ನವಿರುಭಾವ ಸೂಸುವ
ಜೀವ ಜಲ
ಸಾಹಿತ್ಯ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯದ ಪ್ರಕಾರ ತುಂಬಾ ಕಡಿಮೆ. ಕಡಿಮೆ ಸಾಲುಗಳಲ್ಲಿ ಅತಿ ಮುಖ್ಯವಾದ ಅರ್ಥವನ್ನು ಹೊಂದಿರುವಂತಹ ಸಾಹಿತ್ಯ ಚಿಕ್ಕದರಲ್ಲಿ ಚೊಕ್ಕತನವನ್ನು ಅಳವಡಿಸಿಕೊಂಡು ವಿಶಾಲವಾದ ಅರ್ಥವನ್ನು ಪ್ರತಿಪಾದಿಸುವಂಥದ್ದು ಚುಟುಕು. ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಶುಭಲಕ್ಷ್ಮೀ ನಾಯಕ್ ‘ಜೀವ ಜಲ’ ಕೃತಿಯ ಮೂಲಕ ಸುಮಾರು ೩೪೦ ರಷ್ಟು ಚುಟುಕುಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಪ್ರಕೃತಿ, ಪರಿಸರ, ಜೀವನ ಪ್ರೀತಿ, ರಾಜಕೀಯ, ಧಾರ್ಮಿಕ, ಸಾಮಾಜಿಕ ವಿಚಾರಗಳನ್ನು ಚೊಕ್ಕದಾದ ಚುಟುಕುಗಳಲ್ಲಿ ಸಮಾಜಕ್ಕೆ ನೀಡುವ ಕೆಲಸ ಮಾಡಿದ್ದಾರೆ. ಇಲ್ಲಿನ ಬಹುತೇಕ ಚುಟುಕುಗಳಲ್ಲಿ ಅವರ ನಿಸರ್ಗದ ಪ್ರೇಮ, ಕಾಳಜಿ ಮತ್ತು ಅಚ್ಚರಿ ಕಂಡುಬರುತ್ತದೆ. ಇಂದು ಗಂಭೀರ ಚಿಂತನೆಗೆ ಒಳಪಡಿಸುವ ವಿಷಯಗಳೂ ಇವಾಗಿವೆ. ಚಿಕ್ಕದಾದರೂ ಅದರೊಳಗಿನ ಗಾಂಭೀರ್ಯತೆ, ಬದುಕು ಕಟ್ಟಿಕೊಡುವ ಘನತೆ, ಲೋಕಾನುಭವ, ಜೊತೆಗೆ ಸ್ವ ಅನುಭವ
sವೂ ಮಿಳಿತವಾಗಿ ಬಹುಪಕ್ವತೆ ಚುಟುಕುಗಳನ್ನು ನಾವು ಕಾಣಬಹುದಾಗಿದೆ.
ಕೃತಿಯಲ್ಲಿನ ಕೆಲವು ಚುಟುಕುಗಳನ್ನು ಗಮನಿಸುವುದಾದರೆ, ಅಮ್ಮನನ್ನು ಅವಳ ಗುಣ, ವ್ಯಕ್ತಿತ್ವ, ಆಕೆ ಅನುಭವಿಸುವ ನೋವು ಎಲ್ಲವನ್ನೂ ಕೇವಲ ನಾಲ್ಕು ಸಾಲಿನಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಕರುಣೆಯ ಕಡಲು
ಮಮತೆಯ ಹೊನಲು
ಬೆಂದಿರುವ ಒಡಲು
ಇವಳ ಪ್ರೀತಿಗಿಲ್ಲ ಕವಲು/ ಎನ್ನುವ ಮೂಲಕ ಚಿತ್ರಣವನ್ನು ನಮ್ಮ ಮುಂದೆ ಇಡುತ್ತಾರೆ ಎನ್ನುವ ಕವಯತ್ರಿ, ಇಂದು ಎಲ್ಲೆಡೆ ನೆಮ್ಮದಿಯನ್ನು ಹುಡುಕುವ ಪರಿಸ್ಥಿತಿ ಇದೆ, ಕತ್ತಲ ಬದುಕಲ್ಲಿ ಬೆಳಕನ್ನು ಹುಡುಕುತ್ತೇವೆ. ಸುತ್ತಲ ಜಗತ್ತಿನಲ್ಲಿ ಸತ್ಯವನ್ನು ಹುಡುಕುತ್ತೇವೆ. ದುಃಖವು ಬಂದಾಗ ಸುಖವನ್ನು ಹುಡುಕುತ್ತೇವೆ. ಯಾಂತ್ರಿಕ ಬಾಳಲ್ಲಿ ನೆಮ್ಮದಿಯನ್ನು ಹುಡುಕಬೇಕಾಗಿದೆ ಎನ್ನುತ್ತಾರೆ ಇನ್ನೊಂದು ಚುಟುಕದಲ್ಲಿ.
ಅಂತರಂಗ ಎನ್ನುವ ಕನ್ನಡಿಯಲ್ಲಿ ಬಾಳು ಸ್ವಚ್ಛವಾಗಿರಬೇಕು. ಅದರಲ್ಲಿ ಶುದ್ಧ ಅಶುದ್ಧತೆಗಳನ್ನು ತಿಳಿಯಬೇಕು. ಸತ್ಯಾಸತ್ಯತೆಯನ್ನು ತೆರೆದ ಮನದಿಂದ ಕಾಣಬೇಕು. ಆಗ ಕನ್ನಡಿ ಸ್ವಚ್ಛವಾಗಿ ಕಾಣುತ್ತದೆ. ನಿಷ್ಕಲ್ಮಶ ಆಂತರ್ಯ ಇದ್ದರೆ ಅದು ನಮ್ಮ ಬಾಳಿಗೆ ಭೂಷಣ. ಕಾಮಾದಿ ವೈರಿಗಳನ್ನು ಜಯಿಸಿ ಇಹಪರದ ಸದ್ಗತಿಗೆ ಸಂತಸಕ್ಕೆ ಜೀವನ ಆಭರಣವಾಗಿದೆ ಎಂದು ‘ಅಂತರಂಗ ದರ್ಪಣ’ ಎಂಬಲ್ಲಿ ವಿವರಿಸುತ್ತಾರೆ. ‘ಕ್ಷಮಯಾಧರಿತ್ರಿ’ ಎಂಬ ಚುಟುಕಿನಲ್ಲಿ ಪ್ರಕೃತಿಯ ಬೇಗುದಿಯನ್ನು ಚಿತ್ರಿಸುತ್ತಾರೆ.
ಕ್ಷಮಯಾಧsರಿತ್ರಿ ನಲುಗಿಹಳು ಇಂದು
ಸಹನೆ ಹೆಚ್ಚಾಗಿ ಬೇಗುದಿಯಲ್ಲಿ ಬೆಂದು
ವಿಕೋಪಗಳ ಸರಮಾಲೆ ತಂದಿಹಳು
ನರನಿಗೆ ಪಾಠವನ್ನು ಕಲಿಸುತಿಹಳು/ ಎನ್ನುತ್ತಾ, ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ಮಳೆಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಯಾವ ರೀತಿ ತನ್ನ ವಿಕೋಪವನ್ನು ತೋರಿಸುತ್ತಿದ್ದಾಳೆ. ಸಂಕಷ್ಟಗಳ ಸರಮಾಲೆಯನ್ನು ನಮ್ಮ ಮುಂದೆ ತೆರೆದಿಡುತ್ತಿದ್ದಾಳೆ. ಆದರೂ ಪ್ರಕೃತಿಯ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡುತ್ತಿಲ್ಲ ಎಂದು ಸುಂದರವಾಗಿ ವಿವರಿಸಿದ್ದಾರೆ.
‘ರಾಧೆ ಮತ್ತು ಶ್ಯಾಮ’ರಲ್ಲಿ ಯಾವ ರೀತಿ ಪವಿತ್ರ ಪ್ರೇಮ ಇತ್ತು ಎನ್ನುವುದನ್ನು ಇನ್ನೊಂದು ಚುಟುಕುವಿನಲ್ಲಿ ತೋರಿಸಿದ್ದಾರೆ. ಪ್ರೇಮದಲ್ಲಿ ಜಗತ್ತನ್ನೇ ಮರೆಯುವ ಮತ್ತು ಅವನ ಒಲವಲ್ಲಿ ಸುಖವನ್ನೇ ಕಾಣುವ ಪ್ರೇಮ ಅವರದಾಗಿತ್ತು ಎನ್ನುವ ಕವಯಿತ್ರಿ, ಕೊರೊನಾ ಕಾಲದ ಸಂಕಷ್ಟಗಳನ್ನು ಸಹ ಹಲವು ಚುಟುಕುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸದಾ ನಲಿಯುತ್ತಿದ್ದ ಚಿಣ್ಣರು ಶಾಲೆ ಇಲ್ಲದೆ, ಆಟ ಇಲ್ಲದೆ. ಮಿತ್ರರೊಂದಿಗೆ ಬೆರೆಯದೆ ಕೊರೊನಾದಿಂದ ದೂರವಾಗಿದ್ದಾರೆ. ಅವರ ಮನದಲ್ಲೂ ಕೊರೊನಾ ಕಾಡುತ್ತಿದೆ. ಇದರಿಂದಾಗಿ ಅವರು ಆತಂಕದಲ್ಲಿದ್ದಾರೆ. ಹಬ್ಬಿದ ಪಿಡುಗನ್ನು ಮನದಿಂದ ದೂರ ಮಾಡಬೇಕಿದೆ ಎಂದಿದ್ದಾರೆ ರೋಗಿಗಳಿಗೆ ಧೈರ್ಯ ತುಂಬುವ ‘ವೈದ್ಯ’ ಜೀವನದಲ್ಲಿ ಭರವಸೆಯನ್ನು ಮೂಡಿಸುವ, ಬದುಕುವ ವಿಶ್ವಾಸವನ್ನು ತೋರುವವನು, ಆರೋಗ್ಯದಾಯಕನು, ಭಾಗ್ಯದಾಯಕನು. ಎಲ್ಲರ ಗೌರವಕ್ಕೆ ಪಾತ್ರನಾಗುವವನು ಎಂದು ವೈದ್ಯನನ್ನು ಬಣ್ಣಿಸುತ್ತಾರೆ.
ಪ್ರಕೃತಿಯ ಕುರಿತು ಸಾಕಷ್ಟು ಚುಟುಕುಗಳು ಈ ಕೃತಿಯಲ್ಲಿವೆ. ‘ವಸುಂಧರೆಗೆ ಪುಳಕ’ ಎಂಬಲ್ಲಿ ತುಂಬಿದ ಅವನಿಯೊಡಲು ವರ್ಷಧಾರೆಗೆ/ ಭೂದೇವಿಯು ತೊಟ್ಟಿಹಳು ಹಸಿರುನುಡುಗೆ/ ಸಂತಸ ಸಂಭ್ರಮವು ಎಲ್ಲ ಖಗಮೃಗಗಳಿಗೆ/ ಹಚ್ಚನೆಯ ಹಸಿರಲಿ ಪುಳಕವು ವಸುಂಧರೆಗೆ/ ಎನ್ನುತ್ತಾರೆ. ಪ್ರಕೃತಿಯು ಹಸಿರಂತೆ ಶೋಭಿಸುತ್ತಿದ್ದಾಳೆ. ನಿಷ್ಕಲ್ಮಶ ನಗುವಿನಿಂದ ಅದರ ಮುಖ ಅರಳಿದೆ. ಮೈತುಂಬಿದ ಚೆಲುವು ನಮ್ಮನ್ನು ಆಕರ್ಷಿಸುತ್ತಿದೆ. ವರ್ಷಧಾರೆಗೆ ಭೂಮಿಯು ಹಸಿರು ಉಡುಗೆಯನ್ನು ಉಟ್ಟು ಸಂತಸ ಸಂಭ್ರಮವನ್ನು ಆಚರಿಸುತ್ತಿದೆ. ಎಲ್ಲಾ ಖಗ -ಮೃಗಗಳು ಹಚ್ಚನೆಯ ಹಸಿರಿನಿಂದ ಪುಳಕಗೊಂಡು ವಸುಂಧರೆಯನ್ನು ಕೊಂಡಾಡುತ್ತಿವೆ. ಈ ಸಂದರ್ಭದಲ್ಲಿ ಅದು ತರುಣಿಯ ರೂಪದಲ್ಲಿ ಕಂಡುಬರುತ್ತದೆ ಎಂದು ವರ್ಣಿಸಿದ್ದಾರೆ.
‘ಜಾತ್ರೆಗಳು’ ಎಂಬ ಚುಟುಕಿನಲ್ಲಿ ಜಾತ್ರೆಗಳು ಐಕ್ಯತೆಯ ಪ್ರತೀಕವಾಗಿದ್ದು ಜನರ ಉತ್ಸಾಹವನ್ನು ಚಿಮ್ಮಿಸುವ ಸಂದರ್ಭವನ್ನು ಉಂಟುಮಾಡುತ್ತವೆ ಎಂದು ವಿವರಿಸುತ್ತಾರೆ. ‘ಬಿಡಿರಪ್ಪ ಈ ಚಾಳಿ’ ಎನ್ನುವ ಚುಟುಕು ಈ ರೀತಿ ಇದೆ.
ಪರಿಸರದ ಮೇಲೆ ನರರ ದಾಳಿ
ಪ್ರಕೃತಿ ಮುನಿದು ಆಗುವಳು ಕಾಳಿ
ಪ್ರವಾಹ ಬರಗಾಲದ ಹಾವಳಿ
ಇನ್ನಾದರೂ ಬಿಡಿರಪ್ಪ ಈ ಚಾಳಿ/ ಎಂದು ಪ್ರಕೃತಿಯನ್ನು ನಾಶ ಮಾಡುತ್ತಿರುವುದರ ವಿರುದ್ಧ ನಾವು ಎಚ್ಚೆತ್ತುಕೊಳ್ಳಬೇಕಾದ ಸಂದೇಶವನ್ನು ಹೇಳುತ್ತಾರೆ. ಪ್ರಕೃತಿಯ ಒಡಲಲ್ಲಿ ಭೇದಿಸಲಾಗದಷ್ಟು ರಹಸ್ಯವಿದೆ. ಅದನ್ನು ನಾಶ ಮಾಡಹೊರಟರೆ ಮುಂದಿನ ಪೀಳಿಗೆಗೆ ಮನುಷ್ಯ ಪ್ರಕೃತಿಯ ಜೊತೆ ವಿರುದ್ಧ ದಿಕ್ಕಿನಲ್ಲಿ ಹೋರಾಡುವಂತಹ ಸಂದರ್ಭವನ್ನು ಎದುರು ಹಾಕಿಕೊಳ್ಳುತ್ತಾನೆ ಎಂದು ಎಚ್ಚರಿಸುತ್ತಾರೆ.
ಈ ಸಂಕಲನದಲ್ಲಿ ಕನಕದಾಸ, ಬೇಂದ್ರೆ, ಗುರುನಾನಕ, ಈಶ್ವರ, ಶೂಲಧರ, ಲಿಂಗರೂಪಿ, ಮಹಾತ್ಮ ಗಾಂಧೀಜಿ, ಶ್ರೀಕೃಷ್ಣ ಮೊದಲಾದವರ ಕುರಿತು ಕೆಲವು ಚುಟುಕುಗಳನ್ನು ಬರೆದಿದ್ದಾರೆ. ಶಿವರಾತ್ರಿಯ ಬಗ್ಗೆ ವಿವರಿಸುತ್ತಾ,
ಶಿವನ ಉಪಾಸನೆಗೆ ಶುಭರಾತ್ರಿ
ಅಂಧಕಾರ ನೀಗುವ ಮಹಾರಾತ್ರಿ
ಭಕ್ತಿಯಲಿ ಜಾಗರಣೆ ಅಹೋರಾತ್ರಿ
ನಿಷ್ಕಲ್ಮಶ ಮನಕೆ ಶಿವ ಹುಣ್ಣಿಮೆ ರಾತ್ರಿ/ ಎನ್ನುತ್ತಾರೆ. ಮನುಷ್ಯನ ದುಶ್ಚಟ ಬಗ್ಗೆ ಬುದ್ಧಿ ಹೇಳುವ ಕವಯಿತ್ರಿ, ದುಶ್ಚಟಗಳ ದಾಸನಾಗಬಾರದು. ಇದರಿಂದ ವಿವಿಧ ರೋಗಗಳು ಹರಡುತ್ತವೆ. ಉತ್ತಮ ಗುಣದವರ ಜೊತೆ ಸಹವಾಸ ಮಾಡಬೇಕು ಎಂದು ತಿಳಿಹೇಳುತ್ತಾರೆ.
ರೈತರು ಮತ್ತು ಭೂಮಿಯ ಬಗ್ಗೆ ಕಾಳಜಿ ಹೊಂದಿರುವ ಚುಟುಕುಗಳು ಹೀಗಿವೆ - ಭೂಮಿಗೆ ಕನ್ನ ಹಾಕಿದರೆ ಅನ್ನಕ್ಕೆ ಪರಿತಪಿಸಬೇಕಾಗುತ್ತದೆ. ನಾಡಿಗೆ ಅನ್ನ ನೀಡುವ ರೈತರ ಪರ ನಾವು ನಿಲ್ಲಬೇಕು. ಅವರ ಸಂಕಷ್ಟಗಳನ್ನು ಪರಿಹರಿಸಬೇಕು. ಶುದ್ಧ ಜಲ, ಶುದ್ಧ ಗಾಳಿ ಮತ್ತು ಪರಿಶುದ್ಧ ಮಣ್ಣು ಇವುಗಳನ್ನು ಹೊಂದಬೇಕು. ಪರಿಸರವೇ ಮಾನವನ ನಿಜ ಸಂಗಾತಿ ಎನ್ನುವುದನ್ನು ಮರೆಯಬಾರದು. ರೈತರು ನಾಡಿಗೆ ಅನ್ನ ನೀಡುವವರು. ಮಳೆ-ಚಳಿಯನು ಸಹಿಸಿ ದುಡಿಯುವವರು, ಇಳೆಯ ಹಸಿವನು ನೀಗಿಸುವವರು. ನಮ್ಮ ನೆಲ, ಜಲ, ಸಂಸ್ಕೃತಿಯನ್ನು ಉಳಿಸಲು ಪ್ರೀತಿ ಹೊಂದಬೇಕು. ನಾಡಿನ ಘನ ಚರಿತ್ರೆಯನ್ನು ಓದುವ ಮೂಲಕ ದೇಶದ ಕೀರ್ತಿಯನು ಹರಡಬೇಕೆಂದು ಮನವಿ ಮಡುತ್ತಾರೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಪ್ರಶಸ್ತಿಗಾಗಿನ ಹೋರಾಟದಲ್ಲಿ ಹಲವರು ಹಣಕೊಟ್ಟು ಪ್ರಭಾವ ಬೀರಿ ಕಿರೀಟ ಧರಿಸುತ್ತಿದ್ದಾರೆ. ಪ್ರಶಸ್ತಿಗಾಗಿ ನಮ್ಮತನವನ್ನು ಮರೆಯಬಾರದು. ಆತ್ಮ ತೃಪ್ತಿ ಕಾರ್ಯಗಳಲ್ಲಿ ಇರಬೇಕು ಶ್ರದ್ಧೆ, ನಿಷ್ಠೆ ಎಂದು ಹೇಳುತ್ತಾರೆ. ಆಸೆಗಳಿಗೆ ಮಿತಿ ಇಲ್ಲ. ಇದಕ್ಕಾಗಿ ಕಂಡದ್ದನ್ನೆಲ್ಲ ಪಡೆಯುವ ಆತುರದಲ್ಲಿ ಅನಾಹುತಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನು ಈ ಕೆಳಗಿನ ಚುಟುಕು ಮೂಲಕ ವಿವರಿಸಿದ್ದಾರೆ.
ಯುದ್ಧ ನಡೆದಿದೆ ಮನದಲ್ಲಿ/ ಬೇಕು ಬೇಡಗಳ ನಡುವಲಿ
ಬೇಕುಗಳ ದಯೆ ಪಾರಮ್ಯವಿಲ್ಲಿ
ಕಂಡದ್ದೆಲ್ಲ ಪಡೆಯುವ ಆಸೆಯಲಿ
ಎನ್ನುತ್ತಾ, ಇನ್ನೊಂದು ಚುಟುಕಿನಲ್ಲಿ ಮನಸ್ಸಿನಲ್ಲಿ ದ್ವೇಷವನ್ನು ತುಂಬಿಕೊಂಡು ಸಮಾಜಕ್ಕೆ ಅದನ್ನು ಹರಡಬಾರದು. ದ್ವೇಷ ವಿಷವಿದ್ದಂತೆ. ಅದು ಕಚ್ಚುವ ಜಂತುವಾಗಿದೆ ಎನ್ನುವರಲ್ಲದೆ, ಭಯ, ಸಿಟ್ಟು, ಕೀಳರಿಮೆ, ಸೋಮಾರಿತನವನ್ನು ಬಿಟ್ಟು ಮನುಷ್ಯ ಒಳ್ಳೆಯವರನ್ನು ಅನುಸರಿಸಬೇಕು. ಪರದೇಶ, ಹೊರದೇಶ ಯಾವುದಾದರೂ, ಎಲ್ಲಿದ್ದರೂ ನಾನು ಭಾರತೀಯನು ಎನ್ನುವುದನ್ನು ಮರೆಯಬಾರದು. ತಾಯಿನಾಡಿನ ಋಣವನ್ನು ತೀರಿಸಲಾಗದು ಎನ್ನುತ್ತಾರೆ.
-ದತ್ತಾತ್ರೇಯ ಹೆಗಡೆ

Comments
Post a Comment