ಸಂಬಂಧದ ತಂತು ಜ್ಞಾಪಿಸುವ
‘ಬುವಿಯ ಬಂಧ’
‘ಬುವಿಯ ಬಂಧ’ ಶೀರ್ಷಿಕೆಯೇ ಧ್ವನಿಸುವಂತೆ ಈ ಕವನ ಸಂಕಲನದ ಹೆಚ್ಚಿನ ಕವಿತೆಗಳು ಪ್ರಕೃತಿ-ಮನುಷ್ಯರ ನಡುವಿನ ವೈವಿಧ್ಯಪೂರ್ಣವಾದ ಭಾವ ಸಂಬಂಧವನ್ನು ಹೊಂದಿರುವಂತದ್ದು. ಉಪನ್ಯಾಸಕಿ ಶುಭಲಕ್ಷ್ಮಿ ನಾಯಕ ಇದರ ಕರ್ತೃ. ೪೭ ಕವಿತೆಗಳ ಈ ಗುಚ್ಛದಲ್ಲಿ, ಸಂಬಂಧದ ತಂತು ಹರಿದರೆ ವಿನಾಶ ಖಂಡಿತ ಎನ್ನುವ ಸಂದೇಶವಿದೆ.
ಕವನ ಸಂಕಲನದ ಎಲ್ಲಾ ಕವಿತೆಗಳಲ್ಲಿಯೂ ಭಾವ ಬಂಧನದ ಕಾರಣಗಳ ಶೋಧನೆ ಇದೆ. ಇಲ್ಲಿನ ಕವಿತೆಗಳು ಧ್ವನಿಗೂಡುತ್ತವೆ. ಪ್ರಕೃತಿ ಸಂರಕ್ಷಿಸುವ ಬಗ್ಗೆ ಇದೆ. ಪ್ರಕೃತಿಗೆ ಮಾತ್ರ ಈ ಕವನ ಸಂಕಲನ ಮೀಸಲಾಗಿಲ್ಲ, ಪ್ರಕೃತಿ ಪ್ರೀತಿಯಲ್ಲಿ ಬದುಕಿಗೆ ಗಾಳಿ ಬೆಳಕಿನಷ್ಟೇ ಅನ್ನ, ಆಹಾರ, ಅಕ್ಷರ ಕಲಿಕೆ ಮುಖ್ಯ ಸಂಗತಿಗಳಾಗಿವೆ. ನಾಡಿನ ಬದುಕು, ಸಂಸ್ಕೃತಿಯನ್ನು ಕಟ್ಟಿಕೊಡುವ ತಾಯ್ನುಡಿ ಮತ್ತು ತಾಯ್ನೆಲದ ಅಭಿಮಾನದ ಕುರಿತಾಗಿಯೂ ಇದರಲ್ಲಿ ಸಾಕಷ್ಟು ಕವನಗಳಿವೆ. ಜಾನಪದ ಸಮೃದ್ಧಿಯ ಕವಿತೆ ಕೂಡ ಇದೆ.
ಒಟ್ಟು ಕವಿತೆಗಳಲ್ಲಿ ಸಂಕೀರ್ಣವಾದ ವಿಷಯವೈವಿಧ್ಯವಿದೆ. ತನ್ನ ಸುತ್ತಲ ಬದುಕಿನಲ್ಲಿ ಹಿತವಾದುದೆಲ್ಲವನ್ನು ಮೆಚ್ಚಿಕೊಂಡಾಡಿದ್ದಾರೆ. ಸಿಟು, ಶಾಂತಿ, ಪ್ರಕೃತಿಯ ಮುನಿಸು, ನೋವು- ನಲಿವು, ಸಿರಿತನ- ಬಡತನ, ಸಾಂಕ್ರಾಮಿಕ ಕಾಯಿಲೆ ಎಲ್ಲದರ ಕುರಿತಾಗಿಯೂ ಅವರು ಮಾತನಾಡಿದ್ದಾರೆ.
ಕೃತಿಯ ಹೆಸರಿನ ಕವನ ‘ಬುವಿಯ ಬಂಧ’ ಇದರಲ್ಲಿ ಸೂರ್ಯ ಚಂದ್ರರ ಬೆಳಕು ಬುವಿಯ ಭಾಗ್ಯವನ್ನು ಬೆಳಗಿದೆ. ಯಾರೂ ಇದಕ್ಕೆ ತೆರಿಗೆ ಸಂದಾಯ ಮಾಡುವ ಅವಶ್ಯಕತೆ ಇಲ್ಲದ, ಋಣ ಬಾಧೆ, ಕೊಂಡುಕೊಳ್ಳುವಿಕೆ ಇಲ್ಲದಿರುವ ಬಗ್ಗೆ ಚಿತ್ರಿಸಿದ್ದಾರೆ. ಇದಕ್ಕೆ ಕಾರಣ ಕೊಂಡುಕೊಳ್ಳುವಿಕೆಯ ಹಿಂದಿರುವುದು ಬುವಿ-ಭಾನುವಿನ ಒಲವಿನ ಬಂಧ ಮಾತ್ರ. ಭೂಮಿಯ ಸಿಂಗಾರಕ್ಕೆ ಸೊಗಸಾಗಿ ಹಸಿರಾಗಿ ವನಸಿರಿಯು ಹರಡಿದೆ. ಈ ಮೂಲಕ ಜಗತ್ತಿಗೆ ಸಹಜ ಸಿರಿಯನ್ನು ವಿತರಿಸುತ್ತಿದೆ ಎಂದು ಹೇಳುತ್ತಾರೆ
‘ಬೊಗಸೆಯೊಳಗಣ ಭೂಮಿ’ ಎಂಬ ಕವನದಲ್ಲಿ ಪ್ರಕೃತಿಯನ್ನು ನಾವು ಹೇಗೆ ರಕ್ಷಿಸಬೇಕು, ಇಲ್ಲದಿದ್ದರೆ ಅದು ವಿಧಿಸುವ ಶಿಕ್ಷೆ ಏನು? ಮನುಷ್ಯನ ಬದುಕು ಏನಾಗುತ್ತದೆ ಎಂದು ಕೇಳುವ ಕವಯತ್ರಿ, ಮೀಯಬೇಡವೋ ಮದದಿ ಮಾನವ/ ಸಾಯುತಿರುವವು ಬನದ ನಾಶದಿ ಜೀವ ಜಂತುಗಳು/ ನೋಯಬೇಡವೋ ತಪ್ಪನೆಸಗಿದ ಮೇಲೆ ಮರುಕದಲಿ/ಎಂದು ಹೇಳುತ್ತಾರೆ. ‘ನಾಡು ಕನ್ನಡ’ಎಂಬ ಕವನದಲ್ಲಿ ತಾಯಿ ನೆಲದ ಬಗ್ಗೆ ಈ ರೀತಿ ಹೇಳುತ್ತಾರೆ. ಕನ್ನಡ ಭಾಷೆಯು ಬನದ ಹೂವಿನ ಮೆರುಗಷ್ಟೇ ಚಂದವಾದದು. ಅದು ಜನಕ್ಕೆ ಪರಿಮಳವನ್ನು ಕೊಡುತ್ತಾ ಕನಕದಂತೆ ಹೊಳೆಯುತ್ತಿದೆ. ಮನಕ್ಕೆ ಮಧುರ ಭಾವವನ್ನು ತುಂಬುತ್ತಿದೆ. ನಾಡ ಸಿರಿಯನ್ನು ತೊರೆದು ಮನುಷ್ಯ ಹೋಗಬಾರದು ಎನ್ನುತ್ತಾ, ‘ನುಡಿಯನಾಡಲು ಲಜ್ಜೆ ಬೇಡವೋ/ ಪಡೆದ ತಾಯಿಯ ಮರೆಯಬೇಡವೋ/ ಮಾತ್ರ ಭಾಷೆಯ ನಾಡು ನೀ ಕಂದ/ ಎಂದು ಆಡುತ್ತಾರೆ.
‘ಅರಿತು ಸಾಗು’ ಎನ್ನುವ ಕವನ ಮನುಷ್ಯ ತನ್ನ ಬದುಕಿನಲ್ಲಿ ಎಷ್ಟೇ ಕಷ್ಟವಿದ್ದರೂ ಮಳೆಯ ನೀರು ಹರಿಯುವ ತೆರದಿ ಸಾಗಬೇಕು, ಅದನ್ನು ದಾಟಬೇಕು ಎನ್ನುವುದನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ. ಬದುಕು ಎಂದರೆ ಬರಿಯ ಗೋಳು ಮಾತ್ರವಲ್ಲ, ಅದರಲ್ಲಿ ಹರುಷವಿದೆ, ಶಾಂತಿ ಇದೆ. ಆದರೆ ಆ ದಾರಿಯನ್ನು ಹುಡುಕಿಕೊಂಡು ನಾವು ಸಾಗುತ್ತಿದ್ದರೆ ಬದುಕಿನ ತಿರುವು ಬದಲಾಗುತ್ತದೆ. ಅದಕ್ಕೂ ಒಂದು ಹೊಸ ಶಕ್ತಿ ದೊರೆಯುತ್ತದೆ. ಬಾಳ ಪಯಣವನ್ನು ಸುಲಭವಾಗಿಸಿಕೊಳ್ಳಬೇಕು. ಕಷ್ಟ ಬಂದಿತು ಎಂದು ಸೊರಗಿ ಮರುಗಿ ಕುಳಿತುಕೊಳ್ಳದೆ ವಿಜಯ ಸಾಧಿಸಬೇಕು ಎನ್ನುತ್ತಾರೆ.
‘ರೈತ’ ಎಂಬ ಕವನದಲ್ಲಿ, ನಗುತ ಬಡಿಸುವ ಹಿಟ್ಟ ಜನರಿಗೆ/ ಜಗದ ಸಂತಸ ನೋಡಿ ಸುಖಿಸುವ, ಹಗೆಯ ಬಿಟ್ಟು ಪ್ರೇಮದಿಂದಲಿ ರೈತ ಬಾಳುವನು/ ಎಂದು ಹಾಡುತ್ತಾರೆ. ಎಷ್ಟೇ ಕಷ್ಟ ಬರಲಿ, ಮಳೆ- ಚಳಿ ಇರಲಿ, ಎಲ್ಲವನ್ನು ಸಹಿಸಿಕೊಂಡು ಜನರಿಗೆ ದವಸ ಧಾನ್ಯವನ್ನು ನೀಡುತ್ತಾ, ನಗುತ್ತಾ, ಕಷ್ಟಗಳನ್ನು ಮರೆಯುತ್ತಾನೆ. ಹಗಲು -ರಾತ್ರಿ ಎನ್ನದೆ ಶ್ರದ್ಧೆಯಲ್ಲಿ ದುಡಿಯುವವನೇ ರೈತ ಎಂದು ಹೇಳುತ್ತಾರೆ. ‘ಬುದ್ಧನಾಗಲು’ ಎನ್ನುವುದು ಈ ಸಂಕಲನ ಒಂದು ವಿಶಿಷ್ಟ ಕವಿತೆ. ಇದರಲ್ಲಿ ಮನುಷ್ಯನಾದವನು ಭೋಗವನ್ನು ತೊರೆಯಬೇಕು. ವೈರತ್ವ, ರಾಗ ಬಿಡಬೇಕು. ಆದರೆ ಇವೆಲ್ಲವೂ ಕಷ್ಟವಾದ ಕೆಲಸಗಳು. ಇಂದಿನ ಮನುಷ್ಯನು ಭೋಗ -ಭಾಗ್ಯವನ್ನು ಬಿಡುತ್ತಿಲ್ಲ. ಯೋಗಿಯಂತೆ ಕುಳಿತು ತಪಸ್ಸು ಮಾಡುತ್ತಿಲ್ಲ. ಸತ್ಯವನ್ನು ತಿಳಿಸುವ ಕೆಲಸವನ್ನು ಮಾಡುತ್ತಿಲ್ಲ. ಆದುದರಿಂದ ಬುದ್ಧ ಹೇಳಿದಂತೆ ಆಸೆಯೇ ದುಃಖಕ್ಕೆ ಕಾರಣವಾಗುತ್ತಿದೆ. ಹಣ ಮತ್ತು ಮೋಹದ ಹಿಂದೆ ನಾವು ಬಿದ್ದಿದ್ದೇವೆ. ಇದನ್ನೆಲ್ಲ ಬಿಟ್ಟು ಸುಖಕ್ಕಾಗಿ ಹಂಬಲಿಸದೆ ಸಾಗಬೇಕು. ಬುದ್ಧ ಹೇಳಿದಂತೆ ನಾವು ನಡೆಯಬೇಕು ಎಂದು ಸೂಚಿಸುತ್ತಾರೆ.
‘ಸಹನೆ ಕಳಚಿದೆ’ ಎನ್ನುವುದು ವರ್ತಮಾನಕ್ಕೆ ಕನ್ನಡಿ ಹಿಡಿದಿದೆ. ಕೋಮಿನ ಉರಿಯಲ್ಲೇ ಜನಮನ ಬೇಯುತ್ತಿದೆ. ಜನರಿಗೆ ಯಾವ ನೇಮ- ನಿಷ್ಠೆಯೂ ಬೇಡವಾಗಿದೆ. ದುಷ್ಟ ಕಾರ್ಯಕ್ಕೆ ಕೈ ಹಾಕುತ್ತಿದ್ದೇವೆ. ಬಿಸಿ ನೆತ್ತರಿನಲ್ಲಿ, ಮೋಹದಲ್ಲಿ ಬಿದ್ದಿದ್ದೇವೆ ಎನ್ನುವ ಕವಯಿತ್ರಿ, ಬದುಕು ಸಮತೆಯನ್ನು ತುಂಬುತ್ತಾ ಸಾಗಬೇಕು. ಮಮತೆ ಬೆಳೆಸಿಕೊಳ್ಳಬೇಕು. ಜಾತಿ ಹೆಸರಲ್ಲಿ ಬದುಕನ್ನು ಬೇಯಿಸಿಕೊಳ್ಳದೆ, ಪ್ರೇಮ ಭಾವದಲ್ಲಿ ಬಾಳನ್ನು ನಡೆಸಬೇಕು. ಕಾಮ, ವೈರವನ್ನು ನೆತ್ತಿಗೇರಿಸಿಕೊಳ್ಳಬಾರದು. ಕೆಟ್ಟ ಬುದ್ಧಿಯನ್ನು ಬಿಡಬೇಕು ಎಂದು ತಿಳಿಹೇಳುತ್ತಾರೆ.
ಕೃತಿಯ ವಿಶೇಷತೆ ಎಂದರೆ ಮುಕ್ತ ಛಂದದ ಮೂಲಕ ಕವನ ಸಂಕಲನ ರಚಿಸಿದ್ದಾರೆ. ಈ ಸುಲಭ ಬಳಕೆಯ ಕಾವ್ಯ ಪದ್ಧತಿ ಎಲ್ಲರಿಗೂ ಪ್ರಿಯವಾಗುತ್ತದೆ. ಪ್ರಕೃತಿ ಮತ್ತು ಸಾಮಾಜಿಕ ಆಗುಹೋಗುಗಳಿಗೆ ತುಡಿಯುವ ಕವಯತ್ರಿಯ ಮನ ಅಂತಹ ಕವಿತೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿದೆ. ಉದಾಹರಣೆಗೆ- ಹಸಿರ ಬೆಳೆಸೋಣ, ಕಾಡ ಬೆಳೆಸಿ, ಭುವಿಯ ಸೊಬಗು, ವರ್ಷಧಾರೆ, ಸುಮನ ಕಾಯಕ ಮೊದಲಾದವು. ಇಲ್ಲಿ ಅನ್ನ ಕೊಡುವ ರೈತ, ದೇಶ ಕಾಯುವ ಯೋಧ, ಸುಂದರ ಕಲೆಯ ರೂವಾರಿಗಳಾದ ಕುಶಲಕರ್ಮಿಗಳು ಇದ್ದಾರೆ. ಅದೇ ರೀತಿ ನಾಡು- ನುಡಿಯ ಬಗ್ಗೆ ಹಲವು ಕವನಗಳು ಇಲ್ಲಿವೆ. ಒಟ್ಟಾರೆ, ತಮ್ಮ ಜೀವನದಲ್ಲಿ ಮುಖಾಮುಖಿಯಾದ ಹಲವು ಅನುಭವಗಳನ್ನು ಇಲ್ಲಿ ಕವನವಾಗಿಸಿದ್ದಾರೆ.
.....................

Comments
Post a Comment