‘ಹಂಚಿಕೊಳ್ಳೋಣ ಬಾ ಗೆಳತಿ ನೆನಪುಗಳ...’



‘ಹಂಚಿಕೊಳ್ಳೋಣ ಬಾ ಗೆಳತಿ ನೆನಪುಗಳ...’ ಇದು ಉತ್ಕಟ ಪ್ರೇಮದ ಕುರಿತ  ಕವನ ಸಂಕಲನವಾಗಿದ್ದು ವೃತ್ತಿಯಿಂದ  ವೈದ್ಯರಾಗಿ, ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾ|| ನಾಗನಾಥ ವಿ. ಯಾದಗಿರಿ ಇದನ್ನು ರಚಿಸಿದ್ದಾರೆ. ಕೃತಿಯಲ್ಲಿ ಏಳು ವಿಭಾಗಗಳಲ್ಲಿ ಸುಮಾರು ೪೦ಕ್ಕೂ ಹೆಚ್ಚು ಕವಿತೆಗಳಿವೆ. ತಮ್ಮ ಜೀವನ ಅನುಭವಧ ರಸಗಳಿಗೆಯನ್ನು ಪದಗಳಿಗೆ ಲೇಪಿಸಿ ಕವನವಾಗಿಸಿ ಓದುಗರಲ್ಲಿ ಅದೇ ಭಾವನೆ ಮೂಡುವಂತೆ ಮಾಡಿದ್ದಾರೆ. ಪ್ರೀತಿ, ವಿರಹ, ಆತಂಕ, ಬಳಲಿಕೆ, ಅಗಲಿಕೆ, ನೋವು, ಜೊತೆಗೆ ಬಿಡಿಸಲಾಗದ ಕೆಲವು ಸನ್ನಿವೇಶಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

 ನಿನ್ನ ವಶೀಕರಣಕ್ಕೆ ಒಳಗಾಗಿದ್ದೇನೆ/ ಕಂಗಳ ವಶವಾದೆ/ ವಶವೋ ಪರವಶವೋ/ ಅದೊಂದು ಸಂಮೋಹನ ವಿದ್ಯೆ/ ನನಗೂ ಕಲಿಸು ಕದಿಯಬೇಕಿದೆ/ ನಿನ್ನ ಹೃದಯ/ ಎಂದು ಕವನವೊಂದರಲ್ಲಿ ಹೇಳುತ್ತಾರೆ.  ಹೀಗೆ ಇಲ್ಲಿನ ಕವಿತೆಗಳೆಲ್ಲ ಪ್ರೀತಿಯ ಆಳಕ್ಕೆ ನಮ್ಮನ್ನು ಕರೆದೊಯ್ಯುತ್ತವೆ. ಉತ್ಕಟ ಪ್ರೀತಿಯ ಪ್ರೇಮಿಯನ್ನು ಕುರಿತು ಕವಿ ಬರೆದಂತಿದೆ. ಸಾಲುಗಳೂ ಸಹ ಅಷ್ಟೇ ಅರ್ಥಗರ್ಭಿತವೂ, ಶ್ರೀಮಂತ ಪದ-ಪುಂಜಗಳಿಂದಲೂ ಕೂಡಿದವಾಗಿವೆ. 

ಮೊದಲ ಕವನದಲ್ಲಿ  ‘ಪ್ರೀತಿ ಏಕೆ ಭೂಮಿ ಮೇಲಿದೆ’ ಎಂದು ಪ್ರಶ್ನಿಸುತ್ತಾ  ತಾನೇ ಉತ್ತರ ಕಂಡುಕೊಳ್ಳುತ್ತಾರೆ. ಸೃಷ್ಟಿಕರ್ತನಿಗೆ ಈ ಪ್ರೀತಿ ಅದ್ಭುತವೆನಿಸಿ, ತಾನೇ ಪ್ರಯೋಗ ನಡೆಸಲು ದೇವಲೋಕದಿಂದ ಭೂಲೋಕಕ್ಕೆ ವರ್ಗಾಯಿಸಿರಬೇಕೆನ್ನುತ್ತಾರೆ. 

 ‘ಆಗಮನ’ ದಲ್ಲಿ ನಿನ್ನ ಆಗಮನ ನನಗೆ ಕನಸೆನ್ನಿಸುತ್ತಿದೆ. ಮೌನ, ಮುಗುಳ್ನಗೆ, ಓರೆನೋಟ, ಅಗಲಿಕೆ, ವಿರಹ, ರಾತ್ರಿಯ ನೆನಪಲ್ಲೇ ಇಲ್ಲಿಯವರೆಗೆ ಕಾಡುತ್ತಿದ್ದೆ.  ಏಕಾಂಗಿಯಾಗಿದ್ದೆ. ಈ ಪ್ರೀತಿ ಹೀಗೆ ದುಃಖವನ್ನೂ ಸಹ ಸುಖದಂತೆ ಹಂಚುತ್ತದೆ ಎಂದು ಹೇಳುತ್ತಾರೆ  ‘ಬಾಲ್ಕನಿಯ ಬಯಕೆ’ ಕವಿತೆಯಲ್ಲಿ ಪ್ರೇಮಿಯಲ್ಲಿ ನಿನಗಾಗಿ ಬಾಲ್ಕನಿಯಲ್ಲಿ ಕಾಯುತ್ತಿದ್ದೇನೆ.  ತಡವಾದರೂ ಬಾ. ಇಬ್ಬರೂ ಸೇರಿ ಮೋಹದಲಿ ಅಡಗಿರುವ ಚಂದ್ರನನ್ನು ಹುಡುಕೋಣ. ಕಣ್ಣು ಮುಚ್ಚಾಲೆ ಆಡೋಣ. ನಕ್ಷತ್ರಗಳನ್ನು ಎಣಿಸೋಣ. ಮೌನದಿಂದ ಬೇಕಾದರೂ ಕಳೆಯೋಣ. ಒಮ್ಮೆ ಬಂದು ಬಾಲ್ಕನಿಯ ನನ್ನ ಬಯಕೆಯನ್ನು ತೀರಿಸು. ಸದ್ದಿಲ್ಲದೆ ಮಹಡಿಯನ್ನು ಹತ್ತಿ  ಬಾ. ನಿನ್ನನ್ನು ಮಾತನಾಡಿಸಲು ನಾನು ಕಾದಿದ್ದೇನೆ ಎಂದು ಹೇಳುತ್ತಾರೆ.

 ‘ಒಗಟು’ ಕವನದಲ್ಲಿ 

ಅವಳ ದರುಶನಕ್ಕೆ ಕರಾರುಗಳು ತುಂಬಾ ಇವೆ

ಅವಳು ಸಿಗಬೇಕೆಂದರೆ ಅಡಚಣೆಗಳು ತುಂಬಾ ಇವೆ 

ನನ್ನ ಹಸ್ತರೇಖೆಯಲ್ಲಿ ಅವಳ ನಿಶಾನಿಯೇ ಇಲ್ಲ 

ಆದರೂ ಅವಳ ಕುರಿತು ಭವಿಷ್ಯದ ಕನಸುಗಳು ತುಂಬಾ ಇವೆ

ಅವಳ ಮೇಲೆ ಅಪಾರ ನಂಬಿಕೆ ಇದೆ

 ಎಂದು ವಿವರಿಸುತ್ತಾರೆ. ‘ಮುತ್ತು’ ಕವನದಲ್ಲಿ ಮುತ್ತಿನಲ್ಲಿ ಗಮ್ಮತ್ತಿದೆ. ಅದನ್ನು ಕೊಡುವ ಮೂಲಕ ಪಡೆಯಬೇಕು. ಕೊಟ್ಟೆ, ಪಡೆದೆ ಎಂದು ಬೀಗಬಾರದು ಎನ್ನುತ್ತಾರೆ. ‘ ಬಾ ಗೆಳತಿ ಈ ಬಾಳಿಗೆ ಕೊಂಚ’ ಎನ್ನುವ ಕವನದಲ್ಲಿ ತನ್ನ ಬಾಳಿಗೆ ಬಂದು ಬಣ್ಣವನ್ನು ತುಂಬು. ಅದಕ್ಕೊಂದು ರೂಪ ಕೊಡು. ಹಸಿರು ತುಂಬು ಎಂದು ಕೋರುತ್ತಾ, ಪ್ರೀತಿಯ ಉದಯ ರವಿಗೆ ಅರಿಶಿನ ಹಚ್ಚುವಂತಾಗಲಿ, ಅನುರಾಗ, ಹುಸಿಕೋಪ, ನಗು, ಆಸೆಯನ್ನೆಲ್ಲ ಹಾಗೆಯೇ ಇಟ್ಟು ಬಾಳನ್ನು  ರಂಗಾಗಿಸೋಣ. ನೀ ಬಂದರೆ ನನ್ನ ಬಾಳಿಗೆ ಕೊಂಚ ಅರ್ಥ ಬರುತ್ತದೆ ಎಂದು ವರ್ಣಿಸುತ್ತಾರೆ.

‘ಪ್ರೇಮ ಪತ್ರಗಳು’ ಕವನದಲ್ಲಿ ಈ ಪತ್ರಕ್ಕೆ ಬೆಲೆ ಕಟ್ಟುವುದು ಕಷ್ಟ ಎಂಬರ್ಥದಲ್ಲಿದೆ. ಪ್ರೇಮಪತ್ರ ಕಾಗದದ ದೋಣಿಯಂತೆ. ಇದರಲ್ಲಿ ಹುಚ್ಚ್ಚಾಟಗಳಿವೆ.  ಸರಿಯಾಗಿ ಇಷ್ಟು ದಿನಗಳಿಗೊಮ್ಮೆ ಎಂಬಂತೆ ಪತ್ರ ಬರೆಯುವುದು, ಅದು ಪ್ರೇಮಿಗೆ ತಲುಪುತ್ತಲೇ ಇರುವುದು, ಆದರೆ ಪ್ರತ್ಯುತ್ತರ ಬಾರದೇ ಇರುವುದು, ಆಗ ಬೇಸರದಿಂದ ಸಮಾಧಾನಕ್ಕಾದರೂ ಉತ್ತರ ಬರೆ ಎಂದು ಮನವಿ ಮಾಡುತ್ತಾರೆ. ಈ ಪತ್ರದ  ಲಿಪಿ ಅರಿಯಲಾಗದು, ಭಾವನೆಗಳ ತಿಳಿಯಲಾಗದು, ವಿರಹಗಳು ಮುಗಿಯದು, ಗೀಚಿದ ಪ್ರೇಮದ ಅಕ್ಷರವೇ ತನ್ನ ಪತ್ರ ಎಂದು ಹೇಳುತ್ತಾರೆ. 

‘ಭ್ರೂಣಹತ್ಯೆ’ ಯಲ್ಲಿ  ಪ್ರೀತಿಯನ್ನು ಕೊಲ್ಲುವುದು ಭ್ರೂಣಹತ್ಯೆಗಿಂತ ಪಾಪ, ಅದರ ಚಿಗುರನು ಚಿವುಟಬಾರದು ಎನ್ನುತ್ತಾ, ‘ಕೆಡವಿಬಿಡು’ ಕವನದಲ್ಲಿ 

 ನಿನ್ನ ಮೌನವನು ಬಿಡು

 ನಿನ್ನಿಂದ ನಾನು ದೂರ ಹೋಗುವ ಮುನ್ನ

 ಕೆಡವಿಬಿಡು ನಿನ್ನ  ಮೌನ 

ಮತ್ತೊಂಡೆದೆ ವಾಲುವ ಮುನ್ನ

ಕೆಡವಿಬಿಡು ನೀ 

ಬೆಳಗಿಸಿದ ಜ್ಯೋತಿ ನಂದುವ ಮುನ್ನ 

ಎನ್ನುತ್ತಾರೆ.  

ಮನಸ್ಸು ಇನ್ನೊಂದೆಡೆ ವಾಲುವ ಮುನ್ನ ಅಥವಾ ಅಂತರಾಳದ ಅಲೆ ಹೆಚ್ಚುವ ಮೊದಲು ಅದನ್ನು ಕೆಡವಿಬಿಡಬೇಕು. ಇದರಿಂದ ಪ್ರೇಮ ಶಾಶ್ವತವಾಗಿ ಉಳಿಯುತ್ತದೆ ಎನ್ನುವ ಸಂದೇಶವನ್ನು ಇದರಲ್ಲಿ ಕಟ್ಟಿಕೊಟ್ಟಿದ್ದಾರೆ. ನಾನು ನಿನ್ನ ಅಂತರಾಳದಲ್ಲಿದ್ದೇನೆ. ಇಣುಕಿ ನೋಡಿದರಷ್ಟೇ ಇದು ಕಾಣುತ್ತದೆ. ಒಟ್ಟಿಗೆ ಕಳೆದ ಘಳಿಗೆಗಳನ್ನು ನೆನಪಿಸಿಕೊಂಡರೆ ಪಕ್ಕದಲ್ಲೇ ಇದ್ದೇನೆ ಎಂದು ಸುಂದರವಾಗಿ ವರ್ಣಿಸುವ ಕವಿ,  ಸ್ನೇಹ ಮುಖವಾಡಬಾಗಬಾರದು. ಸ್ನೇಹ ಹಸ್ತವ ನೆನೆಪಿಸಿಕೊಂಡರೆ ಭರವಸೆ ಮೂಡುತ್ತದೆ. ಮನಸು ಬದಲಿಸಲಾಗದು ಎಂದು ‘ಬದಲಾದೆ ಕಣೆ ನೀನು’ ಎಂಬ ಕವನದಲ್ಲಿ ವಿವರಿಸುತ್ತ್ತಾರೆ.  

ಮನಸೆಳೆಯುವ ಇನ್ನೊಂದು ಕವನವೆಂದರೆ ‘ಮತ್ತೊಂದು ರಾತ್ರಿ ಸಾಲ ಕೇಳಿದ್ದೇನೆ’

 ಒಂದೇ ಒಂದು ಭೇಟಿಗೆ ಕೇಳಿದ್ದೇನೆ

ಕೆಲ ಮಾತು ಹೇಳಲು ಬಾಕಿ ಉಳಿದಿದೆ

ಈಗ ಪುರುಸೊತ್ತು ಇಲ್ಲ ನೀ ಹೊರಡು

ನಾ ಸಾವಿನೊಡನೆ ಮತ್ತೊಂದು ರಾತ್ರಿ ಸಾಲ ಕೇಳಿದ್ದೇನೆ. ಅದ್ಭುತ ಎನಿಸುವ ಸಾಲು ಇದು. ಪ್ರೇಮಿಯನ್ನು ಎಷ್ಟು ಸಲ ಭೇಟಿ ಮಾಡಿದರೂ ಸಾಲದು, ಎಷ್ಟು ಸಲ ಮಾತನಾಡಿದರೂ ಸಾಲದು,  ಮತ್ತೆ ಮತ್ತೆ ಮಾತನಾಡುವ, ಭೇಟಿಯಾಗುವ ಕಾತರ, ತವಕ ಇರುತ್ತದೆ ಎನ್ನುವುದನ್ನು  ವಿವರಿಸಲು ಮತ್ತೊಂದು ರಾತ್ರಿ ಸಾಲ ಕೇಳಿದ್ದೇನೆ ಎನ್ನುವ ಮನಸೆಳೆಯುವಂತೆ ವಿವರಿಸಿದ್ದಾರೆ. 

ಕೊನೆಯ ಕವನ ‘ಹಂಚಿಕೊಳ್ಳೋಣ ನೆನೆಪುಗಳ’ ದಲ್ಲಿ  ಪ್ರೇಮಿ ಕವಿ ತನ್ನ ಪ್ರಿಯತಮೆಯೊಡಗಿನ ಸ್ನೇಹದ ನೆನಪನ್ನು ಸ್ಮರಿಸುತ್ತಾರೆ. ಪರಸ್ಪರ ಕೊಟ್ಟ ಹೂಗಳು, ಕದ್ದು ನೋಡಿದ್ದು, ಜೊತೆಗೂಡಿ ನಡೆದ ದಾರಿಗಳು,  ಕಾದು ಕುಳಿತ ಘಳಿಗೆಗಳು, ಕೈ ಕೈ ಹಿಡಿದು ಸುತ್ತಿದ್ದು, ತುಂಟ ಚೇಷ್ಟೆಗಳು, ಮಡಿಲಲ್ಲಿ ತಲೆ ಇಟ್ಟು ಮಲಗಿದ್ದು, ತಲೆಗೂದಲಲಿ ಬೆರಳಾಡಿಸಿದ್ದು,  ಬಿಟ್ಟ ಮಾತುಕತೆ, ಹುಸಿಗೋಪ, ಭುಜವ ಬಳಸಿದ್ದು ... ಹೀಗೆ ಸಾಲು ಸಾಲು ಸವಿನೆನಪನ್ನು ಬಿಚ್ಚಿಡುತ್ತಾರೆ.   

ಒಟ್ಟಿನಲ್ಲಿ, ಕೃತಿಯಲ್ಲಿ  ಪ್ರೀತಿಯ  ಸುಂದರವಾದ ಸಾವಿರ ನೆನಪನ್ನು ಸುಮಧುರವಾಗಿ ಕಟ್ಟಿಕೊಟ್ಟಿದ್ದಾರೆ. 


-ದತ್ತಾತ್ರೇಯ ಹೆಗಡೆ

......................

Comments

Popular posts from this blog