ಸಮಕಾಲೀನ ಸಂಗತಿಗಳಿಗೆ ಮರುವ್ಯಾಖ್ಯಾನವಾಗುವ
‘ನಗರ ಬಾಯಾರಿಕೆ’
‘ನಗರ ಬಾಯಾರಿಕೆ’ ಇದು ಪತ್ರಕರ್ತ ಶ್ರೀನಿವಾಸ್ ಜೋಕಟ್ಟೆ ಅವರ ಲೇಖನಗಳ ಸಂಗ್ರಹದ ಕೃತಿ. ಮುಂಬೈಯಲ್ಲಿ ಪತ್ರಕರ್ತರಾಗಿ ಹೆಸರು ಗಳಿಸಿರುವ ಶ್ರೀನಿವಾಸ್ ವಿವಿಧ ಸಂದರ್ಭಗಳಲ್ಲಿ ಬರೆದ ಲೇಖನಗಳು ಇದರಲ್ಲಿವೆ. ಸಮಕಾಲೀನ ಸಂಗತಿಗಳಿಗೆ ಮರುವ್ಯಾಖ್ಯಾನವಾಗಿರುವ ಈ ಬರಹಗಳಲ್ಲಿ ಅವರ ಸೂಕ್ಷ್ಮತೆಯ ಶೋಭೆ ಇದೆ. ಅವರ ಪಕ್ವತೆ, ಪ್ರಬುದ್ಧತೆಗೆ ಈ ವೈವಿಧ್ಯಮಯ ಕೃತಿ ಸಾಕ್ಷಿಯಾಗಿದೆ. ಮುಂಬೈಯಂತಹ ಮಹಾನಗರದಲ್ಲಿ ಆಧುನಿಕತೆಯ ಮೇಲೆ ನಿಂತು ವಾಸ್ತವಕ್ಕೆ ನಿರ್ದಾಕ್ಷಿಣ್ಯ ಕನ್ನಡಿ ಹಿಡಿದು ತಿಳಿಮನಸ್ಸಿನಿಂದ ಬರೆದ ಲೇಖನಗಳು ಇದರಲ್ಲಿವೆ.
ಈ ಕೃತಿಯಲ್ಲಿ ಸುಮಾರು ೬೭ ಲೇಖನಗಳಿವೆ. ಅವು ಸಾಮಾಜಿಕ, ಸಾಹಿತ್ಯಿಕ, ಸಂದರ್ಶನ, ಸ್ಥಳಗಳ ಐತಿಹ್ಯ, ವ್ಯಕ್ತಿ ಚಿತ್ರಣ ಮೊದಲಾದ ರೂಪದಲ್ಲಿವೆ. ಇವುಗಳಲ್ಲಿ ಆಯ್ದ ಕೆಲವು ಲೇಖನಗಳ ಕುರಿತಾದ ಅವಲೋಕನ ಮಾಡಲಾಗಿದೆ.
‘ಹಿಮಾಲಯದ ಸುನಾಮಿಗೆ ತತ್ತರಿಸಿದ ‘ಪ್ರಳಯ’ ಖಂಡ ಬರಹದಲ್ಲಿ ೨೦೧೩ರ ಜೂನ್ ತಿಂಗಳಿನಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಪ್ರಳಯ ಸಂಭವಿಸಿದ್ದನ್ನು ವಿವರಿಸಿದ್ದಾರೆ. ಇಂದಿಗೂ ಸಂತ್ರಸ್ಥರಿಗೆ ಸೂರು ಸಿಕ್ಕಿಲ್ಲ. ಮೊದಲಿನ ಸ್ಥಿತಿಯಲ್ಲಿ ಜನರಿಲ್ಲ. ಉತ್ತರಾಖಂಡ ರಾಜ್ಯವಾದ ಮೇಲೆ ಅಲ್ಲಿ ವಿಕಾಸದ ಹೆಸರಿನಲ್ಲಿ ಪ್ರಕೃತಿಯ ಜೊತೆ ಕೀಟಲೆ ನಡೆಸುತ್ತಾ ಅರಣ್ಯ ಕಡಿಯುವುದು, ನದಿಗಳನ್ನು ವಿಭಜಿಸುವುದು, ಒತ್ತುವರಿ, ನದಿ ತೀರಗಳಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಾ ಸಂಪೂರ್ಣವಾಗಿ ಪರಿಸರವನ್ನು ಲೂಟಿ ಮಾಡಿ ಕಾಂಕ್ರೀಟ್ ಅರಣ್ಯ ನಿರ್ಮಿಸಿದ್ದರ ಫಲವಾಗಿ ಇಂತಹ ಪರಿಸ್ಥಿತಿ ಎದುರಾಯಿತು ಎಂದು ಬರೆದಿದ್ದಾರೆ.
‘ಇತಿಹಾಸ ಸೇರಿದ ಟೆಲಿಗ್ರಾಂ’ ಎಂಬ ಲೇಖನದಲ್ಲಿ, ಒಂದು ಕಾಲದಲ್ಲಿ ಅತ್ಯಂತ ಜರೂರಿನ ಸಂದೇಶಗಳನ್ನು ಟೆಲಿಗ್ರಾಂ ಮೂಲಕ ಕೊಡಲಾಗುತ್ತಿತ್ತು ೧೮೫೩ ರಲ್ಲಿ ಭಾರತಕ್ಕೆ ಬಂದ ಟೆಲಿಗ್ರಾಂ ೧೬೩ ವರ್ಷಗಳ ಪಯಣ ಮುಗಿಸಿ ಬಂದ್ ಆಗಿದೆ. ಪ್ರಥಮ ಟೆಲಿಗ್ರಾಮ್ ಬ್ರಿಟಿಷ್ ಕಾಲದಲ್ಲಿ ಕೊಲೊತ್ತಾದಿಂದ ಮತ್ತು ಡೈಮಂಡದ ಹಾರ್ಬರ್ ಮೂಲಕ ಬಂದಿತ್ತು. ಕೊನೆಯ ಟೆಲಿಗ್ರಾಮ್ ಜುಲೈ ೧೪, ೨೦೧೩ರಂದು ರಾತ್ರಿ ೧೧.೫೮ಕ್ಕೆ ಈಶಾನ್ಯ ರಾಜ್ಯದ ಬಾಲಕಿಯೊಬ್ಬಳು ಹಿರಿಯ ಪತ್ರಕರ್ತ ಎಂ ಜೆ ಅಕ್ಬರ್ ಅವರಿಗೆ ರವಾನೆಯಾಯಿತು. ಅದಕ್ಕೂ ಮುನ್ನ ಅಂದರೆ ೧೧.೪೫ ಕ್ಕೆ ರಾಹುಲ್ ಗಾಂಧಿ ಮತ್ತು ಡಿಡಿ ನಿರ್ದೇಶಕ ಎಸ್ ಎಂ ಖಾನ್ ಅವರಿಗೆ ಅಶ್ವನಿ ಮಿಶ್ರಾ ಎನ್ನುವವರು ಕಳಿಸಿದ್ದರು. ಕೊನೆಯ ಟೆಲಿಗ್ರಾಮನ್ನು ಸ್ವೀಕರಿಸಿದ ಇತಿಹಾಸ ಇವರಿಬ್ಬರ ಹೆಸರಲ್ಲಿದೆ ಎನ್ನುವದುನ್ನು ಉಲ್ಲೇಖಿಸಿದ್ದಾರೆ.
‘ಬೌದ್ಧರ ಚಾರ್ ಧಾಮ್ ಯಾತ್ರೆ’ ಎಂಬ ಲೇಖನದಲ್ಲಿ ಹಿಂದು ಧರ್ಮದಲ್ಲಿ ಚಾರ್‌ಧಾಮ್ ಯಾತ್ರೆಗೆ ಮಹತ್ವ ಇರುವಂತೆ ಬೌದ್ಧರಲ್ಲೂ ಮಹತ್ವವಿದೆ. ಅದರೆ ಬೌದ್ಧರ ಚಾರ್‌ಧಾಮ್ ಹಿಂದುಗಳು ಯಾತ್ರೆ ಮಾಡುವ ಸ್ಥಳವಲ್ಲ. ಬದಲಾಗಿ ಲುಂಬಿನಿ, ಬೋಧಗಯಾ, ಸಾರಾನಾಥ್ ಮತ್ತು ಕುಶೀನಗರ. ಲುಂಬಿನಿ ಬುದ್ಧನ ಜನ್ಮಸ್ಥಳವಾಗಿದೆ. ಇದು ಈಗ ನೇಪಾಳದಲ್ಲಿದೆ. ಲುಂಬಿನಿಯ ದರ್ಶನ ಮಾಡಿದ್ದರೆ ಬುದ್ಧನ ದರ್ಶನವಾಗುವುದಿಲ್ಲ ಎಂಬ ನಂಬಿಕೆ ಇದೆ. ಬೋಧಗಯಾದಲ್ಲಿ ಬುದ್ಧ್ದನಿಗೆ ಜ್ಞಾನೋದಯವಾಗಿದೆ ಎಂದು ನಂಬಲಾಗುತ್ತಿದೆ. ಸಾರಾನಾಥವು ಋಷಿಮುನಿಗಳ ಕ್ಷೇತ್ರವಾಗಿತ್ತು. ಇಲ್ಲಿ ವಿಶ್ವದ ಅತಿ ಎತ್ತರದ ಬುದ್ಧ ಪ್ರತಿಮೆ ಇದೆ. ಕುಶೀನಗರ ಇದು ಬುದ್ಧಪರಿನಿರ್ವಾಣದ ಸ್ಥಳ. ಇದನ್ನು ರಾಮನ ಪುತ್ರ ಕುಶ ನಿರ್ಮಿಸಿದ ಎಂಬ ಐತಿಹ್ಯವಿದೆ.
‘ಮೇಘಾಲಯ ಮೇಘಗಳ ಆಲಯ’ ಈ ಲೇಖನದಲ್ಲಿ ಅಸ್ಸಾಂನಿಂದ ಪ್ರತ್ಯೇಕಗೊಂಡು ೨೧ನೇ ರಾಜ್ಯವಾಗಿ ೧೯೭೦ರಲ್ಲಿ ಜನ್ಮ ತಳೆದ ಮೇಘಾಲಯ ಬೆಟ್ಟ ಪ್ರದೇಶಗಳ ರಾಜ್ಯವಾಗಿದೆ. ಖಾಸಿ ಮೂಲನಿವಾಸಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಚಿರಾಪುಂಜಿ ಇಲ್ಲಿನ ಪ್ರಮುಖ ಪ್ರದೇಶವಾಗಿದ್ದು ಇಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ಮೇಘಾಲಯವನ್ನು ಸುತ್ತಾಡುವುದು ಅತಿ ಸುಂದರ ಕ್ಷಣ. ಮೋಡಗಳ ಚೆಲ್ಲಾಟವನ್ನು ಕಾಣಬೇಕಾದರೆ ಮೇಘಾಲಯಕ್ಕೆ ಬನ್ನಿ ಎಂದು ಆಹ್ವಾನಿಸುತ್ತಾರೆ.
‘ಅಂಡಾಕಾರದ ರಾಜ್ಯ ಮಣಿಪುರ’ದಲ್ಲಿ ಮಣಿಪುರದ ಮೈತೇಯಿ ಮತ್ತು ಕುಕಿ ಜನ ಸಮುದಾಯಕ್ಕೂ ನಾಗಾ ಉಗ್ರರಿಗೂ ಕಲಹ ೨೦೦೧ರಿಂದ ನಡೆಯುತ್ತಿರುವುದನ್ನು ಪ್ರಸ್ತಾಪಿಸಿದ್ದಾರೆ. ಇದರಿಂದ ಈ ರಾಜ್ಯಕ್ಕೆ ಪ್ರವಾಸಿಗರು ಬರಲು ಹೆದರುವಂತಾಗಿದೆ. ಬರ್ಮಾದೇಶಕ್ಕೆ ಗಡಿಯನ್ನು ಹೊಂದಿz ಮಣಿಪುರ ೧೯೫೦ ರಲ್ಲಿ ರಾಜ್ಯವಾಯಿತು. ಆದರೆ ೧೯೭೨ ರಲ್ಲಿ ಇದಕ್ಕೆ ರಾಜ್ಯದ ಪಟ್ಟವನ್ನು ನೀಡಲಾಗಿದೆ. ವೈಷ್ಣವ ಹಿಂದೂಗಳಾದ ಮೈತೇಯಿ ಸಮುದಾಯದವರು ಇಲ್ಲಿರುವುದು ವಿವರಿಸುತ್ತಾ, ಜವಾಹರಲಾಲ್ ನೆಹರು ಈ ರಾಜ್ಯವನ್ನು ಪೂರ್ವದ ಕಾಶ್ಮೀರ ಎಂದು ಕರೆದಿದ್ದನ್ನು ಸ್ಮರಿಸುತ್ತಾರೆ.
‘ಕುಲು ಮತ್ತು ಮನಾಲಿ’ ಇವು ಹಿಮಾಚಲ ಪ್ರದೇಶದ ಈ ಸುಂದರ ಪ್ರದೇಶಗಳು. ವಿಶ್ವ ಪ್ರಸಿದ್ಧ ಕಣಿವೆ ಎಂದು ಇವುಗಳನ್ನು ಕರೆಯಲಾಗುತ್ತದೆ. ಜವಾಹರ ಲಾಲ್ ನೆಹರು ಅವರು ಇದನ್ನು ಸ್ವಿಜರ್‌ಲ್ಯಾಂಡ್‌ಗಿಂತಲೂ ಸುಂದರ ಪ್ರದೇಶ ಇದು ಎಂದು ಕರೆದಿರುವುದನ್ನು ವಿವರಿಸಿದ್ದಾರೆ. ‘ಮುಂಬೈ ಕನ್ನಡಿಗರು’ ಲೇಖನದಲ್ಲಿ ಕರ್ನಾಟಕದಿಂದ ಬಂದವರು ಇಲ್ಲಿಯೇ ನಿವೃತ್ತಿ ಹೊಂದಿದರೂ ನಂತರ ಊರಿಗೆ ಹೋಗಬೇಕೆಂಬ ಮನಸಿದ್ದರೂ ಇಲ್ಲಿಯೇ ವಸತಿ ಮಾಡಿರುವುದನ್ನು ಸ್ಮರಿಸುತ್ತಾರೆ. ಯಶವಂತ್ ಚಿತ್ತಾಲ್, ಸುನೀತಾ ಶೆಟ್ಟಿಯಂತಹ ಸಾಹಿತಿಗಳು ಅಲ್ಲಿಯೇ ಸಾಹಿತ್ಯ ವಲಯದಲ್ಲಿ ಕೆಲಸ ಮಾಡಿ ತಮ್ಮ ಹೆಸರನ್ನು ಛಾಪಿಸಿದರು. ಈಗ ಇಲ್ಲಿ ಕನ್ನಡ ಕಾರ್ಯಕ್ರಮಗಳು ಮೊದಲಿನಂತೆ ನಡೆಯುತ್ತಿಲ್ಲ. ಅನೇಕರು ಸಾಕಷ್ಟು ಪ್ರಾಪರ್ಟಿ ಮಾಡಿದ್ದಾರೆ. ಆದರೆ ಇದನ್ನುಳಿಸಲು ಏನು ಮಾಡಿದ್ದಾರೆ ಎನ್ನುವುದಕ್ಕೆ ಉತ್ತರವಿಲ್ಲ.
‘ಕೋಮುವಾದದ ಕತ್ತಲೆಯಿಂದ ಸೌಹಾರ್ದತೆಯ ಬೆಳಕಿನೆಡೆಗೆ’ ಲೇಖನದಲ್ಲಿ ಹಿಂದು- ಮುಸ್ಲಿಂ ಸಂಬಂಧ ಯಾಕೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ಪ್ರಶ್ನಿಸುವ ಲೇಖಕರು, ಚರಿತ್ರೆಯ ವಿಕೃತ ಪ್ರಚಾರ ಆ ಬಗೆಗೆ ಬರೆದ ಲೇಖನಗಳು ಕೋಮು ಪ್ರಚೋದನೆಗೆ ಕಾರಣವಾಗಿವೆ. ರಾಜಕಾರಣಿಗಳ ಬಾಲಂಗೋಚಿಗಳು ಒಂದು ಕಡೆಯಾದರೆ, ಮುಸ್ಲಿಮರ ಮೂಲ ಸಮಸ್ಯೆಗಳನ್ನು ಪರಿಹಾರ ಮಾಡದ ಅವರ ಅಭ್ಯರ್ಥಿಗಳು ಇನ್ನೊಂದು ಕಡೆ, ಜೊತೆಗೆ ಸಮೂಹ ಮಾಧ್ಯಮಗಳು ಕೂಡ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿರುವುದು, ಕೆಲವರು ಹಿಂದು ರಾಷ್ಟ್ರದ ನಿರ್ಮಾಣಕ್ಕೆ ಹೊರಟಿರುವುದು... ಹೀಗೆ ಹಲವು ಕಾರಣಗಳನ್ನು ನೀಡುತ್ತಾ ಭಾರತೀಯ ಧರ್ಮವನ್ನು ಕೆಲವರು ಸಂಕುಚಿತ ಅರ್ಥದಲ್ಲಿ ಬಳಸುತ್ತಿದ್ದಾರೆ. ಭಾರತೀಯ ಧರ್ಮ ಎಂದರೆ ಹಿಂದೂ ಧರ್ಮ ಎನ್ನುವ ಮಟ್ಟಿಗೆ ಹೆಜ್ಜೆ ಇಡುತ್ತಿದ್ದೇವೆ ಎಂದು ವಿವರಿಸುತ್ತಾರೆ.
‘ಮುಂಬೈಯ ಸೆಳೆತ’ ಎಂಬ ಲೇಖನದಲ್ಲಿ ಮಾಯಾನಗರ ಎಂದು ಕರೆಸಿಕೊಳ್ಳುವ ಮುಂಬೈ ಬದುಕನ್ನು ಅರಸಿಕೊಂಡು ಪ್ರತಿ ದಿನವೂ ಸಾವಿರಕ್ಕೂ ಹೆಚ್ಚು ಜನರು ಹೊರಗಿನಿಂದ ವಲಸೆ ಬರುತ್ತಿದ್ದಾರೆ. ಇಲ್ಲಿಗೆ ವಲಸೆ ಬರುತ್ತಿರುವ ಪರಪ್ರಾಂತಿಯರ ವಿರುದ್ಧ ಸ್ಥಳೀಯರು ರೋಷ ತಾಳಿದ್ದಾರೆ. ೬೦ರ ದಶಕದಲ್ಲಿ ದಕ್ಷಿಣ ಭಾರತೀಯರ ವಿರುದ್ಧ ಈ ಆಕ್ರೋಶ ಕಂಡುಬಂದಿದ್ದರೆ, ೨೧ನೇ ಶತಮಾನದ ಆರಂಭದಲ್ಲಿ ಉತ್ತರ ಭಾರತೀಯರ ವಿರುದ್ಧ ಅಂದರೆ ಬಿಹಾರ್ ಉತ್ತರಪ್ರದೇಶಗಳಿಂದ ಬರುತ್ತಿರುವ ಜನರನ್ನು ತಡೆಯುವಂತೆ ಸ್ಥಳೀಯ ಕೆಲವು ರಾಜಕೀಯ ಪಕ್ಷಗಳು ಕರೆ ನೀಡುತ್ತಿರುವುದು ಆತಂಕ ಹುಟ್ಟಿಸಿದೆ ಎನ್ನುತ್ತಾರೆ
‘ಪತ್ರಕರ್ತರು ಸುದ್ದಿಗಳ ಹಿಂದೆ ಅಂಟಿಕೊಂಡಿದ್ದಾರೆ’ ಲೇಖನದಲ್ಲಿ, ಪತ್ರಕರ್ತರು ಇಂದು ಸಾಮಾಜಿಕ ಜವಾಬ್ದಾರಿಯನ್ನು ಮರೆತು ರಾಜಕಾರಣಿಗಳ ಹಿಂದೆ ಓಡುತ್ತಿರುವುದು ಭ್ರಷ್ಟರಾಗಿರುವುದು ಬಗ್ಗೆ ವಿವರವಾಗಿ ಬರೆದಿದ್ದಾರೆ ಒಬ್ಬ ಪತ್ರಕರ್ತ ಆಗುವುದೇ ಆತ ಸಾಮಾಜಿಕ ಜವಾಬ್ದಾರಿ ಹೊತ್ತಿದ್ದಾನೆ. ಅದಿಲ್ಲದಿದ್ದರೆ ಪತ್ರಿಕೋದ್ಯಮಕ್ಕೆ ಅರ್ಥವೂ ಇಲ್ಲ. ಪತ್ರಿಕೋದ್ಯಮ ಸಮಾಜದ ಒಂದು ಭಾಗವೇ ಆಗಿದೆ. ಆದ್ದರಿಂದ ಇಂದು ಭ್ರಷ್ಟಾಚಾರದಿಂದ ಅದು ಹೊರತಾಗಿಲ್ಲ. ಪತ್ರಕರ್ತರಲ್ಲಿ ಸಾಮಾಜಿಕ ಬದ್ಧತೆ ಕಡಿಮೆಯಾಗುತ್ತಿದೆ. ಪತ್ರಕರ್ತ ತಪ್ಪು ಮಾಡಿದರೆ ಇಡಿ ಸಮಾಜ, ವ್ಯವಸ್ಥೆ ಕೆಟ್ಟುಹೋಗುತ್ತದೆ. ಹೆಚ್ಚು ಪತ್ರಿಕೆಗಳು ಬಂಡವಾಳ ಶಾಹಿಗಳ ಕೈಯಲ್ಲಿವೆ. ಪತ್ರಿಕೆಗಳು ಸದಾ ಕಾಲ ಸರಕಾರದ ಪರಮನೆಂಟ್ ವಿರೋಧ ಪಕ್ಷವೇ ಆಗಿರಬೇಕು. ಒಳ್ಳೆಯ ಕೆಲಸ ಮಾಡಿದರೆ ಹೊಗಳಿ, ಕೆಟ್ಟ ಹೆಸರು ಪಡೆದಾಗ ಅದನ್ನು ಮುಚ್ಚಿ ಹಾಕಬಾರದು. ಪತ್ರಿಕೋದ್ಯಮ ಭ್ರಷ್ಟವಾಗಲು ಸಮಾಜವೂ ಒಂದು ಕಾರಣ ಎಂದು ವಿವರಿಸುತ್ತಾರೆ.
‘ಕನ್ನಡದ ಕುಲಪುತ್ರ ವಿ ಕೃ. ಗೋಕಾಕ್’ ಎಂಬ ಬರಹದಲ್ಲಿ ಕನ್ನಡಕ್ಕೆ ಐದನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಗೋಕಾಕರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಶಿಕ್ಷಕರಾಗಿದ್ದರಿಂದಲೇ ಅವರು ಹೆಚ್ಚು ಕೃತಿಗಳನ್ನು ಬರೆಯಲು ಸಾಧ್ಯವಾಯಿತು ಎಂದು ಅವರೇ ಹೇಳಿಕೊಂಡಿದ್ದಾರೆ. ಬೆಂಗಳೂರು, ಧಾರವಾಡ ವಿವಿಯ ಉಪಕುಲಪತಿಗಳಾಗಿ, ಶಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಿರ್ದೇಶಕರಾಗಿ ಕೆಲಸ ಮಾಡಿರುವ ಗೋಕಾಕರು, ಭಾರತ ಸಿಂಧೂರ ರಶ್ಮಿ ಎಂಬ ಮಹಾಕಾವ್ಯಕ್ಕೆ ೧೯೯೦ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಒಬ್ಬ ತಪಸ್ವಿಯಾಗಿದ್ದ ಅವರು, ಯಾವುದೇ ಪ್ರಶಸ್ತಿಗಳನ್ನು ಮೀರಿ ಬೆಳೆದವರು ಎಂದು ವಿವರಿಸುತ್ತಾರೆ.
ಕೃತಿಯ ಹೆಸರಿನ ಲೇಖನ ‘ನಗರ ಬಾಯಾರಿಕೆ’. ಇದಕ್ಕೆ ಸಂಬಂಧಪಟ್ಟ ಲೇಖನದಲ್ಲಿ ಕಾಸರಗೋಡಿನ ಕೇಶವಾನಂದ ಭಾರತಿ ಶ್ರೀಪಾದರ ಸಂದರ್ಶನವಿದೆ. ಧಾರ್ಮಿಕ ಬಾಯಾರಿಕೆ ನಗರದ ಜನರಿಗೆ ಜಾಸ್ತಿ ಇರುತ್ತದೆ. ಪೇಟೆಗಳಲ್ಲಿ ಯಾಂತ್ರಿಕ ಬದುಕು ಇರುವುದರಿಂದ ಅವರಿಗೆ ಮನಸಿಗೆ ನೆಮ್ಮದಿ ಇಲ್ಲ. ಹಳ್ಳಿಗಳಲ್ಲಿ ಚಾತುರ್ಮಾಸ ವೃತ ಮಾಡಿದರೆ ಅದು ಹೆಚ್ಚು ಜನರಿಗೆ ತಲುಪುವುದಿಲ್ಲ. ಹಾಗಾಗಿ ಮಠಾಧೀಶರು ಇದನ್ನು ನಗರ ಪ್ರದೇಶಗಳಲ್ಲಿ ಮಾಡುತ್ತಿದ್ದಾರೆ. ದೇವಸ್ಥಾನದ ಪಕ್ಕದಲ್ಲಿ ಮನೆ ಇದ್ದರೂ ಹಳ್ಳಿಗಳಲ್ಲಿ ದೇವಸ್ಥಾನಕ್ಕೆ ಬಂದು ಹೋಗುವವರು ಬಹಳ ಕಡಿಮೆ. ಪೂಜೆಗೂ ಬರುವುದಿಲ್ಲ. ಆದ್ದರಿಂದ ನಗರದಲ್ಲಿ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ. ಅಂತಹ ಬಾಯಾರಿಕೆ ನಗರದಲ್ಲಿ ಇದೆ ಸ್ವಾಮೀಜಿ ಹೇಳಿದ್ದನ್ನು ಇಲ್ಲಿ ವಿವರಿಸುತ್ತಾರೆ
ಹೀಗೆ ಈ ಕೃತಿಯಲ್ಲಿ ವಿವಿಧ ವಿಷಯಗಳ ಗೊಂಚಲಿದೆ. ಹಲವು ಹಿಂದಿ ಖ್ಯಾತ ಸಿನಿಮಾ ನಟರ ಬಗ್ಗೆ, ಹಲವು ಚಾರಿತ್ರಿಕ ಸ್ಥಳಗಳ ಮಹಿಮೆ ಬಗ್ಗೆ, ಆಯಾ ಸಂಧರ್ಭದಲ್ಲಿ ಬರೆದ ಲೇಖನಗಳನ್ನು ಸಂಗ್ರಹಿಸಿಟ್ಟು ಈ ಕೃತಿಯನ್ನು ರಚಿಸಿದ್ದಾರೆ. ಇದೊಂದು ಅಪೂರ್ವ ನೆನಪಿನ ಕೃತಿಯಾಗಿದೆ.
- ದತ್ತಾತ್ರೇಯ ಹೆಗಡೆ
೨೭.೨.೨೦೨೬
............................

Comments
Post a Comment