ಒಬ್ಬರಲ್ಲಿ ಮತ್ತೊಬ್ಬರ ಬಿಂಬ ಹುಡುಕುವ
‘ಚೂರು ಬಿಂಬ ’
ರಂಗಭೂಮಿ ನಿರ್ದೇಶನ ಮತ್ತು ಡ್ರಮಟರ್ಜಿ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಉತ್ತರ ಕರ್ನಾಟಕ ಮೂಲದ ದಾದಾಪೀರ್ ಜೈಮನ್ ಪ್ರಸ್ತುತ ‘ಚೂರು ಬಿಂಬ’ ಕಥಾ ಸಂಕಲನದ ಲೇಖಕರು. ಇಲ್ಲಿನ ಎಲ್ಲಾ ೧೧ ಕಥೆಗಳಲ್ಲಿ ಜೊತೆಗೆ ಎಲ್ಲಾ ಪಾತ್ರಗಳಲ್ಲಿ ಚೂರುಬಿಂಬ ಕಾಣಿಸುತ್ತಾರೆ. ಒಬ್ಬರಲ್ಲಿ ಮತ್ತೊಬ್ಬರ ಬಿಂಬವನ್ನು ಹುಡುಕುವ ಕಥೆಗಳಿವು. ಮನುಷ್ಯ ತನ್ನನ್ನು ತಾನು ಬಿಂಬದಲ್ಲಿ ಕಂಡುಕೊಳ್ಳುವ, ತನ್ನಂತೆಯೇ ಇರುವ ಮನುಷ್ಯರಲ್ಲಿ ತನ್ನ ಬಿಂಬವನ್ನೇ ಕಂಡರೂ ವ್ಯತಾಸ ಕಂಡುಬರುವ ಅಂಶಗಳು ಇದರಲ್ಲಿವೆ. ಅಂದರೆ ಬಿಂಬದ ಚೂರನ್ನು ಹೊಳೆಯಿಸುವ ಪಾತ್ರಗಳು ಈ ಸಂಕಲನದಲ್ಲಿ ಬರುತ್ತವೆ. ಮನುಷ್ಯ ಮತ್ತು ಬಿಂಬದ ತಾಕಲಾಟವೇ ಕಥೆಗಳ ಸಾರಾಂಶ.
ಬದಲಾಗುತ್ತಲೇ ಇರುವ ಭಾರತದ ಭಾವನಾತ್ಮಕ ಮತ್ತು ಮಹತ್ವಪೂರ್ಣ ಚಿತ್ರಣ ಇಲ್ಲಿನ ಕಥೆಗಳಲ್ಲಿದೆ. ಪ್ರೀತಿ, ಲೈಂಗಿಕತೆ, ಸ್ನೇಹ ಮತ್ತು ಲಿಂಗತ್ವದ ಕಥೆಗಳು ಇಲ್ಲಿವೆ. ಜೊತೆಗೆ ಇವುಗಳ ಕ್ರೌರ್ಯ ಮತ್ತು ಮೃದುತ್ವವನ್ನೂ ತೆರೆದಿಟ್ಟಿದ್ದಾರೆ. ಯುವಜನರ ಸಂಕೀರ್ಣತೆಯನ್ನು ಅನ್ವೇಷಿಸುವ ಕಥಾ ಸಂಕಲನ ಇದಾಗಿದೆ. ಕಥೆಗಳ ಭಾಷೆ, ತಂತ್ರ ಚೆನ್ನಾಗಿ ಬೆಸೆದುಕೊಂಡಿದ್ದರಿಂದ ಕಥೆಗಳು ಸುಂದರವಾಗಿ ಕುಸುರಿಗೊಂಡಿವೆ.
ಅಪ್ಪನ ಕತ್ತರಿ
ಅಪ್ಪನ ಮೇಲೆ ದ್ವೇಷವಿದ್ದ ಕಥಾನಾಯಕ ಅಪ್ಪನನ್ನು ಕಂಡರೆ ರೋಷದಿಂದ ಉಕ್ಕುತ್ತಿದ್ದ. ಅಪ್ಪ ತನ್ನ ಶೇವಿಂಗ್ ಕಿಟ್‌ನಲ್ಲಿರುವ ಕತ್ತರಿಯಿಂದ ಮಗನನ್ನು ಬೆದರಿಸುತ್ತಿದ್ದನು. ಮನೆಗೆ ಬರುವಾಗ ದಾರಿ ತಪ್ಪಿದರೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಿದ್ದನು. ಒಂದು ದಿನ ಬೈಕ್ ಸವಾರನೊಬ್ಬ ವೇಗವಾಗಿ ಬಂದು ಇನ್ನೊಂದು ಬೈಕ್ ಸವಾರನ ಕುತ್ತಿಗೆಗೆ ಕತ್ತರಿಯಿಂದ ಸೀಳಿ ಹೋಗುತ್ತಾನೆ. ಇದನ್ನು ನೋಡಿ ಕಥಾನಾಯಕ ಹೆದರಿ ಮುಂದೆ ನಡೆಯುತ್ತಾನೆ. ಆಗ ಅವನಿಗೆ ಅಪ್ಪ ಕತ್ತರಿ ಹಿಡಿದು ಹೆದರಿಸುತ್ತಿದ್ದರ ಪ್ರತಿಬಿಂಬ ನೆನಪಾಗುತ್ತದೆ. ಮನೆಗೆ ಹೋದ ನಂತರ ಸ್ನಾನದ ರೂಮಿನಲ್ಲಿ ನಿಂತು ಮೈಮೇಲೆ ನೀರನ್ನು ಹಾಕಿಕೊಳ್ಳುವಾಗಲೂ ಅಪ್ಪನ ಹಿಂಸೆಯ ಬಿಂಬ ಕಾಣುತ್ತದೆ.
ಕಡು ನೀಲಿ ಅಂಗಿ
ಈ ಕತೆಯಲ್ಲಿ ಅತಿರೇಕಗಳನ್ನು ನಂಬುವ ಜನರು ಪರರನ್ನು ಕೆಟ್ಟವರು ಎಂಬಂತೆ ಬಿಂಬಿಸುವುದು, ಅವರ ಬಗ್ಗೆ ಮಾತುಗಳಲ್ಲಿ ಆಡಿ ಬಾಯಿ ಚಪಲ ತೀರಿಸಿಕೊಳ್ಳುವುದು, ಕಷ್ಟಪಟ್ಟು ದುಡಿದು ಬದುಕನ್ನು ಕಟ್ಟಿಕೊಳ್ಳಬೇಕೆಂಬ ಬಡಿದಾಟ ಮಾಡಿದವನಿಗೆ ಎದುರಾಗಿದ್ದ ಒಂದು ಸುಳ್ಳು ಆಪಾದನೆಯಿಂದ ಕಣ್ಣುಗಳಲ್ಲಿ ಭಯ, ಅಸಹಾಯಕತೆ ಮೂಡುವುದರ ಬಗ್ಗೆ ಇದೆ. ರಾಯಪ್ಪ ಮತ್ತು ಆತನ ರೂಮ್‌ಮೇಟ್ ಯೂಸುಫ್‌ಗೆ ಸಹಪಾಠಿ ಮಾಡಿದ ಸಂಚು ಎಂದು ಗೊತ್ತಾಗುವುದು, ರಾಯಪ್ಪ ಪಿಜಿ ಬಿಟ್ಟು ಹೋಗುವ ಮುನ್ನ ಯುಸೂಫ್‌ಗೆ ತನ್ನ ಕಡು ನೀಲಿ ಶರ್ಟನ್ನು ಕೊಟ್ಟು ಇದು ನನ್ನ ನೆನಪಿಗೆ ಇರಲಿ, ನಿನಗೆ ಚೆನ್ನಾಗಿ ಕಾಣುತ್ತದೆ ಎಂದು ಹೇಳಿ ಬೀಳ್ಕೊಟ್ಟು ಹೋಗುತ್ತಾನೆ.
ತಾಹಾನ ಪತ್ರಗಳು
ಇಬ್ಬರು ಸ್ನೇಹಿತರ ನಡುವಿನ ಪತ್ರಗಳ ವಿನಿಮಯದ ಕಥೆ ಇದು. ಭಾವಪೂರ್ಣ, ಪ್ರಾಮಾಣಿಕ, ಹೃದಯಾಳದ ಮೆಚ್ಚುಗೆ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ವಿನಿಮಯ ಇದಾಗಿರುತ್ತದೆ. ಅವರ ಯೌವ್ವನ ಮತ್ತು ಅದನ್ನು ಘಾಸಿಗೊಳಿಸಿದ ಆಂತರಿಕ ಮತ್ತು ಪಂಥೀಯ ಕ್ರೌರ್ಯಗಳ ಮರುಜೀವಿಸುವಿಕೆ ಇದರಲ್ಲಿದೆ.
ಅಂತಃಕರಣದ ಟಿಪ್ಪಣೆಗಳು
ದಂಪತಿಗಳಿಗೆ ಇಂಟರ್ ಸೆಕ್ಸ್ ಕಿಡ್ಸ್‌ಗಳಿಬ್ಬರು ಜನಿಸುವುದು, ಅವರಲ್ಲಿ ಒಬ್ಬಳನ್ನು ಹೆಣ್ಣಾಗಿ, ಇನ್ನೊಬ್ಬನನ್ನು ಗಂಡಾಗಿ ಶಸ್ತ್ರಚಿಕಿತೆ ಮೂಲಕ ಮಾಡುವುದು, ಇದು ಗೊತ್ತ್ತಾದ ನಂತರ ಹುಡುಗಿ ತನ್ನನ್ನೇಕೆ ಹೆಣ್ಣಾಗಿಸಿದ್ದು, ತಮ್ಮನನ್ನೇಕೆ ಹುಡುಗನ್ನಾಗಿಸಿದ್ದು ಎಂದು ಮನೆಗೆ ಬಂದಿದ್ದ ವೈದ್ಯರನ್ನೇ ಪ್ರಶ್ನಿಸುವುದು, ಮಗ ಮದುವೆಯೇ ಬೇಡ ಎಂದು ಮನೆ ಬಿಟ್ಟು ಹೋಗುವುದು, ಇದಕ್ಕೂ ಮುನ್ನ ತನ್ನ ಡೈರಿಯಲ್ಲಿ ‘ನಾವು ಏನಾಗಬೇಕೆನ್ನುವ ನಿರ್ಧಾರ ತೆಗೆದುಕೊಳ್ಳಲು ಬಿಡಲಿಲ್ಲ. ನಿಮ್ಮ ಕೈಯಲ್ಲಿ ಆಡುವ ರಾಜಕೀಯದ ಗೊಂಬೆ ನಾನಲ್ಲ. ಐ ಹೇಟ್ ಯು’ ಎಂದು ಬರೆದಿಟ್ಟಿರುವುದು ಬೆಳಕಿಗೆ ಬರುತ್ತದೆ.
ಆವರ್ತನ
ನಸುಕಿನಲ್ಲಿ ಪಾರ್ಕಿಗೆ ಹೋದಾಗ ಕಾಣುವ ಬೆಕ್ಕು, ಮುದುಕನೊಬ್ಬ ಗಿಡದ ಎಲೆಯ ಕಸವನ್ನೆಲ್ಲ ಕಸ ಹೊಡೆಯುವುದು ಕಂಡುಬರುತ್ತದೆ. ಆದರೆ ಬೆಳಕು ಹರಿದಂತೆ ಇದ್ಯಾವುದೂ ಇರುವುದೇ ಇಲ್ಲ. ಇದರಂತೆ ರಾತ್ರಿ ಕನಸಿನಲ್ಲಿ ಬಂದ ಮಹಿಳೆ ಬಸ್ಸಿನಲ್ಲಿ ಪಯಣಿಸುವಾಗ ತನ್ನ ಮುಂದಿನ ಸೀಟಿನಲ್ಲಿ ಕುಳಿತಂತೆ ಕಾಣುವುದು, ಬಸ್ಸಿಳಿದು ಹೋಗುವ ಆಕೆಯನ್ನು ಹಿಂಬಾಲಿಸುವಾಗ ಆಕೆ ‘ಮಿಯಾಂವ್ ಎನ್ನುವುದು, ಕನಸಲ್ಲಿ ಕೇಳಿದ ಟ್ರಿಣ್ ಟ್ರಿಣ್ ಸೈಕಲ್ ಬೆಲ್ ಕೂಡ ಬಸ್‌ನಿಂದ ಇಳಿದು ಹೋಗುವಾಗ ಕೇಳುತ್ತದೆ. ಹೀಗೆ ಭ್ರಮಾಲೋಕದಲ್ಲಿ ಬದುಕುವವನ ಕಥೆ ಇದು.
ನದಿ
ಹರಿಯುವ ನದಿ ಜಾಗವನ್ನು ತನ್ನದಾಗಿಸಿಕೊಳ್ಳುತ್ತಾ ಸಾಗಬೇಕು. ಹಾಗೆ ಆಗದೇ ಹೋದಲ್ಲಿ ಅದು ನದಿಯಾಗಲಾರದು. ಮನುಷ್ಯರೂ ಸಹ ತಾವು ಯಾವ ವೃತ್ತಿ, ಕೆಲಸವನ್ನೇ ಮಾಡಲಿ, ಅದರಲ್ಲಿ ತಾವು ಸಾಗಬೇಕು. ಮಗ್ನವಾಗಿಸಬೇಕು. ಹರಿಯುವ ಗುಣ ನಮ್ಮದಾಗಬೇಕೆನ್ನುವ ಸಂದೇಶವನ್ನು ಈ ಕಥೆ ಸಾರುತ್ತದೆ.
ಮುನ್ನಿ
ಸಣ್ಣೂರು ಎಂಬ ಹಳ್ಳಿಯಲ್ಲಿ ವಾಸವಾಗಿದ್ದ ಮುನ್ನಿ ಹುಟ್ಟಿದಾಗಿನಿಂದ ರೊಟ್ಟಿ ಬಡಿ, ಗಂಡನ ಪಡಿ, ಮಕ್ಕಳ ಹಡಿ, ಕೊನೆಗೊಂದು ದಿನ ಎಲ್ಲಾ ಬಿಟ್ಟು ಮಣ್ಣಿಗೆ ನಡಿ ಎಂಬಂತೆ ತನ್ನ ಬದುಕನ್ನು ಸಾಗಿಸಿದವಳು. ಗಂಡ ಒಂದು ತಿಂಗಳಿಂದ ಹಾಸಿಗೆ ಹಿಡಿದಿದ್ದ. ಅದು ಸಾವಿನ ಸೂಚನೆ ಎಂದು ಆಕೆ ನಂಬಿಕೊಂಡಿದ್ದಳು. ಗಂಡ ಉಳಿಯುವುದಿಲ್ಲ ಎಂದು ಆಕೆಗೆ ಅನಿಸಿದ್ದಾಗಲೇ ಕಣ್ಣುರೆಪ್ಪೆ ಆಗಾಗ ಹೊಡೆದುಕೊಳ್ಳುತ್ತಿತ್ತು. ಒಂದು ದಿನ ಮುನ್ನಿ ಪೇಟೆಗೆ ಹೋಗಿ ಮೊಮ್ಮಗಳು ಯಮುನಿಗೆ ಬಟ್ಟೆ ಮತ್ತು ಚಪ್ಪಲಿಯನ್ನು ಕೊಡಿಸಿ ಮನೆಗೆ ಬರುವ ಹೊತ್ತಿಗೆ ಗಂಡ ನಿಧನನಾಗಿದ್ದನು.
ಮಣ್ಣಂಗಟ್ಟಿ
ಕವಿತೆಯಿಂದ ಏನಾಗುತ್ತದೆ ಮಣ್ಣಂಗಟ್ಟಿ ಎಂದು ಕೆಲವರು ಹೇಳುತ್ತಾರೆ. ಆದರೆ ಕವಿತೆ ಎಂದರೆ ತನ್ನೊಳಗೆ ಎಲ್ಲವನ್ನೂ ಅಡಗಿಸಿಟ್ಟುಕೊಳ್ಳುವ ತಾಕತ್ತಿರುವ ಒಂದು ನಿಗೂಢ ಕತ್ತಲ ಗರ್ಭದಂತೆ. ಒಮ್ಮೆ ಕಪ್ಪು ಬಿಳುಪು ಚಿತ್ರದಂತೆ ಮತ್ತೊಮ್ಮೆ ಮರುಭೂಮಿಯ ಓಯಸಿಸ್‌ನಂತೆ. ಒಂದೊಂದು ಸಲ ಒಂದೊಂದು ಚಿತ್ರದ ಹಾಗೆ ಕಾಣುವ ಕೆಲಿಡೋಸ್ಕೋಪಿನ ಹಾಗೆ. ಎಲ್ಲೋ ಒಂದು ಕಡೆ ಕವಿತೆ ಮೆಲ್ಲಗೆ ಉಸಿರಾಡುವ ಹಾಗೆ. ಅದು ಜನರ ಅನುಭವಗಳನ್ನು ಹೀರಿಕೊಂಡಿದ್ದು. ಚಳವಳಿಗಳಲ್ಲಿ, ಗಾರ್ಮೆಂಟ್ ನೌಕರರ ಹೋರಾಟಗಳಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಕವಿಗಳು ಸ್ಪಂದಿಸಬೇಕು. ಆಗ ಬರೆದ ಕವಿತೆಗೆ ಅರ್ಥವಿರುತ್ತದೆ ಎನ್ನುವುದನ್ನು ಇಲ್ಲಿ ಲೇಖಕರು ವಿವರಿಸಿದ್ದಾರೆ.
ಸ್ವಿಗ್ಗಿ ಹುಡುಗಿ
ಕಾರು ಮತ್ತು ಬೈಕ್ ಮಧ್ಯೆ ಅಪಘಾತವಾದಾಗ ಕಾರಿನೊಳಗಿದ್ದ ಹುಡುUರಿಬ್ಬರು ಬೈಕಿನಲ್ಲಿದ್ದ ಹುಡುಗಿಯರಿಬ್ಬರ ಜೊತೆ ಗಲಾಟೆ ಮಾಡುತ್ತಾರೆ. ಬೈಕಿನಲ್ಲಿದ್ದವರು ಸ್ವಿಗ್ಗಿ ಹುಡುಗಿಯರು. ಘಟನೆ ಸಂಬಂಧ ಹುಡುಗಿಯರು ಪೊಲೀಸ್ ಠಾಣೆಗೆ ಹೋಗುವಾಗ ಹೋಗುವಾಗ ಕಾರಿನಲ್ಲಿದ್ದ ಹುಡುಗರು ಅಲ್ಲಿಂದ ಪರಾರಿ ಆಗುತ್ತಾರೆ. ಆ ಹುಡುಗಿಯರು ಅನುಭವಿಸಿದ ಅನಾಥ ಭಾವವನ್ನು ನೋಡಿದ ಲೇಖಕರು ಕೆಂಪು ಟೀ ಶರ್‍ಟ್‌ನ ಸ್ವಿಗ್ಗಿ ಹುಡುಗಿಯನ್ನು ಗಮನಿಸುತ್ತಾರೆ. ಇದಾದ ಮೂರು ತಿಂಗಳ ಬಳಿಕ ಲೇಖಕರು ಮತ್ತು ಅವರ ಮಿತ್ರರು ರೆಸಾರ್ಟಿಗೆ ಹೋದಾಗ ಈ ಹುಡುಗಿ ಆಹಾರ ಪೂರೈಸುವ ಕೆಲಸವನ್ನು ಅಲ್ಲಿ ಮಾಡುತ್ತಾಳೆ. ಈಕೆ ನೆನಪು ಅವರನ್ನು ಇರಿಯುತ್ತದೆ, ಕೆಣಕುತ್ತದೆ. ರೆಸಾರ್ಟ್ ಬಿಟ್ಟು ಹೊರಡುವ ದಿನ ಕಾಫಿ ಆರ್ಡರ್ ಮಾಡಿದಾಗಲೂ ಅದೇ ಹುಡುಗಿ ಕಾಫಿ ತಂದು ಕೊಡುತ್ತಾಳೆ.
ಅಚ್ಚು
ಗುಣಸ್ವಭಾವ, ರೂಪ, ಅಂದುಕೊಂಡ ಕೆಲಸ ಮಾಡುವುದರಲ್ಲಿ ಲಚ್ಚು ಅಮ್ಮನ ಪಡಿಯಚ್ಚಿನ ಮಗಳು. ಗಂಡನ ಮನೆಗೆ ಹೋದ ನಂತರವೂ ಹೊಂದಾಣಿಕೆಯ ಎಳೆಯನ್ನು ಪೋಣಿಸಿ ಅತ್ತೆ, ಮಾವ, ಗಂಡನನ್ನು ಹಾರ ಮಾಡಿಕೊಂಡಿದ್ದಳು. ಕನಸಲ್ಲಿ ಅಮ್ಮನ ನೆರಳು ಲಚ್ಚುವನ್ನು ಆವರಿಸಿಕೊಳ್ಳುತ್ತದೆಯಾದರೂ ಅಂತ್ಯದಲ್ಲಿ ಅತ್ತೆ, ಅಮ್ಮ, ಮಾವ ಗಂಡ ಎಲ್ಲರ ನೆರಳನ್ನೂ ಈಕೆ ಹೊಂದುತ್ತಾಳೆ.
ಬಿಂಬದ ಬೆಳಕಿನ ಹಾದಿ
ಕಾದಂಬರಿ ಪ್ರಶಸ್ತಿ ಆಯ್ಕೆ ಮಾಡುವಲ್ಲಿ ನಡೆಯುವ ಮಾನದಂಡ ಮತ್ತು ಒತ್ತಡಗಳ ಕುರಿತಾದ ಕಥೆ ಇದು. ನಿರ್ಣಾಯಕರೊಬ್ಬರು ಪ್ರಶಸ್ತಿ ನೀಡುವ ತೀರ್ಮಾನದ ಮೇಲಿನ ಪ್ರಭಾವ ಮತ್ತು ವಾಸ್ತವತೆಯನ್ನು ಎದುರಿಸುತ್ತಾರೆ. ಒಬ್ಬ ಲೇಖಕಿಯ ಕಾದಂಬರಿ ಅವರಿಗೆ ತೀರಾ ಆಪ್ತವಾಗಿ ಅದರಿಂದ ಆಕರ್ಷಿತರಾಗಿ ಆ ಲೇಖಕಿಯನ್ನು ಹುಡುಕಿ ಆ ಪಾತ್ರಧಾರಿಯನ್ನು ಪತ್ತೆ ಮಾಡಲು ತೆರಳುತ್ತ್ತಾರೆ. ಅವರು ಹೋಗುವಷ್ಟರಲ್ಲಿ ಪಾತ್ರಧಾರಿ ಮತ್ತು ಆಕೆಯ ತಾಯಿ ಇಲ್ಲವಾಗುತ್ತಾರೆ. ನಿರ್ಣಾಯಕರ ಮೇಲೆ ಕಥೆ ಎಷ್ಟೊಂದು ಪ್ರಭಾವ ಬೀರುತ್ತದೆ ಎನ್ನುವುದನ್ನು ಇಲ್ಲಿ ಕಥಾನಾಯಕಿಯ ಬಿಂಬವನ್ನು ಹುಡುಕಿ ಹೋಗುವ ಮೂಲಕ ಚಿತ್ರಿಸಲಾಗಿದೆ.
.......................

Comments
Post a Comment