ಬೇಸ್ತುಬಿದ್ದು ಹಾಸ್ಯಾಸ್ಪದವಾದ ಪ್ರಿನ್ಸಿಪಾಲ
‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’
‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’
‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಅವರ ಕಾದಂಬರಿ. ಪ್ರೀತಿಯ ವಿಚಾರದಲ್ಲಿ ವಿದ್ಯಾರ್ಥಿನಿಯೊಬ್ಬಳಿಂದ ಬೇಸ್ತುಬಿದ್ದು ಹಾಸ್ಯಾಸ್ಪದವಾದ ಪ್ರಿನ್ಸಿಪಾಲರ ಕಥೆಯಿಂದ ಕೂಡಿದೆ. ತನ್ನ ಆರೋಪಿತ ವ್ಯಕ್ತಿತ್ವವನ್ನು ಕಳಚಿಹಾಕಿ ಜೀವನಕ್ಕೆ ತಾನೇ ನೇರವಾಗಿ ಮುಖಾಮುಖಿಯಾಗಿ ತನ್ನ ನಿಜವನ್ನು ಶೋಧಿಸಿಕೊಳ್ಳುವುದು ಕಾದಂಬರಿಯ ಪ್ರಮುಖ ವಸ್ತು.
ಅಧ್ಯಾಪಕರಾಗಿ ಶಿಸ್ತು, ಆದರ್ಶ ರೂಢಿಸಿಕೊಂಡ ಜೀಕೆ ಮಾಸ್ತರರು ಕಾಲೇಜು ಪ್ರಿನ್ಸಿಪಾಲರಾದ ಮೇಲೆ ಅದೇ ಇಮೇಜ್ ಅನ್ನು ಕಾಯ್ದುಕೊಳ್ಳುವ ಒತ್ತಡದಲ್ಲಿ ಇರುತ್ತಾರೆ. ತಾವು ಕಟ್ಟಿಕೊಂಡ ಮುಖವಾಡದ ಆಚೆ ಬರಲಾಗದೆ, ತಮಗೆ ಸಮಾಜದಿಂದ ದತ್ತವಾದ ವ್ಯಕ್ತಿತ್ವದ ಆಚೆ ಕಾಣಲಾರದೆ, ತಮಗೂ ತಮ್ಮ ವಿದ್ಯಾರ್ಥಿಗಳಿಗೂ ನಡುವೆ ಒಂದು ದೊಡ್ಡ ಕಂದಕವನ್ನೇ ನಿರ್ಮಿಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಕಸಿವಿಸಿಯನ್ನು ಮುಚ್ಚುಮರೆ ಇಲ್ಲದೆ ಧಿಕ್ಕರಿಸಿ, ಸಂಸ್ಕೃತ ನಾಟಕಗಳ ಶೃಂಗಾರದ ಭಾಗಗಳನ್ನು ತಮ್ಮ ನಗಾರಿ ಧ್ವನಿಯಲ್ಲಿ ವಿವರಿಸಿ ಭಾವನೆಗಳನ್ನು ಒತ್ತಾಯದಿಂದ ನಿಗ್ರಹಿಸುತ್ತಾರೆ. ಜೀಕೆ ಅವರ ಹೆಂಡತಿ ಮಾನಸಿಕ ಅಸ್ವಾಸ್ಥ್ಯಕ್ಕೆ ತುತ್ತಾದವರು. ೧೧ ವರ್ಷದ ಅವರ ಮಗ ಕೂಡ ಅನಾರೋಗ್ಯದಿಂದ ಸಾವನ್ನಪ್ಪಿರುತ್ತಾನೆ. ಕರ್ಮವಿಪಾಕದ ಹೆಸರಿನಲ್ಲಿ ಮಗನ ಸಾವನ್ನು ಪತ್ನಿಯ ಮನಸ್ಸಿನಿಂದ ತೆಗೆಯಲು ಎಷ್ಟೇ ಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ತಾವೂ ಸಹ ಆಗಾಗ ವ್ರತಗಳನ್ನು ಆಚರಿಸುತ್ತಾರೆ. ಈ ಕರ್ಮವಿಪಾಕದ ಹೆಸರಿನಲ್ಲಿ ಮಗನ ದುಃಖದಿಂದ ವಿಮುಕ್ತರಾಗುತ್ತಾರೆ.
ನಂತರ ಮಕ್ಕಳಿಲ್ಲ ಎಂಬ ಚಿಂತೆ ಇವರನ್ನು ಕಾಡುತ್ತದೆ. ಆದರೆ ಕಾಲೇಜಿನ ವಿಪರೀತ ಜವಾಬ್ದಾರಿಗಳಲ್ಲಿ ಅದನ್ನು ಮರೆಯುತ್ತಾರೆ. ಈ ಮಧ್ಯೆ ವಿದ್ಯಾರ್ಥಿಗಳಾದ ರೋಜಾ ಮತ್ತು ಗಿರೆಪ್ಪ (ಯೂನಿಯನ್ ಲೀಡರ್) ತಾವು ಸೃಷ್ಟಿಸಿದ ಬಲೆಯಲ್ಲಿ ಪ್ರಿನ್ಸಿಪಾಲರನ್ನು ಕೆಡವುತ್ತಾರೆ. ಸಿಕ್ಕಿಬಿದ್ದ ಜೀಕೆ ಮಾಸ್ತರರು ಹಾಸ್ಯಾಸ್ಪದರಾಗಿ ಕಂಡುಬರುತ್ತಾರೆ. ಜಿಕೆ ಮಾಸ್ತರರ ಪೂರ್ತಿ ಹೆಸರು ಗುಂಜಾಳ ಕರಿಬಸಯ್ಯ ಎಂದು. ಆದರೆ ಇದು ಬಹುತೇಕ ಜನರಿಗೆ ಗೊತ್ತಿರುವುದಿಲ್ಲ.
ಜಿಕೆ ಮಾಸರರು ಕಾಲೇಜಿನ ದಶಮಾನೋತ್ಸವ ಸಂದರ್ಭದಲ್ಲಿ ಯೂನಿಯನ್ ಅಧ್ಯಕ್ಷ ಗಿರೆಪ್ಪ ಎಂಬ ವಿದ್ಯಾರ್ಥಿಯೊಂದಿಗೆ ಅಸಮಾಧಾನಕ್ಕೆ ಒಳಗಾಗುತ್ತಾರೆ. ಸಂಸ್ಕೃತ ಪ್ರಾಧ್ಯಾಪಕರಾದ್ದರಿಂದ ಬಿ ಎ ಅಂತಿಮ ತರಗತಿಯಲ್ಲಿ ಕಾಳಿದಾಸನ ವಿಕ್ರಮೋರ್ವಶೀಯ ನಾಟಕವನ್ನು ಪಾಠಮಾಡುವಾಗ ವಿದ್ಯಾರ್ಥಿನಿ ರೋಜಾಳನ್ನು ಕದ್ದು ಕದ್ದು ನೋಡುತ್ತಾರೆ. ಆಕೆಯೂ ಇದನ್ನೇ ಮಾಡುತ್ತಾಳೆ. ಹೀಗೆ ಮಾಡುತ್ತಿರುವಾಗ ಆಕೆ ಎಚ್ಚರ ತಪ್ಪಿ ಪಕ್ಕದವಳ ಮೇಲೆ ಬೀಳುತ್ತಾಳೆ. ಇದಕ್ಕೆ ಕಾರಣವೇನೆನ್ನುವುದು ಕುತೂಹಲಕರ ಅಂಶ.
ದಶಮಾನೋತ್ಸವದ ಮುನ್ನಾದಿನ ವಿದ್ಯಾರ್ಥಿಗಳು ಎಲ್ಲಾ ತಯಾರಿ ನಡೆಸಿದ್ದಾಗ ಗಿರೆಪ್ಪ ರೋಜಾಳನ್ನು ಎತ್ತಿ ಕೆಳಗೆ ಒಗೆದು ಆಕೆಯ ಮೇಲೆ ಬಿದ್ದು ಮುತ್ತು ಕೊಟ್ಟ ಎಂದು ದೂರು ಬರುತ್ತದೆ. ಆತನ್ನು ಕರೆದು ರೀಜಾಗೆ ಏನು ಮಾಡಿದೆ ಎಂದು ಕೇಳಿದಾಗ, ನನ್ನ ಖಾಸಗಿ ವ್ಯವಹಾರದಲ್ಲಿ ಕೈ ಹಾಕಬೇಡಿ ಎಂದು ಆರ್ಭಟಿಸುತ್ತಾನೆ. ಗಿರೆಪ್ಪನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡುತ್ತಾರೆ. ಈ ಘಟನೆ ಮಾರನೆಯ ದಿನದ ದಶಮಾನೋತ್ಸವವಕ್ಕೆ ಕಷ್ಟವನ್ನು ತರುತ್ತದೆ. ದಶಮಾನೋತ್ಸವ ಆರಂಭವಾದಾಗ ವಿದ್ಯಾರ್ಥಿಗಳು ಇರುವುದಿಲ್ಲ. ಕಾರ್ಯಕ್ರಮ ಒಬ್ಬ ಯಕ್ಕಶ್ಚಿತ್ ಯುವಕನಿಂದ ಸೋಲನ್ನು ಅನುಭವಿಸಿದ ಬಗ್ಗೆ ಜೀಕೆ ಅವರಿಗೆ ಬೇಸರವಾಗುತ್ತದೆ. ಕಾರ್ಯಕ್ರಮ ನಡೆಯಿತೇ? ಅತಿಥಿಗಳಿಂದ ಜೀಕೆಗೆ ಮುಖಭಂಗವಾಯಿಯತೇ ಎನ್ನುವುದು ಇದರ ಮುಂದಿನ ಭಾಗ.
ರಾಜೀನಾಮೆ ಬರೆಯಲು ಮುಂದಾದಾಗ ರೋಜಾ ಜೀಕೆಯವರ ಕಚೇರಿಗೆ ಬರುತ್ತಾಳೆ. ದಯಮಾಡಿ ಗಿರೆಪ್ಪನನ್ನು ವಾಪಸ್ ತೆಗೆದುಕೊಳ್ಳಿ ಎಂದು ಮನವಿ ಮಾಡುತ್ತಾಳೆ. ಅವರಿಗೆ ಹಸ್ತಲಾಘವ ಮಾಡುತ್ತಾಳೆ. ತಾನು ಬೇರೆಯವನನ್ನು ಪ್ರೀತಿಸುತ್ತಿರುವುದು ಆತನಿಗೆ ಗೊತ್ತಾಗಿದೆ ಎಂದಾಗ ಜೀಕೆ ಮಾಸ್ತರಿಗೆ ಇದು ಅರ್ಥವಾಗುವುದಿಲ್ಲ. ನನಗೆ ಐದಾರು ಪ್ರೇಮ ಪತ್ರಗಳನ್ನು ಬರೆದಿದ್ದ. ನಾನು ಅದನ್ನು ನೋಟ್ ಬುಕ್‌ನಲ್ಲಿ ಇಟ್ಟುಕೊಂಡಿದ್ದೆ. ಅದನ್ನು ಹಿಡಿದುಕೊಂಡು ಅವಮಾನ ಮಾಡಲಿಕ್ಕೆ ಬಂದಾಗ ನಾನು ಓಡಿಹೋಗಿ ಕೆಳಗೆ ಬಿದ್ದೆ. ಅವನು ಕಿಸ್ ಮಾಡಿಲ್ಲ ಎಂದು ಹೇಳಿದಾಗ ನೀ ಪ್ರೀತಿಸಿದ್ದು ಯಾರನ್ನು ಎಂದು ಪ್ರಶ್ನಿಸುವರು. ಆಗ ಮಡಿಸಿದ ಕಾಗದವನ್ನು ತೆಗೆದು ಅವರ ಮುಂದಿಟ್ಟಳು. ಆ ಪತ್ರದಲ್ಲಿದ್ದ ಇದ್ದ ವಿಷಯವೇನು, ಅವರು ಪತ್ರವನ್ನು ಓದಿದರೇ? ನಂತರ ಇಬ್ಬರ ಮಧ್ಯೆ ನಡೆದಿದ್ದೇನೆನ್ನುವುದನ್ನು ರಸವತ್ತಾಗಿ ವರ್ಣಿಸಿದ್ದಾರೆ.
ವಾರ್ಷಿಕ ಪರೀಕ್ಷೆಗಳೆಲ್ಲ ಮುಗಿದ ನಂತರ ಸಂಜೆಯ ಹೊತ್ತಿನಲ್ಲಿ ಜೀಕೆಯ ಕೋರಿಕೆ ಮೇರೆಗೆ ಅವರ ಮನೆಗೆ ಆಗಮಿಸಿದ ರೋಜಾಳನ್ನು ಸ್ವಾಗತಿಸಿ ಸ್ಟಡಿ ರೂಮಿಗೆ ಕರೆದು ಎರಡು ಕೈಗಳನ್ನು ಹಿಡಿದು ಮುದ್ದಿಸಿದರು. ಉತ್ತರ ಪತ್ರಿಕೆ ತಮ್ಮ ಕಾಲೇಜಿನದು ತನಗೇ ಬಂದಿದೆ ಎಂದು ಹೇಳಿ ಆಕೆಗೆ ಉತ್ತರ ಪತ್ರಿಕೆಯನ್ನು ತೆಗೆದು ತೋರಿಸುತ್ತಾರೆ. ಅವಳನ್ನೇ ನೋಡುತ್ತಾ ಜೀಕೆ, ‘ಎಷ್ಟು ಬೇಕು ಅಷ್ಟು ಮಾರ್ಕ್ಸ್ ಅನ್ನು ನಿನ್ನ ಪತ್ರಿಕೆ ಪತ್ರಿಕೆಗೆ ಹಾಕಿಕೋ’ ಎನ್ನುತ್ತಾರೆ. ಅವಳು ಹಾಕಿಕೊಂಡ ನಂತರ ‘ಸರ್, ನನ್ನ ಗೆಳತಿಯ ಉತ್ತರ ಪತ್ರಿಕೆಯನ್ನು ನೋಡಬಹುದೇ’ ಎಂದು ಕೇಳಿ ಪಡೆದು ಅದಕ್ಕೂ ತಾನೇ ಮಾರ್ಕ್ ಹಾಕಿಕೊಳ್ಳುತ್ತಾಳೆ. ಆಗ ಜೀಕೆ ಎರಡು ಕೈಗಳನ್ನು ಅವಳ ಭುಜದ ಮೇಲಿಟ್ಟು ‘ನಾವು ಯಾವಾಗ ಮದುವೆಯಾಗೋಣ’ ಎಂದು ಕೇಳುತ್ತಾರೆ. ನಂತರ ಇಬ್ಬರೂ ಮದುವೆಯಾದರೇ, ಗಿರೆಪ್ಪ ಈ ವೇಳೇ ಏನು ಮಾಡಿದ ಎನ್ನುವ ಉತ್ತರ ಕಥೆಯ ಈ ಭಗದಲ್ಲಿದೆ.
ರಿಸಲ್ಟ್ ಬರುವ ದಿನ ಹುಬ್ಬಳ್ಳಿಗೆ ಬರುತ್ತೇನೆ. ಅಲ್ಲಿನ ಅಶೋಕ ಹೋಟೆಲಿನಲ್ಲಿ ಕುಳಿತು ಇಬ್ಬರೂ ಈ ವಿಷಯ ಚರ್ಚಿಸೋಣ ಎಂದು ಹೇಳಿ ತೆರಳುತ್ತಾಳೆ. ರಿಸಲ್ಟ್ ಬಂದ ನಂತರ ಹುಬ್ಬಳ್ಳಿಗೆ ತೆರಳಿ ಅಶೋಕ ಹೋಟೆಲಿನಲ್ಲ್ಲಿ ರೂಮ್ ಮಾಡುತ್ತಾರೆ. ಅಲ್ಲಿ ರೋಜಾ ಇನ್ನೊಂದು ರೂಮಿನಲ್ಲಿ ಗಿರೆಪ್ಪನ ಜೊತೆ ಉಳಿದಿರುತ್ತಾಳೆ. ಜೀಕೆ ರೂಮಿನ ಬಾಗಿಲು ಬಡಿದಾಗ ಗಿರೆಪ್ಪ ಬಾಗಿಲು ತೆಗೆಯುತ್ತಾನೆ. ನೋಡಿ ಹೌಹಾರಿದಾಗ ಅವರನ್ನು ಒಳಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ತಾನು ಮೋಸ ಹೋಗಿದ್ದನ್ನು ಮತ್ತು ಹಾಸ್ಯಾಸ್ಪದವಾಗಿದ್ದನ್ನು ಕಂಡು ಬೇಸರಗೊಳ್ಳುತ್ತಾರೆ. ಆಗ ರೋಜಾ ಜೀಕೆಗೆ ಹೇಳಿದ್ದೇನು, ಕ್ಷಮೆ ಕೇಳಿದ್ದೇಕೆ, ಇದನ್ನು ಅವರು ಮನ್ನಿಸಿದರೇ ಎನ್ನುವ ವಿಚಾರ ಕುತೂಹಲಕಾರಿಯಾಗಿದೆ.
ಜೀಕೆ ರೂಮಿನಿಂದ ಎದ್ದು ಸೀದಾ ರೈಲ್ವೆ ಸ್ಟೇಷನ್‌ನತ್ತ ಸಾಗುತ್ತಾರೆ. ಅಲ್ಲಿ ಚಳಿಯಿಂದ ನಡುಗುತ್ತಿದ, ಮೈಮೇಲೆ ಬಟ್ಟೆ ಇಲ್ಲದ ವ್ಯಕ್ತಿಯನ್ನು ನೋಡಿ, ತಮ್ಮ ಕೋಟನ್ನು ಕಳಚಿ ಅವನಿಗೆ ಕೊಟ್ಟು ತೆರಳುತ್ತಾರೆ. ಮಾರನೇ ದಿನಪತ್ರಿಕೆಯಲ್ಲಿ ಜೀಕೆ ಸತ್ತಿದ್ದಾರೆ ಎಂಬ ಸುದ್ದಿ ಬರುತ್ತದೆ. ಇದು ನಿಜವೇ? ಕಾಲೇಜಿನವರು ಮುಂದೆ ಏನು ಮಾಡಿದರು? ಗಿರೆಪ್ಪ ಮತ್ತು ರೋಜಾ ಮುಂದಿನ ಹಾದಿ ಯಾವುದು, ಅವರ ಬದುಕು ಏನಾಯಿತೆನ್ನುವುದನ್ನು ಸೊಗಸಾಗಿ ಇದರಲ್ಲಿ ವರ್ಣಿಸಲಾಗಿದೆ.
........................

Comments
Post a Comment