ಹೆಣ್ಣಿನ ತುಡಿತ, ತುಮುಲಗಳ


‘ಅಮೃತಧಾರೆ’



‘ಅಮೃತಧಾರೆ’ ಕವನಸಂಕಲನದಲ್ಲಿ   ಕವಯತ್ರಿ  ಸೂಗಮ್ಮ ಡಿ. ಪಾಟೀಲ್ ಉತ್ನಾಳ, ವಿಜಯಪುರ  ಎಲ್ಲಾ ಮಹಿಳಾ ಬರಹಗಾರರಂತೆ ಸ್ತ್ರೀಪರ ಧೋರಣೆ, ಆಲೋಚನೆ, ಚಿಂತನೆಗಳನ್ನು ಹರಿಯಬಿಟ್ಟಿದ್ದಾರೆ. ಹೇಳಲಾರದ, ನಿಂದನೆಯ ನುಡಿಗಳನ್ನು ಸಹಿಸಲಾಗದ, ನೊಂದ ಕಂಬನಿಯ ಹನಿಯ ಹಿಂದಿನ ನೋವು...ಹೀಗೆ ನೊಂದವರ ಹೃದಯದ ಅಂತರ್ಗದಲ್ಲಿ ಹುಟ್ಟುವ ಕವನಗಳು ಇದರಲ್ಲಿವೆ. 

ಇಂದು ಮನೆಗೆ ಸೀಮಿತವಾಗಿದ್ದ ಹೆಣ್ಣು ಗಗನಯಾನದವರೆಗೂ ತಲುಪಿದ್ದಾಳೆ. ಹೊರಗೆಲ್ಲ ದುಡಿದು ಗಳಿಸುತ್ತಿರುವ ಹೆಣ್ಣು ಮನೆಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾ ಮುನ್ನಡೆಯುತ್ತಿರುವುದನ್ನು ಇಲ್ಲಿ ಚಿತ್ರಿಸಿದ್ದಾರೆ. ಹೆಣ್ಣಿನ ತುಡಿತ, ತುಮುಲಗಳನ್ನು ಇಲ್ಲಿ  ಆಪ್ತವಾಗಿ ನೇಯಲ್ಪಟ್ಟಿವೆ.

 ಸಂಕಲನದಲ್ಲಿನ ಕವನಗಳ ಬಗ್ಗೆ ನೋಡುವುದಾದರೆ, ಸರಳ, ಶುದ್ಧ, ನೇರ ಭಾವನೆಗಳ ದಿಟ್ಟ ಅನಾವರಣ ಇದರಲ್ಲಿದೆ. ಭಾವಕ್ಕೆ ಸಿಲುಕಿದ್ದನ್ನು ಅಕ್ಷರಕ್ಕಿಳಿಸುವಾಗ ಯಾವ ಮುಲಾಜಿಗೂ ಒಳಗಾಗದೆ ಅನಿಸಿದ್ದನ್ನು ಅನಿಸಿದಂತೆ, ಶಬ್ದಗಳಿಗಾಗಿ ತಡಕಾಡದೆ, ಸರಳವಾಗಿ ಓದುಗರ ಎದೆಯ ಮೀಟುವಂತಹ ಬರವಣಿಗೆಯನ್ನು ಇಲ್ಲಿ ಕಾಣಬಹುದು. ವಾಸ್ತವಕ್ಕೆ ಸ್ಪಂದಿಸುವ ಮಹಿಳೆಯ ಹಲವು ಕವನಗಳನನ್ನು ಗಮನಿಸಿದಾಗ, ಲೇಖಕಿಯ ಪ್ರೌಢ ಆಲೋಚನೆಗಳು ಚಿಂತನೆಗಳ ಮೂಲಕ ಕಂಡುಬರುತ್ತವೆ. 

 ಕೆಲವು ಮಹತ್ವದ ಕವನಗಳನ್ನು ಗಮನಿಸುವುದಾದರೆ, ಮೊದಲ ಕವನ ‘ಅಮೃತಧಾರೆ’ಯಲ್ಲಿ ಮನೆಯಲ್ಲಿ ಮಗಳು ಹುಟ್ಟಿದಾಗ ಸಂತೋಷ.  ಬಾಲ್ಯದಲ್ಲಿ ತಾಯಿಯ ಮಡಿಲಲ್ಲಿ ಆಡುತ್ತಾ, ಬಹುಬೇಗ ಬೆಳೆದು ಮದುವೆಯಾಗಿ ಮನೆಬಿಟ್ಟು  ಗಂಡನ ಮನೆಗೆ ಹೋದ ನಂತರ ಬರೇ ನೆನಪು. ಆಗ ಮನೆಯಲ್ಲಿ ಯಾವ ಮಕ್ಕಳಿದ್ದರೂ ನಮ್ಮ ಮಕ್ಕಳಂತಾಗುವುದಿಲ್ಲ. ‘ಕೀರ್ತಿ ತಂದವಳು ನೀ ಇಲ್ಲದೆ ದಿನ ಹೇಗೆ ಕಳೆಯಲಿ’ ಎನ್ನುತ್ತಾ ಮನೆ ಖಾಲಿ ಎನಿಸುತ್ತಿದೆ ಎನ್ನುತ್ತಾರೆ 

 ಮಗಳಿಲ್ಲದ ಮನಿಯಾಗ ನಾ ದಿನ ಹ್ಯಾಂಗ ಕಳೆಯಲಿ 

ಖಾಲಿ ಗೂಡಾಗ್ಯಾದ  ನಿನ್ನ ತವರ ಓ ಮಗಳಾ, 

ನೀ ಬಂದೊಮ್ಮೆ ಸಂತೈಸು ಈ ಹಿರಿ ಜೀವವನ್ನ

ಮರಿಬೇಡ ಕೂಸಾ ಜೀವ ಇಟ್ಟದ ನಿನಮ್ಯಾಗ 

ಎಂದು ನುಡಿಯುತ್ತಾರೆ.

‘ಅಶಕ್ತನಾರಿ’ ಇದರಲ್ಲಿ ನಾರಿ ಇಂದು ಸಶಕ್ತಳಾಗಿದ್ದಾಳೆ, ಅಡುಗೆ ಮನೆ ದಾಟಿ ಸರ್ವ ಕ್ಷೇತ್ರದಲ್ಲಿಯೂ ಹೊಸ ಆವಿಷ್ಕಾರದಲ್ಲಿ  ತೊಡಗಿದ್ದಾಳೆ. ಅಸಮಾನತೆ, ಸರ್ವಬಂಧನ ತೊಡೆದು ಹಾಕಿ ಸಮಾಜವನ್ನು ಜೊತೆಗೆ ಮನೆಯನ್ನು ನಡೆಸುತ್ತಾಳೆ. ಮನೆ, ಮನಸ್ಸು ಬೆಳಗುತ್ತಿದ್ದಾಳೆ. ತನ್ನ ಕನಸನ್ನು ನನಸಾಗಿಸಲು ಹೋರಾಡುತ್ತಿದ್ದಾಳೆ ಎನ್ನುತ್ತಾರೆ.

 ‘ಹೆಣು’ ಇದರಲ್ಲಿ ನೋವು ಬವಣೆ ಎಷ್ಟೇ ಇದ್ದರೂ ಮಂದಹಾಸ ತೋರುತ್ತ, ಸದಾ ಮನೆ ಬೆಳಗುತ್ತಿರುವ ಹೆಣ್ಣು ಅವಮಾನ, ಅನುಮಾನ ದೂರ ಮಾಡಿ ಕುಟುಂಬದ ಸುಖಕ್ಕಾಗಿ ಜೀವವನ್ನು ಸವೆಸುತ್ತಿದ್ದಾಳೆ. ತನಗಾಗಿ ಯಾವುದನ್ನೂ, ಏನನ್ನೂ ಕೇಳುತ್ತಿಲ್ಲ. ತ್ಯಾಗ ಮತ್ತು ಗೌರವಕ್ಕೆ ತಕ್ಕ ಮೌಲ್ಯ ದೊರೆತಿಲ್ಲ. ತನಗಾಗಿ ಸಮಯವನ್ನು ಮೀಸಲಿಡದೆ ಕುಟುಂಬಕ್ಕಾಗಿ ದುಡಿಯುತ್ತಾಳೆ ಎನ್ನುತ್ತಾರೆ.

 ‘ಸಮಾನತೆ’ ಕವನದಲ್ಲಿ ಗಂಡು ಸಂತಾನದ ವ್ಯಾಮೋಹ ದೂರ ಮಾಡಿ. ಹೆಣ್ಣಿರಲಿ, ಗಂಡಿರಲಿ ಮನೆಗೊಂದು ಮಗುವಿರಲಿ. ಹೆತ್ತವರು ಎಲ್ಲರನ್ನೂ ಸಮಾನವಾಗಿ ಕಾಣಲಿ. ಅವಳ ಕೀರ್ತಿ ಹಬ್ಬಲಿ ಎಂದು ಹೇಳುತ್ತಾರೆ.  ಪ್ರಸ್ತುತ ಸಮಸ್ಯೆಯ ಬಗ್ಗೆಯೂ ಬೆಳಕು ಚೆಲ್ಲುವ ಕವಯಿತ್ರಿ ‘ಮೊಬೈಲ್’ ಕವನದಲ್ಲಿ ಹೀಗೆ ಹೇಳುತ್ತಾರೆ- ಮೊಬೈಲ್ ಬಂದಿದ್ದು ಕೈಗೆ ಮಾಣಿಕ್ಯ ಸಿಕ್ಕಂತಾಗಿದೆ. ಬಾಂಧವ್ಯ ಕಳಚುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ‘ಗೌತಮ ಬುದ್ಧ’ ಕವನದಲ್ಲಿ ಬುದ್ಧ ಐಶಾರಾಮಿ ಬದುಕು ಬದುಕಲಿಲ್ಲ. ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿ ಜಗವೆಲ್ಲ ಮಲಗಿರುವಾಗ ಮನೆ ತೊರೆದು ಮುಕ್ತಿ ಮಾರ್ಗಕ್ಕಾಗಿ ಹುಡುಕಾಡಿದ. ಅಹಿಂಸೆ ಮಾರ್ಗವನ್ನು ಜನರಿಗೆ ತಿಳಿಸಿದ ಎನ್ನುತ್ತಾರೆ. ‘ಮಮತೆಯ ಕಡಲು’ ಕವನದಲಿ, ತಾಯಿ ಮಕ್ಕಳನ್ನು ಹೇಗೆ ಪ್ರೀತಿಯಿಂದ ಲಾಲಿಸಿ ಪಾಲಿಸುತ್ತಾಳೆ, ತನ್ನ ನೋವನ್ನು ಬಚ್ಚಿಟ್ಟು ಜೋಗುಳ ಹಾಡಿ, ಸಿಟ್ಟು ಮಾಡದೆ, ಹುಡುಗ ಬುದ್ಧಿ ತಿದ್ದಿ, ಸಿಡಿದೇಳುವ ಧೈರ್ಯ ತುಂಬಿ, ಬಡತನದ ಬಗ್ಗೆ ಯಾವ ಗುಟ್ಟನ್ನೂ ಬಿಡುವುದಿಲ್ಲ. ಇಂತಹ ಅಮ್ಮನನ್ನು ಪಡೆದ ನಾನು ಧನ್ಯ. 

ಮಿಕ್ಕಿದ್ದನ್ನವ ಉಂಡೆ ನೀನು ಕರುಣಾಮಯಿ

ದಕ್ಕಿದ್ದೆಲ್ಲವ ಧಾರೆ ಎರೆದೆ ಮಮತಾಮಯಿ 

ಕೊರತೆ ಇಲ್ಲದಂತೆ ನಮ್ಮನ್ನು ಇಂದು ಸಾಕಿದೆ

ಹರಿತವಾದ ಮಾತುಗಳ ಆಡದೆ ಸಲುಹಿದೆ

 ಎಂದು ವಿಶ್ಲೇಷಿಸುತ್ತಾರೆ.

 ‘ಮಾತೃದೇವತೆ’ ಎನ್ನುವ ಅಮ್ಮನ ಕುರಿತಾದ ಇನ್ನೊಂದು ಕವನದಲ್ಲಿ, ತೊರೆದು ಮತಿಹೀನನಾಗಬಾರದು, ಮಡದಿ ಮಾತು ಕೇಳಿ ಆಕೆಯನ್ನು ಬದಿಗೊತ್ತಬಾರದು ಎಂದು ಬುದ್ಧಿ ಹೇಳುತ್ತಾರೆ.  ‘ದೇವನ ಆಲಯ’ ಕವನದಲ್ಲಿ ದೇವರಿಗಾಗಿ ಗೂಡು ಕಟ್ಟಿ ಭಕ್ತಿಯಿಂದ ಪೂಜಿಸುತ್ತೇವೆ. ಮಾಡಿದ ತಪ್ಪಿಗಾಗಿ ಕಾಣಿಕೆ ಒಪ್ಪಿಸುತ್ತೇವೆ. ನಿತ್ಯವೂ ದೇವರ ಭಜನೆ ಮಾಡಿದರೂ ಸತ್ಯದಿಂದ ನಡೆಯುವುದಿಲ್ಲ. ಗಂಗೆಯಲ್ಲಿ ಪಾಪ ತೊಳೆಯುತ್ತೇವೆ ಹಾಗೆಯೇ ಮತ್ತೆ ತಪ್ಪು, ಪಾಪ ಮಾಡುತ್ತೇವೆ ಎನ್ನುತ್ತಾ, ಅಂತರಂಗದ ಶುದ್ಧಿ ಇರಬೇಕು. ಶಿವನು ಆಗ ಹರಸುವನು ಎಂದು ಹೇಳುತ್ತಾರೆ. ‘ಹೆಣ್ಣು ಹೊರೆಯಲ್ಲ’ ಎನ್ನುವ ಕವನದಲ್ಲಿ ಹೆಣ್ಣು ಹೆಣ್ಣಲ್ಲ, ಆಕೆ ಗೃಹಲಕ್ಷ್ಮಿ, ಜ್ಯೋತಿರ್ಲಕ್ಷ್ಮಿ, ಮನೆಯನ್ನು ಬೆಳಗುವಳು. ಮನೆಯಲ್ಲಿ ಕಷ್ಟ ಜಯಿಸಿ ಬದುಕುವವಳು. ಕುಟುಂಬದ ಯಶಸ್ಸಿಗೆ ಆಕೆಯೇ ಕಾರಣ ಎನ್ನುತ್ತಾರೆ.

 ‘ರೈಲ್ವೆ ನಿಲ್ದಾಣ’ ಕವನದಲ್ಲಿ ಜೀವನವನ್ನು ರೈಲ್ವೆ ನಿಲ್ದಾಣಕ್ಕೆ ಹೋಲಿಸುತ್ತಾರೆ. ಇಲ್ಲಿ ನಮ್ಮವರು ಬಂದು ಸೇರುವುದೇನೋ ನಿಜ. ಸವಿ ನೆನಪು ಸಹ ಸಿಗುತ್ತದೆ. ಯಾವಾಗಲೂ ಜಂಜಾಟವಿಲ್ಲ, ದ್ವೇಷ, ಪ್ರೀತಿ, ಜಾತಿ ಯಾವುದನ್ನೂ ಇಲ್ಲಿ ಕಾಣಲು ಸಿಗುವುದಿಲ್ಲ. ಇಲ್ಲಿ ಬಂದಾಗ ಬದುಕು ನೆನಪನ್ನು ಮರುಕಳಿಸುತ್ತದೆ ಎನ್ನುತ್ತಾರೆ.

 ಎರಡು ಹಳಿಗಳ ಮಧ್ಯೆ ಸಾಗುವ ಬಾಳಿದು 

ಹಳಿ ತಪ್ಪಿ ನಡೆದರೆ ಬದುಕು ಬರಿ ಗೋಳಿದು 

ಎಲ್ಲಾರೂ ಬಂದು ಹೋಗುವ ಪಯಣಿಗರು 

ಯಾರೂ ಉಳಿಯರು ಕೊನೆಯವರೆಗವರು

 ಎಂದು ಹೇಳುತ್ತಾರೆ. 

   ಅಸೂಯೆ, ಅಹಿಂಸೆ, ಸ್ವಾರ್ಥ, ಮೋಸ ಎಲ್ಲೆಡೆ ತುಂಬಿದೆ. ಮುಖವಾಡ ತೊಟ್ಟವರಿಗೆ ಪಾಪಪ್ರಜ್ಞೆ ಇಲ್ಲ. ಸ್ವಾರ್ಥಿಯಾಗಿ, ಸುಳ್ಳನ್ನೇ ಸತ್ಯ ಮಾಡುತ್ತಾರೆ. ಮೋಸದ ಬಲೆ ಹೆಣೆಯುತ್ತಾರೆ, ನಯವಾದ ಮಾತಲ್ಲಿ ನಂಬಿಸುತ್ತಾರೆ. ಈ ಬಾಳ ನಾಟಕದಲ್ಲಿ ಮಹಾನ್ ಕಲಾವಿದರಿದ್ದಾರೆ ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ‘ಮನಸ್ಸಿನ ವಿಷಕ್ಕೆ ಮದ್ದೆಲ್ಲಿ’ ಕವನದಲ್ಲಿ ಕವಯಿತ್ರಿ ಹೇಳುತ್ತಾರೆ.

ಅವರಿವರ ಮೋಸದ ಜಾಲಕೆ ಸಿಲುಕದಿರಿ

ವಿಷ ಜಂತುವಿನ ಸ್ನೇಹವನ್ನು ಬಯಸದಿರಿ 

ಸವಿಮಾತಿಗೆ ಮನಸೋತು ಮರುಳಾಗದಿರಿ 

ಸಿಹಿ ತುತ್ತಿಗೂ ವಿಷ ಬೆರೆಸುವವರಿಹರು ಎಚ್ಚರವಾಗಿರಿ 

ಎಂದು ನಮ್ಮನ್ನು ಜಾಗೃತಗೊಳಿಸುತ್ತಾರೆ. ಸ್ವತಃ ಶಿಕ್ಷಕಿಯಾಗಿರುವ ಕವಯಿತ್ರಿ ಈ ಸಂಕಲನದಲ್ಲಿ ಶಿಕ್ಷಕರ ಕುರಿತಾಗಿಯೂ ಕವನವನ್ನು ರಚಿಸಿದ್ದಾರೆ. ಅದರಲ್ಲಿ ಶಿಕ್ಷಕರು ದಾರಿದೀಪವಿದ್ದಂತೆ. ಕಾಟಾಚಾರಕ್ಕೆ ಕಲಿಸುವವರಲ್ಲ. ನಮ್ಮೊಳಗಿನ ದೀಪ  ಬೆಳಗುವಂತೆ ಮಾಡುತ್ತಾರೆ. ನಿಸ್ವಾರ್ಥ ಸೇವೆಯ ಮೂಲಕ ಮಕ್ಕಳ ಕನಸಿಗೆ ರೆಕ್ಕೆ ಕಟ್ಟಿ, ಗುರಿ ತೋರಿಸುವರು. ಕ್ರೋಧ,  ಅಹಂಕಾರ, ದ್ವೇಷ ಸಾಧಿಸುವವರಲ್ಲ ಎನ್ನುತ್ತಾರೆ. ಇದೇ ರೀತಿ ‘ಗುರುವೆಂಬ ದೀಪದಲ್ಲಿ’ ಗುರುಗಳು ಪ್ರತ್ಯಕ್ಷ ದೇವರು. ಅಂಧಕಾರ ನೀಗುವವರು. ಅಕ್ಷರ ಕಲಿಸಲು ಶಿಕ್ಷಕರಾಗಿ ನಮ್ಮ ಮುಂದೆ ಬರುವವರು. ಕರಹಿಡಿದು ಕಲಿಸುವವರು ಎಂದು ಬಣ್ಣಿಸುತ್ತಾರೆ.

ಹೀಗೆ ಈ ಸಂಕಲನದಲ್ಲಿನ ಎಲ್ಲಾ ಕವನಗಳಲ್ಲಿ ಕವಯತ್ರಿ ನಮ್ಮನ್ನು ಜಾಗೃತಗೊಳಿಸುತ್ತಾರೆ. ಸಮಾಜದಲ್ಲಿನ ಎಲ್ಲಾ ಬಗೆಯ ಮೋಸ, ವಂಚನೆ, ಕಪಟವನ್ನು ಎತ್ತಿ ಹೇಳುತ್ತಾರೆ. ವಿಶೇಷವಾಗಿ ಹೆಣ್ಣಿನ ನೋವನ್ನು ಬಿಡಿಸಿಡುತ್ತಾರೆ. ಇಲ್ಲಿನ ಸಾಲುಗಳು ನಮ್ಮ ಕಣ್ತೆರೆಸುವಂತಹವು. ಎಲ್ಲ ಕವನಗಳು ಅಮೃತಧಾರೆಯಾಗಿ ಧುಮ್ಮಿಕ್ಕಿ ಕಾವ್ಯಕುಡಿಗಳಾಗಿ ಅರಳಿರುವುದನ್ನು ಇಲ್ಲಿ ಕಾಣಬಹುದು. 


-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೧೪.೦೯.೨೦೨೬

........................


Comments

Popular posts from this blog