ಅಮ್ಮನ ಮಹತ್ವ ಬಣ್ಣಿಸುವ
‘ಅಮ್ಮ ಮರೆಯಲಾಗದ ಅನುಭೂತಿ’
‘ದೀವಾರಾ’ ಎಂಬ ಹಿಂದಿ ಸಿನಿಮಾದಲ್ಲಿ ಒಂದು ಸಂಭಾಷಣೆ ಇದೆ -ನನ್ನ ಬಳಿ ಆಸ್ತಿ ಇದೆ, ಹಣವಿದೆ, ಕಾರಿದೆ, ಬಂಗಲೆ ಇದೆ, ನಿನ್ನ ಹತ್ತಿರ ಏನಿದೆ ಎಂದು ಸಹೋದರ ಶಶಿಕಪೂರ್ ಅಮಿತಾ ಬಚ್ಚನ್‌ನಲ್ಲಿ ಕೇಳುತ್ತಾನೆ . ಆಗ ಆತ ಹೇಳುತ್ತಾನೆ- ನನ್ನ ಬಳಿ ಅಮ್ಮ ಇದ್ದಾಳೆ.
ಇನ್ನೊಂದು ಕವಿತೆಯ ಸಾಲು ಹೀಗಿದೆ- ಕೋಟಿ ದೇವರೆಲ್ಲ ಕೂಡಿ ನಿಂತರೇನು, ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು?
ಇನ್ನೊಂದು ಚಲನಚಿತ್ರಗೀತೆ ಹೀಗಿದೆ- ಅಮ್ಮಾ ಎಂದರೆ ಏನೋ ಹರುಷವು, ನಮ್ಮ ಪಾಲಿಗೆ ಅವಳೇ ದೈವವು.....
ಈ ಸಾಲುಗಳು ಅಮ್ಮನ ಪರಿಚಯ ಮಾಡಿಕೊಡಲು ಸಾಕು.
ಕಾರ್ಕಳದ ನಿವೃತ್ತ ಶಿಕ್ಷಕಿ ನಿವೃತ್ತ ಶಿಕ್ಷಕಿ ಅನುಪಮಾ ಚಿಪ್ಳೂಣಕರ್ ಅವರ ‘ಅಮ್ಮ ಮರೆಯಲಾಗದ ಅನುಭೂತಿ’ ಎನ್ನುವ ಈ ಕೃತಿ ಓದುವಾಗ ಮೇಲಿನ ಸಾಲುಗಳು ನೆನಪಾಗುತ್ತವೆ. ಜೊತೆಗೆ ನಮ್ಮ ಅಮ್ಮಂದಿರು ಈ ಕೃತಿಯನ್ನು ಓದುವಾಗ ನಮ್ಮೆದುರು ಪ್ರತ್ಯಕ್ಷರಾಗುತ್ತಾರೆ. ಅಮ್ಮ ನಮ್ಮ ಎದೆಯಾಳದಲ್ಲಿ ಅವಿತಿರುವವಳು. ಲೇಖಕಿ ಅನುಪಮಾ ನಮಗೆಲ್ಲಾ ಈ ಕೃತಿಯ ಮೂಲಕ ಅಮ್ಮನ ನೆನಪಿನ ಸವಿ, ಅವಳ ವಿರಾಟ್ ರೂಪ, ಅವಳ ದೈವತ್ವದ ಶಕ್ತಿ, ಅವಳು ಕಷ್ಟಪಟ್ಟು ನಮ್ಮನ್ನು ಬೆಳೆಸಿದ ರೀತಿ, ಹೃದಯ ವೈಶಾಲ್ಯತೆ, ನಿಷ್ಕಲ್ಮಶ ಪ್ರೇಮವನ್ನು ೧೩ ಕಿರು ಲೇಖನಗಳ ಮೂಲಕ ತೋರಿಸಿದ್ದಾರೆ.
ಅಮ್ಮನ ಪಾತ್ರವನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಅಮ್ಮ ಎಂದರೆ ನೆರಳು, ಭರವಸೆ, ಕಾಳಜಿ, ಬೇಲಿ. ಹೀಗೆ ಮುಗಿಯದಷ್ಟು ಹೋಲಿಕೆಗಳನ್ನು ಕೊಡಬಹುದು. ಅಂತಹ ಅಮ್ಮ ಪ್ರಸ್ತುತ ಕೃತಿಯ ನಾಯಕಿಯಾಗಿದ್ದಾರೆ. ಮೊದಲ ಗುರುವಾಗಿ ತನ್ನೆಲ್ಲ ಪರಿಶ್ರಮವನ್ನು ಮಗುವಿನ ಏಳಿಗೆಗಾಗಿ ಮೀಸಲಿಡುವವಳು. ಅಮ್ಮ ನಮ್ಮ ಪಾಲಿಗೆ ಪ್ರತ್ಯಕ್ಷ ದೇವತೆ. ಪ್ರಾಣಿಗಳಲ್ಲೂ ಅಮ್ಮ ಎಂದರೆ ಏನು ಸೆಳೆತವಿರುವುದನ್ನು ಕಾಣಬಹುದು.
ಅಮ್ಮ-ಮಕ್ಕಳ ಮಧ್ಯೆ ಯಾವುದೇ ಆಸೆ -ಆಮಿಷಗಳಿರುವುದಿಲ್ಲ. ಲಾಭ -ಅಪೇಕ್ಷೆ ಇರುವುದಿಲ್ಲ. ಅದು ನಿರ್ವ್ಯಾಜ ಪ್ರೀತಿ. ಆದ್ದರಿಂದಲೇ ಅದಕ್ಕೆ ಬೆಲೆ ಕಟ್ಟಲಾಗದು. ಅಮ್ಮ ಎಂದರೆ ಮೈಮನವೆಲ್ಲ ಹೂವಾಗುವುದು, ಮಕ್ಕಳನ್ನು ಸಾಕಿ ಸಲುಹಲು ದೇವರು ಭೂಮಿಗೆ ಕಳುಹಿಸಿದ ಮಹಾಮತೆ, ನಮ್ಮ ನಿಜವಾದ ಬಂಧು. ಮಕ್ಕಳ ಪಾಲಿಗೆ ಅಪರಂಜಿ. ’ಮನಸಿನ ಸಂಬಂಧಿ. ತಾಯಿಯೇ ಜೀವಂತ ದೇವತೆ. ಅಮ್ಮ ಈ ಒಂದು ಪದವೇ ಅದ್ಭುತ. ಅಮ್ಮನ ಮಾತು ಜೇನಿಗಿಂತಲೂ ಸಿಹಿ. ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಇದ್ದರೆ ಅದು ಅಮ್ಮ ಮಾತ್ರ. ಕಷ್ಟ ಬಂದಾಗ ಸಂತೈಸುವ, ಪ್ರತಿಕ್ಷಣ ಕುಟುಂಬಕ್ಕಾಗಿ ತನ್ನ ಬದುಕನ್ನು ತೇಯುವವಳು. ಹೀಗೆ ಒಂದೆರಡು ಪದಗಳಲ್ಲಿ ತಾಯಿಯನ್ನು ಬಣ್ಣಿಸಲು ಸಾಧ್ಯವಿಲ್ಲ ಎನ್ನುವುದು ಈ ಕೃತಿಯ ಸಾರಾಂಶ.
ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತಿದೆ. ಅಮ್ಮನಿಗೆ ಸಾಟಿ ಅಮ್ಮನೇ. ಬೇರಾರೂ ಇಲ್ಲ. ಅಮ್ಮ ಎಂದರೆ ಸಂಜೀವಿನಿ. ಅಮ್ಮನಿಗೆ ಹೆಣ್ಣಿನ ಬದುಕನ್ನು ಸಾರ್ಥಕಗೊಳಿಸುವ ಒಂದು ಶಕ್ತಿ ಇದೆ. ಒಂದು ಹೊತ್ತಗೆಯಲ್ಲಿ ಹಿಡಿದಿಡಲು ಸಾಧ್ಯವಾಗದ ವ್ಯಕ್ತಿತ್ವ ಅಮ್ಮನದು. ಅಮ್ಮ ಬೆಚ್ಚನೆಯ ಅನುಭೂತಿ. ಈ ಜಗತ್ತಿನಲ್ಲಿ ನಮಗೆ ಹೆಜ್ಜೆ ಹಾಕಲು ಕಲಿಸುವವಳು. ಅವಳಿದ್ದರೆ ಅಭದ್ರತೆ ಕಾಡುವುದಿಲ್ಲ. ಅಲ್ಲಿ ನೆಮ್ಮದಿ, ಸುಖ, ಸಂತೋಷ ಎಲ್ಲವೂ ನೆಲೆಸಿರುತ್ತದೆ. ಪದಗಳಿಗೆ ಮೀರಿದ ಭಾವ ಸಂಬಂಧ, ಅದಕ್ಕೂ ಮಿಗಿಲಾದ ಅನುಭಾವದ, ಭಾವನಾತ್ಮಕ ಅರ್ಥ. ಅಮ್ಮ ಎಂಬ ಪದ ತನ್ನ ಶ್ರೇಷ್ಠತೆ ಮತ್ತು ಭಾವ ವೈಶಾಲ್ಯತೆಯನ್ನು ಹೊಂದಿದೆ. ವಿಶಾಲರೂಪಿ ಅಮ್ಮ ಹೃದಯ ವೈಶಾಲ್ಯತೆಯಂತೆ. ನಮ್ಮ ದೇಶದಲ್ಲಿ ಪ್ರಕೃತಿ, ನದಿ ಇವುಗಳಿಗೆ ಮಾತೃ ಸ್ಥಾನ ಕೊಟ್ಟಿರುವುದನ್ನು ವಿವರಿಸಿದ್ದಾರೆ.
ಅಮ್ಮ ಒಂದು ಅದ್ಭುತ ಪ್ರಪಂಚ. ಅಮ್ಮನ ಅಪ್ಪುಗೆ ಸ್ವರ್ಗ ಸಮಾನ. ತಾಯಿಯ ಪ್ರೀತಿ ಎಂಬುದು ಲೋಕದಲ್ಲಿ ಎಲ್ಲಾ ಅಡೆತಡೆಗಳನ್ನು ಮೀರಿದ ಬಾಂಧವ್ಯಕ್ಕೆ ಸಾಕ್ಷಿ. ೧೦ ಮಕ್ಕಳನ್ನು ಹೆತ್ತು ಹೆರಿಗೆಗಳ ನೋವನ್ನು ಉಂಡರೂ, ತನ್ನ ಮಕ್ಕಳಲ್ಲೇ ಅಮ್ಮಂದಿರು ಈ ಹಿಂದೆ ಸುಖವನ್ನು ಕಾಣುತ್ತಿದ್ದರು. ಮನೆಕೆಲಸಗಳನ್ನು ಮಾಡುತ್ತಿದ್ದರು. ಆದರೆ ಬದಲದ ವರ್ಷಗಳಲ್ಲಿ ಅಮ್ಮನನ್ನು ವೃದ್ಧಾಶ್ರಮಕ್ಕೆ ಬಿಡುವ ಪದ್ದತಿ, ಒಬ್ಬಂಟಿಯಾಗಿ ಮನೆಯಲ್ಲ್ಲಿಟ್ಟು ಮಕ್ಕಳು ದೂರದಲ್ಲಿ ವಾಸವಾಗುವುದು ಹೆಚ್ಚುತ್ತಿರುವುದನ್ನು ಕಾಣಬಹುದು.
ಅಮೆರಿಕದ ದಿವಂಗತ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಹೇಳಿದ ಮಾತನ್ನು ಲೇಖಕಿ ಇಲ್ಲಿ ಪ್ರಸ್ತಾಪಿಸುತ್ತಾರೆ- “ನಾನು ಕಂಡ ಎಲ್ಲ ಮಹಿಳೆಯರಲ್ಲಿ ನಮ್ಮಮ್ಮ ಹೆಚ್ಚು ಸುಂದರಿ. ಶಿಕ್ಷಣದ ಜೊತೆಗೆ ನೀತಿ ಪಾಠವನ್ನು ಸಹ ಅವಳಿಂದ ಕಲಿತುಕೊಂಡಿದ್ದೇನೆ ಎಂದು. ನೊಬೆಲ್ ಪ್ರಶಸ್ತಿ ಪುರಸ್ಕೃತ ರಶ್ಯನ್ ಲೇಖಕ ಮ್ಯಾಕ್ಸಿಂ ಗಾರ್ಕಿ- ಒಬ್ಬ ತಾಯಿ ಮಾತ್ರವೇ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಬಹುದು. ಏಕೆಂದರೆ ತನ್ನ ಮಕ್ಕಳಲ್ಲಿ ಆಕೆ ಅದಕ್ಕೂ ಜನ್ಮ ನೀಡುತ್ತಾಳೆ. ದಿವಂಗತ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹೇಳಿರುವ ಮಾತು ಹೀಗಿದೆ- ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ. ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಅಂದರೆ ಇಡೀ ದೇಶದ ಖುಷಿ ತಾಯಿಯ ಮೇಲೆ ನಿಂತಿದೆ ಎಂದು.
ಹೀಗೆ ಅಮ್ಮ ಎಂಬ ಜಗತ್ತಿನ ಅದ್ಭುತ ಸೃಷ್ಟಿಗೆ ಬೆಲೆ ಕಟ್ಟಲಾಗದು. ಅದು ಅಮೂಲ್ಯ ಆಸ್ತಿ. ಪ್ರೀತಿಯ ಸಾಕಾರಮೂರ್ತಿ. ಸಮುದ್ರದಂತೆ ಆಳ, ಅಗಸದಂತೆ ವಿಶಾಲ. ಕಪಟ ವಿಲ್ಲದ, ಸ್ವಾಥವಿಲ್ಲದ, ನಿಷ್ಕಲ್ಮಶ ಪ್ರೇಮ ಅವಳದು. ಅಮ್ಮನ ಅಕ್ಕರೆ ಅನನ್ಯ. ತನ್ನ ಕರುಳ ಕುಡಿಗಾಗಿ ಬಾಳ ತೇಯುವ ಶ್ರೀಗಂಧ. ಅಮ್ಮ ಕೇವಲ ತಾಯಿ ಮಾತ್ರವಲ್ಲ. ಗುರು ಹಾಗೂ ಮಾರ್ಗದರ್ಶಿ ಎನ್ನುವುದನ್ನು ಹೃದಯತುಂಬಿ ನುಡಿಯುತ್ತಾರೆ.
-ದತ್ತಾತ್ರೇಯ ಹೆಗಡೆ
..........................

Comments
Post a Comment