ವೈಚಾರಿಕತೆಯ ಮಾಲ್ 

‘ವಿಚಾರ ಮಂಜರಿ’ 



‘ವಿಚಾರ ಮಂಜರಿ’ ಈ ಕೃತಿಯು ಹೆಸರೇ ಹೇಳುವಂತೆ ವ್ಯಕ್ತಿ, ವಿಚಾರ ಮತ್ತು ಸಂಸ್ಕೃತಿಗಳ ಕುರಿತಾದ ಲೇಖನಗಳ ಸಂಕಲನವಾಗಿದೆ. ನಂಜನಗೂಡಿನ ಬರಹಗಾರ್ತಿ ವರಲಕ್ಷ್ಮಿ ಮಂಜುನಾಥ ಇದರ ಲೇಖಕರು. ಈ ಗ್ರಂಥದಲ್ಲಿ  ಬೋಧ-ಪ್ರಚೋದಕ ವಿಚಾರಗಳಿಂದ ಕೂಡಿದ ಪುಣ್ಯ ಪುರುಷರನ್ನು, ದಾಶನಿಕರನ್ನು, ಆಧುನಿಕ ವ್ಯಕ್ತಿಗಳನ್ನು ಪರಿಚಯಿಸುವ ೭೪ ಲೇಖನಗಳಿವೆ. ಜೊತೆಗೆ ಕೆಲವೊಂದು ಹಬ್ಬ ಆಚರಣೆಗಳ ಮಹತ್ವ, ಸಾಹಿತ್ಯ ಕೃತಿಗಳ ಬಗ್ಗೆಯೂ ಚರ್ಚಿಸಿದ್ದಾರೆ.

 ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಲೇಖನಗಳ ಗುಚ್ಚ ಇದರಲ್ಲಿದೆ. ಶ್ರೀರಾಮ, ಸೀತಾಮಾತೆ, ಶ್ರೀಕೃಷ್ಣ, ವಾಲ್ಮೀಕಿ, ಶಂಕರಾಚಾರ್ಯರು, ಬುದ್ಧ, ಮಹಾವೀರ, ಕಬೀರದಾಸ್, ರಾಮಕೃಷ್ಣ ಪರಮಹಂಸ, ವಿವೇಕಾನಂದರು, ಬಸವಣ್ಣ, ಮಹಮ್ಮದ್ ಪೈಗಂಬರ್, ರಮಣ ಮಹರ್ಷಿ, ಲಾಲ್ ಬಹದ್ದೂರ್ ಶಾಸ್ತ್ರಿ, ಸಾವಿತ್ರಿಬಾಯಿ ಫುಲೆ, ಮಹಾದೇವಿ ವರ್ಮ, ಅಬ್ದುಲ್ ಕಲಾಂ, ಆರ್ ಕೆ ಲಕ್ಷ್ಮಣ್ ಮುಂತಾದ ವ್ಯಕ್ತಿಗಳ ಕುರಿತು ಸಾಕಷ್ಟು ಮಾಹಿತಿಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

 ಅದೇ ರೀತಿ ಹಬ್ಬಗಳ ಬಗ್ಗೆಯೂ ಮಾಹಿತಿಯನ್ನು ವಿವರವಾಗಿ ದಾಖಲಿಸಿದ್ದಾರೆ. ಹೆಸರೇ ಹೇಳುವಂತೆ ಇದು ವಿಚಾರಗಳ ಗುಚ್ಚವಾಗಿದೆ. ಇದು ಯಾವುದೇ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಪುಸ್ತಕವಲ್ಲ. ಹಲವಾರು ವಿಚಾರಗಳ ಗೊಂಚಲಿದೆ. ಇದು ಒಂದು ರೀತಿಯಲ್ಲಿ ವೈಚಾರಿಕತೆಯ ಮಾಲ್ ಎಂದು ಪುಸ್ತಕಕ್ಕೆ ಶುಭ ಹಾರೈಸಿದ ಪ್ರೊ. ರಂಗನಾಥ್ ಅಭಿಪ್ರಾಯ ಕೊಟ್ಟಿದ್ದಾರೆ.  ಕೇವಲ ಪುರಾಣ ಪಾತ್ರಗಳಿಗೆ, ಕಥೆಗಳಿಗೆ, ವ್ಯಕ್ತಿ ಚಿತ್ರಣಕ್ಕೆ ಸೀಮಿತವಾಗದೆ ನಮ್ಮ ಬದುಕು,  ಆನಂದಮಯವಾಯವಾದ ಈ ಜಗತ್ತು,  ವಿದ್ಯಾರ್ಥಿ ಜೀವನ,  ಶಿಕ್ಷಕ, ಕನ್ನಡ ನಾಡು-ನುಡಿ, ಯುವ ಜನತೆ, ಹಾಲಿ ಬಳಕೆಯಾಗುತ್ತಿರುವ ತಂತ್ರಜ್ಞಾನ, ಆಧುನಿಕ ಉಪಕರಣ, ಅದರಿಂದಾಗುವ ಪ್ರಯೋಜನ, ಮತ್ತು ಅಡ್ಡ ಪರಿಣಾಮಗಳ ಬಗ್ಗೆಯೂ ವೈಜ್ಞಾನಿಕವಾಗಿ ಕೆಲವೊಂದು ಲೇಖನಗಳನ್ನು ಬರೆದಿದ್ದಾರೆ ಮಹಿಳೆಯರ ಮೇಲೆ ನಡೆಯುತ್ತಿರುವುದು ಅದಕ್ಕೆ ಕಾರಣಗಳು ಕಾನೂನು ಕ್ರಮಗಳು ಬಗ್ಗೆಯೂ ಬರಹವಿ. ಒಟ್ಟಿನಲ್ಲಿ, ಅನನ್ಯತೆಯನ್ನು ಬಿಂಬಿಸುವ ಕೃತಿ ಇದಾಗಿದೆ. ಇಲ್ಲಿನ ಬರಹಗಳು ನೇರವಾಗಿ ನಮ್ಮನ್ನು ಮುಟ್ಟುತ್ತವೆ. ಘನವಾದ ಚಿಂತನ ದ್ರವ್ಯವುಳ್ಳ ಬರಹ ಇದಾಗಿದ್ದು ನಮ್ಮ ಸಂಸ್ಕೃತಿಯ ಉದ್ದೀಪನೆಗೆ ಇದು ಅವಕಾಶ ಮಾಡಿಕೊಡಲಿದೆ 

ಇಲ್ಲಿನ ಕೆಲವು ವೈಚಾರಿಕ ಲೇಖನಗಳನ್ನು ಗಮನಿಸುವುದಾದರೆ, ‘ನಮ್ಮ ಬದುಕೇ ಒಂದು ಸಂಭ್ರಮವಾಗಿ ಬಿಡಲಿ’ ಎಂಬ ಬರಹದಲ್ಲಿ ಜೀವನದಲ್ಲಿ ಯಶಸ್ಸನ್ನು ಹೇಗೆ ಪಡೆಯಬಹುದು, ಹೇಗೆ ಉಳಿಸಿಕೊಳ್ಳಬೇಕೆನ್ನುವುದನ್ನು ಚರ್ಚಿಸಿದ್ದಾರೆ. ಯಶಸ್ಸಿಗೆ ಅವಶ್ಯವಾದ ಆತ್ಮವಿಶ್ವಾಸ, ಕಠಿಣ ಪರಿಶ್ರಮ, ಸಕಾರಾತ್ಮಕ ಮನೋಭಾವ, ಸಾಧಿಸುವ ಛಲ, ಭರವಸೆ, ನವೀನ ಆಲೋಚನೆಗಳು, ಉದಾತ್ತ ವ್ಯಕ್ತಿತ್ವ, ಮೌಲ್ಯಯುತ  ಮತ್ತು ನೀತಿಯುತ ಜೀವನ ಇವು ಅವಶ್ಯ. ಇದರಿಂದ ನಮ್ಮ ಬಾಳಿಗೆ ನಾವೇ ಶಿಲ್ಪಿಗಳಾಗುತ್ತೇವೆ ಎಂದು ಬರೆಯುತ್ತಾರೆ.

 ‘ಹೂವಿನಂತ ಮಕ್ಕಳಲ್ಲಿ ಸೃಜನಶೀಲತೆ ಅರಳಿಸೋಣ’ ಎಂಬ ಲೇಖನದಲ್ಲಿ, ಮಕ್ಕಳಲ್ಲಿ ಸೃಜನಶೀಲತೆ ಅರಳಿಸಲು ಅವರಲ್ಲಿ ಕಲ್ಪನಾ ಶಕ್ತಿ ಹಾಗೂ ಅನ್ವೇಷಣಾ ಮನೋಭಾವವನ್ನು ಪಾಲಕರು ಹುಟ್ಟು ಹಾಕಬೇಕು. ಬೌದ್ಧಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪಾಲಕರ ಪಾತ್ರ ಮಹತ್ವದ್ದು, ಅದಕ್ಕಾಗಿ ಪೋಷಕರು ಪ್ರೋತ್ಸಾಹ, ಸೂಕ್ತ ವಾತಾವರಣ, ಸಂದೇಹಕ್ಕೆ ಸರಿಯಾದ ಉತ್ತರ, ಕಲ್ಪನಾ ಶಕ್ತಿಗೆ ಪ್ರೋತ್ಸಾಹ, ಅಗತ್ಯ ಪರಿಕರಗಳನ್ನು ಒದಗಿಸುವುದು, ಮಕ್ಕಳ ಆಸಕ್ತಿ ಗಮನಿಸಿ ಅದನ್ನು ಆಯ್ದುಕೊಳ್ಳಲು ಪ್ರೋತ್ಸಾಹ ಕೊಡುವುದು ಇವೇ ಮೊದಲಾದವುಗಳನ್ನು ಮಾಡಿದರೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿ ಅಧ್ಯಯನಶೀಲತೆ ಮತ್ತು ಅನ್ವೇಷಣಾ ಮನೋಭಾವವನ್ನು ಬೆಳೆಸಬಹುದು ಎನ್ನುತ್ತಾರೆ. 

‘ಸಕಾರಾತ್ಮಕ ಚಿಂತನೆಗಳು’ ಎಂಬ ಅಧ್ಯಾಯದಲ್ಲಿ ಸಕಾರಾತ್ಮಕ ಚಿಂತನೆ ನಮ್ಮ ಹೊಸ ಪ್ರಯತ್ನಗಳಿಗೆ ಇವು ಪ್ರೇರಣೆ ನೀಡುತ್ತದೆ. ಮತ್ತು ಗುರಿ ಮುಟ್ಟಲು  ನಮಗೆ ಸಹಾಯ ಮಡುತ್ತದೆ. ಆನಂದ ಮತ್ತು ತೃಪ್ತಿದಾಯಕ ಜೀವನಕ್ಕೆ ಇದು ಅಡಿಗಲ್ಲು ಎಂದು ಹೇಳುತ್ತಾರೆ. ‘ಶಿಕ್ಷಕನೆಂಬ ಪ್ರೇರಕ ಶಕ್ತಿ’ ಎಂಬ ಬರಹದಲ್ಲಿ ಗುರು ಎಂದರೆ ಒಬ್ಬ ಮಾರ್ಗದರ್ಶಕ. ರಾಮಕೃಷ್ಣ ಪರಮಹಂಸರ ಪ್ರಕಾರ, ನಿಜವಾದ ಜ್ಞಾನದ ಬೆಳಕಿನಿಂದ ಪ್ರಕಾಶಿತನಾದವನೇ ನಿಜವಾದ ಶಿಕ್ಷಕ. ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಅತ್ಯುತ್ತಮ ಗುರುವಿನ ಮಾರ್ಗದರ್ಶನವಿರುತ್ತದೆ. ತನ್ನ ಗುರಿಯಲ್ಲಿ ಸೋತಾಗ ಅವನಲ್ಲಿ ಆತ್ಮವಿಶ್ವಾಸ ತುಂಬಿ ಸಾಧನೆಗೆ ಹುರಿದುಂಬಿಸುವುದು, ರಾಷ್ಟ್ರದ ನಿರ್ಮಾಣಕ್ಕೆ ಕಾರಣವಾಗುವುದು ಅಥವಾ ಅವನ ದೇಶದ ಭವಿಷ್ಯಕ್ಕೆ ಕಾರಣನಾಗುವುದು ಅತ್ಯುತ್ತಮ ಶಿಕ್ಷಕನಿಂದ. ಆದ್ದರಿಂದ ಗುರು ಎಂದರೆ ಕೇವಲ ವ್ಯಕ್ತಿಯಲ್ಲ, ಅದೊಂದು ಶಕ್ತಿ ಎಂದು ಬಣ್ಣಿಸುತ್ತಾರೆ  

‘ಆನಂದಮಯ ಈ ಜಗ ಹೃದಯ’ ಎಂಬ ಬರಹದಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಸೋತು ಮಲೆನಾಡನ್ನು ಕುರಿತು ಹೇರಳವಾಗಿ ಕಾವ್ಯ ಸಾಲುಗಳನ್ನು ಬರೆದ ಕುವೆಂಪು ಕುರಿತಿ ಇದರಲ್ಲಿದೆ. ಪ್ರಕೃತಿ ಸೌಂದರ್ಯ ಮತ್ತು ಪ್ರಕೃತಿ ಕಾಳಜಿ ಕುವೆಂಪು ಅವರ ಬರಹಗಳಲ್ಲಿ ಎದ್ದು ಕಾಣುವುದನ್ನು ಅವರ ಕವನಗಳ ಮೂಲಕ ಇಲ್ಲಿ ತೋರಿಸಿಕೊಟ್ಟಿದ್ದಾರೆ. ಗಾಳಿ ಬೆಳಕು ಅರಣ್ಯ/ ಆಕಾಶ ಸೂರ್ಯ ಚಂದ್ರ ಹಕ್ಕಿ/ ಚುಕ್ಕೆ ಮೊದಲಾದವುಗಳ/ಸಂಗ ಸಹವಾಸವಿಲ್ಲದವನ/ ಓದಿನ ಮೊಟ್ಟೆಯಿಂದ ಗೂಬೆ/ ಮೂಡಬಹುದು, ಕೋಗಿಲೆ/ಎಂದೂ ಹಾಡಲಾರದು/ ಎಂದು ಬರೆದಿರುವುದನ್ನು ಎತ್ತಿತೋರಿಸಿದ್ದಾರೆ. ಅದೇ ರೀತಿ ಮಲೆನಾಡು ಅಂದರೆ ಕರ್ನಾಟಕದ ಕಾಶ್ಮೀರ, ಪ್ರಕೃತಿಯ ವರ್ಣಶಾಲೆ, ಅರಣ್ಯ ರಮಣೀಯ ವಿಲಾಸ ಕ್ಷೇತ್ರ ಎನ್ನುವ ವರ್ಣನೆಯನ್ನು ಇಲ್ಲಿ ವಿವರಿಸಿದ್ದಾರೆ. 

‘ಬುದ್ಧನ ಹಿತನುಡಿಗಳು’ ಎಂಬ ಬರಹದಲ್ಲಿ, ಉತ್ತಮ ಹಾಗೂ ಆನಂದಮಯ ಜೀವನಕ್ಕಾಗಿ ಬುದ್ಧನ ಚಿಂತನೆಗಳು ನಮಗೆ ದಾರಿದೀಪ ಎನ್ನುವುದನ್ನು ಹೇಳುವ ಲೇಖಕಿ, ಬುದ್ಧ ನೀಡಿದ ಕೆಲವು ಉಪದೇಶಗಳನ್ನು ವಿವರಿಸಿದ್ದಾರೆ. ಪ್ರಸ್ತುತದಲ್ಲಿದ್ದು ಅದರ ಸಂತಸ ಅನುಭವಿಸಿ. ನಮ್ಮ ರಕ್ಷಣೆ ನಮ್ಮ ಜವಾಬ್ದರಿ. ಸತ್ಯವನ್ನು ಎಂದಿಗೂ ಮುಚ್ಚಿಡಲಾಗದು. ಏನನ್ನು ಚಿಂತಿಸುವಿರೋ ಅದೇ ಆಗುವಿರಿ. ಕ್ರೋಧ ಬೆಂಕಿ ಇದ್ದಂತೆ, ಅದು ಮೊದಲು ನಮ್ಮನ್ನೇ ಸುಡುತ್ತದೆ. ನಾವು ಇನ್ನೊಬ್ಬರ ದಾರಿಗೆ ದೀಪ ಹಚ್ಚಿದರೆ ಅದು ನಮ್ಮ ಬಾಳನ್ನು ಬೆಳಗುತ್ತದೆ ಎಂಬ ಮುಂತಾದ ವಿಚಾರಗಳನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಬುದ್ಧ್ದನ ಉಪದೇಶಗಳು ಜಗದ ಬೆಳಕನ್ನು ಪ್ರಭಾವಿಸುತ್ತಿವೆ ಎಂದು ವರ್ಣಿಸುತ್ತಾರೆ. ‘ಧರ್ಮ: ಒಂದು ಚಿಂತನೆ’ ಎಂಬ ಬರೆಹದಲ್ಲಿ  ಜಗತ್ತಿನ ಸ್ಥಿತಿ ಮತ್ತು ವ್ಯವಸ್ಥೆ ಉತ್ತಮವಾಗಿರುವಿಕೆ ಪ್ರತಿಯೊಂದು ಜೀವಿಯ ಅಭಿವೃದ್ಧಿ ಹಾಗೂ ಮೋಕ್ಷ ಪ್ರಾಪ್ತಿ ಈ ಮೂರು ಧ್ಯೇಯವನ್ನು ಒಳಗೊಂಡಿರುವುದೇ ಧರ್ಮ ಎಂದಿರುವುದನ್ನು ಪ್ರಸ್ತಾಪಿಸುತ್ತಾ, ಧರ್ಮವು ಮಾನವನ ಪ್ರಯಾಣಕ್ಕೆ ಅಗತ್ಯ. ಜಗತ್ತಿನ ಆಧಾರಕ್ಕಾಗಿ ಅದನ್ನು ಪಾಲಿಸುವುದು ಅವಶ್ಯ ಎನ್ನುತ್ತಾರೆ. ಸಮಾಜಕ್ಕೆ ಧರ್ಮ ಮಾರಕವಾಗಬಾರದು. ಅದು ನಮಗೆ ಪ್ರೇರಕವಾಗಬೇಕು. ಮತೀಯ ವಿಚಾರದಲ್ಲಿ ವಿವೇಕವಂತರಾಗಿ ವರ್ತಿಸಬೇಕಿದೆ. ಭಾರತೀಯ ಧರ್ಮ, ಸಂಸ್ಕೃತಿಗಳು ವಿಶ್ವಕ್ಕೆ ಧಾರ್ಮಿಕ ಸಹಿಷ್ಣುತೆಗೆ ಮಾದರಿಯಾಗಿವೆ ಎನ್ನುವುದನ್ನು ಇಲ್ಲಿ ಎತ್ತಿ ತೋರಿಸುತ್ತಾರೆ.

  ಕೆಲವು ವ್ಯಕ್ತಿ ಚಿತ್ರಣಗಳನ್ನು ಗಮನಿಸುವುದಾದರೆ, ‘ಅಬ್ದುಲ್ ಕಲಾಂ’ ಅವರ ಬಗ್ಗೆ ಬರೆದಿರುವ ಲೇಖಕಿ, ಕಲಾಂ ದೇಶಕಂಡ ಅಪ್ರತಿಮ ಮಹಾನ್ ವ್ಯಕ್ತಿ. ಬಡ ಕುಟುಂಬದಲ್ಲಿ ಹುಟ್ಟಿ ವಿಶ್ವವೇ ತನ್ನತ್ತ ತಿರುಗಿ ನೋಡುವಂತಹ ಮಾಡಿದ ಮಹಾನ್ ವಿಜ್ಞಾನಿ. ಸರಳ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಮಾದರಿ ಎನ್ನುತ್ತಾರೆ. ‘ಸ್ತ್ರೀ ರತ್ನ ಸೀತಾಮಾತೆ’ ಇದರಲ್ಲಿ ಸೀತೆ ಪತಿವ್ರತಾ ಸ್ತ್ರೀಯಲ್ಲಿ ಸೀತೆ ಅಗ್ರಮಾನ್ಯಳು. ಭಾರತೀಯ ಮಹಿಳೆಯರಿಗೆ ಭೂಷಣ. ಇವಳು ಆದರ್ಶ ಪತ್ನಿ ಮಾತ್ರವಲ್ಲ, ಆದರ್ಶ ರಾಣಿ. ಆದರ್ಶ ಮಗಳು, ಆದರ್ಶ ತಾಯಿಯಾಗಿಯೂ ಸಂಸ್ಕಾರವಂತರಾಗಿ ಎಲ್ಲರ ಗಮನ ಸೆಳೆಯುತ್ತಾರೆ ಎನ್ನುತ್ತಾರೆ 

 ‘ಸಾವಿತ್ರಿಬಾಯಿ ಪುಲೆ’ ಎನ್ನುವ ಬರಹದಲ್ಲಿ, ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ಸಮಾಜದ ಸುಧಾರಣೆಗಾಗಿ ಮುಡಿಪಿಟ್ಟ ಸಾವಿತ್ರಿಬಾಯಿ ಫುಲೆ ತಳವರ್ಗದ  ಜನರಿಗೆ ಶಿಕ್ಷಣ ಸಿಗುವಂತೆ ಮಾಡಿದವರು. ಅನಕ್ಷರತೆ ವಿರುದ್ಧ ಮಾತ್ರವಲ್ಲದೆ ಅನೇಕ ಸಾಮಾಜಿಕ ಅನಿಷ್ಠಗಳ ವಿರುದ್ಧವೂ ಉಗ್ರ ಹೋರಾಟ ನಡೆಸಿದವರು. ಮರು ಮದುವೆ ಮಾಡಿಸಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರ ಹುಟ್ಟುವ ಮಕ್ಕಳಿಗಾಗಿ ಬಾಲಗೃಹ ತೆರೆದವರು.  ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಿದ ಧೀರ ಮಹಿಳೆ ಎಂದು ಕೊಂಡಾಡುತ್ತಾರೆ.

ಹಬ್ಬಗಳ ಕುರಿತಾದ ಲೇಖನದಲ್ಲಿ ಪಿತೃ ಪಕ್ಷದ ಮಹತ್ವ,  ಗುರು ಪೂರ್ಣಿಮೆ, ದೀಪಾವಳಿ,  ಚೈತ್ರ ಮಾಸದ ಹಬ್ಬಗಳು,  ವರಮಹಾಲಕ್ಷ್ಮಿ ಮೊದಲಾದವುಗಳ ಕುರಿತು ಬರೆದಿದ್ದಾರೆ.

ಒಟ್ಟಿನಲ್ಲಿ, ಇದೊಂದು ಸರ್ವಕಾಲಕ್ಕೂ ಸಲ್ಲುವ ವಿವಿಧ ವಿಷಯಗಳನ್ನು ಹೊತ್ತ ವೈಚಾರಿಕ ಚಿಂತನೆಗಳ ಹೊತ್ತಗೆಯಾಗಿದೆ. 


Comments

Popular posts from this blog