ಭಾವಸ್ಪರ್ಶ ಕೊಡುವ
‘ಬಾಣದ ಹೊಳೆಯ ದಂಡೆಯ ಮೇಲೆ’
ಬಾಣದ ಹೊಳೆಯ ದಂಡೆಯ ಮೇಲೆ ಈ ಕೃತಿ ಸಾಮಾಜಿಕ ಮತ್ತು ಪೌರಾಣಿಕ ಕಥೆಗಳಿಂದ ಸಮ್ಮಿಳಿತವಾಗಿದೆ. ಎರಡೂ ಬಗೆಯ ಕಥೆಗಳು ಮೆಚ್ಚುಗೆಯಾಗುತ್ತವೆ. ಶಿಕ್ಷಣ ಇಲಾಖೆಯಲ್ಲಿ ಬೋಧಕೇತರ ಹುದ್ದೆಯಲ್ಲಿ ಕೆಲಸ ಮಾಡಿದ ಐ ಎಂ ರಾಮಚಂದ್ರ ಈ ಸಂಕಲನದ ಲೇಖಕರು. ಮೂಲತಃ ಸಾಗರದವರಾದರೂ ಹಾಲಿ ದಾವಣಗೆರೆ ವಾಸಿಯಾದ ಇವರು, ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ತಮ್ಮ ಕಥೆಗಳನ್ನು ಸಂಗ್ರಹಿಸಿ ಈ ಕೃತಿಯನ್ನು ಹೊರತಂದಿದ್ದಾರೆ. ಯಕ್ಷಗಾನ ಆಸಕ್ತರಾದ ರಾಮಚಂದ್ರ, ಪೌರಾಣಿಕ ಕಥೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಗ್ರಾಮೀಣ ಭಾಗದ ಜನರ, ಹಳ್ಳಿಯ ಬಗ್ಗೆಯೂ ಇದರಲ್ಲಿದೆ. ಪುರಾಣದ ಒಂದೊಂದು ಅಪರೂಪದ ಪಾತ್ರಗಳನ್ನು ಹೆಕ್ಕಿ ಅವರ ತುಮುಲ, ತೊಯ್ದಾಟವನ್ನು, ವ್ಯಕ್ತಿತ್ವವನ್ನು ಚಿತ್ರಿಸುತ್ತಾ ಓದುಗರ ಮುಂದಿಟ್ಟ್ಟಿದ್ದಾರೆ. ಇವು ನಮ್ಮನ್ನು ಸೆಳೆಯುತ್ತವೆ. ಇಂತಹ ಸೃಜನಶೀಲತೆಯ ಮೂಲಕ ಪಾತ್ರಕ್ಕೆ ಎಲ್ಲೂ ಚ್ಯುತಿ ಬಾರದಂತೆ ನೋಡಿಕೊಂಡಿದ್ದಲ್ಲದೆ, ಸರಳ ಶೈಲಿ, ಸನ್ನಿವೇಶಕ್ಕೆ ತಕ್ಕ ಭಾಷೆ, ನಿಧಾನದ ನಡೆ ಮೂಲಕ ಕಥೆ ಸಾಗುವಂತೆ ಮಾಡಿ ಕೊನೆಯಲ್ಲಿ ಆಕಸ್ಮಿಕ ತಿರುವು ಕೊಡುತ್ತಾರೆ. ಈ ಮೂಲಕ ಕಥೆ ನಮ್ಮ ಒಡಲಾಳಕ್ಕಿಳಿಯುಂತೆ ಮಾಡಿದ್ದಾರೆ. ಸಾಮಾಜಿಕ ಕತೆಗಳಲ್ಲೀ ಕೆಲವು ತಲೆಮಾರಿನಿಂದ ಬಂದ, ಬದುಕಿನ ಪಯಣದಲ್ಲಿ ಶಿಥಿಲವಾಗುತ್ತಿರುವ ಮೌಲ್ಯಗಳನ್ನು ವಿಷಾದದಿಂದ ಅಭಿವ್ಯಕ್ತಿಸಿದ್ದಾರೆ.
ಈ ಕೃತಿಯಲ್ಲಿ ಒಟ್ಟೂ ೧೩ ಕಥೆಗಳಿವೆ. ಮನುಷ್ಯ ಸಂಬಂಧ ಕಳಚುತ್ತಿರುವುದು, ದುಶ್ಯಲೆಯ ಹಿರಿದಾದ ವ್ಯಕ್ತಿತ್ವ, ವಿದುರನ ಘನ ವ್ಯಕ್ತಿತ್ವ, ಶತಾನಂದ ಅಪ್ಪ-ಅಮ್ಮನಿಲ್ಲದೆ ಅನಾಥನಾಗುವುದು, ನಂತರ ತಾನೇ ಅವರ ಶಾಪವಿಮೋಚನೆಗೆ ಕಾರಣನಾಗುವುದು, ಮೇನಕೆ, ಹಿಡಿಂಬೆ, ಲೋಪಾಮುದ್ರೆಯ ಬದುಕಿನ ಚಿತ್ರಣ ಅವರು ಅನುಭವಿಸಿದ ಜೀವನವನ್ನೇ ಸುಂದರವಾಗಿ ನೇಯುವ ಮೂಲಕ ಇಲ್ಲಿ ನೈಜಕಥೆಗಳೆನ್ನುವಂತೆ ಕಟ್ಟಿಕೊಟ್ಟಿದ್ದಾರೆ.
ಬಾಣದ ಹೊಳೆಯ ದಂಡೆಯ ಮೇಲೆ
ಬೆಂಗಳೂರಿನಲ್ಲಿರುವ ತನ್ನ ಸಹಪಾಠಿ ಊರಿಗೆ ಬಂದು ಬಾಣದ ಹೊಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಮಿತ್ರ ಗಿರೀಶ್ ಬಂದು ಪೊಲೀಸರಿಗೆ ಸಹಕರಿಸಿದ್ದಲ್ಲದೆ ಆತನ ಅಂತ್ಯಕ್ರಿಯೆಯನ್ನು ಮಾಡಿದ ಘಟನೆ ಈ ಕಥೆಯಲ್ಲಿದೆ. ಅಂತ್ಯಕ್ರಿಯೆ ಮಾಡುವಾಗ ತಂದೆ ಮೊದಲು ವಿರೋಧ ವ್ಯಕ್ತಪಡಿಸಿದ್ದರು. ನಂತರ ಶಾಸ್ತ್ರಿಗಳು ಸೂಚನೆಯ ಮೇರೆಗೆ ಅದಕ್ಕೊಂದು ಅಂತ್ಯ ಕಾಣಿಸುತ್ತಾನೆ. ಆದರ್ಶವಾದಿ ಎಂಬ ಪಟ್ಟಕ್ಕಾಗಿ ಮಾಡದೇ ಸ್ನೇಹಕ್ಕೆ ಕೊಡುವ ಒಂದು ಮೌಲ್ಯವಾಗಿ ಸಾವಿಗೆ ಅಂತ್ಯಕ್ರಿಯೆಯನ್ನು ಮಾಡುತ್ತಾನೆ.
ಪೆನ್ನುಪುರಾಣ
ಇದು ಪೆನ್ನಿನ ಕಥೆ. ಕನಸಿನಲ್ಲಿ ಬಂದು ತನ್ನ ಬಗ್ಗೆ ಕಥೆ ಬರೆ ಅಂತ ಲೇಖಕರನ್ನು ಪದೇ ಪದೇ ಕಾಡುತ್ತದೆ. ತನ್ನ ವೃತ್ತಿ ಜೀವನದಲ್ಲಿ ಎಷ್ಟೆಲ್ಲಾ ಪೆನ್ನುಗಳನ್ನು ಬಳಸಿದ್ದೇನೆ. ಆದರೆ ನೀನು ಯಾವ ಪೆನ್ನು ಎಂದು ಕೇಳಿದರೆ ಅದು ಹೇಳುವುದಿಲ್ಲ. ಲೇಖಕರು ಸರ್ಕಾರಿ ಕೆಲಸಕ್ಕೆ ಸೇರಿದ ಮೇಲೆ ಸಾವಿರಾರು ಪೆನ್ನಿನಲ್ಲಿ ಬರೆದಿದ್ದರು. ಸಣ್ಣಪುಟ್ಟ ಬರೆಯುವ ಹವ್ಯಾಸವಿದ್ದರಿಂದ ಪತ್ರಿಕೆಗೆ ಓದುಗರ ವೇದಿಕೆಗೆ ಬರಹ ಕಳಿಸುತ್ತಿದ್ದರು. ಬರೆದ ಆರೋಪಕ್ಕೆ ತುತ್ತಾಗಿ ಹಿರಿಯ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿದ್ದು ಆಗ ಅಧಿಕಾರಿ ಲೇಖಕರ ಆ ಪೆನ್ನನ್ನು ತೆಗೆದುಕೊಂಡು ಕುಕ್ಕಿ ಹಾಳು ಮಾಡಿದ್ದರು. ನಂತರ ಲೇಖಕರಿಗೆ ಶಿಕ್ಷೆಯಾಯಿತೇ? ಪೆನ್ನಿನ ಕಥೆ ಏನಾಯಿತು ಎನ್ನುವುದನ್ನು ಇದರಲ್ಲಿ ವಿವರಿಸಿದ್ದಾರೆ.
ಅಚ್ಚಮ್ಮನ ಬೆತ್ತದ ಪೆಟ್ಟಿಗೆಯಿಂದ
ಈ ಕಥೆಯ ನಿರೂಪಕರು ಹುಟ್ಟಿದ ಹತ್ತನೇ ದಿನವೇ ಅವರ ತಾಯಿ ಭೂತಾಯಿಯ ಮಡಿಲು ಸೇರಿದ್ದರಿಂದ ಶಿಶುವಾದಾಗಿನಿಂದಲೂ ಆರೈಕೆ ಮಾಡಿ ಪೋಷಿಸಿ ಹಾಲೂಡಿಸಿ ಎಲ್ಲಾ ಬೇಕು -ಬೇಡಿಕೆಗಳನ್ನು ಪೂರೈಸಿದ ಮಹಾತಾಯಿ ಅಚ್ಚಮ್ಮ. ಅಚ್ಚಮ್ಮನಲ್ಲೇ ಅಮ್ಮನನ್ನು ಕಂಡುಕೊಂಡಿದ್ದರು. ಎಲ್ಲೋ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಈಕೆಯನ್ನು ದೀಕ್ಷಿತರೊಬ್ಬರು ಅಪ್ಪಯ್ಯನ ಕಷ್ಟವನ್ನು ನೋಡಿಕೊಳ್ಳಲು ಆಗದೆ ಒಂದು ಸೇರಿಸಿದ್ದರು. ಅಚ್ಚಮ್ಮನ ಸಾವಿನ ಬಳಿಕ ಕ್ರಿಯೆ ನಡೆಸಿ ಮುಂದಿನ ಕಾರ್ಯಗಳನ್ನು ಇವರೇ ನಡೆಸುತ್ತಾರೆ. ಕಾರ್ಯಗಳೆಲ್ಲ ಮುಗಿದ ದಿನ ಅಟ್ಟದ ಮೇಲೆ ಬೆಚ್ಚಗೆ ಇದ್ದ ಅಚ್ಚಮ್ಮನ ಪೆಟ್ಟಿಗೆಯನ್ನು ತಂದೆಯ ಸಲಹೆ ಮೇರೆ ಬಿಚ್ಚಿದಾಗ ಅದರಲ್ಲೇನಿತ್ತು. ಬೆಲೆಬಾಳುವ ವಸ್ತುಗಳಿದ್ದವೇ? ನಂತರ ಆ ಪೆಟ್ಟಿಗೆಯನ್ನು ಏನು ಮಾಡಲಾಯಿತೆನ್ನುವ ವಿವರದ ಜೊತೆಗೆ ತಮ್ಮ ಮೊಮ್ಮಗುವಿಗೆ ಅಚ್ಚಮ್ಮ ಎಂದು ಹೆಸರಿಡುವ ಬಗ್ಗೆ ಈ ಕತೆಯಲ್ಲಿದೆ.
ದುಶ್ಶಲೆಯ ದುಮ್ಮಾನ
೧೦೧ ಜನ ಕೌರವರ ಕೊನೆಯ ಪುತ್ರಿ ದುಶ್ಯಲೆ. ಈಕೆಯನ್ನು ಜಯದ್ರಥನಿಗೆ ಮದುವೆ ಮಾಡಿಕೊಡಲಾಗುತ್ತದೆ. ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಕೌರವರು ಸೋತು ಜಯದ್ರಥ ಸಾವಿಗೀಡಾಗುತ್ತಾನೆ. ಇದರಿಂದ ಆಕೆ ವಿಧವೆಯಾಗುತ್ತಾಳೆ. ಯುದ್ಧದಲ್ಲಿ ಎಲ್ಲಾ ಅಣ್ಣಂದಿರನ್ನು, ಗಂಡನನ್ನು ಕಳೆದುಕೊಂಡು ಅನಾಥೆಯಾಗುತ್ತಾಳೆ. ನಂತರ ಸಿಂಧು ದೇಶಕ್ಕೆ ವಾಪಸ್ ಆಗಿ ಅಲ್ಲಿ ಬೀಡು ಬಿಟ್ಟಿದ್ದ ಕೃಷ್ಣಾರ್ಜುನರನ್ನು ಭೇಟಿಯಾದಾಗ ಕೃಷ್ಣನಲ್ಲಿ ನನ್ನನ್ನು ವಿಧವೆ ಮಾಡಿಬಿಟ್ಟೆ ಎಂದು ಹೇಳುತ್ತಾಳೆ. ಆಗ ಕೃಷ್ಣ ಆಕೆಗೆ ಕೊಟ್ಟ ಉತ್ತರವೇನು, ಆಕೆ ಮುಂದೆ ಏನಾಗುತ್ತಾಳೆ ಎನ್ನುವುದು ಈ ಕಥೆಯಲ್ಲಿ ನಿರೂಪಿತವಾಗಿದೆ.
ದ್ಯಾವಮ್ಮ ಎಂಬ ದಾಸಿ ಮುದುಕಿ
ಇದು ಕುಂತಳ ರಾಜ್ಯದ ಅಧಿಪತಿಯಾಗುವ ಚಂದ್ರಹಾಸನ ಬಾಲ್ಯದ ಕಥೆ. ಕೇರಳದ ಪುಟ್ಟ ಹಳ್ಳಿಯಲ್ಲಿದ್ದವಳು ದ್ಯಾವಮ್ಮ. ಅಲ್ಲಿ ಮೇಧಾವಿ ಎಂಬ ಮಹಾರಾಜ ನ ಅರಮನೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಅಂತಃಪುರದಲ್ಲಿ ಇದ್ದವಳು. ರಾಣಿಗೆ ಗಂಡು ಮಗು ಜನಿಸಿದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಪುರೋಹಿತರು ಕವಡೆ ಹಾಕಿದಾಗ ಮೂಲ ನಕ್ಷತ್ರದಲ್ಲಿ ಶಿಶು ಜನಿಸಿದ್ದರಿಂದ ನಕ್ಷತ್ರ ದೋಷ ಇದೆ. ತಂದೆಗೆ ಅರಿಷ್ಟ ಯೋಗವಿದೆ ಎಂದು ಹೇಳುತ್ತಾರೆ. ಬಳಿಕ ಮೇಧಾವಿ ರಾಜ ಬಲಿಯಾಗುತ್ತಾನೆ. ಇದೇ ವೇಳೆ ಸತ್ತ ಗಂಡನ ದೇಹದ ಜೊತೆ ಆತನ ಪತ್ನಿ ಚಿತೆ ಏರುವಳು. ಇದೇ ವೇಳೆ ಮಗುವನ್ನು ಅಪಹರಿಸಲು ಶತ್ರು ಸೇನೆಯವರು ಯತ್ನಿಸಿದಾಗ ಆಕೆ ಅದನ್ನೆತ್ತಿಕೊಂಡು ಆ ಊರಿನಿಂದ ಪಾರಾಗಿ ಬರುತ್ತಾಳೆ. ಬರುವಾಗ ಬಾಣದಹೊಳೆ ಎದುರಾಗುತ್ತದೆ. ದಾಟಿದ ನಂತರ ಶಿವಾಲಯದಲ್ಲಿ ತಂಗುವುದು, ಅಲ್ಲಿದ್ದ ಅರ್ಚಕ ದಂಪತಿಗಳು ಆಶ್ರಯ ಕೊಟ್ಟು ಮಗುವಿಗೆ ಹೆಸರಿಲ್ಲದ ಕಾರಣ ಚಂದಪ್ಪ ಎಂಬ ಹೆಸರಿಡುತ್ತಾರೆ. ಮಗು ಮುಂದೆ ಹೇಗೆ ಬೆಳೆಯಿತು, ವೈರಿ ಸೇನೆಯವರು ಮಗುವನ್ನು ಹುಡುಕಿದರೇ? ಆ ಮಗು ಬಾಲಕನಾದನೇ? ಮುಂದೇನಾದ? ದ್ಯಾವಮ್ಮ ಏನಾದಳು ಎನ್ನುವ ವಿವರಣೆಯನ್ನು ಇಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.
ಆ ಒಂದು ರಾತ್ರಿಯಲ್ಲಿ
ವಿಧುರ ಹುಟ್ಟಿದ ಕಥೆ ಇದು. ಕಾಶಿಯ ಮಹಾರಾಣಿಯ ಮೂವರು ರಾಜಕುಮಾರಿಯರಿಗೆ ಕಾಶಿರಾಜ ಸ್ವಯಂವರ ಏರ್ಪಡಿಸಿದ್ದ. ಮೂವರು ಕನ್ಯೆಯರಲ್ಲಿ ಅಂಬೆ ದೊಡ್ಡವಳು. ಆಕೆ ಬೇರೆಯವನನ್ನು ವರಿಸಿದ್ದಳು. ಇರುವ ಇಬ್ಬರು (ಅಂಬಿಕಾ ಮತ್ತು ಅಂಬೆ) ಗೆ ಒಬ್ಬನೇ ರಾಜ ಕೊರಳೊಡ್ಡುವ ಸಂದರ್ಭ. ಇವರಿಬ್ಬರ ನೋವು -ನಲಿವಿನಲ್ಲಿ ಭಾಗಿಯಾಗುತ್ತಾ ಬಂದವಳು ಈ ದಾಸಿ. ಮದುವೆಯಾದ ಏಳು ವರ್ಷಗಳು ಕಳೆದು ಹೋದ ನಂತರ ಇವರ ಕೈ ಹಿಡಿದ ಗಂಡ ವಿಚಿತ್ರವೀರ್ಯ ಸಾವಿಗೀಡಾಗುತ್ತಾನೆ. ಅಂಬಿ ಮತ್ತು ಅಂಬಾಲಿಕೆ ಸಂತಾನವಿಲ್ಲದವರಾಗುತ್ತಾರೆ. ಸಾಮ್ರಾಜ್ಯಕ್ಕೆ ಮಗ ಬೇಕೆಂಬ ಕಾರಣಕ್ಕೆ ಇವರ ತಾಯಿ ಸತ್ಯವತಿದೇವಿ ಸಂತಾನಾಪೇಕ್ಷೆಗಾಗಿ ಮಹಾಮುನಿ ವೇದವ್ಯಾಸರನ್ನು ಕರೆಯಿಸುತ್ತಾಳೆ. ಮೊದಲ ಬಾರಿ ವೇದವ್ಯಾಸರು ಸೇರಲು ಬಂದಾಗಲೂ ಯಶಸ್ವಿಯಾಗುವುದಿಲ್ಲ. ಒಬ್ಬಳಿಗೆ ಕುರುಡ ಹುಟ್ಟುತ್ತಾನೆ. ಮತ್ತೊಬ್ಬಳಿಗೆ ಪಾಂಡುರೋಗಿ ಹುಟ್ಟುತ್ತಾನೆ. ಎರಡನೇ ಬಾರಿ ಬಂದಾಗಲೂ ಯಶಸ್ವಿಯಾಗಲಿಲ್ಲ. ಮೂರನೇ ಬಾರಿ ಮತ್ತೆ ಸೇರಲು ರಾತ್ರಿ ಗೊತ್ತುಪಡಿಸಿದಾಗ ವಿಶೇಷ ಘಟನೆಯೊಂದು ನಡೆಯುತ್ತದೆ. ಆ ಘಟನೆ ಏನು, ಮುಂದೆ ಉತ್ತಮ ಮಕ್ಕಳು ಹುಟ್ಟಿದರೇ? ವಿದುರ ಹೇಗೆ ಹುಟ್ಟಿದ ಎನ್ನುವುದನ್ನು ಇಲ್ಲಿ ಚಿತ್ರಿಸಿದ್ದಾರೆ.
ಮೇನಕೆಯ ಮನದಾಳದಿಂದ
ಈ ಕಥೆಯಲ್ಲಿ ಇಂದ್ರನ ಆಸ್ಥಾನದಲ್ಲಿದ್ದ ಮೋಹಕ ಮೇನಕೆಯು ನರ್ತಕಿಯಾಗಿ ಆತ ಹೇಳಿದಂತೆ ಹೆಜ್ಜೆಹಾಕುವುದು, ಅವನ ಅಣತಿಯಂತೆ ತನಗಾಗದವರ ತಪಸ್ಸು ಕೆಡಿಸುವುದು, ಕೇವಲ ಇವರ ದೈಹಿಕ ಕಾಮವನ್ನಷ್ಟೇ ಬಳಸಿಕೊಳ್ಳದೆ ಇನ್ನೊಬ್ಬರ ವಿಘ್ನಕ್ಕಾಗಿಯೂ ಬಳಸಿಕೊಳ್ಳುತ್ತಿರುವ ವಿವರಣೆ ಇದೆ. ವಿಶ್ವಾಮಿತ್ರನ ತಪಸ್ಸನ್ನು ಕೆಡಿಸಲಿಕ್ಕಾಗಿ ಬಂದು ನರ್ತಿಸಿ ಉನ್ಮಾದದಿಂದ ಕುಣಿದು ಅವನ ನೋಟ ಬದಲಾಯಿಸಿ, ಕಾಮ ಹುಟ್ಟಲು ಕಾರಣನಾಗಿ, ಆತನಿಂದ ಮಗುವನ್ನು ಪಡೆದು ಅದನ್ನು ಬಿಟ್ಟು ಸ್ವರ್ಗ ಲೋಕಕ್ಕೆ ತೆರಳಿದ್ದು, ಇದೇ ರೀತಿ ವಿಶ್ವಾವಸು ಎಂಬ ಗಂಧರ್ವ ರಾಜನೊಡನೆ ವರ್ತಿಸಿ ಹುಟ್ಟಿದ ಮಗು ಏನಾಯ್ತು, ಆ ಮಗು ಯಾರು? ಅದು ಯಾರೊಡನೆ ವಿವಾಹವಾಯಿತು ಎನ್ನುವದನ್ನು ಚಂದವಾಗಿ ನೇಯ್ದಿದ್ದಾರೆ. ಮುಂದೆ ಮೇನಕೆಯಿಂದ ಹುಟ್ಟಿದ ಮಗು ಶಕುಂತಲೆಯಾಗಿ ಕಣ್ವ್ವಾಶ್ರಮದಲ್ಲಿ ಬೆಳೆಯುವುದು, ಅವಳು ವಿವಾಹವಾಗುವುದರ ಕುರಿತಾಗಿದೆ. ತಾನು ಇಂದ್ರನ ಬಂಗಾರದ ಪಂಜರದಲ್ಲಿ ಬಂಧಿತ ಗಿಣಿ ಎಂದು ಹೇಳಿಕೊಳ್ಳುತ್ತಾಳೆ.
ಸತಿ ಲೋಪಾಮುದ್ರೆಯೂ, ಪತಿ ಅಗಸ್ತ್ಯರೂ
ಈ ಕಥೆಯಲ್ಲಿ ಅಗಸ್ತ್ಯರು ವಿದರ್ಭಕ್ಕೆ ಬಂದಾಗ ಮಗಳು ಲೋಪಾಮುದ್ರೆಯನ್ನು ಆಕೆಯ ತಂದೆ ಕರೆಯಿಸುತ್ತಾನೆ. ರಾಜನ ಮಗಳನ್ನು ಕೇಳಿ ಪಡೆದು ಅವರು ವಿವಾಹವಾಗುವ ಕಥೆ ಇದು. ವಿವಾಹದ ನಂತರ ಅರಮನೆಯಿಂದ ಎಲೆಮನೆ (ಪರ್ಣಕುಟಿ)ಗೆ ಬರುತ್ತಾಳೆ. ಅಲ್ಲಿ ಎಷ್ಟೋ ವರ್ಷಗಳ ಕಾಲದವರೆಗೆ ಇಬ್ಬರಿಗೂ ಸಂತಾನ ಕಾಣದ ಬದುಕು ಎದುರಾಗುತ್ತದೆ. ಏಕಕಾಲದಲ್ಲಿ ಇಬ್ಬರಲ್ಲೂ ದೈಹಿಕ ಕಾಮನೆ ಹುಟ್ಟಿದರೂ ಲೌಕಿಕ ವಾಸನೆಗೆ ಇದನ್ನು ಬಳಸಬಾರದು ಎನ್ನುವ ಅಗಸ್ತ್ಯರು ಲೋಕೋತ್ತರ ಕಾರ್ಯಕ್ಕಾಗಿ ಧನಸಂಗ್ರಹಕ್ಕೆ ತೆರಳುವುದು, ಹಲವು ರಾಜ್ಯ ದೇಶಗಳನ್ನು ಸುತ್ತಾಡಿ ಬರುವ ವೇಳೆ ಲೋಪಾಮುದ್ರೆ ಗರ್ಭವತಿಯಾಗಿ ಏಳು ವರ್ಷ ಕಳೆದಿರುತ್ತದೆ. ಆಕೆಗೆ ಹೆರಿಗೆಯಾಯಿತೇ? ಹುಟ್ಟಿದ ಮಗು ಯಾರು? ಮುಂದೆ ಅಗಸ್ತ್ಯ- ಲೋಪಾಮುದ್ರೆಯರ ಬದುಕು ಏನಾಯಿತು ಎನ್ನುವುದನ್ನು ಸವಿವರವಾಗಿ ಕಟ್ಟ್ಟಿಕೊಡುವ ಕಥೆ ಇದು.
ಒಲವಿನ ನಳನಿಗೆ ನಲುಮೆಯ ಓಲೆ
ಈ ಕಥೆಯಲ್ಲಿ ನಳದಮಯಂತಿಯ ಅಗಲಿಕೆ, ನಂತರ ವಿಧಿಯ ಕೈಗೊಂಬೆಯಂತೆ ಇಬ್ಬರೂ ಕಾಡಿಗೆ ಹೋಗುವುದು, ಅಲ್ಲಿ ನಿನ್ನನ್ನು ಕೈ ಬಿಡುವುದಿಲ್ಲ ಎಂದು ಹೇಳಿದ್ದರೂ ದಟ್ಟ ಕಾಡಿನಲ್ಲಿ ದಮಯಂತಿಯನ್ನು ಕೈ ಬಿಟ್ಟು ಹೋಗುವುದು, ನಂತರ ಆಕೆ ಚೇದಿ ದೇಶದ ಸೈರಂದ್ರಿಯಾಗುವುದು, ಅರಮನೆಯ ಉಪವನದಲ್ಲಿ ತಿರುಗಾಡುವಾಗ ಆಕೆಯ ಅಣ್ಣನ ಆತ್ಮೀಯ ಗೆಳೆಯ ಸುದೇವ ಈಕಯೆನ್ನು ಹುಡುಕುತ್ತಾ ಬಂದು ಕಂಡಾಗ ತವರು ಮನೆಯನ್ನು ಸೇರಿಸುವುದು, ತವರಿನಲ್ಲಿ ಮಕ್ಕಳಾದ ಇಂದ್ರಸೇನ ಮತ್ತು ಇಂದ್ರಸೇನೆ ಅಮ್ಮನಿಗಾಗಿ ಹಂಬಲಿಸುತ್ತಿರುವುದನ್ನು ಚಿತ್ರಿಸಿದ್ದಾರೆ. ನಳ ಮಹಾರಾಜ ಮತ್ತೆ ಈಕೆಯನ್ನು ಸೇರಿದನೇ, ಮುಂದೆ ಅವರ ಕುಟುಂಬ ಏನಾಯಿತೆನ್ನುವ ವಿವರಣೆ ಈ ಕಥೆಯಲ್ಲಿದೆ.
ಶತಾನಂದ
ಈ ಕತೆಯಲ್ಲಿ ಬ್ರಹ್ಮನ ಮಾನಸಪುತ್ರಿ ಅಹಲ್ಯಾ ಗೌತಮನನ್ನು ಮದುವೆಯಾಗಿದ್ದರ ಹಿನ್ನೆಲೆಯಲ್ಲಿ ನಿರಾಶಗೊಂಡ ಇಂದ್ರ ಆಕೆಯನ್ನು ಮೋಸದಿಂದ ಗೌತಮರ ಪ್ರತಿರೂಪದಲ್ಲಿ ಕೂಡಿದ್ದರಿಂದ ನಿಶ್ಚಲ ಶಿಲೆಯಾಗು ಎಂದು ಸಿಟ್ಟಿನಿಂದ ಶಾಪಕ್ಕೊಳಗಾಗುವುದು, ಅದೇ ರೀತಿ ಇಂದ್ರನಿಗೆ ನಿರಿಂದ್ರಿಯನಾಗು ಎಂದು ಶಾಪಕ್ಕೊಳಗಾಗುವುದು, ದಿವ್ಯ ಪುರುಷನ ಅಳವಿಗೆ ತಲುಪಿ ಶಾಪವಿಮೋಚನೆಯಾಗುತ್ತದೆ ಎಂದು ಅಹಲ್ಯಾಗೆ ಹೇಳುತ್ತಾರೆ. ಆಕೆಯ ಮಗನಾದ ಶತಾನಂದ ಮಿಥಿಲೆಯ ರಾಜನಲ್ಲಿ ಪುರೋಹಿತನಾಗಿ ಕೆಲಸ ಮಾಡುತ್ತಿರುವಾಗ ಮಿಥಿಲೆಯ ರಾಜನ ಮಗಳಾದ ಸೀತೆಗೆ ಸ್ವಯಂವರವನ್ನು ಏರ್ಪಡಿಸಿರುತ್ತಾನೆ. ವಿಶ್ವಾಮಿತ್ರನ ಜೊತೆ ರಾಮ ಲಕ್ಷ್ಮಣರು ಆಗಮಿಸುತ್ತಾರೆ. ಬರುವ ದಾರಿಯಲ್ಲಿ ರಾಮನಿಗೆ ಶಿಲೆಯು ಕಾಲಿಗೆ ತಾಗಿ ಅಹಲ್ಯೆ ಪುನೀತಳಾಗಿ ಎದ್ದುಬರುತ್ತಾಳೆ. ಗೌತಮ- ಅಹಲ್ಯೆ ಒಂದಾಗುತ್ತಾರೆ. ಮುಂದೆ ಸೀತಾ-ರಾಮರ ಕಲ್ಯಾಣವಾಗುವುದರ ಜೊತೆಗೆ ರಾಮನ ಸಹೋದರರ ವಿವಾಹವೂ ನಡೆಯುತ್ತದೆ. ಮುಂದೆ ಶತಾನಂದ ಮತ್ತೆ ಅಪ್ಪ-ಅಮ್ಮನ ಭೇಟಿಯಾದನೇ, ರಾಮನ ಜೊತೆ ತೆರಳಿದನೇ ಎನ್ನುವುದರ ಬಗ್ಗೆ ಇದರಲ್ಲಿ ಚಿತ್ರಿತವಾಗಿದೆ.
ತುಲಾಭಾರತ ಸುತ್ತ ಜಾಂಬವತಿಯ ಚಿತ್ತ
ಕಾಡಿನಲ್ಲಿ ಕಾಡಿನಲ್ಲಿ ಸಿಕ್ಕ ಮಗುವನ್ನು ತಂದು ಜಾಂಬವಂತ ಸಾಕುತ್ತಾನೆ. ಆಕೆ ಜಾಂಬವತಿಯಾಗಿ ಬೆಳೆಯುತ್ತಿದ್ದಳು. ಆಕೆಯ ತೊಟ್ಟಿಲಿಗೆ ಅಗಾಧ ಪ್ರಭೆಯುಳ್ಳ ಮಣಿಯೊಂದನ್ನು ತಂದು ಆತ ಕಟ್ಟುತ್ತಾನೆ. ಇದೇ ವೇಳೆ ಗುಹೆಗೆ ಒಬ್ಬ ಮಹಾನುಭಾವ ಏಕಾಏಕಿ ಬಂದಾಗ ಅವರಿಬ್ಬರ ನಡುವೆ ಹೊಡೆದಾಟ ನಡೆಯುತ್ತದೆ ಆ ವ್ಯಕ್ತಿಯೇ ಶ್ರೀರಾಮನ ಪ್ರತಿರೂಪದ ಶ್ರೀ ಕೃಷ್ಣ ಆಗಿರುತ್ತಾನೆ. ಇದನ್ನರಿತ ಬಳಿಕ ಆಕೆಯನ್ನು ದ್ವಾರಕೆಗೆ ಕಳಿಸಿಕೊಡುತ್ತಾನೆ. ಶ್ಯಮಂತಕ ಮಣಿಯ ಒಡೆಯನಾದ ಸತ್ರಾಜಿತನಿಗೆ ಅದನ್ನು ಹಿಂದಿರುಗಿಸಿ ಅವನ ಮಗಳು ಸತ್ಯಭಾಮೆಯನ್ನು ಕೊಟ್ಟು ವಿವಾಹ ಮಾಡುತ್ತಾನೆ ಇತ್ತ ದ್ವಾರಕೆಯಲ್ಲಿ ಶ್ರೀಕೃಷ್ಣನ ತುಲಾಭಾರದ ಸಿದ್ಧತೆ ನಡೆಯುತ್ತದೆ. ಅದು ಹೇಗೆ ನಡೆಯಿತು, ಯಾವುದರಿದಂ ತುಲಾಭಾರ ನಡೆಯಿತು? ವಿಫಲವಾದಾಗ ಮತ್ತೆ ಯಶಸ್ವಿಯಾದ್ದದು ಹೇಗೆ? ಇದಕ್ಕೆಲ್ಲ ಕಾರಣಕರ್ತರಾರು ಎನ್ನುವುದನ್ನು ವಿವರಿಸುವ ಈ ಕಥೆ ಅತ್ಯಂತ ಸುಂದರವಾಗಿ ನಿರೂಪಿತವಾಗಿದೆ.
ಹಿಡಿಂಬಾ ವಿವಾಹ- ವಿಹಾರ- ವಿದಾಯ
ಹಿಡಿಂಬೆ ಭೀಮನನ್ನು ಮದುವೆಯಾಗುವುದು, ಅವರಿಗೆ ಘಟೋತ್ಕಚನೆಂಬ ಪುತ್ರ ಜನಿಸುವುದು, ಆತ ಪಾಂಡವರ ಯುದ್ಧಕ್ಕೆ ಹೋಗಿ ಮರಣವಾಗುವುದರ ಬಗ್ಗೆ ಈ ಕಥೆ ಇದೆ. ಅರಗಿನ ಮನೆಗೆ ಬೆಂಕಿ ಬಿದ್ದ ನಂತರ ಪಾಂಡವರು ಅರಣ್ಯವಾಸಿಗಳಾಗುವುದು, ಅರಣ್ಯದಲ್ಲಿದ್ದ ಹಿಡಿಂಬೆ ಮತ್ತು ಆಕೆ ಅಣ್ಣ ಪಾಂಡವರನ್ನು ಗಮನಿಸುವುದು, ಸುಂದರರೂಪಿಯಾಗಿ, ಷೋಡಷಿಯಾಗಿ ಹಿಡಿಂಬೆ ಭೀಮನಿಗೆ ಮರಳುಳಾಗುವುದು, ಕಾಡಿನಲ್ಲಿದ್ದಷ್ಟು ದಿನ ಮಾತ್ರ ಗಂಡ-ಹೆಂಡತಿ ಎಂಬ ಮಾತಿನ ಮೇರೆಗೆ ಸಹೋದರರೆಲ್ಲರ ಮುಂದೆ ಮದುವೆಯಾಗುವುದು, ಗರ್ಭಧರಿಸುವುದು, ಘಟೋತ್ಕಚ ಜನಿಸುವುದರ ಕುರಿತಾಗಿದೆ. ನಂತರ ಪಾಂಡವರು ಅರಣ್ಯವನ್ನು ತೊರೆದು ಹೋಗುತ್ತಾರೆ. ಅಲ್ಲಿಗೆ ಭೀಮಸೇನ ಸಂಪರ್ಕದಿಂದ ಆಕೆ ದೂರವಾದಳೇ? ನಂತರ ಹಿಡಿಂಬೆ, ಘಟೋತ್ಕಚ ಏನಾದರು, ಘಟೋತ್ಕಚ ಮದುವೆಯಾಗಿದ್ದ್ದು ಹೇಗೆ? ಪಾಂಡವರಿಗೂ ಕೌರವರಿಗೂ ಯುದ್ಧ ನಡೆದಾಗ ಆತ ಯಾವ ಪಾತ್ರ ವಹಿಸಿದ ಎನ್ನುವುದನ್ನು ಮನಸೆಳೆಯುವಂತೆ ಲೇಖಕರು ಇಲ್ಲಿ ಚಿತ್ರಿಸಿದ್ದಾರೆ.
ನಿಧಿ ಮತ್ತು ಪಾಲು
ತ್ರಿವಿಕ್ರಮ ಹೆಗಡೆ ಎನ್ನುವವರು ತಮ್ಮ ಮನೆಯ ಹತ್ತಿರದ ನಾಗಬನದ ಬಳಿ ನಿಧಿಗಾಗಿ ಆಪ್ತ, ಗ್ರಾಮದ ದೇವಸ್ಥಾನದ ಅರ್ಚಕನಾಗಿದ್ದ ಶ್ರೀಪತಿರಾಯನ ಜೊತೆಗೆ ರಾತ್ರಿ ಅಗೆಯುತ್ತಾರೆ. ಒಂದು ಪೆಟ್ಟಿಗೆ ಸಿಗುತ್ತದೆ. ಅದನ್ನು ತಂದು ಮನೆಯ ಕೊಟ್ಟಿಗೆ ಅಟ್ಟದ ಮೇಲೆ ಅಡಗಿಸಿಡುತ್ತಾರೆ. ಇದಾದ ೬ನೆಯ ದಿನ ಶ್ರೀಪತಿರಾಯನಿಗು ಹೆಗಡೆಯವರಿಗೂ ನಿಧಿಯ ಬಗ್ಗೆ ಜಗಳವಾಗುತ್ತದೆ. ಮನೆಗ ಹೋಗುವಾಗ ಊರಿನ ತಗ್ಗಿನಲ್ಲಿ ಕಾಡುಕೋಣ ಗುದ್ದಿ ರಾಯರು ಸತ್ತುಹೋಗುತ್ತಾರೆ. ಈ ಮಧ್ಯೆ ಹೆಗಡೆಯವರ ಮನೆಯಲ್ಲಿ ಮಕ್ಕಳು ಹಿಸೆ (ಪಾಲು) ಕೇಳುತ್ತಾರೆ. ಪಂಚಾಯತಿಕೆ ನಡೆದು ಮಕ್ಕಳೆಲ್ಲಾ ತಮ್ಮ ಆಸ್ತಿಯ ಪಾಲು ಪಡೆಯುತ್ತಾರೆ. ಬಂಗಾರದ ನಿಧಿಯ ನಿರೀಕ್ಷೆ ಇಟ್ಟುಕೊಂಡ ಹೆಗಡೆಯವರು ಪೆಟ್ಟಿಗೆ ತೆರೆದಾಗ ಅದರಲ್ಲಿ ನಿಜಕ್ಕೂ ಚಿನ್ನಾಭರಣವಿತ್ತೇ? ಅದನ್ನು ಮುಂದೆ ಏನು ಮಾಡಿದರು, ಹಿಸೆಯ ನಂತರ ಅವರು ಹೇಗೆ ಬದುಕಿದರೆನ್ನುವುದು ಈ ಕಥೆಯ ಮುಂದಿನ ಭಾಗ. ಗ್ರಾಮೀಣ ಭಾಗದಲ್ಲಿ ನಡೆಯುವ, ಜಮೀನ್ದಾರರ ಮನೆಯ ಹಿಸೆಯ ಕಥೆ ಮತ್ತು ನಿಧಿಯ ದುರಾಸೆಗೆ ಜನ ತುತ್ತಾಗುತ್ತಿರುವುದನ್ನು ಸೊಗಸಾಗಿ ನಿರೂಪಿಸಿದ್ದಾರೆ.
....................

Comments
Post a Comment