ, ಬೇರೆ ಯುವಕನನ್ನು ಮದುವೆಯಾದರೂ ಆಕೆಗೆ ಎದುರಾದ ಸಂಕಷ್ಟಗಳೇನು? ಕೆಲವೇ ವರ್ಷಗಳಲ್ಲಿ ಮತ್ತೆ ಆಕೆ ಗಂಡನೊಂದಿಗೆ ತವರಿಗೆ ಮರಳಿದ್ದೇಕೇ?  ಎನ್ನುವುದು ಇದರಲ್ಲಿದೆ.

  ಒಂದು ದಿನ ಗಂಡ ಮನೆಯಿಂದ ಹೊರ ಹೋದಾಗ ಆಕೆ ಬೆಂಕಿ ಹಚ್ಚಿಕೊಳ್ಳುತ್ತಾಳೆ. ಏಕೆ?

 ಪೊಲೀಸರು ಗಂಡನನ್ನು  ಬಂಧಿಸುತ್ತಾರೆ. ಸ್ಥಳೀಯರು ಬೆಂಕಿ ಆರಿಸಿ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಜೀವನ್ಮರಣದ ಮಧ್ಯೆ ಹೋರಾಡಿ ಗೆದ್ದು ಬರುತ್ತಾಳೆ. ಆದರೆ ಮುಖ ಮತ್ತು ದೇಹ ಸುಟ್ಟು ವಿಕಾರವಾಗುತ್ತದೆ. ಕೆಲವು ದಿನಗಳ ನಂತರ ಮತ್ತೆ  ಕೆಲಸಕ್ಕೆ ಹೋಗಲು ಆರಂಭಿಸುತ್ತಾಳೆ. ಹೀಗೆ ಆಕೆಯ  ಮುಂದಿನ ಜೀವನ ಹೇಗೆ ಸಾಗಿತು? ಗಂಡ ಏನಾದ? ಎನ್ನುವುದಕ್ಕ್ಕೆ ಉತ್ತರ ಇದರಲ್ಲಿದೆ.

  ‘ಹೆಣ್ಣಿಗೆ ಇಂತಹ ಜನುಮವೇ ಸಾಕು’ ಎಂದು ನೊಂದುಕೊಳ್ಳುತ್ತ ಜೀವನದ ಬಂಡಿಯನ್ನು ಇಂದಿಗೂ ಆಕೆ ಎಳೆಯುತ್ತಿದ್ದಾಳೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೧೭.೦೭.೨೦೧೭

.......................


Comments

Popular posts from this blog