ಲೋಕ ಸಂಕಟಗಳ ಅನಾವರಣದ

‘ಅಗ್ನಿ ರೆಕ್ಕೆಗಳನ್ನು ಧರಿಸಿ’


 

‘ಅಗ್ನಿ ರೆಕ್ಕೆಗಳನ್ನು ಧರಿಸಿ’ ಈ ಕವನ ಸಂಕಲನದಲ್ಲಿ ೧೦೫ ಕವನಗಳಿದ್ದು, ಕವಯತ್ರಿ ತೀರ್ಥಹಳ್ಳಿಯ ಪದ್ಮಜಾ ಜೋಯಿಸ್, ಸಮಾಜವನ್ನು ನೋಡುವ, ಬದುಕನ್ನು ಗಮನಿಸುವ, ಭಾವನೆಗಳಿಗೆ ಸ್ಪಂದಿಸುವ, ವಿಚಾರ ಲಹರಿಗಳಿಂದ ಸಮಾಜದಲ್ಲಿ ಸ್ತ್ರೀ ಒಬ್ಬಳು ಎದುರಿಸುವ ಹತ್ತಾರು ಸಮಸ್ಯೆಗಳ ವಿವಿಧ ಮುಖಗಳನ್ನು  ಸರಳ, ಭಾಷೆ, ದೃಢ ವಾಸ್ತವದೊಂದಿಗೆ ಬಿಂಬಿಸಿದ್ದಾರೆ. ಹೆಣ್ಣಿನ ಅಂತರಂಗ -ಬಹಿರಂಗಗಳ ಸವಾಲು, ಉತ್ತರವಿಲ್ಲದ ಪ್ರಶ್ನೆಗಳು, ಗಟ್ಟಿಯಾಗಿ ಬೇರೂರಬೇಕೆಂಬ ಆತ್ಮವಿಶ್ವಾಸದ ಆಶಾವಾದವನ್ನು ಕಳೆದುಕೊಳ್ಳದೆ ವಾಸ್ತವವಾದಿಯಾಗಿ ಬದುಕಬೇಕೆಂಬ ಹಂಬಲ, ಅಸಹಾಯಕತೆ ಮೊದಲಾದವನ್ನು ಇಲ್ಲಿ ತೆರೆದಿಟ್ಟಿದ್ದಾರೆ.

ಭಾವಗೀತೆಯ ಶೈಲಿ, ವ್ಯಂಗ್ಯ ವಿಡಂಬನೆ, ಲಹರಿ ಇವುಗಳೊಂದಿಗೆ ಸ್ಪಂದಿಸುತ್ತಲೇ ವೈಯಕ್ತಿಕ ಬದುಕಿನಿಂದ ಸಾಮಾಜಿಕ ಬದುಕಿನೆಡೆಗೆ ಈ ಕವನ ಸಂಕಲನ ತಲೆ ಎತ್ತುತ್ತದೆ. ಮಲೆನಾಡ ಕನ್ನಡ, ಅತ್ಯುತ್ತಮ ಸನ್ನಿವೇಶಗಳು, ಭಾವನೆಗಳ ಚಿತ್ರಿತ ಶಕ್ತಿ, ವಾಸ್ತವದ ಭಯಾನಕತೆ, ಭವಿಷ್ಯದ ಆಶಾದೀಪ, ಸರಳ ಪ್ರತಿಮೆಗಳೊಂದಿಗೆ ಎಲ್ಲಾ ಕವನಗಳು ಇಲ್ಲಿ ಬೆಳೆದಿವೆ. ಜೊತೆಗೆ ಇಲ್ಲಿ ಕವಿತೆಗಳು ಒಂದು ಸಂದರ್ಭದ ಚಿತ್ರವನ್ನು ಕಟ್ಟಿಕೊಡುವುದಲ್ಲದೆ ಆ ಸಂದರ್ಭವೂ ನಮ್ಮ ಬದುಕಿನ ಒಂದು ಘಟ್ಟವನ್ನು ಬಿಚ್ಚಿಡುವ ಪ್ರಯತ್ನ ಮಾಡುತ್ತಾ, ಅನುಭವವಾಗಿ ಬಿಡುತ್ತವೆ. ಜೀವಂತ ಭಾಷೆಯಲ್ಲಿ ಸ್ಪಷ್ಟ ಚಿತ್ರಗಳಿಂದ ಅನುಭವಕ್ಕೆ ಅಭಿವ್ಯಕ್ತಿ ನೀಡುವ ಸಾಮರ್ಥ್ಯ ಇಲ್ಲಿನ ಕವನಗಳಿಗೆ ಇದೆ. ಲೇಖಕಿ ನಂಬಿಕೆಯ ಚಿತ್ರಗಳನ್ನು ತಮ್ಮ ಪದ್ಯಗಳ ದ್ರವ್ಯವಾಗಿಸಿಕೊಂಡಿದ್ದಾರೆ. ಪದ್ಯ ರಚನೆಯ ಪಾರಮಾರ್ಥಿಕ ಸಾಧ್ಯತೆಗಿಂತ ಭಿನ್ನವಾದ ಲೋಕ ಸಂಕಟಗಳ ಅನಾವರಣ ಇಲ್ಲಿ ಕಂಡುಬರುತ್ತದೆ.

  ಮೊದಲನೇ ಕವನ ‘ಮರಳಿಬಾರದು ಮತ್ತೆ’. ಇದರಲ್ಲಿ ಜೀವನ ಮತ್ತು ಜೀವನ ಪ್ರೀತಿ ಒಮ್ಮೆ ಮುಗಿಯಿತೆಂದರೆ ಅದು ಮತ್ತೆ ಬರುವುದಿಲ್ಲ.

 ಜಾರಿ ಹೋದ ಕ್ಷಣ

 ಹಾರಿ ಹೋಗುವ ಭಾವ

ಮರಳಿಬಾರದು

 ಎಂದು ಹೇಳುವ ಕವಯಿತ್ರಿ, ಮನಸ್ಸನ್ನು ಕಟ್ಟುಪಾಡಿಗೆ ಒಳಪಡಿಸದೆ, ಭಾವನೆಗಳನ್ನು ತೆರೆದಿಟ್ಟು ಜೀವನದಲ್ಲಿ ಮುಕ್ತವಾಗಿ ಪ್ರೀತಿಸುವುದನ್ನು ಕಲಿಯಬೇಕು. ಎಲ್ಲ ಬಂಧಗಳನ್ನು ಮೀರಿ ಮನಸ್ಸನ್ನು ಬಾನಾಡಿಯಂತೆ ಹಾರಿ ಬಿಡಬೇಕು. ಮುಕ್ತವಾಗಿ ಜನರನ್ನು ಪ್ರೀತಿಸಬೇಕು. ಧುಮ್ಮಿಕ್ಕಿ ಹರಿಯುವ ಪ್ರವಾಹವಾಗಿ ಅಥವಾ ಬಿರುಗಾಳಿ ಚಂಡಮಾರುತವಾಗಿ, ಮಿಂಚು ಗುಡುಗಾಗಿ ಮುಕ್ತವಾಗಿ ಪ್ರೀತಿಸಬೇಕು ಎಂದು ಹೇಳುತ್ತಾರೆ. ಸಂಪ್ರದಾಯಬದ್ಧ ವ್ಯವಸ್ಥೆಯನ್ನು ಮೀರಿ ನಿಲ್ಲುವ ಕವನ ಇದಾಗಿದೆ.

 ಇನ್ನೊಂದು ಕವನ ‘ಹೇಗೆ ಹೇಗೆ’.

 ಇತಿಮಿತಿಗಳ ಗಡಿ ದಾಟಿ,

 ನೈತಿಕತೆಯ ಎಲ್ಲೆಮೀರಿ,

ಕಟ್ಟುಪಾಡುಗಳ ಕಿತ್ತೆಸೆದು,

ಗೊಡ್ಡು ಸಂಕೋಲೆಗಳ ಬೀಗ ಮುರಿದು,

 ಮನದ ಕೋಟೆಗೆ ಲಗ್ಗೆ ಇಟ್ಟು

 ತಿರುಗಿ ನೀ ತಳವೂರಿದ್ದಾದರೂ ಹೇಗೇ?

  ಎಂದು ಚಿತ್ರಣ ನೀಡುವ ಲೇಖಕಿ, ಪ್ರೇಮ ಕಾಮನೆಗಳ ಮಹಾಪೂರವನ್ನು ಇದರಲ್ಲಿ ತುಂಬಿಟ್ಟಿದ್ದಾರೆ.

 ‘ಇವಳು ಮರಳುವುದಿಲ್ಲ’ ಎನ್ನುವ ಕವನದಲ್ಲಿ ಬದುಕಿನ ಆಸೆ, ಅಸಹಾಯಕತೆಗಳನ್ನು ನಾವು ಕಾಣಬಹುದು. ಆಸೆಗಳು ಮರುಳುವುದಿಲ್ಲ. ಕನಸು ನನಸಾಗುವುದಿಲ್ಲ. ಹೆಜ್ಜೆಗಳು ಹೊರಡುವುದಿಲ್ಲ. ಅವಕಾಶವನ್ನು ಬಿಡದೆ ಕಣ್ತುಂಬಿಕೊಳ್ಳಬೇಕು. ಏಕೆಂದರೆ ಇರುಳು ಮತ್ತೆ ಮರಳುವುದೇ ಇಲ್ಲ ಎಂದು ಹೇಳುತ್ತಾರೆ. ಹಲವು ಕವನಗಳಲ್ಲಿ ಆಧುನಿಕ ಮಹಿಳೆ ಎದುರಿಸುವ ವಿಚಾರ ವಿಮರ್ಶೆ ಇಲ್ಲಿದೆ.

 ‘ರೆಕ್ಕೆ ಮುರಿದ ಹಕ್ಕಿ’ ಎಂಬ ಕವನದಲ್ಲಿ ಹೃದಯದಲ್ಲಿ ಒಸರಿದ ಒಲವಿನ ಒರತೆ, ಕೊನರಿ ಚಿಗುರಿ, ಅಂತರಾಳದಲ್ಲಿ ಹಬ್ಬಿ, ಮೈಮನವನ್ನು ಆವರಿಸಿಕೊಳ್ಳುತ್ತದೆ. ಆದರೆ ಆ ಬಳ್ಳಿ ಗೆಲುವಿನ ನಗು ಬೀರುವಾಗಲೇ ಕಾರ್ಮೋಡ ಕವಿದು, ಬಿರುಗಾಳಿ ಬೀಸಿ, ಪಲ್ಲವಿಸಲಿದ್ದ ಪ್ರೀತಿಯನ್ನು ಅದು ಚಿಗುರುವ ಹಂತದಲ್ಲಿ ಕಮರಿ ಹೋಗುವ ಸಂದರ್ಭವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ‘ಕ್ರೌರ್ಯ’ ಕವನದಲ್ಲಿ ಬದುಕಿನ ಹಂಬಲದ ಹುಟ್ಟಡಗಿಸುವ ಕ್ರೌರ್ಯವನ್ನು ಮೀರಿ ನಿಂತು ನಮ್ಮ ಕರ್ತವ್ಯಗಳನ್ನು ಈಡೇರಿಸಬೇಕು. ಬಾಳ ಸಂಕಷ್ಟದ ಗಳಿಗೆಯನ್ನು ಗೆಲ್ಲಬೇಕು. ಭವ ಬಂಧನಗಳ ಆಷಾಢಭೂತಿತ್ವವನ್ನು ತುಳಿದು ನೈಜತೆ ಅರಿವನ್ನು ಮೂಡಿಸಿಕೊಂಡು ಅಗತ್ಯ ಅನಿವಾರ್ಯತೆಗಳ ಅರಿತು ಬದುಕಬೇಕು. ಬಾಂಧವ್ಯ ಮಮಕಾರಗಳನ್ನು ಸರಿಸಿ ವಾಸ್ತವಗಳ ಅರಿವು ಮೂಡಿಸಿ ಸಾಗಿಸಬೇಕು ಎಂದು ಹೇಳುತ್ತಾರೆ.

‘ಕನವರಿಕೆ ನನಗೆ’ ಕವನದಲ್ಲಿ ಆಸೆಗಳು ಈಡೇರದೆ ಕೇವಲ ಭ್ರಮೆಯಲ್ಲಿ ಬದುಕುವ ಆತಂಕಕ್ಕೆ ಉತ್ತರವೇ ಇಲ್ಲ ಎನ್ನುವುದನ್ನು ಸಾರುತ್ತಾರೆ. ‘ಅಲೆಮಾರಿ’ ಕವಿತೆಯಲ್ಲಿ ರಾಮ, ಕೃಷ, ಶಿವ, ಗೌತಮ, ರಾವಣ, ಇಂದ್ರ ಮುಂತಾದ ಪುರಾಣ ಪಾತ್ರಗಳನ್ನು ಆಧುನಿಕ ದೃಷ್ಟಿಯಿಂದ ನೋಡುತ್ತಾರೆ. ಇಲ್ಲಿ ಸತ್ಯದ ನಿರಂತರ ಹುಡುಕಾಟದ ಮನೋಧರ್ಮವನ್ನು ಕಾಣಬಹುದು. ‘ಅಲೆಮಾರಿ’ ಕವಿತೆಯಲ್ಲಿ

ಅಲ್ಲ-ಇಲ್ಲಗಳ ನಡುವಿನ ಗೊಂದಲ

 ಅಶೋಕ ವನದ ಸೀತೆಯಾದೆ

ಗೌತಮರ ಅಹಲ್ಯೆಯಾದೆ 

ಶರಣರ ಅಕ್ಕಳಾದೆ

ಚರಿತ್ರೆಯ ಮೀರಳಾದೆ 

ಅಗ್ನಿಸಾಕ್ಷಿಯಾಗಿ ಕಟ್ಟಿಕೊಂಡವ 

 ಬಾಳಿಸದೆ ಹೋದ.

ಕೃಷ್ಣನೂ ಇಲ್ಲದೆ ಇಲ್ಲದೆ ಮುಕ್ತಿಯೂ ಇಲ್ಲದೆ

ನಿರಂತರ ಹುಡುಕಾಟದಲ್ಲಿ

ಅಲೆಮಾರಿಯಾದೆ

ಎಂದು ಸುಂದರವಾಗಿ ವಿವರಿಸುತ್ತಾರೆ.

 ಎನ್ನೆದೆಯ ಚಿಪ್ಪಿನೊಳಗೆ, ನೆನಪಾಗದ ಜಾಗ,  ಬಂಧಿಸದಿರು ಎನ್ನ, ಯಾರೇ ಗೆಳತಿ, ಭಾವ ಸಂಚಲನಗಳು, ನೀನಿಲ್ಲದೆ, ಆಲೋಚನೆಗಳ ಪ್ರವಾಹ, ಉಳಿದ ನಿಮಿಷಗಳಲಿ, ಖಾಲಿ ಜೋಳಿಗೆ, ಅಪರೂಪಕ್ಕೊಮ್ಮೆ, ಪ್ರೀತಿಯೇ, ಆರೋಪ ಮೊದಲಾದ ಕವನಗಳಲ್ಲಿ ಅವರ ಬದುಕಿನ ಹಂಬಲವನ್ನು ಕಾಣಬಹುದು. ‘ಅಸಹಾಯಕತೆ’ ಕವನದಲ್ಲಿ ನಾವು ಸ್ತ್ರೀಯರು ಸೃಷ್ಟಿಯ ಅದ್ಭುತ ಶಕ್ತಿ. ದಿವ್ಯ ಅನುಭವ ಪಡೆದವರು. ಇಂದು -ಮುಂದು ಅಬಲೆಯರಂತೆ ಶೋಷಿತರಾಗಿ ಸಾಗುತ್ತಿರುವುದು ಅಧೋಗತಿಗೊಂದು ಪ್ರತ್ಯಕ್ಷ ನಿದರ್ಶನವಲ್ಲವೇ ಎಂದು ಪ್ರಶ್ನಿಸುವ ಮೂಲಕ ಮಹಿಳೆಯ ಅಸಹಾಯಕತೆಯನ್ನು ಬಿಚ್ಚಿಡುತ್ತಾರೆ.

 ‘ಎದುರಾದ ಗಳಿಗೆ’ ಎಂಬ ಕವನದಲ್ಲಿ ಸ್ನೇಹಿತನ ನೆನಪನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಸ್ನೇಹಿತ ಎದುರಾದ ಗಳಿಗೆ ಚಂದದ ಕ್ಷಣವಾಗಿ ಕಾಣಿಸುತ್ತದೆ. ಏಕಾಂತದಲ್ಲಿ ಕಣ್ಣಿನಲ್ಲಿ ಎಲ್ಲವನ್ನೂ ಮಾತಾಡಬೇಕು ಎನಿಸುತ್ತದೆ. ಆದರೆ ಶಿಲೆಯಂತಾಗುತ್ತಾರೆ. ಅಂತರಂಗ ಆತನ ಮನದೊಂದಿಗೆ ಸಂಭಾಷಿಸುತ್ತದೆ. ಇಬ್ಬರೂ ಎಂದಿಗೂ ಬೇರೆ ಆಗಲಾರವು ಎಂದು ಮನ ಹೇಳುತ್ತದೆ. ಆದರೆ ದೂರಾಗುವ ನೋವಿನೊಂದಿಗೆ, ಮರೆಯಲಾರದ ನೆನಪುಗಳೊಂದಿಗೆ ಇಬ್ಬರೂ ಬೇರೆ ಬೇರೆ ಆಗಬೇಕಾಗುತ್ತದೆ. ಸ್ನೇಹದ ನೆನಪು ಸದಾ ಹೃದಯದ ಮಿಡಿತವಾಗಿದೆ ಎಂದು ಹೇಳುತ್ತಾರೆ. ಇದೇ ರೀತಿ ‘ಲೀನವಾಗುವಾಸೆ’ ಎಂಬ ಕವನದಲ್ಲೂ  ‘ಬಾಳಸಂಜೆಯಲ್ಲಾದರೂ ನಿನ್ನೊಂದಿಗೆ ಲೀನವಾಗುವಾಸೆ’ ಎಂದು ಪ್ರೇಮಿ ಹೇಳುವುದನ್ನು ಚೆಂದದಿಂದ ಚಿತ್ರಿಸಿದ್ದಾರೆ. 

ಹೀಗೆ ಇಡಿ ಕವನ ಸಂಕಲನವು ಜೀವಂತ ಭಾಷೆಯಲ್ಲಿ ಸ್ಪಷ್ಟ ಚಿತ್ರಗಳಿಂದ ಅನುಭವಕ್ಕೆ ಅಭಿವ್ಯಕ್ತಿ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎನ್ನುವುದರಲ್ಲಿ ಸಂಶಯವಿಲ್ಲ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೪ -೧೦-೨೦೧೬

....................


Comments

Popular posts from this blog