ಜೋಡಿಹಕ್ಕಿಗಳ ಸುಂದರ ಪ್ರೇಮಕಥೆಯ
ಸ್ಪರ್ಶ’
ಈ ಕಥಾ ಸಂಕಲನ ಜೋಡಿಹಕ್ಕಿಗಳ ಸುಂದರ ಪ್ರೇಮಕಥೆಯ ಕಿರು ಕಾದಂಬರಿ. ಕೃತಿಯ ರಚನೆಕಾರರು ಮುರುಡೇಶ್ವರದ ನೀವಿಯಾ ಗೋಮ್ಸ್. ಇವರು ಎಂಬಿಎ ಪದವೀಧರರು. ಜೊತೆಗೆ ಮೊಟ್ಟಮೊದಲ ಕಾದಂಬರಿ. ಇಬ್ಬರು ಪ್ರೇಮಿಗಳು ಒಬ್ಬರ ಮೇಲೆ ಒಬ್ಬರು ನಂಬಿಕೆ, ಪ್ರೀತಿ ಇಟ್ಟು ಯಾವ ಅಂತಸು- ಆಸ್ತಿಯನ್ನು ಲೆಕ್ಕಿಸದೆ ಇದ್ದರೂ ಸಹ ಮದುವೆಯಾಗಲು ಎದುರಿಸಬೇಕಾದ ಸವಾಲು, ನಂತರ ಅದು ಸುಲಭದಲ್ಲಿ ಬಗೆಹರಿಯುವುದನ್ನು ಇಲ್ಲಿ ತೆರೆದಿಟ್ಟಿದ್ದಾರೆ.
ಕಾದಂಬರಿಯಲ್ಲಿ ಪ್ರೀತಿಯ ಆಳ, ಭಾವನೆಯನ್ನು ಲೇಖಕಿ ಚೆನ್ನಾಗಿ ಚಿತ್ರಿಸಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ಹುಟ್ಟಿದ ಪ್ರೀತಿಯೆಂಬ ಮೊಗ್ಗು ಅರಳುವುದು, ಕೊನೆಯವರೆಗೆ ಅದು ಸುವಾಸನೆ ಬೀರುವುದು, ಸಾಕಷ್ಟು ಶ್ರೀಮಂತ ಯುವಕ, ಅಷ್ಟೇನೂ ಸ್ಥಿತಿವಂತರಲ್ಲದ ಸಾಮಾನ್ಯ ಕುಟುಂಬದ ಸುಂದರ ಯುವತಿಯನ್ನು ಪ್ರೀತಿಸಿದರೂ ಕೊನೆಯವರೆಗೂ ಆ ಪ್ರೀತಿಗೆ ಗೌರವ ನೀಡಿ ಅದರ ಮೇಲೆ ಗೆಲುವು ಸಾಧಿಸುವುದನ್ನು ಅತ್ಯಂತ ಮನೋಹರವಾಗಿ ನಿರೂಪಿಸಿದ್ದಾರೆ.
ಯುವಕ-ಯುವತಿಯಲ್ಲಿನ ಪ್ರೀತಿಯ ತಾಕಲಾಟ, ಮನೆಯಲ್ಲಿ ವಿರೋಧ ಬರಬಹುದೆಂಬ ಭಯದಲ್ಲಿರುವ ಯುವಕ, ನಿರೀಕ್ಷಿಸಿದಂತೆ ಕಟ್ಟುನಿಟ್ಟಿನ, ಸಂಪ್ರದಾಯವಾದಿ ತಾಯಿಯ ವಿರೋಧ, ಆದರೆ ತಂದೆಯ ಮಾತಿನಿಂದ ತಾಯಿಯೂ ಈ ಪ್ರೀತಿಯನ್ನು ಒಪ್ಪಿ ಮಗನ ಮದುವೆಗೆ ಮುಂದಾಗುವುದು ಇಲ್ಲಿನ ಕಥಾ ಹಂದರ.
ಶಿಶಿರ್ ಮತ್ತು ಸ್ಪಂದನಾ ಇಲ್ಲಿನ ಜೋಡಿಹಕ್ಕಿಗಳು. ಆಕೆಗೆ ರಸ್ತೆ ಅಪಘಾತವಾದಾಗ ರಕ್ಷಿಸಿ, ಜೀವ ಉಳಿಸಿದ ಮಹಾನ್ ಕೆಲಸವನ್ನು ಮಾಡಿದ್ದೇ ಇಬ್ಬರ ನಡುವಿನ ಅಗಾಧ ಪ್ರೀತಿಗೆ ಕಾರಣವಾಗುತ್ತದೆ. ಸ್ಪಂದನಾ ಕೂಡ ಇದನ್ನು ಮನಸಾರೆ ಒಪ್ಪಿ ಆತನ ಹೃದಯದಲ್ಲಿ ಸ್ಥಾನ ಪಡೆಯುತ್ತಾಳೆ. ಆದರೆ ಇಲ್ಲಿ ಅಡ್ಡಬರುವುದೇ ಆಸ್ತಿ, ಅಂತಸ್ತು. ಶಿಶಿರ್ ಬೆಂಗಳೂರಿನ ಓಂ ದೇಸಾಯಿ ಕುಟುಂಬದ ಯುವಕ. ಐಶ್ವರ್ಯದ ಗೋಪುರದಲ್ಲಿ ಬೆಳೆದವನು. ತಂದೆ ಬಹುದೊಡ್ಡ ಉದ್ಯಮಿ. ವ್ಯಾಪಾರಿ ಸಾಮ್ರಾಜ್ಯದ ಮಾಲೀಕ, ಕುಟುಂಬದ ಗೌರವ, ಅಂತಸ್ತು, ಸ್ಥಾನಮಾನಕ್ಕೆ ಒತ್ತು ಕೊಡುವವರು. ತಾಯಿ ಶಾಂತಮ್ಮ ಕಟ್ಟುನಿಟ್ಟಿನವಳು. ಸ್ಪಂದನಾ ತಂದೆ ಶ್ರೀನಿವಾಸರಾವ್ ಒಬ್ಬ ಸರ್ಕಾರಿ ಉದ್ಯೋಗಿ, ತಾಯಿ ವಿಜಯಲಕ್ಷ್ಮೀ ಗೃಹಿಣಿ, ಸರಳತೆಗೆ ಇನ್ನೊಂದು ಹೆಸರು ಸ್ಪಂದನಾ ಕುಟುಂಬವಾಗಿತ್ತು.
ಇಂತಹ ವೈರುಧ್ಯದ ಎರಡು ಕುಟುಂಬಗಳು ಒಟ್ಟುಗೂಡುವುದು ಕನಸಿನ ಮಾತಾದರೂ ಮಕ್ಕಳ ಪ್ರೀತಿಗೆ ಎರಡೂ ಕಡೆಯವರು ಮನಸೋತು ಸ್ಪಂದಿಸುವುದು ಇಲ್ಲಿನ ವಿಶೇಷತೆ.
ಎಷ್ಟೇ ಐಶ್ವರ್ಯವಿದ್ದರೂ ಶಿಶಿರ್‌ನ ಹೃದಯದ ಒಂದು ಕೋಣೆಯಲ್ಲಿ ಖಾಲಿತನದ ಕಿಂಡಿ ರಾಜ್ಯ ಆಳುತ್ತಿತ್ತು. ೧೦ನೇ ತರಗತಿಯಲ್ಲಿ ಓದುವಾಗ ಕ್ಲಾಸ್ ಮೇಟ್ ಸ್ಪಂದನಾಳ ಮಾಯಾಜಾಲಕ್ಕೆ ಅವನು ಸಿಕ್ಕಿಬಿದ್ದಿದ್ದ. ಅಪಘಾತದ ಘಟನೆ ನಂತರ ಇದು ಇನ್ನಷ್ಟು ವಿಶಾಲವಾಗಿ ಆವರಿಸಿಕೊಳ್ಳುತ್ತದೆ. ಇಲ್ಲಿ ಲೇಖಕಿ ಈ ಘಟನೆಯನ್ನೇ ಅವರಿಬ್ಬರ ಪ್ರೀತಿ-ಪ್ರೇಮ ಮೊಳೆಯಲು ಇನ್ನಷ್ಟು ಅವಕಾಶ ಮಾಡಿಕೊಟ್ಟಿದ್ದನ್ನು ಚೆನ್ನಾಗಿ ಬಳಸಿಕೊಂಡು ಸುಂದರ ಕಥೆ ಹೆಣೆದಿದ್ದಾರೆ. ದೇಶ ಸುತ್ತುವ ತಂದೆ ಆಕಸ್ಮಿಕವಾಗಿ ಮನೆಗೆ ಬರುತ್ತಾನೆ. ಇದೇ ವೇಳೆ ಶಿಶಿರ್ ತಾಯಿ ಮಗನಿಗೆ ತನ್ನ ಗೆಳತಿಯ ಮಗಳನ್ನು ಹೆಂಡತಿಯಾಗಿ ತರಲು ನಿರ್ಧರಿಸಿರುತ್ತಾಳೆ. ಹೆಣ್ಣು ನೋಡಲು ಹೋಗಲು ಸಿದ್ಧತೆ ನಡೆಸಿದ್ದ ವೇಳೆ ತನ್ನ ಮನದಲ್ಲಿ ಮನೆ ಮಾಡಿದ್ದ ಸ್ಪಂದನಾಳ ಬಗ್ಗೆ ಶಿಶಿರ್ ವಿವರಿಸುತ್ತಾನೆ. ತಂದೆ- ತಾಯಿ ಸಿಟ್ಟಿಗೇಳುತ್ತಾರೆ. “ ನಿನ್ನ ಲವ್-ಪವ್ ಎಲ್ಲ ನಮ್ಮ ಮನೆಯಲ್ಲಿ ನಡೆಯದು” ಎನ್ನುವ ಖಡಕ್ ಮಾತು ಶಿಶಿರ್‌ಗೆ ಆಘಾತ ಉಂಟುಮಾಡುತ್ತದೆ. ಆದರೆ ತನ್ನ ಪ್ರೀತಿಯನ್ನು ಎತ್ತಿಹಿಡಿಯುವುದೊಂದೇ ಆತನಿಗೆ ಇರುವ ದಾರಿಯಾಗಿತ್ತು. ಪಾಲಕರು ಒಪ್ಪದಿದ್ದಾಗ “ ನಿಮ್ಮ ಸ್ಟೆಟಸ್, ಆಸ್ತಿ, ಅಂತಸ್ತು, ಶ್ರೀಮಂತಿಕೆ ಎಲ್ಲವನ್ನೂ ನೀವೇ ಇಟ್ಟುಕೊಳ್ಳಿ. ನಾನು ದೂರ ಹೋಗುತ್ತೇನೆ” ಎನ್ನುತ್ತಾ ಬಟ್ಟೆ ಪ್ಯಾಕ್ ಮಾಡಲಾರಂಭಿಸುತ್ತಾನೆ. ತನ್ನ ಕುಟುಂಬದ ಒತ್ತಡ, ತಾಯಿಯ ಕಠಿಣ ತೀರ್ಮಾನ, ತಂದೆಯ ಗೌರವದ ಗೋಡೆ ಈತನಿಗೆ ದೊಡ್ಡ ಸವಾಲಾಗಿತ್ತು.
ರಾತ್ರಿ ಮಗನ ಡೈರಿ ಆಕಸ್ಮಿಕವಾಗಿ ಓಂ ದೇಸಾಯಿ ಕಣ್ಣಿಗೆ ಬೀಳುತ್ತದೆ. ಅದನ್ನು ತೆರೆದಾಗ ಅದರಲ್ಲಿ ಸ್ಪಂದನಾಳ ಬಗ್ಗೆ ಬರೆದ ಭಾವನೆಗಳು, ಪ್ರೀತಿ ಅವರ ಕಣ್ಣು ತೆರೆಸುತ್ತವೆ. ಇದರಿಂದ ಬೆಳಗಾಗುವುದರೊಳಗೆ ಮಗನ ಬೇಡಿಕೆಗೆ ತಂದೆ ಕರಗಿಹೋಗುತ್ತಾರೆ. “ನಿನ್ನ ಪ್ರೀತಿಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ” ಎನ್ನುತ್ತ್ತಾರೆ. ನಾಳೆ ಬೆಳಗ್ಗೆ ಹೆಣ್ಣು ನೋಡಲು ಸ್ಪಂದನಾ ಮನೆಗೆ ಹೋಗುತ್ತೇವೆ. ಅವರಿಗೆ ಮಾಹಿತಿ ಕೊಡು ಎಂದಾಗ ಆತನಿಗೆ ಖುಷಿ ತಡೆಯಲಾಗಲಿಲ್ಲ. ಹೆಗಲ ಮೇಲಿದ್ದ ದೊಡ್ಡ ಭಾರ ಸರ್ರನೆ ಜಾರಿದಂತಾಗಿತ್ತು.
ಇಲ್ಲಿಂದ ಮುಂದೆ ಕಾದಂಬರಿ ಹೆಣ್ಣು ನೋಡುವ ಕಾರ್ಯಕ್ರಮ, ಮದುವೆ ನಿಶ್ಚಯ, ಮದುವೆ ತಯಾರಿಯತ್ತ ಸಾಗುತ್ತದೆ. ಆದರೆ ತಮ್ಮ ರೇಂಜಿಗೆ ತಕ್ಕಂತೆ ಮದುವೆ ಮಾಡಿಕೊಡಬೇಕೆಂಬ ದೇಸಾಯಿಯವರ ಮಾತು ಶ್ರೀನಿವಾಸರಾಯರಿಗೆ ಚಿಂತೆ ಮೂಡಿಸುತ್ತದೆ. ಆದರೂ ಚೆನ್ನಾಗಿ ಮಾಡಿಕೊಡುವುದಾಗಿ ಭರವಸೆ ಕೊಡುತ್ತಾರೆ. ಶಿಶಿರ- ಸ್ಪಂದನಾಳಲ್ಲಿ ಹೊಸ ಜೀವನದ ಆರಂಭದ ಉತ್ಸಾಹ ತುಂಬುತ್ತದೆ.
ಮಾರನೆಯ ದಿನ ಸ್ಪಂದನಾಳ ಅತ್ತೆಯಾಗುವ ಶಾಂತಮ್ಮ, ಕರೆ ಮಾಡಿ, “ನೀನು ಬೇರೆ ಕಂಪನಿಯಲ್ಲಿ ಕೆಲಸ ಮಾಡುವುದು ಬೇಡ, ರಿಸೈನ್ ಮಾಡು. ನೀನು ನಮ್ಮ ಕುಟುಂಬದ ಗೌರವ ಕಾಪಾಡಬೇಕು. ಶಿಶಿರ್ ಜೊತೆ ಬಿಸಿನಿಸ್ ನಡೆಸಬೇಕು. ನಮ್ಮ ಕಂಪನಿಯ ಒಂದು ಭಾಗವನ್ನು ನೀನೇ ನಡೆಸಬೇಕು” ಎನ್ನುತ್ತ್ತಾರೆ. ಸ್ಪಂದನಾ ಮತ್ತು ಕುಟುಂಬದವರು ಸಹಮತ ನೀಡುತ್ತಾರೆ.
ನಂತರ ಮದುವೆಗೆ ಅದ್ದೂರಿ ತಯಾರಿ, ಹಣದ ಸಮಸ್ಯೆಯಾದಾಗ ಸ್ವತಃ ಶಿಶಿರ್‌ನೇ ತಂದೆಗೆ ಹೇಳಿ ತಾವೇ ಎಲ್ಲ ಅನುಕೂಲ ಕಲ್ಪಿಸುತ್ತಾನೆ. ಸಾಂಗವಾಗಿ ವಿವಾಹ ನಡೆಯುತ್ತದೆ, ನಂತರ ಸ್ಪಂದನಾ ಅವರ ಬಿಸಿನೆಸ್ ಕಂಪನಿಯ ಭಾಗವಾಗುತ್ತಾರೆ. ಕಂಪನಿಯ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡು ವ್ಯವಹಾರ ಹೆಚ್ಚಿಸುತ್ತಾಳೆ.
ಹೀಗೆ ಎರಡು ವಿಭಿನ್ನ ಕುಟುಂಬ ಸಮತೋಲನವಾಗುತ್ತದೆ. ಸುಂದರವಾದ ಒಗ್ಗಟ್ಟು ರೂಪು ತಳೆಯುತ್ತದೆ. ಪ್ರೀತಿಯೇ ಒಂದು ಶಕ್ತಿ. ಅದರ ಸ್ಪರ್ಶವಿದ್ದರೆ ಎಂತಹ ಸಂದರ್ಭ, ಅಂತಸ್ತು, ಶ್ರೀಮಂತಿಕೆಯನ್ನೂ ಎದುರಿಸಬಹುದು ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ. ಇಲ್ಲಿ ಪ್ರೀತಿಯ ಸೌಂದರ್ಯವಿದೆ, ಶುದ್ಧತೆ ಇದೆ, ಆಳವಿದೆ. ಎಲ್ಲ ಸಂಘರ್ಷಗಳ ಮೇಲೂ ಗೆಲುವು ಸಾಧಿಸುವ ಗುಣ ಹೊಂದಿರುವುದನ್ನು ಬಿಂಬಿಸಲಾಗಿದೆ. ಪ್ರೀತಿ- ಪ್ರೇಮ ಎನ್ನುವುದು ಹುಟ್ಟಲು ಯಾವುದೇ ಮಾನದಂಡವಿಲ್ಲ, ಪರಸ್ಪರರ ಭಾವನೆಗಳೇ ಮುಖ್ಯ. ಸವಾಲೆದುರಾದಾಗ ಅದನ್ನು ಮೆಟ್ಟಿ ನಿಲ್ಲುವ ಪ್ರೀತಿ ಮುಖ್ಯ ಎನ್ನುವುದನ್ನು ಹುಟ್ಟಿದ ಪ್ರೀತಿ ಮೂಲಕ ಮದುವೆಯಾಗಿ ಸುಖ ಸಂಸಾರದವರೆಗೆ ಸ್ಪಶ ಕೊಡುವುದನ್ನು ಮನೋಜ್ಞವಾಗಿ ಹೆಣೆದಿದ್ದಾರೆ. .
,,,,,,,,,,,,,,,,,,,,,,,

Comments
Post a Comment