ನೆಮ್ಮದಿಯ ಬದುಕಿಗೆ  


ಚಿಂತೆ ಬಿಡಿ ಚಿಲ್ ಮಾಡಿ


 ‘ಚಿಂತೆ ಬಿಡಿ ಚಿಲ್ ಮಾಡಿ’  ಇದು ಸ್ಫೂರ್ತಿದಾಯಕ ಬರಹಗಳ ಸರಳ ಕೃತಿ. ತೀರ್ಥಹಳ್ಳಿ  ಸಮೀಪದ  ಕೋಣಂದೂರಿನವರದಾದ ಶ್ವೇತಾ ಭಿಡೆ  ಅವರ ಮೊದಲ ಕೃತಿ. ಅತ್ಯಂತ  ಅವಶ್ಯ ವಿಷಯಗಳನ್ನು ಒಳಗೊಂಡ ಈ ಕೃತಿಯು ನಮ್ಮ ಜೀವನ ಪದ್ಧತಿಯನ್ನು ಮತ್ತು ಮನೋಭಾವವನ್ನು ಬದಲಾಯಿಸಿಕೊಳ್ಳಬಹುದಾದ ವಿಷಯಗಳನ್ನು ಹೊಂದಿದೆ. ಇಲ್ಲಿ ಅಳವಡಿಸಿಕೊಳ್ಳಬಹುದಾದ, ಚಿಂತನೆಗೆ ಹಚ್ಚಬಹುದಾದ ಸಾಲುಗಳಿವೆ. ನಮ್ಮನ್ನೇ ನಾವು ನೋಡಿಕೊಂಡು, ಕೇಳಿಕೊಳ್ಳುವ ಅನೇಕ ಪ್ರಶ್ನೆಗಳಿಗೆ, ಬೇರೆ ಹೊಳಹುಗಳಿಗೆ ಅತ್ಯಂತ ಸರಳ  ಉತ್ತರವಿದೆ. 

‘ನೀನೇನಾಗಬೇಕು, ಅದನ್ನು  ನಿರ್ಧರಿಸುವುದು ನಿನ್ನ ಕೈಲಿದೆ. ಎಲ್ಲವನ್ನೂ ನಿಧಾನಕ್ಕೆ ಕಲಿ’ ಎಂಬ ಮಾತಿದೆ. ಈ ಬದುಕು ನೋವು, ನಲಿವು, ವಿಸ್ಮಯ, ಹತಾಶೆ, ಸಂಭ್ರಮ, ಸಂಕಟಗಳ ಗೂಡು. ಜಗತ್ತೆಂಬ ಮಾರುಕಟ್ಟೆಯೊಳಗೆ ಖಾಲಿ ಕೈಚೀಲ ಹಿಡಿದುಕೊಂಡು ಹೊರಟಾಗ ಯಾವುದು ನಮಗೆ ಬೇಕು, ಎಷ್ಟು ಬೇಕು ಎಂದರಿತು ಖರೀದಿಸುವ ವಿಚಾರ ನಮಗೆ ಗೊತ್ತಿರಬೇಕು.  ನೋವು, ಸಂಕಟ, ದುಃಖ ಬಿಟ್ಟು ಕೇವಲ ಸಂತಸ, ನೆಮ್ಮದಿಯನ್ನಷ್ಟೇ ತರಲಾಗುವುದಿಲ್ಲ.  ಆದರೆ ಅವನ್ನೆಲ್ಲ ಹೇಗೆ ದೂರೀಕರಿಸಿ ನೆಮ್ಮದಿಯ ಪಾಲನ್ನು ಹೆಚ್ಚಾಗಿ ತರಬೇಕೆನ್ನುವುದು ಗೊತ್ತಿರಬೇಕು. ಇದರ ಮೇಲೆ ನಮ್ಮ ಸಂತೋಷ ಅಡಗಿರುತ್ತದೆ.

  ಚಿಂತೆ, ನೋವು ಎಲ್ಲರಿಗೂ ಇರುತ್ತದೆ. ಅದನ್ನು ಎದುರಿಸಿ, ಸ್ವೀಕರಿಸಿ, ನೆಮ್ಮದಿಯಿಂದ ಬದುಕುವುದು ಹೇಗೆ ಎನ್ನುವ ಹುಡುಕಾಟಕ್ಕೆ ಪ್ರಸ್ತುತ ಕೃತಿಯಲ್ಲಿ ನಮ್ಮ ಪ್ರಶ್ನೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬಹುದು. ಕಷ್ಟ ಎಂದು ಒದ್ದಾಡಿಕೊಂಡು ಜೀವನ ಮಾಡುತ್ತಿರುವವರು ಅದರಿಂದ ಮುಕ್ತಿಗೊಳ್ಳಲು ಈ ಕೃತಿಯು ಸಹಕಾರವಾಗಬಲ್ಲದು. ಪ್ರಸ್ತುತ ಕೃತಿಯಲ್ಲಿ ೬೦ ಕಿರುಬರಹಗಳಿವೆ. ಇವೆಲ್ಲವೂ ಸೋದಾಹರಣವಾಗಿ ವಿವರಿಸಲ್ಪಟ್ಟಿವೆ, ಅಂತ್ಯದಲ್ಲ್ಲಿ ನಾವೇನು ಮಾಡಬೇಕೆಂಬುದನ್ನು ಕಟ್ಟಿಕೊಟ್ಟಿದ್ದಾರೆ.  

 ಇಲ್ಲಿನ ಬರಹಗಳೆಳಲ್ಲ ನಮ್ಮನ್ನು ಹುರಿದುಂಬಿಸುವಂತಹವು. ನಮ್ಮ ಜೀವನಕ್ಕೆ ಹೋಲಿಸಿಕೊಂಡು ನೋಡಿಕೊಂಡರೆ ಸಾಕು. ಎಷ್ಟೋ ಬದಲಾವಣೆ ತಂದುಕೊಳ್ಳಬಹುದು. ಜೊತೆಗೆ ಸಣ್ಣ ಕಥೆ, ಸ್ಫೂರ್ತಿದಾಯಕ ಸಾಲು, ಸುಭಾಷಿತದ ಸಾಲನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಇವೆಲ್ಲ ನಮ್ಮನ್ನು ಪ್ರೇರೇಪಿಸಿಬಲ್ಲವು.  ವಾಸ್ತವದ ಬದುಕಿಗೆ ನಿಜಕ್ಕೂ ಇಲ್ಲಿನ ವಿಚಾರಧಾರೆಗಳು ಮಾರ್ಗದರ್ಶಿಯಾಗಿವೆ.   


ಕೃತಿಯಲ್ಲಿರುವಂತೆ ಕೆಲವು ಸಿಂಪಲ್ ಸಲಹೆಗಳು:

 

* ನೋವು, ಚಿಂತೆ, ಕಷ್ಟ ಎದುರಾದಾಗ ನಾವು  ಸುಖ, ಸಂತೋಷ, ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಆದರೆ ಅವೇ ನೋವು, ಚಿಂತೆ, ಕಷ್ಟವನ್ನು ದೂರೀಕರಿಸುವುದು ಹೇಗೆ ಎನ್ನುವುದನ್ನು ಕಲಿಸುತ್ತವೆ.

* ಮನುಷ್ಯನ ಕ್ರಿಯೆಯನ್ನು ಸಾಧನೆಯನ್ನಾಗಿ ಬದಲಾಯಿಸುವ ಪವರ್ ಫುಲ್ ಆಯುಧವೆಂದರೆ ಮನಃಸ್ಥಿತಿ. ಇದು ಅರ್ಥವಾದರೆ ಗೆಲುವೆಲ್ಲಾ ನಮ್ಮದೇ.

 *ಪ್ರಾರ್ಥನೆಯಿಂದ ಫಲವೇನು ಎನ್ನುವುದು ಹಲವರ ಪ್ರಶ್ನೆ ಇರಬಹುದು. ನಕಾರಾತ್ಮಕ ಭಾವನೆ ನಮ್ಮನ್ನಾವರಿಸಿದಾಗ ಸೋಲು ಕಂಗೆಡಿಸುತ್ತದೆ. ನಮ್ಮ ಸಾಮರ್ಥ್ಯವನ್ನು ಮರೆಯದೆ ಹುಮ್ಮಸ್ಸಿನಿಂದ ಕೆಲಸ ಮಾಡಿದರೆ ಧೈರ್ಯ ಬರುತ್ತದೆ. ಪ್ರಾರ್ಥನೆ ಒಂದು ಸಣ್ಣ ನಂಬಿಕೆ. ಇದರ ಮೇಲೆ ವಿಶ್ವ್ವಾಸವಿಟ್ಟಾಗ  ಹಿಂದಿರುಗಿ ನೋಡುವ ಅವಶ್ಯಕತೆ ಇಲ್ಲ. 

 * ದೇವರು ಯಾರನ್ನೂ ಹುಡುಕಿ ಕಷ್ಟವನ್ನು ನೀಡುವುದಿಲ್ಲ. ಕಷ್ಟ ಪರಿಹಾರದ ನಿಟ್ಟಿನಲ್ಲಿ ಪ್ರಯತ್ನಿಸದೆ ಇರುವುದು, ಜೊತೆಗಿರುವವರನ್ನು ಮತ್ತು ದೇವರನ್ನು ದೂಷಿಸುತ್ತಾ ಉಳಿದರೆ ಲಾಭವಿಲ್ಲ. ಗೆಲುವಿಗೆ ಬೇಕಾದ ರೀತಿ, ಜಾಣ್ಮೆಯನ್ನು ನಾವು ರೂಪಿಸಿಕೊಳ್ಳಬೇಕು.   

  * ಸಂಬಂಧಗಳಲ್ಲಿ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಲು ತಾಳ್ಮೆ, ಜ್ಞಾನ, ಸಹನೆ, ಇದ್ದರೆ ಸಾಕು. ಬೇರೆ ಏನೂ ಬೇಡ.

* ನಮ್ಮ ಬದುಕಿನಲ್ಲಿ ಸಂತೋಷ ಅಗತ್ಯ. ಅನಗತ್ಯವಾದದ್ದನ್ನು  ಅಥವಾ ಬೇಡದ ಚಿಂತೆಗಳನ್ನು ದೊಡ್ಡದು ಮಾಡಿಕೊಂಡು ನೆಮ್ಮದಿ, ಸುಖ, ಸಂತೋಷದ ಮೂಲವನ್ನು ಮರೆತುಬಿಡುತ್ತೇವೆ. ಅನಗತ್ಯ ಸ್ಪರ್ಧೆಗೆ ಇಳಿಯುತ್ತೇವೆ. ಇದು ಆಗಬಾರದು.

* ನಮ್ಮ ಖುಷಿಗೆ ಏನು ಬೇಕು ಅದನ್ನು ಮಾಡಿದರೆ ಚಿಂತೆಯಿಂದ ದೂರ ಇರಬಹುದು. ಅದು ಪ್ರೀತಿ ಇರಬಹುದು, ಪ್ರೇಮವೇ ಇರಬಹುದು.

* ನಮ್ಮನ್ನು ನಂಬಿದವರು, ಆತ್ಮೀಯರಿಗೆ ಸಮಯ ಕೊಡಬೇಕು. ಇಲ್ಲದೇ ಹೋದಲ್ಲಿ ಎಲ್ಲವೂ ಇದ್ದು ನೆಮ್ಮದಿ ಮಾತ್ರ ಇರುವುದಿಲ್ಲ. ಈ ನೆಮ್ಮದಿ ಗುರಿಯನ್ನು ಸಾಧಿಸಲು ಬೇಕಾಗುತ್ತದೆ.

* ಚಂಚಲತೆಯು ಎಲ್ಲವನ್ನೂ ಹಾಳು ಮಾಡುತ್ತದೆ. ಅತಿಯಾದ ಆತ್ಮವಿಶ್ವಾಸ ನಮ್ಮನ್ನು ದಾರಿ ತಪ್ಪಿಸಿಬಿಡುತ್ತದೆ. ಅತಿಯಾಗಿ ಚಿಂತಿಸದೆ ಏಕಾಗ್ರತೆ ಮಾಡಬೇಕು. ಸಂತೋಷದ ಕೀಲಿ ಕೈ ಪಡೆಯಲು ಹೆಚ್ಚು ಕಷ್ಟ ಪಡಬೇಕಿಲ್ಲ. ಸಹಾಯ ಪಡೆದವರೆಲ್ಲ ತಿರುಗಿ ಸಹಾಯ ಮಾಡಲೇಬೇಕು ಎನ್ನುವ ಯೋಚನೆ ಸಲ್ಲದು. ಅವರು ಅಪಕಾರ ಮಾಡಿದರೂ ನಾವು ಅವರ ಬಗ್ಗೆ ಚಿಂತೆ ಮಾಡಬಾರದು. ಇಲ್ಲಸಲ್ಲದ ನೋವನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ನಾವು ಹೇಗೆ ಖುಷಿಯಾಗಿರಬೇಕೋ ಹಾಗೆ ಇದ್ದರೆ ನೆಮ್ಮದಿಗೆ ದಾರಿ ಇದೆ.

* ನಮ್ಮಲ್ಲಿನ ನಕಾರಾತ್ಮಕ ಬದಲಾವಣೆಗಳನ್ನು ದೂರೀಕರಿಸಿದರೆ ನಮ್ಮ ಪ್ರಯತ್ನಗಳಿಗೆ ಅರ್ಥವಿರುತ್ತದೆ. ಯಾರು ಒಪ್ಪಲಿ ಬಿಡಲಿ, ತಾಳ್ಮೆಯಿಂದ ಕೆಲಸ ಮಾಡಿದರೆ ಪ್ರತಿಫಲ ಸಿಗುತ್ತದೆ. ನಮ್ಮ ಉದ್ದೇಶಗಳನ್ನು ಗಂಭೀರವಾಗಿ ಚಿಂತಿಸಬೇಕು. ಆದರೆ ಎಷ್ಟರಮಟ್ಟಿಗೆ ಎನ್ನುವ ಮಿತಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಜೀವನವೇ ಗಂಭೀರವಾಗಿ, ಇರುವ ನೆಮ್ಮದಿಯೂ ನಾಶವಾಗಿ ಬಿಡುತ್ತದೆ.

* ನಾವು ಬಿಳಿ ಪಾರಿವಾಳದಂತೆ ಇರುತ್ತೇವೆ. ಆದರೆ ಗೊತ್ತಿಲ್ಲದೆ ಕಾಗೆ ಗುಣ ಬಂದುಬಿಡುತ್ತದೆ. ಕಂಡವರನ್ನೆಲ್ಲ ದ್ವೇಷಿಸುತ್ತೇವೆ. ತಾಳ್ಮೆಯನ್ನು ಹಾಳು ಮಾಡಿಕೊಂಡು ಮೌಲ್ಯವನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ನಾವು ತಾಳ್ಮೆಯ ಜಾಣ ಪಾರಿವಾಳಗಳಾಗಬೇಕಾ ಅಥವಾ ಹೊಟ್ಟೆ ಉರಿಯ ಕಾಗೆಯಾಗಬೇಕೇ ಎನ್ನುವ ಆಯ್ಕೆಯನ್ನು ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.

*  ನಿಮ್ಮ ಮಾತುಗಳನ್ನು ಕೇಳಲು ಮನಸ್ಸು ಬಿಚ್ಚಿ ಮಾತಾಡಿ. ಹಗುರವಾಗಲು ಸಂಗಾತಿಯೊಬ್ಬರು ಇರಬೇಕು. ಮತ್ತವರು ನೆಮ್ಮದಿಯ ಭಾಗವಾಗಿರಬೇಕು. ಅಂತವರನ್ನು ಕಳೆದುಕೊಳ್ಳಬಾರದು. ಅವರನ್ನು ಕಂಡ ಕೂಡಲೇ ಮಾತಾಡಿ ಹಗುರವಾಗಬೇಕು.

* ನಾವು ನಮಗಾಗಿಯೇ ಜೀವಿಸಬೇಕು. ಆಸೆಗಳ ಬೆನ್ನು ಹತ್ತಿ ಹೋಗಬಾರದು. ನಮ್ಮನ್ನು ರಿಚಾರ್ಜ್ ಮಾಡಿಕೊಳ್ಳದೆ ಕೆಲಸ ಮಾಡಿದರೆ ನೆಮ್ಮದಿ ಇರುವುದಿಲ್ಲ.  * ಅತಿಯಾದರೆ ಅಮೃತವು ವಿಷ ಎನ್ನುವ ಮಾತಿದೆ. ಹಾಗೆಯೇ ಅತಿಯಾದ ಚಿಂತೆ ಕೂಡ ಒಳ್ಳೆಯದಲ್ಲ. ನಿಯಂತ್ರಣಕ್ಕೆ ಸಿಗದೆ ಯೋಚನೆಗಳ ಮಧ್ಯೆ ಕಳೆದು ಹೋಗುತ್ತಿದ್ದರೆ ಅದನ್ನು ನಿಗ್ರಹಿಸಬೇಕು. ಇವು ಹೊಸ ಕಲಿಕೆಯನ್ನು, ಹೊಸ ಹೊಳಹನ್ನು ಹುಟ್ಟ್ಟು ಹಾಕಿ ನಮ್ಮನ್ನು ಜೀವಂತವಾಗಿ ಇಡುತ್ತವೆ.

* ಕಳೆದು ಹೋಗುವ ಮೊದಲು ಎಚ್ಚೆತ್ತುಕೊಳ್ಳಬೇಕು. ಇಲ್ಲಸಲ್ಲದ ವಿಷಯಗಳಿಗೆ ಖಿನ್ನತೆ ಆವರಿಸುವಂತೆ ಮಾಡಿಕೊಳ್ಳಬಾರದು. ನಮ್ಮ ಸಂತೋಷಕ್ಕೆ ಬೇಲಿ ಹಾಕಿಕೊಳ್ಳಬಾರದು. ಸಣ್ಣ ಸಂತೋಷವನ್ನು ಹುಡುಕಿಕೊಂಡರೆ ಅದು ಊರಿನ ಬಾಗಿಲನ್ನು ತೆಗೆಯಬಹುದು.

* ಯಾವುದೇ ಸಂಬಂಧ, ಆತ್ಮೀಯತೆಯಲ್ಲಿ ಅವರು ನಮ್ಮ ಹಾಗೆ ಇರಬೇಕು ಎನ್ನುವುದನ್ನು ಬಯಸಬಾರದು. ಏಕೆಂದರೆ ಯಾರೂ ನಮ್ಮಂತೆ ಇರಲು ಸಾಧ್ಯವಿಲ್ಲ. ನಮ್ಮ ನಲಿವಿಗೆ, ನೋವಿಗೆ, ಸಂಭ್ರಮಕ್ಕೆ ಜೊತೆಯಾಗುವವರನ್ನು ನಾವು ಹುಡುಕಿಕೊಳ್ಳಬೇಕು.

* ಯಾವುದನ್ನೇ ಮಾಡಿ. ಪೂರ್ಣ ನಂಬಿಕೆಯಿಂದ, ಖುಷಿಯಿಂದ ಮಾಡಿದಾಗ ಅದರ ಫಲ ಒಳ್ಳೆಯದೇ ಆಗಿರುತ್ತದೆ. ನಕಾರಾತ್ಮಕ ಭಾವನೆಯಿಂದ ಏನೇ ಮಾಡಿದರೂ ಫಲಿತಾಂಶ ಅದೇ ಆಗಿರುತ್ತದೆ. ಭಯ, ಒತ್ತಡವೇ ಹೆಚ್ಚು ಅಪಾಯಕಾರಿ, 

* ಚಿಂತೆಯನ್ನು ಬಿಡಿ. ಜೀವನವನ್ನು ನರಕ ಮಾಡಿಕೊಳ್ಳದೆ ನೆಮ್ಮದಿಯಿಂದ ಬದುಕಬೇಕು. ಇದರಿಂದ ಸಾವಿರ ಸೋಲಿನ ಅವಮಾನದ ಭಯವನ್ನು ದೂರೀಕರಿಸಬಹುದು.

* ನಮ್ಮ ಮೂಗಿನ ನೇರದ ವಿಚಾರ,ವರ್ತನೆಗಳನ್ನು ಇನ್ನೊಬ್ಬರ ಮೇಲೆ ಹೇರಬಾರದು. ಇನ್ನೊಬ್ಬರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಕನಿಷ್ಠ ಕೇಳುವ ಪ್ರಯತ್ನವನ್ನಾದರೂ ಮಾಡಬೇಕು. ಸಂಬಂಧವಷ್ಟೇ ಅಲ್ಲ, ಬದುಕನ್ನು ಸಹ ಹಾಳಾಗದಂತೆ ನೋಡಿಕೊಳ್ಳಬೇಕು. ಆಗ ಮನಸ್ಸು ಅರಳಿ ನಗು ಮೂಡುತ್ತದೆ. 

* ಮನುಷ್ಯನಿಗೆ ಏಕಾಗ್ರತೆ ಮತ್ತು ನಿಯಂತ್ರಣದ ಅಗತ್ಯವಿದೆ. ಅದನ್ನು ಕಲಿತರೆ ನಮ್ಮದೇ ಗುರಿಯತ್ತ ಹೋಗಬಹುದು.

* ಹಣಕಾಸಿನ ವಿಚಾರ ನಮ್ಮ ಬದುಕನ್ನು ಹಾಳು ಮಾಡುತ್ತಿದ್ದರೆ ಅದನ್ನು ಸರಿ ಮಾಡಿಕೊಳ್ಳಬೇಕು. ಹಣಕಾಸು ವಿಷಯದಲ್ಲಿ ಕನಿಷ್ಠ ಶಿಸ್ತು ಇರಬೇಕು. ಹೆಚ್ಚು ಆಸೆಗಳಿದ್ದರೆ ಅದನ್ನು ಪೂರೈಸಲು ಬೇಕಾದ ಹಣವನ್ನು ದುಡಿಯುವ ಮಾರ್ಗವನ್ನು ಕಂಡುಕೊಳ್ಳಬೇಕು. ಸಣ್ಣ ಶಿಸ್ತಿನ ಅನುಸರಣೆ ಜೀವನದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ.

 * ಸತ್ಯದ ವಿಚಾರಗಳನ್ನು ತಲೆಗೆ ಹಾಕಿಕೊಳ್ಳದೆ ಗುರಿಯನ್ನು ಅಷ್ಟೇ ಮುಂದೆ ಇಟ್ಟುಕೊಂಡು ನಡೆದರೆ ಗುರಿ ಮುಟ್ಟುವುದು ಕಠಿಣವೇನಲ್ಲ

* ಭ್ರಮೆಯಿಂದ ನಮ್ಮತನವನ್ನು ಕಳೆದುಕೊಳ್ಳುತ್ತೇವೆ. ಒಮ್ಮೆ ಅದರಿಂದ ಹೊರಬಂದು ನೋಡಿ. ನಿಮ್ಮ ಅಗತ್ಯತೆ, ಸಾಧ್ಯತೆಗೆ ಸರಿಯಾಗಿ ಇರುವುದನ್ನು ಕಲಿಯಿರಿ. ಇದರಿಂದ ನಿರಾಳವಾಗಿರಲು ಸಾಧ್ಯ.

*ಕೆಲಸವನ್ನು ಮಾಡಲೇಬೇಕೆಂಬ ಹಠ ಮತ್ತು ಛಲ ಮುಖ್ಯ. ಇದನ್ನು ಅಳವಡಿಸಿಕೊಂಡಲ್ಲಿ ನಾವಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನೇ ಸಾಧಿಸಬಹುದು.

* ಕಹಿಯನ್ನು ಮರೆಯಲು ಹೊಸ ಬದುಕಿನತ್ತ ಪ್ರಯಾಣ ಮಾಡಿ, ನಿಚ್ಚಳವಾದ ಬದುಕನ್ನು ಕಟ್ಟಿಕೊಳ್ಳಲು ಭ್ರಮೆಗಳು ಸಹಾಯ ಮಾಡಲಾರವು.  

*ನೋವು ಮತ್ತು ಕಾಡುವ ಹಳೆಯ ನೆನೆಪಿಗೆ ಗೇಟ್ ಪಾಸ್ ಕೊಡಿ. ಇಲ್ಲದಿದ್ದರೆ ಅವು ನಿಮ್ಮ ಸುಖವನ್ನು ಕಸಿದುಕೊಂಡು ಮನಸ್ಸಿನೊಳಗೆ ಈಸಿ ಚೇರ್ ಹಾಕಿಕೊಂಡು ಕುಳಿತುಬಿಡುತ್ತವೆ. 

* ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಪುಸ್ತಕ ಓದಿದರೆ, ಭಾಷಣ ಕೇಳಿದರೆ ಸಾಲದು. ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು, ಹೇಗೆ ಬದಲಾಯಿಸಿಕೊಳ್ಳಬೇಕು ಎನ್ನುವುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಮೊಂಡುಬುದ್ಧಿ ಬಿಟ್ಟರೆ ಬದಲಾವಣೆ ಸಾಧ್ಯ. 

-ದತ್ತಾತ್ರೇಯ ಹೆಗಡೆ 


Comments

Popular posts from this blog