ಮಾಡಿದ್ದುಣೋ ಮಹಾರಾಯ



ಇದು ಪ್ರಸಿದ್ಧs ಲೇಖಕ ಮೈಸೂರಿನ ಎಂ ಎಸ್ ಪುಟ್ಟಣ್ಣ (ಮೈಸೂರು ಸೂರ್ಯನಾರಾಯಣ ಭsಟ್ಟ ಪುಟ್ಟಣ್ಣ) ಅವರ ಜನಪ್ರಿಯ ಸಾಮಾಜಿಕ ಕಾದಂಬರಿ. ೧೮೫೪-೧೯೩೦ ಇವರ ಜೀವಿತಾವಧಿ. ಹೊಸಗನ್ನಡ ಸಾಹಿತ್ಯದ ರೂವಾರಿಗಳಲ್ಲೊಬ್ಬರು. ಮೈಸೂರಿನವರಾದ ಇವರು, ಮೈಸೂರಿನಲ್ಲಿ ಮತ್ತು ಮದ್ರಾಸ್‌ನಲ್ಲಿ ಓದಿದರು.  ಬೆಂಗಳೂರಿನ ಕೋರ್ಟ್‌ನಲ್ಲಿ (ಈಗಿನ  ಹೈಕೋರ್ಟ್) ಭಾಷಾಂತರಕಾರರಾಗಿ ಕೆಲಸ ಮಾಡಿ ನಂತರ ಅಮಲ್ದಾರರಾಗಿ ಚಿತ್ರದುರ್ಗ, ಚಾಮರಾಜನಗರ, ಹೊಸದುರ್ಗ ಮೊದಲಾದೆಡೆ ಕೆಲಸ ಮಾಡಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅವರು ಕೃತಿ ಬರೆದಿದ್ದರೂ ಅವರಿಗೆ ಹೆಸರು ತಂದಿದ್ದು ಎರಡು ಕೃತಿಗಳು ಮಾತ್ರ. ಅವೆಂದರೆ-  ಮಕ್ಕಳಿಗಾಗಿ ಬರೆದ ‘ನೀತಿಚಿಂತಾಮಣಿ  ಮತ್ತೊಂದು ಕಾದಂಬರಿ ‘ಮಾಡಿದ್ದುಣ್ಣೋ ಮಹಾರಾಯ’. ಇವರ ಇತರ ಕೃತಿಗಳೆಂದರೆ- ಮುಸುಗು ತೆಗೆಯೆ ಮಾಯಾಂಗನೆ, ಕುಣಿಗಲ್ ರಾಮಶಾಸ್ತ್ರ್ತಿಗಳ ಚರಿತ್ರೆ, ಹೇಮಚಂದ್ರರಾಜ ವಿಲಾಸ, ಪೇಟೆ ಮಾತೇನಜ್ಜಿ, ಕಾಂಪೂಷನ ಚರಿತ್ರೆ, ಮಹಮದ್ ಗವಾನನ ಚರಿತ್ರೆ,  ಮೊದಲಾದವು. ಇವರು ೧೯೧೫ರಲ್ಲಿ ಮಾಡಿದ್ದುಣ್ನೋ ಮಹಾರಾಯ  ಕೃತಿ ರಚಿಸಿದ್ದಾರೆ. 

ಕೃತಿಯ ಸಾರಾಂಶ: 

‘ಮಾಡಿದ್ದುಣೋ ಮಹಾರಾಯ’ ಕೃತಿಯಲ್ಲಿ ಪಾಪ, ಅನ್ಯಾಯ ಅಥವಾ ತಪ್ಪು ಮಾಡಿದವರು ಅದರ ಫಲ ಉಣ್ಣಲೇಬೇಕು, ಉಣ್ಣುತ್ತಾರೆ ಎನ್ನುವುದನ್ನು ವಿವಿಧ ದೃಷ್ಟಾಂತಗಳ ಮೂಲಕ ಚಿತ್ರಿಸಿದ್ದಾರೆ. ಮನುಷ್ಯ ನೀತಿ, ಸದ್ಧರ್ಮ ಕಾಯ್ದುಕೊಂಡು ಬರಬೇಕೆನ್ನುವುದು ಇದರ ತಿರುಳು. ಈ ಗಾದೆ ಮಾತನ್ನೇ ಇಟ್ಟುಕೊಂಡು ಅಂದಿನ ಮೈಸೂರು ಪ್ರ್ರಾಂತ್ಯದ ಬ್ರಾಹ್ಮಣ ಸಮಾಜದ ಹಿನ್ನೆಲೆಯಲ್ಲಿ ನಡೆಯುವ ಕಥೆಯನ್ನೇ ಕಾದಂಬರಿಯನ್ನಾಗಿಸಿದ್ದಾರೆ. ಕಥೆಯಲ್ಲಿ ಹತ್ತಾರು ಪಾತ್ರಗಳು ಬರುತ್ತವೆ. ಅಮಲ್ದಾರ್ ಮಾರಮಣರಾಯ,  ನಾರಪ್ಪಯ್ಯ,  ಸಿದ್ದ ಅಥವಾ ಅಪ್ಪಾಜಿ,  ಸೀತಮ್ಮ, ಸದಾಶಿವ ದೀಕ್ಷಿತ, ತಿಮ್ಮಮ್ಮ, ಪಂತೋಜಿ, ಅಮಾಸೆ,  ಮೊದಲಾದವರು. ಅವರಲ್ಲಿ ಅನ್ಯಾಯ, ಅನಾಚಾರ, ಕಳ್ಳತನ ಮಾಡಿದವರೆಲ್ಲ ಶಿಕ್ಷೆ ಅನುಭವಿಸುವುದನ್ನು ಕೃತಿಯಲ್ಲಿ ಕಾಣಬಹುದು. . 


ಕೃತಿಯ ಕುರಿತು: 

ಇಲ್ಲಿ ಹಲವು ದೃಷ್ಟಾಂತದ ಮೂಲಕ ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತನ್ನು ನೆನೆಪಿಸುತ್ತಾರೆ ಲೇಖಕರು. 

ಮೊದಲ ದೃಷ್ಟಾಂತ:  

ಸದಾಶಿವ ದೀಕ್ಷಿತರ ಮಗ ಮಹಾದೇವನಿಗೆ ಅಕ್ಷರಾಭ್ಯಾಸ ಮಾಡಿಸಲು  ಬ್ರಾಹ್ಮಣರ ಮಠವೊಂದಕ್ಕೆ ಕಳುಹಿಸುತ್ತಾರೆ. ಇಲ್ಲಿ ಕಲಿಸುವವರಿಗೆ ಪಂತೋಜಿಗಳೆಂದು ಕರೆಯುತ್ತಿದ್ದರು. ಇವರಿಗೆ ಹೆಚ್ಚು ಗೌರವವಿತ್ತು.  ಅಲ್ಲಿನ ಉಪಾಧ್ಯಾಯ ಮಕ್ಕಳಿಗೆ ಹೊಡೆಯುವುದರಲ್ಲಿ ನಿಸ್ಸೀಮ, ಪ್ರತಿ ಮಕ್ಕಳಿಗೆ ಚೆನ್ನಾಗಿ ಹೊಡೆಯುವುದು ಈತನ ಕಸುಬಾಗಿತ್ತು. ಅದರೂ ಪಾಲಕರೆದುರು ಮಕ್ಕಳು ಇದನ್ನು ಹೇಳುತ್ತಿರಲಿಲ್ಲ. ಬರಬರುತ್ತ ಈ ವಿಷಯ ಬೆಳಕಿಗೆ ಬರುತ್ತದೆ.  ಅಲ್ಲಿ ಸಿದ್ದ ಎನ್ನುವ ಹುಡುಗನೊಬ್ಬನಿದ್ದ. ಆತನಿಗೆ ಮಾತ್ರ ಹೊಡೆತ ಇಲ್ಲವಾಗಿತ್ತು. ಏಕೆಂದರೆ ಆತ ಶಿಕ್ಷಕನಿಗೆ ನಶ್ಯ, ಎಲೆ ಅಡಕೆ ತಂದುಕೊಡುತ್ತಿದ್ದ. ಉಳಿದವರ ಬಗ್ಗೆ ಈತ ಚಾಡಿ ಹೇಳಿ ಹೊಡೆಸುವ ಮೂಲಕ ಖುಷಿ ಪಡೆಯುತ್ತಿದ್ದ. ಒಮ್ಮೆ ಮಹಾದೇವ ಚೆನ್ನಾಗಿ ಬಿದ್ದ ಏಟಿಗೆ ತತ್ತರಿಸಿ ಶಾಲೆಗೆ ಹೋಗದೆ ಮನೆಯಲ್ಲುಳಿದ. ಇನ್ನೊಮ್ಮೆ ಹೊಡೆದಿದ್ದಕ್ಕೆ ಮೈಯೆಲ್ಲಾ ಊದಿತ್ತು. ಇದನ್ನೆಲ್ಲಾ ಸಹಿಸದೆ ಮಕ್ಕಳು  ಉಪಾಯ ಹೂಡುತ್ತಾರೆ. ಶಿಕ್ಷಕರು ಕೂಡ್ರುವ ಚಾಪೆಯಡಿ ಹೊಂಡ ತೆಗೆದು ಮುಳ್ಳು, ಕಲ್ಲು ತುಂಬಿ ನೆಲದ ಮೇಲೆ ಚಾಪೆ ಹಾಕುವಂತೆ ಹಾಸುತ್ತಾರೆ. ಇದನ್ನರಿಯದ ಶಿಕ್ಷಕ ಬಂದು ಕುಳಿತಾಗ ಮುಳ್ಳು, ಕಲ್ಲಿನ ಹೊಂಡದೊಳಗೆ ಬಿದ್ದು ಘನಘೋರ ಗಾಯಕ್ಕೊಳಗಾಗುತ್ತಾನೆ. ಮುಂದೆ ಶಿಕ್ಷಕನ ಸ್ಥಿತಿ ಏನಾಯ್ತು, ಅವನ ವೃತ್ತ್ತಿ ಮುಗಿಯಿತೇ? ಜೀವನಕ್ಕಾಗಿ ಎಲ್ಲಿಗೆ ಹೋದ ಎನ್ನುವುದರ ಮಾಹಿತಿ ಇದೆ.  

ಎರಡನೆಯ ದೃಷ್ಠಾಂತ-

ಅರುಂದಮ್ಮ ಮತ್ತು ಗೋಪಾಲ ಎನ್ನುವವನ ಮನೆಯ ಮಧ್ಯದ ಗೋಡೆ ಬಿದ್ದು ಹೋಗುತ್ತದೆ. ಅರುಂದಮ್ಮನ ಗಂಡ ಗೋಡೆ ಹಾಕಲು ಯತ್ನಿಸಿದಾಗ ಗೋಪಾಲ ತಕರಾರು ತೆಗೆದು ಕೇಸು ಮಾಡುತ್ತಾನೆ. ಅರುಂದಮ್ಮಳನ್ನು ನಿಂದಿಸುತ್ತಾನೆ. ಆಕೆ ‘ಸತ್ಯ ನಿನ್ನಲ್ಲಿದ್ದರೆ ನಮಗೆ ಕೂಳು ದಕ್ಕುವುದಿಲ್ಲ. ನನ್ನ ಮಕ್ಕಳಿಬ್ಬರು ಸುಟ್ಟುಬೂದಿಯಾಗಲಿ, ನಮ್ಮಲ್ಲಿ ಸತ್ಯವಿದ್ದರೆ ನಿನಗೆ ಕುಷ್ಠ ಬರಲಿ, ನೀರು, ನೆರಳಿಲ್ಲದೆ ಒದ್ದಾಡಿ ಪ್ರಾಣಬಿಡಲಿ’ ಎನ್ನುತ್ತಾಳೆ. ಕೆಲವೇ ದಿನದಲ್ಲಿ ಗೋಪಾಲ ಜ್ವರ ಬಂದು ಮಲಗುತ್ತಾನೆ. ಕಾಲು ಬಾತು ಹೋಗುತ್ತದೆ. ಕೀವಾಗುತ್ತದೆ. ಹುಳು ಬೀಳುತ್ತದೆ, ಕಾಲು ಉದುರಿಹೋಗುತ್ತದೆ. ಇನ್ನೊಂದು ಘಟನೆಯಲ್ಲಿ ಅರಿಂದಮ್ಮನ ಹೊಲದಲ್ಲಿ  ೨೦ ಖಂಡುಗ ಭತ್ತ ಬೆಳೆಯುತ್ತಿತ್ತು. ಆದರೆ ಬೆಳೆ ಗುತ್ತಿಗೆ ಪಡೆದವನು  ೮ ಖಂಡುಗ ಮಾತ್ರ ಕೊಟ್ಟು ಇದರಲ್ಲಿ ೨೦ ಖಂಡುಗ ಇದೆ ಎಂದು ಸುಳ್ಳು ಹೇಳಿ ವಂಚಿಸಿದ್ದ. ಇದು ಬಹಿರಂಗವಾದಾಗ ಆಕೆ- ‘ನೀನು ಸುಳ್ಳು ಹೇಳಿದ್ದೀಯಾ. ಇದಕ್ಕೆ ತಕ್ಕ ಪ್ರತಿಫಲ ಪಡೆಯುವೆ’ ಎನ್ನುತ್ತಾಳೆ. ಕೆಲವೇ ದಿನದಲ್ಲಿ ಆತ ಸಾಯುತ್ತಾನೆ. ಹೇಗೆ ಸತ್ತ ಎನ್ನುವುದರ ಬಗ್ಗೆ ಇದೆ. 

ಮೂರನೆಯ ದೃಷ್ಟಾಂತ: 

   ಸದಾಶಿವ ದೀಕ್ಷಿತರ ಸೊಸೆ ಸೀತೆಗೆ ಅವಳ ಅತ್ತೆ ತಿಮ್ಮಮ್ಮ ನೀಡುವ ವಿಚಿತ್ರ ಹಿಂಸೆ, ಬೈಗುಳ, ಹಲ್ಲೆ ಇದನ್ನೆಲ್ಲಾ ಆಕೆ ತಡೆದುಕೊಂಡು, ಕೆಲವೊಮ್ಮೆ ಉಪವಾಸ ವಿದ್ದು ಸಹಿಸಿಕೊಳ್ಳುತ್ತಾಳೆ. ಅತ್ತೆ- ಸೊಸೆಯನ್ನು ಹೇಗೆ ನಡೆಸಿಕೊಳ್ಳಬಾರದೆನ್ನುವುದಕ್ಕೆ ಇದು ಉದಾಹರಣೆಯಾಗುತ್ತದೆ. ಸೊಸೆ ಮಾಡಿದ ಅಡುಗೆಯನ್ನು ಕೆಡಿಸಿ ಊಟಕ್ಕೆ ಕುಳಿತವರೆದುರು ನಿಂದಿಸುವುದು, ಆಕೆಯ ತವರನ್ನು ವಾಚಾಮಗೋಚರವಾಗಿ ಬಯ್ಯುವುದು, ಸೊಸೆ ಹಾಕಿದ ರಂಗೋಲಿಯನ್ನು ಕಾಲಲ್ಲಿ ಅಳಿಸುವುದು, ಸೊಸೆ ಮಾಡಿದ ಅನ್ನಕ್ಕೆ ಉಪ್ಪು ಹಾಕಿ ಅವಮಾನಿಸುವುದು... ಹೀಗೆ ಹತ್ತಾರು ನಮೂನೆಯಲ್ಲಿ ಹಿಂಸಿಸುತ್ತಾಳೆ, ಅವಮಾನಿಸುತ್ತಾಳೆ. ಆದರೆ ಒಮ್ಮೆಯೂ ಸೊಸೆ ತಿರುಗಿ ಮಾತನಾಡುವುದಿಲ್ಲ. ಊರಿನ ದೇವಸ್ಥಾನದ ಅರ್ಚಕ ಸಿದ್ದಪ್ಪಾಜಿ ಸೀತೆ ದೇವಸ್ಥಾನದ ಪಕ್ಕದ ವೃಂದಾವನದಲ್ಲಿ ತುಳಸಿ ಪೂಜೆಯನ್ನು ದಿನನಿತ್ಯ ಮಾಡಿ ಬರುವಾಗ ಆಕೆಯ ಮೇಲೆ ಕಣ್ಣು ಹಾಕುತ್ತಾನೆ. ಆಕೆ ತಿರುಗಿಯೂ ನೋಡುವುದಿಲ್ಲ. ಒಮ್ಮೆ ಆಕೆಯನ್ನು ತಬ್ಬಲು ಹೋಗುತ್ತಾನೆ. ಆಕೆ ಚೆನ್ನಾಗಿ ಬೈದು ಕಲ್ಲಿನಿಂದ ಹೊಡೆದಾಗ ಮತ್ತೆ ದ್ವೇಷ ಸಾಧಿಸಲಾರಂಭಿಸುತ್ತಾ, ಎಂದಾದರೂ ನಿನ್ನನ್ನು ಪಡೆದೇ ಸಿದ್ಧ ಎಂದು ಅವಾಜ್ ಹಾಕುತ್ತಾನೆ. ಆತ ಮಾಡಿದ ಕುಕೃತ್ಯ ಏನು? ಇದರಿಂದ ಸೀತೆಯ ಸ್ಥಿತಿ ಏನಾಯ್ತು? ಮುಂದೆ ಆರೋಗ್ಯವಂತಳಾದಳೇ? ಆಕೆಯ ದೇಹ ಚಿತೆಗೆ ಹೋದಾಗ ಸಂಭವಿಸಿದ ಘಟನೆ ಏನು? ಮತ್ತೆ ಜೀವಂತ ಮರಳಿದಳೇ? ಆಕೆಯ ಅತ್ತೆ ಮತ್ತೆ ಸರಿಯಾದಳೇ  ಎನ್ನುವುದನ್ನು ವಿವರಿಸಲಾಗಿದೆ. 

ನಾಲ್ಕನೆಯ ದೃಷ್ಠಾಂತ: 

ಸಂಜೆವಾಡಿ ಗ್ರಾಮದಲ್ಲಿ ಅಮಾಸೆ ಎಂಬ ಅನಾಥ ಬಾಲಕನನ್ನು ಮಾದಯ್ಯ ಎಂಬ ಮಕ್ಕಳಿಲ್ಲದ ವ್ಯಕ್ತಿ ಸಾಕುತ್ತಾನೆ. ಆ ಊರಿನವರು ಮಳೆಗಾಲದಲ್ಲಿ ತಮಿಳುನಾಡಿನ ಬೇರ ಬೇರೆ ಹಳ್ಳಿಗಳಿಗೆ ಹೋಗಿ ಕನ್ನ ಹಾಕಿ ಕದಿಯುವುದನ್ನು ಕಾಯಕ ಮಾಡಿಕೊಂಡಿರುತ್ತಾರೆ. ಕದ್ದು ತಂದಿದ್ದರಲ್ಲಿ ದೇವಸ್ಥಾನದ ಅರ್ಚಕ ಸಿದ್ದಪ್ಪಾಜಿ ಸ್ವಲ್ಪ ಪಾಲು ಮತ್ತು ಅಮಲ್ದಾರನಿಗೆ  ಸ್ವಲ್ಪ ಪಾಲು ದಕ್ಕುತ್ತಿತ್ತು. ಹೀಗಾಗಿ ಕಳ್ಳತನ ಬಹಿರಂಗವಾಗುತ್ತಿರಲಿಲ್ಲ. ಅಮಾಸೆಯನ್ನೂ ಈ ಕಳ್ಳತನಕ್ಕೆ ತಯಾರ ಮಾಡಿ ಚತುರ ಕಳ್ಳನನ್ನಾಗಿ ಪರಿವರ್ತಿಸುತ್ತಾರೆ. ಅನೇಕ ಮನೆಯಲ್ಲಿ ಚಿನ್ನಾಭರಣ ಮಾತ್ರ ಕದಿಯುತ್ತಿದ್ದರು. ಒಮ್ಮೆ ಎಲ್ಲರೂ ಸಿಕ್ಕಿಬೀಳುತ್ತಾರೆ. ಅಪಾರ ಪ್ರಮಾಣದ ಚಿನ್ನಾಭರಣ ಪೊಲೀಸರ ವಶವಾಗುತ್ತದೆ. ಪೊಲೀಸರಿಗೆ ಅವರು ಸಿಕ್ಕಿಬಿದ್ದಿದ್ದು ಹೇಗೇ? ಇಡಿ ಊರಿನವರ ಜಪತೆ ಅಧಿಕಾರಿಗಳೂ ಸಹ  ಜೈಲಿಗೆ ಸೇರಿದ್ದು ಹೇಗೆ? ಎನ್ನುವ ರೊಚಕ ಕಥೆ ಇದರಲ್ಲಿದೆ.  

ಕೊನೆಯಲ್ಲಿ, ಹಲವರಿಗೆ ಶಿಕ್ಷೆಯಾಗುತ್ತದೆ. ಸಂಜವಾಡಿ ಊರು ಹಾಳೂರು ಆಗುತ್ತದೆ. ಅಮಾಸೆ ಎಲ್ಲ ವಿಷಯವನ್ನು ತಿಳಿಸಿದ್ದರಿಂದ ಆತನ ಬಿಡುಗಡೆ ಆಗುತ್ತದೆ. ಮನೆಗೆ ಬರುವಾಗ ‘ಮಾಡಿದ್ದುಣ್ಣೋ ಮಹಾರಾಯ’ ಎನ್ನುತ್ತಾ ಬರುತ್ತಾನೆ. 

ಒಟ್ಟಾರೆಯಾಗಿ, ಸರಳ ಭಾಷೆ, ರೋಚಕ ಕಥಾಹಂದರ ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡಿರುವುದರಿಂದ ಈ ಕಾದಂಬರಿಯು ಇಂದಿಗೂ ಪ್ರಸ್ತುತವಾಗಿದೆ.    

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೧೫. ೧೧. ೨೦೨೬

...........................





 

Comments

Popular posts from this blog