ಸಂಕಷ್ಟ, ತಳಮಳಕ್ಕೆ ಸಿಲುಕಿದ ಹೆಣ್ಣಿನ ಕಥೆಯ  


‘ಆಕ್ಸಿಡೆಂಟ್’ 



‘ಆಕ್ಸಿಡೆಂಟ್’ ಈ ಕಿರು ಕಾದಂಬರಿ ಬರೆದವರು ಅನು ಬೆಳ್ಳೆ. ಇದರಲ್ಲಿ ಪತ್ನಿಯಿಂದ ದೂರವಾಗಿ ಮುಂಬೈನಲ್ಲಿ ನೆಲೆಸಿದ ಸ್ಮಗ್ಲರ್ ಮತ್ತೆ ಪತ್ನಿಯನ್ನು ತನ್ನವಳನ್ನಾಗಿ ಮಾಡಿಕೊಳ್ಳಲು ಹೆಣೆದ ಸಂಚಿನ ಕಥನವಿದೆ.   

ತನ್ನಿಂದ ದೂರವಾದ ಮೊದಲ ಪತ್ನಿಯನ್ನು ಮತ್ತೆ ತನ್ನೊಟ್ಟಿಗೆ ಸೇರಿಸಿಕೊಳ್ಳಲು ಹಣವಂತನಾದ, ಕಳ್ಳ ಸಾಗಾಣಿಕೆದಾರ ಮಕಾನ್‌ಲಾಲ್  ಎಂಬ ಪತಿ ಏನೆಲ್ಲ ಪ್ರಯತ್ನ ಮಾಡಿದ, ಅದಕ್ಕಾಗಿ ಆತ ಮಾಡಿದ ಸಂಚುಗಳೇನು, ಮೆಡಿಕಲ್ ಕಾಲೇಜು ಡೀನ್ ಆಗಿದ್ದ ತನ್ನ ಪತ್ನಿಯನ್ನು ಯಾವ ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿಸಿದ, ನಂತರ ಆತನ ಕೃತ್ಯ ಬೆಳಕಿಗೆ ಹೇಗೆ, ಯಾರಿಂದ ಬಂದಿತು, ಮಕಾನ್‌ಲಾಲ್‌ಗೆ ಪತ್ನಿ ದಕ್ಕಿದಳೇ, ಮೆಡಿಕಲ್ ಕಾಲೇಜು ಡೀನ್ ಮಗಳಿಗೆ ಅಪಘಾತ ಸಂಭವಿಸಿದ್ದು ಹೇಗೆ  ಎನ್ನುವುದನ್ನು ವಿವರಿಸುವ  ಪತ್ತೆದಾರಿ ಕಾದಂಬರಿ ಇದು.

ಕಥೆಯ ಸಾರಾಂಶ: 

  ಮೆಡಿಕಲ್ ಕಾಲೇಜಿನ ಡೀನ್ ಆಗಿದ್ದ ಡಾ|| ಸುಹಾಸಿನಿಗೆ ತಾನು ಇದೇ ಕಾಲೇಜಿನ ಕ್ಲರ್ಕ್ ಎಂದುಕೊಂಡ ಬಂದ ಸಂಹಿತಾ ಎನ್ನುವ ಹುಡುಗಿ ದೂರೊಂದನ್ನು ನೀಡಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ತನ್ನನ್ನು ಊರಹೊರಗೆ ಕರೆದುಕೊಂಡು ಹೋಗಿ ಹಾಳುಮಾಡಿದ ಬಗ್ಗೆ ದೂರುತ್ತಾಳೆ. ದೂರು ಕೊಟ್ಟವಳಿಂದ ಹೆಚ್ಚಿನ ವಿವರವನ್ನೂ ಅವರು ಪಡೆದಿರುವುದಿಲ್ಲ.  ದೂರಿನ ಮೇರೆಗೆ ಇಬ್ಬರು ವಿದ್ಯಾರ್ಥಿಗಳನ್ನು ಕರೆದ ಡೀನ್ ಅವರಿಂದಲೂ ಯಾವ ಮಾಹಿತಿಯನ್ನೂ ಪಡೆಯದೆ ಗುರುತಿನ ಕಾರ್ಡನ್ನು ಪಡೆದು ಅಮಾನತುಗೊಳಿಸುತ್ತಾರೆ. ಇವರಲ್ಲಿ ಒಬ್ಬ ಗೃಹ ಸಚಿವರ ಶಿಫಾರಸಿನ ಮೇರೆಗೆ ಕಾಲೇಜಿಗೆ ಪ್ರವೇಶ ಪಡೆದವನಾಗಿರುತ್ತಾನೆ. 

ಮನೆಗೆ ತೆರಳಿದ ನಂತರ ಈ ಬಗ್ಗೆ ಡೀನ್ ಯೋಚಿಸುತ್ತಾರಾದರೂ ಅಂದು ತಡರಾತ್ರಿಯಾದರೂ ಮಗಳು ಅಧಿರಾ ಮನೆಗೆ ಬಾರದಿರುವ ಚಿಂತೆ ಇರುತ್ತದೆ. ಈ ಮಧ್ಯೆ ಯಾರೋ ಕರೆ ಮಾಡಿ ಮಗಳು ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿಯನ್ನು ಕೊಡುತ್ತಾರೆ. ಕೂಡಲೇ ಆಸ್ಪತ್ರೆಗೆ ಅವರು ತೆರಳಿದಾಗ ಅಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ. ಬೆಡ್‌ನಲ್ಲಿ  ಅಧಿರಾ ಮಲಗಿರುವುದನ್ನು ಗಮನಿಸುತ್ತಾರೆ. ಆಸ್ಪತ್ರೆಯ ವೈದ್ಯ ನಿಶಾಂತ್, ‘ಮಗಳ ಜೀವಕ್ಕೆ ತೊಂದರೆ ಇಲ್ಲ. ಅವಳ ಜೊತೆಗಿದ್ದ ಹುಡುಗ ಸ್ವಲ್ಪ ಸೀರಿಯಸ್ ಆಗಿದ್ದಾನೆ’ ಎಂದಾಗ ಈ ಯುವಕ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಈ ವೇಳೆ ಆಸ್ಪತ್ರೆಯಲ್ಲಿದ್ದವರು ‘ನಿಮ್ಮ ಹಸ್ಬೆಂಡ್ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ ಇವರನ್ನು ಆಸ್ಪತ್ರೆಗೆ ಸೇರಿಸಿ ತೆರಳಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ನಂತರ ಕಾರಿನಲ್ಲಿ ಸಿಕ್ಕ ದಾಖಲೆಯ ಆಧಾರದಲ್ಲಿ ಹುಡುಗ ಯಾವುದೋ ಕಾಂಟ್ರಾಕ್ಟರ್ ಮನೆಯವನಿರಬೇಕು. ಕಾರು ಕಾಂಟ್ರಾಕ್ಟರ್‌ಗೆ ಸೇರಿದ್ದು ಎನ್ನುತ್ತಾರೆ. 

ಈ ಮಧ್ಯೆ ಕಾಲೇಜಿಗೆ ತೆರಳಿದ್ದ ಅಧಿರಾ ಯುವಕನೊಂದಿಗೆ ಎಲ್ಲಿಗೆ ಹೋಗಿದ್ದಳು, ಅಪಘಾತ ಹೇಗಾಯಿತು. ಆಕೆಯನ್ನು ಆಸ್ಪತ್ರೆಗೆ ತಂದು ಸೇರಿಸಿದವರು  ನಿಜಕ್ಕೂ ಯಾರು  ಎನ್ನುವುದಕ್ಕೆಲ್ಲ ಉತ್ತರ ಈ ಕಥೆಯಲ್ಲಿದೆ.    

ಮಾರನೆಯ ದಿನ ಕಾಲೇಜಿನ ವಿದ್ಯಾರ್ಥಿಗಳೆಲ್ಲ ಅಮಾನತಿಗೊಳಗಾದ ಇಬ್ಬರು ಮಿತ್ರರನ್ನು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಾರೆ. ಕೆಲವು ಕಿಡಿಗೇಡಿಗಳು ಈ ವೇಳೆ ಕಾಲೇಜಿನ ಒಂದು ಭಾಗಕ್ಕೆ ಬೆಂಕಿ ಹಚ್ಚುತ್ತಾರೆ. ಬೆಂಕಿಯನ್ನು ಆರಿಸಲಾಗುತ್ತದೆ.  ವಿದ್ಯಾರ್ಥಿಗಳು ಬಂದು ಸಸ್ಪೆಂಡ್‌ಗೆ ಕಾರಣವನ್ನು ಕೇಳುತ್ತಾರೆ. ರಿಜಿಸ್ಟ್ರಾರ್ ಡಾ|| ಸಂತಾನಂ ಡಾ|| ಸುಹಾಸಿನಿಯನ್ನು ಕರೆದು ಮಾಹಿತಿ ಕೇಳಿದಾಗ ಘಟನೆಯ ವಿವರವನ್ನು ನೀಡುತ್ತಾರೆ. ಕ್ಲರ್ಕ ಸಂಹಿತಾಳಿಂದ ಹೇಳಿಕೆಯನ್ನು ಪಡೆಯಬೇಕಿತ್ತು ಎಂದಾಗ ತನಗೆ ಗೊತ್ತಾಗಲಿಲ್ಲ ಎನ್ನುತ್ತಾರೆ ಡೀನ್. ನಂತರ ವಿದ್ಯಾರ್ಥಿಗಳನ್ನು ಕರೆದು ವಿಚಾರಣೆ ನಡೆಸುತ್ತಾರೆ. ಈ ವೇಳೆ ಹಾಜರಾಗುವ ಡಾ|| ಗಗನ್ (ಡೀನ್ ಮಗಳು ಅಧಿರಾಳ ಬಾಲ್ಯದ ಸ್ನೇಹಿತ ಮತ್ತು ಆಕೆಯೊಂದಿಗೆ ಪ್ರೀತಿಯಲ್ಲಿ ಇರುವವನು, ಅಪಘಾತದಿಂದ ಆಸ್ಪತ್ರೆಗೆ ಸೇರಿದವನು)ಕೆಲವು ವಿಚಾರಗಳನ್ನು ಹೇಳುತ್ತಾನೆ. 

ದೂರು ನೀಡಿದ್ದ ಸಂಹಿತಾ ಸಹ ಹಾಜರಾಗಿ ಕೆಲವು ಸತ್ಯ ವಿಚಾರಗಳನ್ನು ಬಾಯ್ಬಿಡುತ್ತಾಳೆ- ಸುಹಾಸಿನಿಯನ್ನು ಈ ಸುಳಿಯಲ್ಲಿ ಸಿಲುಕಿಸಿ ಬೇಳೆ ಬೇಯಿಸಿಕೊಳ್ಳಲು ಮಕಾನ್‌ಲಾಲ್  ಸಂಚು ನಡೆಸಿದ್ದು ಗೊತ್ತಾಗುತ್ತದೆ. ಮೊದಲ ಪತ್ನಿಯಾದ ಸುಹಾಸಿನಿಯನ್ನು ತನ್ನ ಜೊತೆ ಮುಂಬೈಗೆ ಕರೆದೊಯ್ಯಬೇಕೆಂಬ ಆಸೆಯಿಂದ ಆತನ ಕಾರ್ಯದರ್ಶಿಯಾದ ತನ್ನಿಂದ ಈ ಕೆಲಸ ಮಾಡಿಸಿದ್ದಾನೆ ಎನ್ನುತ್ತಾ ‘ತನ್ನನ್ನು ಕ್ಷಮಿಸಿ’ ಎಂದು ಕೇಳುತ್ತಾಳೆ. ಅಲ್ಲದೆ ಈ ಅಮಾನತಿನ ಘಟನೆ ಇಷ್ಟು ದೊಡ್ಡ ಪರಿಣಾಮ ಬೀರುತ್ತದೆ ಎಂದು ತಾನೆಣಿಸಿರಲಿಲ್ಲ ಎನ್ನುತ್ತಾಳೆ. 

‘ಸಂಹಿತಾ ನಿಮ್ಮಿಬ್ಬರ ಹೆಸರು ಹೇಳಿದ್ದರಿಂದ ನಿಮ್ಮನ್ನು ಅಮಾನತು ಮಾಡಬೇಕಾಯಿತು. ನಿಮ್ಮ ಮೇಲೆ ದ್ವೇಷವಿಲ್ಲ, ಪರಿಚಯ ಸಹ ಇಲ್ಲ. ನಿಮ್ಮ ಅಮಾನತು ಆದೇಶವನ್ನು ರದ್ದು ಮಾಡಿದ್ದೇನೆ’ ಎನ್ನುತ್ತಾರೆ ಡೀನ್. ಬೆಟ್ಟದಂತೆ ಎರಗಿದ್ದ ಸಮಸ್ಯೆ ಮುಂಜಿನಂತೆ ಕರಗುತ್ತದೆ.

ಮಕನ್‌ಲಾಲ್ ಜೊತೆ ಡಾ|| ಸುಹಾಸಿನಿ ಭೇಟಿ ನಡೆಯಿತೆ?, ಮುಂಬೈಗೆ ತೆರಳಿದಳೇ? ಅಧಿರಾ ಜೊತೆ  ಡಾ|| ಗಗನ್ ಪ್ರೇಮ ಮುಂದುವರೆಯಿತೇ ಎನ್ನುವುದನ್ನು ಕಾದಂಬರಿ ಓದಿಯೇ ತಿಳಿಯಬೇಕು. ಅತ್ಯಂತ ಕುತೂಹಲ ಹುಟ್ಟಿಸುವ ಕಥೆ ಇದು.  

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

೨೦.೭.೨೦೨೬

..................


 


 


 

 


 


Comments

Popular posts from this blog