ನಿಷ್ಕಳಂಕ ಪ್ರೀತಿ, ವೇಶ್ಯೆಯರ ಬದುಕಿನ 

‘ಪ್ರಣಯ ಹಂಪಿ’ 



೫ ದಿನ ಹಿಂದೆಯಷ್ಟೇ ಲೋಕಾರ್ಪಣೆಗೊಂಡ ‘ಪ್ರಣಯ  ಹಂಪಿ’ ಇದು ಸಾಹಿತಿ ಕುಂ. ವೀರಭದ್ರಪ್ಪ ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ ಕಾದಂಬರಿ.  ಪ್ರಮುಖವಾಗಿ ಇದರಲ್ಲಿ ಎರಡು ಕಥೆಗಳನ್ನು ಕಾಣಬಹುದು. ಒಂದು ವಿಜಯನಗರದ ಅರಸ ಕೃಷ್ಣದೇವರಾಯನ ಅಳಿಯನಾದ ರಾಮರಾಯನ ಅಂಗರಕ್ಷಕನ- ಅಲ್ಲಿನ ಕಲಾವಿದೆಯ ಮಧ್ಯೆಯ ಪರಿಶುದ್ಧವಾದ ಪ್ರೀತಿ, ಪ್ರೇಮವಾದರೆ, ಇನ್ನೊಂದು ಅಲ್ಲಿನ ವೇಶ್ಯೆಯರ ದುರಂತಮಯ ಬದುಕು. ಅತ್ಯಂತ ಸುಂದರವಾಗಿ ಇವೆರಡನ್ನೂ ಲೇಖಕರು  ಕಟ್ಟಿಕೊಟ್ಟಿದ್ದಾರೆ.

ಪ್ರೀತಿ, ಪ್ರೇಮಕ್ಕಿಂತ ಮಿಗಿಲಾದ ಧರ್ಮ ಇಲ್ಲ. ಎಲ್ಲರೂ ಸಮಾನರು. ಯುದ್ಧದಲ್ಲಿ ರಾಜ್ಯಗಳು ಸೋಲಬಹುದು. ಆದರೆ ಬದುಕಲ್ಲಿ ಪ್ರೇಮ ಸೋಲುವುದಿಲ್ಲ  ಎಂಬ ಆಂಶವನ್ನು ಈ ಕಾದಂಬರಿ ಸಾರುತ್ತದೆ. ಜೊತೆಗೆ ಯಾರಲ್ಲಿ  ನಿಸ್ವಾರ್ಥ, ನಿಷ್ಕಳಂಕ ಪ್ರೀತಿ ಇರುತ್ತದೆಯೋ ಅದು ಯುಗಗಳೇ ಕಳೆದರೂ ಶಾಶ್ವತ,  ಬೆಲೆಕಟ್ಟಲಾಗದ್ದು ಎನ್ನುವುದನ್ನು ಮನೋಜ್ಞವಾಗಿ ವಿವರಿಸಿದ್ದಾರೆ. 

ವೇಶ್ಯೆಯರ ಬದುಕು ಎಂದರೆ ಕೇವಲ ಮೈಮಾರಿ ಜೀವಿಸುವುದು ಎಂದಷ್ಟೇ ತಿಳಿದಿರುವ ನಾವು, ಅರಮನೆಯಲ್ಲಿರುವ, ಅದರಲ್ಲೂ ಯುದ್ಧ್ದಕಾಲದಲ್ಲಿ  ಲಕ್ಷಾಂತರ ಸೈನಿಕರ ಕಾಮದಾಹವನ್ನು ದಿನವಿಡೀ ತಣಿಸುತ್ತ, ವಿವಿಧ ರೋಗರುಜಿನುಗಳಿಂದ ಬಳಲುತ್ತ, ಸೂಕ್ತ ಚಿಕಿತ್ಸೆ ಇಲ್ಲದೆ ಬಳಲಿ, ಯಾರೂ ಇಲ್ಲದೆ ಸಾಯುವುದರ ಬಗ್ಗೆ ಮಾಹಿತಿಯನ್ನು ಹೊಂದಿಲ್ಲ. ಇಂತಹ ದುರಂತಮಯ ಬದುಕನ್ನು  ಎಂತಹ ಕಲ್ಲೆದೆಯೂ ಕರಗುವ ಹಾಗೆ ಚಿತ್ರಿಸಿದ್ದಾರೆ.  

ಪ್ರೇಮದ ಬಿತ್ತನೆ: 

 ವಿಜಯನಗರ ದಸರಾದಲ್ಲಿ ಬೃಹತ್ ಕಾಡುಕೋಣವನ್ನು ಸಾಹಸಮಯವಾಗಿ ಒಂದೇ ಏಟಿಗೆ ಕಡಿದು ಬಲಿ ಕೊಟ್ಟು ತನ್ನ ಪೌರುಷ ತೋರಿದ್ದರಿಂದ ಅಳಿಯ ರಾಮರಾಯನ ಅಂಗರಕ್ಷಕನಾಗಿ ನೇಮಕವಾಗಿದ್ದ ಕಟ್ಟುಮಸ್ತಾದ ದೇಹ, ಚಿಗುರು ಮೀಸೆ,  ಹೊಳೆವ ಕಣ್ಣು, ಆರಡಿ ಎತ್ತರವಿದ್ದ ಸಂಬಜ್ಜ ಗೌಡ ಹೆಸರಾಂತ ವ್ಯಕ್ತಿಯಾಗುತ್ತಾನೆ.  ಆತನ ಶೌರ್ಯ ಪರಾಕ್ರಮ ಮತ್ತು ಭರ್ಜರಿ ದೇಹವನ್ನು ನೋಡಿದ ಅಲ್ಲಿನ ಅಭಿಜಾತ ಕಲಾವಿದೆ ಮುದ್ದು ಕುಪ್ಪಾಯಿ ವಿಸ್ಮಿತಳಾಗುತ್ತಾಳೆ. ಇಬ್ಬರೂ ರೆಪ್ಪೆಯಾರಿಸದೆ ಮೈಮರೆಯುತ್ತಾರೆ.   ತಮ್ಮ ಪ್ರೇಮ ಬಿತ್ತನೆಯನ್ನು ಆರಂಭಿಸುತ್ತಾರೆ. 

ಅಲ್ಲಿಂದ ಆರಂಭವಾಗಿ ತುಂಗಭದ್ರೆಯ ಬೆಟ್ಟದ ತಪ್ಪಲಿನ ಹಾಸುಗಲ್ಲಿನ ಭೇಟಿಯಾಗುತ್ತಾರೆ. ‘ನಿಮ್ಮನ್ನು ನೋಡಿದ ಕ್ಷಣದಿಂದ ನಾನು ನಿಮ್ಮ ಅಂತರಂಗದ ಯಜಮಾನಿಯಾಗಿದ್ದೇನೆ. ನಿಮ್ಮನ್ನು ಮನಸಾರೆ ಇಷ್ಟಪಟ್ಟಿರುವೆ. ನಾನು ನಿಮ್ಮನ್ನು ಪ್ರೀತಿಸುತ್ತಿರುವೆ. ದಯವಿಟ್ಟು ನನ್ನ ಈ ಕೋರಿಕೆಯನ್ನು ಈಡೇರಿಸಿ’ ಎಂದು ಮನಸ್ಸು ಬಿಚ್ಚಿ ಮೊದಲ ಭೇಟಿಯಲ್ಲೇ ಮುದ್ದುಕುಪ್ಪಾಯಿ ಹೇಳುತ್ತಾಳೆ. ಆತ  ‘ನಾನು ಅತಿಸಾಮಾನ್ಯ ವ್ಯಕ್ತಿ. ನನ್ನ ನಿಮ್ಮ ನಡುವೆ ಅಂತರವಿದೆ. ಪ್ರೇಮದ ವಿಷಯದಲ್ಲಿ ಆತುರ ಬೇಡ. ಸ್ವಲ್ಪ ಯೋಚಿಸಿ’ ಎಂದಾಗ ಆಕೆ ‘ಪ್ರೇಮಕ್ಕೆ ಬಡತನ, ಸಿರಿತನವಿಲ್ಲ’ ಎನ್ನುತ್ತಾಳೆ. ‘ಪ್ರೇಮ ಒಂದು ಜೀವನಶೈಲಿ. ಅನುಸರಿಸುವ ಪ್ರತಿ ಮಾರ್ಗ ಸುಲಭವಾಗಿಲ್ಲ. ಅದು ನಮ್ಮನ್ನು ಸಂತೋಷದಿಂದ ಇಡುವುದಿಲ್ಲ’ ಎಂದು ತಿರುಗಿ ಸಂಬಜ್ಜಗೌಡ  ಹೇಳುತ್ತಾನೆ. ‘ನಿಮ್ಮ ಮೇಲಿನ ನನ್ನ ಪ್ರೀತಿ  ಯಾವ ಕಾರಣಕ್ಕೂ ಬದಲಾಗದು. ಯಾವ ಶಕ್ತಿಯೂ ನನ್ನ ನಿರ್ಧಾರವನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ. ಈ ಹಂಪಿ ಪರಿಸರ ಸಾಕ್ಷಿಯಾಗಿ ನಾನು ನಿಮ್ಮನ್ನು ಕಾಯಾ, ವಾಚಾ, ಮನಸಾ ಪ್ರೀತಿಸುತ್ತೇನೆ’ ಎಂದು ಖಚಿತ ಧ್ವನಿಯಲ್ಲಿ ಹೇಳುತ್ತಾಳೆ.

   ಅರಮನೆ ಸೇರಿದ್ದರಿಂದ ಆರು ತಿಂಗಳವರೆಗೆ  ಪ್ರಿಯತಮೆ ಮುದ್ದುಕುಪ್ಪಾಯಿಯನ್ನು ಭೇಟಿಯಾಗಲು ಸಾಧ್ಯವಾಗುವದಿಲ್ಲ.  ಒಮ್ಮೆ ಕುದುರೆ ಮೇಲೆ ಬಂದು ಆಕೆಯನ್ನು  ಕೂಡ್ರಿಸಿಕೊಂಡು ತಿರುಗಾಡಿಸುತ್ತಾನೆ, ಇಬ್ಬರು ಸರಸ, ಸಲ್ಲಾಪ ನಡೆಸುತ್ತಾರೆ. ತಾನು ದೊರೆಗಳ ಅಂಗರಕ್ಷಕ ಹುದ್ದೆಯಲ್ಲಿರುವುದರಿಂದ  ಹೊರಗೆ ಬರಲಾಗುವುದಿಲ್ಲ ಎನ್ನುತ್ತಾ ಬರಸೆಳೆದು ಅಪ್ಪಿಕೊಳ್ಳುತ್ತಾನೆ ಇಬ್ಬರೂ ಮುದ್ದಿಸಿ, ಚುಂಬಿಸುತ್ತಾರೆ. ಯುದ್ಧದ ಕಾರ್ಮೋಡ ವಿಜಯನಗರದ ಸಾಮ್ರಾಜ್ಯದ ಮೇಲೆ ಹಾರಾಡುತ್ತಿರುವುದನ್ನು  ತಿಳಿಸಿದಾಗ ಆಕೆಗೆ ಭಯವಾಗುತ್ತz. ವಿಜಯಶಾಲಿಯಾಗಿ ಬಂದು ತಾನು ನಿನ್ನನ್ನು ಮದುವೆಯಾಗುವುದಾಗಿ ಅಭಯ ನೀಡುತ್ತಾನೆ. ಸುಂದರ ಕನ್ಯಾಮಣಿ ತನ್ನ ಕೈ ಹಿಡಿಯಲಿ ಎಂದು ಸಿಡಿ ಹರಕೆ ಹೊರುತ್ತಾನೆ.

ಕೆಲವು ದಿನದ ನಂತರ. ಯುದ್ಧದ ತಯಾರಿ ನಡೆಯುತ್ತಿರುವಾಗ ಮುದ್ದು ಕುಪ್ಪಾಯಿ  ಅರಮನೆಗೆ ಬರುತ್ತಾಳೆ.  ‘ಮುದ್ದುಕುಪ್ಪಾಯಿ ನೀನೆಲ್ಲಿ ಏಕೆ ಬಂದೆ? ಬರಬಾರದು. ನಾನು ಮೊನ್ನೆ ಹೇಳಿಲ್ಲವೇ? ಯುದ್ಧ ಸಂಪನ್ನನಾದ ಬಳಿಕ ನಮ್ಮಿಬ್ಬರ ಭೇಟಿ ಎನ್ನುತ್ತಾನೆ ಸಂಬಜ್ಜಗೌಡ.  ಇದೇ ವೇಳೆ ವಲಂದಿನಿ ಎಂಬ ವೇಶ್ಯೆ ಸಹ  ಗಟ್ಟಿಯಾಗಿ ‘ಸಂಬಜ್ಜಗೌಡರೇ’ ಎಂದು ಗಟ್ಟಿಯಾಗಿ ಕೂಗುತ್ತಾ ಸಮೀಪ ಬಂದು ಬರುತ್ತಾಳೆ. ಅಲ್ಲಿ ತನ್ನ ಪ್ರೀತಿಯ ಹುಡುಗಿ ಮುದ್ದುಕುಪ್ಪೆಯ ಪರಿಚಯವನ್ನು ಮಾಡಿಕೊಡುತ್ತಾನೆ.


ವೇಶ್ಯೆಯರ ದುರಂತ ಕಥಾನಕ: 


ಸಂಬಜ್ಜ ಗೌಡ ತನ್ನ ಮನೆಯಲ್ಲಿರುವಾಗ ವಲಂದಿನಿ ಎಂಬ ವೇಶ್ಯೆ ಬರುತ್ತಾಳೆ. ಅಲ್ಲಿ ಅವರಿಬ್ಬರ ನಡುವೆ ಪರಿಚಯವಾಗಿ ಮಾತುಕತೆ ನಡೆಯುತ್ತದೆ. ಅರಮನೆಯ ವೇಶ್ಯೆಯರ ದುರಂತ ಜೀವನವನ್ನು ವಿವರಿಸುತ್ತಾಳೆ. ಜೊತೆಗೆ ತನ್ನ ಕಥೆಯನ್ನು ಹೇಳುತ್ತಾಳೆ. ಹೊಟ್ಟೆಪಾಡಿಗಾಗಿ ಯುವತಿಂiiರಾಗಿದ್ದಾಗಲೇ ಅಣ್ಣಂದಿರನ್ನು ಕಳೆದುಕೊಂಡವರು ಹೆಚ್ಚಾಗಿ ಶೂದ್ರ ಕುಲಸಂಜಾತರು ಈ ವೃತ್ತಿಗೆ ಇಳಿಯುತ್ತಾರೆ. ವಿಧವೆಯರು, ಬದುಕಿಗಾಗಿ ಕಷ್ಟಪಡುವವರು ಸಹ ಬರುತ್ತಾರೆ. ಕೆಲವರನ್ನು ಋತುಮತಿಗೂ ಮುನ್ನ ದಂಧೆಗೆ ಇಳಿಸುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಆಚರಣೆ ಇದೆ. ಅದಕ್ಕೆ ‘ಮುದ್ರಾದಿಕೋತ್ಸವ’ ಎನ್ನುವರು. ವೃತ್ತಿಪರ ಹಿರಿಯ ವೇಶ್ಯೆಯರು ಇದನ್ನು ನೆರವೇರಿಸುವರು. ನಂತರ ಸೂಳೆಗಾರಿಕೆಯ ಕೆಲವು ಕೌಶಲ್ಯಗಳನ್ನು ಕಲಿಸುತ್ತಾರೆ. ಸೂಳೆಯರಿಗಾಗಿ ಹಂಪಿಯಲ್ಲಿ ಬಜಾರನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕೆ ‘ಸೂಳೆಯರ ಬಜಾರ್’ ಎಂತಲೇ ಹೆಸರಿದೆ. ಇಲ್ಲಿ ದಿನನಿತ್ಯ ವ್ಯವಹಾರ ನಡೆಯುತ್ತದೆ. ವೇಶ್ಯಾವೃತ್ತಿಯವರಿಗೆ ಎಂದೇ ಹಲವು ಹತ್ತು ತೆರಿಗೆಗಳಿವೆ. ನಮ್ಮ ಪಾಲಿನ ತೆರಿಗೆ ಹಣವನ್ನು ನಾವು ಸಲ್ಲಿಸುತ್ತೇವೆ.  ನಮ್ಮ ಹಣವನ್ನು ಸೈನ್ಯದ ಸಂಬಳ ಮತ್ತು ಕಲ್ಯಾಣ ಕಾರ್ಯಗಳಿಗೆ ವಿನಿಯೋಗಿಸುತ್ತದೆ. ನಮಗೆ ಯುದ್ಧ ಎಂದರೆ ಆಗುವುದಿಲ್ಲ. ಹೆದರುತ್ತೇವೆ ಎನ್ನುತ್ತಾಳೆ. 

 ಆತ ಏಕೆ ಹೆದರುವುದು, ಯುದ್ಧಭೂಮಿಯಲ್ಲಿ ನಿಮಗೇನು ಕೆಲಸ ಎಂದು ಕೇಳುತ್ತಾನೆ. ಆಗ ಅವಳು, ಯುದ್ಧ ಭೂಮಿಯಲ್ಲಿ ಲಕ್ಷಾಂತರ ಸೈನಿಕರ ಕಾಮತೀಟೆ ತೀರಿಸಬೇಕು. ಅದು ಶಿಕ್ಷೆಗೆ ಸಮ. ಕೆಲವೊಮ್ಮೆ ಹತ್ತ್ತು- ಇಪ್ಪತ್ತು ಯೋಧರ ಲೈಂಗಿಕ ತೃಷೆಯನ್ನು ಪ್ರತಿಯೊಬ್ಬರು ತೀರಿಸುವಂತಹ ಅನಿವಾರ್ಯ ಸಂದರ್ಭ ಎದುರಾಗುತ್ತದೆ. ಅವರೇನು ಪುಕ್ಕಟೆಯಾಗಿ ನಮ್ಮ ಜೊತೆ ಮಲಗುವುದಿಲ್ಲ. ನಿಗದಿತ ಹಣ ಕೊಡುತ್ತಾರೆ. ಆದರೆ ನಾವು ಹಲವಾರು ರೋಗ ರುಜಿನುಗಳಿಗೆ ತುತ್ತಾಗಬೇಕಾಗುತ್ತದೆ. ಕೆಲವರು ಮಾನಸಿಕ ಕಾಯಿಲೆಗಳಿಂದ ನರಳಿ ಸಾಯುತ್ತಾರೆ. ಎರಡು ಲಕ್ಷ ಸೈನಿಕರ ಲೈಂಗಿಕ ಕಾಮನೆಯನ್ನು ಕೇವಲ ೧೦, ೨೦ ಸಾವಿರ ವೇಶ್ಯೆಯರು ತಣಿಸಬೇಕಾಗಿದೆ. ಯುದ್ಧಭೂಮಿಯಲ್ಲಿ ಯಾವುದೇ ಮೂಲಸೌಕರ್ಯ ನಮಗಿರುವುದಿಲ್ಲ. ಕೆಲವು ಸೈನಿಕರು ನಮ್ಮನ್ನು ಹೊಡೆದು ಬಡಿದು ಹಿಂಸಿಸುತ್ತಾರೆ. ಈ ಬಗ್ಗೆ ನಾವು ಯಾರಿಗೂ ದೂರು ಕೊಡುವಂತಿಲ್ಲ ಎಂದು ವಿಷಯದ ದುರಂತಕಥನವನ್ನು ಬಿಚ್ಚಿಡುತ್ತಾಳೆ.

ಇತ್ತ  ಬೀದರ್, ಅಹಮದ್‌ನಗರ್, ಗೋಲ್ಕೊಂಡ, ಬಿಜಾಪುರದ ನವಾಬರು ಒಟ್ಟಾಗಿ ವಿಜಯನಗರದ ಮೇಲಿನ ದಾಳಿಗೆ ಸಜ್ಜಾಗಿರುವ ಮಾಹಿತಿ ಅರಸರಿಗೆ ಗುಪ್ತಚರರಿಂದ ದೊರೆಯುತ್ತದೆ. ಹಂಪಿ ಪರಿಸರದ ರಕ್ಕಸತಂಗಡಿಯಲ್ಲಿ ಯುದ್ಧ ಆರಂಭವಾಗುತ್ತದೆ. ೯೦ ವರ್ಷದ ಅಳಿಯ ರಾಮರಾಯರು ಗೆಲುವಿನೋತ್ಸ್ಸಾಹದಲ್ಲಿ ರಣಾಂಗಕ್ಕೆ ಇಳಿಯುತ್ತಾರೆ. ಹಲವು ತಿಂಗಳು ನಡೆದ ನಂತರ ಒಂದು ದಿನ ಸಂಬಜ್ಜಗೌಡ ವೇಶ್ಯೆಯರಿದ್ದ ಪರಿಸರಕ್ಕೆ ಹೋಗಿ ಅಲ್ಲಿ ತನ್ನ ಪರಿಚಯದ ವಲಂದಿನಿಯ ಬಗ್ಗೆ ವಿಚಾರಿಸುತ್ತಾನೆ. ಆಕೆಯನ್ನು ಭೇಟಿ ಮಾಡಿದಾಗ ನಿಸ್ಸಹಾಯಕ ಮತ್ತು ಅತ್ಯಂತ ದುರ್ಬಲ ಸ್ಥಿತಿಯಲ್ಲಿರುತ್ತಾಳೆ.  ಮುದ್ದುಕುಪ್ಪಾಯಿಯ ಬಗ್ಗೆ ವಿಚಾರಿಸುತ್ತಾಳೆ. ‘ನಿಮ್ಮಬ್ಬರನ್ನೂ ಒಂದುಗೂಡಿಸುವ ಆಸೆಯಿತ್ತು. ಆದರೆ ಈ ಜನ್ಮದಲ್ಲಿ ನನ್ನಿಂದ ಅದು ಸಾಧ್ಯವಿಲ್ಲ’ ಎನ್ನುತ್ತಾ ‘ನನ್ನಕತೆ ಮುಗಿದ ಹಾಗೆ’ ಎಂದು ಆತನಿಗೆ ನಮಸ್ಕರಿದಾಗ ಆತ ಕಣ್ಣೀರು ಸುರಿಸಿ ಹೊರಡುತ್ತಾನೆ. 


ಯುದ್ಧ, ಸಾವು, ನೋವು: 


ಇತ್ತ ಭೀಕರ ಯುದ್ಧದಲ್ಲ್ಲಿ  ರಾಮರಾಯರ  ದೊಡ್ಡಮಗ ಕೃಷ್ಣಪ್ಪ ಮೊದಲು ಹತನಾದ ವಾರ್ತೆ ತಲುಪುತ್ತದೆ. ರಾಮರಾಯರನ್ನು ಹತ್ಯೆ ಮಾಡಲು ಕೀಶ್ವರ್ ಖಾನ್ ಎಂಬಾತ ಅಬ್ಬರದಲ್ಲಿ ಧಾವಿಸುತ್ತಾನಾದರೂ ತಡೆಯಲು ಹೋದ ಸಂಬಜ್ಜಗೌಡನ ಮೇಲೆ ಆನೆಯೊಂದು ಕೆರಳಿ ದಾಳಿ ಮಾಡಿ  ಸೊಂಡಿಲಿನಿಂದ ಅಪ್ಪಳಿಸಿ, ಎತ್ತಿ ಒಗೆದು ಬಿಸಾಕಿತು. ಆತನ ಕಣ್ಣುಗಳು ನಿಧಾನ ಮುಚ್ಚಿದವು. ರೂಮಿಖಾನ್ ಎನ್ನುವವನು ರಾಮರಾಯನ ಹತ್ಯೆಗೆ ಮತ್ತೆ ಬಂದನಾದರೂ ಹತ್ಯೆ ಎಸಗದೆ  ಬಂಧಿಸಿ  ಕರೆದೊಯ್ಯುತ್ತಾನೆ. ನಂತರ ವಿಚಾರಣೆ ನಡೆಸುವಾಗಲೇ ಹುಸೇನ್ ಷಾ ಎಂಬಾತ ಖಡ್ಗ ತೆಗೆದು ಝಳಪಿಸಿ ಈತ ಬದುಕುಳಿದರೆ ತಮಗೆ ಕಷ್ಟ  ಎಂದುಕೊಂಡು ರುಂಡ-ಮುಂಡ ಬೇರ್ಪಡಿಸಿದಾಗ ರಾಮರಾಯನ ಶೌರ್ಯ ಕಥಾನಕ ಇತಿಹಾಸಕ್ಕೆ ಸೇರುತ್ತದೆ.  

ಇತ್ತ ಯುದ್ಧ ಮುಗಿದು ವಿಷಾದ ಆವರಿಸಿತ್ತು. ಮುದ್ದು ಕುಪ್ಪಾಯಿ ನಿವಾಸದಲ್ಲಿ ಹಲವರು ಆಕೆಯನ್ನು ಸಂತೈಸುತ್ತಿದ್ದರು. ರಾಜ್ಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ದೇಶಭಕ್ತರ ಜೀವನವನ್ನೇ ಕತೆಯನ್ನಾಗಿಸಿ ನಿನ್ನ ಲೇಖನ ಪ್ರಜ್ವಲಿಸಲಿ. ಅದು ರಂಗ ರೂಪದಲ್ಲಿ ಪ್ರದರ್ಶಿತವಾಗಿ ಪ್ರಜೆಗಳನ್ನು ಶತ್ರುಗಳ ವಿರುದ್ಧ ಬಡಿದೆಬ್ಬಿಸಬೇಕು. ಈ ಕೆಲಸವನ್ನು ನೀನು ಮಾಡಬೇಕು ಎಂದು ಕರೆ ಕೊಡುತ್ತಾರೆ. ಇದರಿಂದ  ಮುದ್ದು ಸತ್ತು ನಾಮಾವಶೇಷವಾಗುವುದಕ್ಕಿಂತ ಬದುಕಿ ತನ್ನ ಪ್ರೀತಿಯ ಸಂಭಾಜ್ಯ ಗೌಡನನ್ನು  ಪುನರ್ ಸೃಷ್ಟಿಸುವುದೇ ಮೇಲೆಂದು ನಿಶ್ಚಯಿಸಿ ನೃತ್ಯರೂಪಕ ರಚಿಸುತ್ತಾಳೆ. ನಂತರ ಒಂದು ದಿನ ಸಂಬಜ್ಜಗೌಡನ ಮನೆಗೆ ತೆರಳುತ್ತಾಳೆ. ಆಗ ಆತನ ಪಾಲಕರು ‘ಆ  ದೇವರು ನಮ್ಮ ಮಗನನ್ನು ಹೊಟ್ಟೆಯಲ್ಲಿ ಹಾಕಿಕೊಂಡು ಅನ್ಯಾಯ ಮಾಡಿಬಿಟ್ಟ’ ಎಂದು ಬಿಕ್ಕಳಿಸುತ್ತಾರೆ.

 ಮನೆಗೆ ಬಂದು ಪ್ರಿಯತಮನ ಬಗ್ಗೆ ನೃತ್ಯರೂಪವನ್ನು ರಚಿಸಲು ಶ್ರೀಕಾರ ಹಾಕುತ್ತಾಳೆ.


ಮನಪರಿವರ್ತಿಸಿದ ಪ್ರೇಮ ಕಥಾನಕ: 


ಯುದ್ಧದ ನಂತರ ಬಹಮನಿಗಳು ಐತಿಹಾಸಿಕ ಸವಿನೆನಪಿಗೆ ಕೆಲವು ಸುಂದರ ಕಟ್ಟಡಗಳನ್ನು ಕಟ್ಟಿದರು. ಸಲ್ಮಾನ್ ಫರೂಕಿ ಎಂಬ ಹೆಸರಿನ ಮೇಸ್ತ್ರಿ ಅಧೀನದಲ್ಲಿ ಸುಮಾರು ೮೦ ಯುದ್ಧ ಖೈದಿಗಳು ಹಗಲಿರುಳು ದುಡಿಯುತ್ತಿದ್ದರು. ಅವರಲ್ಲಿ  ಸಂಬಜ್ಜ ಒಬ್ಬ. ಆತ ನನ್ನ ಹೆಸರು ಸಂಬಜ್ಜ ಗೌಡ. ‘ರಾಮರಾಯ ಪ್ರಭುವಿನ ಅಂಗರಕ್ಷಕನಾಗಿದ್ದೆ. ನಾನು ಸತ್ತು ಬದುಕಿರುವೆ ಎಂದರೆ ನನ್ನ ಅಂತರಂಗದಲ್ಲಿರುವ ಪ್ರಿಯತಮೆ ಮುದ್ದು ಕುಪ್ಪಾಯಿ ಕಾರಣ’ ಎಂದಾಗ ‘ನಿಮ್ಮದು ನಿಷ್ಕಳಂಕ ಪ್ರೇಮ. ಅದೇ ಮುಂದಿನ ಮಾರ್ಗವನ್ನು ತೋರಿಸುತ್ತದೆ. ನಿನ್ನ ಸಂಗಾತಿ ಹೆಸರಾಂತ ಅಭಿನೇತ್ರಿ, ಸಾಹಿತಿ ಎಂದು ಹೇಳಿದೆ.  ಕೋಮು ಸೌಹಾರ್ದತೆ, ಮತ ಸಾಮರಸ್ಯ ಕುರಿತು ಅವರು ಒಂದು ನಾಟಕವನ್ನು ರಚಿಸಲಿ. ಬಹಮನಿ ರಾಜ್ಯಗಳ ಪ್ರತಿಶಹರಗಳಲ್ಲಿ ಅದನ್ನು ಪ್ರದರ್ಶಿಸಲಿ’ ಎಂದು ಸಲಹೆ ಕೊಡುತ್ತಾನೆ.

ಒಂದು ದಿವಸ ಮುದ್ದುಕುಪ್ಪಾಯಿ ಹೂವಿನ ತೋಟದಲ್ಲಿ ಇರುವಾಗ ದಳವಾಯಿ ಒಬ್ಬ ಆಕೆಯ ಬಳಿ ಬಂದು ಅರಮನೆಯಿಂದ ನಿಮಗೊಂದು ನಿರೂಪಣೆ ಪತ್ರ ಬಂದಿದೆ. ನಾಳೆ ಬೆಳಗ್ಗೆ ನೀವು ಆಸ್ಥಾನಕ್ಕೆ ಬರಲು ರಾಜರು ಸೂಚಿಸಿದ್ದಾರೆ ಎನ್ನುತ್ತಾನೆ. ಮನೆಗೆ ತೆರಳಿದ ಮುದ್ದು ತನ್ನ ತಾಯಿಗೆ ವಿಷಯವನ್ನು ತಿಳಿಸಿ ಮಾರನೇ ದಿನ ಆಕೆಯೊಂದಿಗೆ ಅರಮನೆಗೆ ಬರುತ್ತಾಳೆ. ಅಲ್ಲಿ ಮಂತ್ರಿಯನ್ನು ಕಂಡಾಗ ಆತ ಸಂಬಜ್ಜಗೌಡ ಬದುಕಿರುವ ವಿಚಾರವನ್ನು ತಿಳಿಸಿ, ‘ಸದ್ಯಕ್ಕೆ ಆತ ಬಿಜಾಪುರದ ಬಹಮನಿಗಳ  ಯುದ್ಧ ಕೈದಿಯಾಗಿದ್ದಾನೆ. ಅವರನ್ನು ಪಡೆಯುವ ಕುರಿತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಆರಂಭವಾಗಿದೆ. ಅವನು ಇಲ್ಲಿಗೆ ಬಂದೇ ಬರುತ್ತಾನೆ’ ಎನ್ನುತ್ತಾನೆ. ಆಗ ಮಂತ್ರಿಯು ‘ನಿಮ್ಮ ಕುಪ್ಪಾಯಿ ಕುಟುಂಬ ಹೆಸರಾಂತ ಕಲಾವಿದರದ್ದು. ಪ್ರೇಮಕಥನಕ್ಕೆ ಒಂದು ರಂಗರೂಪ ಕೊಡಿ. ಅದನ್ನು ಬಿಜಾಪುರದಲ್ಲಿ ಪ್ರದರ್ಶಿಸಿದರೆ ಪವಾಡ ನಡೆಯಬಹುದು’ ಎನ್ನುತ್ತಾನೆ.

 ಸಲಹೆಯನ್ನು ಮುದ್ದು ಒಪ್ಪಿ ಅಲ್ಲಿಂದ ಸಂಬಜ್ಜಗೌಡನ ಮನೆಗೆ ತೆರಳಿ ಆತ ಬದುಕಿರುವ ವಿಚಾರವನ್ನು ಆತನ ತಂದೆ ತಾಯಿಗಳಿಗೆ ತಿಳಿಸುತ್ತಾಳೆ. ಒಂದೆರಡು ದಿನಗಳಲ್ಲಿ ತಮ್ಮ ಕಲಾವೃಂದ ಬಿಜಾಪುರಕ್ಕೆ ಹೋಗಿ ನಾಟಕಗಳನ್ನು ಪ್ರದರ್ಶಿಸಲಿದೆ. ನಮ್ಮ ಜನರನ್ನು ಮರಳಿ ತರಲು ಈ ಪ್ರಯೋಗ ಯಶಸ್ವಿಯಾಗಲಿದೆ

ಎನ್ನುತ್ತಾ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಸಂಬಂಧಿಸಿದ ನಾಟಕಕ್ಕೆ ಸಮಕಾಲಿನ ಸಂಗತಿಗಳನ್ನು ರೂಪಕಾತ್ಮಕವಾಗಿ ಸೇರಿಸಿ  ಸಂಬಜ್ಜಗೌಡನನ್ನು ನಾಯಕನನ್ನಾಗಿ, ತನ್ನನ್ನು  ನಾಯಕಿಯನ್ನಾಗಿ ಮಾಡಿ ಒಂದು ಪ್ರೇಮಕಥಾನಕವನ್ನು ರೂಪಿಸುತ್ತಾಳೆ. 


ಬಹುಮಾನ ರೂಪದಲ್ಲಿ ಬಂದ ಪ್ರೇಮಿ: 

 

ಮುದ್ದುಕುಪ್ಪಾಯಿ ಕಲಾವೃಂದ ಆನೆಗುಂದಿಯಿಂದ ಬಿಜಾಪುರದತ್ತ ಸಾಗುತ್ತದೆ.  ತಾವು ಅಲೆಮಾರಿ ನಾಟಕ ಪ್ರದರ್ಶನಕಾರರು. ಬಾದಶಹಾ ನಾಟಕ ಅಭಿಮಾನಿ ಎಂದು ತಿಳಿದು ಇಲ್ಲಿ ನಾಟಕ ಪ್ರದರ್ಶನಕ್ಕೆ ಬಂದಿರುವುದಾಗಿಯೂ, ಅವಕಾಶ ಸಿಕ್ಕರೆ ಪ್ರದರ್ಶಿಸಲು ಸಿದ್ದರಾಗಿ ಬಂದಿದ್ದೇವೆ ಎನ್ನುತ್ತಾಳೆ. ಆತನ ಸಹಚರರು ಬಾದಶಹಾನೊಡನೆ ಮಾತನಾಡಿ ತಿಳಿಸುವುದಾಗಿ ಹೇಳಿ, ಒಪ್ಪಿಗೆ ತರುತ್ತಾರೆ.  ಪ್ರದರ್ಶನ ನಡೆಯುತ್ತದೆ. ನಾಟಕದ ಕಥಾನಕದಲ್ಲಿ ರಾಜನ ಅಂಗರಕ್ಷಕ ಹಳ್ಳಿಯ ಯುವತಿಯನ್ನು ಪ್ರೀತಿಸುತ್ತಾನೆ. ಈ ಪ್ರೀತಿಯನ್ನು ಯುದ್ಧ ಬೇರ್ಪಡಿಸುತ್ತದೆ. ಅವನು ಶತ್ರು ರಾಜನಲ್ಲಿ ಯುದ್ಧ ಕೈದಿಯಾಗುತ್ತಾನೆ. ಅವನನ್ನು ಬಿಡುಗಡೆ ಮಾಡಲು ಆಕೆ ವಿವಿಧ ರೀತಿಯಲ್ಲಿ ಹೋರಾಟ ನಡೆಸಿ ಶತ್ರುರಾಜನ ಮನಸ್ಸು ತಿರುಗಿಸುವಲ್ಲಿ ಸಫಲಳಾಗುತ್ತಾಳೆ. ಇಲ್ಲಿಗೆ ಎರಡು ಗಂಟೆಯ ನಾಟಕ ಮುಗಿಯುತ್ತದೆ. ನಂತರ ಸಾರ್ವಜನಿಕರು ಮುದ್ದುಕುಪ್ಪಾಯಿ ಮತ್ತು ತಂಡದ ಮನೋಜ್ಞ ಅಭಿನಯವನ್ನು ಮನಸಾರೆ ಶ್ಲ್ಲಾಘಿಸುತ್ತಾರೆ. ಬಾದಶಹಾ ಕೂಡ  ಬಿಕ್ಕಳಿಸುತ್ತಾ,  ‘ನಿಮ್ಮ ಪ್ರದರ್ಶನ ನೋಡಿ ನಿಮ್ಮೆಲ್ಲರ ಅಭಿಮಾನಿಯಾಗಿದ್ದೇನೆ. ನನ್ನ ಆಸ್ಥಾನಕ್ಕೆ ಬರಬೇಕು’ ಎನ್ನುತ್ತಾನೆ. ಆಸ್ಥಾನದಲ್ಲಿ ಎಲ್ಲರನ್ನೂ ಸನ್ಮಾನಿಸುತ್ತಾ  ‘ಪ್ರೀತಿ ಪ್ರೇಮಕ್ಕಿಂತ ಮಿಗಿಲಾದ ಧರ್ಮ ಇಲ್ಲ. ಎಲ್ಲರೂ ಸಮಾನರು. ಮುದ್ದು ಕುಪ್ಪಾಯಿಗೆ ಆಕೆಯ ಪ್ರೇಮಿಯನ್ನು ಬಹುಮಾನ ರೂಪದಲ್ಲಿ ನೀಡುತ್ತೇನೆ. ಕೂಡಲೇ ಆತನ ಸಹಿತ ಎಲ್ಲಾ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಬೇಕು. ಹಂಪಿಯಲ್ಲಿ ಅವರೆಲ್ಲರಿಗೂ ಪುನರ್ವಸತಿ ಕಲ್ಪ್ಪಿಸಬೇಕು’ ಎಂದು ಫರ್ಮಾನ್ ಹೊರಡಿಸುತ್ತಾನೆ. ಅದರಂತೆ ಎಲ್ಲರನ್ನೂ ಬಿಡುಗಡೆ ಮಾಡಲಾಗುತ್ತದೆ. 

ಮುದ್ದುಕುಪ್ಪಾಯಿ ಸಂಬಜ್ಜನನ್ನು ಎದುರುಗೊಂಡು ತಬ್ಬಿಕೊಂಡು, ಅಶ್ರುಧಾರೆ ಚಿಮ್ಮಿಸುತ್ತಾಳೆ. ಆತನು ಆಕೆಯನ್ನು ಚುಂಬಿಸಿ ಪಾದಗಳ ಮೇಲೆ ಹಣೆಇಟ್ಟು ಕಣ್ಣೀರು ಸುರಿಸುತ್ತಾನೆ. ‘ನಿಮ್ಮ ಉಪಕಾರ ತೀರಿಸಲು ನಾನು ಹಲವು ಜನ್ಮ ಎತ್ತಿ ಬಂದರೂ ಸಾಲದು’ ಎಂದು ಹೇಳುತ್ತಾನೆ. ಬಿಜಾಪುರದಿಂದ ಹಂಪಿಗೆ ಹೊರಡುವಾಗ ಅವನಿಗೆ ಪರ್ಶಿಯಾ ಮೂಲದ ಹೆಣ್ಣು ಕುದುರೆಯೊಂದನ್ನು ಬಹುಮಾನವಾಗಿ ರಾಜ ಕೊಡುತ್ತಾನೆ ಆ ಹೆಣ್ಣು ಕುದುರೆಗೆ ಆತ ಮೃತ ವೇಶ್ಯೆ ‘ವಲಂದಿ’ ಎಂದು ನಾಮಕರಣ ಮಾಡಲು ನಿರ್ಧರಿಸುತ್ತಾನೆ.

......................

ಈ ಕೃತಿಯಲ್ಲಿ ಬರುವ ಒಂದು ಮಾತು ಹೀಗಿದೆ:- 

* ಯಾವ ಯುದ್ಧವೂ ಒಳ್ಳೆಯದಲ್ಲ. ಅದು ಮಾನವೀಯತೆಯನ್ನು ನಾಶ ಮಾಡುತ್ತದೆ. ಯುದ್ಧವನ್ನು ಆರಂಭಿಸುವವರು ಶ್ರೀಮಂತರು. ಆದರೆ ಅದನ್ನು ಮುಗಿಸುವವರು ಬಡವರು. ಯುದ್ಧಗಳಲ್ಲಿ ಸಾಯುವವರು ಸಾಮಾನ್ಯ ಪ್ರಜೆಗಳು. ಒಂದು ಯುದ್ಧ ಒಂದು ರಾಜ್ಯದ ಯೌವ್ವನವನ್ನು ನಾಶ ಮಾಡುತ್ತದೆ. ಅಲ್ಲಿ ಶಾಶ್ವತವಾಗಿ ಉಳಿಯುವುದು ವೃದ್ಧಾಪ್ಯ ಮಾತ್ರ. ಮುದುಕರು ಯುದ್ಧವನ್ನು ಪ್ರಕಟಿಸುತ್ತಾರೆ. ಯುವಕರು ಅದನ್ನು ಮುಂದುವರೆಸುತ್ತಾರೆ. ಈ ಭೂಮಿಯನ್ನು ಯುದ್ಧ ಮುಕ್ತ ಮಾಡದೆ ಇದ್ದ ಪಕ್ಷದಲ್ಲಿ ಭವಿಷ್ಯದ ದಿವಸಗಳಲ್ಲಿ ಭೂಮಿಯೇ ನಮ್ಮನ್ನು ಹೊಸಕಿ ಹಾಕುವುದಂತೂ ಸತ್ಯ

........................

 



Comments

Popular posts from this blog