ಹಣೆಬರಹ ಮೀರುವ ಮನುಷ್ಯ ಪ್ರಯತ್ನ

‘ಮಾರ್ಕೋಲು’ 




ಹುಟ್ಟಿದ ಮಕ್ಕಳ ಹಣೆಬರಹವನ್ನು ಅವರ ಪೂರ್ವಕರ್ಮಾನುಸಾರವಾಗಿ ಬರೆಯುವ ಶಕ್ತಿಯನ್ನು ಹೊಂದಿದ ಮಹಿಳೆ ಮತ್ತು ಆಧುನಿಕ ಮನೋಧರ್ಮದ ಇನ್ನೊಬ್ಬ ಮಹಿಳೆ ಮನುಷ್ಯನ ಪ್ರಯತ್ನದಿಂದ, ಯುಕ್ತಿಯಿಂದ ಹಣೆಬರಹವನ್ನು ಮೀರಬಹುದು ಎಂದು ನಂಬಿಕೆ ಇರುವವರ ಕುರಿತಾದ ಕಾದಂಬರಿ ಮಾರ್ಕೋಲು. ಈ ತಿಂಗಳ ಆರಂಭದಲ್ಲಿ ಇಹಲೋಕ ತ್ಯಜಿಸಿದ ಬರಹಗಾರ್ತಿ ಆಶಾ ರಘು ಅವರ  ಕೃತಿ ಇದು.

ಈ ಕೃತಿ  ತುಮಕೂರು ಮತ್ತು ನಂಜನಗೂಡು ಭಾಗದ ಆಡುಭಾಷೆಯಲ್ಲಿ ನಿರೂಪಿತವಾಗಿವೆ. ಚಿಂತನಶೀಲತೆ ಮತ್ತು ಸಂವೇದನಾಶೀಲತೆಯ ಸವಾಲನ್ನು ಸ್ವೀಕರಿಸಿ ವಾಸ್ತವಿಕತೆ ಮತ್ತು ಕಲ್ಪನೆಗಳನ್ನು ಸಮೀಕರಿಸಿ ಲೇಖಕಿ ನಿರೂಪಿಸಿದ್ದಾರೆ.  ಸರಳ ಎಂಬಂತೆ ಕಂಡುಬಂದರೂ ಸಂಕೀರ್ಣ ಕಥನಕವಾಗುವುದನ್ನು ಓದಿನ ವೇಳೆ ಕಾಣಬಹುದು. ಜನಪದೀಯ ಮತ್ತು ಆಧುನಿಕತೆ,  ಅಲೌಕಿಕ ಘಟನೆಗಳನ್ನೂ ಇಲ್ಲಿ ಸೇರಿಸಿದ್ದಾರೆ. ನಿರಾಡಂಬರವಾದ ಸಹಜತೆ ಮತ್ತು ಮುಗ್ಧ ಗ್ರಾಮದ ಜನರ ಭಾಷಾ ಶೈಲಿ ಇಷ್ಟವಾಗುತ್ತದೆ. ದ್ಯಾವಮ್ಮ, ಕಾಮರಾಯ, ತಿಮ್ಮರಾಯ, ಕಾಡಜ್ಜಿ, ವಿಕ್ರಮ ಮೊದಲಾದವರ ಪಾತ್ರಗಳಿಗೆ ಸಾಕಷ್ಟು ಮಹತ್ವ ಇಲ್ಲಿದೆ. ಕುತೂಹಲಭರಿತವಾಗಿ ಓದಿಸಿಕೊಂಡು ಹೋಗುವಂತೆ ಕಥೆಯನ್ನು ನಿರೂಪಿಸಿದ್ದಾರೆ. ಕೊನೆಯಲ್ಲಿ ಹಣೆಬರಹ ಏನೇ ಇದ್ದರೂ ಮನುಷ್ಯನ ಪ್ರಯತ್ನದಿಂದ ಮಾತ್ರ ಇದನ್ನು ಮೀರಬಹುದು ಎನ್ನುವ ಸಂದೇಶವನ್ನು ಕಟ್ಟಿಕೊಡುತ್ತಾರೆ.

ಕಥೆಯ ಬಗ್ಗೆ ವಿವರಿಸುವುದಾರೆ, ಇದೊಂದು ವಿಶೇಷ ಕೃತಿ. ಈ ಕಾದಂಬರಿಯಲ್ಲಿ ನೀಲಾಂಬಿಕೆ ಮತ್ತು ಆಕೆಯ ತಂಗಿ ಕನಕಾಂಬಿಕೆಯ ಹಣೆಬರಹವನ್ನು ಆಕೆಯ ತಾಯಿ ವಿಧಿಯಮ್ಮ ಬರೆಯುತ್ತಾಳೆ. ಹಿರಿಯ ಮಗಳು ಕನಕಾಂಬಿಕೆಗೆ ಪೂರ್ವ ದಿಕ್ಕಿನಿಂದ ಕುದುರೆಯ ಮೇಲೆ ಬರುವ ಶ್ರೀಮಂತ ಸರದಾರನನ್ನು ಮದುವೆಯಾಗಿ ನಾಲ್ಕು ಮಕ್ಕಳನ್ನು ಹೆರುವ ಯೋಗವಿದೆ ಎಂದು ಬರೆದರೆ, ಎರಡನೆಯ ಮಗಳು ನೀಲಾಂಬಿಕೆ ಮದುವೆಗೆ ಮುನ್ನವೇ ಮಗುವನ್ನು ಹೆತ್ತು ಆ ಮಗುವನ್ನೇ ಮುಂದೆ ವಿವಾಹವಾಗುತ್ತಾಳೆ ಎಂಬುದಾಗಿ ಬರೆಯುತ್ತಾಳೆ. ಇವುಗಳ ಜೊತೆಗೆ ಸಮಾನಾಂತರವಾಗಿ ಮತ್ತೊಂದು ಪಾತ್ರ ಬರುತ್ತದೆ. ಅವಳೇ ದ್ಯಾವಮ್ಮ. ಈಕೆ ಮಾಯಾಕನ್ನಡಿ ಮೂಲಕ ಭೂತ, ಭವಿಷ್ಯತ್ತುಗಳನ್ನು ನೋಡಬಲ್ಲ ಅತಿಮಾನುಷ ಸಾಮರ್ಥ್ಯ ಹೊಂದಿರುವವಳು. ವಿಧಿಯಮ್ಮ ಮತ್ತು ದ್ಯಾವಮ್ಮಳ  ಪಾತ್ರ ಕಾದಂಬರಿಯಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಇಬ್ಬರೂ ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ಪಡೆದಿರುವವರು. ಆದರೂ ಅವರ ನಿಲುವುಗಳಲ್ಲಿ ಮತ್ತು ಧೋರಣೆಗಳಲ್ಲಿ ಸಾಕಷ್ಟು ಭಿನ್ನತೆ ಇರುವುದನ್ನು ಇಲ್ಲಿ ಕಾಣಬಹುದು.

 ವಿಧಿಯಮ್ಮ ವಿಧಿಯ ಪಾರಮ್ಯವನ್ನು ನಂಬುವವಳು. ‘ನಾವಂದುಕೊಂಡಂಗೆಲ್ಲಾ ಎಲ್ಲಿ ನಡೀತದೆ ಜಗತ್ತಿನಾಗೆ? ಏನೋ  ಹುಚ್ಚು... ನಾಲ್ಕು ದಿನ ಕುಣಿತವೆ, ಕಾಲಿನಾಗಿನ ಗೆಜ್ಜೆ ಕಳ್ಕಂಡಾಗ  ಕುಣಿತ ತಾನಾಗೇ ನಿಲ್ತದೆ’ ಎನ್ನುವ ನಿಲುವಿನವಳು. ಈ ನಿಲುವಿನ ಪ್ರತಿಪಾದನೆಗೆ ವಿಧಿಯ ಕ್ರೌರ್ಯವನ್ನು ತಪ್ಪಿಸಿಕೊಳ್ಳಲಾಗದ ಅದರ ಬಲೆಯನ್ನೂ ವಿಜೃಂಭಿಸುವ ಕೆಲವು ಉಪಕಥೆಗಳು ವಿಧಿಯಮ್ಮನ ಪ್ರಕರಣಗಳಲ್ಲಿ ಬರುತ್ತವೆ. ‘ಯಾವ ಕಾಲಕ್ಕೆ ಯಾರಿಗೆ ಏನಾಗಬೇಕು ಅಂತ ಇರ್ತದೋ ಅದ ತಪ್ಪಿಸಾಕ್ಕೆ ಯಾರಿಂದಲೂವೆ ಸಾಧ್ಯ ಆಗದು’ ಎನ್ನುವುದು ನಂಬಿಕೆ ಅವಳದ್ದು. ಆದರೆ ದ್ಯಾವಮ್ಮ ಕೊಂಚ ಆಧುನಿಕ ಮನೋಧರ್ಮದವಳು. ‘ಮನುಷ್ಯನ ಪ್ರಯತ್ನದಿಂದ, ಯುಕ್ತಿಯಿಂದ ಹಣೆಬರಹವನ್ನೂ ಮೀರಬಹುದು’ ಎಂದು ನಂಬಿರುವವರು. ಈ ನಂಬಿಕೆಗೆ ಪುಷ್ಟಿಯಾಗುವಂತೆ ಒಂದಷ್ಟು ಉಪಕಥೆಗಳು ಈ ಕಾದಂಬರಿಯಲ್ಲಿ ಬರುತ್ತದೆ. ತಾಯಿಯಿಂದ ತನ್ನ ಹಣೆಬರದ ವಿಷಯವನ್ನು ನೀಲಾಂಬಿಕೆ ಅರಿತು ವಿಚಲಿತವಾಗುತ್ತಾಳೆ. ಚಿಂತೆಯಲ್ಲಿ ಮುಳುಗುವ ಆಕೆಗೆ ಆಶಾಕಿರಣದಂತೆ ಭಾಸವಾಗುವುದು ಮತ್ತು ಹೊಸ ಭರವಸೆ ಟಿಸಿಲು ಒಡೆಯುವುದು ದ್ಯಾವಮ್ಮ ಹೇಳುವ ಕಥೆಗಳ ಮೂಲಕ. ‘ನಾನು ಹಣೆಬರಹ ಮೀರಿ ಬದುಕತೀನಿ. ಅದರ ದಾರಿಯಾಗೆ ನಾ ಎಂದಿಗೂವೆ ಹ್ವಾಗಲ್ಲ. ನಾನು ಹ್ವಾಗಾ ದಾರಿಗೆ ವಿಧಿಯೇ ಬರಬೇಕು’ ಎಂಬ ಸಂಕಲ್ಪ ನೀಲಾಂಬಿಕೆಯಾಗಿರುತ್ತದೆ. ಹೀಗೆ ಈ ಎರಡು ಪಾತ್ರಗಳು ಇಡೀ ಕಾದಂಬರಿಯನ್ನು ಸುತ್ತಿಕೊಳ್ಳುತ್ತವೆ.

 ನಂಬಿಕೆ, ಅಪನಂಬಿಕೆ ಮತ್ತು ಮೂಢನಂಬಿಕೆಗಳ ಈ ಒಂದು ಸೂಕ್ಷ್ಮ ವಲಯದ ಪದರಗಳನ್ನು ಲೇಖಕಿ ಚೆನ್ನಾಗಿ ಬಿಡಿಸಿಟ್ಟಿದ್ದಾರೆ. ‘ನೀನು ಬರೆಯೋದು ಹಾಳೆಯ ಮೇಲೆ, ನಾನು ಬರೆಯುವುದು ಹಣೆ ಮೇಲೆ. ಹಣೆಬರನ ಬದಲಾಯ್ಸಕೆ ಆದರೂ ಆಗಬದು. ಒಟ್ನಲ್ಲಿ ಎದುರಿಸಿ ನಿಲ್ಲುವಂತ ಗುಂಡಿಗೆ ಬೇಕು. ಆಗ ಆ  ವಿಧಿಗೆ ಮಾರ್ಕೋಲು (ವಿಧಿಗೆ ಮರುಬಾಣ ಎಂಬರ್ಥ) ತಕ್ಕಂಡು ಹೊಡಿಬಹುದು’ ಎನ್ನುವಂತಹ ಸಾಲುಗಳು ಇಲ್ಲಿ ಕಂಡುಬರುತ್ತವೆ.

ಹುಟ್ಟಿದ ಮಗುವಿನ ಹಣೆಬರಹ ಬರೆಯುವ ವಿಲಕ್ಷಣ ಸ್ತ್ರೀ ವಿಧಿಯಮ್ಮ. ಇವಳು ಹಲವು ಬೆರಗಿಗೆ ಕಾರಣವಾಗುತ್ತಾಳೆ. ಹಣೆಬರಹವನ್ನು ತಪ್ಪಿಸಿಕೊಳ್ಳಲು ಮನೆಯಿಂದ ಹೊರಹೋದ ನೀಲಾ ಹಲವು ಸಂಕಷ್ಟಗಳಿಗೆ ತುತ್ತಾಗುತ್ತಾಳೆ. ಕಾಡಿನಲ್ಲಿ ಕಾಡಜ್ಜಿಯ ಮನೆಯಲ್ಲುಳಿದಾಗ ಅತ್ಯಾಚಾರಕ್ಕೊಳಗಾಗಿ ಗಂಡುಮಗುವಿನ ತಾಯಿಯಾಗಿ, ಆ ಮಗುವನ್ನು  ಸೀರೆಯಿಂದ ಸುತ್ತಿ ದೇವರ ಕಲ್ಲಿನೆದುರು ಮಲಗಿಸಿ ಹೋದಾಗ ಅದು ಮಕ್ಕಳಿಲ್ಲದ ದಂಪತಿಯ ಇನ್ನೊಬ್ಬರ ಕೈಸೇರುತ್ತದೆ. ಮುಂದೆ ಆ ಮಗು ದೊಡ್ಡವನಾದ ಮೇಲೆ ಹರಿಹರ ಎಂಬ ಹೆಸರು ಪಡೆಯುತ್ತಾನೆ. ಅಲೆಯುತ್ತಿದ್ದ ಈಕೆ ಅದೇ ಹಳ್ಳಿಗೆ ಹೋದಾಗ ಅಲ್ಲಿಯ ಜನರು ಕಾಪಾಡುತ್ತಾರೆ. ಈಕೆಯ ಕಷ್ಟ ಅರಿತು ಹರಿಹರನೊಂದಿಗೆ ವಿವಾಹ ಮಾಡುತ್ತಾರೆ. 

ಮನೆಯಲ್ಲಿ ಹರಿಹರ-ನೀಲಾಂಬಿಕೆ ಮಲಗಿರುವಾಗ ಅಟ್ಟದಲ್ಲಿ  ತೊಟ್ಟಿಲು ಕಾಣುತ್ತದೆ. ಆ ತೊಟ್ಟಿಲಿಗೆ  ತಾನು ಹೆತ್ತ ಮಗುವನ್ನು ಸುತ್ತಿಟ್ಟ ಸೀರೆ ಸುತ್ತಿರುವುದು ಕಂಡುಬರುತ್ತ್ತದೆ. ಇದರಿಂದ ಅನುಮಾನಗೊಂಡು ಅತ್ತೆಯನ್ನು ಕೇಳಿದಾಗ ನಡೆದ ಕಥೆಯನ್ನೆಲ್ಲಾ ವಿವರಿಸುತ್ತಾಳೆ. ಇದರಿಂದ ತಾನೇ ಹೆತ್ತ ಮಗು ಮದುವೆಯಾದಂತಾಯಿತು. ಹಣೆಬರಹ ನಡೆದೇ ಹೋಯಿತಲ್ಲ ಎಂದು ಮರುಗಿ ಅದೇ ಸೀರೆಯಿಂದ ನೇಣು ಹಾಕಿಕೊಳ್ಳಲು ಮುಂದಾಗುತ್ತಾಳೆ. ಆ ವೇಳೆ ಸಾಧುವೊಬ್ಬ  ಭಿಕ್ಷೆಗೆ ಬರುವುದು, ಇದರಿಂದ ನೇಣು ಹಾಕಿಕೊಳ್ಳದಿರುವುದು, ಆತ ಆಶೀರ್ವಾದ ಮಾಡುವುದು, ಮಗು ಹುಟ್ಟುವುದು, ವಿಕ್ರಮ ಎಂಬ ರಾಜ ಈ ಬಾಲಕನನ್ನು ಭೇಟಿ ಮಾಡುವುದು,  ಆತ ಯುವರಾಜ ಎಂದು ಘೋಷಿಸುವುದಾಗಿ ಬಾಲಕನಿಗೆ ಹೇಳಿದಾಗ ಅಪ್ಪ-ಅಮ್ಮನ ಸಮ್ಮತಿ ಪಡೆಯುವುದಾಗಿ ಹೇಳುವುದು... ಹೀಗೆ ಕಥೆ ಸಾಗುತ್ತದೆ.

ಇನ್ನೊಂದೆಡೆ, ನಿಲಾಂಬಿಕೆಯನ್ನು ಪೂರ್ವ ದಿಕ್ಕಿನಿಂದ ಬಂದ ಶ್ರೀಮಂತನೊಬ್ಬ ಮದುವೆಯಾಗುವುದು, ಆತ ತೆಪ್ಪ ನಡೆಸುವಾಗ ಮುಳುಗಿ ಸಾಯುವುದು, ‘ಇದರಲ್ಲಿ ಅನ್ಯಾಯ ಏನಿಲ್ಲ, ಹಣೆಲಿ ಬರೆದಿದ್ದು ಆಯ್ತು’ ಎಂದು ಆಕೆ ಅಂದುಕೊಳ್ಳುವುದು, ನಂತರ ಇವರ ಮನೆಗೆ ಮುತ್ತು ಮಾರುವ ಭರಮಪ್ಪ ಎನ್ನುವವ  ಬಂದು ನಾಲ್ಕು ದಿನ ಉಳಿಯುವುದು, ಈಕೆಯ ತಂದೆ ಆತನೊಡನೆಯೆ ಮದುವೆ ಮಾಡಿಕೊಡುವುದು, ಗಂಡು ಮಗು ಜನಿಸುವುದು, ಈ ಮಗು ನಿಜಗುಣ  ಆಟವಾಡುವಾಗ ಕಿನ್ನರಿಯೊಬ್ಬಳು ತನ್ನ ಮಾಯಾದಂಡದಿಂದ ಅವನನ್ನು ಬೆಕ್ಕಿನಮರಿಯನ್ನಾಗಿ ಮಾಡುವುದು, ನಂತರ ತಿಮ್ಮರಾಯ ಎನ್ನುವವನು ಕಿನ್ನರಿಯಿಂದ ಮಂತ್ರದಂಡವನ್ನು ಆಕೆಗೆ ಗೊತ್ತಿಲ್ಲದಂತೆ ತಂದು ಮತ್ತೆ ಬೆಕ್ಕಿನಮರಿಯನ್ನು  ಮಗುವಾಗಿಸುವುದು..... ಹೀಗೆ ಕಥೆ ಸಾಗುತ್ತದೆ.

ಒಟ್ಟಿನಲ್ಲಿ, ಈ ಕಾದಂಬರಿ ಕಾಲ್ಪನಿಕ ಕಥೆಗಳಿಂದ ತುಂಬಿದ್ದರೂ ಆಸಕ್ತಿದಾಯಕವಾಗಿದೆ. ಜೊತೆಗೆ ರೋಮಾಂಚನಕಾರಿಯಾಗಿ ಚಿತ್ರಿಸಿದ್ದಾರೆ. ಜಾನಪದ ಕಥೆಗಳಿಂದ ಸ್ಫೂರ್ತಿ ಪಡೆದು ಇಂತಹ ಕುತೂಹಲಕರ ಕಾದಂಬರಿಯನ್ನು ಶ್ರದ್ಧೆಯಿಂದ  ಹೆಣೆದಿರುವುದನ್ನು ಮೆಚ್ಚಲೇಬೇಕು. ಮುಖ್ಯ ಕಥೆಯಂತೆಯೇ ಅನೇನೇಕ ಉಪಕಥೆಗಳು ಗಮನಸೆಳೆಯುತ್ತವೆ. ಇವು ಮನರಂಜನೆ, ನೀತಿಬೋಧೆಗೂ ಸಹಾಯಕವಾಗಬಲ್ಲವು. 


Comments

Popular posts from this blog