‘ಬದುಕು, ಬುದ್ಧಿವಂತಿಕೆ, ನೆನಪಿನ ಶಕ್ತಿ, 

ಡಾ|| ಸಿ ಆರ್ ಚಂದ್ರಶೇಖರ್



ಡಾ|| ಸಿ. ಆರ್. ಚಂದ್ರಶೇಖರ್  ಮೂಲತಃ ಚನ್ನಪಟ್ಟಣದವರು. ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯದಲ್ಲಿ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡಿ ವಿಖ್ಯಾತರಾದವರು. ಮನೋವೈದ್ಯರೂ, ಶಿಕ್ಷಣ ತಜ್ಞರೂ, ಲೇಖಕರೂ ಆಗಿ  ಪದ್ಮಶ್ರೀ, ರಾಜ್ಯೋತ್ಸವ ಪ್ರಶಸ್ತಿ,  ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದವರು.  ಸಾರ್ವಜನಿಕ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ೭೦ಕ್ಕೂ ಹೆಚ್ಚು ವಿಮರ್ಶೆ, ವೈಜ್ಞಾನಿಕ ಲೇಖನ ಬರೆದಿದ್ದಾರೆ. ವಿಶ ಆರೋಗ್ಯ ಸಂಸ್ಥೆಯ ಸಲಹಾಗಾರರಾಗಿ ಕೆಲಸ ಮಾಡಿದ್ದಾರೆ.

 ಪ್ರಮುಖ ಕೃತಿಗಳು: ಆತಂಕ- ಖಿನ್ನತೆ ಮತ್ತು ಗೀಳು, ಮನೋರೋಗ- ಮಾನಸಿಕ ಒತ್ತಡದಿಂದ ಹೊರಬನ್ನಿ,  ಮನೋಚಂಚಲತೆ ಏಕೆ,  ಮನಸೇ ನಿ ಪ್ರಶಾಂತವಾಗಿರು, ಕೌನ್ಸೆಲಿಂಗ್ ಏನು- ಯಾರಿಗೆ- ಏಕೆ ಮಾಡುವುದು,  ದೇವರು ದೆವ್ವ ಇರುವುದೇ,  ಶಾಲಾ ಮಕ್ಕಳ ಮಾನಸಿಕ ಸಮಸ್ಯೆಗಳು, ಮನೋರೋಗಕ್ಕೆ ಚಿಕಿತ್ಸೆ ಏನು? ಮೊದಲಾದವು. 


ಕೃತಿಯ ಕುರಿತು:



 ಈ ಕಿರು ಪುಸ್ತಕದಲ್ಲಿ  ಬುದ್ಧಿವಂತಿಕೆ ಮತ್ತು ಕಲಿಕೆ ನೆನಪನ್ನು ನಿರ್ದೇಶಿಸುವ ಮಿದುಳು, ಅದರ ರಚನೆ ಕಾರ್ಯವಿಧಾನ, ಬುದ್ಧಿವಂತಿಕೆಯ ವಿವಿಧ ಲಕ್ಷಣಗಳು, ನೆನಪಿನ ಪ್ರಕ್ರಿಯೆ ಮರೆಯುವಿಕೆಗೆ ಕಾರಣವಾಗುವ ಅಂಶಗಳು, ನೆನಪಿನ ಶಕ್ತಿಯನ್ನು ಹೆಚ್ಚಿಸುವ ವಿಧಾನಗಳು, ಪರೀಕ್ಷಾ ಭಯದ ಮೂಲ ಮತ್ತು ಅದರ ನಿವಾರಣೆ, ಹರೆಯದವರನ್ನು ಕಾಡುವ ಲೈಂಗಿಕ ಭಾವನೆಗಳು, ಖಿನ್ನತೆಮ ಕೀಳರಿಮೆಗಳ ನಿವಾರಣೆಯ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಲೇಖಕ ಡಾ|| ಸಿ. ಆರ್. ಚಂದ್ರಶೇಖರ್ ಓದುಗರಿಗೆ ನೀಡಿದ್ದಾರೆ.

 ಇದರಲ್ಲಿ ಆಪ್ತವಾಗುವ ಒಟ್ಟು ಏಳು ಅಧ್ಯಾಯಗಳಿವೆ.


ಕೃತಿಯನ್ನು ತೆರೆದಾಗ: 

 ಮೊದಲ ಅಧ್ಯಾಯದಲ್ಲಿ ಬುದ್ಧಿ ಮತ್ತು ನೆನಪಿನ ಶಕ್ತಿಯನ್ನು ನಿರ್ಧರಿಸುವ ಮೆದುಳು ಮತ್ತು ನರಮಂಡಲದ ವ್ಯವಸ್ಥೆಯ ಬಗ್ಗೆ ಚಿತ್ರಿಸಿದ್ದಾರೆ.  ‘ನಿಮ್ಮ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಿ’ ಎಂಬ ಎರಡನೆಯ ಅಧ್ಯಾಯದಲ್ಲಿ, ಬುದ್ಧಿವಂತರೆನಿಸಿಕೊಳ್ಳಲು ನಮ್ಮಲ್ಲಿರಬೇಕಾದ ಸಾಮರ್ಥ್ಯಗಳೇನು ಎನ್ನುವುದರ ವಿವರಣೆ ಇದೆ. ಗ್ರಹಿಸುವ  ಮತ್ತು ನೆನಪಿನ ಶಕ್ತಿ, ಯೋಚನೆ, ವಿವೇಚನೆ, ಸಂವಹನ, ಸಾಮರ್ಥ್ಯ, ಲೆಕ್ಕಾಚಾರ ಮತ್ತು ಗಣಿತ ಸಾಮರ್ಥ್ಯ, ಹಣಕಾಸು, ವ್ಯವಹಾರಿಕ ಜಾಣ್ಮೆ,  ಗ್ರಹಿಸುವ ಶಕ್ತಿ ನಮ್ಮಲ್ಲಿ ಅತಿ ಅವಶ್ಯ ಎನ್ನುತ್ತಾರೆ. 

 ಏಕಾಗ್ರತೆ 

 ಮನಸ್ಸು ಸ್ವಭಾವತಃ ಚಂಚಲ. ಕೇಂದ್ರೀಕರಿಸುವ ಸಾಮರ್ಥ್ಯ ಹೆಚ್ಚು ಬೇಕು. ಏಕಾಗ್ರತೆಯನ್ನು ಭಂಗಗೊಳಿಸುವ ಅಂಶಗಳನ್ನು ತಿಳಿದುಕೊಳ್ಳಬೇಕು. ಏಕಾಗ್ರತೆಗೆ ಅಡ್ಡಿಯಾಗುವ ಸಾಮಾನ್ಯ ಅಂಶಗಳೆಂದರೆ -ಉಪವಾಸ ಅಥವಾ ಅತಿಯಾದ ಆಹಾರ ಸೇವನೆ, ನಿದ್ದೆ ಮಾಡದಿರುವುದು, ಚಿಂತೆ ಅಥವಾ ವ್ಯಥೆಗಳು, ವಿಷಯದಲ್ಲಿ ಆಸಕ್ತಿ ಇಲ್ಲದಿರುವುದು, ಆಕರ್ಷಣೆ ಮತ್ತು ವಿಕರ್ಷಣೆ, ಮಾನಸಿಕ ಅನಾರೋಗ್ಯ ಮತ್ತು ದೈಹಿಕ ಅನಾರೋಗ್ಯ. ಏಕಾಗ್ರತೆಯನ್ನು ಹೆಚ್ಚಿಸಲು ಒಂದು ನಿರ್ದಿಷ್ಟವಾದ ಸಮಯ ಮತ್ತು ಸ್ಥಳವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ೨೦ ರಿಂದ ೩೦ ನಿಮಿಷಗಳ ಕಾಲ ಓದಿದ ನಂತರ ಅದರ ಸಾರಾಂಶವನ್ನು ಬರೆಯಬೇಕು. ಬೆಳಗ್ಗೆ ೧೦ ನಿಮಿಷ, ರಾತ್ರಿ ೧೦ ನಿಮಿಷ ದೀರ್ಘವಾದ ಉಸಿರಾಟ ಮಾಡಿ ಆರಾಮವಾಗಿ ಕಣ್ಣು ಮುಚ್ಚಿ ಕೂಡ್ರಬೇಕು. ವೇಳೆಗೆ ಸರಿಯಾಗಿ ಹಿತಮಿತವಾಗಿ ಆಹಾರ ಸೇವನೆ ಮತ್ತು ನಿದ್ದೆ ಮಾಡಬೇಕು ಎಂದು ಸೂಚಿಸುತ್ತಾರೆ.

ನೆನಪಿನ ಶಕ್ತಿ ಮತ್ತು ಅದನ್ನು ಹೆಚ್ಚಿಸುವುದು: 

ನೆನಪಿನ ಶಕ್ತಿ ಎಲ್ಲರಿಗೂ ಅವಶ್ಯಕ. ವಿದ್ಯಾರ್ಥಿಗಳಲ್ಲಿ ಇದು ಸ್ವಲ್ಪ ಕಡಿಮೆ. ಬುದ್ಧಿವಂತರೆನಿಸಿಕೊಳ್ಳಲು ಒಳ್ಳೆಯ ನೆನಪಿನ ಶಕ್ತಿ ಅಗತ್ಯವಿದೆ. ಈ ಹಂತದಲ್ಲಿ ಅನೇಕ ಎಡವಟ್ಟುಗಳಾಗಿ ಮುಖ್ಯವಾಗಿ ಏಕಾಗ್ರತೆಯ ಕೊರತೆ ಉಂಟಾಗಿ ನೆನಪಿನ ಪ್ರಕ್ರಿಯೆಯು ಕಡಿಮೆಯಾಗುತ್ತದೆ. ಇದನ್ನು ಉಳಿಸಿಕೊಳ್ಳುವುದು ಮತ್ತು ಸ್ಮರಣೆ ಮಾಡಿಕೊಳ್ಳುವುದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ನೆನಪು ಅಳಿಸಿ ಹೋಗುವ ವೇಗ ಅಧಿಕ. ಅದು ಸ್ಮರಣೆಗೆ ಬಾರದಂತೆ ಅಳಿಸಿ ಹೋಗುತ್ತದೆ. ಇದಕ್ಕೆ  ಕಾರಣವೇನೆಂದರೆ, ಆಸಕ್ತಿ ಇಲ್ಲದಿರುವುದು, ಕುತೂಹಲವನ್ನು ವಿಷಯ ಹುಟ್ಟಿಸದಿರುವುದು, ಲಾಭವಿಲ್ಲದ ವಿಷಯ ಮತ್ತು ಕೌಶಲಗಳು, ಏಕಾಗ್ರತೆ ಇಲ್ಲದಿರುವುದು, ಅರ್ಥವಾಗದ ಮತ್ತು ಕಷ್ಟವಾದ ವಿಚಾರಗಳು, ಮಾನಸಿಕ ಒತ್ತಡ, ದೈಹಿಕ ಅಸ್ವಸ್ಥತೆ ಮುಂತಾದವು.

 ನೆನಪಿನ ಶಕ್ತಿಯನ್ನು ಹೆಚ್ಚಿಸಲು ಕಲಿಕೆಯ ವಿಷಯವನ್ನು ಪ್ರೀತಿಯಿಂದ ಮತ್ತು ಆಸಕ್ತಿಯಿಂದ ಕೇಳಬೇಕು ಹಾಗೂ ಓದಬೇಕು.  ಅರ್ಥ ಮಾಡಿಕೊಂಡಿದ್ದನ್ನು ಇತರರೊಂದಿಗೆ ಚರ್ಚಿಸಬೇಕು ಇಲ್ಲವೇ ಬರೆಯಬೇಕು. ಭಾವನೆಗಳೊಂದಿಗೆ ಮಿಶ್ರಣವಾದ ಮಾಹಿತಿ ಅಥವಾ ಜ್ಞಾನ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ. ಆದ್ದರಿಂದ ಕಲಿತದ್ದನ್ನು ಆಗಾಗ ಮೆಲುಕು ಹಾಕಬೇಕು, ಇಲ್ಲವೇ ಬರೆಯಬೇಕು. ವಿಷಯ ಅಥವಾ ಸಮಸ್ಯೆಯನ್ನು ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಬೇಕು. ನಿರ್ಧಾರ ಕೈಕೊಳ್ಳುವಾಗ ಸರಿ -ತಪ್ಪನ್ನು ವಿಮರ್ಶಿಸಬೇಕು ಅಥವಾ ಅನುಕೂಲಕರ ಹೌದೋ ಅಲ್ಲವೇ ಎನ್ನುವುದನ್ನು ವಿಚಾರಿಸಬೇಕು ಎನ್ನುತಾರೆ.

 ಬುದ್ಧಿವಂತಿಕೆ:

 ವೈಯಕ್ತಿಕ, ಕೌಟುಂಬಿಕ, ಆರ್ಥಿಕ ಮತ್ತು ಸಾಮಾಜಿಕ, ಶೈಕ್ಷಣಿಕ ವಿಚಾರಗಳನ್ನು ಮನನ ಮಾಡಿ ನಿರ್ಧಾರವನ್ನು ಕೈಗೊಳ್ಳಬೇಕು. ನಮ್ಮ ಅನಿಸಿಕೆ, ಅಭಿಪ್ರಾಯ ಮತ್ತು ಆಸೆ, ನಿರೀಕ್ಷೆಗಳನ್ನು ಇತರರಿಗೆ ಪರಿಣಾಮಕಾರಿಯಾಗಿ, ಅರ್ಥವಾಗುವ ಹೇಳುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಇತರರು ಹೇಳಿದ್ದನ್ನು ಅರ್ಥಮಾಡಿಕೊಂಡು ಸ್ಪಂದಿಸಬೇಕು. ಇದನ್ನು ಸಂವಹನ ಕ್ರಿಯೆ ಎಂದು ಕರೆಯಲಾಗುತ್ತದೆ. ಬಳಸುವ ಭಾಷೆ ಸುಂದರವಾಗಿ, ಕೌಶಲಯುತವಾಗಿ ಇರಬೇಕು. ಅಪಾರ್ಥಗಳು, ಸಮಸ್ಯೆಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಹೀಗೆ ಬುದ್ಧಿವಂತಿಕೆಯ ಹಲವು ವಿಶೇಷಗಳನ್ನು ಗರಿಷ್ಠ ಮಟ್ಟಕ್ಕೆ ಅಭಿವೃದ್ಧಿಗೊಳಿಸಿಕೊಳ್ಳುವುದರ ಜೊತೆಗೆ ಬುದ್ಧಿವಂತಿಕೆಯನ್ನು ಸ್ವಕ್ಷೇಮಕ್ಕೆ ಬಳಸಿಕೊಳ್ಳಬೇಕು. ಸಮಾಜದ ವ್ಯವಸ್ಥೆಯನ್ನು ಶೋಷಿಸಲು ನಾಶ ಮಾಡಲು ಬುದ್ಧಿವಂತಿಕೆಯನ್ನು ಬಳಸಬಾರದು ಎಂದು ಎಚ್ಚರಿಸುತ್ತಾರೆ. 

 ಪರೀಕ್ಷಾ  ಭಯ ಮತ್ತು  ಪರಿಹಾರ:

 ಪರೀಕ್ಷಾ  ಭಯ ಮತ್ತು  ಪರಿಹಾರ  ಅಧ್ಯಾಯದಲ್ಲಿ,  ಸ್ಪರ್ಧಾಯುಗದಲ್ಲಿ ಪರೀಕ್ಷೆಯಲ್ಲಿ ಕೇವಲ ಪಾಸಾದರೆ ಸಾಲದು. ನೂರಕ್ಕೆ ೯೦ ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಆದರೆ, ಶೇಕಡ ೨೦ - ೨೫ರಷ್ಟು ಜನರು ಮಾತ್ರ ಈ ಮಟ್ಟವನ್ನು ತಲುಪಲ್ಲರು. ಪ್ರತಿ ವಿದ್ಯಾರ್ಥಿಯ ಮನಸ್ಸಿನಲ್ಲಿ ‘ನಾನು ಫೇಲಾಗಿ ಬಿಟ್ಟರೆ ಕಡಿಮೆ ಅಂಕ ಬಂದರೆ ಅಥವಾ ಬಾರದೇ ಹೋದರೆ’ ಎಂಬ ಅನುಮಾನಗಳು ಸ್ವಾಭಾವಿಕವಾಗಿ ಹುಟ್ಟಿಕೊಳ್ಳುತ್ತವೆ. ಪಾಲಕರು ಅಥವಾ ಶಿಕ್ಷಕರು ಮಕ್ಕಳನ್ನು ತರಾಟೆಗೆ ತೆಗೆದುಕೊಳ್ಳುವುದು ಸಹಜ. ಪರೀಕ್ಷಾ ಭಯ ಕೆಲವರಿಗೆ ಸಣ್ಣ ಪ್ರಮಾಣದಲ್ಲಿ, ಮತ್ತೆ ಕೆಲವರಿಗೆ ಸಾಧಾರಣ, ಶೇಕಡ ಐದರಷ್ಟು ಮಂದಿಗೆ ಅತಿ ತೀವ್ರ ಮಟ್ಟದಲ್ಲಿ ಇರುತ್ತದೆ. ಇದರಿಂದ ಅವರು ನಿಷ್ಕ್ರಿಯಗೊಳ್ಳುತ್ತಾರೆ. ಒಂದು ಹಂತದ ಪರೀಕ್ಷಾ ಭಯ ಇರಲೇಬೇಕು. ಇದರಿಂದ ವಿದ್ಯಾರ್ಥಿ ಜಾಗೃತನಾಗಿರುತ್ತಾನೆ. ತೀವ್ರ ಹಾಗೂ ಅತಿ ತೀವ್ರ ಭಯ ವಿದ್ಯಾರ್ಥಿಗೆ ಮಾರಕವಾಗುತ್ತದೆ.

 ಪರೀಕ್ಷಾ ಭಯವನ್ನು ಪ್ರಕಟಿಸುವ ಮಾರ್ಗಗಳೆಂದರೆ- ತಲೆನೋವು, ಮೈಕೈ ನೋವು, ಕಣ್ಣು ಉರಿ, ಸುಸ್ತು, ಆಯಾಸ, ಪದೇಪದೇ ನೆಗಡಿ, ಕೆಮ್ಮು, ಕಡಿಮೆ ಹಸಿವು,  ಯಾರಿಗೂ ಹೇಳದಂತೆ ದೂರ ಹೋಗಿಬಿಡುವುದು, ಒಂಟಿ ಆಗುವುದು, ಸಾರ್ವಜನಿಕರಿದ್ದಲ್ಲಿ ಹೋಗಲು ನಿರಾಕರಿಸುವುದು, ಸಾಂಸ್ಕೃತಿಕ  ಚಟುವಟಿಕೆಗಳಿಂದ ದೂರವಿರುವುದು, ದುಃಖಿಸುವುದು, ಸಿಟ್ಟು ಮಾಡುವುದು...  ಇದಕ್ಕೆ ಪರಿಹಾರವೆಂದರೆ, ಯಾವ ವಿಷಯ ಕಷ್ಟವೋ ಅದಕ್ಕೆ ಸಂಬಂಧಿಸಿದ ಶಿಕ್ಷಕರನ್ನು ಕಂಡು ವಿಶೇಷ ಕೋಚಿಂಗ್ ಅನ್ನು ಪಡೆಯಬೇಕು. ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕು, ಸಾಮರ್ಥ್ಯದ ಬಗ್ಗೆ ಕೀಳರಿಮೆಯನ್ನು ಬೆಳೆಸಿಕೊಳ್ಳಬಾರದು. ವಿಷಯವನ್ನು ಸರಿಯಾಗಿ ಗ್ರಹಿಸಬೇಕು, ಗ್ರಹಿಸಿದ ವಿಷಯ ಮೆದುಳಿನಲ್ಲಿ ಮುದ್ರಣವಾಗುವಂತೆ ನೋಡಿಕೊಳ್ಳಬೇಕು, ಬೇಕಾದಾಗ ನೆನಪಿಗೆ ಬರುವಂತೆ ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ರಾತ್ರಿ ಕನಿಷ್ಠ ಆರು ಗಂಟೆಗಳ ಕಾಲ ಭಂಗವಿಲ್ಲದೆ ನಿದ್ರೆ ಮಾಡಬೇಕು. ಬುದ್ಧಿವಂತನಾಗಬೇಕಾದರೆ  ಹೆಚ್ಚು ಓದಬೇಕೆಂದು ತಿಳಿಯಬಾರದು ಮತ್ತು ನಿದ್ದೆಗೆಡಬಾರದು.  ನಕಾರಾತ್ಮಕ ಆಲೋಚನೆಗಳನ್ನು ತಡೆಗಟ್ಟಿ, ಸಕಾರಾತ್ಮಕ ವಿಚಾರಗಳನ್ನು ಬೆಳೆಸಿಕೊಳ್ಳಬೇಕು. ಚೆನ್ನಾಗಿ ಪರೀಕ್ಷೆ ಬರೆಯುತ್ತೇನೆ. ನನಗೆ ಒಳ್ಳೆಯದಾಗುತ್ತದೆ ಎಂಬ ಸಕಾರಾತ್ಮಕ ಆಲೋಚನೆಯನ್ನು ಮನಸ್ಸಿನಲ್ಲಿ ನೆಲೆಯೂರಿಸಬೇಕು. ಪರೀಕ್ಷೆಗೆ ನಿರಾತಂಕ, ನಿಶ್ಚಿಂತ ಮನಸ್ಸಿನಿಂದ ಹೋಗಬೇಕು. ಪರೀಕ್ಷೆಯಲ್ಲಿ ಉತ್ತರ ಬರೆಯುವ ಮೊದಲು ೩ ನಿಮಿಷ ಧ್ಯಾನ, ಪ್ರಾಣಾಯಾಮ ಮಾಡಬೇಕು. ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರಿಸಬೇಕು. ಸಮಯದ ಪಾಲನೆ ಮಾಡಬೇಕು. ಪರೀಕ್ಷಾ ಫಲಿತಾಂಶದ ಬಗ್ಗೆ ಚಿಂತೆ- ಆತಂಕ ಬಿಡಬೇಕು. ಆಗ ನಮ್ಮ ಪ್ರಯತ್ನ ಯಶಸ್ವಿಯಾಗುತ್ತದೆ ಎನ್ನುತ್ತಾರೆ.

 ಖಿನ್ನತೆ ಮತ್ತು ಆತ್ಮಹತ್ಯೆ:

 ಖಿನ್ನತೆ ಶೇಕಡ ೧೫ ರಿಂದ ೨೦ರಷ್ಟು ಹರೆಯದವರು ಖಿನ್ನತೆಯಿಂದ ಬಳಲುತ್ತಾರೆ. ನಿರೀಕ್ಷೆಗಳು ಈಡೇರದೆ ಇದ್ದಾಗ ನಿರಾಶೆಯಿಂದ ಖಿನ್ನತೆಗೆ ಒಳಗಾಗುತ್ತಾರೆ. ಸಿಗಬೇಕಾದದ್ದು ಸಿಗದಿದ್ದಾಗ ಬೇಸರ, ದುಃಖ, ನಿರಾಶೆಯಿಂದ ಕಾಯಿಲೆಗೆ ಒಳಗಾಗುತ್ತಾರೆ. ಇದು ಎರಡು ಅಥವಾ ಅದಕ್ಕಿಂತ ಹೆಚ್ಚಿನ ವಾರ ಕಂಡುಬಂದರೆ ಅದಕ್ಕೆ ಚಿಕಿತ್ಸೆಗೆ ಮುಂದಾಗಬೇಕು. ಚಿಕಿತ್ಸೆ ಎಂದರೆ  ಔಷಧಿಗಳು. ಎರಡನೆಯದಾಗಿ, ಆಪ್ತ ಸಲಹೆ ಸಮಾಧಾನ ಪಡೆಯಬೇಕು. ಆತ್ಮಹತ್ಯೆಯಂತಹ ಕೃತ್ಯಕ್ಕೆ ಇದು ಪ್ರಚೋದಿಸುತ್ತದೆ. ಇದನ್ನು ತಪ್ಪಿಸಲು ಪ್ರಯತ್ನಿಸಬೇಕು.  ಆ ರೀತಿ ನಿರ್ಧಾರ ಕೈಗೊಳ್ಳುವಾಗ ತಮಗೆ ಯಾರೂ ಇಲ್ಲ, ತಾನು ಒಂಟಿ. ತನ್ನ ಸಹಾಯಕ್ಕೆ ಯಾರೂ ಬರುತ್ತಿಲ್ಲ, ಅಸಹಾಯಕರು ಎಂದು ಅನಿಸಿಬಿಡುತ್ತದೆ. ಈ ಸಂದರ್ಭದಲ್ಲಿ ಯಾರಾದರೂ ಸಹಾಯ ಅಥವಾ ಆಸರೆ ನೀಡಿದರೆ ಅವರನ್ನು ಆತ್ಮಹತ್ಯೆಯ ಪ್ರಚೋದನೆಯಿಂದ ಹಿಂದೆಗೆಯುವಂತೆ ಮಾಡಬಹುದು.   

  ಪರೀಕ್ಷೆಯಲ್ಲಿ ಫೇಲಾದವರು ಸಹ ಆತ್ಮಹತ್ಯೆಗೆ ಮುಂದಾಗುವುದು ಹೆಚು. ಅಂತಹ ಸಂದರ್ಭದಲ್ಲಿ ಮಿತ್ರರು ‘ಫೇಲ್ ಆಗುವುದು ಅವಮಾನವಲ್ಲ, ಅಪರಾದsವೂ ಅಲ್ಲ’ ಎಂದು ಹೇಳಿ ಒಂಟಿಯಾಗಿರಲು ಬಿಡಬಾರದು. ನೋವು, ನಿರಾಶೆ ಬಗ್ಗೆ ನಿತ್ಯ ವಿಚಾರಿಸಬೇಕು. ಅವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಬೇಕು. ಅವರ ಗುರಿಗಳನ್ನು  ಬದಲಿಸಲು ಯತ್ನಿಸಬೇಕು. ಪುಟ್ಟ ಸಾಧನೆಗಳನ್ನು ಮಾಡಲು ಪ್ರೇರೇಪಿಸಬೇಕು. ಸಾಧನೆ ಮಾಡಿದಾಗ ಅವರನ್ನು ಪ್ರಶಂಸಿಸಬೇಕು. ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ೪೮ ಸೋಲುಗಳ ನಂತರ ಗೆದ್ದಿದ್ದನ್ನು ಉದಾಹರಣೆಯಾಗಿ ಕೊಡಬಹುದು.

ಆತ್ಮವಿಶ್ವಾಸ, ಸ್ವಾಭಿಮಾನದ ಕೊರತೆ ಮತ್ತು ಕೀಳರಿಮೆ: 

 ಕೊನೆಯ ಅಧ್ಯಾಯದಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನದ ಕೊರತೆ ಮತ್ತು ಕೀಳರಿಮೆಯ ಬಗ್ಗೆ ಲೇಖಕರು ವಿವರಿಸಿದ್ದಾರೆ. ಅಲ್ಫ್ರೆಡ್ ಆಡ್ಲರ್ ಎಂಬ ಮನೋವಿಜ್ಞಾನಿ ‘ಪ್ರತಿಯೊಬ್ಬ ವ್ಯಕ್ತಿ ಹುಟ್ಟಿನಿಂದಲೇ ಕೀಳರಿಮೆ ಅನುಭವಿಸುತ್ತಾನೆ’ ಎಂದಿದ್ದಾನೆ. ಎತ್ತರವಿದ್ದರೆ ಎತ್ತರ ಎಂದು, ಕುಳ್ಳಗಿದ್ದರೆ ಕುಳ್ಲ ಎಂದು, ಕಪ್ಪಗಿದ್ದರೆ ಕಪ್ಪು ಎಂದು, ವಯಸ್ಸ್ಸಾದರೂ ಮದುವೆ ಆಗಿಲ್ಲ ಎಂದು, ಮಕ್ಕಳಾಗಿಲ್ಲ, ತನ್ನಲ್ಲಿ ಪ್ರತಿಭೆ ಇಲ್ಲ, ತಾನು ಕೆಳಜಾತಿಯವನು ಹೀಗೆ... ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಚೆನ್ನಾಗಿ ಸದಾ ಮಾಡಿದರೆ, ಕೆಟ್ಟ ಹೆಸರು ಬಾರದಂತೆ ನೋಡಿಕೊಂಡರೆ, ಪ್ರಶಸ್ತಿ ಬಹುಮಾನಗಳನ್ನು ಪಡೆಯುತ್ತಾ ಹೋದರೆ, ಅಭಿನಯ, ಸಾಹಿತ್ಯದಲ್ಲಿ ಪ್ರತಿಭೆಯನ್ನು ತೋರುತ್ತ ಹೋದರೆ, ಹಲವು  ಹತ್ತು ಅಧ್ಯಯನದಲ್ಲಿ ತೊಗಿಕೊಂಡರೆ, ಅಂತಹವರು ಕೀಳರಿಮೆಯಿಂದ ದೂರವಿರುತ್ತಾರೆ. 

 ವಿದ್ಯಾರ್ಥಿಯಾದವನು ಜೀವನ ಕೌಶಲ್ಯಗಳನ್ನು ಕಲಿಯಬೇಕು. ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳುವುದು, ತಮ್ಮ ಕೆಲಸವನ್ನು ಮಾಡುವುದು ಅಥವಾ ಉದ್ಯೋಗವನ್ನು ಪಡೆಯುವುದು ಆಗಲಿ, ನಡೆಯುವ ಘಟನೆಗಳನ್ನು ಎದುರಿಸಲು ಸಿದ್ಧರಾಗುವುದು, ಉದ್ವೇಗಕ್ಕೆ ತುತ್ತಾಗದಿರುವುದು, ಮನಸ್ಸಿಗೆ ಹಿತ ಕೊಡುವ ಚಟುವಟಿಕೆಗಳನ್ನು ಮಾಡುವುದು, ಗೊಂದಲಗಳಿಗೆ ಸಿಲುಕದೇ ಇರುವುದು, ಶುಭ್ರ ಮನಸ್ಸನ್ನು ಬೆಳೆಸಿಕೊಂಡು ಉತ್ತಮ ಚಿಂತನೆ ನಡೆಸುವುದು, ವಿವಿಧ ಚಟುವಟಿಕೆಗಳಲ್ಲಿ ತೊಡಗುವುದು, ಆರೋಗ್ಯಕರ ಆಹಾರವನ್ನು ತಿನ್ನುವುದು, ಸಮಾಜದಲ್ಲಿ ಉತ್ತಮ ಕೆಲಸ ಮಾಡುವುದು,  ಆರೋಗ್ಯಕ್ಕೆ ಮಾರಕವಾದ ಚಟಗಳನ್ನು ದೂರವಿಡುವುದನ್ನು ರೂಢಿಸಿಕೊಂಡರೆ ಆರೋಗ್ಯಪೂರ್ಣ, ನೆಮ್ಮದಿಯ  ಜೀವನವನ್ನು ಆತ್ಮವಿಶ್ವಾಸದಿಂದ, ಸ್ವಾಭಿಮಾನದಿಂದ ನಡೆಸಬಹುದು ಎಂದು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.


-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೧೯. ೧೧. ೨೦೨೬


Comments

Popular posts from this blog