ಸರಳ, ಸಜ್ಜನ, ಕನ್ನಡಿಗರ ಅಭಿಮಾನದ
‘ಅಭಿವೃದ್ಧಿಯ ಹರಿಕಾರ ಡಿ. ದೇವರಾಜ ಅರಸು’
ದೇವರಾಜ ಅರಸು ಅವರು ನಾಡು ಕಂಡ ಶ್ರೇಷ್ಠ ಆಡಳಿತಗಾರ ಮತ್ತು ರಾಜ್ಯದ ಜನತೆಯ ಬಗ್ಗೆ ನಾಡಿನ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡವರು. ಸಾಮಾಜಿಕ ನ್ಯಾಯದ ಮಹಾಪುರುಷ ಎಂದು ಅವರನ್ನು ಕರೆಯಲಾಗುತ್ತದೆ. ಸತತ ಎರಡು ಬಾರಿ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ಅವರು, ಹುಣಸೂರು ಕ್ಷೇತ್ರದಿಂದ ೫ ಬಾರಿ ಆರಿಸಿ ಬಂದದ್ದು ಸಹ ಒಂದು ದಾಖಲೆ. ಸಚಿವರಾಗಿಯೂ ಸುದೀರ್ಘ ಸೇವೆ ಸಲ್ಲಿಸಿದವರು. ಸ್ವಲ್ಪವೂ ಆಸ್ತಿ ಮಾಡದೆ ಅಧಿಕಾರ ಎನ್ನುವುದು ಜನರ ಸೇವೆಗಾಗಿ ಎಂದು ಭಾವಿಸಿದವರು. ಇಂತಹ ಅವಿಸ್ಮರಣೀಯ ರಾಜಕಾರಣಿ, ಹಿಂದುಳಿದ ವರ್ಗಗಳ ಹರಿಕಾರನ ಕುರಿತು ಶಿವಮೊಗ್ಗದ ನಾಗರತ್ನಾ ಕುಮಾರ್ ಬರೆದ, ಕಳೆದ ವಾರವಷ್ಟೇ ಬಿಡುಗಡೆಯಾದ ಅಪೂರ್ವ ಮಾಹಿತಿಯ ಕೃತಿ ಇದು.
ಅರಸು ಪರಿಸ್ಥಿತಿಯ ಒತ್ತಡದಿಂದ ಮತ್ತು ಹಿರಿಯರ ಬಲವಂತದಿಂದ ರಾಜಕೀಯಕ್ಕೆ ಬಂದವರು. ಅವರ ಆಡಳಿತದ ಕಾಲವನ್ನು ‘ಅರಸು ಯುಗ’ ಎಂದು ಕರೆಯಿಸಿಕೊಳ್ಳುವ ಮಟ್ಟಕ್ಕೆ ಏರಿತ್ತು ಎಂದರೆ ಅವರ ವ್ಯಕ್ತಿತ್ವದ ಪರಿಚಯವಾಗುತ್ತದೆ. ಇಂತಹ ಮುಖ್ಯಮಂತ್ರಿ ದೇವರಾಜು ಅರಸು ಅವರ ಕುರಿತ ವ್ಯಕ್ತಿತ್ವ ಸಾಧನೆ ಕುರಿತಾದ ಕೃತಿ ಇದಾಗಿದೆ. ಇದರಲ್ಲಿ ೧೯ ಅಧ್ಯಾಯಗಳಿವೆ. ಅವರ ಜನನ, ಮನೆತನ ಮತ್ತು ಬಾಲ್ಯದಿಂದ ಹಿಡಿದು ರೂಪಿಸಿದ ಯೋಜನೆಗಳು, ಆಡಳಿತ, ಕ್ರಾಂತಿಕಾರ ನಿರ್ಧಾರಗಳು, ಜೀವನದ ಅಪೂರ್ವ ಘಟನೆಗಳು ಮತ್ತು ಅವರ ಆಳ್ವಿಕೆಯ ಕುರಿತ ನುಡಿಮುತ್ತುಗಳು ಕೃತಿಯಲ್ಲಿ ದಾಖಲಾಗಿವೆ.
ಅರಸು ೧೯೪೦ರ ವೇಳೆಗೆ ಮನಸ್ಸಿಲ್ಲದಿದ್ದರೂ ಹಿರಿಯರ ಒತ್ತಾಯದ ಮೇರೆಗೆ ಮದುವೆಯಾಗಿ, ಹಳ್ಳಿಯ ಬದುಕಿನಲ್ಲಿ ತಲ್ಲೀನರಾಗಿದ್ದಾಗ ರೈತರ ಬವಣೆ, ಕಷ್ಟ ಎದುರಿಸುತ್ತಿರುವುದರ ಅನುಭವವಾಗುತ್ತದೆ. ಯಾವುದಕ್ಕೂ ರಾಜಕೀಯವಾಗಿ ಅಧಿಕಾರವಿದ್ದರೆ ಮಾತ್ರ ಇಂತಹ ಜನರಿಗೆ ನೆರವಾಗಬಹುದು ಎನ್ನುವುದು ಅವರಲ್ಲಿ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಅವರು ಸಾರ್ವಜನಿಕ ಒತ್ತಡದಿಂದ ರಾಜಕಾರಣಕ್ಕೆ ಕಾಲಿಡುತ್ತಾರೆ. ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾಗುತ್ತಾರೆ. ಸ್ವಾತಂತ್ರ್ಯ ನಂತರ ೧೯೫೨ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಾಗ ಮೈಸೂರಿನ ಹುಣಸೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುತ್ತದೆ. ಗೆದ್ದು ಬರುತ್ತಾರೆ. ನಂತರ ತಮಗೆ ರಾಜಕೀಯದಲ್ಲಿ ಎದುರಾಳಿಗಳೇ ಇಲ್ಲವೇನೋ ಎಂಬಂತೆ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸತತವಾಗಿ ಚುನಾವಣೆಯನ್ನು ಅದೇ ಕ್ಷೇತ್ರದಿಂದ ಗೆದ್ದು ಬರುತ್ತಾರೆ.
ರಾಜಕೀಯ ಜೀವನ:
ನಿಜಲಿಂಗಪ್ಪ, ಬಿ.ಡಿ. ಜತ್ತಿ, ವೀರೇಂದ್ರ್ರ ಪಾಟೀಲ್ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡುತ್ತಾರೆ. ೬೯ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ಕರ್ನಾಟಕದಲ್ಲಿ ಇಂದಿರಾ ಕಾಂಗ್ರೆಸ್ ಕಟ್ಟಿ ಬೆಳೆಸಿದವರಲ್ಲಿ ಅರಸು ಪಾತ್ರ ಪ್ರಮುಖವಾದದ್ದು. ಇದರ ಫಲವಾಗಿ ೬೯ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ೨೭ ಸದಸ್ಯರು ಆಯ್ಕೆಯಾಗಿ ದಾಖಲೆ ಸೃಷ್ಟಿಸುತ್ತಾರೆ. ಅವರ ತಂತ್ರಗಾರಿಕೆ ಮತ್ತು ಜನಪ್ರಿಯತೆಯಿಂದಾಗಿ ಇಂದಿರಾ ಕಾಂಗ್ರೆಸ್ ಬಲಿಷ್ಠವಾಗುತ್ತದೆ. ಇಂದಿರಾ ಒಳ್ಳೆಯ ಅಭಿಪ್ರಾಯ ಹೊಂದಲು ಇದು ಕಾರಣವಾಯಿತು. ಅವರ ರಾಜಕೀಯ ಜೀವನಕ್ಕೂ ಸಹ ಇದು ಮುನ್ನುಡಿ ಬರೆಯಿತು. ೧೯೭೨ ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅರಸು ಅವರ ಅವಿರತ ಶ್ರಮದಿಂದ ಕರ್ನಾಟಕದಲ್ಲಿ ಇಂದಿರಾ ಕಾಂಗ್ರೆಸ್ ೧೬೫ ಸ್ಥಾನಗಳನ್ನು ಗಳಿಸಿ ಅದ್ದೂರಿ ಜಯ ಗಳಿಸಿತು. ಇದರಿಂದಾಗಿ ಪಕ್ಷದ ನಾಯಕನಾಗಿ ದೇವರಾಜ ಅರಸು ಅವರನ್ನು ಇಂದಿರಾಗಾಂಧಿ ಆಯ್ಕೆ ಮಾಡುವಂತೆ ಸೂಚಿಸುತ್ತಾರೆ.
ಮುಖ್ಯಮಂತ್ರಿಯಾದ ಆರಂಭದಲ್ಲಿಯೇ ಹಿಂದುಳಿದ ಮತ್ತು ದಲಿತ ರಾಜಕೀಯ ಸಂಘಟನೆ, ಬಡವರ ಏಳಿಗೆಗಾಗಿ ಆರ್ಥಿಕ ಪರಿವರ್ತನೆ ಇವೆರಡನ್ನು ಆರಂಭದಲ್ಲಿ ಜಾರಿಗೆ ತಂದರು. ಉತ್ತಮ ಆರ್ಥಿಕ ಅಡಿಪಾಯ ಹಾಕಿ, ಹಿಂದುಳಿದ ವರ್ಗದವರ ಆಶಾಕಿರಣವಾಗಿ ಹೊರಹೊಮ್ಮುತ್ತಾರೆ. ಎಲ್ಲರ ಪ್ರೀತಿ ಗೌರವಗಳನ್ನು ಸಂಪಾದಿಸಿ ಪಟ್ಟಭದ್ರ ಹಿತಾಸಕ್ತಿಗಳನ್ನು ಹಿಮ್ಮೆಟ್ಟಿಸಿ ರಾಜ್ಯ ರಾಜಕೀಯದಲ್ಲಿ ಹೊಸ ಭಾಷ್ಯ ಬರೆದರು. ಮೊದಲ ಬಾರಿಯೇ ೫ ವರ್ಷ ಮುಖ್ಯಮಂತ್ರಿ ಆಗಿ ಅವರು ಮಾಡಿದ ಸಾಧನೆ ಅಸಾಧಾರಣವಾದದು. ಇಂದಿಗೂ ಇತಿಹಾಸದ ಪುಟದಲ್ಲಿ ಅವರ ಹೆಸರನ್ನು ಅದು ಅಜರಾಮರಗೊಳಿಸಿದೆ. ೧೯೭೩ರ ನವೆಂಬರ್ ಒಂದರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಕೀರ್ತಿ ಅರಸರಿಗೆ ಸಲ್ಲುತ್ತದೆ. ತುರ್ತು ಪರಿಸ್ಥಿತಿಯ ನಂತರ ಇಂದಿರಾಗಾಂಧಿಯವರು ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಾರೆ. ಇದಕ್ಕೆ ಅರಸು ಮುಖ್ಯ ಕಾರಣ. ಇದರಿಂದಾಗಿ ೭೮ ರಲ್ಲಿ ಅರಸು ಮತ್ತೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಾರೆ. ಅರಸು ಇಂದಿರಾ ಗಾಂಧಿಯವರ ಅವಿಚ್ಛಿನ್ನ ಬೆಂಬಲಿಗರಾಗಿ, ನಿಷ್ಠಾವಂತ ಕಾರ್ಯಕರ್ತರಾಗಿದ್ದರು.
ಆದರೆ ಇಂದಿರಾ ಅವರ ನಿರಂಕುಶ ಧೋರಣೆ, ಆಂತರಿಕ ಕಲಹ ಅರಸುಗೆ ಸರಿಬರಲಿಲ್ಲ. ಲೋಕಸಭೆಗೆ ರಾಯ್‌ಬರೇಲಿಯಲ್ಲಿ ಚುನಾವಣೆಯಲ್ಲಿ ಇಂದಿರಾ ಸೋಲನನುಭವಿಸಿದ ಮೇಲೆ ಅವರ ನಾಯಕತ್ವವನ್ನು ಅರಸು ಪ್ರಶ್ನಿಸಿದರು. ಇದರಿಂದಾಗಿ ಅರಸು -ಇಂದಿರಾ ಮಧ್ಯೆ ಬಿರುಕು ಕಾಣಿಸಿಕೊಂಡಿತು. ವಿಶೇಷವಾಗಿ ಇಂದಿರಾ ಅವರ ಮಗ ಸಂಜಯ್ ಗಾಂಧಿ ಹಸ್ತಕ್ಷೇಪ ಮಾಡುತ್ತಿದ್ದು ಸರಿಬರುತ್ತಿರಲಿಲ್ಲ. ಅರಸು ಅಭಿಪ್ರಾಯಗಳಿಗೆ ಸಂಜಯ್ ಮನ್ನಣೆ ಕೊಡುತ್ತಿರಲಿಲ್ಲ. ಹೀಗೆ ಭಿನ್ನಮತ ಇಬ್ಬರ ಮಧ್ಯೆ ತಾರಕಕ್ಕೆ ಏರಿದಾಗ ಶಿಸ್ತು ಉಲ್ಲಂಘನೆ ಆರೋಪದ ಮೇಲೆ ಅರಸು ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತದೆ. ಆಗ ಅರಸು ಅವರ ಗರಡಿಯಲ್ಲೇ ಬೆಳೆದಿದ್ದ ಬಂಗಾರಪ್ಪ, ಗುಂಡೂರಾವ್, ವೀರಪ್ಪ ಮೊಯಿಲಿ, ಎಫ್‌ಎಂ ಖಾನ್ ಮುಂತಾದವರು ಸಹ ಬೆಂಬಲಿಸಲಿಲ್ಲ.
ಕರ್ನಾಟಕ ಕಾಂಗ್ರೆಸ್ ಎಂಬ ಪಕ್ಷವನ್ನು ಅರಸು ಕಟ್ಟಿದರು. ೧೯೮೦ ರಲ್ಲಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ೨೭ ಸ್ಥಾನಗಳನ್ನು ಇಂದಿರಾ ಕಾಂಗ್ರೆಸ್ ಗೆದ್ದಿತು. ಕೆಲವೇ ಗಂಟೆಗಳಲ್ಲಿ ತಮ್ಮ ಸ್ಥಾನಕ್ಕೆ ಅರಸು ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಾರೆ. ೧೯೮೦ ರಲ್ಲಿ ಕ್ರಾಂತಿರಂಗ ಎಂಬ ಪಕ್ಷವನ್ನು ಕಟ್ಟಿದರು. ಅರಸು ಅವರು ಲವಲೇಶವೂ ಭ್ರಷ್ಟಾಚಾರಿಯಾಗಿರಲಿಲ್ಲ. ಆದರೆ ಭ್ರಷ್ಟಾಚಾರದ ಕಳಂಕ ಅವರಿಗೆ ಬಂದಿತು. ಅವರ ಮೇಲೆ ಇದ್ದ ಇನ್ನೊಂದು ಗುರುತರ ಆರೋಪ ಏನೆಂದರೆ ರೌಡಿ ಸಂಸ್ಕೃತಿಗೆ ಇಂಬುಕೊಟ್ಟರು ಎನ್ನುವುದು. ಅರಸು ಅವರ ಎರಡನೇ ಮಗಳನ್ನು ಮದುವೆಯಾದ ನಟರಾಜ ಎನ್ನುವರು ಅಧಿಕಾರಿಗಳಿಂದ, ರೌಡಿಗಳಿಂದ ಹಣವಸೂಲಿ ಮಾಡಿ ಅರಸು ಅವರಿಗೆ ಕಳಂಕ ತಂದರು. ಇಷ್ಟೆಲ್ಲದರ ಮಧ್ಯೆಯೂ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಬದಲಾವಣೆ, ಸುಧಾರಣೆ ತಂದ ವ್ಯಕ್ತಿ ಎಂಬ ಹೆಸರನ್ನು ಪಡೆದರು.
ಆದರೆ ಭೂಗತ ಜಗತ್ತಿಗೆ ಪ್ರೋತ್ಸಾಹ ಕೊಟ್ಟ ಅವರ ಆಡಳಿತ ಮತ್ತು ಅವರ ಕಾಲದಲ್ಲಿ ನಡೆದ ಭ್ರಷ್ಟಾಚಾರದ ತನಿಖೆಗಾಗಿ ನ್ಯಾಯಮೂರ್ತಿ ಎ ಎಂ ಗ್ರೋವರ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಲಾಯಿತು. ಇದು ಕೊಟ್ಟ ತೀರ್ಪು ಇದು ಅರಸು ರಾಜಕೀಯ ಜೀವನಕ್ಕೆ ತಾತ್ಕಾಲಿಕ ಕಪ್ಪು ಚುಕ್ಕೆ ಆಯಿತು.
ಸಾಧನೆಗಳು:
ಉಳುವವನೇ ಭೂಮಿಯ ಒಡೆಯ, ಭೂ ನ್ಯಾಯ ಮಂಡಳಿಗಳ ರಚನೆ, ಗೇಣಿ ಪದ್ಧತಿಯ ರದ್ದತಿ, ಋಣ ಪರಿಹಾರ ಕಾಯಿದೆ, ಹಿಂದುಳಿದ ವರ್ಗಗಳ ಸಬಲೀಕರಣ, ಜಾತಿ ಮತ್ತು ಜೀತ ಪದ್ಧತಿ ನಿಷೇಧ, ಮಲ ಹೊರುವ ಪದ್ಧತಿ ನಿರ್ಮೂಲನೆ, ಕನಿಷ್ಠ ವೇತನ ನಿಗದಿ ಕಾಯಿದೆ, ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಸ್ಟೈಪಂಡರಿ ಯೋಜನೆ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು ಅರಸು ಆಳ್ವಿಕೆಯ ಪ್ರಮುಖ ಸಾಧನೆಗಳು. ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಉತ್ತಮರ ಕೈಗೆ ಒಪ್ಪಿಸಿ, ಆರ್ಥಿಕ ಪುನಃಶ್ಚೇತನ ನೀಡಿ ಅದರ ಬೆಳವಣಿಗೆಗೆ, ಉಳಿವಿಗೆ ಕಾರಣರಾದವರು ಅರಸರು.
೭೮ರ ಚುನಾವಣೆಯಲ್ಲಿ ಅರಸು ಅವರನ್ನು ಮಣಿಸಲು ಸಾಧ್ಯವಿಲ್ಲವೆಂದು ಅರಿತ ಕೇಂದ್ರ ಸರ್ಕಾರ ಅರಸು ಸರಕಾರವನ್ನು ವಜಾ ಮಾಡಿತು. ಆದರೆ ಅರಸು ಧೃತಿಗೆಡಲಿಲ್ಲ. ೭೮ರ ಮಾರ್ಚ್ ನಲ್ಲಿ ನಡೆದ ಚುನಾವಣೆಯಲ್ಲಿ ಅರಸು ಅವರ ಕಾಂಗ್ರೆಸ್ ಮತ್ತೆ ಬಹುಮತ ಗಳಿಸಿತು. ದೇವೇಗೌಡರ ಸರಕಾರ ಅಧಿಕಾರಕ್ಕೆ ಬರುವುದೆಂದು ನಿರೀಕ್ಷಿಸಿದ್ದು ತಲೆಕೆಳಗಾಯಿತು. ೮೦ರಲ್ಲಿ ಅರಸು ಅವರನ್ನು ಕೆಳಗಿಳಿಸಿ ಗುಂಡೂರಾವ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಲಾಯಿತು. ಗುಂಡೂರಾವ್ ಮತ್ತು ಬಂಗಾರಪ್ಪ ನಡುವಿನ ಸಂಘರ್ಷ ಹೆಚ್ಚಾಗುತ್ತಾ ಹೋಯಿತು. ಅಧಿಕಾರ ವರ್ಗ ಭ್ರಷ್ಟಾಚಾರಕ್ಕೆ ಇಳಿದಿತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅರಸು ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಭಾವಿಸಿದ ಸಂದರ್ಭದಲ್ಲಿಯೇ ಅರಸು ಸಾವಿಗೀಡಾಗುತ್ತಾರೆ.
ಅರಸು ಮತ್ತು ಡಾ. ರಾಜಕುಮಾರ್ ಮಧ್ಯೆ ಇದ್ದ ಬೇಸರದ ಬಗ್ಗೆ ಸಹ ಈ ಕೃತಿಯಲ್ಲಿ ವಿವರವಿದೆ.
ಅರಸು ಕುರಿತು ಗಣ್ಯರ ಅನಿಸಿಕೆ:
ಅರಸು ಕೇವಲ ಒಬ್ಬ ರಾಜಕಾರಣಿಯಲ್ಲ, ಸಾಮಾಜಿಕ ನ್ಯಾಯದ ಕ್ರಾಂತಿಕಾರಿ, ಬದ್ಧತೆಯುಳ್ಳ ಸಮಾಜವಾದಿ, ಶೋಷಿತರ ಧ್ವನಿ ಎಂದು ಜಾರ್ಜ್ ಫರ್ನಾಂಡಿಸ್ ಮೆಚ್ಚುಗೆಯ ನುಡಿಯಾಡಿದರೆ, ಪತ್ರಕರ್ತರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟರು- ಅರಸು ಅವರ ರಾಜಕೀಯ ಗುಣ ವ್ಯಕ್ತಿತ್ವದ ದೊಡ್ಡ ಹೆಗ್ಗುರುತು. ತಿಳುವಳಿಕೆಯಿಲ್ಲದ ಯಾವ ಕೆಲಸವನ್ನೂ ಅವರು ಮಾಡಿಲ್ಲ. ಜ್ಞಾನ ಸಂಗ್ರಹಿಸಿ, ವೈಚಾರಿಕ ಸಿದ್ಧತೆಯಿಂದಲೇ ಕೆಲಸ ಮಾಡುತ್ತಿದ್ದರು ಎಂದಿದ್ದಾರೆ. ದಿವಂಗತ ಪ್ರಧಾನಿ ಚೌಧರಿ ಚರಣ್ ಸಿಂಗ್- ದಕ್ಷಿಣ ಭಾರತದ ಹಿಂದುಳಿದ ವರ್ಗಗಳ ಧ್ವನಿ ಎಂದು ಶ್ಲಾಘಿಸಿದರೆ, ರಾಮಕೃಷ್ಣ ಹೆಗಡೆಯವರು -ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿ, ಹಳ್ಳಿಗರ, ಬಡವರ ಮನೆಗೆ ಆಡಳಿತವನ್ನು ತಲುಪಿಸಿದ ಮುತ್ಸದ್ದಿ ಎಂದು ಹೊಗಳಿದ್ದಾರೆ.
ಹೀಗೆ ಈ ಕೃತಿಯು ರಾಜಕಾರಣಿಗಳಿಗೆ ಮಾರ್ಗದರ್ಶಿಯೂ, ಅಧ್ಯಯನಯೋಗ್ಯವೂ ಆಗಿದೆ. ನಮ್ಮ ನಾಡಿನ ಧೀಮಂತ ಮುಖ್ಯಮಂತ್ರಿಯೊಬ್ಬರ ಸವಿನೆನಪು ಸದಾ ಕನ್ನಡಿಗರಲ್ಲಿ ಉಳಿಯುವಂತೆ ಲೇಖಕಿ ಈ ಕೃತಿಯ ಮೂಲಕ ಮಾಡಿದ್ದಾರೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
೨೦ .೯. ೨೦೧೬
...........................

Comments
Post a Comment