ಬಸವಣ್ಣನನ್ನು ಕಾಣುವ ಪ್ರಯತ್ನ
‘ಬಸವಣ್ಣನೊಳಗಿನ ಬಸವಣ್ಣ’
‘ಬಸವಣ್ಣನೊಳಗಿನ ಬಸವಣ್ಣ’ ಈ ಕೃತಿಯು ಬಸವಣ್ಣನ ಜೀವನಾಧಾರಿತ ಕೃತಿಗಳು ಹಾಗೂ ವಚನಗಳ ತೌಲನಿಕ ವಿಶ್ಲೇಷಣೆಯಿಂದ ಕೂಡಿದೆ. ಭದ್ರಾವತಿಯ ಸರ್ ಎಂ ವಿ ಸರಕಾರಿ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಜಿ ಎಸ್ ಅಶೋಕ್ ಈ ಕೃತಿಯ ಕರ್ತೃ.
ಬಸವಣ್ಣನವರನ್ನು ಅರ್ಥೈಸಿಕೊಳ್ಳುವುದೇ ಕಷ್ಟಸಾಧ್ಯವಾಗಿರುವ ಸಂದರ್ಭದಲ್ಲಿ ಅಂತರಂಗದ ಬಸವಣ್ಣನವರನ್ನು ಕಾಣುವುದು ಮಹಾ ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ವಚನಗಳ, ಬೇರೆ ಬೇರೆ ಶರಣರ, ಸಾಹಿತಿಗಳ ಅಧ್ಯಯನದ ಮೂಲಕ ಬಸವಣ್ಣನವರನ್ನು ಕಾಣುವ ಪ್ರಯತ್ನವನ್ನು ಇಲ್ಲಿ ಲೇಖಕರು ಮಾಡಿದ್ದಾರೆ. ಬಸವಣ್ಣ ಇಂದಿಗೂ ನಮ್ಮ ಅರಿವನ್ನು ಮೀರಿದ ವಿದ್ಯಮಾನವೇ ಆಗಿದ್ದಾನೆ. ಯಾವ ಕಾಲಕ್ಕೂ ಕಲ್ಪನೆಗೂ ಸಿಗದ ಸಮಾಜ ಸುಧಾರಕನಾಗಿ, ವಿಮರ್ಶಕನಾಗಿ, ಸಾಮಾಜಿಕ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಕಾಣುವ ಅಂತರ್ಮುಖ, ತನ್ನ ಒಳ ಹೊರಗುಗಳ ವಿಮರ್ಶಕನಾಗಿ, ಮಾನವೀಯತೆಯ ಹರಿಕಾರನಾಗಿ, ಸಮಾನತೆಯ ಸಾಕಾರಮೂರ್ತಿಯಾಗಿ, ಕಾಯಕ ಯೋಗಿಯಾಗಿ, ದಾಸೋಹ ತತ್ವಗಳ ಪ್ರತಿಪಾದಕನಾಗಿ ನಮಗೆ ಕಾಣುತ್ತಿದ್ದಾನೆ.
ಬಸವಣ್ಣನ ಸಾಮಾಜಿಕ ಬದುಕಿನ, ರಾಜಕೀಯ ಜೀವನದ ಮತ್ತು ವರ್ಗ ಸಂಘರ್ಷದ ವಿಚಾರಗಳನ್ನು ವೈಚಾರಿಕ ಹಾಗೂ ವಿಶ್ಲೇಷಣೆಗೆ ಇಲ್ಲಿ ಲೇಖಕರು ಒಳಪಡಿಸಿದ್ದಾರೆ. ಬಸವಣ್ಣನ ಹುಟ್ಟು, ಜಾತಿಯ ಬಗ್ಗೆ ವಿಶ್ಲೇಷಣೆ ಇದರಲ್ಲಿದೆ. ಇತಿಹಾಸದ ಕಾಲದಿಂದಲೂ ವರ್ಗರಹಿತ ಸಾಮಾಜಿಕ ವ್ಯವಸ್ಥೆ ನಿರ್ಮಾಣ ಮಾಡಲು ಸಮಾಜದಲ್ಲಿ ಸಂಘರ್ಷಗಳು ನಡೆಯುತ್ತಲೇ ಬಂದಿವೆ. ಪ್ರಪಂಚದ ಸಾಮಾಜಿಕ ವ್ಯವಸ್ಥೆಯನ್ನು ಗಮನಿಸಿದರೆ ಎಲ್ಲ ಸಮಾಜಗಳಲ್ಲಿ ಬುದ್ಧಿವಂತರೆನ್ನಿಸಿಕೊಂಡವರಿಂದ ಸಾಮಾಜಿಕ, ರಾಜಕೀಯ, ಧಾರ್ಮಿಕ ಆಳ್ವಿಕೆ ನಡೆದಿದೆ. ಇವುಗಳ ಪರಿಣಾಮದಿಂದ ಸುಧಾರಣೆ ನಡೆದಿದೆ. ಆದರೆ, ವೇದಗಳ ಕಾಲದಲ್ಲಿ ವೃತ್ತಿಗನುಸಾರವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ವರ್ಗಗಳು ಹುಟ್ಟಿಕೊಂಡವು ಎಂದು ಅಂದಾಜಿಸಲಾಗುತ್ತಿದೆ.
ಬಸವಣ್ಣ ಬ್ರಾಹ್ಮಣ ಕುಲದಲ್ಲಿ ಹುಟ್ಟಿದವನು. ಅಥವಾ ಕೆಳವರ್ಗದಲ್ಲಿ ಹುಟ್ಟಿದವನು ಎಂದು ಹಲವು ವಚನಗಳಲ್ಲಿ ಹೇಳಿರುವುದನ್ನು ಗಮನಿಸಬಹುದು. ಜೊತೆಗೆ ವಚನಗಳಲ್ಲಿ ನಾನು ಹೊರಗಣನವನು ಎಂದು ಹೇಳಿಕೊಂಡಿದ್ದಾನೆ.
ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗನು.
ಇವರಿಬ್ಬರಿಗೂ ಹುಟ್ಟಿದ ಮಗ ನಾನು
ಕೂಡಲಸಂಗಮದೇವಾ ಸಾಕ್ಷಿಯಾಗಿ
ಎಂದು ಹೇಳಿಕೊಂಡಿದ್ದಾನೆ.
ಇನ್ನೂ ಕೆಲವೆಡೆ, ಬಸವಣ್ಣ ಕೆಳ ವರ್ಗದ ಜಾತಿಯನ್ನು ಒಪ್ಪಿಕೊಳ್ಳುತ್ತಿರುವುದು ಮತ್ತು ಮೇಲ್ವರ್ಗದ ಜಾತಿಯನ್ನು ದೂರೀಕರಿಸುವುದು ಕಂಡುಬರುತ್ತದೆ. ಬಸವಣ್ಣ ನಾನು ನಿಮ್ಮೊಳಗೊಬ್ಬ ಕೆಳವರ್ಗವನ್ನು ಅಪ್ಪಿಕೊಂಡರೆ ಸಾಮಾಜಿಕ ಸುಧಾರಣೆ ಮಾಡಬಹುದೆಂದು ಅರಿತಿದ್ದನು.
ಬಸವಣ್ಣನ ಮರಣ:
ಬಿಜ್ಜಳ ಮತ್ತು ವೈಷ್ಣವ ಭಕ್ತರಿಗೂ ವರ್ಗ ಸಂಘರ್ಷವಾಗುತ್ತಿರುವ ಸಂದರ್ಭದಲ್ಲಿ ಬಸವಣ್ಣ ಮೃತನಾದ ಎಂದು ಊಹಿಸಲಾಗುತ್ತಿದೆ. ಪ್ರಜಾಪ್ರಭುತ್ವ ಮಾದರಿಯ ಅನುಭವ ಮಂಟಪ ಸ್ಥಾಪಿಸಿ, ವರ್ಗರಹಿತ ಸಮಾಜಕ್ಕಾಗಿ ಪ್ರಯತ್ನಿಸುವ ಸಂದರ್ಭದಲ್ಲಿ ಮೇಲ್ವರ್ಗ, ಕೆಳವರ್ಗಗಳ ಸಂಘರ್ಷದಲ್ಲಿ ಮಲಪ್ರಬಾ- ಕೃಷ್ಣಾ ನದಿಗಳ ಸಂಗಮದಲ್ಲಿ ನಿಧನ (ಐಕ್ಯ)ನಾಗಿರಬಹುದೆಂದು ಊಹಿಸಬಹುದು.
ಇದೇನೇ ಇದ್ದರೂ, ಬಸವಣ್ಣ ಯುಗಪುರುಷ, ಯುಗಪ್ರವರ್ತಕ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಸವಣ್ಣನ ವಿಚಾರಧಾರೆಗಳಿಗೆ ಅಲ್ಲಮಪ್ರಭುವಿನ ಅನುಭವ ಮಂಟಪಕ್ಕೆ, ಬಸವಣ್ಣನ ಸಂವಿಧಾನಕ್ಕೆ ಈಗಲೂ ಹೆಚ್ಚಿನ ಮೌಲ್ಯವಿದೆ. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರ್ಕಾರ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಬಸವಣ್ಣನನ್ನು ಪ್ರಜಾಪ್ರಭುತ್ವದ ಹರಿಕಾರ ಎಂದು ಸರ್ವನುಮತದಿಂದ ಅಂಗೀಕರಿಸಬಹುದು. ಪ್ರಪಂಚದ ಇತಿಹಾಸವನ್ನು ಗಮನಿಸಿದಾಗ ಮಹಾವ್ಯಕ್ತಿಗಳು ಜನ್ಮ ತಳೆಯುವುದೇ ಸಾಮಾಜಿಕ ವ್ಯವಸ್ಥೆ ಅಂಧಕಾರದಲ್ಲಿದ್ದಾಗ. ಸಾಮಾಜಿಕ ವ್ಯವಸ್ಥೆಯಲ್ಲಿ ಜನರನ್ನು ಶೋಷಿಸಿ ನಿಕೃಷ್ಟರಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಸಿದ್ದಾರ್ಥ ಬುದ್ಧನಾದ. ಅದೇ ರೀತಿ ಬಸವಣ್ಣನು ಜನ್ಮವೆತ್ತಿದ.
ಪ್ರಸ್ತುತ ಕೃತಿಯಲ್ಲಿ ಬಸವಣ್ಣನ ವಿಚಾರಧಾರೆಗಳನ್ನು ‘ಬಸವರಾಜ ದೇವರ ರಗಳೆ’, ತೆಲುಗು ಕವಿ ಹಾಲ್ಕುರಿಕೆ ಸೋಮನಾಥ ಅವರ ‘ಬಸವ ಪುರಾಣಮು’ (ಇದನ್ನು ಕನ್ನಡದಲ್ಲಿ ಭೀಮಕವಿ ಅನುವಾದಿಸಿದ್ದಾನೆ), ಜೊತೆಗೆ ಲಂಕೇಶ್ ಅವರ ‘ಸಂಕ್ರಾಂತಿ’ ನಾಟಕವನ್ನು ಆಧಾರವಾಗಿಟ್ಟುಕೊಂಡು ಲೇಖಕರು ವಿಶ್ಲೇಷಿಸಿದ್ದಾರೆ. ಬಸವರಾಜ ದೇವರ ರಗಳೆಯಲ್ಲಿ ಅದ್ಭುತಗಳ, ನಿಜ ಕಧೆಗಳ ಮೂಲಕ (ಪವಾಡಗಳ ) ಹಿಂದೆ ಭಕ್ತಿಯ ಪರಿಶುದ್ಧತೆಯನ್ನು, ಶ್ರೇಷ್ಠತೆಯನ್ನು, ಮನಗಾಣಬಹುದು. ಸಕಲವನ್ನೂ ಶಿವಾರ್ಪಣೆಗೈಯ್ಯುವ ಬಸವಣ್ಣ ಭಕ್ತಿ ಎಂಬ ಮಹಾಸಂಪತ್ತಿನ ಒಡೆಯನಾಗಿ, ಧರ್ಮಜ್ಯೋತಿಯ ಹಾಗೆ ಬೆಳಗಲ್ಪಟ್ಟು, ಅಂತ್ಯದಲ್ಲಿ ಕೈಲಾಸಗಿರಿಗೆ ಪರಶಿವನ ಸಾನಿಧ್ಯಕ್ಕೆ ಆಹ್ವಾನಿತನಾಗುತ್ತಾನೆ. ಆತನ ಜೀವನದಲ್ಲಿನ ಪ್ರತಿಯೊಂದು ಘಟನೆಗಳು ವಚನಗಳು ಮತ್ತು ರಗಳೆಗಳೊಂದಿಗೆ ಪೌರಾಣಿಕವಾಗಿ ಇದರಲ್ಲಿ ವಿಮರ್ಶಿಸಲ್ಪಟ್ಟಿವೆ.
ಭೀಮಕವಿ ಚಿತ್ರಿಸಿದ ಬಸವಣ್ಣನಲ್ಲಿ ಬಸವಣ್ಣ ತಂದೆ ಶೈವ ಬ್ರಾಹ್ಮಣ ಮತ್ತು ತಾಯಿ ಮಾದಲಾಂಬಿಕೆ. ಯರಲ್ಲಿ ಹುಟ್ಟಿ ಬ್ರಾಹ್ಮಣ ಧರ್ಮದ ಮಾರ್ಗವನ್ನು ಹಿಡಿದು ಮಾತನಾಡುವುದಾದಲ್ಲಿ ನನಗೆ ಅದು ಹಿಡಿಸುವುದಿಲ್ಲ. ನನಗೆ ಇನ್ನು ಮುಂದೆ ಶಿವನ ಭಕ್ತರೇ ತಂದೆ -ತಾಯಿ. ನಿಮ್ಮ ಆಚಾರದಲ್ಲಿ ನೀವು ಇರಿ. ನನ್ನ ಆಚಾರದಲ್ಲಿ ನಾನಿರುತ್ತೇನೆ. ಇದು ನನ್ನ -ನಿಮ್ಮ ಸಂಬಂಧ ಎಂದು ಸ್ಪಷ್ಟವಾಗಿ ಬಸವಣ್ಣ ಹೇಳುವುದನ್ನು ವಿವರಿಸಲಾಗಿದೆ. ಜೊತೆಗೆ ಸಹೋದರಿ ನಾಗಾಂಬಿಕೆಯ ಜೊತೆಗೆ ಮನೆ ತ್ಯಜಿಸಿ ಹೊರಬರುತ್ತಾನೆ. ಬಿಜ್ಜಳನ ಭಂಡಾರಿಯಾಗಿದ್ದ ಬಲದೇವನ ಮಗಳು ಗಂಗಾದೇವಿಯನ್ನು ಬಸವಣ್ಣ ವರಿಸುತ್ತಾನೆ. ನಂತರ ಬಿಜ್ಜಳನಿಗೆ ಈತ ನಿಮಗೆ ಮಂತ್ರಿಪದವಿಗೆ ತಕ್ಕವನೆಂದು ಸೂಚಿಸುತ್ತಾನೆ.
ಲಂಕೇಶ್ ಅವರ ‘ಸಂಕ್ರಾಂತಿ’ ನಾಟಕದಲ್ಲಿ ಬಸವಣ್ಣನ ಸಾಮಾಜಿಕ ಸಂಘರ್ಷಗಳನ್ನು ಗುರುತಿಸಬಹುದು. ಆಸ್ಥಾನದಲ್ಲಿ ಕ್ರಾಂತಿ ನಡೆಯುತ್ತದೆ. ಏನಾಗುತ್ತಿದೆ ಎನ್ನುವುದು ಗೊತ್ತಾಗದ ಸ್ಥಿತಿ ಇರುತ್ತದೆ. ಅಂತರ್ಜಾತಿ ವಿವಾಹ, ಸಹಪಂಕ್ತಿ ಭೋಜನ ಮಾಡುತ್ತಾರೆ. ಇದನ್ನು ಅನೇಕ ವಚನಕಾರರು ಅನುಸರಿಸುತ್ತಾರೆ. ನಾಟಕದಲ್ಲಿ ಬಸವಣ್ಣನ ಜಾತಿ ಮತ್ತು ವರ್ಗ ಸಂಘರ್ಷ ಕಾಣಬಹುದಾಗಿದೆ. ಈ ನಾಟಕದಲ್ಲಿ ಬಸವಣ್ಣ ಆಡುವ ಒಂದು ಮಾತನ್ನು ಗಮನಿಸಬಹುದು- ಸಮಸಮಾಜವಾಗಬೇಕಾದರೆ ಅಂತರ್‌ಜಾತಿ ವಿವಾಹ, ಸಂಹಪಂಕ್ತಿ ಭೋಜನವಾಗಬೇಕು. ದೇವರುಗಳ ರಾಜ್ಯ, ದೇವಸ್ಥಾನ ನಿರ್ಮಾಣವಾಗಬಾರದು.
ಡಾ. ಜಿ ಎಸ್ ಅಶೋಕ್ ಅವರು ತಮ್ಮ ‘ಸಂಕ್ರಾಂತಿಯಲ್ಲ, ಶಿವರಾತ್ರಿ’ ಎಂಬ ನಾಟಕದಲ್ಲಿ, ಹೀಗೆ ಬರೆಯುತ್ತಾರೆ- ಕಲ್ಯಾಣ ಕ್ರಾಂತಿಯ ನಂತರ ಹಲವು ವಚನಕಾರರು ವಚನದ ಕಟ್ಟುಗಳನ್ನು ತೆಗೆದುಕೊಂಡು ಬೇರೆ ಬೇರೆ ಕಡೆಗಳಿಗೆ ಚದುರುತ್ತಾರೆ. ನಂತರ ಶಿವರಾತ್ರಿಗಾಗಿ ಕಾಯುತ್ತಾರೆ. ಇದು ಶಿವರಾತ್ರಿ ದಿನ ರಾತ್ರಿಯ ಕನಸಲ್ಲಿ ಶಿವ ಸಾನಿಧ್ಯದಲ್ಲಿ ನಡೆಯುವ ನಾಟಕ. ಬಸವಣ್ಣ, ಬಿಜ್ಜಳ ಸ್ಮಶಾನವಾಸಿ ಶಿವನ ಬಳಿ ಹೋಗುತ್ತಾರೆ. ಸಂಕ್ರಾಂತಿಯಲ್ಲಿ ಸಂಘರ್ಷಗಳು ಮುಗಿದು ಶಿವರಾತ್ರಿ ಶಾಂತಿ, ಸಮಾಧಾನವಿರುತ್ತದೆ. ಪ್ರಶಾಂತ ವಾತಾವರಣವಿರುತ್ತದೆ. ಶಿವನು ಕೂಡ ಆದಿಯೋಗಿಯಾಗಿ ಕುಳಿತಿರುತ್ತಾನೆ. ಶಿವ ಸಾನಿಧ್ಯ ಹೊಂದಿ ಎಲ್ಲ ಶರಣರು ದೇವಲೋಕ ಸೇರುತ್ತಾರೆ.
ಒಟ್ಟಿನಲ್ಲಿ, ಈ ಮೂರು ಕೃತಿಗಳ ಹಿನ್ನೆಲೆಯಲ್ಲಿ ನಾವು ಗಮನಿಸಬಹುದಾದದ್ದು ಏನೆಂದರೆ- ಬಸವಣ್ಣ ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬ್ರಾಹ್ಮಣನಾಗದೆ, ಲಿಂಗಾಯತ ಧರ್ಮವನ್ನು ಅನುಸರಿಸಿ ಲಿಂಗಾಯತನಾಗದೆ, ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ ಇವುಗಳನ್ನು ಅನುಸರಿಸಿ ಸಮಾಜೋಧಾರ್ಮಿಕ ವ್ಯಕ್ತಿಯಾಗುತ್ತಾನೆ.
ಎಂಟು ನೂರು ವರ್ಷಗಳ ಹಿಂದೆ ಜರುಗಿದ ವಚನ ಚಳವಳಿಯು ಬಸವಣ್ಣನವರ ನಾಯಕತ್ವದಲ್ಲಿ ನಡೆದ ಸಂಘಟನಾತ್ಮಕ, ಜೀವಪರ, ಸಮಾಜಮುಖಿ ಚಿಂತನೆ, ಸಾಹಿತ್ಯ, ಪ್ರತಿಭೆ, ಸಮಸಮಾಜದ ಪರಿಕಲ್ಪನೆಯನ್ನು ನಮಗೆ ನೀಡಿದೆ. ಹಾಗಾಗಿ ಹಿಂದೆಂದಿಗಿಂತಲೂ ಹೆಚ್ಚು ಇಂದು ಇದು ಚರ್ಚೆಯಾಗುತ್ತಿದೆ. ವಚನಗಳ ನಿರ್ವಚನ ನಿರಂತರವಾದರೂ, ಹಾಗೆಯೇ ಮರು ಮೌಲ್ಯಮಾಪನಕ್ಕೆ ಒಳಗು ಮಾಡುತ್ತ, ಪ್ರಜಾಸತ್ತಾತ್ಮಕ ವಿಚಾರಗಳ ನೆಲೆಯಲ್ಲಿ ಲೇಖಕರು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಿರುವುದನ್ನು ನಾವು ಕಾಣಬಹುದು.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

Comments
Post a Comment