ಗ್ರಾಮೀಣ ಮುಗ್ಧಮನಃಸ್ಥಿಗಳ ಕಥಾಜಗತ್ತು
‘ನಿಲುಗನ್ನಡಿ’
‘ನಿಲುಗನ್ನಡಿ’ ಇದು ರೇಣುಕಾ ಕೋಡಗುಂಟಿ ರಚಿತ ಕಥಾಸಂಕಲನ. ಇದರಲ್ಲಿ ೧೨ ಕಥೆಗಳಿವೆ, ಜನತೆಯ ತಾಜಾ ಬದುಕಿನ ಆಶ್ಚರ್ಯಕರ ಸೂಕ್ಷ್ಮಗಳನ್ನು ಇಲ್ಲಿನ ಕಥೆಗಳಲ್ಲಿ ಪರಿಣಾಮಕಾರಿಯಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿಯ ಪರಿಸರದ ಪ್ರಾದೇಶಿಕ ಭಾಷೆಯಲ್ಲಿ ಇಲ್ಲಿನ ಕಥೆಗಳಿವೆ. ಲೇಖಕಿ ಗ್ರಾಮೀಣ ಪ್ರದೇಶದ ಬಗೆಗಿನ ಕಾಳಜಿಯನ್ನು ಇಲ್ಲಿ ಚಿತ್ರ್ರಿಸಿದ್ದಾರೆ. ಜಾಗತೀಕರಣದಿಂದ ಬದಲಾದ ಹಳ್ಳಿಗಳ ಚಹರೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಆತ್ಮೀಯವಾಗಿ ಒಡನಾಡಿರುವ ಇಲ್ಲಿನ ಕಥೆಗಳೆಲ್ಲ ಓದುಗರನ್ನು ಆಕರ್ಷಿಸುವಂಥವು ಮತ್ತು ಸಲೀಸಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಕೃತಿಯಲ್ಲಿ ನೆಲಮೂಲ ನಂಬಿಕೆಗಳಿಗೆ ಕಥೆಗಳು ಇವೆ. ಈ ಕಥೆಗಳ ಕನ್ನಡಿಯಲ್ಲಿ ಗ್ರಾಮೀಣ ಧೀರೋದಾತ್ತ ಮಹಿಳೆಯ ಹಲವು ಮುಖಗಳ ಪ್ರತಿಬಿಂಬಗಳನ್ನು ಕಾಣಬಹುದು. ಹಳ್ಳಿಯ ಅನಕ್ಷರಸ್ಥ ಜನರ ಜೀವನದ ನಂಬಿಕೆಗಳು, ಸಾಂಸ್ಕೃತಿಕ ಆಚರಣೆಗಳು, ನಲಿವುಗಳು, ಅವರು ಬದುಕಿನಲ್ಲಿ ಬೆರೆತುಕೊಂಡ ಬಗೆ, ಸಮಾಜದಲ್ಲಿ ಎದುರಾಗುವ ಸಮಸ್ಯೆಗಳಿಗೆ ಎದೆಗುಂದದೆ ಎದ್ದುನಿಂತು ಹೋರಾಡುವ ಗಟ್ಟಿಗಿತ್ತಿಯರ ಪಾತ್ರಗಳನ್ನು ಇಲ್ಲಿ ಲೇಖಕಿ ಸುಂದರವಾಗಿ ನೇಯ್ದಿದ್ದಾರೆ.
ಮೊದಲ ಕಥೆ ‘ಜಾತ್ರಿ’ ಇದರಲ್ಲಿ ಊರಿನ ಕಟ್ಟಿದುರುಗಮ್ಮ ದೇವರ ಜಾತ್ರೆಯು ಪ್ರತಿವರ್ಷ ಎಳ್ಳಮಾವಾಸ್ಯೆಯಂದು ನಡೆಯುವಾಗ ಸುತ್ತಮುತ್ತಲಿನ ಗ್ರಾಮದವರೆಲ್ಲ ಸೇರಿ ಹೊಸ ಹುರುಪಿನಿಂದ, ಹೊಸ ಬಟ್ಟೆಯನ್ನು ಧರಿಸಿ ಜಾತ್ರೆಗೆ ಹೋಗಿ ಆಚರಿಸುವುದು, ಅಲ್ಲಿನ ಅಂಗಡಿಗಳ ವೈಭವ, ಪೇಟೆ ಸುತ್ತ್ತಾಡುವುದನ್ನು ನೆನಪಿಸಿದ್ದಾರೆ. ದೇವಸ್ಥಾನದ ಮುಂದೆ ಕೋಣನನ್ನು ಕಡಿಯುತ್ತಿದ್ದ ಸಂದರ್ಭವನ್ನು ಹಿರಿಯರು ನೆನಪಿಸಿದ್ದನ್ನು ಹೇಳುತ್ತಾ, ಪಕ್ಕದೂರಿನವರು ಕೋಣನ ರಕ್ತವನ್ನು ಕದ್ದು ತೆಗೆದುಕೊಂಡು ಓಡುವುದು, ಓಡುವಾಗ ಸಿಕ್ಕಿಬಿದ್ದ ಆತನನ್ನು ಹೊಡೆದು ಕೊಲೆ ಮಾಡಿದ್ದು.... ಹೀಗೆ ಧಾರ್ಮಿಕ ಆಚರಣೆ ಮತ್ತು ಅದರ ನಂಬಿಕೆಯ ಕಥೆಯನ್ನು ಇಲ್ಲಿ ತೆರೆದಿಟ್ಟಿದ್ದಾg.
ಎರಡನೇ ಕಥೆ ‘ಸೂಲ್ಗಿತ್ತಿ ಯಂಕಮ್ಮ’ ಊರಿನಲ್ಲಿ ಬಸುರಿಯರಿಗೆ ಹೆರಿಗೆಬೇನೆ ಆರಂಭವಾದಾಗ ಬಂದು ಸುಲಭದಲ್ಲಿ ಹೆರಿಗೆ ಮಾಡಿಸುವ ಸೂಲಗಿತ್ತಿ ಯಂಕ ಮ್ಮಳ ಕೈಚಳಕದ ಬಗ್ಗೆ ಲೇಖಕರು ಪ್ರಸ್ತಾಪಿಸಿದ್ದಾರೆ. ಊರಿನ ಗೌಡನ ಹೆಂಡತಿಗೆ ಹೆರಿಗೆ ಬೇನೆಯಾದಾಗ ಅದನ್ನು ವೈದ್ಯರಿಂದ ಪರಿಹರಿಸಲಾಗದೆ ಕೊನೆಗೆ ಯಂಕಮ್ಮಳ ಬಳಿ ಬಂದಿದ್ದು, ಊರಿನ ಕಲಬಾವಿಯಿಂದ ಹೆಂಗಳೆಯರು ನೀರನ್ನು ತಂದು ಗರ್ಭಿಣಿಗೆ ಸುರಿದ ನಂತರ ಆಕೆಗೆ ಹೆರಿಗೆಯಾಗುತ್ತದೆ. ಇಲ್ಲಿನ ವಿಶೇಷ ಜಾನಪದ ನಂಬಿಕೆಗಳ ಗೂಡಿನಲ್ಲಿ ನೆಮ್ಮದಿಯ ಭಾವವನ್ನು ಬದುಕುವ ಮನಸ್ಥಿತಿಯನ್ನು ಇಲ್ಲಿ ಚಿತ್ರಿಸಲಾಗಿದೆ.
‘ಗಟಿವಾಣಿ’ ಎಂಬ ಕತೆಯಲ್ಲಿ ಸಾಬವ್ವ ಶಿವಪ್ಪ ಎಂಬ ದಂಪತಿ ಹೊಲದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದಾಗ ಅವರಿಗಿರುವ ಚಿಕ್ಕ ಮಗುವನ್ನು ರಾತ್ರಿ ವೇಳೆ ಬಬ್ಬರ್ಸಿ (ಒಂದು ಬಗೆಯ ತೋಳ)ಎತ್ತಿಕೊಂಡು ಹೋಗುವುದು, ಈಳಿಗೆ ಮಣೆಯಿಂದ ಅದನ್ನು ಹೊಡೆದು ಸಾಯಿಸಿ ಮಗನನ್ನು ಸಾಬವ್ವ ರಕ್ಷಿಸುವುದು, ನಂತರ ರಾಯಚೂರಿಗೆ ಹೋಗಿದ್ದ ಶಿವಪ್ಪ ವಾಪಸ್ ಬಂದಾಗ ವಿಷಯ ತಿಳಿದು ಆಕೆಯನ್ನು ಆಸ್ಪತ್ರೆಗೆ ಸೇರಿಸುವುದು, ಸಾಬವ್ವನ ಸಾಹಸಕ್ಕೆ ಸರಕಾರದಿಂದ ಬಹುಮಾನ, ಸನ್ಮಾನ ಬರುವುದು, ಸತ್ತುಹೋದ ಬಬ್ಬರ್ಸಿ ನೋಡಲು ಸಾಲುಗಟ್ಟಿ ಜನರು ಬರುವುದು. ಆಕೆಗೆ ಗಟಿವಾಣಿ ಎಂಬ ಬಿರುದು ಸಹ ನೀಡುವುದನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.
‘ಕೊನಿ ಸೀರಿ’ ಇದು ಕುರಿ ಮಂದೆಯನ್ನು ಹೊಡೆದುಕೊಂಡು ಊರೂರು ತಿರುಗಿ ಜೀವನ ಸಾಗಿಸುವ ದಂಪತಿಗಳ ಕಥೆ. ಹೀಗೆ ಕುರಿಮಂದೆ ಹೊಡೆದುಕೊಂಡು ಸಿರವಾರ ಪಟ್ಟಣದಂಚಿನಲ್ಲಿದ್ದಾಗ ಮಗಳ ಮದುವೆಗೆಂದು ಬೆಲೆಬಾಳುವ ಸೀರೆ ತೆಗೆಯುತ್ತಾಳೆ. ಆದರೆ ಇಡಲು ಜಾಗವಿಲ್ಲದಿದ್ದಾಗ ತಾವು ಹೋದೆಡೆಯಲ್ಲೆಲ್ಲ ತೆಗೆದುಕೊಂಡು ಹೋಗುತ್ತಾಳೆ, ಈ ವೇಳೆ ಪಾರವ್ವಗೆ ಕೊರೊನಾ ಎದುರಾಗುವುದು, ಕಲ್ಬುರ್ಗಿ ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಅವಳು ಬದುಕುಳಿಯಲಿಲ್ಲ. ಆದರೆ ಆಕೆಯಲ್ಲಿ ಕೊನೆಯವರೆಗೂ ಉಳಿದಿದ್ದು ಮಗಳ ಮದುವೆಗೆಂದು ಖರೀದಿ ಮಾಡಿದ್ದ ಸೀರೆ ಮಾತ್ರ ಎನ್ನುವುದನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಲಾಗಿದೆ. ಗಂಡ ಮಾಳಿಂಗರಾಯ ತನ್ನ ಕೈಚೀಲದಲ್ಲಿದ್ದ ಆ ಸೀರೆಯನ್ನು ನೋಡಿ ಕಣ್ಣೀರು ಸುರಿಸಿದ್ದನ್ನು ಕಥೆಯಲ್ಲಿ ವಿವರಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಒಂದು ಸಮುದಾಯದ ಅಂಚಿನಲ್ಲಿರುವ ಜೀವಗಳು ಅನುಭವಿಸುವ ಕಷ್ಟವನ್ನು ಲೇಖಕಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
‘ತಾಯವ್ವ’ ಕತೆಯಲ್ಲಿ ದೊಡ್ಡಪ್ಪಗೌಡನ ವಿರುದ್ಧ ತಾಯವ್ವ ನಡೆಸುವ ಹೋರಾಟ ಅವಳ ಪ್ರತಿಭಟನೆಯ ಅಸ್ತ್ರವಾದ ನ್ಯಾಯ ಮತ್ತು ಸಮಾನತೆಯ ಪರವಾದ ದಿಟ್ಟ ಹೆಜ್ಜೆ ಹಾಗೂ ತನ್ನ ಸಹಜ ಹಕ್ಕನ್ನು ಪಡೆಯುವ ಹೋರಾಟಗಾರ್ತಿಯಾಗಿ ನಮ್ಮನ್ನು ಅವಳು ಕಾಡುತ್ತಾಳೆ. ದೊಡ್ಡಪ್ಪಗೌಡ ಊರಿನ ಶ್ರೀಮಂತನಾಗಿದ್ದು ಜನರಿಗೆ ಬೇಕಾದಾಗೆಲ್ಲ ಸಾಲ ಕೊಡುತ್ತಾ ನಾಲ್ಕಾರು ಜನರನ್ನು ಕಟ್ಟಿಕೊಂಡು ಅದನ್ನು ವಸೂಲಿ ಮಾಡುತ್ತಿದ್ದನು ಅವನ ಬೆದರಿಕೆ ತಾಳಲಾರದೆ ಜನರು ‘ಊರಿನ ದೆವ’ ಎಂದು ಕರೆಯುತ್ತಿದ್ದರು. ಊರಿನ ಗುಂಡಪ್ಪನವನ್ನು ಕರೆದು ನಿನ್ನ ಹೊಲವನ್ನು ಮಾರಿ ಒಳ್ಳೆ ರೇಟು ಕೊಡಿಸುತ್ತೇನೆ ಎಂದು ಆಸೆ ತೋರಿಸಿದ್ದ. ಆದರೆ ಆತ ಅದನ್ನು ಮಾರುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದ. ಆತನ ಹೆಂಡತಿ ತಾಯವ್ವ ಸಹ ಹೊಲ ಮಾರಲು ನಿರಾಕರಿಸಿದ್ದರು. ಹಣದ ಆಮಿಷ ಒಡ್ಡಿ ಹೊಲ ಮಾರುವುದು ದೊಡ್ಡಗೌಡನ ಕೆಲಸವಾಗಿತ್ತು. ಆದರೆ ಆತನ ಕರಾಮತ್ತನ್ನೆಲ್ಲ ಅರಿತು ತಾಯವ್ವ ಹೋರಾಟ ಮಾಡಿ ತನ್ನ ಜಮೀನನ್ನು ದಕ್ಕಿಸಿಕೊಂಡ ಕಥೆ ಇದಾಗಿದೆ.
‘ಕೂದಲ ಪುರಾಣ’ ಇದೊಂದು ವಿಶಿಷ್ಟವಾದ ಕಥೆ. ಕೂದಲನ್ನು ಸಂಗ್ರಹಿಸಿ ಇಟ್ಟು ಪ್ಲಾಸ್ಟಿಕ್ ವಸ್ತು, ಹೇರ್‌ಪಿನ್, ಸೂಜಿ, ಪಿನ್ನು ಮಾರಾಟಕ್ಕೆ ಬರುವವರಿಗೆ ಕೊಟ್ಟು ಅವರಿಂದ ಬೇಕಾದ ವಸ್ತು ಪಡೆಯುವುದರ ಕುರಿತ ಕಥೆ ಇದು. ನಾಗಮ್ಮ ತಮ್ಮ ಹೆಣ್ಣುಮಕ್ಕಳ ತಲೆಗೂದಲನ್ನೆಲ್ಲ ಸಂಗ್ರಹಿಸಿಟ್ಟು ಬಕೆಟ್ ಅನ್ನು ಖರೀದಿಸುವ ಆಸೆ ಹೊಂದಿದ್ದಳು. ಮಕ್ಕಳ ತಲೆಯಿಂದ ಬಿದ್ದಕೂದಲನ್ನೆಲ್ಲಾ ಆರಿಸಿ ಸಂಗ್ರಹಿಸಿದ್ದರು. ಇವರ ಮನೆಗೆ ಬಾಡಿಗೆಗೆ ಬಂದ ಮಂಜಮ್ಮ ಸಹ ಇದೇ ಕೆಲಸ ಮಾಡುತ್ತಿದ್ದಳು. ಒಮ್ಮೆ ನಾಗಮ್ಮನ ಮನೆಯವರು ಮನೆಗೆ ಬೀಗ ಹಾಕಿ ಮದುವೆಗೆ ಹೋಗಿದ್ದಾಗ ಮಂಜಮ್ಮ ಇವರ ಮನೆಯ ಕೂದಲನು ಕದ್ದು ಮಾರಾಟ ಬಕೆಟ್ ಪಡೆಯುವಾಗ ಸಿಕ್ಕಿಬಿದ್ದು, ನಾಗಮ್ಮ ಬೊಬ್ಬೆ ಹಾಕಿದಳು. ಆಕೆಯೇ ತನ್ನ ಕೂದಲು ಕದ್ದಿದ್ದ ಎಂದು ಗಲಾಟೆ ಮಾಡಿ ಹೊಡೆದಾಟವನ್ನು ಮಾಡಿಕೊಂಡು ಆಕೆ ಕುಟುಂಬದೊಂದಿಗೆ ಮಾತು ಬಿಟ್ಟಿದ್ದರು, ಬದಲಾದ ಸನ್ನಿವೇಶದಲ್ಲಿ ಒಂದು ಸಹಾನುಭೂತಿ ಹಂತದಲ್ಲಿ ದ್ವೇಷ ಕರಗಿ ನೀರಾಗಿ ಹರಿಯುತ್ತದೆ. ಪರಸ್ಪರ ಹೊಂದಾಣಿಕೆಗಳು ಸಂಭವಿಸುತ್ತವೆ. ಅಂದರೆ ನಮ್ಮ ಹೆಣ್ಣು ಮಕ್ಕಳಲ್ಲಿ ಜಗಳಗಳು ಎಷ್ಟು ಆಕಸ್ಮಿಕವೋ ಅಷ್ಟೇ ತಾತ್ಕಾಲಿಕ ಎಂಬುದನ್ನು ಲೇಖಕಿ ನಿರೂಪಿಸಿದ್ದಾರೆ.
‘ಜತ್ತಮಿಣಿ’ ಯಲ್ಲಿ ಹರಕೆ ಹೊತ್ತವನೊಬ್ಬ ಅದನ್ನು ತೀರಿಸಲಾಗದೆ ತನ್ನ ಜಮೀನನ್ನು ಮಾರಾಟ ಮಾಡಲು ಮುಂದಾದಾಗ ಕೊನೆಯ ಹಂತದಲ್ಲಿ ಅವನ ತಂದೆಯೇ ಶೇಖರಿಸಿಟ್ಟ ಆದಾಯ ಅಚಾನಕ್ಕಾಗಿ ಹಿಂದಿರುಗಿ ಬರುವುದರ ಕುರಿತಾಗಿದೆ. ‘ಮಣ್ಣಿನ ಋಣ’ ಕತೆ ಸಹ ಇದೇ ರೀತಿಯದ್ದು. ತನ್ನ ಅಪ್ಪ ಕುಡಿತದ ಚಟಕ್ಕಾಗಿ ಮಾರಾಟ ಮಾಡಿದ್ದ ಹೊಲವನ್ನು ಸಿದ್ದ ಎನ್ನುವ ಮಗ ಕಷ್ಟಪಟ್ಟು ದುಡಿದು, ಬೆಂಗಳೂರಿಗೆ ಹೋಗಿ ಕೆಲಸ ಮಾಡಿ ಸಂಪಾದಿಸಿ ಬಂದು ಹೊಲವನ್ನು ಮತ್ತೆ ದಕ್ಕಿಸಿಕೊಂಡ ಹೋರಾಟದ ಬದುಕನ್ನು ಬಿಚ್ಚಿಡುವ ಕಥೆ. ‘ಪಡಸಾಲಿ’ ಎನ್ನುವ ಕಥೆಯಲ್ಲಿ ಎಲ್ಲರಿಂದ ಕಡೆಗಣಿಸಲ್ಪಟ್ಟ ಜೀವವೊಂದು ತನ್ನನ್ನೇ ತಾನು ಸುಟ್ಟುಕೊಂಡು, ಮನೆಯ ಜನರ ಸಂಕುಚಿತ ಮನೋಭಾವವನ್ನೂ ಬೆಳಗಿಸಿದ ಕತೆ. ‘ಮದಿವಿ’ಯಲ್ಲಿ ಭಾವಮೈದರ ದ್ವೇಷ ಒಂದು ಕುತೂಹಲಕಾರಿ ಪರಿಸ್ಥಿತಿಯಲ್ಲಿ ಪರ್ಯವಸಾನವಾಗುವುದರ ಬಗ್ಗೆ ಇದೆ. ಅಂದರೆ ಬದುಕಿನ ಚಲನಶೀಲತೆಯನ್ನು ಇಲ್ಲಿ ತೋರಿಸಲಾಗಿದೆ.
‘ಯಮನವ್ವನ ನಾಲೆ’ ಮತ್ತು ‘ತಪ್ಪಿದ ದಾರಿ’ ಈ ಎರಢೂ ಕಥೆಗಳು ದುರಂತ ಪ್ರಸಂಗದವು. ‘ತಪ್ಪಿದ ದಾರಿಯಲ್ಲಿ’ ನಟನೊಬ್ಬ ಗುಟಕಾ ಜಾಹೀರಾತಿನಲ್ಲಿ ಅದನ್ನು ತಿಂದುದನ್ನು ಗಮನಿಸಿ ಆತನ ಅಭಿಮಾನಿಯೊಬ್ಬ ಗುಟ್ಕಾ ಚಟಕ್ಕೆ ಬಿದ್ದು ಜೀವನ ಅಂತ್ಯಗೊಳಿಸಿಕೊಂಡ ಕಥೆ ಇದೆ. ಈ ಪ್ರಕರಣವು ಒಂದು ನೀತಿ ಪಾಠವನ್ನು ಒಡಲಲ್ಲಿಟ್ಟುಕೊಂಡ ಕತೆ. ‘ಯಮನವ್ವನ ನಾಲೆಯಲ್ಲಿ’ ಯಮನವ್ವನ ಹಸುಗೂಸುಗಳು ತಾಯಿಯ ಅನಾರೋಗ್ಯದ ಸಾವಿನ ನಂತರ ಅವಳಿಗಾಗಿ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ಕಾಯುವ ಸ್ಥಿತಿ ಓದುಗರನ್ನು ಸಂಕಟದ ಒಡಲಾಳಕ್ಕೆ ಕರೆದೊಯ್ಯುತ್ತದೆ.
ಒಟ್ಟಿನಲ್ಲಿ. ಈ ಕೃತಿಯ ಕಥೆಗಳೆಲ್ಲ ಬೆರಗುಗೊಳಿಸುವಂತಹವು. ಮತ್ತು ಜೀವನದ ಹೊಸತನವನ್ನು ಹುಡುಕಾಟ ಮಾಡಬೇಕೆನ್ನುವ ಸಂದೇಶವನ್ನು ನೀಡುತ್ತವೆ. ಇಲ್ಲಿನ ಕಥೆಗಳಲ್ಲ ಅನುಭವದಂತಿವೆ. ಬದುಕಿನಾಚೆಯ ಸಂಗತಿಗಳು ಕಥೆಯಾದಾಗ ಜಡತ್ವದಲ್ಲಿರುವ ಮನುಷ್ಯನನ್ನು ಚಿಂತನೆಗೆ ಹಚ್ಚಲು ಸಾಧ್ಯವಾಗುತ್ತದೆ.
...........................

Comments
Post a Comment