ಬದುಕಿಗೆ ದಾರಿದೀಪವಾಗುವ 

‘ಇಪ್ಪತ್ತೇಳು ಹಣತೆಗಳು’

 

ನಿತ್ಯ ಜೀವನದಲ್ಲಿ ಬೆಳಕಾಗುವ ವೈಚಾರಿಕ ಲೇಖನಗಳ ಈ ಕೃತಿಯನ್ನು ಬರೆದವರು ತೀರ್ಥರಾಮ ವಳಲಂಬೆಯವರು. ಇದರಲ್ಲಿ ವಿಜ್ಞಾನ, ಆಧ್ಯಾತ್ಮ, ಸಾಂಸಾರಿಕ ವಿಷಯಗಳ ಜೊತೆ ವೈಚಾರಿಕತೆಗೂ ಒತ್ತುಕೊಟ್ಟು ಬದುಕಿನ ವಿಸ್ಮಯಗಳನ್ನು ಬಿಡಿಸಿಟ್ಟಿದ್ದಾರೆ. ಅತ್ಯಂತ ಕ್ಲಿಷ್ಟಕರ, ವೈಜ್ಞಾನಿಕ ಹಾಗೂ ವೈಚಾರಿಕ ವಿಚಾರಗಳನ್ನು ಬದುಕಿಗೆ ಹತ್ತಿರವಾಗುವಂತೆ ಹಾಗೂ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬಹುದಾದ ರೀತಿಯಲ್ಲಿ ಸರಳಗೊಳಿಸಿ ಬರೆದಿದ್ದಾರೆ. ಇದರಲ್ಲಿ ಒಟ್ಟು ಕೃತಿ ಹೆಸರಿಗೆ ತಕ್ಕಂತೆ ೨೭ ಲೇಖನಗಳಿವೆ ಇವು ನಮ್ಮ ಬಾಳ ಹಣತೆಗಳಂತೆ ದಾರಿ ದೀವಿಗೆಗಳಾಗಿವೆ. ನಮ್ಮ ಬದುಕಿನಲ್ಲಿ ಯಾವುದೆಲ್ಲ ಅವಶ್ಯವೂ ಅವೇ ಈ ೨೭ ಹಣತೆಗಳಾಗಿವೆ. 

ದಿನನಿತ್ಯದ ಬದುಕಿನಲ್ಲಿ ಇತರರ ಬಗ್ಗೆ ಕಳಕಳಿ, ಪ್ರಕೃತಿಯೊಂದಿಗೆ ಪ್ರೇಮ, ಮಾತಿನಲ್ಲೊಂದಿಷ್ಟು ಹಿತನುಡಿ ಖರ್ಚಿಲ್ಲದೆ ದೊರೆಯುತ್ತವೆ. ಇಂತಹವುಗಳನ್ನು ನಾವು ನಡೆಸಿಕೊಂಡು ಹೋದಲ್ಲಿ ಹಣದಿಂದ ಪಡೆಯಲಾಗದ ಆನಂದವನ್ನು ಪಡೆಯಬಹುದೆನ್ನುವುದನ್ನು ‘ಮಾತೆಂಬ ಅದ್ಬುತ ಬಂಡವಾ’ದಲ್ಲಿ ವಿವರಿಸುತ್ತಾರೆ ‘ಕಾಲವೆಂಬ ವಿಸ್ಮಯ’ದಲ್ಲಿ ಬದುಕಿನಲ್ಲಿ ಒಮ್ಮೆ ಬಂದ ಕಾಲ ಮತ್ತೆ ಸಿಗಲಾರದು. ಸುಂದರ ನಾಳೆಯ ಕನಸನ್ನು ಕಾಣುವುದರಲ್ಲಿ ಅರ್ಥ ಇರುವುದಿಲ್ಲ. ಸಮಯವನ್ನು ಅಮೂಲ್ಯ ಎಂದು ಪರಿಗಣಿಸಿದಾಗ ಬದುಕು ಸುಂದರವಾಗುತ್ತದೆ ಎನ್ನುತ್ತಾರೆ. ‘ಬದುಕು ಭಾವನೆ ಮತ್ತು ಸರಿತಪ್ಪುಗಳು’ ಇದರಲ್ಲಿ ಸಂಬಂಧಗಳು ಸಾರ್ವಕಾಲಿಕವಾಗಿ ಉಳಿದುಕೊಳ್ಳುವುದಿಲ್ಲ. ಅಭಿರುಚಿ ಆಸಕ್ತಿಗಳು ಅನುಕೂಲ ಅವಕಾಶಗಳನ್ನು ಬಳಸಿಕೊಂಡು ನಮ್ಮಲ್ಲಿರುವ ದೋಷಗಳನ್ನು ನಿವಾರಿಸಿಕೊಂಡು ಬೆಳೆದು ನಿಂತರೆ ಪ್ರತಿಯೊಬ್ಬರ ಅರ್ಹತೆಯೂ ಗುರುತಿಸಲ್ಪಡುತ್ತದೆ ಎಂದು ಹೇಳುತ್ತಾರೆ. 

‘ಕಳೆದು ಹೋದ ಕೆಲವು ಸಂಗತಿಗಳು’ ಇದರಲ್ಲಿ ನಮ್ಮದು ಎನ್ನುವ ಜಾಯಮಾನದಿಂದ ಬದುಕು ದಿನೇದಿನೇ ಏಕಾಂಗಿಯಾಗುತ್ತಿದೆ. ಈ ಸಂಬಂಧಗಳು ಕ್ಷಣಿಕ ಎಂದು ತಿಳಿದಾಗ ಕೈ ಹಿಡಿಯಲು ಆಸರೆ ಸಹ ಇರುವುದಿಲ್ಲ ಎನ್ನುವುದನ್ನು ಬಿಂಬಿಸಿದ್ದಾರೆ. ‘ಅನುಭವ ಮತ್ತು ಅಭಿರುಚಿ’ ಯಲ್ಲಿ ನಾವು ಬದಲಾವಣೆಯನ್ನು ಬಯಸುವುದು ಸಹಜ. ಅನುಭವದೊಂದಿಗೆ ಅಭಿರುಚಿಗಳು ನಿರಂತರ ಬದಲಾಗುತ್ತವೆ. ತುಳಿದ ಹಾದಿಯನ್ನು ಮರೆತವರೆಂದೂ ಬದುಕಿನ ಕೊನೆ ಮುಟ್ಟುವುದಿಲ್ಲ. ಆದ್ದರಿಂದ ಸುಖ- ಸಂಪತ್ತುಗಳ ಹಿಂದೆ ಬೀಳುವುದರಿಂದ ಅದು ಕೇವಲ ಮರೀಚಿಕೆಯಾಗಿ ನಮ್ಮನ್ನು ಕಾಡುತ್ತದೆ ಎನ್ನುತ್ತಾರೆ.

 ‘ವಿಮರ್ಶೆಯ ರೀತಿ -ನೀತಿಗಳು’ ಇದರಲ್ಲಿ ಯಾವುದೋ ಒಂದು ಘಟನೆ ವಸ್ತು ವಿಚಾರ, ಜೀವನ ಮೌಲ್ಯಗಳನ್ನೇ ಇಟ್ಟುಕೊಂಡು ಮುಂದುವರೆಯುವುದು ಸರಿಯಾದ ಕ್ರಮವಲ್ಲ.  ಸಾವಕಾಶವಾಗಿ ಯೋಚಿಸಿ ಮುಂದುವರೆಯುವ ಅಭ್ಯಾಸ ಬೆಳೆಸಿಕೊಂಡರೆ ಬದುಕು ಅರ್ಥಪೂರ್ಣವಾಗುತ್ತದೆ ಎನ್ನುವ ಲೇಖಕರು, ಪ್ರೀತಿ ಇಲ್ಲದ ಜೀವನ ಬರಡು ಎಂದು ಹೆಚ್ಚಿನವರು ಹೇಳುತ್ತಾರೆ. ಆದರೆ ಪ್ರೀತಿಯು ವಿಶ್ವಾಸದ ಆಧಾರದಲ್ಲಿ ಮುಂದುವರೆದಾಗ ಪರಿಪೂರ್ಣವಾಗಿ ಕಂಡುಬರುತ್ತದೆ ಎಂದು ‘ಪ್ರೀತಿಯ  ರೀತಿಗಳು’ ಲೇಖನದಲ್ಲಿ ವಿವರಿಸಿದ್ದಾರೆ. 

 ‘ಅನುಭವ ಮತ್ತು ಅಸ್ತಿತ್ವ’ ದಲ್ಲಿ ಎಲ್ಲವನ್ನೂ ಉಳಿಸಿಕೊಳ್ಳುವ ಪ್ರಕೃತಿಯ ಕೆಲಸ ನಡೆಯುತ್ತಲೇ ಇರುತ್ತದೆ. ಮನುಷ್ಯ ಸದಾ ಸಾವಿನ ಬಗ್ಗೆ ಚಿಂತಿತನಾಗಿದ್ದರೆ ಈ ಬದುಕು ಈ ಪ್ರಪಂಚ ಮುಂದುವರೆಯಲು ಸಾಧ್ಯವೇ ಇಲ್ಲ. ಬದುಕು ನಮಗೆ ಕೊಡುವ ಅನುಭವಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ವಿವರಿಸುತ್ತಾರೆ. ‘ಪ್ರಕೃತಿ ಮತ್ತು ಬದುಕು’ ವಿನಲ್ಲಿ ನಾವು ನಮ್ಮ ಬದುಕನ್ನು ಅನುಭವಿಸುವ ಆತುರದಲ್ಲಿ ಹರಿಯುವ ನೀರು, ಮೋಡಗಳ ನಡುವಿನ ಹೊಂಗಿರಣ, ಸೂರ್ಯಸ್ತಮಾನ ಇವುಗಳಿಗೆಲ್ಲ ಬೆಲೆ ಕೊಡುತ್ತಿಲ್ಲ. ಪ್ರಕೃತಿಯನ್ನು ಹಿಂದೆ ಮುಂದೆ ನೋಡದೆ ಶಪಿಸುತ್ತೇವೆ. ಪ್ರತಿಕ್ಷಣವೂ ಅದೇ ಪ್ರಕೃತಿ ನಮ್ಮನ್ನು ಸಾಕಿಸಲುಹುತ್ತಿರುವುದನ್ನು ಮರೆಯುತ್ತಿದ್ದೇವೆ. ಪ್ರಕೃತಿಯಿಂದ ನಮ್ಮೊಳಗೆ ಒಂದು ಅದ್ಭುತ ಶಕ್ತಿ ಹರಿದು ಬರುತ್ತದೆ. ನಮ್ಮೊಳಗಿನ ಒಂಟಿತನವನ್ನು ಅದು ದೂರ ಮಾಡುತ್ತದೆ ಎಂದು ವಿವರಿಸುತ್ತಾರೆ.

 ‘ಜ್ಞಾನ ಮತ್ತು ವಿದ್ಯೆ’ ಎಂಬಲ್ಲಿ ಅಧ್ಯಯನದಿಂದ ಬರುವಂತಹ ವಿಚಾರಗಳು ಜ್ಞಾನವಲ್ಲ, ಅವೆಲ್ಲ ವಿದ್ಯೆಗಳು. ಅವು ಸಾರ್ವಕಾಲಿಕವಲ್ಲ ಎಂದು ಹೇಳುತ್ತಾರೆ. ‘ವೃತ್ತಿ ಮತ್ತು ಪ್ರವೃತ್ತಿ’ ಯಲ್ಲಿ, ಇಂದು ಪ್ರತಿಯೊಂದು ರಂಗದಲ್ಲೂ ವೃತ್ತಿ, ಧರ್ಮಗಳು ಸಡಿಲಗೊಳ್ಳುತ್ತಿವೆ. ವೃತ್ತಿ ಮತ್ತು ಪ್ರವೃತ್ತಿ ಬೇರೆ ಬೇರೆಯಾಗಿದ್ದು ವೃತ್ತಿಯಂತೆ ಪ್ರವೃತ್ತಿಯನ್ನು ಹೊಂದದೇ ಇರುವುದು ತುಂಬಾ ಅಪಾಯಕಾರಿಯಾಗಿದೆ ಎನ್ನುತ್ತಾರೆ. ‘ಕುತೂಹಲ ಮತ್ತು ಆಸೆ’ ಬರೆಹದಲ್ಲಿ ಕುತೂಹಲ ನಮ್ಮಲ್ಲಿ ಶಕ್ತಿಯನ್ನು ತುಂಬುತ್ತದೆ. ಆದರೆ ಕುತೂಹಲ ಆಸೆಯಾಗಬಾರದು. ಆಸೆ ನಮ್ಮನ್ನು ಮೂರ್ಖರನ್ನಾಗಿಸುತ್ತದೆ. ಇನ್ನೊಬ್ಬರ ಶ್ರಮದ ಫಲವನ್ನು ಖುಷಿಗೆ ಬಳಸುತ್ತದೆ ಎನ್ನುತ್ತಾರೆ. 

‘ ಹಣೆಬರಹ’ದಲ್ಲಿ ಏನಾದರೂ ಹೆಚ್ಚು ಕಡಿಮೆ ಆದರೆ ಎಲ್ಲಾ ಹಣೆಬರಹ ಎಂದು ಹೇಳಿಕೊಳ್ಳುತ್ತೇವೆ ಅದನ್ನೇ ಗ್ರಹಚಾರದೋಷ, ದುರಾದೃಷ್ಟ ಎಂದು ಕರೆಯಲಾಗುತ್ತದೆ. ನಾವು ಎಣಿಸಿದಂತೆ ಆಗದಿದ್ದಾಗ ಏನು ಮಾಡಲಿ ಎಂದು ಪ್ರಶ್ನಿಸಿಕೊಳ್ಳುತ್ತೇವೆ. ವಿಜ್ಞಾನ ಮುಂದುವರೆದಿರುವ ಇಂದಿನ ದಿನಗಳಲ್ಲಿ ನಂಬಿಕೆಗಳನ್ನು ಯಾವುದೋ ಒಂದು ನಿಯಮದ ಹಿಡಿತಕ್ಕೆ ಕೊಡುವುದನ್ನು ವಿಜ್ಞಾನವು ದೃಢಪಡಿಸುತ್ತದೆ. ನಿಯಂತ್ರಿಸುವ ಒಂದು ವ್ಯವಸ್ಥೆಯನ್ನು ಹಿಂದಿನ ವಿಜ್ಞಾನ ವಿವರಿಸುತ್ತದೆ. ‘ವೃದ್ದಾಶ್ರಮ’ದಲ್ಲಿ ಕೈ ಕಾಲುಗಳಲ್ಲಿ ಬಲ ಕಳೆದುಕೊಳ್ಳುವ ವೇಳೆ ವೃದ್ಧಾಪ್ಯದಲ್ಲಿ ಬದುಕು ಅರ್ಥವಾಗತೊಡಗುತ್ತದೆ. ಈ ವೇಳೆ ಮಕ್ಕಳು ನಮ್ಮಿಂದ ದೂರವಾಗುತ್ತಾರೆ ಅಥವಾ ತಮ್ಮ ಸ್ವಾತಂತ್ರ್ಯಕ್ಕೆ ಭಂಗವಾಗುತ್ತದೆ ಎಂದು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಹೆತ್ತು ಹೊತ್ತು ಸಾಕಿದ್ದರೂ ಮಕ್ಕಳ ಮಧ್ಯೆ ಉಸಿರಾಡುವ ವೃದ್ಧಾಶ್ರಮ ಸೇರಬೇಕಾಗುತ್ತದೆ. ಅಲ್ಲಿ ನಮ್ಮ ಮಕ್ಕಳು ಒಮ್ಮೆಯಾದರೂ ನಮ್ಮನ್ನು ನೋಡಬಾರದೇ ಎಂದು ಹಪಪಿಸುವಂತಾಗುತ್ತದೆ. ಈ ಹಿಂದೆ ಇಲ್ಲದ ಈಗ ಅಲ್ಲಲ್ಲಿ ನಿರ್ಮಾಣವಾಗುತ್ತಿರುವ ವೃದ್ಧಾಶ್ರಮಗಳು ನಮಗೆ ಬೇಕೇ ಎನ್ನುವುದನ್ನು ಲೇಖಕರು ಪ್ರಶ್ನಿಸುತ್ತಾg.

ಹೀಗೆ ವೈವಿಧ್ಯಮಯ ವಿಚಾರಗಳ ಮೂಲಕ ಇಲ್ಲಿನ ಎಲ್ಲಾ ವೈಚಾರಿಕ ಬರೆಹಗಳು ನಮ್ಮ ಕಣ್ತೆರೆಸುವಲ್ಲಿ ಸಫಲವಾಗಿವೆ. ಇಂದಿನ ದಿನಮಾನಗಳಲ್ಲಿ ಇವುಗಳನ್ನು ಅರಿತರೆ ನಿಜಕ್ಕೂ ಇದು ಬಾಳ ಹಣತೆಯಾಗಿ, ದಾರಿದೀಪವಾಗುತ್ತದೆ. ಯುವಜನತೆ ವಿಶೇಷವಾಗಿ ಇಂತಹ ಕೃತಿಗಳನ್ನು ಓದುವುದು ಅವಶ್ಯ.

-ದತ್ತಾತ್ರೇಯ ಹೆಗಡೆ

೧೨.೭.೨೦೨೬

.........................


Comments

Popular posts from this blog