ಅಮೆರಿಕದ ವಿವಿಧತೆ, ವಿಶಿಷ್ಟತೆ ತೋರಿಸುವ
‘ಕುತೂಹಲದ ಕಣ್ಣಲ್ಲಿ ಅಮೇರಿಕಾ’
ಜಗತ್ತನ್ನು ಸುತ್ತಬೇಕು ಎನ್ನುವ ಹಂಬಲ ಬಹಳ ಜನರಲ್ಲಿ ಇರುತ್ತದೆ. ಆದರೆ ಅಂತಹ ಅವಕಾಶ ಎಲ್ಲರಿಗೂ ಸಿಗಲಾರದು. ಹೀಗೆ ಸುತ್ತಿದವರು ಅದರ ಅನುಭವವನ್ನು ಹಂಚಿಕೊಳ್ಳುತ್ತಿರಬೇಕು. ಇದರಿಂದ ವಿದೇಶಯಾನ ಸಾಧ್ಯವಾಗದಿದ್ದವರೂ ಸಹ ಅಲ್ಲಿನ ವಿವಿಧತೆ, ವಿಶಿಷ್ಟತೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
‘ಕುತೂಹಲದ ಕಣ್ಣಲ್ಲಿ ಅಮೇರಿಕಾ’ ಪ್ರಸ್ತುತ ಕೃತಿಯನ್ನು ಉಡುಪಿಯ ಮೋಹನ್‌ದಾಸ್ ಕಿಣಿ ಬರೆದಿದ್ದಾರೆ. ತಮ್ಮ ಅಮೇರಿಕಾ ಮತ್ತು ಕೆನಡಾ ಪ್ರವಾಸದ ಹಿನ್ನೆಲೆಯಲ್ಲಿ ರಚಿತವಾದ ಈ ಕೃತಿಯಲ್ಲಿ ಅವರು ಅಮೆರಿಕದಲ್ಲಿ ತಾವು ವರ್ಷಗಳ ಕಾಲ ಇದ್ದು ಕಂಡುಂಡ, ಅನುಭವಿಸಿದ ಎಲ್ಲಾ ವಿಷಯಗಳನ್ನು ದಾಖಲಿಸಿದ್ದಾರೆ. ಇದು ನಾವು ಸ್ವತಃ ಆ ದೇಶವನ್ನು ನೋಡಿಬಂದ ಅನುಭವವನ್ನು ಕಟ್ಟಿಕೊಡುತ್ತದೆ. ಅಲ್ಲಿನ ನೀತಿ- ನಿಯಮ, ಉದ್ಯೋಗ ಪದ್ದತಿ, ಸಾರಿಗೆ ವ್ಯವಸ್ಥೆ, ಡ್ರೈವಿಂಗ್ ಕಲಿಕೆ, ವಾಸದ ನಿಯಮ... ಹೀಗೆ ಹತ್ತಾರು ವಿಷಯಗಳು ಈ ಕೃತಿಯ ಜೀವಾಳವಾಗಿವೆ. ಆದ್ದರಿಂದ ಈ ಪುಸ್ತಕ ಎಲ್ಲರಿಗೂ ಇಷ್ಟವಾಗುವಂತದ್ದು.
ವಿದೇಶಕ್ಕೆ ಹೋಗಬೇಕು ಎಂದು ಯೋಚಿಸುವುದರಿಂದ ಹಿಡಿದು ಪಾಸ್‌ಪೋರ್ಟ್ ಮಾಡಿಸುವುದು, ವೀಸಾ ಲಭ್ಯತೆ, ವಿಮಾನ ಪ್ರಯಾಣಕ್ಕೆ ಸಿದ್ಧತೆ, ವಿಮಾನಯಾನ, ವಿಮಾನ ಏರುವ ಮುನ್ನ ನಡೆಯುವ ತಪಾಸಣೆಗಳು, ಅಲ್ಲಿಗೆ ಹೋಗಿ ಇಳಿದ ಮೇಲಿನ ಪ್ರಕ್ರಿಯೆಗಳು, ಇಲ್ಲಿಂದ ಹೋಗಿ ಅಲ್ಲಿ ಬದುಕುವುದು, ಅಲ್ಲಿ ನಮಗೆ ಆಶ್ರಯ ವಹಿಸುವವರಿಗೆ ಸಮಸ್ಯೆ ಆಗದಂತೆ ಬದುಕುವುದು... ಹೀಗೆ ಪ್ರತಿಯೊಂದು ಇದರಲ್ಲಿದೆ. ವಿದೇಶಕ್ಕೆ ಹೊಸದಾಗಿ ಹೋಗುವವರಿಗೆ ಇದೊಂದು ಮಾರ್ಗದರ್ಶಕ ಆಗಬಲದು. ಇಲ್ಲೇ ಕುಳಿತು ಓದುವವರಿಗೆ ಅಂಗೈಯಲ್ಲಿಯೇ ಇಡೀ ಪ್ರವಾಸ ದರ್ಶನವನ್ನು ಮಾಡಿಸಬಲ್ಲದು.
ಆದರೆ ಈ ಕೃತಿಯ ವೈಶಿಷ್ಟ್ಯವಿರುವುದು ಲೇಖಕರು ಓರ್ವ ಪ್ರವಾಸಿಗನಾಗಿ ಪ್ರವಾಸಿ ತಾಣಗಳ ವಿವರಣೆಗಿಂತಲೂ ಬೇರೆ ಬೇರೆ ಆಯಾಮಗಳಲ್ಲಿ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ಒಟ್ಟು ೨೮ ಕಿರುಬರಹಗಳಿವೆ.
ಅಮೆರಿಕಕ್ಕೆ ಪಾಸ್ಪೋರ್ಟ್ ಮತ್ತು ವೀಸಾ ಅವಶ್ಯಕತೆ, ಅದನ್ನು ಪಡೆಯಲು ಬೇಕಾಗುವ ದಾಖಲೆಗಳು, ಪಡೆಯುವ ವಿಧಾನ, ದೇಶದಿಂದ ದೇಶಕ್ಕೆ ವಿಭಿನ್ನವಾಗಿರುವುದು, ಅಮೆರಿಕದಲ್ಲಿ ಅವುಗಳ ಶುಲ್ಕಗಳು, ಬೇರೆ ಬೇರೆ ಉದ್ದೇಶಕ್ಕೆ ಹೋಗುವವರಿಗೆ ಬೇರೆ ಬೇರೆ ವೀಸಾಗಳಿರುವುದು, ಪ್ರಯಾಣದ ವೇಳೆ ಬೇಕು ಬೇಡಗಳನ್ನು ನೋಡಿಕೊಳ್ಳುವುದು, ಅಮೆರಿಕದಲ್ಲಿ ಸ್ವಂತ ಮನೆ ಅಥವಾ ಬಾಡಿಗೆ ಮನೆ ಮಾಡುವ ವಿಧಾನ, ಸಿಗುವ ಸೌಲಭ್ಯಗಳು, ವಿದೇಶಿ ಉದ್ಯೋಗದ ಆಕರ್ಷಣೆಯ ಸುಖ, ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾರೆ. ಅಮೆರಿಕ ಜೀವನಾರಂಭವನ್ನು ಸಂತೋಷಕರವಾಗಿಯೇ ಮಾಡುತ್ತದೆ. ಕ್ರಮೇಣ ಮಸುಕಾಗುವುದು, ವೃತ್ತಿ ಪರವಾಗಿ ಮತ್ತು ಭೌತಿಕವಾಗಿ ಯಶಸ್ವಿ ವ್ಯಕ್ತಿಯನ್ನಾಗಿ ಮಾಡಿದರೂ ಖಾಸಗಿ ಜೀವನವನ್ನು ಮಸುಕಾಗಿರಿಸುತ್ತದೆ. ಕೊನೆಗೆ ‘ಅಲ್ಲಿರಲಾರೆ, ವಾಪಸ್ಸು ಬರಲಾರೆ’ ಎಂಬ ತ್ರಿಶಂಕು ಸ್ಥಿತಿ ಸೃಷ್ಟಿಯಾಗುತ್ತದೆ ಎನ್ನುತ್ತಾರೆ.
ಅಮೆರಿಕದ ಉದ್ಯೋಗದ ಹಿಂದಿರುವ ಕಷ್ಟ -ಸುಖಗಳನ್ನು ವಿವರಿಸುತ್ತಾ, ಕೆಲಸ ಸಿಕ್ಕ ನಂತರ ಆರಂಭದಲ್ಲಿ ವಾಸ್ತವ್ಯ ವ್ಯವಸ್ಥೆ ಕಷ್ಟವಾಗುತ್ತದೆ. ಹತ್ತಿರದಲ್ಲಿ ವಾಸದ ಮನೆ ಹುಡುಕಬೇಕಾಗುತ್ತದೆ. ಜೊತೆಗೆ ಅಲ್ಲಿಯೇ ಎಲ್ಲವನ್ನೂ ಖರೀದಿಸಬೇಕಾಗುತ್ತದೆ. ಕೆಲಸಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಸಾರಿಗೆ ವ್ಯವಸ್ಥೆ ನೋಡಿಕೊಳ್ಳಬೇಕಾಗುತ್ತದೆ. ಪ್ರತಿಭೆ ಮತ್ತು ಪರಿಶ್ರಮದಲ್ಲಿ ಕೆಲಸ ಮಾಡುವವರಿಗೆ ಕೆಲಸ ಮಾಡುವುದು ಸುಲಭs. ೧೨ರಿಂದ ೧೮ ಗಂಟೆಯಷ್ಟು ಕೆಲಸ ಮಾಡಿದರೂ ವೇತನ ಕೊಡುವುದು ಕೇವಲ ೮ ಗಂಟೆಗೆ ಮಾತ್ರ. ಸ್ವದೇಶದ ಸಂಸ್ಥೆಯಿಂದ ನಿಯೋಜನೆ ಮೇರೆಗೆ ಅಮೆರಿಕಕ್ಕೆ ಹೋದರಲ್ಲಿ ಕೆಲವರು ಸ್ವಲ್ಪ ಕಾಲ ಕೆಲಸ ಮಾಡಿ ನಂತರ ರಾಜೀನಾಮೆ ನೀಡಿ ಅಮೆರಿಕ ಮೂಲದ ಸಂಸ್ಥೆಗೆ ಸೇರಿಕೊಳ್ಳುವುದು ಹೆಚ್ಚುತ್ತಿದೆ. ವ್ಯವಹಾರದಲ್ಲಿ ಹಿಂಜರಿತ ಉಂಟಾದರೆ ಕಂಪನಿಗಳು ಅವರನ್ನು ಕೆಲಸದಿಂದ ಕಿತ್ತು ಹಾಕುತ್ತವೆ.
ಸಂಚಾರ ಸಮಸ್ಯೆ ಅಲ್ಲಿ ಹೆಚ್ಚು. ಸಾರ್ವಜನಿಕ ಸಂಚಾರ ವ್ಯವಸ್ಥೆ ಇಲ್ಲದಿರುವುದರಿಂದ ಸ್ವಂತ ಅಥವಾ ಬಾಡಿಗೆ ಕಾರಿನಲ್ಲಿ ಪ್ರಯಾಣಿಸಬೇಕಾಗುತ್ತದೆ. ಅಲ್ಲಿನ ದೈನಂದಿನ ಬದುಕು ಸಲೀಸಾಗಿಲ್ಲ. ಜನಾಂಗೀಯ ದ್ವೇಷ, ಕಠಿಣ ಕಾನೂನುಗಳಿಂದಾಗಿ ಒಂದಲ್ಲ ಒಂದು ಅಸ್ಥಿರತೆ ಕಾಡುತ್ತಲೇ ಇರುತ್ತದೆ. ವಿದೇಶಿ ಉದ್ಯೋಗ ವೆಂದರೆ ಹೂವಿನ ಹಾಸಿಗೆಯಲ್ಲ, ಈಸಬೇಕು, ಇದ್ದು ಜಯಿಸಬೇಕು ಎಂದು ಲೇಖಕರು ಬರೆಯುತ್ತಾರೆ.
ಅಮೆರಿಕದ ರಾಜ್ಯಗಳಲ್ಲಿ ಯಾವ ದೇಶದವರು ಹೆಚ್ಚಿರುತ್ತಾರೋ ಆ ದೇಶದ ಮಾಲ್‌ಗಳು ಅಲ್ಲಿ ಹೆಚ್ಚಿರುತ್ತವೆ. ನಮ್ಮೆದುರೇ ಹೊಟೆಲ್‌ನವರು ತಿಂಡಿ ತಯಾರಿಸಿ ಕೊಡುತ್ತಾರೆ. ನಮ್ಮ ಆದಾಯದ ಶೇಕಡ ೩೦ರಷ್ಟು ಅಮೆರಿಕದಲ್ಲಿ ತೆರಿಗೆಯಾಗಿ ಕಟ್ಟಬೇಕು. ೬೫ಕ್ಕಿಂತ ಕಡಿಮೆ ವಯಸ್ಸಿನವರು ಕಡ್ಡಾಯವಾಗಿ ವೈಯಕ್ತಿಕ ವೈದ್ಯಕೀಯ ವಿಮೆಯನ್ನು ಮಾಡಿಸಬೇಕಾಗುತ್ತದೆ. ೬೫ರ ನಂತರzವರ ಆರೋಗ್ಯದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ.
ಅಲ್ಲಿನ ಕೃಷಿ ಯಾಂತ್ರಿಕೃತವಾದುದು. ವಿದೇಶಿ ಕಾರ್ಮಿಕರನ್ನು ಇದಕ್ಕೆ ಕರೆಯಿಸಿಕೊಳ್ಳುತ್ತಾರೆ. ಒಂದು ಮರವನ್ನು ಕತ್ತರಿಸಬೇಕಾದರೆ ಇನ್ನೊಂದು ಗಿಡ ನೆಡುವುದು ಅಲ್ಲಿ ಕಡ್ಡಾಯ. ಕಾಮಗಾರಿ ವೇಳೆ ಮರ ಅಡ್ಡ ಬರುವುದಾದರೆ ಅದನ್ನು ಸ್ಥಳಾಂತರಿಸುತ್ತಾರೆ. ಇಲ್ಲವಾದರೆ ಲೋಹದ ಬೇಲಿ ಹಾಕಿ ರಕ್ಷಿಸುತ್ತಾರೆ. ಅಮೆರಿಕದಲ್ಲ್ಲೂ ಬಡತನವಿದೆ. ಆದರೆ ಮಾಧ್ಯಮಗಳು ಅಲ್ಲಿನ ಹುಳುಕನ್ನು ಎತ್ತಿತೋರಿಸದೆ ವೈಭವೀಕರಿಸುವುದರಲ್ಲೇ ತಲ್ಲೀನವಾಗಿವೆ. ವಸತಿಹೀನರೂ ಇದ್ದಾರೆ. ಬಿಕ್ಷುಕರಿದ್ದಾರೆ. ಅವರನ್ನು ನಿರ್ವಸಿತರೆಂದು ಹೇಳಿ ಸರಕಾರ ವಸತಿ, ಆಹಾರ ಕೊಡುತ್ತದೆ. ಆದರೂ ಸಿಗ್ನಲ್ ಬಳಿ ಫಲಕ ಹಿಡಿದು ಕೂಡ್ರುತ್ತಾರೆ.
ಅಮೆರಿಕದಲ್ಲಿ ಮನೆಗಳೆಲ್ಲ ಮರದಿಂದ ನಿರ್ಮಾಣವಾಗುತ್ತವೆ. ಅಡಿಪಾಯ ಮಾತ್ರ ಕಾಂಕ್ರೀಟ್‌ನದು. ವಸತಿ ಸಂಕೀರ್ಣಗಳೂ ಸಹ ಮರದಿಂದಲೇ ತಯಾರಾಗುತ್ತವೆ ಎಂಬ ಚಿತ್ರಣ ಕೊಟ್ಟಿದ್ದಾರೆ.
ಅಲ್ಲಿನ ಚುನಾವಣೆ ವ್ಯವಸ್ಥೆ ಬಗ್ಗೆ ವಿವರಿಸುವ ಲೇಖಕರು, ವಿದ್ಯಾವಂತರ ದೇಶವಾದರೂ ಶೇ. ೧೦೦ರಷ್ಟು ಮತದಾನವಾಗುವುದಿಲ್ಲ. ಅತಿ ಹೆಚ್ಚು ಮತ ಪಡೆದವರು ಆಯ್ಕೆಯಾಗುವ ಪದ್ದತಿ ಇದೆ. ಮರು ಎಣಿಕೆ ಮಾಡುವುದಾದರೆ ಠೇವಣಿಯನ್ನು ಸಂಬಂಧಿತ ಅಭ್ಯರ್ಥಿ ಇಡಬೇಕು. ಪ್ರಚಾರದ ವೇಳೆ ವೈಯಕ್ತಿಕ ಟೀಕೆ ಮಾಡುವಂತಿಲ್ಲ. ಆಡಳಿತದ ಬಗ್ಗೆ ಟೀಕಿಸಬಹುದು, ತಮ್ಮ ಮುಂದಿನ ಯೋಜನೆ, ಕಾರ್ಯವನ್ನು ವಿವರಿಸಬಹುದು ಎನ್ನುವುದನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಸ್ಯಾನ್‌ಫ್ರಾನ್ಸಿಸ್ಕೊ ಅಮೆರಿಕದ ಮಾಹಿತಿ ತಂತ್ರಜ್ಞಾನದ ತವರೂರು. ಫೇಸ್ ಬುಕ್, ಗೂಗಲ್, ಆಪಲ್‌ನ ಕೇಂದ್ರ ಕಚೇರಿ ಅಲ್ಲಿದೆ. ಇಡೀ ದಿನದ ಟಿಕೆಟ್ ಪಡೆದು ಬಿಗ್ ಬಸ್ ಮೂಲಕ ನಗರವನ್ನು ಸುತ್ತಾಡಬಹುದು. ಇಲ್ಲಿ ಪ್ರೇಕ್ಷಣೀಯ ಸ್ಥಳಗಳು, ಅವುಗಳ ಇತಿಹಾಸ, ವಿವರವನ್ನು ಸವಿವರವಾಗಿ ಈ ಲೇಖನದಲ್ಲಿ ಕಟ್ಟಿಕೊಟ್ಟಿದ್ದಾರೆ. ಕೃತಿ ಓದುವಾಗ ನಮಗೂ ನೋಡಬೇಕೆನ್ನುವ ರೀತಿಯಲ್ಲಿ ಅವುಗಳ ಸೌಂದರ್ಯವನ್ನು ತೋರಿಸಿದ್ದಾರೆ. ಅದೇ ರೀತಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿದ ಚಿಕಾಗೋ ನಗರದ ಬಗ್ಗೆಯೂ ಇದರಲ್ಲಿ ಬರೆಹವಿದೆ.
ಹೀಗೆ ಇಲ್ಲಿನ ಹತ್ತ್ತಾರು ರಮಣಿಯ, ಆಕರ್ಷಣೀಯ, ಜಾಗತಿಕ ಪ್ರಸಿದ್ಧ ಪ್ರವಾಸಿ ತಾಣಗಳನ್ನು, ಅಮೆರಿಕದ ವಿವಿಧ ಕಾನೂನು, ಪ್ರವಾಸಿಗರು ಅನುಸರಿಸಬೇಕಾದ ನೀತಿ-ನಿಯಮವನ್ನು ಕೃತಿಯಲ್ಲಿ ಲೇಖಕರು ಚಿತ್ರಿಸಿದ್ದಾರೆ. ಎಲ್ಲರಿಗೂ ಅಮೆರಿಕ ಪ್ರವಾಸ ಸಾಧ್ಯವಾಗದ ಕಾರಣ ಇದನ್ನು ಓದಿದಾಗ ಪ್ರವಾಸ ಮಾಡಿದಷ್ಟೇ ಅನುಭವಕೊಡುವ, ಆಪ್ತವಾಗುವ ಕೃತಿ ಇದು.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೨೩.೯.೨೬


Comments
Post a Comment