‘ಕರ್ನಾಟಕ ಗತವೈಭವ’
ಆಲೂರು ವೆಂಕಟರಾವ್
ಲೇಖಕರ ಬಗ್ಗೆ:
ಆಲೂರು ವೆಂಕಟರಾಯರು ಕನ್ನಡದ ಪ್ರಮುಖ ಇತಿಹಾಸಕಾರ, ಬರಹಗಾರ, ಪತ್ರಕರ್ತ ಮತ್ತು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ರೂವಾರಿ. ಕನ್ನಡ ನಾಡು-ನುಡಿಗಾಗಿ ಸಲ್ಲಿಸಿದ ಸೇವೆಗಾಗಿ ಇವರನ್ನು ’ಕನ್ನಡದ ಕುಲಪುರೋಹಿತ’ ಎಂದು ಗೌರವಿಸಲಾಗುತ್ತದೆ.
ವಿಜಯಪುರ ಜಿಲಲೆಯಲ್ಲಿ ಜನಿಸಿದ ಇವರು, ಬಿ.ಎ. ಪದವಿಯನ್ನು ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಮುಗಿಸಿ, ಎಲ್.ಎಲ್.ಬಿ. ಯನ್ನು ಮುಂಬೈ ವಿಶ್ವವಿದ್ಯಾಲಯದಲ್ಲಿ ಪಡೆದು ವಕೀಲರಾಗಿದ್ದರು.
ಹೋರಾಟ ಮತ್ತು ಸಂಘಟನೆಯಲ್ಲಿ ಇವರದು ಚಿರಸ್ಥಾಯಿ ಹೆಸರು. ಚದುರಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸುವ ಕರ್ನಾಟಕ ಏಕೀಕರಣ ಚಳವಳಿಯನ್ನು ಮುನ್ನಡೆಸಿದರು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದರು.
ಪ್ರಮುಖ ಕೃತಿಗಳು: ಕರ್ನಾಟಕ ಗತವೈಭವ, ಶ್ರೀ ವಿದ್ಯಾರಣ್ಯ ಚರಿತ್ರೆ, ಕನ್ನಡಿಗರ ಭ್ರಮನಿರಸನ, ಕರ್ನಾಟಕತ್ವದ ವಿಕಾಸ ಮತ್ತು ಕರ್ನಾಟಕತ್ವದ ಸೂತ್ರಗಳು, ನನ್ನ ಜೀವನ ಸ್ಮೃತಿಗಳು (ಆತ್ಮಕಥೆ), ಬಾಲಗಂಗಾಧರ ತಿಲಕರ ಗೀತಾ ರಹಸ್ಯ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೃತಿಯ ಕುರಿತು:
ಕನ್ನಡದ ಕುಲಪುರೋಹಿತ ಎಂದೇ ಖ್ಯಾತರಾದ ಆಲೂರು ವೆಂಕಟರಾವ್ ಅವರ ಅತ್ಯಂತ ಮಹತ್ವದ ಕೃತಿ ಕರ್ನಾಟಕ ಗತವೈಭವ. ೧೯೧೭ರಲ್ಲಿ ಪ್ರಪ್ರಥಮವಾಗಿ ಪ್ರಕಟಗೊಂಡ ಈ ಕೃತಿ ನಂತರ ಆರು ಬಾರಿ ಮರುಮುದ್ರಣಗೊಂಡಿದ್ದು, ಇಂದಿಗೂ ಅತ್ಯಂತ ಬೇಡಿಕೆಯ ಕೃತಿಯಾಗಿದೆ . ಕನ್ನಡಿಗರಲ್ಲಿ ಕನ್ನಡದ ಅಭಿಮಾನ ಮತ್ತು ಐತಿಹಾಸಿಕ ಜಾಗೃತಿಯನ್ನು ಮೂಡಿಸಿದ ಮಹತ್ವದ ಗ್ರಂಥವಾಗಿದೆ. ಕನ್ನಡಿಗರಲ್ಲಿ ಚದುರಿಹೋಗಿದ್ದ ಐತಿಹಾಸಿಕ ಪ್ರಜ್ಞೆಯನ್ನು ಬಡಿದೆಬ್ಬಿಸಲು ಮತ್ತು ಕರ್ನಾಟಕ ಏಕೀಕರಣಕ್ಕೆ ಪ್ರೇರಣೆ ನೀಡಲು ಈ ಕೃತಿ ಬರೆಯಲ್ಪಟ್ಟಿತು. ಕೃತಿಯಲ್ಲಿ ಕ್ರಿ.ಶ. ೧೦೦೦ ರಿಂದ ೧೫೦೦ರವರೆಗಿನ ಸುವರ್ಣಯುಗದಲ್ಲಿ ಕರ್ನಾಟಕವು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಕ್ಷೇತ್ರಗಳಲ್ಲಿ ಮೆರೆದ ವೈಭವವನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಶಿಲಾಶಾಸನಗಳು, ತಾಮ್ರಪಟಗಳು, ವೀರಗಲ್ಲುಗಳು, ಹಳೆಯ ನಾಣ್ಯಗಳು, ಭಗ್ನಗೊಂಡ ಕಟ್ಟಡಗಳು ಹಾಗೂ ಸಾಹಿತ್ಯಿಕ ಆಕರಗಳನ್ನು ಆಧರಿಸಿ ಕರ್ನಾಟಕದ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಮುಂತಾದ ಮಹಾನ್ ಸಾಮ್ರಾಜ್ಯಗಳು ನರ್ಮದಾ ನದಿಯಿಂದ ಕಾವೇರಿವರೆಗೆ ಮೆರೆದಿದ್ದು, ಪುಲಕೇಶಿ ಮುಂತಾದ ಚಕ್ರವರ್ತಿಗಳ ದಿಗ್ವಿಜಯಗಳನ್ನು ಇದು ಸಾರುತ್ತದೆ. ಕವಿರಾಜಮಾರ್ಗ (ಶ್ರೀವಿಜಯ,ನೃಪತುಂಗನ ಕಾಲ), ಪಂಪ, ರನ್ನರ ಸಾಹಿತ್ಯ, ಹಾಗೂ ವಿಜ್ಞಾನೇಶ್ವರನ ’ಮಿತ್ಯಾಕ್ಷರ’ ಮುಂತಾದವುಗಳ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಯು ಪಡೆದಿದ್ದ ಉನ್ನತ ಸ್ಥಾನದ ಬಗ್ಗೆ ಕೃತಿ ಮಾಹಿತಿ ನೀಡುತ್ತದೆ.
ಕೃತಿಯ ಒಳಗಡೆ:
ಕರ್ನಾಟಕದ ಮಹತ್ವವನ್ನು ಹೊಗಳಿ ಇನ್ನೂ ಎಚ್ಚರವಾಗದಿದ್ದ ತರುಣರನ್ನು ಎಚ್ಚರಿಸಬೇಕೆಂದು ಈ ಪ್ರಬಂzsದಲ್ಲಿ ಲೇಖಕರು ಬರೆದಿದ್ದಾರೆ. ಕೇವಲ ಇತಿಹಾಸವಲ್ಲ, ಕಟ್ಟುಕತೆಯೂ ಅಲ್ಲ, ಕರ್ನಾಟಕದ ಇತಿಹಾಸದೊಳಗಿನ ಚಿತ್ತಾಕರ್ಷಕವಾದ ಹಲಕೆಲವು ಸಂಗತಿಗಳನ್ನು ಈ ಪ್ರಬಂಧವು ವಿವರಿಸುತ್ತಾ, ಕರ್ನಾಟಕ ಇತಿಹಾಸ ದೇವಿಯ ಮಂದಿರಕ್ಕೆ ಹೋಗುವ ದಾರಿಯನ್ನು ತೋರಿಸುವ, ಮಹಾದ್ವಾರವನ್ನು ತೆರೆಯುವ ಕೆಲಸವನ್ನು ಮಾಡಿದೆ. ಮುಂದಿನ ಕೆಲಸ ಇತಿಹಾಸ ಸಂಶೋಧಕರದು. ಕಿಂಡಿಯ ಒಳಗಿಂದ ಕರ್ನಾಟಕ ದೇವತೆಯ ದರ್ಶನವನ್ನು ಲೇಖಕರು ಬೊಟ್ಟು ಮಾಡಿ ತೋರಿಸಿದ್ದಾರೆ.
ಕೃತಿಯಲ್ಲಿ ಸುಮಾರು ೧೭ ಅಧ್ಯಾಯಗಳಿವೆ. ಕರ್ನಾಕಟದ ಇತಿಹಾಸ ಎಂದರೆ ಮಾಸಿದ, ಕಳೆದುಹೋದ ವೈಭವಲ್ಲ, ಎಲ್ಲರಲ್ಲಿ ತನ್ನ ಅರಿವನ್ನು ಮೂಡಿಸುವಂತಹ, ಕನ್ನಡಿಗರಲ್ಲಿ ಎಚ್ಚರವನ್ನು ಹುಟ್ಟಿಸುವಂತಹದ್ದಾಗಿದ್ದೆ ಎಂದು ಆರಂಭz ಅಧ್ಯಾಯದಲ್ಲೇ ಲೇಖಕರು ಹೇಳಿದ್ದಾರೆ. ಜನರ ಹೃದಯದಲ್ಲಿ, ಪ್ರೌಢ ಅಭ್ಯಾಸಿಗಳ ಚಿತ್ತಭೂಮಿಯಲ್ಲಿ ಕನ್ನಡ ಸಂಸ್ಕೃತಿಯ ಅಭಿಮಾನದ ಬೀಜಗಳನ್ನು ಬಿತ್ತಲು ಇಂತಹ ಕೃತಿ ನೆರವಾಗುತ್ತದೆ. ಯುಗಪ್ರವರ್ತಕ ಕೃತಿಯೆಂದು ಕರೆಯಲಾಗುತ್ತದೆ. ಕನ್ನಡ ಕಣ್ಣನ್ನು, ಕನ್ನಡದ ಹೃದಯವನ್ನು ಕೆರಳಿಸಿದ, ಅರಳಿಸಿದ, ಶತಮಾನದಿಂದ ಅರಿವನ್ನು ಕಳೆದುಕೊಂಡು ಸುಪ್ತವಾಗಿ ಜಡವಾಗಿದ್ದ ಕಣ್ಣು ತೆರೆಯಿಸಿ, ವಿಶಾಲವಾದ ನೋಟವನ್ನು ಕಟ್ಟಿಕೊಟ್ಟ ಕೃತಿ ಇದು. ಹೊಸ ಒಂದು ಪೀಳಿಗೆಯನ್ನು ನಿರ್ಮಾಣ ಮಾಡಲು ನೆರವಾಗಿದ್ದನ್ನು ಮರೆಯಲಾಗದು. ಇದರಲ್ಲಿನ ಮೊದಲ ಎರಡು ಅಧ್ಯಾಯಗಳಂತೂ ಓದುಗರ ಅಂತಃಕರಣದ ಬೇರುಗಳನ್ನೇ ಅಲುಗಾಡಿಸುವಷ್ಟು ಭಾವೋಜ್ವಲವಾಗಿ ಸ್ಫೂರ್ತಿದಾಯಕವಾಗಿವೆ.
ಕರ್ನಾಟಕದ ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳ ಪರಿಚಯವನ್ನು ಮಾಡಿಕೊಡುತ್ತಲೇ ಹೊಸ ಕ್ಷಿತಿಜವನ್ನು ತೆರೆದಿಟ್ಟ, ಹೊಸ ಹೆಮ್ಮೆಯಿಂದ ಹೃದಯವನ್ನು ತುಂಬುವ ಕೆಲಸವನ್ನು ಲೇಖಕರು ಇಲ್ಲಿ ಮಾಡಿದ್ದಾರೆ. ಕನ್ನಡದ ಕಹಳೆಯನ್ನು ಊದಿ, ಸೋಮಾರಿತನವನ್ನು ಬಿಟ್ಟೇಳಲು ಕರೆ ಕೊಡುತ್ತಾರೆ. ನಮ್ಮ ನೆರೆಹೊರೆಯವರಾದ ಮರಾಠರು, ತೆಲುಗರು, ತಮಿಳರು ವೇಗದಿಂದ ಕನ್ನಡದ ಮಾರ್ಗವನ್ನು ಆಕ್ರಮಿಸಿದ್ದಾರೆ. ನಾವು ನಮ್ಮ ಕರ್ನಾಟಕತ್ವವನ್ನು ಸುಟ್ಟು ಬೂದಿ ಮಾಡಿ ನೀರಿನಲ್ಲಿ ಕಲಸಿ ಬಿಡುವ ಮಟ್ಟಿಗೆ ಜಡರಾಗಿಬಿಟ್ಟಿದ್ದೇವೆ. ಆದ್ದರಿಂದ ನಮ್ಮ ನಿರಭಿಮಾನತೆಯ ಮುಸುಕನ್ನು ಕಿತ್ತೆಸೆಯಬೇಕಿದೆ. ಇದಕ್ಕೆ ನಾವು ಮುಂದಾಗದಿದ್ದಲ್ಲಿ ಹರಿದು ಹಂಚಿ ಹೋದ ಕರ್ನಾಟಕವನ್ನು ಹೊಲಿದು ಅಖಂಡವಾಗಿ ಮಾಡುವವರಾದರೂ ಯಾರು? ಎಂದು ಪ್ರಶ್ನಿಸುತ್ತಾ ನಮ್ಮಲ್ಲಿ ಕೆಚ್ಚನ್ನು ತುಂಬಿದ್ದಾರೆ.
ನಮ್ಮಲ್ಲಿ ಅಭಿಮಾನವೇ ಇಲ್ಲ. ಮಿಕ್ಕ ರಾಜ್ಯದಲ್ಲೂ ನಮ್ಮ ಭಾಷಾ ಬಂಧುಗಳು ವಾಸಿಸುತ್ತಿದ್ದಾರೆ. ನಮ್ಮ ರಕ್ತವು ಒಂದೇ ನಾಡಿನದು. ನಾಲಿಗೆಯ ಮೇಲೆ ತಮ್ಮ ಪೂರ್ವಜರ ಹೆಸರುಗಳನ್ನು ಅಭಿಮಾನದಿಂದ ನಲಿದಾಡುವಂತೆ ಮಾಡಬೇಕು. ಪೂರ್ವಜರ ಇತಿಹಾಸವನ್ನು ಉತ್ಸಾಹದಿಂದ ಸಂಶೋಧಿಸಬೇಕು. ಸುತ್ತಮುತ್ತಲು ದೃಷ್ಟಿಯನ್ನು ಚೆಲ್ಲಿದರೆ ಅಲ್ಲಿ ಪ್ರಾಚೀನ ಕರ್ನಾಟಕದ ಸಂಪನ್ನತೆಯ ಮಾನವ ಹೆಗ್ಗುರುತುಗಳು ಕಣ್ಣಿಗೆ ಕಟ್ಟದೇ ಇರಲಾರವು. ಗುಡಿ -ಗೋಪುರಗಳು ಕಲಾ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಪ್ರಾಚೀನ ಸಂಪತ್ತನ್ನು ನೋಡಿದರೆ ಹೆಮ್ಮೆ ಗೊತ್ತಾಗುವುದು. ಇಂತಹ ರಾಷ್ಟ್ರವನ್ನು ಮೃತವಾಗಿ ಮಾಡಿರುವ ಕಲ್ಪನೆಯನ್ನು ದೂರಮಾಡಬೇಕಿದೆ. ಇಲ್ಲಿ ಮೇಧಾವಿಗಳು, ರಾಜಗುರುಗಳು ಆಗಿಹೋಗಿದ್ದಾರೆ. ಅವರ ಜೀವನ ಚರಿತ್ರೆಯನ್ನು ಓದಿ ಕರ್ನಾಟಕತ್ವವನ್ನು ಅರಿತುಕೊಳ್ಳಬೇಕಿದೆ. ಪ್ರತಿಯೊಬ್ಬನು ತನ್ನ ಜ್ಞಾನದೃಷ್ಟಿ ಮೂಲಕ ಇದನ್ನು ಸಾಧಿಸಬೇಕು. ಅದರ ಅಸ್ತಿತ್ವವನ್ನು ಅವನು ತನ್ನ ಹೃನ್ಮಂದಿರದಲ್ಲಿ ಚಿಂತಿಸಬೇಕು. ಸುತ್ತಲೂ ಇತಿಹಾಸದ ಗತವೈಭವದ ಮೂಲಕ ಕರ್ನಾಟಕದ ಹೆಸರನ್ನು ಮೆರೆಯಿಸಿದ ಮತಗಳು ಇವೆ. ಆದ್ದರಿಂದ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾರ ಹೃದಯ ತಲ್ಲಣಿಸುವುದಿಲ್ಲವೋ, ತಳಮಳಿಸುವುದಿಲ್ಲವೋ, ರೋಮರೋಮದ ರಂಧ್ರಗಳಲ್ಲಿ ಕೂಡ ಕರ್ನಾಟಕ ಎಂಬ ಸೊಲ್ಲು ಹೊರಡುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ ಎಂದು ಲೇಖಕರು ಹೇಳುತ್ತಾರೆ.
ಇನ್ನೊಂದು ಅಧ್ಯಾಯದಲ್ಲಿ ಕರ್ನಾಟಕದ ವಿಸ್ತಾರವನ್ನು ಹೇಳುತ್ತಾ ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್’ ಎಂಬ ಕವಿ ನೃಪತುಂಗನ ಸಾಲನ್ನು ನೆನೆಪಿಸುತ್ತಾರೆ. ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಳಖೇಡ, ಲಕ್ಕುಂಡಿ, ಹಂಪೆ, ಕಲ್ಯಾಣ ಮೊದಲಾದ ದರ್ಶನೀಯ ಸ್ಥಳಗಳು ನಮ್ಮಲ್ಲಿದ್ದರೂ ನಮ್ಮವರು ಅದರ ಮಹತ್ವವನ್ನು ಅರಿಯದ ಬಗ್ಗೆ ವಿಷಾದಿಸುತ್ತಾರೆ.
ಕೊನೆಯ ಅಧ್ಯಾಯದಲ್ಲಿ, ಕರ್ನಾಟಕದ ಗತವೈಭವವನ್ನು ಅವಲೋಕನಕ್ಕೆ ತಂದು ಕೊಟ್ಟಿದ್ದೇನೆ. ಹೇಳದ ಸಂಗತಿಗಳು ಬಹಳ ಇವೆ. ವ್ಯಾಪಾರೋದ್ಯೋಗ, ನಾಣ್ಯ ಪದ್ಧತಿ, ಜೀವನ ಪದ್ಧ್ದತಿ, ಸಂಸ್ಕೃತಿ ಮೊದಲಾದ ಮಹತ್ವದ ವಿಷಯಗಳನ್ನು ಇತಿಹಾಸದಲ್ಲಿ ಕಾಣಬಹುದು. ನಾವು ನಮ್ಮ ರಾಷ್ಟ್ರೀಯ ಧ್ಯೇಯವನ್ನು ಮಾತ್ರ ಎಂದೆಂದಿಗೂ ಕಣ್ಣುಮುಂದಿನಿಂದ ಕೀಳಬಾರದು. ಇಲ್ಲಿನ ಜನರು ದೊಡ್ಡವರಾಗಿದ್ದರು, ವಿದ್ವಾಂಸರಾಗಿದ್ದರು, ಬಲಾಢ್ಯರಾಗಿದ್ದರು. ಅವರ ವೈಭವವು ಅಪಾರವಾಗಿತ್ತು. ಅವರಿಂದ ಉತ್ಸಾಹಗೊಂಡು ವರ್ತಮಾನ ಕಾಲದ ಹೀನ ಸ್ಥಿತಿಯನ್ನು ದೂರಮಾಡಬೇಕೆಂಬ ಪ್ರತಿಜ್ಞೆಯನ್ನು ನಾವು ಮಾಡಬೇಕಿದೆ. ನಮ್ಮ ಜಾಣತನವನ್ನು ರೂಢಿಸಿಕೊಳ್ಳಬೇಕು. ನಾವು ಪತಿತರಾಗಲು ಕಾರಣವಾದ ಬೀಜಗಳನ್ನು ಹುಡುಕಿ ಅದನ್ನು ನಾಶಮಾಡಬೇಕು.
ಅಂತ್ಯದಲ್ಲಿ ಲೇಖಕರು ಹೇಳುತ್ತಾರೆ-
ನಾವು ನಮ್ಮ ಆಲಸ್ಯವನನು ತಳ್ಳೋಣ. ಭ್ರ್ರಾಮಕ ಕಲ್ಪನೆಗಳನ್ನು ಬಿಟ್ಟ್ಟುಬಿಡೋಣ. ಮುಂದಿನ ಮಾರ್ಗಕ್ಕೆ ಹತ್ತೋಣ. ಪಾತಾಳಕ್ಕಿದ ನಮ್ಮ ಕರ್ನಾಟಕದ ಸಂಸ್ಕೃತಿಯನ್ನು ಉದ್ಧರಿಸೋಣ. ಸಾಯಲಾದ ಕರ್ನಾಟಕಕ್ಕೆ ಇತಿಹಾಸದ ಸಂಜೀವಿನ ಮಾತ್ರೆ ಹಾಕಿ ಚೇತನಗೊಳಿಸೋಣ. ಕರ್ನಾಟಕ ಎಂಬ ಒಂದು ಶಬ್ದದಲ್ಲಿ ಎಂಥ ಅದ್ಭುತವಾದ ಮಾಂತ್ರಿಕ ಶಕ್ತಿ ಇದೆ ಎನ್ನುವುದನ್ನು ಜನರ ಲಕ್ಷ್ಯಕ್ಕೆ ತನ್ನಿರಿ. ಅರಸರು ಹೋದರು, ಸಂಪತ್ತು ಹೋಯಿತು, ಕವಿಗಳು ಹೋದರು, ವೈಭವವೂ ಹೋಯಿತು, ಕರ್ನಾಟಕ ಎಂಬ ಶಬ್ದ ಮಾತ್ರ ಉಳಿದಿದೆ. ಕರ್ನಾಟದದ ಸಂಸ್ಕೃತಿ ಎಂಬ ಗುಪ್ತಗಾಮಿನಿಯಾದ ಗಂಗೆಯನ್ನು ಮೇಲಕ್ಕೆ ಎತ್ತಿ ತರೋಣ ಎಂದು ಕರೆ ನೀಡುತ್ತಾರೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೨೨. ೧೧. ೨೦೨೬
.........................

Comments
Post a Comment