ದುರಂತ ಕಾವ್ಯದಂತೆ ಆವರಿಸುವ 

‘ಹಾಣಾದಿ’



‘ಹಾಣಾದಿ’ ಎಂದರೆ ಹೊಲಕ್ಕೆ ಎತ್ತಿನ ಗಾಡಿ ಹೋಗುವ ಹಾದಿ ಎಂದರ್ಥ. ಈ ಕಾದಂಬರಿಯ ಶೀರ್ಷಿಕೆ ದ್ವನಿಸುವಂತೆ ಎತ್ತಿನಗಾಡಿ ಹೋಗುವ ಹಾದಿಯಂತೆ ಕಲ್ಲು, ಮುಳ್ಳು, ಕಂಟಿ, ಹೊಂಡದ ರಸ್ತೆಯಲ್ಲಿ ಜೀವನ ಸಾಗಿದಾಗ ನಾವು ಅದನ್ನು ಹಿಂತಿರುಗಿ ನೋಡಿ ಹಿಂದಿನ ಘಟನೆಗಳನ್ನು ಮೆಲುಕು ಹಾಕುವುದುಸ. 

ಬರಹಗಾರ  ಕಪಿಲ ಪಿ ಹುಮ್ನಾಬಾದೆ ಅವರ ಈ ಕಾದಂಬರಿ, ವಾಸ್ತವ, ಕಲ್ಪನೆ, ಮಾಂತ್ರಿಕತೆಯನ್ನೆಲ್ಲ ಬೆರೆಸಿದ ಅಪರೂಪದ ನಿರೂಪಣೆಯೊಂದಿಗೆ ಮೂಡಿಬಂದಿದೆ. ಹೊಸ ಕ್ರಮದಲ್ಲಿ ಕಾದಂಬರಿಯಲ್ಲಿ ರೂಪಿಸಬಹುದೆನ್ನುವುದನ್ನು ಇಲ್ಲಿ ಕಪಿಲ್ ಸಾಬೀತುಮಾಡಿದ್ದಾರೆ. ಇಲ್ಲಿನ  ಕಥೆಯೇ ವೈಶಿಷ್ಟ್ಯವಾದುದು. ಇದಕ್ಕೆ ಉಪಕಥೆಗಳು ಇಲ್ಲ. ಅಜ್ಜಿಯೊಬ್ಬಳು ಹೇಳುವ ಕಥೆಯೇ ಈ ಕಾದಂಬರಿಯ ವಸ್ತು. ಕಥೆಯ ವಸ್ತುವನ್ನು ಹಿಗ್ಗಿಸಿದ ರೀತಿ, ಗ್ರಾಮದ ಚಿತ್ರಣ, ಅಪರಿಚಿತರು ಮತ್ತು ಅವರ ಅನುಭವಗಳು, ಅವು ನಮಗೆ ನೀಡುವ ವಿಷಯಗಳು,  ಅವು ರೂಪುಗೊಳ್ಳುವ ಬಗೆ ಮುಂತಾದವುಗಳನ್ನು ಲೇಖಕರು ಚೆನ್ನಾಗಿ ಬಿಂಬಿಸಿದ್ದಾರೆ. 

ಹಳ್ಳಿಯಲ್ಲಿ ಇಂದಿಗೂ ನೆಲೆಸಿರುವ ಮೂಢನಂಬಿಕೆ ಹೇಗೆ ಅಪಾಯಕಾರಿ ಮತ್ತು ಜನರು ಮನೆಯನ್ನು, ಹಳ್ಳಿಯನ್ನಾದರೂ ಬಿಡಬಹುದು, ಆದರೆ  ಮೂಢನಂಬಿಕೆಯನ್ನು ಬಿಟ್ಟುಕೊಡುವುದಿಲ್ಲ ಎನ್ನುವುದನ್ನು ಈ ಕಾದಂಬರಿಯ ಮೂಲಕ ಲೇಖಕರು ಸಾಬೀತು ಮಾಡಿದ್ದಾರೆ. ಕಥೆ ಸಾಗುವುದು ಒಂದು ಬಾದಾಮ ಗಿಡದ ಸುತ್ತ.  ಆ ಗಿಡದ ಬಗ್ಗೆ ಜನರಲ್ಲಿ ಮೂಡಿದ ಮೌಢ್ಯ, ಅದರ ಕಥೆ, ಅದು ನಾಶವಾದದ್ದು, ನಂತರ ಅದರಿಂದ ಆದ ಅನಾಹುತಗಳು ಈ ಕಾದಂಬರಿಯ ಕಥಾವಸ್ತು.  ಹಳ್ಳಿಯಲ್ಲಿ ಹುಟ್ಟಿಬೆಳೆದ  ನಿರೂಪಕ ವಿದ್ಯಾಭ್ಯಾಸಕ್ಕಾಗಿ ನಗರ ಸೇರಿ, ನಂತರ ಕೆಲಸ ಪಡೆದಾಗ ತನ್ನ ತಂದೆಗೆ ಕಳುಹಿಸಿದ ಮನಿ ಆರ್ಡರ್ ವಾಪಸ್ ಬಂದಾಗ ಚಿಂತಾಕ್ರಾಂತರಾಗಿ ಊರಿಗೆ ಮರಳುತ್ತಾರೆ. ಅಲ್ಲಿ ಹೋದಾಗ ಊರು ಪಳೆಯುಳಿಕೆಯಾಗಿ ಕಂಡುಬರುತ್ತದೆ. ಯಾರೊಬ್ಬರೂ ಇರುವುದಿಲ್ಲ. ತನ್ನ ಮನೆಯನ್ನು ಹುಡುಕಿ ಹೋದಾಗ ಅಲ್ಲಿಯೂ ಯಾರೂ ಇರುವುದಿಲ್ಲ. ತನ್ನ ಮನೆ ಪರಿಚಯ ಹತ್ತಿದ ನಂತರ ಅಲ್ಲಿಯೇ ಕುಳಿತಾಗ ಮನೆಯೊಳಗಿಂದ  ದೆವ್ವದಂತಹ ಮುದುಕಿ ಮಾತನಾಡಿಸಿದಾಗ ಹೆದರುತ್ತಾರೆ. ಇದು ಮನುಷ್ಯನೇ ಅಥವಾ ದೈವವೇ ಎಂಬ ಸಂದೇಹಕ್ಕೆ ಬೀಳುತ್ತಾರೆ. 

ತನ್ನ ಪರಿಚಯ ಹೇಳಿಕೊಳ್ಳದ ಮುದುಕಿ ಆತನನ್ನು ಮಗನಂತೆ ನೋಡಿಕೊಳ್ಳುತ್ತಾಳೆ. ನಿರೂಪಕ ಏನೇ ಕೇಳಿದರೂ ಉತ್ತರಿಸದೆ, ಕಾಲಬಂದಾಗ ಮಾತನಾಡುವೆ ಎನ್ನುವಳು. ಈತ ಮನೆ ಹೊಲ, ಸುತ್ತಮುತ್ತಲ ಕಾಡು, ದೇವಸ್ಥಾನ, ಗುಹೆ ಎಲ್ಲ ಅಲೆದಾಡಿ ಬಂದರೂ ಪಳೆಯುಳಿಕೆ ಕಾಣುತ್ತದೆಯೇ ವಿನಾ ನರಜಂತು ಸಿಗುವುದಿಲ್ಲ. ಒಂದು ರಾತ್ರಿ ತನ್ನೊಡನೆ ಹೊಲಕ್ಕೆ ಬರಬೇಕೆಂದು ಆಗ ಎಲ್ಲ ವಿಷಯ ಬಿಚ್ಚಿಡುವುದಾಗಿ ಹೇಳುತ್ತಾಳೆ. ಅದರಂತೆ ಹೇಳಿ ಟಾರ್ಚ್ ದೀಪದಲ್ಲಿ ರಾತ್ರಿಯಿಡಿ ಇಡೀ ಊರು, ಕಾಡು- ಮೇಡು, ಹೊಲ-ಗುಡಿ, ಗುಡ್ಡ-ಗುಹೆ ಎಲ್ಲ ಸುತ್ತಾಡಿಸುತ್ತಾ ಆ ಊರು ಹಾಳು ಕೊಂಪೆಯಾದ ಘಟನೆ ಮತ್ತು ಬದಾಮಿ ಗಿಡದ ಘಟನೆಗಳನ್ನೆಲ್ಲ ವಿವರಿಸುತ್ತಾಳೆ.

 ಅಜ್ಜಿ ಹೆಸರು ಗುಬ್ಬಿ ಆಯಿ ಎಂದು. ಈಕೆ ಅಲೆಮಾರಿ ಜನಾಂಗಕ್ಕೆ ಸೇರಿದವಳು. ಗುಡ್ಡದ ಮೇಲೆ ಗುಹೆಯಲ್ಲಿರುತ್ತಾಳೆ.  ನಿರೂಪಕನ ತಂದೆ ಹೊಲಕ್ಕೆ ಹೋದಾಗ ಆ ಕಡೆ ಹೋಗಿ ಬರುತ್ತಾರೆ. ಒಮ್ಮೆ ಊರಿನ ಪಟೇಲನ ಮಗ ಅಜ್ಜಿಯನ್ನು (ಯೌವ್ವನದಲ್ಲಿದ್ದಾಗ) ಬಲಾತ್ಕಾರ ಮಾಡಿದಾಗ ನಿರೂಪಕರ ತಂದೆ ಮನೆಗೆ ಕರೆತಂದು ಸಲಹುತ್ತಾರೆ. ಅಂದಿನಿಂದ ಆಕೆಗೆ ಅವರ ಮನೆಯೇ ವಾಸದ ಮನೆಯಾಗುತ್ತದೆ.  ಇದಕ್ಕೂ ಮುನ್ನ ನಿರೂಪಕರು ಹುಟ್ಟಿದ ದಿನ ಅವರ ತಂದೆ ಒಂದು ಬದಾಮ ಗಿಡವನ್ನು ಮನೆ ಎದುರು ನೆಟ್ಟಿರುತ್ತಾರೆ. ಅದನ್ನು ಜೋಪಾನವಾಗಿ ಕಾಪಾಡಿ ಅದಕ್ಕೆ ಮಣ್ಣಿನ ಕಟ್ಟೆಯನ್ನು ಕಟ್ಟಿ ವಿಶ್ರಮಿಸಲು ಅದು ಅತ್ಯುತ್ತಮ ಜಾಗವಾಗಿ ಮಾಡುತ್ತಾರೆ. ಅದು ನೆರಳು, ಹಣ್ಣು ಕೊಡುತ್ತಾ ಸುತ್ತಮುತ್ತಲಿವನವರೆನ್ನೆಲ್ಲ ಆಕರ್ಷಿಸುತ್ತಾ ಹೆಸರುವಾಸಿ ಮರವಾಗುತ್ತದೆ. ಅದ ರ ಎಲೆಯನ್ನು ಊರವರು ವಿವಿಧ ಸಂದರ್ಭದಲ್ಲಿ ಬಳಸುತ್ತಾರೆ.

ಈ ರೀತಿ ಇರುವ ಬದಾಮ ಗಿಡದಲ್ಲಿ ದೆವ್ವ ಹೋಕ್ಕಿದೆ ಎಂದು ಕೆಲವರು ವದಂತಿ ಹಬ್ಬಿಸುತ್ತಾರೆ. ಇದು ನಾಮಾ  ರೀತಿಯ ಅನಾಹುತಗಳಿಗೆ ಕಾರಣವಾಗುತ್ತದೆ.  ಊರಿನ ಸೊಸೆ ಒಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ ಆಕೆಯ ದೆವ್ವ ಈ ಗಿಡದಲ್ಲಿ ಹೊಕ್ಕಿದೆ ಎಂದು ಊರಿನವರು ಹೇಳುತ್ತಾರೆ. ಇಲ್ಲಿಂದ ಅದರ ಬಗ್ಗೆ ಇಲ್ಲಸಲ್ಲದ ಮಾತು ಶುರುವಾಗುತ್ತದೆ. ಈ ಬದಾಮಿ ಗಿಡ ಬೆಳೆದಂತೆ ಅದರಲ್ಲಿ ಕರಿ ಇರುವೆಗಳು ಶುರುವಾಗುತ್ತದೆ. ಒಮ್ಮೆ ನಿರೂಪಕರ ತಾಯಿ ಆ ಗಿಡದ ಬುಡದಲ್ಲಿ ಮಲಗಿದ್ದಾಗ ಕರಿ ಇರುವೆಗಳು ಮುತ್ತಿ ಮೈತುಂಬ ಕಡಿಯುತ್ತವೆ. ಆಕೆ ಗಿಡ ಕಡಿಯದಿದ್ದಿರೆ ತವರು ಮನೆ ಸೇರುವೆ ಎಂದು ಗಂಡನನ್ನು ಹೆದಿರಿಸುವಳು. ಇದಕ್ಕೆ ಬೆದರದ ಗಂಡ  ಗಿಡ ಕಡಿಯಲಾರೆ, ತವರು ಮನೆಗೆ ಹೋಗು ಎನ್ನುತ್ತಾರೆ. 

ಕೆಲವು ದಿನಗಳ ಬಳಿಕ ಊರಿನ ಹುಡುಗನೊಬ್ಬ ಗಿಡದ ಹಣ್ಣಿಗೆ ಕಲ್ಲು ಎಸೆದಾಗ  ಅದು ವ್ಯಕ್ತಿಯೊಬ್ಬನ ತಲೆಯ ಮೇಲೆ ಬಿದ್ದು ಗಾಯವಾಗುತ್ತದೆ. ಆಗ ಮತ್ತೆ ದೆವ್ವದ ವಿಷಯ ಬೆಳಕಿಯೇ ಬರುತ್ತದೆ. ಹೀಗೆ ಈ ಮರದ ಸಲುವಾಗಿ ಹತ್ತಾರು ಗಲಾಟೆಗಳು ಊರಲ್ಲಿ ನಡೆದರೂ ಮರ ಕಡಿಯಲು ಬಿಡುವುದಿಲ್ಲ. ಜನರು ನುಗ್ಗಿ ಕಡಿಯುವ ಮೊದಲು ನೀನೇ ಕಡಿ ಎಂದು ಸೂಚಿಸುತ್ತಾರೆ. ಇದರಿಂದ ನೊಂದು, ಅತ್ತು, ಕೂಗಾಡಿ, ಅರಚಾಡುತ್ತಾನೆ ನಿರೂಪಕರ ತಂದೆ. ಅಂದು ಅಪ್ಪನ ಮಿತ್ರ ಕಂಟಿ ಎನ್ನುವವನು ಚೆನ್ನಾಗಿ ಕುಡಿದು ಬಂದು ಆ ಮರದ ಕೆಳಗೆ ಮಲಗಿರುತ್ತಾನೆ. ರಾತ್ರಿ ಎದ್ದು ಹೋದಾಗ ಕೆಸರಿನ ಕೆರೆಗೆ ಬಿದ್ದು ಸಾಯುತ್ತಾನೆ. ಇದಕ್ಕೂ ಮರವೇ ಕಾರಣ ಎಂದು ಮತ್ತೆ ಗಲಾಟೆ ನಡೆಯುತ್ತದೆ. ಊರಿಗೆ ಅಶುಭ,  ಊರವರ ಬಲಿ ಬೇಡ  ಎಂದು ಊರವರು ಹಲುಬುತ್ತಾರೆ.

 ಗಾಳಿಗು ಮರದ ಎಲೆ ಅಲುಗಾಡುತ್ತಿರಲಿಲ್ಲ. ಏಕೆಂದರೆ ಬೃಹತ್ ನೀಲಗಿರಿ ಮರ ಅದರ ಎದುರಿತ್ತು. ಅದು ಗಾಳಿ ತಡೆಯುತ್ತಿತ್ತು. ಇದನ್ನರಿಯದ ಮೂಢರು ಎಂತಹ ಗಾಳಿಗೂ ಅಲುಗದು, ಊರಲ್ಲಿ ಹತಾರು ಮನೆ, ಮರ ಬಿದ್ದರೂ ಗಾಳಿಗೆ ನಿಂತಿದೆ ಎಂದರೆ ಇದರಲ್ಲಿ ದೈವ ಇದೆ ಎಂದರ್ಥ ಎನ್ನುತ್ತಿದ್ದರು. ರಾಮಯ್ಯ ಎನ್ನುವವ ಒಂದು ದಿನ ಸ್ವಾಮಿಯೊಬ್ಬರನ್ನು ಕರೆತಂದು  ಈ ಗಿಡಕ್ಕೆ ಪೂಜೆ ಮಾಡಿ ೧೦೧ ಜನರಿಗೆ ಊಟ ಹಾಕಿಸಬೇಕು. ಇದರಿಂದ ಎಲ್ಲಾ ಸರಿ ಹೋಗುತ್ತದೆ ಎಂದಾಗ ನಿರೂಪಕನ ತಂದೆ ಆತನ ಮನೆಗೆ ಹೋಗಿ ಗಲಾಟೆ ಮಾಡಿ ಬರುತ್ತಾನೆ.  ಹೀಗೆ  ಊರ ತುಂಬಾ ಬದಾಮಿ ಗಿಡದ ಕಥೆಯನ್ನೇ ಕಟ್ಟುತ್ತಿದ್ದರು.

ಹೀಗೆ ಮನೆಯಲ್ಲಿ ಯಾರೂ ಇಲ್ಲದ ದಿನ ಒಬ್ಬಾತ ಬಂದು ಆ ಮರವನ್ನು ಕಡಿದು ಹಾಕುತ್ತಾನೆ. ಇದರಿಂದ ಒಳ್ಳೆಯದಾಯಿತಾ, ಅನಾಹುತ ನಡೆಯಿತಾ, ಗಿಡವನ್ನು ಮಗನಂತೆ ನೆಚ್ಚಿಕೊಂಡಿದ್ದ ನಿರೂಪಕರ ತಂದ ಏನಾದರು, ಊರಿನ ಸ್ಥ್ತಿತಿಗತಿ ಏನಾಯಿತು,  ಗುಬ್ಬಿ ಆಯಿಯ ಮುಂದಿನ ಕಥೆ ಏನು? ಅವಳ ಅಂತ್ಯ ಹೇಗಾಯಿತೆನ್ನುವುದನ್ನು ಇಲಿನ ಮುಂದಿನ ಭಾಗದಲ್ಲಿ  ಮನೋಜ್ಞವಾಗಿ ನಿರೂಪಿಸಲಾಗಿದೆ.

ಒಟ್ಟಿನಲ್ಲಿ, ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಶಕ್ತಿ ಈ ಕೃತಿಯಲ್ಲಿದೆ. ಇಲ್ಲಿ ಲೇಖರು ಕತೆಯನ್ನು ಬೆಳೆಸಿದ ರೀತಿ ಸುಂದರವಾಗಿದೆ. ಕೇವಲ ಒಂದೇ ರಾತ್ರಿಯಲ್ಲಿ ಅಜಿ  ಹೇಳುವ ವಿಷಯಗಳೇ ಇಡೀ ಊರಿನ ಐತಿಹಾಸಿಕ ಘಟನೆಯಾಗುತ್ತದೆ. ಮೂಢನಂಬಿಕೆಗಳು ಹೇಗೆ ಜನರನ್ನು ಕಾಲಾತೀತವಾಗಿ ಕಾಡುತ್ತವೆ ಎನ್ನುವುದು ಇದರಲ್ಲಿದೆ. ವಿಸ್ಮಯ, ಕುತೂಹಲ, ಪವಾಡವಿದೆ. ಕೆಲವು ಸಂಭಾಷಣೆಗಳೂ ಸಹ ರೋಚಕವಾಗಿವೆ. ಕಥೆಯು ನಿಗೂಢತೆಯನ್ನು, ಸಂಘರ್ಷವನ್ನು ಎದುರು ಹಾಕಿಕೊಂಡು ಎತ್ತಿನ ಗಾಡಿಯ ಹಾದಿಯ ಹಾಗೆ ಬದುಕನ್ನು ಸಾಕ್ಷೀಕರಿಸುತ್ತಾ ಸಾಗುತ್ತದೆ. 

‘ಹಾಣಾದಿ’ಯಲ್ಲಿನ  ಬದಾಮಿ ಮರ ಹಳ್ಳಿಯಲ್ಲಿನ ಸಮೃದ್ಧಿ- ನೆಮ್ಮದಿಯ ಸಂಕೇತ ಎನ್ನಬಹುದು. ಆ ಮರದ ನಾಶಕ್ಕೆ ಮೌಢ್ಯಗಳು, ಆಧುನಿಕ ವಿಷಫಲಗಳ ರೂಪವಾಗಿ ಕಾಣಿಸುತ್ತವೆ. ಅಪ್ಪನೊಂದಿಗೆ ತನ್ನೂರನ್ನು ಕಳೆದುಕೊಂಡ ನಾಯಕ ಒಂಟಿಯಾಗುವುದು, ಹಳ್ಳಿ-ನಗರದ ಮಧ್ಯೆಯ ಜೀಕುತ್ತಿರುವ ಯುವಜನರ ತ್ರಿಶಂಕು ಸ್ಥಿತಿಯನ್ನು ಈ ಕಾದಂಬರಿ ಮನಗಾಣಿಸುತ್ತದೆ.

........................

 

 

 

 


Comments

Popular posts from this blog