ಬದುಕಿನ ಘಟನೆಗಳ ಮೊತ್ತದ

‘ಭೂತದ ಕೋಳಿ’ 



ಗ್ರಾಮೀಣ ಹಿನ್ನೆಲೆಯ ಬದುಕು, ಸಾಮರಸ್ಯ, ರಾಜಕೀಯ ಶೋಷಣೆ, ವಿಡಂಬನೆಯ ಚಿತ್ರಗಳನ್ನು ಕಟ್ಟಿಕೊಡುವ ಕಥಾ ಸಂಕಲನ ‘ಭೂತದ ಕೋಳಿ’. ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ  ಉಪನ್ಯಾಸಕರಾಗಿರುವ ಮತ್ತು ಬರೆಹಗಾರರಾಗಿ ಈಗಾಗಲೇ ಗುರುತಿಸಿಕೊಂಡಿರುವ ರಾಘವೇಂದ್ರ  ಬಿ. ರಾವ್ (ಅನು ಬೆಳ್ಳೆ) ಅವರ ಕೃತಿ ಇದು. ನಮ್ಮ ಸುತ್ತಮುತ್ತ ಇರುವ ವಿವಿಧ ಬಗೆಯ ಮನುಷ್ಯರ ಕಥೆಗಳು ನಮ್ಮನ್ನು ಇಲ್ಲಿನ ವಸ್ತು. ಅವುಗಳಲ್ಲಿ ಕೆಲವು ರೋಚಕವಾಗಿದ್ದರೆ, ಕೆಲವು ವಿಚಿತ್ರವಾಗಿವೆ. ಕೆಲವು ಎಂದೋ ಆಗಿಹೋಗಿದ್ದಾಗಿದೆ. ಇಂತಹವರು ನಮ್ಮ ನಡುವೆ ಇದ್ದಾರೆ. ಅವರ ಆಡುನುಡಿಗಳಿಂದ, ಅವರು ಮೂಡಿಸುವ ಆತ್ಮೀಯ ಭಾವಗಳಿಂದ ಇಲ್ಲಿನ ಕಥೆಗಳು ನಿರೂಪಿತವಾಗಿದೆ. 

ಮೂಲತಃ ಗ್ರಾಮೀಣ ಪ್ರದೇಶದವರೇ ಆದ ಲೇಖಕರು ಬದುಕಿನ ನೈಜ ಘಟನೆಗಳನ್ನು ತಾವು ಕಂಡಂತೆ ಸುಂದರವಾಗಿ ಕಾದಂಬರಿಯಲ್ಲಿ  ಚಿತ್ರಿಸಿದ್ದಾರೆ. ನಮ್ಮ ಅಕ್ಕಪಕ್ಕದಲ್ಲಿ ನಡೆಯುವ ಬದುಕಿನ ಘಟನೆಗಳ ಮೊತ್ತವೇ ಭೂತದ ಕೋಳಿ. ಕೃತಿಯಲ್ಲಿ  ಒಟ್ಟು ೧೨ ಕತೆಗಳಿವೆ. ಎಲ್ಲವೂ ಅವರ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ನಡೆದವನಾಗಿವೆ.

ಕಥೆಗಳ ಕುರಿತು: 

‘ಗೋಲಿಸೋಡಾ’ ಮೂಲಕ  ಹೊಟ್ಟೆ ಬುಳುಬುಳು ಎನ್ನುವುದು ಕಡಿಮೆಯಾಗುತ್ತದೆ ಎಂದು ನಂಬುವ ಅಜ್ಜಿ, ಮಗ ಮಾತ್ರೆ ತಂದುಕೊಟ್ಟರೂ ಅದು ಕಹಿ ಎನ್ನುತ್ತಾಳೆ.  ತನಗೆ ಗೋಲಿ ಸೋಡಾ ಬೇಕು ಎನ್ನುವ ಹಠ. ಇದನ್ನು ತರಲು ಊರಿನ ಅಂಗಡಿಗೆ ಮೊಮ್ಮಗನನ್ನು ಕಳುಹಿಸಿದರೆ ಆತ ಆ ಹಣದಲ್ಲಿ ಚಾಕೋಲೇಟ್ ತಂದುಕೊಂಡು ಅಂಗಡಿ ಬಂದ್ ಆಗಿದೆ ಎನ್ನುತ್ತಾನೆ. ಪೆಪ್ಸಿ, ಕೋಕೊಕೋಲಾದ ಈ ಕಾಲದಲ್ಲಿ ಗೋಲಿ ಸೋಡಾವನ್ನು ಅಜ್ಜಿ ಕೇಳುವುದು ಹಿಂದಿನವರು ಅದಕ್ಕೆ ಕೊಟ್ಟ ಮಹತ್ವವನ್ನು ತೋರಿಸುತ್ತದೆ.   

 ‘ಶಾಪ’ ಕಥೆಯಲ್ಲಿ ಗಂಡು ಮಗುವಿಗಾಗಿ ಆಸೆ ಪಡುವ ಈ ಕಾಲದಲ್ಲಿ ತನಗೆ ಹೆಣ್ಣು ಮಗು ಬೇಕೆಂಬ ಅಪೇಕ್ಷೆಯನ್ನು ಪತ್ನಿ ವ್ಯಕ್ತಪಡಿಸಿದಾಗ ಗಂಡ ಹೆಣ್ಣು ಹುಟ್ಟದಂತೆ ತಂದೆಯ ಶಾಪ ಇದೆ ಎಂದು ಹೇಳುತ್ತಾನೆ. ನಮ್ಮ ಮನೆಯಲ್ಲಿ ಎಲ್ಲ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ನಂತರ ತೀವ್ರ ಸಂಕಷ್ಟ, ಬಡತನಕ್ಕೆ ಸಿಲುಕಿದ್ದರಿಂದ ಮುಂದೆ ಈ ಮನೆಯಲ್ಲಿ ಹೆಣ್ಣು ಹುಟ್ಟಬಾರದು ಎಂಬ ಶಾಪ ತಂದೆಯಿಂದ ಬಂದಿದೆ ಎಂದು ಹೇಳಿ ಪತ್ನಿಯನ್ನು ಸಮಾಧಾನಿಸುತ್ತಾನೆ.

‘ಪಾತಕ್ಕ ಮತ್ತು ಕಾಗೆ’ಯಲ್ಲಿ  ಪಾತಕ್ಕನ ಗಂಡನ ತಿಥಿಯ ಊಟವನ್ನು ತಿಂದ ಕಾಗೆ ನಂತರ ಮನೆಯ ಸುತ್ತಲೇ ಇರುತ್ತದೆ. ಮನೆಯ ಬಾವಿ ಕಟ್ಟೆ, ಅಂಗಳದಲ್ಲೆಲ್ಲ ಗಲೀಜು ಮಾಡುತ್ತದೆ. ಇವರ ಮನೆಯ ಲೋಟ, ತಾಟನ್ನೆಲ್ಲ ಬಾವಿಗೆ ಹಾಕುತ್ತದೆ. ಪಕ್ಕದ ಮನೆಯ ಡಿಸೋಜಾ ಹೆಂಡ ಕುಡಿಯು ಬಂಗಾರದ ಬಣ್ಣದ ಗ್ಲಾಸನ್ನು, ಗಿರಿಜಕ್ಕನ ಮನೆಯವರು ಮೂತ್ರ ಹಾಕಿಟ್ಟ ಸ್ಟೀಲ್ ಲೋಟವನ್ನು ತಂದು ಪಾತಕ್ಕನ ಅಂಗಳದಲ್ಲಿ ಹಾಕುತ್ತದೆ. ನಿಜ ವಿಷಯ ಅರಿತಾಗ ಪಾತಕ್ಕ ಏನು ಮಾಡಿದಳು, ಕಾಗೆಯ ಕಾಟ ಹೇಗೆ ನಿಂತುತು ಎನ್ನುವುದನ್ನು ಈ ಕಥೆ ವಿವರಿಸುತ್ತದೆ.    

‘ಸಾಹಸ’ ದಲ್ಲಿ ಏನಾದರೂ ಸಾಹಸ ಮಾಡಿ ಹಣ ಗಳಿಸಬೇಕು ಎಂಬ ಹುಚ್ಚಿನಲ್ಲಿರುವ ಬಾಲಕ ಇದರಲ್ಲೇ ಜೀವ ಕಳೆದುಕೊಳ್ಳುತ್ತಾನೆ. ಸೈಕಲ್ ಸರ್ಕಸ್ ಆರಂಭಿಸಿ ಹಣ ಗಳಿಸಿದಾಗ ಟ್ಯೂಬ್ ಲೈಟ್ ಒಡೆದು ದೇಹದ ತುಂಬಾ ಗಾಯ ಮಾಡಿಕೊಳ್ಳುತ್ತಾನೆ. ಗಾಯ ಕೊಳೆತು ಬಲಗೈ ಕಳೆದುಕೊಳ್ಳುತ್ತಾನೆ. ಗುಂಡಿ ತೋಡಿ ಮಣ್ಣು ಮುಚ್ಚಿ ಅದರಲ್ಲಿ ಒಂದು ರಾತ್ರಿ ಕಳೆಯುವ ಸರ್ಕಸ್ ಮಾಡಲು ಏನು ಮಾಡಿಕೊಂಡ ಎನ್ನುವುದರ ವಿವರ ಇದೆ.  

‘ಐಸ್ ಕ್ಯಾಂಡಿ’ ಯಲ್ಲಿ ಹಿಂದೆಲ್ಲಾ ಸೈಕಲ್ ಕ್ಯಾರಿಯರ್‌ನಲ್ಲಿ ಬಾಕ್ಸ್‌ನಲ್ಲಿ ಐಸ್ ಕ್ಯಾಂಡಿ ಕಟ್ಟಿಕೊಂಡು ಹಳ್ಳಿಗೆ ಮಾರಾಟ ಮಾಡುವವರು ಬರುತ್ತಿದ್ದಾಗ ಮಕ್ಕಳು ಮುಗಿಬಿದ್ದು ತಿನ್ನುತ್ತಿದ್ದರು. ಈಗ ಅದೇ ಸೈಕಲ್ನಲ್ಲಿ ಆತ ಬಂದರೂ ಮಕ್ಕಳು ಆತನಿಂದ ಖರೀದಿ ಮಾಡುವುದಿಲ್ಲ. ಕೇಳಿದರೆ ವೈಜ್ಞಾನಿಕ ಕಾರಣ ಕೊಡುತ್ತಾರೆ.    ತಮಗೆ ಹೋಟೆಲ್‌ನಲ್ಲಿ ಗಡಬಡ್ ಕೊಡಿಸಿ ಎಂದು ಕೇಳುತ್ತಾರೆ. ಇದನ್ನು ಈಗಿನ ಕಾಲದ ಮಕ್ಕಳ ಮನೋಭಾವ ಹೇಗಿದೆ ಎನ್ನುವುದನ್ನು ಈ ಕಥೆ ತೋರಿಸಿಕೊಡುತ್ತದೆ. 

‘ಸೆಕೆಂಡ್ ಹ್ಯಾಂಡ್’ ಇದರಲ್ಲಿ ಬಾಬಣ್ಣ ದಾರಿ ತಪ್ಪಿದವಳ ಜೊತೆ ಮದುವೆಯಾಗುವ ಮೂಲಕ ‘ಸೆಕೆಂಡ್ ಹ್ಯಾಂಡ್’ ಎಂಬ ಹೆಸರನ್ನು ಪಡೆಯುತ್ತಾನೆ. ನಂತರ ಸೆಕೆಂಡ್ ಹ್ಯಾಂಡ್ ವಸ್ತುಗಳ ಖರೀದಿ, ಮಾರಾಟವನ್ನು ಆರಂಭಿಸುತ್ತಾನೆ. ತನ್ನ ಕುಶಾಗ್ರಮತಿ ಮತ್ತು ಮಾತಿನ ಮೋಡಿಯಿಂದಲೇ ಎಂತಹವರನ್ನೂ ಮರುಳು ಮಾಡುವ ಕಲೆ ಆತನಿಗಿರುತ್ತದೆ. ಇದರ ಮೂಲಕವೇ ನಿರೂಪಕರಿಗೆ ಕಾರು ಬೇಕಾಗಿರುವುದನ್ನು ಅರಿತು ಸೆಕೆಂಡ್ ಹ್ಯಾಂಡ್ ಕಾರನ್ನು ತೋರಿಸುತ್ತಾನೆ. ಪತ್ನಿಗೆ ಹೇಳದೆ ಖರೀದಿಸಿದ ಈ ಕಾರನ್ನು ನೋಡಿದ ಏನೆಂದಳು, ಕಾರನ್ನು ನಿರೂಪಕರು ಇಟ್ಟುಕೊಂಡರೇ, ಅದರ ಕಥೆಯನ್ನು ಇದು ವಿವರಿಸುತ್ತದೆ.

‘ಭೂತದ ಕೋಳಿ’ ಯಲ್ಲಿ ಭೂತದ ಹೆಸರು ಹೇಳಿ ಭಟ್ಟರ ಮನೆಯವರನ್ನು  ಪಕ್ಕದ ಮನೆಯವರು ಯಾಮಾರಿಸುವ ಕಥೆ ಇದೆ. ಭಟ್ಟರ ಮನೆಯ ಗದ್ದೆಯಲ್ಲಿದ್ದ   ಭತ್ತದ ತೆನೆಗಳನ್ನೆಲ್ಲ ತಿಂದು ಹಾಕುತ್ತಿದ್ದ ಪಕ್ಕದ ಮನೆಯ ಸೇಸಕ್ಕನ ಕೋಳಿಗಳ ಗುಂಪನ್ನು ಓಡಿಸುದು, ಇದಕ್ಕಾಗಿ ಜಗಳವೂ ನಡೆಯುವುದು, ಮನೆಯಂಗಳದಲ್ಲಿ, ಅಕ್ಕಚ್ಚಿನ ಪಾತ್ರೆಯ ಮೇಲೆ ಪಿಷ್ಟಿ ಹಾಕಿ ಗಲೀಜು ಮಾಡುವುದು, ನರಿ, ನಾಯಿ ಹಿಡಿದು ಕೋಳಿ ಸಾಯಿಸುವುದರ ವಿವರವಿದೆ. ಭಟ್ಟರ ಬೈಗುಳ ತಡೆಯಲಾರದೆ ಕೋಳಿಯನ್ನು ಮಾರಿದ್ದೇನೆ. ಮೂರು ಕೋಳಿಗಳನ್ನು ಭೂತಕ್ಕೆ ಬಿಟ್ಟಿದ್ದೇನೆ ಎಂದು ಯಾಮಾರಿಸುತ್ತಾರೆ. ಆದರೆ ಇದು ಸುಳ್ಳು ಎನ್ನುವುದು ನಂತರ sಟ್ಟರಿಗೆ ಗೊತ್ತಾಗುತ್ತದೆ. ಅದು ಹೇಗೆ ಬೆಳಕಿ ಬಂದಿತು ಎನ್ನುವುದನ್ನು ಕಥೆ ಓದಿಯೇ ತಿಳಿಯಬೇಕು. ದೈವದ ಹೆಸರಿನಲ್ಲಿ ತಮ್ಮ ಕೆಲಸ ಸಾಧಿಸಿಕೊಳ್ಳುವ ಜನರು ನಡುವೆ ಇದ್ದಾರೆನ್ನುವುದನ್ನು ಈ ಕಥೆ ಬಿಂಬಿಸುತ್ತದೆ.

‘ಡೋಲು’ ಎಂಬ ಕತೆಯಲ್ಲಿ ಸೊರಗುತ್ತಿದ್ದ ಶಾಲೆಯನ್ನು ಉನ್ನತಿಗೇರಿಸಿದ ಶಿಕ್ಷಕ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಒಮ್ಮೆ ಮಕ್ಕಳಿಗೆ ಥಳಿಸಿದ್ದರಿಂದ ಅದೇ ದೊಡ್ಡ ವಿಷಯವಾಗಿ ಗ್ರಾಮಸ್ಥರು ಮಾಸ್ತರರ ವಿರುದ್ಧ ತಿರುಗಿ ಬೀಳುತ್ತಾರೆ. ಅದಕ್ಕಾಗಿ ಮಾಸ್ತರರಿಗೆ ಕೊಟ್ಟ ಶಿಕ್ಷೆ ಏನು ಎನ್ನುವುದು ಈ ಸಾರಾಂಶ.

 ‘ಒಂದು ದಳ ಶ್ರೀ ತುಳಸಿ’ ಕತೆಯಲ್ಲಿ ಎಷ್ಟೇ ಸಹಾಯ ಮಾಡಿದರೂ ಆ ಸಂದರ್ಭದಲ್ಲಿ ಮಾತ್ರ ಋಣ, ಸಂಬಂಧ, ಮಾನವೀಯತೆ ಎಂದು ಪ್ರೀತಿ ತೋರುವ ಜನರು ತಮ್ಮ ಕೆಲಸ ಆದ ನಂತರ ಹೇಗೆ ದೂರೀಕರಿಸುತ್ತಾರೆ ಎನ್ನುವ ಸಾರಾಂಶ ಇದರದ್ದು. ಮಾನವೀಯತೆಯನ್ನು ತಮಗೆ ಬೇಕಾದಷ್ಟೇ ಬಳಸಿರುವುದನ್ನು ಲೇಖಕರು ಚಿತ್ರಿಸಿದ್ದಾರೆ. 

‘ಋಣ’ ಕಷ್ಟಜೀವಿ ಒಬ್ಬಳು ಮನೆಯಲ್ಲಿ ಗೇಯುತ್ತ ಎಷ್ಟು ದಿನ ಹೀಗೆ ಕಳೆಯಬೇಕೆಂದು ಚಿಂತಿಸಿ ನಂತರ ಗಂಡನೊಂದಿಗೆ ಬೇರೆ ಮನೆಯನ್ನು ಮಾಡುವುದು,  ಪರೋಪಕಾರಿಯೂ ಆಗಿದ್ದರಿಂದ ಪಕ್ಕದ ಮನೆಯ ಹುಡುಗನೊಬ್ಬ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಾಗ ನೀರಿಗೆ ಧುಮುಕಿ ಆತನನ್ನು ಕಾಪಾಡುವುದು, ಪ್ರವಾಹ ಬಂದ ವೇಳೆ ಈಕೆಯ ಮನೆಯ ಒಂದು ಗೋಡೆಯು ಕೊಚ್ಚಿ ಹೋದಾಗ ಪಕ್ಕದ ಮೆನಯವನು ತಾನೇ ಗೋಡೆ ಕಟ್ಟಿಸಿಕೊಡುತ್ತೇನೆ ಎನ್ನುವುದು.... ಯಾರೂ ಯಾರ ಋಣದಲ್ಲಿ ಬೀಳಬಾರದು’ ಎಂದು ಆಕೆ ಹೇಳುತ್ತಾಳೆ.

ಹೀಗೆ ಇಲ್ಲಿನ ಎಲ್ಲಾ ಕಥೆಗಳು ನಮ್ಮ ಸುತ್ತಮುತ್ತಲೇ ನಡೆಯುವಂತಹ ವಿಷಯಗಳನ್ನು ಆಧರಿಸಿದವಾಗಿವೆ. ಕಥೆಯನ್ನು ಲೇಖಕರು ನಿರೂಪಿಸಿದ ರೀತಿ ಮನಸೆಳೆಯುತ್ತದೆ. ಸುಲಭ, ಸರಳ ಭಾಷೆಯಲ್ಲಿ ನಮ್ಮನ್ನು ಆಕರ್ಷಿಸುತ್ತವೆ.

-ದತ್ತಾತ್ರೇಯ ಹೆಗಡೆ. ಶಿವಮೊಗ್ಗ

೧೮. ೯. ೨೦೨೬ 

...........................


Comments

Popular posts from this blog