ಮಾನವೀಯ ಮೌಲ್ಯ ಅರಳಿಸುವ
‘ಭ್ರೂಣ’
‘ಭ್ರೂಣ’ ಇದು ಕಲಬುರಗಿಯ ಬರಹಗಾರ್ತಿ, ಸಂಶೋಧಕಿ ಡಾ. ಶ್ರೀದೇವಿ ರಾಠೋಡ್ ರಚಿತ ಕಾದಂಬರಿ. ಇದು ಮಾನವತೆಯ ಮೌಲ್ಯಗಳನ್ನು ಅರಳಿಸಿಕೊಡುತ್ತಾ, ಸಾರ್ವಕಾಲಿಕ ಸತ್ಯದ ನೆಲೆಯ ಅಂತರಂಗಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪ್ರೀತಿಯಲ್ಲಿ ನಿಷ್ಠೆ, ಪರಮಾದರ, ಚಾರಿತ್ರ್ಯ ಶುದ್ಧತೆ ಇದ್ದಾಗ ಸಾಕ್ಷಾತ್ಕಾರವಾಗುತ್ತದೆ. ಆದರೆ ಅದು ಸ್ವಾಭಾವಿಕತೆಯನ್ನು ಅರ್ಥಮಾಡಿಕೊಳ್ಳದ ನಿಸರ್ಗದ ಪವಿತ್ರ ತುಡಿತಗಳನ್ನು ಅನುಭವಿಸದೆ ಗೊಡ್ಡು ಆಚಾರ -ವಿಚಾರಗಳಿಗೆ ಮಾರುಹೋದಾಗ, ಅದನ್ನೇ ಆಚಾರವೆಂದು ನಂಬಿದಾಗ ಬಹಳಷ್ಟು ಕಷ್ಟ ಎದುರಿಸಬೇಕಾಗುತ್ತದೆ ಎನ್ನುವುದನ್ನು ತೋರಿಸಿಕೊಡುತ್ತದೆ.
ಕಂದಾಚಾರಗಳನ್ನು ತೊಡೆದುಹಾಕಿ ಮೌಲ್ಯಗಳ, ತ್ಯಾಗದ ಮೂಲಕ ಬದುಕಿನ ನಿರಭ್ರತೆಯಲ್ಲಿ ನೋಡಿದಾಗ ಸುಂದರವಾದ, ಸಾರವಾದ, ಸಮರಸದ ಜೀವನ ಪರಿಶುದ್ಧ ಎನ್ನುವುದನ್ನು ತೋರಿಸಿಕೊಡುತ್ತದೆ. ಪ್ರೀತಿಯ ಶಕ್ತಿ, ಆಯಾ ಪಾತ್ರಗಳಲ್ಲಿರುವ ಸ್ವಾರ್ಥತೆ, ತ್ಯಾಗ ಬದುಕಿನ ಚೈತನ್ಯವು ನಿರಂತರ ಚಿಲುಮೆಯಾಗಲು ಕಾರಣ ಎನ್ನುವುದನ್ನು ಈ ಕಥೆ ಕಟ್ಟಿಕೊಡುತ್ತದೆ. ಪ್ರೀತಿ ಸ್ವೇಚ್ಛಾರವಾಗದೆ ಎಲ್ಲರಿಗೂ ಸಹ್ಯವಾಗಿ ಪವಿತ್ರತೆಯಿಂದ ಇಲ್ಲಿ ಮೆರೆದಿರುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಪ್ರಸ್ತುತ ಕೃತಿಯಲ್ಲಿ ವೆಂಕಿ ಮತ್ತು ಜಾನು ನಾಯಕ ನಾಯಕಿಯರು. ಈ ಇಬ್ಬರ ನಾಯಕತ್ವದಲ್ಲಿ ಕಾದಂಬರಿ ಓಡುತ್ತದೆ.
ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ವೆಂಕಿ ಸರ್ಕಾರಿ ಶಾಲೆಯಲ್ಲಿ ಓದುವಾಗ ಇದ್ದ ಜಾತೀಯತೆಯನ್ನು ಮೆಟ್ಟಿನಿಂತು ಲಂಬಾಣಿ ಬಾಲಕಿ ಜಾನುವನ್ನು ಆಪ್ತವಾಗಿ ಕಾಣುವುದು, ಅವಳ ನೋವುಗಳಿಗೆ ಸ್ಪಂದಿಸಿ, ಬಡತನದ ಕಷ್ಟಕ್ಕೆ ನೆರವಾಗುವುದು, ಇದನ್ನು ತಿಳಿದ ಆತನ ಮನೆಯವರು ಕಟ್ಟಿಗೆ ತೆಗೆದುಕೊಂಡು ಆತನಿಗೆ ಹೊಡೆಯುವುದು, ಊರ ತುಂಬಾ ಇದು ದೊಡ್ಡ ಸುದ್ದಿಯಾಗಿ, ಜಾನಕಿ ಶಾಲೆಗೆ ಬಿಡುವುದು, ಆಕೆಗೆ ಬೇಕಾದ ನೋಟ್ಸ್‌ಗಳನ್ನೆಲ್ಲ ಕೊಟ್ಟು ಪರೀಕ್ಷೆ ಯನ್ನು ಉನ್ನತ ದರ್ಜೆಯಲ್ಲಿ ಪಾಸಗುವಂತೆ ಮಾಡುತ್ತಾನೆ. ನಂತರ ತಂದೆ ಓದುವುದು ಬೇಡ ಕೂಲಿ ಮಾಡಿಸುತ್ತೇನೆ ಎಂದಾಗ, ಶಿಕ್ಷಕ ರಾಮಣ್ಣ ಬಂದು ಮನವೊಲಿಸಿ ಹೈಸ್ಕೂಲ್ಗೆ ಸೇರಿಸಿದಾಗ ಎಸ್‌ಎಸ್‌ಎಲ್‌ಸಿಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗುತ್ತಾಳೆ. ಆಕೆಗೆ ತಹಸಿಲ್ದಾರ್ ಕಚೇರಿಯಲ್ಲಿ ಮೇಷ್ಟ್ರು ಕೊಡಿಸುತ್ತಾರೆ.
ವೆಂಕಿ ಬಿಎಸ್ಸಿ ಮಾಡಲು ಕಾಲೇಜಿಗೆ ಸೇರಿಕೊಳ್ಳುತ್ತಾನೆ. ಎಂಎಸ್‌ಸಿ ಮಾಡುತ್ತಾನೆ. ತಾನು ಮದುವೆಯಾಗುವುದಾದರೆ ಜಾನುಯನ್ನೇ ಹೇಳಿದಾಗ ಮನೆಯವರು ‘ನೀನು ದರಿದ್ರ ಹಠ ಬಿಡದೆ ಇದ್ದರೆ ಉದ್ಧಾರವಾಗುವುದಿಲ್ಲ’ ಎಂದು ಬಯ್ಯುತ್ತಾರೆ. ಅವಳನ್ನು ಮದುವೆಯಾಗದಿದ್ದರೆ ಸನ್ಯಾಸಿಯಾಗಿರುವೆ ಎಂದು ಖಡಾಖಂಡಿತವಾಗಿ ಹೇಳುತ್ತಾನೆ. ಆದರ ಜಾನು ಮನೆಯವರ ಮಾತು ಕೇಳಿ ನೀನು ಬೇರೆ ಹುಡುಗಿಯನ್ನು ಮದುವೆ ಮಾಡಿಕೋ ಎಂದು ಹೇಳಿ ಆಕೆ ತಾಯಿ ಜೊತೆ ಊರು ಬಿಟ್ಟು ಬೇರೆ ಕಡೆ ಹೋಗಿ ಬದುಕುತ್ತಾರೆ. ಅವರನ್ನು ಸಂಪರ್ಕಿಸಿದ ವೆಂಕಿ ಎಲ್ಲರೂ ಮುಂಬೈಗೆ ಕರೆಯಿಸಿಕೊಳ್ಳುತ್ತಾನೆ. ಎಂಎಸ್ಸಿ ಕೊನೆಯ ಪರೀಕ್ಷೆಯಾದ ನಂತರ ರಿಜಿಸ್ಟರ್ಡ್ ಮದುವೆಯಾಗುತ್ತಾನೆ.
ಆಗ ಮನೆಯವರು ‘ಇವತ್ತಿನಿಂದ ನೀನು ನಮ್ಮ ಪಾಲಿಗೆ ಸತ್ತೆ ಅಂತ ತಿಳಿದುಕೊಳ್ಳುತ್ತೇವೆ, ಮನೆಗೆ ಕಾಲಿಡಬೇಡ’ ಎಂದು ಎಚ್ಚರಿಸುತ್ತಾರೆ ಈ ಮಧ್ಯೆ ವೆಂಕಿ ಪಿ ಎಚ್ ಡಿ ಸಹ ಮಾಡಿದ್ದರಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೆಲಸ ಸಿಗುತ್ತದೆ. ಒಂದು ದಿನ ಆಕೆ ತುಂಬಾ ಸುಸ್ತಾಗಿ ಅನಾರೋಗ್ಯಕ್ಕೀಡಾದಾಗ ವೈದ್ಯರಲ್ಲಿ ಕರೆದುಕೊಂಡು ಬರುತ್ತಾನೆ. ಆಗ ಆಸ್ಪತ್ರೆ ಎದುರು ಇವರಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಇಬ್ಬರಿಗೂ ತೀವ್ರ ಪೆಟ್ಟಾಗುತ್ತದೆ. ಜಾನಕಿ ಸಾಯುತ್ತಾಳೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ವೆಂಕಿಗೆ ತಿಂಗಳುಗಟ್ಟಲೆ ಈ ವಿಷಯ ಗೊತ್ತಿರುವುದಿಲ್ಲ. ನಂತರ ವಿಷಯ ಗೊತ್ತಾಗುತ್ತದೆ. ದುಃಖಿತನಾಗಿ ಏಕಾಂಗಿಯಾಗಿ ೨೦ ವರ್ಷ ಕಳೆಯುತ್ತಾನೆ.
ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕನಾಗಿದ್ದ ವೆಂಕಿ ಅತ್ಯಂತ ಬುದ್ಧಿವಂತ. ಬುಧ ಗ್ರಹದ ಕುರಿತು ಸಂಶೋಧನೆ ಮಾಡಿದವನು. ಈ ವಿಷಯದ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿನ ಕಾನ್ಫರೆನ್ಸ್‌ಗಳಿಗೆ ತೆರಳಿ ಉಪನ್ಯಾಸ ನೀಡಿದವನು. ಈತ ಸಂಶೋಧಿಸಿದ ಅನೇಕ ವಿಷಯಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳು ಬಂದಿರುತ್ತವೆ. ಆದರೆ ಆತನ ಜೀವನ ಬಹಳ ಕಷ್ಟದಾಯಕವಾಗಿರುತ್ತದೆ. ಹೆಂಡತಿಯನ್ನು ಕಳೆದುಕೊಂಡು, ಗಡ್ಡ, ಮೀಸೆ ಬಿಟ್ಟು, ೧೫ ದಿನಗಳಿಗೊಮ್ಮೆ ಬಟ್ಟೆ ಬದಲಿಸುತ್ತ, ನೋಡಲು ಹುಚ್ಚರಂತೆ ಕಾಣುತ್ತಿದ್ದ. ಆದರೆ ವಿದ್ಯಾರ್ಥಿಗಳು ಮಾತ್ರ ಅವನ ಪಾಠ ಕುತೂಹಲ ಮತ್ತು ಆಸಕ್ತಿಕರವಾಗಿತ್ತು. ವ್ಯಕ್ತಿತ್ವ ಆದರ್ಶಮಯವಾಗಿತ್ತು.
ಒಮ್ಮೆ ಚೆನ್ನೈಗೆ ಬುಧ ಗ್ರಹದ ಇತ್ತೀಚಿನ ಸಂಶೋಧನೆ ಬಗ್ಗೆ ಕಾನ್ಫರೆನ್ಸ್‌ನಲ್ಲಿ ಪ್ರಬಂಧ ಮಂಡಿಸಲು ತೆರಳಿದ್ದ ವೆಂಕಿಗೆ ಅಲ್ಲಿ ತನ್ನ ಹೆಂಡತಿಯ ತದ್ರೂಪದಂತಿದ್ದ ಮೇಘನಾ ರೆಡ್ಡಿ ಎನ್ನುವ ವಿದ್ಯಾರ್ಥಿನಿಯ ಪರಿಚಯವಾಗುತ್ತದೆ. ಜಾನಿಯ ಫೋಟೋವನ್ನು ಹಿಡಿದುಕೊಂಡು ಮೇಘನಾಳನ್ನು ನೆನೆಸಿಕೊಂಡಾಗ ಆಕೆಯೇ ತನ್ನೆದುರು ಬಂದಂತೆ ಅವನಿಗೆ ಅನಿಸುತ್ತದೆ. ಹಲವು ಬರಿ ಮೇಘನಾಳನ್ನು ಕಾಣಲು ಚೆನ್ನೈಗೆ ಹೋಗುತ್ತಾನಾದರೂ ಅದು ಫಲಿಸುವುದಿಲ್ಲ. ಸ
ಮತ್ತೊಂದು ದಿನ ಮೇಘನಾಳನ್ನು ಹುಡುಕಿಕೊಂಡು ಆಕೆ ಮನೆಯ ಹತ್ತಿರ ಹೋದಾಗ ಈ ವಿಜ್ಞಾನಿ ತನ್ನನ್ನು ಫಾಲೋ ಮಾಡುತ್ತಿರುವುದು ಅವಳ ಗಮನಕ್ಕೆ ಬರುತ್ತದೆ. ಈತನನ್ನು ಆಕೆ ಸಹ ಸರ್ಚ್ ಮಾಡಿ ದೊಡ್ಡ ವಿಜ್ಞಾನಿ ಎನ್ನುವುದನ್ನು ಅರಿತುಕೊಂಡಿದ್ದಳು. ತನ್ನನ್ನು ಫಾಲೋ ಮಾಡುತ್ತಿರುವ ಕಾರಣ ತಿಳಿಸಿ ಎನ್ನುತ್ತಾಳೆ. ಫಾಲೋ ಮಾಡುತ್ತಿಲ್ಲ, ಕ್ಷಮಿಸಿ ಎಂದು ಹೇಳಿ ವಾಪಸ್ ತೆರಳುವಾಗ ಏಕಾಏಕಿ ಮುಂದಿನಿಂದ ಬಂದ ಕಾರು ಇವರ ಮೈಮೇಲೆ ಹರಿದು ಹೋಗುತ್ತದೆ. ಮೇಘನಾ ಆಸ್ಪತ್ರೆಗೆ ಸೇರಿಸುತ್ತಾಳೆ.
ತೀವ್ರ ರಕ್ತಸ್ರಾವದ್ರಿಂದ ‘ ಓ ಪಾಸಿಟಿವ್’ ರಕ್ತ ಬೇಕೆಂದು ವೈದರು ಸೂಚಿಸಿದಾಗ ತನ್ನದೂ ಸಹ ಅದೇ ಗುಂಪಿನ ರಕ್ತವಾದ್ದರಿಂದ ರಕ್ತವನ್ನು ಕೊಡುತ್ತಾಳೆ. ವೈದ್ಯರು ‘ನೀವು ಅವರ ಮಗಳಲ್ಲವೇ’ ಎಂದು ಕೇಳಿದಾಗ ‘ಅಲ್ಲ’ ಎನ್ನುತ್ತಾಳೆ. ಆಗ ವೈದ್ಯರು ‘ನಿಮ್ಮ ಡಿಎನ್‌ಎ ಮತ್ತು ಅವರ ಡಿಎನ್‌ಎ ಮ್ಯಾಚ್ ಆಗುತ್ತಿದೆ. ನೀವು ಎಷ್ಟೇ ಸುಳ್ಳು ಹೇಳಿದರೂ ವೈದ್ಯಕೀಯ ಶಾಸ್ತ್ರ ಸುಳ್ಳು ಹೇಳುವುದಿಲ್ಲ’ ಎನ್ನುತ್ತಾರೆ.
ಮನೆಗೆ ಹೋಗಿ ಮೇಘನಾ ಈ ವಿಷಯ ಹೇಳಿದಾಗ ಆತ ಆಕೆಯ ತಂದೆ- ತಾಯಿ ಸಹ ಬೆಚ್ಚಿ ಬೀಳುತ್ತಾರೆ. ಇದು ಸಾಧ್ಯವೇ ಇಲ್ಲ ಎನ್ನುತ್ತಾರೆ. ಆಮೇಲೆ ಈ ವಿಷಯದ ಬಗ್ಗೆ ಹೆಚ್ಚಿನದಾಗಿ ಚರ್ಚಿಸಲು ತಮಗೆ ಮಕ್ಕಳಾಗುವಂತೆ ಐವಿಎಫ್ ನೀಡಿದ ಬೆಂಗಳೂರಿನ ಡಾ|| ಪ್ರತಾಪ್ ಅವರಲ್ಲಿ ಹೋಗಿ ವಿಚಾರಿಸಿದಾಗ ಅವರು ಸತ್ಯವನ್ನು ವಿವರಿಸುತ್ತಾg. ೨೦ ವರ್ಷದ ಹಿಂದೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ದಂಪತಿಗಳು ತನ್ನ ಬಳಿ ಬಂದಿದ್ದರು. ಆ ಮಹಿಳೆ ೪೫ ದಿನದ ಗರ್ಭಿಣಿ ಇದ್ದಳು. ಸಾಯುವ ಹಂತದಲ್ಲಿದ್ದಳು. ಅವಳ ಭ್ರೂಣವನ್ನೇ ತಾನು ಅಂದಿನ ಐವಿಎಫ್ ಮಾದರಿಯಂತೆ ನಿಮ್ಮ ಪತ್ನಿ ಮಮತಾಳ ಗರ್ಭದಲ್ಲಿ ಸೇರಿಸಿದ್ದೆ. ಇದಕ್ಕೂ ಮುನ್ನ ನಾನು ಐಯುಐ ಮಾದರಿಯಲ್ಲಿ ಅಂಡಾಣುವಿನಲ್ಲಿ ವೀರ್ಯಾಣವನ್ನು ಸೇರಿಸಿದ್ದೆ. ಅದು ವಿಫಲವಾಗಿತ್ತು ಎನ್ನುತ್ತಾರೆ.
ಈ ಹಿನ್ನೆಲೆಯಲ್ಲಿ ಆ ಮಹಿಳೆಯ ಫಲಿತ ಗುಣವನ್ನೇ ನಿಮ್ಮ ಗರ್ಭದಲ್ಲಿ ಸೇರಿಸಿದಾಗ ಅದು ಮಗುವಾಗಿ ಹುಟ್ಟಿದೆ. ಆ ಭ್ರೂಣ ದಂಪತಿಗಳದ್ದು. ಗರ್ಭ ಮಾತ್ರ ನಿಮ್ಮದು ಎನ್ನುವ ಸತ್ಯವನ್ನು ವಿವರಿಸುತ್ತಾರೆ. ನಂತರ ಮೇಘನಾ ಡಾಕ್ಟರ್ ಪ್ರತಾಪ್ ಅವರನ್ನು ಕರೆದುಕೊಂಡು ಬಂದು ವೆಂಕಿಯವರಿಗೆ ಚಿಕಿತ್ಸೆ ಕೊಡಿಸುತ್ತಾರೆ. ವೆಂಕಿಗೆ ಮೇಘನಾಥನ ಮಗಳು ಎನ್ನುವುದು ಗೊತ್ತಾದಾಗ ಆನಂದ ಭಾಷ್ಪ ಹರಿಯುತ್ತದೆ. ತಾಯಿಯಿಂದ ಮಗಳನ್ನು ದೂರ ಮಾಡುವುದು ಸರಿಯಲ್ಲ. ನೀವು ಹೊಂದಾಣಿಕೆ ಮಾಡಿ ಇರಿ ಎಂದು ವೈದ್ಯರು ಸೂಚಿಸುತ್ತಾರೆ. ಆ ಪ್ರಕಾರ ರೆಡ್ಡಿ ದಂಪತಿಗಳು ವೆಂಕಿ ಮತ್ತು ಮೇಘನಾ ಇಬ್ಬರನ್ನೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
ಹೀಗೆ ಕೌಟುಂಬಿಕ ಪ್ರೀತಿ ಕಾಣದೆ ೨೦ ವರ್ಷದಿಂದ ಒಂಟಿಯಾಗಿ ನಲುಗಿದ್ದ ಜೀವಕ್ಕೆ ನೆಮ್ಮದಿ ಮತ್ತು ಶಾಂತಿ ದೊರೆಯುತ್ತದೆ. ವೆಂಕಿ ಸಹ ಗುಣಮುಖರಾಗಿ ಸಂಶೋಧನೆ ಮಾಡುತ್ತ ಬೆಸ್ಟ್ ಸೈಂಟಿಸ್ಟ್ ಅವಾರ್ಡ್ ಪಡೆಯುತ್ತಾರೆ.
ಅತ್ಯಂತ ಸಶಕ್ತವಾದ ಕಥೆಯನ್ನು, ಸರಳವಾಗಿ, ಅಷ್ಟೇ ಸೆರೆಹಿಡಿಯುವ ಗುಣದಲ್ಲಿ ಕಥೆ ಇದೆ. ಮತ್ತೆ ಮತ್ತೆ ಓದಬೇಕೆನಿಸುವ ರೀತಿಯಲ್ಲಿ ಸುಂದರವಾಗಿ ಇಲ್ಲಿ ನೇಯ್ದಿರುವುದು ಅವರ ಜಾಣ್ಮೆಯನ್ನು ಸೂಚಿಸುತ್ತದೆ.
,,,,,,,,,,,,,,,,,,,,,,

Comments
Post a Comment