ಕಾವ್ಯದ ಬೆರಗನ್ನು ತೋರಿಸುವ ‘ಸಂತೆಯೊಳಗಿನ ಏಕಾಂತ’ ‘ಸಂತೆಯೊಳಗಿನ ಏಕಾಂತ’ ಇದೊಂದು ಕವನ ಸಂಕಲನ, ಕಲಾವಿದೆ ಹಾಗೂ ಸಂಘಟಕಿ, ಕವಯತ್ರಿ ಪೂರ್ಣಿಮಾ ಸುರೇಶ್ ಇದರ ಲೇಖಕರು. ಈ ಕೃತಿಯಲ್ಲಿನ ಕವಿತೆಗಳಲ್ಲಿ ಅರ್ಥಕ್ಕಿಂತ ಅನುಭೂತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಪುರುಷ ಸಮಾಜದ ವಿರುದ್ಧ ಪ್ರಬಲವಾಗಿ ದ್ವನಿ ಎತ್ತಿರುವುದು ಕಂಡುಬರುತ್ತದೆ. ಹೆಣ್ಣಿಗೆ ಪುರುಷ ಬೇಕು ನಿಜ, ಆದರೆ ಅವನು ಪತಿಯಾಗಿ ಅಧಿಕಾರ ಕೇಂದ್ರದಲ್ಲಿರುವುದಕ್ಕಿಂತ ಸಖನಾಗಿ ಸಮಾನ ನೆಲೆಯಲ್ಲಿ ಪ್ರೀತಿಸಬೇಕೆಂಬ ಹಂಬಲವಿದ್ದಂತಿದೆ. ವ್ಯವಸ್ಥೆಯ ನೋವನ್ನು ಕೆಲವು ಕವನಗಳಲ್ಲಿ ಚಿತ್ರಿಸಿದ್ದಾರೆ. ಸಂಭಾಷಣೆಯಂತಹ, ಅಂತರ್‌ಸಂವಾದದಂತಹ ಸಾಕಷ್ಟು ಕವನಗಳು ಇಲ್ಲಿ ಪ್ರವಹಿಸಿವೆ. ಕವಿತೆಗಳ ರಚನಾ ವಿನ್ಯಾಸದಲ್ಲಿ ದೃಶ್ಯವತ್ತಾದ ಚಿತ್ರ ಹಾಗೂ ಅರ್ಥವತ್ತಾದ ಲಯ ಕಂಡುಬರುತ್ತದೆ. ಕನ್ನಡ ಪರಂಪರೆಯ ಕಾವ್ಯ ಸತ್ವ ಗುಣವೂ ಇಲ್ಲಿದೆ ಕವಿತೆಗಳಲ್ಲಿ ಹೊರನೋಟಕ್ಕೆ ಅರ್ಥವಾಗುವಂತಹವು ಕೆಲವಿದ್ದರೆ, ಇನ್ನೂ ಕೆಲವು ಮೂರನೆಯ ಕಣ್ಣಿನಿಂದ ಕಂಡು ಅರ್ಥ ಮಾಡಿಕೊಳ್ಳುವ ಕಿಂಡಿಗಳಿವೆ. ಜೊತೆಗೆ ಬೆರಗಿದೆ, ರೊಮ್ಯಾಂಟಿಕತೆಯಿದೆ, ಮಾಗಿದ ಹಣ್ಣಿನ ಸಿಹಿಪದರವಿದೆ, ತಿರುಳೂ ಇದೆ. ಕವಿತೆ ಓದಿದಾಗ ಇದು ಅರ್ಥವಾಗುತ್ತದೆ. ಪ್ರಸ್ತುತ ಕವನ ಸಂಕಲನದಲ್ಲಿ ೩೮ ಕವನಗಳಿವೆ. ಇವುಗಳಲ್ಲಿ ಕೆಲವು ಕಾವ್ಯ ಜಗತ್ತಿನ ಪ್ರಧಾನವಾದ ಬೆರಗನ್ನು ತೋರಿಸಿದರೆ ಮತ್ತೆ ಕೆಲವು...