ಕೃತಿಯ ಹೆಸರು- ಮನೋವೈದ್ಯರ ಡೈರಿಯಿಂದ
ಲೇಖಕರು- ಡಾ|| ಕೆ ಎಸ್ ಶ್ರೀಧರ, ಶಿವಮೊಗ್ಗ
ಪುಟಗಳು- ೭೪
ಬೆಲೆ- ೬೦/-
ಕರ್ನಾಟಕದ ಪ್ರಖ್ಯಾತ ಮನೋವೈದ್ಯರಲ್ಲಿ ಒಬ್ಬರಾಗಿರುವ, ಶಿವಮೊಗ್ಗದಲ್ಲಿ ಸ್ವಂತ ಆಸ್ಪತ್ರೆ ಹೊಂದಿರುವ ಡಾ|| ಕೆ ಆರ್ ಶ್ರೀಧರ್ ಅವರು ‘ಮನೋವೈದ್ಯರ ಡೈರಿಯಿಂದ
-೨’ ಈ ಕೃತಿಯ ಮೂಲಕ ಮಾನಸಿಕ ಕಾಯಿಲೆ ಮತ್ತು ಮಾನಸಿಕ ವೈದ್ಯರ ಬಗ್ಗೆ ಇರುವ ವಿಪರೀತ ಅಜ್ಞಾನ ಮತ್ತು ತಪ್ಪು ಕಲ್ಪನೆಗಳನ್ನು, ಜೊತೆಗೆ ತಮ್ಮ ಅನುಭವದಲ್ಲಿ ವಿವಿಧ ಹಂತದ ಮಾನಸಿಕ ರೋಗಿಗಳನ್ನು ಕಂಡು, ಅವರೊಡನೆ ಮಾತನಾಡಿ, ಅವರ ಮಾನಸಿಕ ಸಮಸ್ಯೆಯನ್ನು ಪತ್ತೆ ಮಾಡಿ, ಚಿಕಿತ್ಸೆಯ ಮೂಲಕ ಗುಣಪಡಿಸಿದ ಅನುಭವಗಳನ್ನು ವಿವರಿಸಿದ್ದಾರೆ. ವೈದ್ಯ ಸಾಹಿತ್ಯಕ್ಕೆ ಸಂಬಂಧಿಸಿ ಸುಮಾರು ೧೯ಕ್ಕೂ ಹೆಚ್ಚು ಕೃತಿಗಳನ್ನು ಇವರು ರಚಿಸಿದ್ದಾರೆ.
ಮಾನಸಿಕ ಕಾಯಿಲೆಯನ್ನು ವಾಸಿ ಮಾಡಲು ಸಾಧ್ಯ ಎಂಬ ಅರಿವನ್ನು ಜನರಲ್ಲಿ ಮೂಡಿಸುವುದು ಅಗತ್ಯ. ಮಾನಸಿಕ ಅಸ್ವಸ್ಥನನ್ನು ಹುಚ್ಚ ಎಂದು ಕರೆಯಲಾಗುತ್ತದೆ. ಇದು ತಪ್ಪು. ಹುಚ್ಚುತನ ಬೇರೆ. ಜೊತೆಗೆ ಹುಚ್ಚಾಸ್ಪತ್ರೆ ಎಂಬ ಹೆಸರು ಈಗ ಇಲ್ಲ. ಬದಲಾಗಿ ಮಾನಸಿಕ ಆರೋಗ್ಯ ಕೇಂದ್ರ ಎಂದು ಇತ್ತೀಚೆಗೆ ನಾಮಫಲಕ ಹಾಕುತ್ತಿರುವುದನ್ನು ಅವರು ವಿವರಿಸಿದ್ದಾರೆ.
ಇನ್ನೊಂದೆಡೆ, ಈ ರೋಗದ ಬಗ್ಗೆ ಇರುವ ಮೂಢನಂಬಿಕೆ ಅಥವಾ ತಿಳಿವಳಿಕೆಯ ಕೊರತೆಯನ್ನೂ ವಿವರಿಸಿದ್ದಾರೆ. ಮಾಧ್ಯಮಗಳಲ್ಲಿ ವಿಶೇಷವಾಗಿ ಟಿವಿ ಚಾನೆಲ್‌ಗಳಲ್ಲಿ ಹೇಳುವ ಜ್ಯೋತಿಷ್ಯ, ಯೋಗ ಮತ್ತು ಕೌನ್ಸಿಲಿಂಗ್‌ನಿಂದ ಎಲ್ಲ ಮನೋರೋಗಗಳನ್ನು ವಾಸಿಮಾಡಬಹುದು ಎನ್ನುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ವ್ಯಾಪಾರೀಕರಣದ ದೃಷ್ಟಿಯಿಂದ ಇಂತಹ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ಸಾರ್ವಜನಿಕರು ವಿರೋಧಿಸಬೇಕು ಎಂದು ಅವರು ಸೂಚಿಸುತ್ತಾರೆ.
ಮನೋರೋಗದ ಬಗ್ಗೆ ತಪ್ಪು ಕಲ್ಪನೆ:
ಈ ಕೃತಿಯಲ್ಲಿ ಅವರು ತಮ್ಮ ಗ್ರಾಹಕರೊಂದಿಗೆ ಆದ ಅನುಭವವನ್ನು ಚಿತ್ರಿಸಿದ್ದಾರೆ. ಮನೋರೋಗದ ಬಗ್ಗೆ ಜನರಲ್ಲಿ ಅಪಾರವಾದ ತಪ್ಪು ಕಲ್ಪನೆ ಇದೆ. ಮಾನಸಿಕ ಒತ್ತಡಗಳಿಂದ ಮಾತ್ರ ಮನೋಕ್ಷೋಭೆ ಉಂಟಾಗುತ್ತದೆ. ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಹೀಗೆ ಬರುವ ಒತ್ತಡಗಳು ಹೆಚ್ಚಾದಾಗ ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಒಂದು ತಪ್ಪು ಕಲ್ಪನೆ ಎಂದರೆ, ಮನೋವೈದ್ಯರು ತಾವು ಕಂಡುಕೊಂಡಿದ್ದನ್ನು ಬೇರೆಯವರಿಗೆ ಹೇಳುತ್ತಾರೆ ಎನ್ನುವುದು. ಇದು ಜನರಿಗೆ ಗೊತ್ತಾಗಿ ಇತರರು ತನ್ನನ್ನು ಹೀಯಾಳಿಸಬಹುದು, ಅವಮಾನಿಸಬಹುದು ಎಂಬ ಭೀತಿಯನ್ನು ಸಾಮಾನ್ಯವಾಗಿ ರೋಗಿಗಳು ಅನುಭವಿಸುತ್ತಾರೆ. ಆದರೆ ವೈದ್ಯರು ಈ ರೀತಿ ಮಾಡುವುದಿಲ್ಲ ಇದೆಲ್ಲ ಸುಳ್ಳು ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾರೆ.
ಜನರಲ್ಲಿ ಇರುವ ಮೂಢನಂಬಿಕೆ ಬಗ್ಗೆ ವಿವರಿಸುವ ಡಾ|| ಶ್ರೀಧರ್, ಮಾನಸಿಕ ರೋಗಿಗಳಿಗೆ ವಿದ್ಯುತ್ ಕಂಪನ ಅಥವಾ ಶಾಕ್ ಟ್ರೀಟ್ಮೆಂಟ್‌ನ್ನು ಕೊಡುತ್ತಾರೆ ಎನ್ನುವುದು. ಇದು ತಪ್ಪು ಎಲ್ಲಾ ಮನೋರೋಗಿಗಳಿಗೂ ಇದನ್ನು ಕೊಡುವುದಿಲ್ಲ. ಇದು ಅಗತ್ಯವಾದಲ್ಲಿ ರೋಗಿಗೆ ಮತ್ತು ಆತನ ಕುಟುಂಬದವರಿಗೆ ಮಾಹಿತಿ ನೀಡಲಾಗುವುದು. ನಂತರ ಅವರಿಂದ ಲಿಖಿತ ಒಪ್ಪಿಗೆ ಪತ್ರ ಪಡೆಯಲಾಗುವುದು. ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿ ಈ ಚಿಕಿತ್ಸೆ ಕೊಡಲಾಗುತ್ತದೆ. ಹೀಗೆ ಕೊಡುವುದರಿಂದ ಮೆದುಳಿನಲ್ಲಿರುವ ನರರಸಧೂತಗಳ ವ್ಯತ್ಯಯವು ಸಮನಾಗಿ ರೋಗ ಗುಣಮುಖವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
ಮಾನಸಿಕ ಕಾಯಿಲೆಗಳು:
ವಿಶೇಷವಾಗಿ, ಮಾನಸಿಕ ಕಾಯಿಲೆಗಳಿಗೆ ಒಂದೇ ಅಂಶ ಯಾವತ್ತೂ ಕಾರಣವಲ್ಲ. ‘ಬಯೊಸೈಕೋಸೋಶಿಯಲ್ ಮಾದರಿ’ ಎಂದು ಇದನ್ನು ಕರೆಯುತ್ತಾರೆ. ಅಂದರೆ ಯಾವುದೇ ಕಾಯಿಲೆಗೆ ನಮ್ಮ ದೇಹದ ಅಂಗಾಂಗಗಳು, ಮನ:ಸ್ಥಿತಿ, ಜೀವನಶೈಲಿ, ಸಾಮಾಜಿಕ ಸ್ಥಿತಿ ಇವು ಪ್ರಮುಖ ಕಾರಣಗಳಾಗಿರುತ್ತವೆ. ಯೋಗ ಎಲ್ಲಾ ಮಾನವ ರೋಗಗಳಿಗೂ ಔಷಧ ಎನ್ನುವುದು ಸರಿಯಲ್ಲ ಎನ್ನುವುದು ತಮ್ಮ ಅನುಭವದಿಂದ ದೃಢಪಟ್ಟಿದ್ದನ್ನು ಅವರು ವಿವರಿಸುತ್ತಾರೆ.
ಕೆಲವು ಮಕ್ಕಳು ಓದುವುದರಲ್ಲಿ ಹಿಂದುಳಿಯುತ್ತಾರೆ ಏಕೆ ಎನ್ನುವುದರ ಬಗ್ಗೆ ವಿವರಿಸುತ್ತಾ, ಕೆಲವರು ಕಲಿಕೆಯ ತೊಂದರೆ ಅಂದರೆ ‘ಲರ್ನಿಂಗ್ ಡಿಸಾರ್ಡರ್’ ಎಂಬ ಮಾನಸಿಕ ಸಮಸ್ಯೆಯಿಂದ ಬಳಲುತ್ತಾರೆ. ಆಗ ಮನೋವೈದ್ಯರ ಮಾರ್ಗದರ್ಶನ ಪಡೆದು ಮಗುವಿಗೆ ಅರ್ಥವಾಗುವಂತೆ ಕಲಿಸಬೇಕೆಂಬ ಸಲಹೆ ಕೊಡುತ್ತಾರೆ.
ದೈಹಿಕ ಕಾಯಿಲೆ, ಮಾನಸಿಕ ಕಾಯಿಲೆ:
ದೈಹಿಕ ಕಾಯಿಲೆ ಬಂದರೆ ಮನಸ್ಸು ಕದಲುತ್ತದೆ. ಅವರನ್ನು ಮನೋವೈದ್ಯರ ಬಳಿ ಕರೆದೊಯ್ಯಬೇಕು. ಇಲ್ಲವಾದಲ್ಲಿ ಅದು ವಿವಿಧ ರೀತಿಯ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ. ಕೆಲವು ಬಾರಿ ಲಕ್ವಾ ಹೊಡೆಯಬಹುದು. ಇಂತಹ ಸಂದರ್ಭದಲ್ಲಿ ಅವರನ್ನು ಪರೀಕ್ಷಿಸಿ ವಿದ್ಯುತ್ ಕಂಪನ ಚಿಕಿತ್ಸೆ ನೀಡುವ ಮೂಲಕ ಅವರನ್ನು ಗುಣಪಡಿಸಿದ್ದನ್ನು ಅವರು ಉದಾಹರಣೆ ಮೂಲಕ ವಿವರಿಸುತ್ತಾರೆ. ತೀವ್ರ ತರದ ದೈಹಿಕ ಕಾಯಿಲೆಗಳು ಬಂದಾಗ ಮಾನಸಿಕ ಶೋಭೆಗಳು ಆಗುವುದು ಸಹಜ. ಅದರಲ್ಲಿಯೂ ಹೆಚ್ಚು ಜನ ಇಂತಹ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ.
ಮೈಮೇಲೆ ದೆವ್ವ ಬರುವ ಕುರಿತು ವಿವರಿಸುವ ಡಾ|| ಶ್ರೀಧರ್, ಮೈ ಮೇಲೆ ಆವೇಶ, ದೆವ್ವ -ಭೂತಗಳು ಬರುವುದು, ಮತ್ತೊಬ್ಬರು ನಮ್ಮನ್ನು ಆವರಿಸಿದಂತೆ ಅನಿಸಿ, ಅದರಿಂದ ಮತ್ತೊಬ್ಬರ ಮೇಲೆ ಹಿಡಿತ ಸಾಧಿಸುವುದು ಆ ವ್ಯಕ್ತಿಯ ಗುರಿಯಾಗಿರುತ್ತದೆ. ಅವನಿಗೆ ಅರಿವಿಲ್ಲದೆಯೇ ಆಗುವ ಒಂದು ಪ್ರಕ್ರಿಯೆ. ಇದಕ್ಕೆ ಮೂಲ ಕಾರಣ ‘ಡಿಸೋಸಿಯೇಟಿವ್ ಡಿಸಾರ್ಡರ್’ ಎಂಬ ಮಾನಸಿಕ ಕಾಯಿಲೆ ಎನ್ನುವುದನ್ನು ಹಲವು ರೋಗಿಗಳನ್ನು ಗುಣಪಡಿಸಿದ ಅನುಭವದಿಂದ ವಿವರಿಸುತ್ತಾರೆ
ಕೆಲವರು ಸುಮ್ಮನೆ ಏಕಾಏಕಿ ರೇಗಾಡುತ್ತಾರೆ. ಏಕೆಂದರೆ, ಹದಿವಯಸ್ಸಿನ ಸಮಸ್ಯೆ ಇದು. ಇದಕ್ಕೆ ಮುಖ್ಯ ಕಾರಣ ಆ ವಯಸ್ಸಿನಲ್ಲಾಗುವ ದೈಹಿಕ, ಮಾನಸಿಕ, ಸಾಮಾಜಿಕ ಬದಲಾವಣೆ ಮತ್ತು ಲೈಂಗಿಕ ವಿಕಾಸ ಎನ್ನುವ ಅವರು, ವಿದ್ಯಾರ್ಥಿಗಳು ಒತ್ತಡಗಳನ್ನು ನಿಭಾಯಿಸಲು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಸಂಗೀತ ಕೇಳುವುದು- ಕಲಿಯುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಚಿಕ್ಕ ಪುಟ್ಟ ಪ್ರವಾಸ, ಎಲ್ಲರೊಡನೆ ಚರ್ಚೆಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳುವುದು ಮುಂತಾದವುಗಳ ಮೂಲಕ ಮನಸ್ಸನ್ನು ವಿಚಲಿತಗೊಳ್ಳದಂತೆ ಮಾಡಬಹುದು ಎನ್ನುತ್ತಾರೆ.
ಆತ್ಮಹತೆ, ಕುಡಿತದ ಚಟ:
ಕೆಲವರು ಆತ್ಮಹತ್ಯೆಗೆ ಯತ್ನಿಸುವ ಬಗ್ಗೆ ವಿವರಿಸುವ ವೈದ್ಯರು, ಇದು ಖಿನ್ನತೆಯಿಂದ ಬಳಲುವ ವ್ಯಕ್ತಿಗೆ ಎದುರಾಗುವ ಸಮಸ್ಯೆ. ತಾನು ನಿರುಪಯೋಗಿ ಎನಿಸಿದಾಗ, ನಿದ್ದೆ ಬಾರದಿದ್ದಾಗ, ಎಲ್ಲವೂ ಮರೆತಂತಾದಾಗ ಇದು ಎದುರಾಗುತ್ತದೆ. ನಮ್ಮ ಮೆದುಳಿನಲ್ಲಿ ಆಗುವ ರಾಸಾಯನಿಕಗಳ ವ್ಯತ್ಯಯ ಖಿನ್ನತೆಗೆ ಕಾರಣವಾಗುತ್ತದೆ ಇಂತಹ ಸಂದರ್ಭದಲ್ಲಿ ಔಷಧ ಅವಶ್ಯವಾಗುತ್ತದೆ ಎನ್ನುತ್ತಾರೆ.
ಕೆಲವರು ತೀವ್ರ ಕುಡಿತಕ್ಕೆ ಒಳಗಾಗಿ ಆರೋಗ್ಯವನ್ನು ಹಾಳು ಮಾಡಿಕೊಂಡು ಮಾನಸಿಕವಾಗಿಯೂ ನರಳುತ್ತಿರುವ ಬಗ್ಗೆ ಹಲವರನ್ನು ಪರೀಕ್ಷಿಸಿರುವ ಡಾ|| ಶ್ರೀಧರ್, ವಂಶಾವಳಿ ಮತ್ತು ದೈಹಿಕ ಕಾರಣಗಳು ಹಾಗೂ ಮನೋ ಸಾಮಾಜಿಕ ಕಾರಣಗಳು ಇದಕ್ಕೆ ಕಾರಣ. ನರಮಂಡಲದಲ್ಲಿ ಕೆಲವು ನರಕೋಶಗಳು ಮದದ ಕಣಗಳಿಗೆ ಹೆಚ್ಚು ಹೊಂದಿಕೊಳ್ಳುವ ಗುಣ ಹೊಂದಿವೆ, ಯಾರಲ್ಲಿ ಈ ನರಕೋಶಗಳು ಹೆಚ್ಚಿರುತ್ತವೆಯೋ ಅಂತವರು ಮದ್ಯವ್ಯಸನಿಗಳಾಗುವ ಸಂಭವ ಹೆಚ್ಚು ಎಂದು ವಿವರಿಸುತ್ತಾರೆ
ಮನೋಸಾಮಾಜಿಕ ಕಾರಣಗಳಲ್ಲಿ ಬಹು ಮುಖ್ಯವಾದದ್ದು ಸ್ನೇಹಿತರೊಂದಿಗೆ ಮದ್ಯಸೇವನೆ ಪ್ರಾರಂಭಿಸುವುದು, ಎರಡನೆಯದಾಗಿ ಸಂಘದೋಷ .
ದಾಂಪತ್ಯ ಸಮಸ್ಯೆ:
ಗಂಡ ಹೆಂಡತಿಯಲ್ಲಿ ಎದುರಾಗುವ ದಾಂಪತ್ಯ ಸಮಸ್ಯೆಯನ್ನು ಪರಿಹರಿಸುವುದು ಹೇಗೆ ಎನ್ನುವುದರ ಬಗ್ಗೆ ವಿವರಿಸುತ್ತ, ಸಂಶಯ ಮತ್ತು ಭ್ರಮೆ ಎನ್ನುವುದು ಮಾನಸಿಕ ಕಾಯಿಲೆ. ದಾಂಪತ್ಯ ಜೀವನದಲ್ಲಿ ತಾನು ಕೆಳಗೆ, ನೀನು ಮೇಲೆ ಎಂದೆನಿಸಬಾರದು. ಹೊಂದಿಕೊಂಡು ಹೋಗುವ ಮನೋಭಾವವಿರಬೇಕು. ಭಾವನೆಗಳ ಮಿಡಿತವಿರಬೇಕು. ಪರಸ್ಪರ ಅರ್ಥ ಮಾಡಿಕೊಳ್ಳುವ ಗುಣವಿರಬೇಕು. ಯಾವ ಮುಜುಗರವೂ ಇಲ್ಲದೆ ದಂಪತಿ ಮನಸ್ಸು ಬಿಚ್ಚಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇರಬೇಕು. ದಾಂಪತ್ಯ ಸಮಸ್ಯೆಗೆ ಇನ್ನೊಂದು ಕಾರಣ ಎಂದರೆ ಲೈಂಗಿಕತೆ. ಒಳ್ಳೆಯ ವಿಚಾರಗಳಲ್ಲಿ ಹೊಂದಾಣಿಕೆ ಇರಬೇಕು. ಏನೇ ಎದುರಾದರೂ, ಒಂದೇ ಕ್ಷಣದಲ್ಲಿ ಅದನ್ನು ಮರೆತು ಬಿಡಬೇಕು. ಅದೇ ನಿಜವಾದ ಸಮರಸದ ದಾಂಪತ್ಯದ ಜೀವನ ಎನ್ನುವುದನ್ನು ಹಲವರನ್ನು ಪರೀಕ್ಷಿಸಿದ ಅನುಭವದ ಮೂಲಕ ವಿವರಿಸುತ್ತಾರೆ
.......................

Comments
Post a Comment