ಸುಲಲಿತ ಕವಿತೆಗಳ ಸಂಕಲನ ‘ಕಾವ್ಯಾಂಜಲಿ’ ‘ಕಾವ್ಯಾಂಜಲಿ’ ಇದು ಅಡಿ ಬರಹವೇ ಹೇಳುವಂತೆ ಸುಲಲಿತ ಕವಿತೆಗಳ ಕೃತಿ. ಇದರ ಲೇಖಕಿ ಲಲಿತಾ ಬೆಳವಾಡಿ. ಇದರಲ್ಲಿ ೧೦೧ ಕವನಗಳಿದ್ದು, ಇದು ಕವಯತ್ರಿಯ ಭಾವನೆಗಳೊಂದಿಗಿನ ಬದುಕಿನ ಅಂದ -ಚಂದವನ್ನು ಕಣ್ಮುಂದೆ ತಂದು ನಿಲ್ಲಿಸುವ ಸಂಕಲನ. ಸ್ತ್ರೀಪರ ಕಾಳಜಿ ಚಿಂತನೆಯನ್ನು ಒಳಗೊಂಡ ಅನೇಕ ಕವನಗಳು ಇದರಲ್ಲಿವೆ. ಪ್ರಸ್ತುತ ಸ್ಥಿತಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಅನಾವರಣವಿದೆ. ಕಣ್ಮರೆಯಾಗುತ್ತಿರುವ ಹಿಂದಿನ ವ್ಯವಸ್ಥೆ, ಮಹಿಳಾ ಅಸ್ಮಿತೆ, ತಂದೆ -ತಾಯಿ -ಮಕ್ಕಳ ಬಾಂಧವ್ಯ, ಪ್ರವಾಸ ಕಥನ, ಹಬ್ಬಗಳು, ನಮ್ಮ ಭಾಷೆ ಮುಂತಾದ ಪ್ರಕಾರದ ಸಂದೇಶಯುಕ್ತ ಕವನಗಳನ್ನು ಇಲ್ಲಿ ಕಾಣಬಹುದಾಗಿದೆ. ಪರಿಹಾರಾತ್ಮಕ ಪ್ರತಿಕ್ರಿಯೆಯೂ ಇದೆ. ಭುವಿಯ ಮೇಲಿನ, ಮಕ್ಕಳ ಪಾಲಿನ ದೇವತೆಯಾದ, ಕುಟುಂಬದ ಕಣ್ಣಾದ ತಾಯಿಯ ಕುರಿತಾದ ಇವರ ಗೌರವಾದರವು ಇಲ್ಲಿ ಕವನ ರೂದಪಲ್ಲಿ ಸೊಗಸಾಗಿ ವ್ಯಕ್ತಗೊಂಡಿದೆ. ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ, ಸಾಮರ್ಥ್ಯವು ಸಾಹಿತಿಗಿದೆ ಎನ್ನುವ ಮಾತನ್ನು ಇವರು ಕವನ ಮುಖೇನ ಇಲ್ಲಿ ಸಾಬೀತುಪಡಿಸಿದ್ದಾರೆ. ಈ ಸಂಕಲನದಲ್ಲಿ ಹಲವು ಕವನಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಅಂತಹವುಗಳಲ್ಲಿ ಕೆಲವನ್ನು ಗಮನಿಸುವುದಾದರೆ, ‘ಅಂಚೆ ಪತ್ರಗಳು’ ಎನ್ನುವ ಕವನದಲ್ಲಿ ಅಂಚೆ ಜೊತೆ ಜನರಿಗಿದ್ದ ಸಂಬಂಧವನ್ನು ಪ್ರಕಟಪಡಿಸಿದ್ದಾರೆ....