ಸುಲಲಿತ ಕವಿತೆಗಳ  ಸಂಕಲನ


‘ಕಾವ್ಯಾಂಜಲಿ’ 


‘ಕಾವ್ಯಾಂಜಲಿ’  ಇದು ಅಡಿ ಬರಹವೇ ಹೇಳುವಂತೆ ಸುಲಲಿತ ಕವಿತೆಗಳ ಕೃತಿ. ಇದರ ಲೇಖಕಿ ಲಲಿತಾ ಬೆಳವಾಡಿ.  ಇದರಲ್ಲಿ ೧೦೧ ಕವನಗಳಿದ್ದು, ಇದು ಕವಯತ್ರಿಯ ಭಾವನೆಗಳೊಂದಿಗಿನ ಬದುಕಿನ ಅಂದ -ಚಂದವನ್ನು ಕಣ್ಮುಂದೆ ತಂದು ನಿಲ್ಲಿಸುವ ಸಂಕಲನ. ಸ್ತ್ರೀಪರ ಕಾಳಜಿ ಚಿಂತನೆಯನ್ನು ಒಳಗೊಂಡ ಅನೇಕ ಕವನಗಳು ಇದರಲ್ಲಿವೆ.

ಪ್ರಸ್ತುತ ಸ್ಥಿತಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳ ಅನಾವರಣವಿದೆ. ಕಣ್ಮರೆಯಾಗುತ್ತಿರುವ ಹಿಂದಿನ ವ್ಯವಸ್ಥೆ, ಮಹಿಳಾ ಅಸ್ಮಿತೆ, ತಂದೆ -ತಾಯಿ -ಮಕ್ಕಳ ಬಾಂಧವ್ಯ, ಪ್ರವಾಸ ಕಥನ, ಹಬ್ಬಗಳು, ನಮ್ಮ ಭಾಷೆ ಮುಂತಾದ ಪ್ರಕಾರದ ಸಂದೇಶಯುಕ್ತ ಕವನಗಳನ್ನು ಇಲ್ಲಿ ಕಾಣಬಹುದಾಗಿದೆ. ಪರಿಹಾರಾತ್ಮಕ ಪ್ರತಿಕ್ರಿಯೆಯೂ ಇದೆ. ಭುವಿಯ ಮೇಲಿನ, ಮಕ್ಕಳ ಪಾಲಿನ ದೇವತೆಯಾದ, ಕುಟುಂಬದ ಕಣ್ಣಾದ ತಾಯಿಯ ಕುರಿತಾದ ಇವರ ಗೌರವಾದರವು ಇಲ್ಲಿ ಕವನ ರೂದಪಲ್ಲಿ ಸೊಗಸಾಗಿ ವ್ಯಕ್ತಗೊಂಡಿದೆ. ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿ,  ಸಾಮರ್ಥ್ಯವು ಸಾಹಿತಿಗಿದೆ ಎನ್ನುವ ಮಾತನ್ನು ಇವರು ಕವನ ಮುಖೇನ ಇಲ್ಲಿ ಸಾಬೀತುಪಡಿಸಿದ್ದಾರೆ.

 ಈ ಸಂಕಲನದಲ್ಲಿ ಹಲವು ಕವನಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಅಂತಹವುಗಳಲ್ಲಿ ಕೆಲವನ್ನು ಗಮನಿಸುವುದಾದರೆ, ‘ಅಂಚೆ ಪತ್ರಗಳು’ ಎನ್ನುವ ಕವನದಲ್ಲಿ ಅಂಚೆ ಜೊತೆ ಜನರಿಗಿದ್ದ ಸಂಬಂಧವನ್ನು ಪ್ರಕಟಪಡಿಸಿದ್ದಾರೆ. ಅಂಚೆಯವನ ಜೊತೆ ಭಾವ ಸಂಬಂಧವಿತ್ತು ಎನ್ನುವುದನ್ನು ತೋರಿಸುತ್ತಾ, ಪತ್ರ ಬರುತ್ತದೆ ಎಂದು ಕಾಯುವ ಕೆಲಸವೇ ಪ್ರಿಯವಾಗಿತ್ತು. ಪತ್ರ ಬರೆಯುವ ತವಕವಿರುತ್ತಿತ್ತು. ಮುಂಚೆ ಪತ್ರಗಳೊಂದಿಗಿನ ರಾಗ , ಅನುರಾಗ, ರಾಜಿ, ಮುನಿಸು, ಕೋಪ, ತಾಪ ಎಲ್ಲವನ್ನೂ ಒಂದು ಹಾಳೆಯ ಮೇಲೆ ಬರೆಯಲಾಗುತ್ತಿತ್ತು ಅದರ ಬಣ್ಣದ ಚಿತ್ತಾರಗಳ ಭಾವನೆಗಳು ನಮ್ಮ ಮನಃಪಟಲದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ ಎನ್ನುತ್ತಾ, 

 ಡಿಜಿಟಲ್ ಬಂತು, ಎಲ್ಲವನ್ನೂ ಕಿತ್ತುಕೊಂಡಿತು

 ಟೈಪಿಸಿ ಅಳಿಸುವೆವು ಕ್ಷಣಕೊಂದು ಸಾಲುಗಳ

 ಹತ್ತಾರು ಬಾರಿ ಓದಿ ಅವಿತಿಟ್ಟ ಪತ್ರಗಳು ಇತಿಹಾಸ

 ಇಂದಿನ ಮಕ್ಕಳಿಗೆ ಪತ್ರದ ಸವಿ ಇಲ್ಲವಾಯಿತು

 ಎಂದು ವ್ಯಥೆ ಪಡುತ್ತಾರೆ. 

 ‘ನಮ್ಮ ಹೆಮ್ಮೆಯ ಕನ್ನಡ ನಾಡು’ ಎಂಬ ಕವಿತೆಯಲ್ಲಿ ಇಡೀ ಕನ್ನಡ ನಾಡಿನ ಸೊಬಗನ್ನು ಮತ್ತು ವೈಶಿಷ್ಟ್ಯತೆಯನ್ನು ಬಿಚ್ಚಿಟ್ಟಿದ್ದಾರೆ. ಇತಿಹಾಸ ಕಾಲದಿಂದ ಇಂದಿನವರೆಗಿನ ಪರಿಸ್ಥಿತಿಯನ್ನು ಸಂಪದ್ಭ್ಭರಿತವಾದ ಕನ್ನಡ ನಾಡಿನ ವೈವಿಧ್ಯತೆಯನ್ನು ಇಲ್ಲಿ ತೋರಿಸಿದ್ದಾರೆ. ವಿವಿಧ ಜಿಲ್ಲೆಗಳು ಹೇಗೆ ಹೆಸರುವಾಸಿಯಾಗಿವೆ, ಇಲ್ಲಿನ ದೇವಾಲಯಗಳು, ಅರಮನೆಗಳು, ಕೋಟೆಗಳು ತಮ್ಮ ಇತಿಹಾಸವನ್ನು ಸಾರುವುದರ ಜೊತೆಗೆ ಪ್ರಕೃತಿ ಸೌಂದರ್ಯಕ್ಕೆ ಮಲೆನಾಡು ಹೆಸರುವಾಸಿಯಾದುದ್ದನ್ನು ತೋರಿಸುತ್ತಾರೆ ಚನ್ನಪಟ್ಟಣದ ಚಂದದ ಗೊಂಬೆ, ಶೃಂಗೇರಿ, ಹೊರನಾಡು, ಮಲೆನಾಡ ಸೊಬಗು, ಮಡಿಕೇರಿಯ ಮಂಜು, ಆಗುಂಬೆಯ ಚೆಲುವು, ಕದಂಬರ ನಾಡು ಬನವಾಸಿ, ಪಟ್ಟದಕಲ್ಲು ಶಿಲ್ಪಿಗಳ ವಿಶ್ವವಿದ್ಯಾಲಯ, ಚಿತ್ರದುರ್ಗದ ಕಲ್ಲಿನ ಕೋಟೆ, ಜೋಗ ಜಲಪಾತದ ಅದ್ಭುತ ನೋಟ, ವಿಜಯನಗರ, ಮೈಸೂರಿನ ಅರಸರು ನಿರ್ಮಿಸಿದ ಭವ್ಯ ದೇವಾಲಯಗಳ ವರ್ಣನೆಯನ್ನು ಇಲ್ಲಿ ಕಟ್ಟಿಕೊಡುತ್ತಾ,

ರಾಮಾಯಣ, ಮಹಾಭಾರತ ನಡೆದ ತಾಣವಿದು,

ಪಂಪ, ರನ್ನ, ಕುಮಾರವ್ಯಾಸ ಬಸವಣ್ಣ, ಅಕ್ಕ

ಮೈಸೂರು, ವಿಜಯನಗರ ಒಡೆಯರು

ನಿರ್ಮಿಸಿದ ದೇವಾಲಯ, ಕಲೋಪಾಸಕರು, ಸಾಹಿತ್ಯೋಪಾಸಕರು ಎಂದು ಬರೆಯುತ್ತ್ತಾರೆ. 

 ‘ಹರಿಗೋಲಿಲ್ಲದ ಪಯಣ’ ಕವನದಲ್ಲಿ ಜೀವನದಲ್ಲಿ ಬರುವ ಕಷ್ಟ ಸುಖಗಳು ಮತ್ತು ಅವುಗಳನ್ನು ಎದುರಿಸಿ ಸಂತಸದಿಂದ ಹೇಗೆ ಬಾಳಬೇಕು ಎಂಬುದನ್ನು ಚಂದವಾಗಿ ವಿವರಿಸಿದ್ದಾರೆ. ಇಂದಿನ ಮಕ್ಕಳಿಗೆ ಕಷ್ಟ- ಸುಖದ ಬಗ್ಗೆ ಏನೂ ಗೊತ್ತಿಲ್ಲ. ಈಗ ಸಂಸಾರಕ್ಕೆ, ಮಕ್ಕಳ ಓದಿಗಾಗಿ ಸಾಲ ಮಾಡಬೇಕಿದೆ. ಸಾಲ ಮಾಡಿ ಅವಮಾನಪಡುವ ಕಾಲವಿದು. ಮಕ್ಕಳೇ ಆಧಾರವೆಂದು ಬೆಳೆಸಿದರೆ ಮುಂದೆ ಅವರೇ ತಂದೆ ತಾಯಿಯನ್ನು ತುಳಿಯುವಂತ ಸ್ಥಿತಿಯಿದೆ. ಇಂತಹ ಸಮಾಜ ಎದುರಿಸುತ್ತಾ ಜೀವನ ಸಾಗಿಸುವುದು ಕಷ್ಟವಾಗಿದೆ ಎನ್ನುತ್ತಾ,

 ಹರಿಗೋಲಿಲ್ಲದ ಪಯಣದಲು ಬದುಕುವ ಛಲವಿದೆ

 ಒಂಟಿ ಬದುಕಿನಲು ಸ್ವತಂತ್ರ ಜೀವನದ ಉತ್ಸಾಹವಿದೆ

 ಇರುವವರೆಗೂ ಸಂತಸದಿ ಸಾಗಿಸೋಣ ಕೊನೆಯ ಬದುಕ

 ಎಂದು ಹೇಳುತ್ತಾರೆ.

 ‘ಹಳ್ಳಿ ಶಾಲಾ ಮಕ್ಕಳು’ ಎನ್ನುವ ಕವನದಲ್ಲಿ ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ಬಗ್ಗೆ ಬರೆಯುತ್ತಾ, ಶಿಕ್ಷಕರ ಮತ್ತು ಸಮಸ್ಯೆಯನ್ನು ಬಿಚ್ಚಿಡುತ್ತ ಸಮಸ್ಯೆಯನ್ನು ಕೇಳುವವರು ಯಾರೂ ಇಲ್ಲ. ಇವರಿಗೆ ಖಾಸಗಿಯಂತೆ ಶಾಲಾ ವಾಹನವಿಲ್ಲ, ಕಾಲ್ನಡಿಗೆಯಲ್ಲಿಯೇ ಸಾಗಬೇಕು. ಆದರೆ ಹೊಂದಾಣಿಕೆ ಅವರಲ್ಲಿದೆ. ಅಮ್ಮ ಕೊಟ್ಟ ಬುತ್ತಿಯನ್ನು ಹಂಚಿ ತಿನ್ನುವ ಬುದ್ಧಿ ಇದೆ. ಬಡವ, ಶ್ರೀಮಂತ ವ್ಯತ್ಯಾಸ ಗೊತ್ತಿಲ್ಲ. ಮಗ್ಗಿಯನ್ನು ಆಡುತ್ತಲೇ ಕಲಿಯುವ ಕೌಶಲ್ಯವಿದೆ. ಯಾವುದೇ ಸೌಲಭ್ಯವಿಲ್ಲದೆ ಶಿಕ್ಷಕರು ಸಹ ಹಳ್ಳಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ. 

ಹರಿಸಬೇಕು ಗಮನ ಹಳ್ಳಿಶಾಲೆಗಳ ಮೇಲೆ 

ಆದರೂ ಸರ್ಕಾರಿ ಮಕ್ಕಳದೇ ರ್‍ಯಾಂಕ್ ಲಿಸ್ಟ್

 ಎಂದು ಬರೆಯುತ್ತಾರೆ.

  ‘ಬದಲಾಯಿತು ಕಾಲ’ ಎಂಬ ಕವನದಲ್ಲಿ  ಅಂತರ್ಜಾಲದಿಂದ ಜಗತ್ತು, ಹೇಗೆ ಬದಲಾಗಿದೆ ಎನ್ನುವುದನ್ನು ತೋರಿಸುತ್ತಾರೆ ಹಿಂದೆಲ್ಲ ಚೀಟಿಕೊಟ್ಟು ಅಂಗಡಿಯಿಂದ ಉದ್ರಿಯ ಮೂಲಕ ಕಿರಾಣಿ ತರಲಾಗುತ್ತಿತ್ತು. ಅಪ್ಪ ಕೊಡುವ ಬಟ್ಟೆಯಲ್ಲೇ ಸಂಭ್ರಮವಿತ್ತು. ಇಂದಿನಂತೆ ಮಾಲ್ ಇರಲಿಲ್ಲ. ದುಬಾರಿ ಬಟ್ಟೆಗಳನ್ನು ತರುತ್ತಿರಲಿಲ್ಲ. ಕೆಮ್ಮು, ಕಿವಿ ನೋವು, ನೆಗಡಿ, ಶೀತ ಎಲ್ಲದಕ್ಕೂ ಅಮ್ಮನ ಕಷಾಯವೇ ಔಷಧಿಯಾಗಿತ್ತು. ಎಣ್ಣೆ ನೀರಿನ ಸ್ನಾನ ಇಂದಿನ ಶಾಂಪೂಗೆ ಸ್ಪರ್ಧಿಯಾಗಿದೆ. ಕಣ್ಣಾಮುಚ್ಚಾಲೆ ಮನದುಂಬಿ ಆಡುತ್ತಿದ್ದರು. ಸರ್ಕಾರಿ ಗ್ರಂಥಾಲಯದ ಮೂಲಕ ಕಾದಂಬರಿಯ ಹುಚ್ಚು ಬೆಳೆದಿತ್ತು. ವಾರಪತ್ರಿಕೆಗಾಗಿ ಜನರು ಕಾಯುತ್ತಿದ್ದರು. ಮನೆಯಲ್ಲಿ ಅಮ್ಮ ಮಾಡುತ್ತಿದ್ದ ತಿಂಡಿಯೇ ಸ್ವಾದಿಷ್ಟವಾಗಿತ್ತು. ಆದರೆ ಈಗ ಎಲ್ಲವೂ ಅಂತರ್ಜಾಲದ ಕರಾಮತ್ತಾಗಿದೆ. ಸೌಲಭ್ಯಗಳು ಸಹ ಅತಿ ಸುಲಭದಲ್ಲಿ ಸಿಗುವ ಮೂಲಕ ನಮ್ಮ ಮನಸ್ಸಿನ ಭಾವನೆಯನ್ನು ಬದಲಿಸುವುದರ ಜೊತೆಗೆ ಕಾಲವನ್ನೂ ಬದಲಿಸಿವೆ ಎಂದು ಹೇಳುತ್ತಾರೆ.

 ಇದಕ್ಕೆ ಸಮನಾದ ಇನ್ನೊಂದು ಕವನ  ‘ಆ ಕಾಲವೊಂದಿತ್ತು’. ಇಂದು ಆಂಗ್ಲ ಮಾಧ್ಯಮ ಶಾಲೆ ಎಲ್ಲ ಕಡೆ ದಾಳಿ ಇಟ್ಟಿದೆ. ಕನ್ನಡ ಮಾತು ಬೇಡವಾಗಿದೆ. ಪ್ರತಿಷ್ಠೆಯ ಹೆಸರಿಗೆ ಮಕ್ಕಳು ಆಂಗ್ಲ ಭಾಷೆಯ ಶಾಲೆಗೆ ಹೋಗುತ್ತಿದ್ದಾರೆ. ಅಪ್ಪ-ಅಮ್ಮ ದೂರವಾಗಿ ಮಮ್ಮಿ, ಡ್ಯಾಡಿ ಬಂದು ಕೂತಿದ್ದಾರೆ. ಮೊದಲು ಮನೆಯೇ ಮೊದಲ ಪಾಠಶಾಲೆಯಾಗಿತ್ತು. ಅಪ್ಪ ಮಗ್ಗಿ ಪಾಠ ಹೇಳಿದರೆ, ಅಜ್ಜ- ಅಜ್ಜಿ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದರು. ವಚನಗಳನ್ನು ಹೇಳಿಕೊಡುತ್ತಿದ್ದರು. ಈಗ ಸಂಸ್ಕೃತಿ ದೂರವಾಗುತ್ತಿದೆ. ನಾವೆಲ್ಲರೂ ಮಕ್ಕಳಿಗೆ ಕನ್ನಡದ ಹಿರಿಮೆಯನ್ನು ವಿವರಿಸಿ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ಕೊಡುತ್ತಾರೆ.

 ‘ನಮ್ಮೂರ ಜಾತ್ರೆ’ ಕವನ ನೆನೆಪನ್ನು ಮರುಕಳಿಸುವಂತದ್ದು. ಕುಟುಂಬದವರು ಒಟ್ಟಾಗಿ ಜಾತ್ರೆಗೆ ಹೋಗುತ್ತಿದ್ದರು. ಮನೆಗೆ ನೆಂಟರು ಬರುತ್ತಿದ್ದರು. ಅವರ ಜೊತೆ ಹಬ್ಬದ ವಾತಾವರಣ ಇತ್ತು, ಸಂತಸದಿಂದ ಕಳೆಯುವುದಾಗುತ್ತಿತ್ತು. ಜಾತ್ರೆಯಲ್ಲಿ ಕೋತಿಯ ಆಟ, ಸೋಮನ ಕುಣಿತ, ಎಲ್ಲರೂ ಸೇರಿ ಶಾಪಿಂಗ್ ಮಾಡುವುದು, ನಡೆದುಕೊಂಡು ಜಾತ್ರೆಗೆ ಹೋಗುವುದು, ಬಣ್ಣ ಬಣ್ಣದ ಆಟಿಕೆಗಳನ್ನು ಖರೀದಿಸಿ ತರುವುದು ಸಂತೋಷದ ಸಂಗತಿಯಾಗಿತ್ತು. ಆದರೆ ಈಗ ಯಾಂತ್ರಿಕ ಬದುಕಿಗೆ ಸಿಲುಕಿದ ಮನುಷ್ಯ ವೈಭೋಗದ ಹಿನ್ನೆಲೆಯಲ್ಲಿ ಜಾತ್ರೆಯ ನೆನಪನ್ನು ಮರೆಯುತ್ತಿದ್ದಾನೆ ಎಂದು ಹಿಂದಿನ ಸಂಭ್ರಮವನ್ನು ನೆನಪಿಸುತ್ತಾರೆ

‘ ಯೋಧನ ಮಗು’ ಕವನದಲ್ಲಿ  ಮುಗ್ಧ ಮಗುವನ್ನು ಅಪ್ಪ ಮುದ್ದಾಡಿ  ದೇಶ ಕಾಯಲು ಹೋಗುವುದು, ತಾಯಿಗೆ ಉಕ್ಕುವ ದುಃಖ, ಕಣ್ಣಂಚಲಿ ನೀರು ತರಿಸುತ್ತದೆ.

 ದೇಶವಿಹುದು ಅಪ್ಪನ ರಕ್ಷಣೆಗೆ/ ನಿನ್ನ ರಕ್ಷಣೆಗೆ ನಾನಿರುವೆ ಎಂದು ಹಾಡುತ್ತಾಳೆ.

‘ಪಾಳು ಬಿದ್ದ ಮನೆಯ ಸ್ವಗತ’ ಕವನ ಪೂರ್ವಜರು ಕಟ್ಟಿದ ಬೃಹತ್ ಮನೆಯ ಇಂದು ವಾಸಿಸುವವರಿಲ್ಲದೆ ಪಾಳುಬಿದ್ದ ಬಗ್ಗೆ ಇದೆ. ‘ಹಿತ್ತಲು’ ಎಂಬ ಕವನ ಒಂದಡಿ ಜಾಗವನ್ನು ಬಿಡದೆ ಮನೆ ಕಟ್ಟುವ ಈಗಿನವರು ಹಿತ್ತಲು ಎಂಬ ಪದವನ್ನೇ ಕಿತ್ತೊಗೆದಿದ್ದಾರೆ ಎನ್ನುತ್ತಾರೆ. ‘ತಿರುಗದ ಭೂಮಿಯಲ್ಲಿ’  ಎಲ್ಲ ಭಾರವ ಹೊತ್ತು ಭೂಮಿ ತಿರುಗುತ್ತಿದೆ. ಆದರೆ ತಿರುಗುತ್ತಿರುವ ಭೂಮಿಯ ಮೇಲೆ ತಿರುಗದಾ ಅಮ್ಮ ಎನ್ನುತ್ತಾರೆ. ‘ಮೊಮ್ಮಗಳು’ ಕವನದಲ್ಲಿ  ಎಲ್ಲ ಆಸ್ತಿ-ಪಾಸ್ತಿಯನ್ನು ಮಕ್ಕಳು, ಮೊಮ್ಮಕ್ಕಳಿಗೆ ಬರೆಯುವ ಇಂದಿನ ಕಾಲದಲ್ಲಿ ಅಜ್ಜಿಯೊಬ್ಬಳು ‘ಅಜ್ಜಿಯ ಪುಸ್ತಕಕೆ ನೀನೇ ವಾರಸುದಾರಿಣಿ’ ಎಂದು ಮೊಮ್ಮಗಳಿಗೆ ಹೇಳುತ್ತಾರೆ. ‘ಗುಬ್ಬಚ್ಚಿ’ ಎಂಬ ಕವನದಲ್ಲಿ ‘ನಿನ್ನ ಬಳಗವ ಕಾಣಲು ಮನಸು ಮತ್ತೆ ಆಶಿಸುತಿದೆ’ ಎಂದು ಹೇಳುತ್ತಾರೆ.

 ಒಟ್ಟಿನಲ್ಲಿ,  ಇಲ್ಲಿನ ಕವಿತೆಗಳೆಲ್ಲಾ ನಮ್ಮನ್ನು ಸೆಳೆಯುತ್ತವೆ. ಓದಿಸಿಕೊಂಡು ಹೋಗುತ್ತವೆ. ಗತಕಾಲದ ನೆನೆಪಿನ ಸುರುಳಿಯನ್ನು ಬಿಚ್ಚಿಡುತ್ತವೆ ಅತ್ಯುತ್ತಮ ಸಂದೇಶ ಈಗಿನ ಮಕ್ಕಳಿಗೆ ಇದರಲ್ಲಡಗಿದೆ. ಕವಯತ್ರಿಯ ವೈಚಾರಿಕ ಪ್ರಜ್ಞೆ , ಸುಂದರ ಅನುಭವ,  ಪ್ರಚಲಿತ ವಿದ್ಯಮಾನಗಳ ಕುರಿತ ನಿಲುವು ಮನಸೆಳೆಯುತ್ತದೆ. 

ಆದರೆ, ಸಾಕಷ್ಟು ತಪ್ಪು ಅಕ್ಷರಗಳು ಬಹುತೇಕ ಕವನಗಳಲ್ಲಡಗಿದೆ. ಇದು ಓದುವಾಗ ಅಭಾಸ ಎನಿಸುತ್ತಿದೆ.  


Comments

Popular posts from this blog