ಬೆಸುಗೆ ಇದ್ದರೆ ವಸುಧೆ


 
‘ಬೆಸುಗೆ ಇದ್ದರೆ ವಸುಧೆ’ ಇದು ಉಪನ್ಯಾಸಕಿ ಶುಭಲಕ್ಷ್ಮಿ ಆರ್. ನಾಯಕ್ ಅವರ ಚೊಚ್ಚಲ ಕವನ ಸಂಕಲನ. ಇದರಲ್ಲಿ ೯೦ಕ್ಕೂ ಅಧಿಕ ಕಾವ್ಯ ಕುಸುಮಗಳನ್ನು  ಪೋಣಿಸಿರುವ ಕಬಯತ್ರಿ, ತಮ್ಮ ಪ್ರಕೃತಿ ಪ್ರೀತಿ, ಋತುಗಳು, ನಾಡು- ನುಡಿಯ ಬಗ್ಗೆ ಇರುವ ಅಭಿಮಾನ, ದೇಶಭಕ್ತಿ, ಗುರು- ಹಿರಿಯರ ಕುರಿತಾದ ಗೌರವಾದರದ ಕವಿತೆ,  ಗಜಲ್, ಸುನೀತಾ, ವ್ಯಕ್ತಿ ಚಿತ್ರಣಗಳನ್ನು ಕವಿತೆಯ ರೂಪದಲ್ಲಿ ಆಕಾರಗೊಳಿಸಿದ್ದಾರೆ.
 ಇಲ್ಲಿನ ಬಹುತೇಕ ಕವನಗಳಲ್ಲಿ ವಿಶಿಷ್ಟ ಛಂದಸ್ಸು ಸ್ವರೂಪವನ್ನು ಕಾಣಬಹುದು. ಕೆಲವು ಕವನಗಳು ಚೌಪದಿ ರೂಪದಲ್ಲೂ ಇವೆ. ಮುಕ್ತ ಛಂದಸ್ಸಿನ ನವ್ಯ ಕವಿತೆಗಳು ಮತ್ತು ಚಿಂತನ ಪ್ರಧಾನ ಕವಿತೆಗಳು ಇಲ್ಲಿನ ವಿಶಿಷ್ಟತೆಯಾಗಿವೆ. ಪ್ರಕೃತಿ ಚಿತ್ರಣ ಕವಿತೆ ಬರೆಯುವುದರಲ್ಲಿ ಸಿದ್ಧಹಸ್ತರು. ಕರಾವಳಿಯವರಾದರೂ ಮಲೆನಾಡಿನ ಸನಿಹದವರೇ ಆಗಿರುವುದರಿಂದ ಅಲ್ಲಿನ ಸೊಬಗು, ದಟ್ಟ ಕಾನನದ ಸೊಬಗು, ಮೌನ ಪರಿಸರ, ಈಗ ನಶಿಸುತ್ತಿರುವ ಅರಣ್ಯ, ಮನುಷ್ಯನನ ದುರಾಸೆ, ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ ಇವೆಲ್ಲ ಅವರ ಮೇಲೆ ಗಾಢವಾದ ಪರಿಣಾಮ ಬೀರಿವೆ. ಇದರಿಂದಾಗಿಯೇ ಪರಿಸರ ಕವನಗಳಲ್ಲಿ ಸಹಜವಾಗಿ ತುಂಬಾ ಅರ್ಥಗಳನ್ನು ಧ್ವನಿಸಿದ್ದಾರೆ. ಎಲ್ಲಾ ಆಯಾಮಗಳನ್ನು ಒಳಗೊಳ್ಳಲು ಪ್ರಯತ್ನಿಸಿದ್ದಾರೆ. ಲಯ ಮತ್ತು ಶಬ್ದಗಳ ಸೂಕ್ಷ್ಮ ಕುಸುರಿಯನ್ನು ಚೆನ್ನಾಗಿ ಬಳಸಿಕೊಂಡಿರುವುದನ್ನು ಅವರ ಕವನಗಳಲ್ಲಿ  ಕಾಣಬಹುದು.
‘ನಿಸರ್ಗ’ಎನ್ನುವ ಕವಿತೆಯಲ್ಲಿ ಬೆಳಗಾಗುವುದರಿಂದ ಹಿಡಿದು ಮೊಗ್ಗುಗಳು ಅರಳುವುದು, ಹಕ್ಕಿ- ಪಕ್ಷಿಗಳ ಕಲರವ, ಮುಂಜಾನೆಯ ಇಬ್ಬನಿ, ಸೂರ್ಯನ ರಶ್ಮಿಯನ್ನು ವರ್ಣಿಸುತ್ತಾರೆ, ಸೂರ್ಯನ ಆಗಮನದಿಂದ ಹಿಡಿದು ಸೂರ್ಯಾಸ್ತದವರೆಗೆ ನಡೆಯುವ ಕಾರ್ಯಗಳು ಇದರಲ್ಲಿವೆ. ಮುಂಜಾನೆಯ ವರ್ಣನೆ ನಂತರ ಸೂರ್ಯ ಮುಳುಗುವುದು ಅಂದರೆ ಇಡೀ ದಿನದ ಒಂದು ಪ್ರಕ್ರಿಯೆ. ಇಲ್ಲಿ ಪ್ರಕೃತಿಯ ರಮಣೀಯೆತೆ ಇದೆ.  ಕಡಲು ಅಬ್ಬರಿಸುವುದು ಇದೆ. ದಿನದ ಕೊನೆ ಹೇಗೆ ಅಂತ್ಯವಾಗುತ್ತದೆಯೋ ಮಾನವನ ಬದುಕು ಕೂಡ ಹೀಗೆ ಸಾಗುತ್ತದೆ ಎನ್ನುವುದನ್ನು  ಚಿತ್ರಿಸಿದ್ದಾರೆ. ಸರಳ ಕವನವಾದರೂ ಅರ್ಥಗರ್ಭಿತವಾಗಿದೆ. ‘ಬಂಧ’ ಇನ್ನೊಂದು ಪ್ರಕೃತಿ ಕವನ. ಬಂಧವಿಕಲ್ದೆ ಪ್ರಕೃತಿಯಲ್ಲಿ ಯಾವುದು ಇಲ್ಲ ಎನ್ನುವುದನ್ನು ವಿವರಿಸುತ್ತಾ  ಬೀಜ ಮೊಳಕೆಯಾಗಲು ಮಣ್ಣು, ನೀರು, ಗಾಳಿಯ ಬಂಧ ಬೇಕು. ಭುವಿಗೆ ಮಳೆ ಸುರಿಯಲು ಕಡಲು ಕಾದು, ಮುಗಿಲ ಉದರವನ್ನು ತುಂಬಬೇಕು.  ಪೈರು ಬರಲು ಮಳೆ ಸುರಿಯಬೇಕು,  ಗಿಡ-ಮರ ಬೆಳೆಯಲು, ಹಸಿರು ಉದಿಸಲು ಗಾಳಿ ಬೇಕು, ಸೂರ್ಯ- ಚಂದ್ರರ ನೆರವು ಬೇಕು ಎನ್ನುತ್ತಾ  ಮಿನುಗಬೇಕು ತಾರೆ/ ತಿರುಗಬೇಕು ಗ್ರಹಗಳು/ ಇಳೆಯ ಪ್ರಾಣ ಉಳಿಯಲು/ ಬಂಧವಿದ್ದರೇನೇ ಸೃಷ್ಟಿ/ ಬೆಸುಗೆಯಿದ್ದರೇನೆ ವಸುಧೆ ಎಂದು ಕಟ್ಟಿಕೊಟ್ಟಿದ್ದಾರೆ.  
ಪರಿಸರ ನಾಶವಾಗುತ್ತಿರುವ ಬಗ್ಗೆ ‘ಅಂದು-ಇಂದು’ ಮೂಲಕ  ಹೀಗೆ ವಿವರಿಸುತ್ತಾರೆ-  ಅಂದು/ ಸಾಲುಮರಗಳು ಸಾರುತ್ತಿದ್ದವು/ ಪರಿಸರದುಳಿವಿನ ಕ್ರಾಂತಿ/ ಇಂದು/ ಧರೆಗುರುಳಿದ ಮರಗಳು ಸಾರುತ್ತಿವೆ/ ಪರಿಸರದಳಿವಿನ ಕ್ರಾಂತಿ/. ಇಂತಹ ಸರಳ, ಬಲಿಷ್ಠ ಶಬ್ದಗಳಲ್ಲೇ ಅತ್ಯಂತ ಸಶಕ್ತವಾಗಿ ಪರಿಸರ ನಾಶದ ಬಗ್ಗೆ ಗಮನ ಸೆಳೆಯುತ್ತಾರೆ.
‘ಮುಂಗಾರು ಮಳೆ’ ಕವನದಲ್ಲಿ ಸಸ್ಯರಾಶಿಗೆ ಮೆತ್ತಿದ ಧೂಳೆಲ್ಲ ತೊಯ್ದು  ಮಳೆಯಿಂದಾಗಿ ಹಚ್ಚಹಸಿರಿನಿಂದ ಕಂಗೊಳಿಸುವುದು, ಮುತ್ತಿನ ಎರಕದಲ್ಲಿ ಮೇಘ ಸುರಿಸಿದ ಮುತ್ತಿನ ಮಳೆಹನಿಯೂ ಹಸಿರಾಗಿ ಇಳಿಯ ಕಳೆಯನ್ನು ಹೆಚ್ಚಿಸಿರುವುದು, ಶ್ರಾವಣದ ಋತುಮಾನದಲ್ಲಿ ನಗುವ ಜಲರಾಶಿ, ಕಂಗೊಳಿಸುವ ಸಸ್ಯ ಕಾಶಿ, ನಳನಳಿಸುತ್ತಿರುವ ಪ್ರಕೃತಿ, ಹಚ್ಚನೆಯ ಹೂಬನ, ಗರಿಕೆಗಳ ಚಿನ್ನಾಟವನ್ನು ಮನದುಂಬಿ ವರ್ಣಿಸಿದ್ದಾರೆ.
‘ಚಿಣ್ಣರು’ ಕವನ ಈ ಸಂಕಲನಲ್ಲಿ ತುಂಬಾ ಆಪ್ತವಾಗುತ್ತದೆ. ಮಕ್ಕಳನ್ನು ನಲಿವ ನೀಡುವ ಒರತೆಗಳು, ಕತ್ತಲ ಬಾಳಿಗೆ ಬೆಳಕುಗಳು, ಭವಿಷ್ಯದ ಬದುಕಿನ ಕಂಬಗಳು, ನೋವನು ಮರೆಸುವ ಬುಗ್ಗೆಗಳು, ಬಾಳಿನ ಊರುಗೋಲುಗಳು, ನಾಡಿನ ಹೆಮ್ಮೆಯ ಕುಸುಮಗಳೆಂದು ವರ್ಣಿಸುತ್ತಾ ಅವರ ಬಾಳಿಗೆ ದೊಡ್ಡವರು ನೆರಳಾಗಿ, ಸತ್ಯದ ಪಥವನು ತೋರಿಸಬೇಕೆನ್ನುತ್ತಾರೆ. ‘ಚಿಣ್ಣರು ಬದುಕಿನ  ಹೆಜ್ಜೆಗಳು/ ಹಿರಿಯರ ಕನಸಿನ ಮೊಗ್ಗುಗಳು’ ಎಂದು ವರ್ಣಿಸುತ್ತಾರೆ.  
 ವ್ಯಕ್ತಿ ಚಿತ್ರಣದ ಕವನಗಳಲ್ಲಿ ‘ಅವತರಿಸುವ ನಿತ್ಯೋತ್ಸವದ ಭಾವಗಾನದಲ್ಲಿ ತೇಲಿ’ ಎನ್ನುತ್ತಾ ಕವಿ ನಿಸಾರ್ ಅಹಮದ್ ಅವರನ್ನು, ‘ಹಾಡಿನಲ್ಲಿ ಮಾಂತ್ರಿಕ ಉಸಿರಲ್ಲಿ ಗಾನ ವೈಭವ ತಿಳಿಸಿದ’ ಎಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು, ‘ಮೇರು ಕೃತಿಗಳ ಮೂಲಕ ಕನ್ನಡ ಡಿಂಡಿಮವ ಬಾರಿಸಿದರು’ ಎಂದು ರಾಷ್ಟ್ರಕವಿ ಕುವೆಂಪು ಅವರನ್ನು, ‘ಜನಮನದಲ್ಲಿ ಭಕ್ತಿ ಭಂಡಾರವಾಗಿ, ಕಾಯಕವೇ ಕೈಲಾಸ ಎಂದ ಬಸವಣ್ಣನನ್ನು, ದುರ್ಗೆಯಾಗಿ, ವೈರಿಗಳ ಚೆಂಡಾಡಿದಳು, ಅರಿಗಳಿಂದ ದುರ್ಗವ ರಕ್ಷಿಸಿದಳೆನ್ನುತ್ತಾ ಒನಕೆ ಓಬವ್ವನನ್ನು,  ಜ್ಞಾನದ ಬೆಳಕನ್ನು ಲೋಕಕ್ಕೆ ಬೀರಿದ, ದುಃಖದ ಮೂಲ ಆಸೆ ಎಂದು ಸಾರಿದ ಬುದ್ಧನನ್ನು ಸ್ಮರಿಸಿದ್ದಾರೆ
‘ಯುಗಾದಿ’ ಕವನದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆ, ‘ನಾಡಹಬ್ಬದ ಐಸಿರಿ’ಯಲ್ಲಿ ದಸರಾ ವರ್ಣನೆ, ‘ಓ ದೀನ ಬಂಧು’ವಿನಲ್ಲಿ ಸರ್ವಧರ್ಮ ಪ್ರಾರ್ಥನೆ,  ‘ಗುರುನಮನ’ದಲ್ಲಿ ಗುರು ಹೇಗಿರಬೇಕು ಎಂದು ಹೇಳುತ್ತಾ ಆತನೊಬ್ಬ ಸಂತ, ಚಿನ್ಮಯಮೂರ್ತಿ, ದಾರ್ಶನಿಕ, ಶಿಲ್ಪಿ ಎಂದು ಕರೆಯುತ್ತಾರೆ. ‘ಅರಮನೆ- ಗುಡಿಮನೆ’ಯಲ್ಲಿ ಬಡವ- ಶ್ರೀಮಂತ ಎಂಬ ತಾರತಮ್ಯ ತೊಲಗಬೇಕೆಂಬ, ‘ಮೌನ’ದಲ್ಲಿ ಕೊರೊನಾ ಬಂದಾಗ ಮೌನಗೊಂಡಿದ್ದ ಜಗತ್ತಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.  ಅಪ್ಪ, ಅಮ್ಮ, ಬೇಲೂರು ಶಿಲಾಬಾಲಿಕೆ,  ಜಾದೂಗಾರ, ಏಕಾಂತದ ಮುಂಜಾನೆ ಕವನಗಳು ಸಹ ನಮ್ಮನ್ನು ಆಕರ್ಷಿಸುವ, ಮಹತ್ತರ ಅರ್ಥವನ್ನು ಸ್ಫುರಿಸುವಂತಹವು.   
 ಈ ಸಂಕಲನದಲ್ಲಿ ಕವಯತ್ರಿ ಸನ್ನಿವೇಶದ ಸ್ಫೂರ್ತಿಯಿಂದ ಕವಿತೆ ರಚಿಸಿದ್ದನ್ನು, ಅವರ ಪ್ರತಿಭೆಯನ್ನು ಮತ್ತು ಪ್ರಯೋಗಶೀಲತೆಯನ್ನು, ಪ್ರಾಸ, ಶಬ್ದಾಲಂಕಾರ, ಛಂದಸ್ಸುಗಳಿಗೆ ಹೆಚ್ಚಿನ ಗಮನಕೊಟ್ಟಿರುವುದನ್ನು ಮೆಚ್ಚಲೇಬೇಕು. ಬದುಕನ್ನು ಗಾಢವಾಗಿ ಪ್ರೀತಿಸುವ, ಸಮಾಜದ ವ್ಯವಸ್ಥೆ, ಮನುಷ್ಯ ಸಂಬಂಧಗಳ  ನಿರಂತರತೆ, ವರ್ಗ ವೈಷಮ್ಯಗಳ ಪ್ರತಿರೋಧ...ಇತ್ಯಾದಿ ಮಾನವೀಯ ಮೌಲ್ಯ ಕುರಿತು ಕವಯತ್ರಿ ಚಿಂತನಶೀಲರಾಗಿರುವುದು ಕಂಡುಬರುತ್ತದೆ.  
.......................
 
 

Comments

Popular posts from this blog