ನೆನಪುಗಳ ಉಯ್ಯಾಲೆಯ
‘ಬೊಗಸೆಗಿಷ್ಟು ಪಾರಿಜಾತ’
ಲೇಖಕಿ ಎಸ್ ಪಿ ವಿಜಯಲಕ್ಷ್ಮಿ ಅವರ ಅನುಭವಗಳ ಲಹರಿಯ ಕೃತಿ ‘ಬೊಗಸೆಗಿಷ್ಟು ಪಾರಿಜಾತ’. ಇದು ಬಿಡಿ ಬರಹಗಳ ಸಂಗ್ರಹದ ಸಂಕಲನ. ಲೇಖಕಿ ಮೂಲತಃ ಚಿಕ್ಕಮಗಳೂರು ಜಿಲ್ಲೆ ಎನ್. ಆರ್. ಪುರದವರಾಗಿದ್ದು ತಮ್ಮ ಬಾಲ್ಯದ ಜೀವನವನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಪ್ರದೇಶದ ಜನಜೀವನ, ರೀತಿ- ನೀತಿ, ಸಂಪ್ರದಾಯ, ಪದ್ಧತಿ, ಧಾರ್ಮಿಕ ಆಚರಣೆ, ವೈವಿಧ್ಯಮಯ ತಿಂಡಿ- ತಿನಿಸು, ಊಟ ಮುಂತಾದವುಗಳನ್ನು ಮನೋಹರವಾಗಿ ಚಿತ್ರಿಸಿದ್ದಾರೆ. ಜೊತೆಗೆ ದೆಹಲಿ ಮತ್ತು ಜರ್ಮನಿಗೆ ತಾವು ಹಲವು ಬಾರಿ ಭೇಟಿ ಕೊಟ್ಟಿದ್ದನ್ನು, ಅಲ್ಲಿನ ನೆನಪುಗಳ ಸಂಗಡ ನಮಗೆ ಉಣಬಡಿಸಿದ್ದಾರೆ.
ಕೃತಿಯಲ್ಲಿ ವಾಸ್ತವ, ಅನುಭವ, ಲಹರಿ, ತಮಾಷೆ, ಒಂದಷ್ಟು ಮುದವಿದೆ. ವಿವಿಧ ಜಾತಿಯ ಹೂಗಳನ್ನು ಸೇರಿಸಿ ಒಂದು ಸುಂದರಮಾಲೆಯನ್ನು ತಯಾರಿಸಿದಂತೆ ವಿವಿಧ ಅನುಭವಗಳನ್ನು ಮಿಳಿತಗೊಳಿಸಿದ ಬರಹಗಳು ಇವು. ವಸ್ತುಗಳು, ಭಾವನೆಗಳು ಇದರಲ್ಲಿವೆ. ತೂಗುಮಂಚದಲ್ಲಿ ತಂಗಾಳಿ ಸುಳಿದಂತೆ ಮೆಲ್ಲಗೆ ತೂಗುವಂತಹ ಬರಹಗಳು ಇವು. ಗಂಭೀರ ವಿಷಯ ಇಲ್ಲವಾದರೂ ಟೈಂಪಾಸ್ ಕಡ್ಲೆಕಾಯಿಯಂತೆ ಬಾಯಾಡಿಸಿ, ಅಲ್ಲಲ್ಲಿ ಕಣ್ಣಾಡಿಸಿ, ಸವಿಯಬಹುದು ಎನ್ನುವುದನ್ನು ಸ್ವತಃ ಲೇಖಕಿಯೇ ಇಲ್ಲಿ ಹೇಳುತ್ತಾರೆ.
ಹುಟ್ಟೂರಿನ ಚಿತ್ರಣವನ್ನು ಕಟ್ಟಿಕೊಡುತ್ತಾ, ಬಾಲ್ಯದಲ್ಲಿ ಕೇರಿಯ ಸಹಪಾಠಿಗಳೊಂದಿಗೆ ಕುಂಟೆ ಬಿಲ್ಲೆ, ಚೆನ್ನೆ ಮಣೆ ಮೊದಲಾದ ಆಟ, ಹಾದಿ -ಬೀದಿ -ಕಾಡು- ತೋಟ ಸುತ್ತಾಟ, ಶಾಲೆಯ ಸರಸ್ವತಿ ಪೂಜೆಯ ಸಂಭ್ರಮ, ಕಂಪಿನ ಸುರಗಿ ಮತ್ತು ಸೀತಾಳೆ ದಂಡೆಯ ಮಾಲೆ, ದೀಪೋತ್ಸವ, ಪಾಯಸದ ಊಟ... ಮೊದಲಾದ ಎಂದೆಂದೂ ಮಾಸದ ಚೇತೋಹಾರಿ ವಿಷಯಗಳನ್ನು ವಿವರಿಸಿದ್ದಾರೆ ಮಲೆನಾಡಿನ ಊಟದ ಬಗ್ಗೆ ವಿವರಿಸುತ್ತಾ, ಇಲ್ಲಿನ ಊಟ ತುಂಬಾ ಆರೋಗ್ಯಕರವಾದದ್ದು. ಹಿತ್ತಲ ಅಂಗಳಕ್ಕೆ ಹೋದರೆ ಸಾಕು, ವಿವಿಧ ರೀತಿಯ ತರಕಾರಿಗಳು, ಸೊಪ್ಪುಗಳು ಆರೋಗ್ಯ ಮಿತ್ರನಂತೆ ಬೆಳೆಯುವುದರಿಂದ ಯಾವ ಬಗೆಯ ಸಮಸ್ಯೆಯೂ ಅಡುಗೆ ಪದಾರ್ಥಕ್ಕೆ ಎದುರಾಗುತ್ತಿರಲಿಲ್ಲ. ಬೇಲಿಗೆ ತಾವೇ ಬೆಳೆದು , ಹಬ್ಬಿ ಬಿಡುವ ಹಾಗಲ, ತೊಂಡೆ, ಬೂದುಗುಂಬಳ, ಸಿಹಿಗುಂಬಳ, ಬಣ್ಣದಸವತೆ, ಸೀಮೆ ಬದನೆಕಾಯಿ ಮೊದಲಾದುವುದು ಜೋತು, ಜಗ್ಗಿ ಬೀಳುವುದನ್ನು ನೋಡುವುದೇ ಒಂದು ಸಂಭ್ರಮ. ಅವುಗಳನ್ನು ಕೊಯ್ದು ಅಡುಗೆ ಮನೆಯಲ್ಲಿ ಅಥವಾ ಕೋಣೆಯಲ್ಲಿ ಕಟ್ಟಿ ನೇತು ಹಾಕುವುದು, ವರ್ಷಗಟ್ಟಲೆ ಅವುಗಳನ್ನು ಕಾಪಾಡಿಕೊಳ್ಳುವುದು, ಹುರಳಿಕಟ್ಟು ಸಾರು, ಹಲಸಿನಕಾಯಿ ಗೊಜ್ಜು, ಮಾವಿನ ಸೀಜನ್‌ನ ಸೀಕರಣೆಯಂತಹ ಪದಾರ್ಥ ಇನ್ನೊಂದಿಲ್ಲ. ಅನ್ನದೊಂದಿಗೆ ಹೊಂದಿಕೊಳ್ಳುವ ಈ ಗೊಜ್ಜುಗಳು ಪ್ರೇಮಿಯ ಪ್ರೇಯಸಿ ಇದ್ದಂತೆ ಎಂದು ವರ್ಣಿಸಿದ್ದಾರೆ.
ಹೂ ಗಿಡಗಳು, ವಿಶೇಷವಾಗಿ ಸುರಗಿ ಹೂವಿನ ಮಾಲೆ ಮನೆಯ ಹೆಣ್ಣು ಮಕ್ಕಳನ್ನು ಕಾಡುತ್ತಿತ್ತು. ದಂಡೆಯಾಗಿ ಅವುಗಳನ್ನು ಕಟ್ಟಿ ಹೆಣ್ಣು ಮಕ್ಕಳು ಮುಡಿದುಕೊಳ್ಳುತ್ತಿದ್ದನ್ನು ಸ್ಮರಿಸುವ ಲೇಖಕಿ, ಹಲಸು, ನೇರಳೆ, ಕಲ್ಲು ಸಂಪಿಗೆ, ಮಜ್ಜಿಗೆಹಣ್ಣು... ಇಂತಹ ಅತಿ ಅಪರೂಪದ ಹಣ್ಣುಗಳು ಇಂದು ಬಹುತೇಕ ಎಲ್ಲೂ ಕಾಣುತ್ತಿಲ್ಲ. ಇವುಗಳ ರುಚಿಯನ್ನು ತಿಂದವನೇ ಬಲ್ಲ. ಇಲ್ಲಿನ ದೇವಸ್ಥಾನಗಳು ಮತ್ತು ದೀಪಾವಳಿ, ಗಣೇಶ ಚತುರ್ಥಿ, ದಸರಾ ಹಬ್ಬಗಳು, ಆಗ ಮಕ್ಕಳ, ಜನರ ಸಂಭ್ರಮ ವೈಭವದ್ದಾಗಿತ್ತೆನ್ನುವುದನ್ನು ವಿವರಿಸುತ್ತಾರೆ
ದಿಲ್ಲಿಯ ದಿನಗಳು
ದಿಲ್ಲಿ ಹೆಚ್ಚು ಬೆರಗು ಹುಟ್ಟಿಸುವಂತದ್ದು. ದಿಲ್ಲಿ ಎಂದಾಕ್ಷಣ ದಿಲ್ ಹೂವಿನಂತೆ ಅರಳುತ್ತದೆ. ಕುತುಬ್ ಮಿನಾರ್ ಒಂದು ಚಾರಿತ್ರಿಕ ಕಟ್ಟಡ. ಹಿಂದು- ಇಸ್ಲಾಮಿಕ್ ಶೈಲಿಯಲ್ಲಿ ರಚನೆಯಾದ, ೮೦೦ ವರ್ಷಗಳ ಹಿಂದಿನ ಭವ್ಯ ಸ್ಮಾರಕ. ಇದರ ಬಗ್ಗೆ ಬರೆಯುವುದಕ್ಕಿಂತ ನೋಡಿ ಆನಂದಿಸಬೇಕು. ರಾತ್ರಿಯಲ್ಲಿ ದೆಹಲಿಯನ್ನು ನೋಡುವುದೇ ಒಂದು ವೈಭವ. ದಸರಾದಲ್ಲಿ ಎತ್ತರದ ಮೂರ್ತಿಗಳು, ಅಲಂಕಾರ, ದೇವಿಯ ತೇಜಸ್ಸು, ಹಬ್ಬದ ವಾತಾವರಣ ಮುದನೀಡುವಮತದ್ದು. ದಾಂಡಿಯಾದ ಹೆಜ್ಜೆಗಳು ಮನಸೋಲುವಂತೆ ಮಾಡುತ್ತವೆ. ತಾಜ್‌ಮಹಲ್ ಇದೊಂದು ಪ್ರೇಮಕಥೆಯ ಸ್ಮಾರಕ. ಯಾವ ವಯೋಮಾನದವರೇ ಆಗಲಿ, ಮೊದಲ ಬಾರಿಗೆ ಅಲ್ಲಿ ನಿಂತರೆ ಎದೆಯಲ್ಲಿ ಪ್ರೀತಿ ಹರಿದಾಡುತ್ತದೆ. ಪ್ರಣಯ ದೀಪವನ್ನು ಇಲ್ಲಿ ಕಾಣಬಹುದು. ಇದು ನೋಡುಗರೆದೆಯಲ್ಲಿ ಸದಾ ನಿಲ್ಲುತ್ತದೆ. ಕಿಂಗ್ಡಂ ಆಫ್ ಡ್ರೀಮ್ಸ್ ದೆಹಲಿಯ ಒಂದು ಮಾಯಾಲೋಕ. ವಿಸ್ಮಯದ ಅದ್ಭುತ ಕಲಾವೇದಿಕೆ, ಹೈಡ್ರಾಲಿಕ್ ಸ್ಟೇಜ್, ಮನೋರಂಜನೆಯ ವಿನೂತನ ಪ್ರಯೋಗಶಾಲೆ, ಭ್ರಮೆ ಹುಟ್ಟಿಸುವ ಕೃತಕ ಆಗಸ ಸೃಷ್ಟಿಸಿ ರಚಿಸಿರುವ ರಸ್ತೆ, ಅದ್ಭುತ ಸೌಂಡ್ ಸಿಸ್ಟಮ್, ರೋಚಕ ಪ್ರದರ್ಶನಗಳು, ನೃತ್ಯ ರೂಪಕಗಳು ಇಲ್ಲಿನ ವಿಶೇಷ.
‘ನೌಟಂಕಿ ಮಹಲ್ ಥಿಯೇಟರ್’ ಎಂತವರನ್ನೂ ದಂಗುಗೊಳಿಸುತ್ತದೆ. ರಾಜಸ್ಥಾನಿ, ಪಂಜಾಬಿ ಭರತನಾಟ್ಯ ಇತ್ಯಾದಿ ನೃತ್ಯಗಳ ಮೂಲಕ ಇಲ್ಲಿ ಸ್ವಾಗತ ಮಾಡಲಾಗುತ್ತದೆ. ಈ ಜಾಗ ಒಂದು ರೀತಿಯಲ್ಲಿ ಪಿಕ್ನಿಕ್ ಸ್ಪಾಟ್ ತರ ಇದೆ. ಥಿಯೇಟರ್ ಮಾತ್ರವಲ್ಲ, ಇಲ್ಲಿನ ವಾಣಿಜ್ಯ ಸಂಕೀರ್ಣವೂ ಆಕರ್ಷಕವಾಗಿದೆ. ಅದರಂತೆ ಕೆಂಪುಕೋm, ರಾಜಘಾಟ್, ಇಂಡಿಯಾ ಗೇಟ್ ಮೊದಲಾದವುಗಳನ್ನು ಜೊತೆಗೆ ದೆಹಲಿಯ ಸಿಹಿ ತಿಂಡಿಗಳು, ಊಟ, ಚಳಿಗಾಲದ ವಾತಾವರಣವನ್ನು ತಮ್ಮ ನೆನಪಿನ ಭೀತಿಯಿಂದ ಚಿತ್ರಿಸಿದ್ದಾರೆ
ಜರ್ಮನಿ ಪ್ರವಾಸ
ಮ್ಯೂನಿಕ್ ಲಹರಿಗಳು ಎಂಬ ವಿಭಾಗದಲ್ಲಿ ಜರ್ಮನಿಯ ಚಿತ್ರಣವನ್ನು ಲೇಖಕಿ ಕಟ್ಟಿಕೊಡುತ್ತಾರೆ. ಜರ್ಮನಿ ಸುಮಾರು ೧೧ ದೇಶಗಳಿಂದ, ಎರಡು ಕಡೆ ಕರಾವಳಿ ತೀರ, ಫಲವತ್ತಾದ ರೈನ್ ನದಿ, ದಟ್ಟ ಕಾಡು, ನದಿಗಳಿಂದ ಸಮೃದ್ಧವಾಗಿ, ಹೇರಳ ಪ್ರಾಕೃತಿಕ ಸಂಪನ್ಮೂಲ ಕೈಗಾರಿಕಾ ನೆಲೆಯಾಗಿ ನಿಂತಿದೆ. ಶ್ರೀಮಂತ ಕಲೆಗಳಿಂದ, ಶಿಲ್ಪಕಲೆ, ವಿಜ್ಞಾನಗಳಿಂದ, ಉತ್ತಮ ಶೈಕ್ಷಣಿಕ ವಿಶ್ವವಿದ್ಯಾನಿಲಯಗಳನ್ನು ಹೊಂದಿ ವಿಶ್ವ ಭೂಪಟದ ಹೆಮ್ಮೆಯ ದೇಶವಾಗಿದೆ. ಸ್ವರ್ಗದಂತೆ ಅದು ಕಂಡುಬರುತ್ತದೆಯಾದರೂ ತುಂಬಾ ದುಬಾರಿ ನಗರ. ದುಡಿಮೆ ಇದ್ದರೆ ಮಾತ್ರ ಅಲ್ಲಿ ಬದುಕು ಸುಲಭ.
ಅತಿ ದೊಡ್ಡ ಕೆಥೆಡ್ರಾಲ್ ಫ್ರಾವೆನ್ ಕಿರ್ಶೆ ಇಲ್ಲಿದ್ದು ಇದು ಹೆಮ್ಮೆಯ ಪ್ರಾಚೀನ ಪ್ರತೀಕವಾಗಿದೆ.. ಡಿಸೆಂಬರ್‌ನಿಂದ ಫೆಬ್ರವರಿಗೆ ತೀವ್ರ ಹಿಮಪಾತ, ಇದರಿಂದ ಅದರ ಸೌಂದರ್ಯ ಸಿಮಾತೀತ. ಮೆಟ್ರೋ ಸೌಲಭ್ಯ ತುಂಬಾ ಚೆಂದವಾಗಿದೆ. ಇಲ್ಲಿನ ಮುಖ್ಯ ತಾಣ ಕ್ಯೋನಿಗ್ ಪ್ಲಾಟ್ಸ್. ಇದು ಚಾರಿತ್ರಿಕ ಸ್ಥಳ. ಜರ್ಮನಿಯ ಪ್ರವಾಸಿ ಸ್ಥಳ ಬಿಎಂಡಬ್ಲ್ಯೂ ಮ್ಯೂಸಿಯಂ ಸಹ ಇಲ್ಲಿದೆ. ವಿಶ್ವದ ಅತಿ ದೊಡ್ಡ ಬೊಟಾನಿಕಲ್ ಗಾರ್ಡನ್ ಇಲ್ಲಿದೆ. ಸಾಂಪ್ರದಾಯಿಕ ಉಡುಗೆಯನ್ನು ಇಲ್ಲಿನವರು ಎಂಜಾಯ್ ಮಾಡುತ್ತಾರೆ. ತಮ್ಮ ಮನೆಯ ಸುತ್ತ ಗಿಡ- ಮರಗಳನ್ನು ಬೆಳೆಸಿ, ಅದನ್ನೇ ಕಾಂಪೌಂಡ್ ಅಂತ ರೂಪಿಸಿಕೊಂಡಿದ್ದಾರೆ, ಎಲ್ಲೆಡೆ ಹಸಿರು, ಸ್ವಚ್ಛ ಗಾಳಿ, ಪ್ರಶಾಂತತೆ ಇಲ್ಲಿದೆ. ಹಸಿರಿಗೆ ಇವರು ಕೊಡುವ ಮಹತ್ವವನ್ನು ಇಂಡಿಯಾದವರು ಸಹ ಕಲಿಯುವ ಅವಶ್ಯಕತೆ ಇದೆ ಎನ್ನುತ್ತಾರೆ ಲೇಖಕಿ.
ಪಾರ್ಕುಗಳು ಮನುಷ್ಯರನ್ನು ಸೆಳೆಯುವಂತಹವು. ಕಾಡಿನ ಮೌನ, ಏಕಾಂತ ಇಲ್ಲಿರುತ್ತz. ಎಡೆಕಾ ಶಾಪಿಂಗ್ ಇಲ್ಲಿನ ಪ್ರಖ್ಯಾತ ಸ್ಥಳ. ಎಲ್ಲಿ ನೋಡಿದರೂ ಹಸಿರಿನ ಲಾನ್‌ಗಳು, ಕೂಡ್ರಲು ಬೆಂಚು, ಫಳಫಳ ಹೊಳೆಯುವ ಸೂರ್ಯನ ಬಿಸಿಲು ವೈಶಿಷ್ಟ್ಯವಾದುದು. ನಾಯಿ ಇಲ್ಲದೆ ಪಾರ್ಕಿಗೆ ಬರುವವರು ತುಂಬಾ ಕಡಿಮೆ. ಇವುಗಳಿಗೆ ಬೆಲ್ಟ್ ಇರುವುದಿಲ್ಲ. ತಮ್ಮ ಇಷ್ಟ ಬಂದ ಹಾಗೆ ಆ ಕಡೆ ಈ ಕಡೆ ಓಡಾಡಿಕೊಂಡು ಇರುತ್ತವೆ.
ಹೀಗೆ ಲೇಖಕಿ ತನ್ನ ಹುಟ್ಟೂರು ಮಲೆನಾಡು, ಡೆಲ್ಲಿ ಮತ್ತು ಜರ್ಮನಿ ನಗರವನ್ನು ತಮ್ಮ ಅನುಭವದಿಂದ ಚಿತ್ರಿಸಿದ್ದಾರೆ. ಪ್ರವಾಸದಲ್ಲಿ ಕಳೆದ ಸಮಯವನ್ನು ಗಮನಿಸಿ, ಅನುಭವಿಸಿ ವಿಷಯಗಳನ್ನು, ಆಗುಹೋಗುಗಳ ನವಿರಾದ ನಿರೂಪಣೆಯನ್ನು ನವಿರಾಗಿ ಕೆತ್ತಿದ್ದಾರೆ.
-ದತ್ತಾತ್ರೇಯ ಹೆಗಡೆ, ಶಿ

Comments
Post a Comment