ನತೃದೃಷ್ಟೆಯರ ಬಾಳಿಗೆ ಬೆಳಕಾಗಬಲ್ಲ 

‘ಮಹಾಶ್ವೇತೆ’  




‘ಮಹಾಶ್ವೇತೆ’  ಇದು ವಿವಿಧ ಕಾರಣಗಳಿಂದ ಸಮಾಜದ ತಿರಸ್ಕಾರದಲ್ಲಿ ಮೌನವಾಗಿ ಬೇಯುತ್ತಿರುವ ಸಾವಿರಾರು ನತೃದೃಷ್ಟೆಯರ ಬಾಳಿಗೆ ಬೆಳಕಾಗಬಲ್ಲ 

ಕಾದಂಬರಿ. ಇದರ ಲೇಖಕರು ಸುಧಾಮೂರ್ತಿ. ಅನುಪಮಾ ಎಂಬ ಕಥಾನಾಯಕಿ ಬಿಳಿ ತೊನ್ನು (ಪಾಂಡು ರೋಗ) ದಿಂದ ಕುಟುಂಬದಲ್ಲಿ, ಊರಿನಲ್ಲಿ, ಸಮಾಜದಲ್ಲಿ ಅನುಭವಿಸಿದ ಬವಣೆ, ಸಂಕಷ, ಸಂಕಷ್ಟಕ್ಕೆ ಬಾರದ ಗಂಡ ನಂತರ ಪಶ್ಚ್ಚಾತ್ತಾಪ ಪಟ್ಟು ಮತ್ತೆ ಸೇರಲು ಬಂದರೂ ಅದನ್ನು ನಿರಾಕರಿಸಿ ಆಕೆ ಸ್ವತಂತ್ರ ಬದುಕು ರೂಪಿಸಿಕೊಂಡಿದ್ದು, ತನ್ನಲ್ಲಿದ್ದ ನಾಟಕ ಕಲೆಯಲ್ಲೇ ಹೆಚ್ಚಿನದಾಗಿ ತೊಡಗಿಸಿಕೊಂಡು, ನೋವು ಮರೆತಿದ್ದು,, ಬಾಳು ಮುನ್ನಡೆಸಿದ್ದು  ಕಾದಂಬರಿಯ ಕಥಾ ವಸ್ತು.   

 ಆಕಸ್ಮಿಕವಾಗಿ ಬಿಳಿ ತೊನ್ನು ಅಥವಾ ಬಿಳುಪು ರೋಗಕ್ಕೆ ತುತ್ತಾದ ವಿದ್ಯೆ, ರೂಪ, ಗುಣದಲ್ಲಿ ಮೇಲುಗೈ ಸಾಧಿಸಿದ್ದ  ಮಹಿಳೆ ಅನುಪಮಾ ಸಾಮಾಜಿಕ ನಿಂದನೆಗಳಿಂದ ಬೇಸತ್ತು, ಊರಿನಲ್ಲಿ ಯಾರೂ ತನ್ನ  ನೆರವಿಗೆ ಬಾರದಿದ್ದುದರಿಂದ ಮತ್ತು ತನ್ನಿಂದಾಗಿ ಕುಟುಂಬದಲ್ಲೂ ಶುಭ ಕಾರ್ಯ ನಿಂತುಹೋಗುತ್ತಿದ್ದುದರಿಂದ  ಊರು ಬಿಟ್ಟು ಮುಂಬೈ ಮಹಾನಗರಕ್ಕೆ ಹೋಗಿ ಬದುಕು ಕಟ್ಟಿಕೊಳ್ಳುತ್ತಾಳೆ.  ರೋಗ ಅಂಟಿದೆ ಎಂದು ಹೆದರಿ ಆತ್ಮಹತ್ಯೆಯ ಕ್ಷಣದವರೆಗೆ ಹೋದರೂ,  ತಾನೇಕೆ ಸಾಯಬೇಕೆಂದು ನಿರ್ಧರಿಸಿ ಎದುರಾಗಿರುವ ಸವಾಲನ್ನು ಎದುರಿಸುವೆ, ಜನರ ನಿಷ್ಠುರ ಮಾತು, ಭಾವನೆಗಳಿಗೆ ಕಿವಿಗೊಡದೆ ಸ್ವತಂತ್ರಳಾಗಿ ಬಾಳುತ್ತೇನೆ  ಎಂಬ ಜೀವನ ಪ್ರೀತಿ  ಹೊಂದುತ್ತಾಳೆ. ಜೀವನವನ್ನು ಇನ್ನೂ ಹೆಚ್ಚು ಪ್ರೀತಿಸುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬಂದು ತನಗೆ ಪ್ರಿಯವಾದ ಕೆಲಸವನ್ನು ಮಾಡಿ ಜೀವನ ಸಾಫಲ್ಯ ಕಂಡು ಯಾರ ಕನಿಕರ, ಸಹಾಯವಿಲ್ಲದೆ ಬದುಕಬಲ್ಲ ಜೀವನ ಕಟ್ಟಿಕೊಳ್ಳುತ್ತಾಳೆ. 

  ಅನುಪಮಾಳನ್ನು ಮೊದಲ ನೋಟದಲ್ಲೇ ಸೆರೆಹಿಡಿದು ಮದುವೆಯಾದ ಡಾ|| ಆನಂದ್, ಆಕೆಯು ಕೊಟ್ಟ ನಾಟಕದ ಟಿಕೆಟ್ ಹಿನ್ನೆಲೆಯಲ್ಲಿ  ಟೌನ್ ಹಾಲ್‌ಗೆ ಮಹಾಶ್ವೇತೆ ಎಂಬ ನಾಟಕ ನೋಡಲು ಹೋಗುತ್ತಾನೆ. ಸಂಸ್ಕೃತ ವಿದ್ವಾಂಸ ಬಾಣಭಟ್ಟನ ‘ಕಾದಂಬರಿ’ಯನ್ನು ನಾಟಕರೂಪಕ್ಕೆ ಅಳವಡಿಸಿ ಮಹಾಶ್ವೇತೆಯ ಪಾತ್ರಧಾರೆಯಾಗಿದ್ದಳು ಅನುಪಮಾ. ಇದರಲ್ಲಿ ಮಹಾಶ್ವೇತೆ ಪುಂಡರೀಕ ಎನ್ನುವ  ಸುಂದರಾಂಗ ಮುನಿಕುಮಾರನನ್ನು ಕಂಡು ಅವನಲ್ಲಿ ಮೋಹಗೊಳ್ಳುತ್ತಾಳೆ.  ಅವರಲ್ಲಿ ಪ್ರಣಯಾಂಕುರವಾಗಿ ಅದು  ಗಾಢ ಪ್ರೇಮಕ್ಕೆ ತಿರುಗುತ್ತದೆ ಇದು ನಾಟಕದ ಕಥಾ ವಸ್ತು. 

  ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಪಾಲ್ ಅವರ ಮನೆತನ ಪ್ರಸಿದ್ಧವಾದದ್ದು, ಸಿರಿವಂತಿಕೆಗೆ ಹೆಸರಾಗಿತ್ತು. ಗೋಪಾಲರಾಯರ ಮರಣದ ನಂತರ ಪತ್ನಿ ರಾಧಕ್ಕ ಮನೆಯ ಯಜಮಾನಿಯಾಗಿದ್ದಳು. ಮಗ ಆನಂದ  ಸಹ ರೂಪವಂತ, ಐಶ್ವರ್ಯವಂತ. ಕುಂಡಲಿಯ ಮೂಲಕ ಅನುಪಮಾಳ ಸಂಬಂಧ ಕೂಡಿಬರುತ್ತದೆ. ಸಾಂಪ್ರದಾಯಿಕ ಕನ್ಯಾ ಪರೀಕ್ಷೆಯ ನಂತರ ವಿವಾಹವು ಸರಾಗವಾಗಿ ನಡೆಯುತ್ತದೆ. ವಿವಾಹದ ನಂತರ ಕೆಲವೇ ತಿಂಗಳಲ್ಲಿ ಆನಂದ ಇಂಗ್ಲೆಂಡಿಗೆ ತೆರಳುತ್ತಾನೆ. ಅನುಪಮಾ ಮನೆಯಲ್ಲಿ ಅತ್ತೆಯ ಜೊತೆ ಉಳಿಯುತ್ತಾಳೆ. ಒಂದು ದಿನ  ಕಾರಿನಲ್ಲಿ ಪೇಟೆಗೆ ಹೋಗಿ ತರಕಾರಿ ತರಲು ಹೋದಾಗ ಐದು ರೂಪಾಯಿ ಕಡಿಮೆ ಬೀಳುತ್ತದೆ. ಅನುಪಮಾಳಿಗೆ ಈ ಹಣವನ್ನು ಕೊಡಬಹುದೇ ಎಂದು ಚಾಲಕ ಕೇಳುತ್ತಾನೆ. ಅನುಪಮಾದಲ್ಲಿ ನೂರರ ನೋಟು ಮಾತ್ರ ಇತ್ತು. ಆಗ  ಕಾರಿನ ಸೀಟಿನ ಮೇಲೆ ಇದ್ದ ತನ್ನ ಗಂಡನ ತಂಗಿ ಗಿರಿಜಾಳ ಪರ್ಸ್ ಇರುವುದನ್ನು ಕಂಡು ಅದರಿಂದ ಐದು ರೂಪಾಯಿ ತೆಗೆದುಕೊಳ್ಳುತ್ತಾಳೆ. ಆಗ ಪರ್ಸ್ನಲ್ಲಿ ಆಕೆ ಕರ್ಚೀಫ್‌ನಲ್ಲಿ ಏನೋ ಕಟ್ಟಿಟ್ಟಿದ್ದು ಕಂಡುಬರುತ್ತದೆ. ಬಿಚ್ಚಿದಾಗ  ಸಂತಾನ ನಿರೋಧ ಗುಳಿಗೆ ಪ್ಯಾಕೆಟ್.  ಶ್ರೇಷ್ಠ ಮನೆತನದ ಮಡಿ ಮೈಲಿಗೆ ಎಂದು ಬಡಿದುಕೊಳ್ಳುತ್ತಿದ್ದ ಅತ್ತೆ ಮನೆಯಲ್ಲಿ ಮಗಳು ಏನು ನಡೆಸಿದ್ದಾಳೆ ಎಂಬ ಸಂಶಯ ಅನುಪಮಾಗೆ ಎದುರಾಗುತ್ತದೆ. ಪರ್ಸು ಹೇಗಿತ್ತೋ ಹಾಗೆ ಇಟ್ಟು ಸುಮ್ಮನಾಗುತ್ತಾಳೆ.

   ಒಂದು ಶುಕ್ರವಾರದ ದಿನ ಮುಂಜಾನೆ ಪೂಜೆ ವೇಳೆಗೆ ಧೂಪ ಹಾಕಲು ಕೆಂಡ ತರಲು ಹೋದಾಗ ಅಚಾತುರ್ಯವಾಗಿ ಕೆಂಡ ಕೈಜಾರಿ ಕಾಲ ಮೇಲೆ ಬೀಳುತ್ತದೆ ಕೆಲವೇ ದಿನದಲ್ಲಿ ಅದು  ಒಂದು ಬಿಳಿಯ ಪುಟ್ಟ ಕಲೆ ಅಲ್ಲಿ ಕಂಡುಬರುತ್ತದೆ. ಇದರಿಂದ ದಿಗಿಲು  ಉಂಟಾಗಿ ಯಾರಿಗೂ ಹೇಳದೆ ಡಾಕ್ಟರ್‌ಲ್ಲಿ ಹೋದಾಗ ಅಂಗಡಿಗೆ ಬಂದಿದ್ದ ಅತ್ತೆ ಕಾಣುತ್ತಾಳೆ. ಡಾಕ್ಟರ್‌ಲ್ಲಿ ಹೇಳದೇ ಹೋದುದಕ್ಕೆ ಗಲಾಟೆ  ನಡೆಯುತ್ತದೆ. ಇದೇ ವೇಳೆ ಆಕೆ ಮನೆಯಲ್ಲಿ ಮೇಲಿನಿಂದ ಇಳಿಯುವಾಗ ಬಿದ್ದು ಬಿಳಿತೊನ್ನು ಕಂಡುಬರುತ್ತದೆ.

 ಅಲ್ಲಿಂದ ಅವರ ಮನೆಯಲ್ಲಿ ರಾದ್ಧಾಂತವೇ ನಡೆದುಹೋಗುತ್ತದೆ. ನಂತರ ಅತ್ತೆಯ ಕಾಟದಿಂದ ಮಾನಸಿಕ ಕ್ಲೇಶಕ್ಕೆ  ಒಳಗಾಗುತ್ತಾಳೆ.  ಆಕೆಯ ತಂದೆ ಶಾಮಣ್ಣಗೆ ಟೆಲಿಗ್ರಾಂ ಕಳುಹಿಸಿ ಕೂಡಲೇ ಬರುವಂತೆ ಸೂಚಿಸಿ, ಮನೆಗೆ ಬಂದಾಗ ‘ನಿಮ್ಮ ಮಗಳನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ನಮ್ಮ ಮಗ ಬರುವವರೆಗೆ ಮನೆಯ ಮೆಟ್ಟಿಲು ಏರಬಾರದು. ನಮಗೆ ಮೋಸ ಆಗಿದೆ. ಈ ರೋಗ ಪೂರ್ಣ ಕಡಿಮೆ ಆಗದ ಹೊರತು ಅವಳು ನಮ್ಮ ಮನೆಗೆ ಬರುವಂತಿಲ್ಲ’  ಎಂದು ಹೇಳಿ ಇಬ್ಬರನ್ನೂ ಮನೆಯಿಂದ ಹೊರಕಳಿಸುತ್ತಾಳೆ.

   ಗಂಡನಿಗೆ ೨-೩ ಪತ್ರ ಬರೆದರೂ ಉತ್ತರ ಬರುವುದಿಲ್ಲ . ತಾನು ಟ್ಯೂಷನ್ ಹೇಳಿ ತನ್ನ ಜೀವನವನ್ನು ನಡೆಸುತ್ತೇನೆ. ಯಾರಿಗೂ ಭಾರವಾಗದಂತೆ ಬದುಕಲು ನಿರ್ಧರಿಸುತ್ತಾಳೆ.  ಹಾಸ್ಟೆಲ್ ಗೆಳತಿಯಾಗಿದ್ದ ಸುಮನ ಮುಂಬೈಯಲ್ಲಿ ಗಂಡನ ಮನೆಯಲ್ಲಿರುತ್ತಾಳೆ. ಇವಳ  ವಿಚಾರವನ್ನು ತಿಳಿದು ಮುಂಬೈಗೆ ಬರುವಂತೆ ಪತ್ರ ಬರೆಯುತ್ತಾಳೆ. 

ಅನುಪಮಾ ಮುಂಬೈನ ದಾದರ್ ರೈಲು ನಿಲ್ದಾಣಕ್ಕೆ ಬಂದು ಹಿಡಿಯುತ್ತಾಳೆ ಗೆಳತಿ ಸುಮನಾಳ ಮನೆ ಸೇರುತ್ತಾಳೆ.  ತನಗೆ ಕೆಲಸ ಕೊಡಿಸುವಂತೆ ಸುಮಾ ಮತ್ತು ಆಕೆಯ ಗಂಡ ಹರಿಯಲ್ಲಿ ಕೇಳಿಕೊಳ್ಳುತ್ತಾಳೆ. ಮುಂಬೈನಲ್ಲಿ ಆಕೆಗೆ ಕೆಲಸ ಸಿಕ್ಕಿತೇ?, ಅವಳ ಜೀವನ ಅಲ್ಲಿ ಹೇಗೆ ಸಾಗಿತು? ಎನ್ನುವುದರ ವಿವರಣೆ  ಇದರಲ್ಲಿದೆ.

  ಕೆಲವು ತಿಂಗಳು ನಂತರ ಆನಂದ್ ಊರಿಗೆ ಬರುತ್ತಾನೆ. ಒಂದು ದಿನ  ತಂಗಿ ಗಿರಿಜಾಳ ಕೋಣೆಯ  ಪುಸ್ತಕದ ಕಪಾಟಿನ ಡ್ರಾವರ್‌ನ ಅಂಚಿನಲ್ಲಿ ಸಿಕ್ಕಿಬಿದ್ದಿದ್ದ  ಚೀಟಿ ಸಿಗುತ್ತದೆ. ಅದು ಗಿರಿಜಾಳಿಗೆ ವಿಜಯ್ ಎನ್ನುವನು ಬರೆದ ಪತ್ರವಾಗಿತ್ತು. ಅದರಲ್ಲಿ ಅವರಿಬ್ಬರು ಪ್ರವಾಸಕ್ಕೆ  ಹೋದಾಗ ಅಲ್ಲಿ ದೈಹಿಕ ಮಿಲನವಾದ ಬಗ್ಗೆ ಇತ್ತು.  ತಂಗಿಯಿಂದ  ಅನೈತಿಕ ಅಧಃಪತನದ ಕೆಲಸ ನಡೆದಿದೆ ಎನ್ನುವುದು ಅವನಿಗೆ ಅರಿವಾಯಿತು ಅನುಪಮಾ ಯಾವುದೇ ತಪ್ಪಿರದೆ ಯಾವುದೋ ಯಕ್ಕಶ್ಚಿತ್ ಕಾರಣದಿಂದ ಮನೆ ಬಿಟ್ಟು ಹೋದ ಸಂದರ್ಭ ಅವನನ್ನು ಕಾಡುತ್ತದೆ. ಅವಳನ್ನು ಕರೆತಂದರೆ ಹೇಗೆ ಎನ್ನುವ ಯೋಚನೆ ಮಾಡುತ್ತಾನೆ. 

ಇದೇ ವೇಳೆ  ವೈದ್ಯಕೀಯ ಅಂತರಾಷ್ಟ್ರೀಯ ಸಮ್ಮೇಳನ  ಮುಂಬೈಗೆ ಹೋಗುವುದು, ಅಲ್ಲಿ  ಥಿಯೇಟರಲ್ಲಿ ಸಂಸ್ಕೃತ ನಾಟಕ ಇದೆ ಎನ್ನುವುದನ್ನು ಗಮನಿಸಿ ಮಿತ್ರ ಪ್ರಕಾಶ್ ಕರೆದೊಯ್ಯುತ್ತಾನೆ. ನಾಟಕ ಆರಂಭವಾಗುತ್ತಿದ್ದಂತೆಯೇ ತೆರೆಯ ಮರೆಯಿಂದ ಕೇಳಿ ಬಂದ ಧ್ವನಿ ತನಗೆ ಪರಿಚಿತವಿದ್ದಂತೆ ಆನಂದನಿಗೆ ಕಂಡುಬಂದಿತು. ಅದರಲ್ಲೂ ಮಹಾಶ್ವೇತೆ ಎನ್ನುವ ಕನ್ನಡ ರೂಪಕ ಇಲ್ಲಿ ಪ್ರಸ್ತುತವಾಗುತ್ತಿದೆ ಎಂದು ಕೇಳಿದಾಗ ಅನುಪಮಾಳ  ನೆನಪಾಗುತ್ತದೆ. ನಾಟಕ ಮುಗಿದ ನಂತರ ಪಾತ್ರ ಪರಿಚಯ ನಡೆಯಿತು. ಅದರಲ್ಲಿ ಮಹಾಶ್ವೇತೆಯ ನಾಯಕಿಯಾಗಿ ಅನುಪಮಾ  ಪಾತ್ರ ನಿರ್ವಹಿಸಿದ್ದು ಗೊತ್ತಾಯಿತು. ಆದರೆ ಅವಳನ್ನು ಭೇಟಿ ಮಾಡುವುದಾದರೂ ಹೇಗೆ ಎಂಬ ಚಿಂತೆಗೆ ಬಿದ್ದಾಗ ನೇರವಾಗಿ ರಂಗಮಂದಿರದ ಕಚೇರಿಗೆ ಹೋಗಿ ಅವಳ ವಿಳಾಸ ಕೇಳುತ್ತ್ತಾನೆ. ಅಲ್ಲಿ ವಿಳಾಸ ಸಿಕ್ಕಿ  ಆಕೆಯ ಮನೆಗೆ ಹೋಗಿದ್ದು,   ಅವಳ ಭೇಟಿಯಾಗಿ ಚರ್ಚಿಸಿದ್ದು, ಆ ಚರ್ಚೆಯಲ್ಲಿ ಏನೇನು ವಿಚಾರಗಳು ಪ್ರಸ್ತಾಪವಾದವೆನ್ನುವುದನ್ನು ಕಾದಂಬರಿ ಓದಿಯೇ ತಿಳಿಯಬೇಕು. ಜೊತೆಗೆ  ಅನುಪಮಾ - ಆನಂದ ಮತ್ತೆ ಒಂದಾದರೇ? ಅಥವಾ ಅನುಪಮಾ ಡಾ|| ವಸಂತನನ್ನು ವಿವಾಹವಾದಳೇ?  ಅವಳ ನೌಕರಿ ಏನಾಯಿತು? ನಾಟಕದ ಜೀವನ ಮುಂದುವರೆಸಿದಳೇ? ಬದುಕಿನ ಬಂಡಿ  ಹೇಗೆ ಸಾಗಿತು ಎನ್ನುವುದಕ್ಕೆಲ್ಲ ವಿವರವಾದ ಉತ್ತರ ಈ ಕಾದಂಬರಿಯಲ್ಲಿದೆ.   

 .................


Comments

Popular posts from this blog