ನೆಲದ ಗುಣ ಕಚ್ಚಿಕೊಂಡ
‘ಹಿಮ್ಮುಖ ಹರಿದ ನದಿ’
‘ಹಿಮ್ಮುಖ ಹರಿದ ನದಿ’ ಕಥಾ ಸಂಕಲನ ವಸ್ತುವಿಶೇಷದ ಜೊತೆಗೆ ದೇಸಿ ಸೊಗಡಿನ ದೃಷ್ಟಿಯಿಂದಾಗಿ ಹೆಚ್ಚು ಗಮನ ಸೆಳೆಯುವ ಕೃತಿ. ಧಾರವಾಡದ ವಿದ್ಯಾಧರ ಮುತಾಲಿಕ್ ದೇಸಾಯಿ ಇದರ ಲೇಖಕರು. ಇಲ್ಲಿನ ಕಥೆಗಳಲ್ಲಿ ಮನೋವೈಜ್ಞಾನಿಕತೆ ಇದೆ, ಪ್ರೀತಿ-ಪ್ರೇಮ, ಸಂಸ್ಕೃತಿ, ಸಾಮಾಜಿಕ ಪ್ರಸ್ತುತತೆ, ಜೀವನಮೋಹ ಎಲ್ಲವೂ ಇವೆ. ಇವು ನಮ್ಮನ್ನು ಸೆಳೆಯುವುದು ಮಾತ್ರವಲ್ಲ, ಅದರ ಗುಂಗಿನಲ್ಲಿರುವಂತೆ ಮಾಡುವ ಗುಣವನ್ನು ಹೊಂದಿವೆ.
ವಿಶೇಷವೆಂದರೆ, ಧಾರವಾಡ ಭಾಗದ ಕನ್ನಡ ಭಾಷೆಯಲ್ಲಿ ಈ ಸಂಕಲನವಿದೆ. ಜೊತೆಗೆ ಬಯಲುಸೀಮೆಯ ಬಡತನ, ಬರಗಾಲ, ಪ್ರವಾಹ, ವಲಸೆ, ಕೂಲಿಹೆಂಗಸರನ್ನು ತಮ್ಮ ದೈಹಿಕ ಹಸಿವಿಗೆ ಬಳಸಿಕೊಳ್ಳುವ ದಲ್ಲಾಳಿಗಳು, ನಂಬಿಕೆ, ಮೂಢನಂಬಿಕೆಗಳ ಜಂಜಾಟ ಮುಂತಾದ ಗುಣಗಳನ್ನು ಇಲ್ಲಿನ ಕಥೆಗಳು ಹೊಂದಿವೆ. ನೆಲದ ಗುಣ ಕಚ್ಚಿಕೊಂಡ ಕಥೆಗಳು ಎನ್ನಬಹುದು. ಈ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಇಲ್ಲಿ ಚಿತ್ರಿಸಲಾಗಿದೆ. ಒಟ್ಟೂ ೧೩ ಕಥೆಗಳ ಗುಚ್ಛ ಈ ಸಂಕಲನ.
ಪೂರ್ಣಾಹುತಿ
ಮನುಷ್ಯನ ಆತ್ಮಬಲ ಜಾಗೃತಿಯಾದರೆ ಬ್ರೇನ್ ಟ್ಯೂಮರ್‌ನ್ನೂ ಸಹ ಮೆಟ್ಟಿನಿಲ್ಲಬಹುದು ಎನ್ನುವುದನ್ನು ದಂಪತಿಯ ಅನ್ಯೋನ್ಯ ಪ್ರೇಮದ ಮೂಲಕ ನಿರೂಪಿಸಲಾಗಿದೆ. ದೇವರ ಬಗ್ಗೆ ನಂಬಿಕೆ ಇಲ್ಲದೆ ಮನುಷ್ಯ ಪ್ರಯತ್ನ ಮಾತ್ರ ನಂಬುವ ಆದರ್ಶವಾದಿ ಪತಿ, ಪತ್ನಿಯ ಕಾಯಿಲೆಯಿಂದ ಇಂಚುಇಂಚಾಗಿ ಪಾತಾಳಕ್ಕಿಳಿದಾಗ ಆತ್ಮಬಲ ಇದ್ದರೆ ರೋಗ ಗುಣಮುಖವಾಗಲು ಸಾಧ್ಯ ಎಂಬ ಮಾತು ನಂಬಿ ಅದರಿಂದಲೇ ಪತ್ನಿಯ ರೋಗ ನಿರ್ಮೂಲನೆಗೆ ಕಾರನಾಗುತ್ತಾನೆ. ಮುಂದೆ ಅವರ ಬಾಳು ಹೇಗೆ ಸಾಗಿತು ಎನ್ನುವುದನ್ನು ಈ ಕಥೆ ವಿವರಿಸುತ್ತದೆ.
ಮಾಗಿದ ಮನಸ್ಸು
ಪ್ರವಾಹದಿಂದ ಊರಿಗೆ ಊರೇ ನಾಶವಾಗಿ, ಮನೆ, ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ವೇಳೆ ಅದೇ ಊರಿನ ಸೋಮು ಎನ್ನುವವನು ಭೂತಾಯಿಯ ಮೇಲಿನ ಪ್ರೀತಿಯಿಂದ ಇಂಜಿನೀಯರ್ ಕೆಲಸ ಬಿಟ್ಟು ಊರಿಗೆ ಮರಳಿ ಸರಕಾರದ, ಅಧಿಕಾರಿಗಳ ನೆರವಿನಿಂದ ಸಮೀಕ್ಷೆ ನಡೆಸಿ, ಪರಿಹಾರ ಕೊಡಿಸುತ್ತಾನೆ. ಇದರಲ್ಲಿ ಅಧಿಕಾರಿಗಳು ಮೋಸ ಮಾಡಿದಾಗ ಮಂತ್ರಿಯ ಬಳಿ ಹೋಗುವೆ ಎನ್ನುತ್ತಾನೆ. ಗ್ರಾಮದ ಅಧಿಕಾರಿಗಳು ಇಂತಹ ಸಂದರ್ಭದಲ್ಲಿ ಹೇಗೆ ಹಣ ಲೂಟಿ ಮಾಡುತ್ತ್ತಾರೆ ಎನ್ನುವುದರ ಚಿತ್ರಣ ಇದರಲ್ಲಿದೆ.
ಹಸಿವು
ಗುಲಬರ್ಗಾ ಸೀಮೆಯವರು ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಕಬ್ಬು ಕಟಾವಿಗೆ ಹೋದಾಗ ಅಲ್ಲಿನ ಕಾರ್ಖಾನೆ ಮ್ಯಾನೇಜರ್ ಹೆಂಗಸರನ್ನು ತನ್ನ ಕಾಮದ ಹಸಿವಿಗೆ ಬಳಸಿಕೊಳ್ಳುತ್ತಾನೆ. ಆತನಿಂದಾಗಿ ಬಸಿರಾದಾಗ ಮದುವೆಯಾಗು ಎಂದರೆ ನೀವೆಲ್ಲ ಅಸ್ಪೃಶ್ಯರು ಎನ್ನುವ ಮೂಲಕ ಜಾರಿಕೊಳ್ಳುತ್ತಾನೆ. ಜಗದ ಕಣ್ಣಿಗೆ ಖಡಕ್ ಇಲ್ಲದಿದ್ದರೆ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಈ ಕಥೆ ಬಿಂಬಿಸುತ್ತದೆ.
ಭುಮಿ ತೂಕದವಳು
ವಿವಾಹವಾದ ನಂತರ ಹೆಂಡತಿ ಶಾಂತಮ್ಮಳ ಜೊತೆ ಒಂದು ರಾತ್ರಿಯೂ ಸೇರದ, ಆದರೆ ವಿಚಿತ್ರ ಕಾಮಿಯಾದ ಗಂಡ, ಒಂದು ದಿನ ಮನೆಯಲ್ಲಿ ಪಾರ್ಟಿ ಏರ್ಪಡಿಸುತ್ತಾನೆ. ಆಗ ಆತನ ಮೂವರು ಮಿತ್ರರು ಕುಡಿದು ಶಾಂತಮ್ಮಳನ್ನು ಸಾಮೂಹಿವಾಗಿ ದೈಹಿಕವಾಗಿ ಬಳಸಿಕೊಳ್ಳುತ್ತಾರೆ. ಮೂವರನ್ನು ಕೊಲ್ಲುವ ಅವಳು ಜೈಲಿಗೆ ಹೋಗಿ ಅಲ್ಲಿ ಗಂಡುಮಗುವಿಗೆ ಜನ್ಮ ಕೊಡುತ್ತಾಳೆ. ಈತನಿಗೆ ಪ್ರಸನ್ನ ಎಂದು ಹೆಸರಿಡುವಳು. ಮುಂದೆ ಆ ಹುಡುಗ ಅನುಭವಿಸುವ ನೋವು, ಸಹಪಾಠಿಗಳ ಚುಚ್ಚುನುಡಿ, ಇದರಿಂದ ನೊಂದುಕೊಳ್ಳುವ ಶಾಂತಮ್ಮ ಏನು ಮಾಡಿದಳು, ನಿಜ ವಿಷಯವನ್ನು ಮಗನಿಗೆ ತಿಳಿಸಿದಳೇ, ಮುಚ್ಚಿಟ್ಟಳೇ ಎನ್ನುವುದು ಈ ಕಥೆಯ ಸಾರಾಂಶ.
ಮಹಾಮಾನವರು
ಎಲ್ಲವನ್ನೂ ಮೀರಿ ಮಾನವೀಯ ಮಿಡಿತ ತೋರುವವರ ಕಥೆ ಇದು. ಜಪಾನಿನಲ್ಲಿ ಭಾರಿ ಮಳೆ, ಪ್ರವಾಹ ಎದುರಾದಾಗ ಕಜಯುಕಿ ಎಂಬ ಯುವತಿ ಮತ್ತು ಯಾಕೋಸಾ ಎಂಬ ತರುಣ ಪರಸ್ಪರರನ್ನು ಕಾಪಾಡಿಕೊಂಡು ಬದುಕಲಾರಂಭಿಸುತ್ತಾರೆ. ಇದೇ ವೇಳೆ ಭೂಕಂಪವಾಗುತ್ತದೆ. ಆಗ ಕುಡಿಯುವ ನೀರನ್ನು ಹುಡುಕಿ, ಸಂಗ್ರಹಿಸಿ ನಿರಾಶ್ರಿತರಿಗೆಲ್ಲ ಕೊಡುತ್ತಾರೆ. ಹಸಿವು, ನೀರಡಿಕೆ ಮೀರಿ ಬೆಳೆಯುತ್ತಾರೆ. ಗಾಯಾಳುಗಳನ್ನು ಕಾಪಾಡುತ್ತಾರೆ. ಇಂತಹವರಿಬ್ಬರ ಮಾನವೀಯತೆ ಬಿಚ್ಚಿಡುವ ಕಥೆ ಇದು.
ಹಿಮ್ಮುಖ ಹರಿದ ನದಿ
ಮಾಸ್ತರರೊಬ್ಬರ ಮನೆಯಲಿದ್ದು ವಾರಾನ್ನ ತಿಂದು ಬೆಳೆದವನಿಗೆ ಮಾಸ್ತರರ ಮಗಳು ವಿಜಿ ಮನದ ತುಂಬಾ ಕಾಡುತ್ತಾಳೆ. ಕೆಲಸ ಸಿಕ್ಕಿ ವಿವಾಹವಾದರೂ ಆಕೆಯದೇ ನೆನಪು. ಕೆಲಸಕ್ಕೆ ಹೋದಾಗಲೂ ಅವಳೇ ಕಾಡುತ್ತಾಳೆ. ಕೆಲಸಕ್ಕೆ ರಜಾ ಹಾಕಿ ಮನೆಗೆ ಬಂದಾಗ ಹೆಂಡತಿ ಚಹಾ ತಂದಿಟ್ಟಾಗ ಪತ್ನಿಯಲ್ಲಿ ವಿಜಿಯನ್ನೇ ಕಾಣುತ್ತಾನೆ. ಮನಸೆಂಬ ನದಿಯಲ್ಲಿ ಹಿಮ್ಮುಖ ಚಲನೆ ಆರಂಭವಾಗುತ್ತದೆ.
ನಿನ್ನ ಒಲುಮೆಯಿಂದ
ಮೂಢನಂಬಿಕೆ ಬಿಟ್ಟು ದೈವಿಶಕ್ತಿ ನಂಬಬೇಕೆಂಬ ಸಾರಾಂಶದ ಕಥೆ ಇದು. ಊರಿನ ಲಗಮವ್ವ (ಲಕ್ಷ್ಮೀ) ಯಲ್ಲಿ ದೈವಿಕ ಶಕ್ತಿ ಇತ್ತು. ಊರಿಗೆ ಬರಗಾಲ ಬಿದ್ದಾಗ ಜನರೆಲ್ಲ ಆಕೆಯ ಪಾದಕ್ಕೆ ಬೀಳುತ್ತ್ತಾರೆ. ಧ್ಯಾನಸ್ಥಳಾಗುವ ಅವಳು ನಂತರ ತಪಸ್ ಶಕ್ತಿಯಿಂದ ಊರ ಹೊರಗಿನ ಜಾಗದಲ್ಲಿ ಸರಕಾರಿ ಕೆರೆ ನಿರ್ಮಿಸಿ ಎಂದು ಸೂಚನೆ ಕೊಡುತ್ತಾಳೆ. ಕೆರೆ ಕಟ್ಟಿಸುವಾಗಲೇ ಮಳೆ ಬಂದು ನೀರು ತುಂಬುತ್ತದೆ. ಊರಿನ ಹಿತಕ್ಕೆ ಎಲ್ಲರೂ ಒಟ್ಟಾಗಿ ಚೆನ್ನಾಗಿ ಕೆಲಸ ಮಾಡಿ ಎನ್ನುತ್ತಾಳೆ. ಕೆರೆಯಲ್ಲಿನ ತೆರೆಗಳು ನಿನ್ನೊಲುಮೆಯಿಂದಲೇ ಎಂಬ ಹಾಡನ್ನು ಗುನುಗುನಿಸುತ್ತಿವೆಯೇನೋ ಎಂದು ಜನರಿಗೆ ಭಾಸವಾಗುತ್ತದೆ.
ದ್ಯಾಮವ್ವ - ಹುಲಿಗೆವ್ವ ಚಾಂಗ್ ಬೋಲೋ
ಬರಗಾಲದ ತೀವ್ರತೆಗೆ ಒಳಗಾದ ಜನರ ಬದುಕು ಮೂರಾಬಟ್ಟೆಯಾದಾಗ ಆಮಿಷಗಳನ್ನು ಒಡ್ಡಿ ಹೆಣ್ಣುಬಾಕತನ ನಡೆಸುವವನೊಬ್ಬ ದುರ್ಗಿಯ ಅವತಾರಕ್ಕೆ ಬಲಿಯಾಗುವುದು, ರುಕಮವ್ವ ಎನ್ನುವವಳು ದುರ್ಗಿಯ ಮೈಮುಟ್ಟಿದಾಗ ಧೋ ಎಂದು ಮಳೆ ಸುರಿಯುವುದು ಕಥೆಯ ಹಂದರ.
ದುರ್ಗವ್ವ
ದುರ್ಗವ್ವ ದುರ್ಗಪ್ಪನ ಮದ್ವೆಯಾದ ಬಳಿಕ ಆತನ ಗದ್ದೆಯನ್ನು ಚೆನ್ನಾಗಿ ಮಾಡುತ್ತಾ, ಸೂರ್ಯ-ಚಂದ್ರ ಎಂಬ ಎತ್ತ್ತುಗಳನ್ನು ಮಕ್ಕಳಂತೆ ಬೆಳೆಸುವಳು. ಊರಿನ ಜಾತ್ರೆಯಲ್ಲಿ ನಡೆಯುವ ಬಂಡಿ ಸ್ಪರ್ಧೆಯಲ್ಲಿ ಪ್ರತಿ ಬಾರಿ ಪ್ರಥಮ ಬಹುಮಾನ ಪಡೆಯುತ್ತಿದ್ದ ಶಾಣಪ್ಪ ಈಕೆಯನ್ನು ಕಂಡರೆ ಜೊಲ್ಲು ಸುರಿಸುತ್ತಿದ್ದ. ಇದನ್ನರಿತ ದುರ್ಗವ್ವ ಆತನ ಹಲ್ಕಟಗಿರಿ, ಸಡಿಲ ಕಚ್ಚೆತನಕ್ಕೆ ಪಾಠ ಕಲಿಸಲು ಜಾತ್ರೆಯ ಬಂಡಿ ಸ್ಪರ್ಧೆಗೆ ಇಳಿದು ತಾನು ೫ ತಿಂಗಳ ಬಸುರಿಯಾದರೂ ಬಂಡಿ ಓಡಿಸಿಪ್ರಥಮ ಸ್ಥಾನ ಪಡೆಯುತ್ತಾಳೆ. ದುರ್ಗವ್ವನ ಬುದ್ಧಿವಂತಿಕೆ, ಸರಳತನ, ಸೂಕ್ಷ್ಮತೆ ಅವಳಿಗೆ ಹೆಸರು ತರುತ್ತದೆ.
ನಕ್ಸಲನೋರ್ವನ ಸ್ವಗತ
ಸಾಮಾಜಿಕ ಪರಿಸ್ಥಿತಿಯಿಂದ ಬಡಕುಟುಂಬದ ಯುವಕ ನಕ್ಸಲನಾದುದು, ನಂತರ ಆ ಕುಟುಂಬದವರು ಸಮಾಜಕ್ಕೆ ಬೇಡವಾಗುವುದು, ನಕ್ಸಲನ ಹುಡುಕುವ ನೆಪದಲ್ಲಿ ಪೊಲೀಸ್ ದೌರ್ಜನ್ಯ, ನೆಂಟರಿಷ್ಟರೂ ದೂರವಾಗುವುದು, ನಕ್ಸಲರನ್ನು ಹುಡುಕಿಕೊಟ್ಟರೆ ಬಹುಮಾನ ಎಂಬ ಪೊಲೀಸ್ ಘೋಷಣೆ, ಪತ್ರಕರ್ತರು , ವಾಹಿನಿಗಳು ರೆಕ್ಕೆ ಪುಕ್ಕ ಮೂಡಿಸುವುದು, ಮತ್ತೆ ಸಾಮಾಜಿಕ ಬದಲಾವಣೆಗೆ ಆ ವ್ಯಕ್ತಿ ತೆರೆದುಕೊಳ್ಳುವುದು ... ಹೀಗೆ ಕಥೆ ಸಾಗುತ್ತದೆ.
ತಾಯವ್ವನ ಸಂಸಾರ
ಊರಿನ ಗುಡಿಯಲ್ಲಿ ತಾಯವ್ವ ದೇವಿ. ಪೂಜಾರಿ ಹೆಸರು ತಮ್ಮಣ್ಣ. ದೇವಸ್ಥಾನದ ಆಸ್ತಿ ನಂಬಿಕೊಂಡು ಜೀವನ ಮಾಡುತ್ತಿದ್ದಾಗ ಹಲವರು ದೇವಿಯ ಕೋಪದಿಂದ ಜೀವ ತೆತ್ತಿದ್ದರು. ಒಂದು ದಿನ ಯಾರೋ ಹೆಣ್ಣುಮಗು ತಂದು ಬಿಟ್ಟುಹೋಗಿದ್ದರು. ಪೂಜಾರಿ ಸಾಕುತ್ತಾನೆ. ತಾಯವ್ವ ಎಂದೇ ಹೆಸರಿಡುವನು. ತಮ್ಮಣ್ಣ ಸತ್ತ ನಂತರ ಅವಳೇ ಪೂಜಾರಿಯಾಗುವಳು. ಮತ್ತೊಂದು ದಿನ ಇನ್ನೊಂದು ಅನಾಥ ಗಂಡು ಮಗು ದಾರಿಲಿ ಸಿಗುವುದು. ಊರವರು ಈಕೆಯ ಬಗ್ಗೆ ಏನೇನೋ ಮಾತಾಡಿಕೊಳ್ಳುವರು. ಕೆಲವೇ ದಿನದಲ್ಲಿ ಮತ್ತೊಂದು ಮಗು ಸಿಗುತ್ತದೆ. ಎಲ್ಲರನ್ನೂ ಸಾಕುತ್ತ ಬೆಳೆಸುವಳು. ಯಾತ್ರಾಸ್ಥಳದಂತೆ ದೇವಾಲಯ ಮಾಡುವಳು ಸಿಕ್ಕಮಕ್ಕಳನ್ನೆಲ್ಲ ಮಾವಿನ ಮರಕ್ಕೆ ತೊಟ್ಟಿಲು ಕಟ್ಟಿ ಸಾಕುವಳು. ಮುಂದೆ ಆ ಮಕ್ಕಳೆಲ್ಲ ಏನಾದರು, ತಾಯವ್ವ, ದೇವಾಲಯ ಏನಾಯಿತು ಎಂಬುದನ್ನು ವಿವರಿಸುವ ಸುಂದರ ಕಥೆ.
ಸಂಕ್ರಾಂತಿ
ಊರ ಶ್ರೀಮಂತ ಗೌಡ ಕಲ್ಯಾಣಶೆಟ್ಟಿಯ ಸೊಕ್ಕು, ಕಚ್ಚೆಹರುಕುತನದಿಂದ ಎಲ್ಲರೂ ಬೇಸತ್ತಿರುವಾಗ ಇಬ್ಬರು ಹೆಣ್ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವರು. ಗೋಪಾಲ ಎನ್ನುವ ಕೂಲಿಯ ಹೆಂಡತಿ ರಾಧಾ ಕೂಡ ಆತನ ಮನೆ ಕೆಲಸಕ್ಕೆ ಹೋದಾಗ ತನ್ನ ಜೊತೆ ಬರುವಂತೆ ಕರೆದಿದ್ದ. ಆಕೆ ಒಪ್ಪದಿದ್ದಾಗ ಗೋಪಾಲನ ಮೆಚ್ಚಿನ ಹೋರಿಯನ್ನು ಕದ್ದು ಬಚ್ಚಿಡುತ್ತಾನೆ. ಅದು ನಂತರ ಹೇಗೆ ಬೆಳಕಿಗೆ ಬಂದಿತು, ಹೆಂಗಸರ ಚಟಕ್ಕೆ ಕಲ್ಯಾಣಶೆಟ್ಟಿ ಯಾವ ಬೆಲೆ ತೆತ್ತ, ಆತನ ಹೆಂಡತಿಯು ಮಾಡಿದ ಉಪಾಯವೇನು, ಪೊಲೀಸ್ ಇನ್ಸ್‌ಪೆಕ್ಟರ್ ಜನರಿಗೆ ಹೇಗೆ ನೆರವಾದಳು ಎನ್ನುವುದನ್ನೆಲ್ಲ ಸೊಗಸಾಗಿ ಚಿತ್ರಿಸಿರುವ ಕಥೆ ಇದು.
ಜಾನಕಮ್ಮನ ಕೆರಿ
ಕಷ್ಟದಲ್ಲಿ ಬೆಳೆದ ಜಾನಕಮ್ಮನ ಮೊಮ್ಮಗ ಚಂದ್ರು ಆಕೆಯ ಕನಸಿನಂತೆ ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಾನೆ. ಸಮಾಜದ ಹಿತಕ್ಕೆ ಬದುಕುವ ಜಾನಕಮ್ಮ ಜತನದಿಂದ ಕಾದಿಟ್ಟ ಹಣ, ಒಡವೆಯನ್ನು ಮೊಮ್ಮಗ ಸಮಾಜಕ್ಕಾಗಿ ಬಳಸುವ ಕಥೆ ಇದು. ಹೊಲದಲ್ಲಿ ಬೋರ್ ಹೊಡೆಸಿದ, ಊರಿನಲ್ಲಿ ಶಾಲೆ, ಅಲ್ಲಿನ ಮಕ್ಕಳಿಗೆ ಬಟ್ಟೆ, ಪಾಟಿಚೀಲ ಕೊಟ್ಟ. ಕೆರೆ ತುಂಬಿತು ಮಳೆಯಿಂದ. ಕೆರೆ ನೀರಿಗೆ ಇಂಗುಗುಂಡಿ ಮಾಡಿದ. ಊರಿನ ರಾಜಣ್ಣ ಮಾಸ್ತರರು ಜಾನಕಮ್ಮನ ಆತ್ಮಚರಿತ್ರೆಯನ್ನು ಶಾಲಾ ಪಠ್ಯದಲ್ಲಿ ಬರುವಂತೆ ಮಾಡುತ್ತಾರೆ.
.......................

Comments
Post a Comment