ಅಕ್ಕಮಹಾದೇವಿಯ ಜೀವನ, ಆಧ್ಯಾತ್ಮಿಕ ಪಯಣದ

’ಅಕ್ಕಮಹಾದೇವಿ’ 



ಮಾಗಡಿ ಸಮೀಪದ ಸುಗ್ಗನಹಳ್ಳಿ ರುದ್ರಮೂತಿ೯ ಶಾಸ್ತ್ರಿಗಳು ಅಧುನಿಕ ಕನ್ನಡ ಸಾಹಿತ್ಯ ಲೇಖಕರು, ಕಾದಂಬರಿಕಾರರು, ಚಿತ್ರಕತೆ ಸಂಭಾಷಣೆಕಾರು ಮತ್ತು ಗೀತೆ ರಚನಗಾರರು.  ಎಂ ಎ ಕನ್ನಡ ಪದವಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದು ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇವರ ಪ್ರಮುಖ ಕೃತಿಗಳೆಂದರೆ-  ಭಾವ ಲಹರಿ, ಪರಿ, ಅಂತರಂಗ ಬಹಿರಂಗ, ಚಿತ್ರಕಲ್ಪನೆ, ರಾಗ, ನಾದಗೀತೆಗಳು, ನಾದರೂಪಕ ಕವನ ಸಂಕಲನ, ಪ್ರಾಸ-ಪ್ರಯಾಸ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು, ಕೆಂಪ ರಾಮಾಯಣಂ (ಕವನ ಸಂಕಲನ)

ಕಾದಂಬರಿಗಳು- ಚಾಣಕ್ಯ, ಧರ್ಮ ಚಕ್ರವರ್ತಿ ಅಶೋಕ, ಸರ್ವಜ್ಞ, , ಔರಂಗಜೇಬ, ಚಾರುದತ್ತ, ರಾಧಾ ರಜನಿ, ಬಣ್ಣದ ಹಕ್ಕಿ ಮಣ್ಣಿನ ಋಣ, ಸ್ವಪ್ನ ಗಾನ ಮೊದಲಾದಾದವು.


ಕೃತಿಯ ಸಾರಾಂಶ:

 

ಸು. ರುದ್ರಮೂರ್ತಿ ಶಾಸ್ತ್ರಿ   ಅವರು ಬರೆದಿರುವ ’ಅಕ್ಕಮಹಾದೇವಿ’ ಕಾದಂಬರಿಯು ೧೨ನೇ ಶತಮಾನದ ಪ್ರಸಿದ್ಧ ವಚನಗಾರ್ತಿ, ಶರಣೆ ಅಕ್ಕಮಹಾದೇವಿಯ ಜೀವನ ಮತ್ತು ಆಧ್ಯಾತ್ಮಿಕ ಪಯಣವನ್ನು ಆಧರಿಸಿದ ಸುಂದರ ಕೃತಿಯಾಗಿದೆ. ಇದರಲ್ಲಿ ಆಕೆಯ  ಜನನ ಮತ್ತು ಬಾಲ್ಯ, ಆಧ್ಯಾತ್ಮ ಮತ್ತು ಚನ್ನಮಲ್ಲಿಕಾರ್ಜುನನತ್ತ  ಒಲವು,  ಕೌಶಿಕ ರಾಜನೊಂದಿಗೆ ವಿವಾಹ, ಸಂಸಾರ ತ್ಯಾಗ ಮತ್ತು ವೈರಾಗ್ಯ, ಅನುಭವ ಮಂಟಪಕ್ಕೆ ಪಯಣ, ಶ್ರೀಶೈಲದ ಕಡೆಗೆ ಯಾತ್ರೆ, ಕದಳಿವನ ಸೇರಿ ಅಜರಾಮರಳಾಗುವುದರ ಚಿತ್ರಣವನ್ನು ಬಹುಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅಕ್ಕಮಹಾದೇವಿಯ ಕೆಲವು  ವಚನಗಳು ಇದರಲ್ಲಿವೆ. ಲೌಕಿಕತೆಯಿಂದ ಅಲೌಕಿಕತೆಯ ಕಡೆಗೆ ಸಾಗುವ ಆಕೆಯ ತ್ಯಾಗಮಯ ಬದುಕನ್ನು ಮತ್ತು ೧೨ನೇ ಶತಮಾನದ ಸಾಮಾಜಿಕ ಹಾಗೂ ಶರಣ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಕೃತಿಯನ್ನು ಚಿತ್ರಿಸಿದ್ದಾರೆ.

 ಕೃತಿಯ ಕುರಿತು:

 ದೈವದ ಹರಕೆಯಿಂದ ನಿರ್ಮಲ ಮತ್ತು ಸುಮತಿ ದಂಪತಿಗಳಿಗೆ ಉಡುತಡಿಯಲ್ಲಿ ಜನಿಸಿದವಳು iಹಾದೇವಿ. ನೋಡಲು ಬಹಳ ಸುಂದರ,  ನಗುವಿನಿಂದ, ಆಟ- ಪಾಠಗಳಿಂದ ತಂದೆ ತಾಯಿಗಳ ಮತ್ತು ಊರವರ ಪ್ರೀತಿಗೆ ಪಾತ್ರಳಾಗಿದ್ದಳು. ದೇವಸ್ಥಾನಕ್ಕೆ ಹೋದರೆ ಅಲ್ಲಿ ಶಿವಲಿಂಗವನ್ನೇ ತದೇಕಚಿತ್ತದಿಂದ ನೋಡುತ್ತಿದ್ದಳು. ಭಕ್ತಿಯ ಪುತ್ಥಳಿ ಎಂದು ಅರ್ಚಕರು ಹೇಳುತ್ತಿದ್ದರು. ಹೀಗೆ ಮನೆಮಾತಾದ ಮಹಾದೇವಿ ಆಟಿಕೆಗಳನ್ನು ತಂದು ಕೊಟ್ಟರೆ ಅವುಗಳನ್ನು ಬಿಸಾಡಿ ಕಲ್ಲುಗಳನ್ನು ಇಟ್ಟುಕೊಂಡು ಶಿವಲಿಂಗದ ಪೂಜೆಯ ಆಟ ಮಾಡುತ್ತಿದ್ದಳು. ಈಕೆ ಎಲ್ಲರಂತವಳಲ್ಲ ಎನ್ನುವುದನ್ನು ಅರ್ಥಮಾಡಿಕೊಂಡರು ಪಾಲಕರು.

 ಮಹಾದೇವಿಯ ಅಂತರಂಗದಲ್ಲಿ ಭಕ್ತಿಭಾವವು ಬೆಳೆಯುತ್ತಿತ್ತು. ಮಂದಿರದಲ್ಲಿ ಮೈಮೇಲೆ ಪ್ರಜ್ಞೆ ಇಲ್ಲದಂತೆಯೇ ಕುಳಿತು ಬಿಡುತ್ತಿದ್ದಳು. ಇಂಪಾಗಿ ಹಾಡುತ್ತಿದ್ದಳು.ಪುರಾಣದ ಕಥೆಗಳನ್ನು ಕೇಳಿ ಚನ್ನಮಲ್ಲಿಕಾರ್ಜುನ ಅತ್ಯಂತ ಸುಂದರ, ತಾನು ಅವನ ಒಲುಮೆಗೆ ಪಾತ್ರನಾಗಬೇಕು. ಅವನ ಸನ್ನಿಧಿಯನ್ನು ಸೇರಬೇಕು ಎಂಬ ಭಾವನೆ ಆಕೆಯಲ್ಲಿ ಬಲಿಯತೊಡಗಿತ್ತು. ಹನ್ನೆರಡು ವರ್ಷ ಆಗುತ್ತಿದ್ದಂತೆಯೇ ತಂದೆ ತಾಯಿ ಆಕೆಯ ಮದುವೆಯನ್ನು ಮಾಡಲು ನಿರ್ಧರಿಸುತ್ತಾರೆ. ಕೆಟ್ಟುಹೋಗುವ ಈ ಲೋಕದ ಗಂಡನ ಗೊಡವೆ ನನಗೆ ಬೇಡ ಎನ್ನುತ್ತಾ  ರಾತ್ರಿ ಮನೆಯಲ್ಲಿ ಕುಳಿತು ‘ಗಿರಿಯಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೇ ನವಿಲು’ ಎಂಬ ವಚನವನ್ನು ಬರೆದು ಓದುತ್ತಾಳೆ. ತಾನು ಚ

ನ್ನಮಲ್ಲಿಕಾರ್ಜುನನನ್ನು ಪತಿಯಾಗಿ ಭಾವಿಸಿ ಸಾಧನೆ ಮಾಡುವುದು ಹೆಚ್ಚು ಸಹಜ ಎನ್ನುಕೊಳ್ಳುತ್ತಾಳೆ. ಹಾಗೆಯೇ ಮದುವೆಯಾಗುವುದಿಲ್ಲ ಎಂದು ಪಟ್ಟು ಹಿಡಿಯುತ್ತಾಳೆ 

 ತನ್ನ ಗೆಳತಿಯರಾದ ಗೌರಿ ಮತ್ತು ಸರಸ್ವತಿಯ ಜೊತೆ ಕುಳಿತಿರುವಾಗ ಕೌಶಿಕ ಮಹಾರಾಜನ ಮೆರವಣಿಗೆ ಅದೇ ದಾರಿಯಲ್ಲಿ ಬರುತ್ತದೆ. ಮೆರವಣಿಗೆಯಲ್ಲಿ ಬಂದ ರಾಜನ ದೃಷ್ಟಿ ಮಹಾದೇವಿಯ ಮೇಲೆ ಬೀಳುತ್ತದೆ. ಮೇಲೆ ಆತನ ಚಿತ್ತ ಚಾಂಚಲ್ಯವಾಗುತ್ತದೆ. ಎಂತಹ ಅಪೂರ್ಣ ಲಾವಣ್ಯವತಿ ಎಂದುಕೊಳ್ಳುತ್ತಾನೆ. ಅರಮನೆಗೆ ಮೆರಣಿಗೆ ಮರಳಿದ ನಂತರ ಆತ ಆಕೆಯ ಮೋಹಾಂಧಕಾರದಲ್ಲಿ ಮುಳುಗುತ್ತಾನೆ.

  ಆಕೆಯನ್ನು  ಪಡೆಯಲೇಬೇಕೆಂದು ಹಪಹಪಿಸುತ್ತಾನೆ. ತನ್ನ ಮಂತ್ರಿಯನ್ನು ಕರೆದು ಆಕೆಯ ಮನೆಗೆ ಹೋಗಿ ಮಾತನಾಡುವಂತೆ ಸೂಚಿಸುತ್ತಾನೆ.  ಆಕೆ ಮನೆಯವರು ಮಂತ್ರಿಯ ಸೂಚನೆಯನ್ನು ನಿರಾಕರಿಸುತ್ತಾರೆ.  ಆಕೆ ನಾನು ಮಾನಸಿಕವಾಗಿ ಈಗಾಗಲೇ ಚೆನ್ನಮಲ್ಲಿಕಾರ್ಜುನನನ್ನು ಮದುವೆಯಾಗಿದ್ದೇನೆ. ಪ್ರತಿದಿನ ಪ್ರೇಮಕ್ಕಾಗಿ ಆತನಲ್ಲಿದ್ದೇನೆ. ಮದುವೆ ನನಗೆ ಇಷ್ಟವಿಲ್ಲ ಎಂದು ಹೇಳಿ ಕಳುಹಿಸುತ್ತಾಳೆ.  ನಾನು ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚೆಲುವನಾದ ಚನ್ನಮಲ್ಲಿಕಾರ್ಜುನನಿಗೆ ಒಲಿದವಳು. ಈ ಕೌಶಿಕ ನಂತಹ ಸಾಯುವ, ಕೆಡುವ ಗಂಡಂದಿರನ್ನು ಒಯ್ದು ಒಲೆಯೊಳಗೆ ಹಾಕು ಎಂದು ಹೇಳಿ ಕಳಿಸುತ್ತಾಳೆ. 

 ಕೌಶಿಕನ ಕಾಟ ಹೆಚ್ಚಾದಾಗ ನನ್ನಿಂದಾಗಿ ತಂದೆ ತಾಯಿಗೆ ಸಂಕಟದ ಪರಿಸ್ಥಿತಿ ಉಂಟಾಯಿತಲ್ಲ ಎಂದು ಬೇಸರಿಸುತ್ತಾಳೆ. ಈ ಮದುವೆಗೆ ತಾನು ಒಪ್ಪುವುದಾಗಿ ಹೇಳಿ ಕಳಿಸುತ್ತಾಳೆ. ಪಾಲಕರಲ್ಲಿ ಮಲ್ಲಿಕಾರ್ಜುನನ ಮೇಲಿನ ದೃಢ ಪ್ರೇಮದಿಂದಲೇ ನಾನು ಆತನನ್ನು ಸೋಲಿಸಿ ಸ್ವತಂತ್ರಳಾಗಿ ಬರುತ್ತೇನೆ ಎನ್ನುತ್ತಾಳೆ  ಮಂತ್ರಿಗೆ ಮೂರು ಶರತ್ತನ್ನು ಹಾಕಿ ಈ ಮದುವೆಗೆ ಒಪ್ಪಿರುವುದಾಗಿ ಹೇಳು ಎನ್ನುತ್ತಾಳೆ. ಆ ಮೂರು ಶರತ್ತು ಏನೆಂದರೆ-  ಮೂರು ತಿಂಗಳವರೆಗೆ ವೃತ ಕೈಗೊಂಡಿದ್ದೇನೆ. ಅದು ಮುಗಿಯುವವರೆಗೆ ನನ್ನ ತಂಟೆಗೆ ಬರಬಾರದು,  ಈ ಅವಧಿಯಲ್ಲಿ ಸಂಪೂರ್ಣವಾಗಿ ನನ್ನ ಪಾಡಿಗೆ ನನ್ನನ್ನು ಬಿಡಬೇಕು ಮತ್ತು  ಅದನ್ನು ಪ್ರಶ್ನೆ ಮಾಡಬಾರದು. ಯಾವುದಕ್ಕೂ ಅಡ್ಡಿಪಡಿಸಬಾರದು. ಈ  ಮೂರು ತಪ್ಪುಗಳನ್ನು ಮಾಡಿದರೆ ಆ ಕ್ಷಣವೇ ನಾನು ಅರಮನೆಯನ್ನು ಬಿಟ್ಟು ಬರುತ್ತೇನೆ ಎಂದು ಹೇಳುತ್ತಾಳೆ. ಈ ನಿಬಂಧನೆಗಳಿಗೆ ಒಪ್ಪಿರುವುದಾಗಿ ಅರಮನೆಯ ಹಿರಿಯ ಅಧಿಕಾರಿಗಳು ಮತ್ತು ಊರಿನ ಪ್ರಮುಖರ ಎದುರು ಕೌಶಿಕ ಘೋಷಿಸಬೇಕೆಂದು 

ಹೇಳುತ್ತಾಳೆ. ಸರಳವಾಗಿ ಆಕೆಯನ್ನು ಮದುವೆಯಾಗುತ್ತಾನೆ.

 ಮದುವೆಯಾದ ನಂತರ ಆಕೆ ಅರಮನೆಯಲ್ಲಿ ಪೂಜೆ ಧ್ಯಾನದಲ್ಲಿ ನಿರತರಾಗುತ್ತಾಳೆ, ಜಂಗಮರನ್ನು, ಶಿವಭಕ್ತರನ್ನು ಕರೆಸಿ ಭಜನೆ, ಶಿವಕೀರ್ತನೆ ನಡೆಸಿ ಉಪಚಾರ ಮಾಡುತ್ತಾಳೆ. ಇದನ್ನೆಲ್ಲ ಆತನಿಗೆ ಸಹಿಸಲಾಗುವುದಿಲ್ಲ. ಈ ದರಿದ್ರರ ಕಾಲು ಮುಟ್ಟಿ ನಮಸ್ಕರಿಸುತ್ತೀಯ,  ಬೀದಿ ಬದಿಯ ಈ ಭಿಕ್ಷುಕರಿಗೆ ಅರಮನೆಯಲ್ಲಿ ನನ್ನ ಅನುಮತಿ ಇಲ್ಲದೆ ಹೇಗೆ ಔತಣವನ್ನು ಕೊಟ್ಟೆ ಎಂದೆಲ್ಲ ಕೂಗಾಡಿದಾಗ  ನಿನ್ನ ಮೂರೂ ತಪ್ಪುಗಳು ನಡೆದು ಹೋದವು ಎನ್ನುತ್ತಾ ಹೊರಡಲುನುವಾದಾಗ ‘ನಿನ್ನನ್ನು ತಡೆಯುತ್ತೇನೆ ಇಲ್ಲಿಂದ ಹೋಗುವಂತಿಲ್ಲ’ ಎನ್ನುತ್ತಾನೆ. ‘ನೀನು ತಡೆದರೆ ಇಲ್ಲಿಯೇ ಕಠಾರಿಯಿಂದ ಇರಿದುಕೊಂಡು ಪ್ರಾಣ ಬಿಡುತ್ತೇನೆ’ ಎಂದು ಕಠಾರಿಯನ್ನು ಅಕ್ಕ ತೆಗೆದುಕೊಂಡಾಗ ಹೆದರಿ ಕೌಶಿಕ ಹಿಂದೆ ಸರಿದ. ಪಶ್ಚಾತಾಪ ಆತನಿಗೆ ಮೂಡಿತು. 

ಕೈ ಮುಗಿದ  ಅರಮನೆಯನ್ನು ಬಿಟ್ಟು ಹೋಗಬೇಡ ಎಂದು ಕೈ ಮುಗಿದ ಕ್ಷಣಗಳಲ್ಲಿ ತನ್ನ ದೇಹದ ಎಲ್ಲ ವಸ್ತ್ರಗಳನ್ನು ಕಿತ್ತೆಸೆದು ತಲೆಗೂದಲಿನ ಗಂಟನ್ನು ಬಿಚ್ಚಿ ನೀಳ ಕೇಶರಾಶಿ ಮೂಲಕ ತನ್ನ ನಗ್ನ ದೇಹವನ್ನು ಮುಚ್ಚಿಕೊಂಡು, ನನಗೆ ಊರು, ತಂದೆ, ತಾಯಿ, ಬಂಧು, ಮಿತ್ರರ  ಹಂಗು ಹರಿದುಹೋಯಿತು. ಇನ್ನು ನಾನು ಚನ್ನಮಲ್ಲಿಕಾರ್ಜುನ ಸತಿಯಾಗಿದ್ದೇನೆ. ಆತನನ್ನು ಹುಡುಕಿಕೊಂಡು ಅಲ್ಲಿಗೆ ತೆರಳುತ್ತೇನೆ ಎನ್ನುತ್ತಾ ಹೊರಟು ಹೋಗುತ್ತಾಳೆ. ಕಾಡು, ಮೇಡು, ಗುಡ್ಡ, ಹಳ್ಳಿ ಎಲ್ಲವನ್ನೂ ದಾಟಿ ಕೊನೆಗೂ ಆಕೆ ಕಲ್ಯಾಣವನ್ನು ಹಲವು ದಿನಗಳ ಪಾದಯಾತ್ರೆಯ ಮೂಲಕ ತಲುಪುತ್ತಾಳೆ. ಅಲ್ಲಿ ಬಸವಣ್ಣ, ಅಲ್ಲಮಪ್ರಭು ಮೊದಲಾದವರನ್ನು ಭೇಟಿ ಮಾಡುತ್ತಾಳೆ. ಈಕೆಯ ಭಕ್ತಿಯ ಪರಾಕಾಷ್ಠೆ ಅವರನ್ನೂ ಆಶ್ಚರ್ಯಚಕಿತರನ್ನಾಗಿಸುತ್ತದೆ. ಅಲ್ಲಪ್ರಭು ಜೊತೆ ವಾದ-ವಿವಾದ ನಡೆದಾಗ ಅವರೆಲ್ಲರೂ ಈಕೆಯನ್ನು ಮೆಚ್ಚಿ ಶರಣು ಎನ್ನುತ್ತಾರೆ. ಬಸವಣ್ಣನಿಂದ ಲಿಂಗಧಾರಣೆ ಮಾಡಿಸಿಕೊಳ್ಳ್ಲುತ್ತಾಳೆ. ಹಲವು ದಿನದ ನಂತರ ಕಲ್ಯಾಣ ತೊರೆದು ಶ್ರೀಶೈಲದತ್ತ ತೆರಳಲು ನಿರ್ಧರಿಸುತ್ತಾಳೆ. ಎಲ್ಲರಿಗೂ ಪಾದಮುಟ್ಟಿ ನಮಸ್ಕರಿಸಿ ಹೊರಡುವಳು. ದುರ್ಗಮ ಹಾದಿ ಸವೆಸಿ ಶ್ರೀಶೈಲಕ್ಕೆ ತೆರಳಿ ಕದಳಿವನ ಸೇರಿ ತಪೋನಿತರಳಾಗುತ್ತಾಳೆ. ಅಲ್ಲಿಯೇ ಅಜರಾಮರಳಾಗುತ್ತಾಳೆ.

ಹೀಗೆ  ನಮ್ಮನ್ನು ಓದಿಸಿಕೊಂಡು ಹೋಗುವ ಅತ್ಯಂತ ಸುಂದರ ಕಾದಂಬರಿ ಇದು. 

 ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೧೬. ೧೧. ೨೦೨೬

......................



Comments

Popular posts from this blog