ಸವಾಲೊಡ್ಡುವ, ಸೂಕ್ಷ್ಮತೆಯ 

‘ಸಿಗದವರು’ 



‘ಸಿಗದವರು’ ಇದು ರಾಘವೇಂದ್ರ ರಾವ್ ಅವರ ಕಥಾ ಸಂಕಕಲನ. ಅನು ಬೆಳ್ಳೆ ಎಂಬ ಕಾವ್ಯನಾಮದಿಂದ ಹೆಸರಾಗಿರುವ ಲೇಖಕರು, ಈ ಕೃತಿಯಲ್ಲಿ ಮನುಷ್ಯ ಸಂಬಂಧದ ಸಂಕೀರ್ಣ ಮಜಲುಗಳನ್ನು, ಭಾವನಾತ್ಮಕ ತಾಕಲಾಟಗಳನ್ನು, ಬದುಕಿನ ಹೋರಾಟದ ಮತ್ತು ಸಂಘರ್ಷವನ್ನು ಚಿತ್ರಿಸಿದ್ದಾರೆ. ಕೃತಿಯಲ್ಲಿ ಒಟ್ಟೂ ೯ ಕಥೆಗಳಿವೆ. ಇಲ್ಲಿನ ಬಹುತೇಕ ಕಥೆಗಳಲ್ಲಿ  ಅಪೂರ್ಣತೆ ಇರುವುದನ್ನು ಕಾಣಬಹುದು. ಕಥೆಯ ಎಳೆಯನ್ನು ಇಟ್ಟುಕೊಂಡು ನಾವೇ ಅದರ ಅಂತ್ಯ ಗಮನಿಸಬೇಕಿದೆ. 

 ಇಲ್ಲಿನ ಕಥೆಗಳಲ್ಲಿ ನೊಂದ ಪಾತ್ರಗಳಿವೆ. ಒಳಗೊಂದು, ಹೊರಗೊಂದು ನಡೆವಳಿಕೆಯವರಿದ್ದಾರೆ. ವೈವಾಹಿಕ ಬದುಕಿನಾಚೆಯ ಸಂಬಂಧವಿದೆ. ಸ್ವೇಚ್ಛೆಯ ಜೀವನವಿದೆ. ಮನುಷ್ಯ ಸಂಬಂಧದ ತವಕ-ತಲ್ಲಣಗಳಿವೆ.  ಎಲ್ಲ ಕಥೆಗಳು ಕೌತುಕವಾಗಿದ್ದರೂ ಅಂತ್ಯಗಳೇಕೋ ಅಸ್ಪಷ್ಟತೆಯನ್ನು ನೀಡುವ ಮೂಲಕ ನಮಗೆ ಒಂದು ಬಗೆಯ ಸವಾಲನ್ನು ಒಡ್ಡುತ್ತವೆ. ಪ್ರಯೋಗಶೀಲತೆಯ ಇಲ್ಲಿನ ಕಥೆಗಳು ಆಪ್ತವಾಗುತ್ತವೆ,  ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. 


ಅಬಾಧಿತ 

ಶಾಮಣ್ಣ ಮತ್ತು ಸತ್ಯನಾರಾಯಣ ಒಂದೇ ರೀತಿಯ ವ್ಯಕ್ತಿಗಳು. ಇಬ್ಬರೂ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೀರಾ ಆಸಕ್ತಿಯುಳ್ಳವರು. ಇದ್ದಕ್ಕಿದ್ದಂತೆ ಶಾಮಣ್ಣ ಸಾವಿಗೀಡಾಗುತ್ತಾನೆ. ಪತ್ನಿ ಕಾವೇರಿ ತಾನೇ ಅಂತ್ಯಕ್ರಿಯೆ ಮಾಡುವುದಾಗಿ ಹಠ ಹಿಡಿದಾಗ ಪುರೋಹಿತರು ಇದನ್ನು ಒಪ್ಪುವುದಿಲ್ಲ. ಜೊತೆಗೆ ಈಕೆ ಪತಿಗೆ ಎಂದೂ ಪ್ರೀತಿ ತೋರಿಸಿದವಳಲ್ಲ. ನಂತರ ಎಲ್ಲರೂ ಪತ್ನಿಯೇ ಅಂತ್ಯಕ್ರಿಯೆ ಮಾಡಲಿ ಎಂದು ಒಪ್ಪುತ್ತಾರೆ. ನಂತರ  ಅವರ ಮನೆಯ ದನಗಳನ್ನೆಲ್ಲ ಸತ್ಯನಾರಾಯಣನಿಗೆ ವಹಿಸಲು ತೀರ್ಮಾನವಾಗುತ್ತದೆ. ಒಂದು ದಿನ ಕೃಷಿ ಕೆಲಸ ಮುಗಿಸಿ ಮನೆಗೆ ಬಂದ ಸತನಾರಾಯಣ  ಕುಸಿದು ಬಿದ್ದು ದವಾಖಾನೆಗೆ ಕರೆದೊಯ್ದಾಗ ಅಲ್ಲಿಯೇ ಸಾವಿಗೀಡಾಗುತ್ತಾನೆ. ಕಾಲೇಜಿಗೆ ದೇಹವನ್ನು  ದಾನ ಮಾಡಲಾಗುತ್ತದೆ. ಮಗಳು ಸಿಂಗಾಪುರದಿಂದ ಬಂದು ಅಂತ್ಯಕ್ರಿಯೆ ಮಾಡುತ್ತಾಳೆ. ಎಲ್ಲ ಮಿತ್ರರು ಈ ಕ್ರಿಯೆಯಲ್ಲಿ ನೆರವಾಗುತ್ತಾರೆ.  

ಚೌಕಟ್ಟು

  ೩೬ ವರ್ಷವಾದರೂ ಮದುವೆಯಾಗದ ಮಗ ಮಂತಣ್ಣ, ಇನ್ನೊಂದೆಡೆ ಮದುವೆಯಾಗಿ ಗಂಡನ ಮನೆಗೆ ಹೋದ ಮಗಳು ನವಿಲೆ ವಾಪಸ್ಸಾಗುವುದು,  ಸೀತಾರಾಮಯ್ಯ ಎನ್ನುವನು ತನ್ನ ಮಗಳು ಅನಿತಾಳನ್ನು ಮಂತಣ್ಣನಿಗೆ ಮದುವೆ ಮಾಡಿಕೊಡಲು ಮುಂದಾದಾಗ ಮಂತಣ್ಣ ನಿರಾಕರಿಸುವುದು, ಆಕೆ ಮನೆ ಬಿಟ್ಟು ನಾಪತ್ತೆಯಾಗುವುದು, ಈ ಮಧ್ಯೆ ಮಂತಣ್ಣನ ಅವನ ಸೋದರ ಮಾವ ನಾಪತ್ತೆಯಾದವಳಿಗೂ ಮಂತಣ್ಣನಿಗೂ ಅನೈತಿಕ ಸಂಬಂಧವಿದೆ ಎಂಬ ವದಂತಿಯನ್ನು ಊರಿನಲ್ಲಿ ಹಬ್ಬಿಸುವುದು, ಈ ಬಗ್ಗೆ  ಪ್ರಶ್ನಿಸಿದಾಗ ತಪ್ಪನ್ನು ಒಪ್ಪಿಕೊಳ್ಳುವುದು, ಅನಿತಾ ನಾಪತ್ತೆಯೇ ತೊಂದರೆ ಉಂಟುಮಾಡುವುದು,   ಜ್ಯೋತಿಷಿ ಹೇಳಿದ ಮಾತನ್ನು ಆತನಿಗೇ ತಿರುಗಿಸುವುದು, ನಂತರ ಮಹಿಳಾ ಹಾಸ್ಟೆಲ್‌ನತ್ತ ಮುಖ ಮಾಡುವುದು... ಕಥೆಯ ಅಂತ್ಯವನ್ನು ಓದುಗರೇ ಇಲ್ಲಿ ನಿರ್ಧರಿಸಬೇಕು. 

ದುಃಖಾರ್ತರು 

ತೀರ್ಥ ಮತ್ತು ಕುನಾಲ್ ಪ್ರಸಿದ್ಧ ವಕೀಲರೊಬ್ಬರಲ್ಲಿ ಕೆಲಸ ಮಾಡುತ್ತಾರೆ. ವಿಧುರರಾಗಿದ್ದ ವಕೀಲರಿಗೆ ಮಕ್ಕಳಿರಲಿಲ್ಲ. ಅವರ ಆಸ್ತಿಯನ್ನು ಹೊಡೆಯಲು ಕುನಾಲ್ ತೀರ್ಥನ ನೆರವನ್ನು ಬೇಡುತ್ತಾನೆ. ಈ ಮಧ್ಯೆ ವಕೀಲರು ನಿಶಾ ಎನ್ನುವವಳನ್ನು ಸಾಕಿ, ಬೆಳೆಸಿ, ವಕೀಲಿಕೆ ಕಲಿಸಿ ಲಾಯರ್ ಆಗಿಸುತ್ತಾರೆ. ತೀರ್ಥ ನಿಶಾಳ ಮನಸ್ಸನ್ನು ಗೆಲ್ಲಲು ಯತ್ನಿಸುತ್ತಾನೆ. ಇದನ್ನರಿತ ಕುನಾಲ್ ಪ್ರಕರಣ ಒಂದರಲ್ಲಿ ತೀರ್ಥನನ್ನು  ಕುನಾಲ್ ಸಿಕ್ಕಿಸಿ ಹಾಕುತ್ತಾನೆ, ಇದರಿಂದ ತೀರ್ಥ ಬೇಸತ್ತು ಕೆಲಸ ಬಿಟ್ಟು ಊರಿಗೆ ಹೋಗುತ್ತಾನೆ. ಈ ಮಧ್ಯೆ ನಿಶಾ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾಳೆ. ವಕೀಲ ಅನಾರೋಗ್ಯಕ್ಕೀಡಾಗಿ ಸಾವಿಗೀಡಾದಾಗ ತನಗೆ ವಕೀಲರ ಆಸ್ತಿ ಸಿಗುವುದೆಂದು ಕುನಾಲ್ ಯೋಚಿಸುತ್ತಾನೆ. ಹಿಂದು ಲಾ ಪ್ರಕಾರ ದತ್ತು ಸ್ವೀಕಾರಕ್ಕೆ ಒಳಗಾದ ಮಗ ತಾನೆಂದು ನಿರೂಪಿಸಲು ಯೋಚಿಸುತ್ತಾನೆ ಇದಕ್ಕಾಗಿ ಮತ್ತೆ ತೀರ್ಥನನ್ನು ಹುಡುಕಿಕೊಂಡು ಆತನ ಊರಿಗೆ ಹೋಗುತ್ತಾನೆ. ಆದರೆ ವಕೀಲರು ತಮ್ಮ ಆಸ್ತಿಯನ್ನೆಲ್ಲ ಕುಟುಂಬದವರ ಹೆಸರಿನಲ್ಲಿ ಬರೆದಿಟ್ಟಿರುತ್ತಾರೆ.

ಎಲ್ಲ ಮರೆತಿರುವಾಗ

 ಕಾಕನ ಅಂಗಡಿಗೆ ಇಡ್ಲಿ ತೆಗೆದುಕೊಂಡು ಹೋಗಿ ಕೊಡುವುದು ತಂದೆ ಮತ್ತು ಅಜ್ಜ ಮಾಡಿದ ಕೆಲಸ. ಇವರಿಬ್ಬರನ್ನೂ ಕಳೆದುಕೊಂಡ ನಂತರ  ಸಸಿ ಕೂಡ ಅಜ್ಜ್ಜ ಮಾಡುತ್ತಿದ್ದ ಕೆಲಸವನ್ನು ತಾನು ಮಾಡುತ್ತಾಳೆ.  ಅಲ್ಲಿ ವಿನು ಎನ್ನುವವನ ಪರಿಚಯವಾಗುವುದು, ಆತ ಆಕೆಯ ಮನೆಯಲ್ಲಿ ಉಳಿಯುವುದು, ಇಡ್ಲಿ ಮಾರುವವನ ಅಂಗಡಿ ನಾಶವಾಗುವುದು,  ನಂತರ ಅಲ್ಲಿಯೇ ತಾನು ಕುಳಿತು ಇಡ್ಲಿ ಮಾರುವುದು, ಪ್ರೊಫೆಸರ್ ಒಬ್ಬರು ಇಡ್ಲಿ ತಿಂದು ಮನಸೋತ ಹೆಚ್ಚಿನ ಓದಿಗೆ ಸೂಚಿಸುವುದು, ಆಕೆ ಓದು ಮುಂದುವರಿಸುವುದು, ಆದರೂ ವಿನು ಜೊತೆ ಜೀವನ ಸಾಗಿಸುವುದು, ಒಂದು ದಿನ ಮೇಯರ್ ಬಂದು ಅವಳ ಬಳಿ ಇಡ್ಲಿ ತಿಂದು ಅವಳಿಗೆ ಪಾಲಿಕೆಯ ಕ್ಯಾಂಟೀನ್ ನಡೆಸಲು ಕೊಡುವುದು. ಇದು ಇಲ್ಲಿನ ಕಥಾ ತಿರುಳು. 

ಗುರುತಿನವರು 

ಅಖಿಲಾ ಮತ್ತು ಗೀತಾ ಒಂದೇ ತರಗತಿಯವರು. ಗೀತಾಳನ್ನು ಪ್ರೀತಿಸುತ್ತಿದ್ದವನು ಕಾಲೇಜಿನಲ್ಲಿ ಡಿಬಾರ್ ಆಗಿದ್ದ. ಇದರಿಂದಾಗಿ ಆತನ ಸಹಚರರೆಲ್ಲ ಅಖಿಲಾಳ ಮನೆ ಸನಿಹ ಬಂದು ಕಾಂಪೌಂಡಿನಾಚೆ ನಿಂತು ಗಲಾಟೆ ಮಾಡುತ್ತಿದ್ದರು. ಗೀತಾ ಪ್ರಕರಣದ ನಂತರ ಅಖಿಲಾ ನೆಪ ಹೇಳಿ ಮೂರು ದಿನ ಕಾಲೇಜಿಗೆ ಚಕ್ಕರ್ ಹಾಕಿದ್ದಳು. ಈ ಬಗ್ಗೆ ಏನೋ ನೆಪ ಹೇಳಿದ್ದರಿಂದ ಗೀತಾಳ ತಾಯಿ ಅಖಿಲಾಳ ತಾಯಿ ಕೇಳಲು ನಿಜ ತಿಳಿಯಲು ಹೋದಾಗ ಯಾವುದೋ ಹುಡುಗ ಲವ್ ಲೆಟರ್ ಬರೆದು ಸಿಕ್ಕಿಬಿದ್ದಿದ್ದಾನೆ ಎಂಬ ವಿಷಯವನ್ನು ತಿಳಿಸುತ್ತಾಳೆ. ಮನೆಗೆ ಬಂದಾಗ ಆ ಹುಡುಗರು ಇನ್ನು ಮುಂದೆ ಗಲಾಟೆ  ಮಾಡುವುದಿಲ್ಲ ಎಂದು ಪ್ರಿನ್ಸಿಪಾಲ್‌ಗೆ  ಹೇಳಿದ್ದಾರೆಂದು ಪಕ್ಕದ ಮನೆಯ ಕೃಷ್ಣಮೂರ್ತಿ ತಿಳಿಸುತ್ತಾರೆ.  ಆಗ ಅಖಿಲಾಳೇ ಗೀತಾಳ ಲವ್ ಬಗ್ಗೆ ಬಾಯ್ಬಿಡುತ್ತಾಳೆ. ಅವರೆಲ್ಲ ಗುರುತಿನವರು ಎಂದು ಹೇಳುತ್ತಾಳೆ.

ನೆಪ

 ವಿವಾಹಿತೆಯೊಬ್ಬಳು  ಶ್ರೀಮಂತ ವ್ಯಕ್ತಿ ಸಹಿತ ಹಲವರ ಜೊತೆ ದೈಹಿಕ ಸಂಪರ್ಕ ಬೆಳೆಸಿ ಶ್ರೀಮಂತನಿಂದ ಮಗು ಪಡೆ ಪಡೆಯುವುದು, ಆತ ಅವರಿಬ್ಬರನ್ನು ಸಾಕಲು ನಿರ್ಲಕ್ಷಿಸಿದಾಗ ಅವರ ವಿರುದ್ಧ ದೂರು ದಾಖಲಿಸುವುದು, ಮತ್ತೆ ಆಕೆಯೊಡನೆ ಬದುಕಲು ಆತ ಬರುವುದು, ಈ ಮಧ್ಯೆ ಮಗು ನಾಪತ್ತೆಯಾಗುವುದು, ಶ್ರೀಮಂತ ಸಾಯುವುದು, ಆಕೆ ಮನೆ ಬಿಟ್ಟು ಹೋಗುವುದು, ಒಂದು ದಿನ ಇದ್ದಕ್ಕಿದ್ದಂತೆ ಬಸ್ ಸ್ಟ್ಯಾಂಡ್ ಬಳಿ ಅವಳು ಗಿರಾಕಿಗಳಿಗಾಗಿ ಕಾಯುವುದು... ಇದು ಈ ಕಥೆಯ ವಸ್ತು. ಮಾನಸಿಕ- ದೈಹಿಕ  ಸಂಬಂಧ ಒಂದೆಡೆಯಾದರೆ, ಜೀವಿತದ ಗುರಿಯೇನು ಎನ್ನುವುದು ಇಲ್ಲಿನ ಪ್ರಶ್ನೆಯಾಗಿದೆ.  ಮುಂದೆ ಅವಳ ಜೀವನ ಹೇಗೆ ಸಾಗಿತು, ಆಶ್ರಯ ಕೊಟ್ಟವರಾರು ಎನ್ನುವುದು ನಿಗೂಢ.

ಸೆಳೆತಗಳು

ವಿಶಾಲ್ ಎನ್ನುವ ಸಂಬಂಧಿಯ ಕಂಪನಿಯಲ್ಲಿ  ಕೆಲಸ ಮಾಡುವ ಹೇಮಾಳಲ್ಲಿ ಮೂವರು ಯುವಕರು ಅನುರಕ್ತರಾಗಿದ್ದರು. ಹೇಮಾ ಅರುಣ್ ಜೊತೆ ಜೀವನ ಸಾಗಿಸುತ್ತಿದ್ದರೂ ಎದುರು ಮನೆಯ ಪ್ರಮಥ, ಸದಾ ಕಿಟಕಿ, ಟೆರೇಸ್, ಸಿಟೌಟ್‌ನಲ್ಲಿ ಕುಳಿತು ಈಕೆಯತ್ತ ಕಣ್ಣು ಹಾಯಿಸುತ್ತಿದ್ದ. ಇತ್ತ ವಿಶಾಲ್ ಕೂಡ ಕಣ್ಣಿಟ್ಟಿದ್ದ. ಕಂಪನಿಯ ಹೈದ್ರಾಬಾದ್ ನ  ಮುಖ್ಯಸ್ಥ್ಥ ಮನುಮೋದ್ ಈಕೆಯನ್ನು ಕಂಡಾಗ ಆಸೆಪಟ್ಟಿದ್ದ.  ವಿಶಾಲ್ ಜೊತೆಗಿನ ವೈಮನಸ್ಸಿನಿಂದ ಕಂಪನಿಯನ್ನು  ಬಿಟ್ಟು ಹೇಮಾ ರಾಜಿನಾಮೆ ನೀಡಿದ್ದಳು. ಕೆಲವು ದಿನಗಳ ನಂತರ ಕಂಪನಿಯ ದಾಖಲೆ ಕದ್ದ  ಬಗ್ಗೆ ಲೀಗಲ್ ನೋಟೀಸನ್ನು ಆಕೆಗೆ  ಕಳುಹಿಸಲಾಯಿತು. ಮನುಮೋದ್ ಮತ್ತೊಂದು ಪತ್ರ ಕಳುಹಿಸಿ ಆಕೆಗೆ ಕೆಲಸದಲ್ಲಿ ಪ್ರಮೋಷನ್ ನೀಡಿ ಸಿಇಒ ಆಗಿ ಮಾಡಿದ್ದನು. ಇದರಲ್ಲೇನೋ ದುರುದ್ದೇಶವಿದೆ ಎನ್ನುವುದು ಅರುಣ್ ಅನಿಸಿಕೆಯಾಗಿತ್ತು. ಮಾರನೆಯ ದಿನ  ಕಚೇರಿಗೆ ಹೊರಟಾಗ ಎದುರು ಮನೆಯ ಪ್ರಮಥ್ ಕಾರು ತಂದು ನಿಲ್ಲಿಸಿದ. ಕಾರು ಏರಿ ಕಚೇರಿಗೆ ಹೋಗಿಳಿದಳು. ಇಬ್ಬರು ಮಾತನಾಡಲಿಲ್ಲ. ಇತ್ತ ವಿಶಾಲ್‌ನನ್ನು  ಹೈದ್ರಾಬಾದ್‌ಗೆ ವರ್ಗಾಯಿಸಿ ಆತನ ಚೇರಿನಲ್ಲಿ ಹೇಮಾಳನ್ನು ಕೂಡ್ರಿಸಿ ಮನುಮೋದ್ ಅಭಿನಂದಿಸಿದ.    

ಸಿಗದವರು

 ಶಿಲ್ಪಾ ಮದುವೆ ನಂತರ ಗಂಡನಿಂದ ತಿರಸ್ಕಾರಕ್ಕೆ ಒಳಗಾಗಿ ಬಸ್ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರುತ್ತಾಳೆ. ದೂರದ ಊರಿನಲ್ಲಿ ಆಕೆಗೆ  ಕೆಲಸ ಕೊಡಲಾಗುತ್ತದೆ. ಅಲ್ಲಿ ಹಾರ್ದಿಕ್ ಎನ್ನುವವನ ಪರಿಚಯವಾಗಿ ಆತನೊಡನೆ ಲಿವಿಂಗ್ ಟುಗೆದರ್ ನಡೆಸುತ್ತಿರುವಾಗ ದೈಹಿಕ  ಸಂಪರ್ಕದ ವಿಚಾರದಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಆತ ಮನೆ ಬಿಡುತ್ತಾನೆ. ಈ ಮಧ್ಯೆ ಗಂಡ ಡೈವೋರ್ಸ್ ನೀಡುತ್ತಾನೆ. ನಂತರ ಚಿರಂತ್ ಎನ್ನುವವನ ಪರಿಚಯವಾಗುತ್ತದೆ. ಈಕೆಯ ಕಥೆ ಕೇಳಿ ಚಿಂತಿತನಾಗುತ್ತಾನೆ. ಆಕೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಯಾರಿಗೂ ಹೇಳದೆ ತೆರಳುತ್ತಾಳೆ.  ವಸುಮತಿ ಅಕ್ಕನ ಮನೆಗೆ ಬರುತ್ತಾನೆ. ಆಕೆ ನಾದಿನಿಯರನ್ನು ಒಪ್ಪಿಕೊಳ್ಳದೆ, ಅವರಿಗೆಲ್ಲ ಬೇಗ ಮದುವೆಯಾಗಬಾರದೆಂಬ ವಿಚಿತ್ರ ನಿಲುವಿನವಳು. ಈಕೆಯ ಗಂಡನ ಮನೆ ಬಿಟ್ಟು ಹೋಗಿರುತ್ತಾನೆ. ಈಕೆಯ ಮಗನಿಗೂ ವಿವಾಹವಾಗಿರುವುದಿಲ್ಲ. ಆದರೆ  ಊರಲ್ಲಿರುವ ಇತರರಿಗೆ  ವಿವಾಹ ಮಾಡಿಸುವ ಕೆಲಸ ಆರಂಭಿಸುತ್ತಾಳೆ.  

ಅರ್ಥವಾಗದವರು

 ಊರಲ್ಲಿ ನಿಗೂಢ ಕುಟುಂಬದ ಮನೆಯೊಂದಿತ್ತು. ಆ ಮನೆಯಿಂದ ರಾತ್ರಿ ವಿಚಿತ್ರ ಶಬ್ದಗಳು ಬರುತ್ತಿದ್ದವು. ಬಾಗಿಲು ತೆರೆದರೆ ಕಿರ್ ಕಿರ್ ಎಂಬ ದೊಡ್ಡ  ಶಬ್ದ,   ಜೊತೆಗೆ  ಒಂದು ಹೆಣ್ಣಿನ ಸುಂದರ ಸಂಗೀತದ ಆಲಾಪ ಕೇಳಿ ಬರುತ್ತಿತ್ತು. ಊರವರೆಲ್ಲ ಭೂತದ ಮನೆ ಎನುತ್ತಿದ್ದರು. ಊರಿಗೆ ಬಂದ ಯುವಕ ವಿಷಯ ತಿಳಿದು  ಆ ಮನೆಯಲ್ಲಿ ಏನಿದೆ ಎಂದು ನೋಡಲು ಹೋಗುತ್ತಾನೆ. ಬಾಗಿಲನ್ನು ತಟ್ಟುತ್ತಾನೆ. ಬಾಗಿಲು ತೆರೆಯುತ್ತದೆ. ಅಲ್ಲಿ ಹಾಡುವುದು ಕೇಳಿಬರುತ್ತದೆ.  ಇದಕ್ಕೂ ಮುನ್ನ ಜೀಪಿನಲ್ಲಿ ಒಬ್ಬ ಬಂದು ಹೋದ ನಂತರ ಆಕೆ ಅಳಲು ಆರಂಭಿಸುತ್ತಾಳೆ. ಈ ಮನೆಯಲ್ಲಿ ಮನುಷ್ಯರಿದ್ದಾರೆ. ದೆವ್ವವಿಲ್ಲ  ಅಂತ ಊರಿಗೆ ತಿಳಿಸಬೇಕು ಎಂದು ಹೇಳಿಕೊಂಡು ಮನೆಗೆ ಬರುತ್ತಾನೆ. ಜೊತೆಗೆ ಪ್ರತಿಭೆಗೆ ಅವಕಾಶ ಕೊಡಬೇಕು ಎಂದುಕೊಳ್ಳುತ್ತಾನೆ ಮರುದಿನ ಅಲ್ಲಿ ಹೋದರೆ ಬಾಗಿಲಿಗೆ ಚಿಲಕ ಹಾಕಿರುತ್ತದೆ.

...........................




Comments

Popular posts from this blog