ಸುಂದರ ಕೌಟುಂಬಿಕ ಜೀವನ ಬಿಂಬಿಸುವ 
 

‘ಬದುಕಿನ ಆಟ’ 



‘ಬದುಕಿನ ಆಟ’ ಇದು ಕಿರುನಾಟಕದ ಕೃತಿ. ಮೂರು ನಾಟಕಗಳು ಇದರಲ್ಲಿವೆ.  ಗೀತಾ ಶೇಷಾದ್ರಿ ಇದರ ಲೇಖಕಿ. ಅಂಚೆ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಗೀತಾ ಅಲ್ಲಿನ ಅನುಭವ, ಕೆಲಸ, ಕಂಡ ಕಟು ಸತ್ಯವನ್ನು ಯಾವುದೇ ಅತಿರೇಕ- ಅಬ್ಬರವಿಲ್ಲದೆ ಚಿಕ್ಕ-ಚೊಕ್ಕದಾಗಿ ನಾಟಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. 

ಇದರಲ್ಲಿ ಅಂಚಾಯಣ, ಋಣಾನುಬಂಧ ಮತ್ತು ನಿವೃತ್ತ್ತಿ ಯಾವಾಗ ಎಂಬ ಮೂರು ನಾಟಕಗಳಿವೆ.  

 ಅಂಚೆ ಇಲಾಖೆಯಲ್ಲಿ ಉಳಿತಾಯ ಮಾಡಿದರೆ ಲಾಭವೇನು, ಖಾಸಗಿಯವರಲ್ಲಿ ಚೀಟಿ ಕಟ್ಟಿ ನಷ್ಟಕ್ಕೊಳಗಾಗುವುದು, ಇಲಾಖೆಯ ವಿವಿಧ ಸೇವೆ, ಉಳಿತಾಯ, ವಿಮೆ ಕುರಿತಾದ ನಾಟಕ ‘ಅಂಚಾಯಣ’, ಜಾಗತೀಕರಣ ಸಂದರ್ಭದಲ್ಲಿ ಸಂಬಂಧಗಳನ್ನು ಪುನಃ ವ್ಯಾಖ್ಯಾನಿಸುವ ಮತ್ತು ಸವಾಲನ್ನು, ಅಗತ್ಯವನ್ನು ಚರ್ಚಿಸುವ ನಾಟಕ ‘ಋಣಾನುಬಂಧ’, ಮುಪ್ಪಿನ ಕಾಲದಲ್ಲಿ ತಂದೆ-ತಾಯಿಯನ್ನು ನಿರ್ಲಕ್ಷ್ಯಿಸುವ ಮಕ್ಕಳು ಎಚ್ಚೆತ್ತುಕೊಂಡರೆ ನಿವೃತ್ತ ತಂದೆ ತಾಯಿ ನೆಮ್ಮದಿಯ ಬದುಕನ್ನು ಸಾಗಿಸಬಹುದು ಎನ್ನುವುದನ್ನು ‘ನಿವೃತ್ತ್ತಿ ಯಾವಾಗ’ ವಿವರಿಸುತ್ತದೆ.

ಮೂರು ನಾಟಕಗಳು ಬದುಕನ್ನು ಸಂತಸದಿಂದ ಕಳೆಯುವುದು ಹೇಗೆ?  ಕೌಟುಂಬಿಕ ಜೀವನ ಸುಂದರವಾಗಿರಬೇಕೆಂದರೆ ಏನು ಮಾಡಬೇಕು, ಒಟ್ಟು ಕುಟುಂಬದಿಂದಾಗುವ ಲಾಭವೇನು? ಮೊಮ್ಮಕ್ಕಳಿಗೆ, ಮಕ್ಕಳಿಗೆ ಪಾಲಕರ, ಅಜ್ಜ-ಅಜ್ಜಿಯರ  ಪ್ರೀತಿ- ಮಮತೆ ಏಕೆ ಬೇಕು  ಎನ್ನುವುದನ್ನು ಸಾರುತ್ತವೆ. ಸಂಸಾರವನ್ನು ಛಿದ್ರ್ರವಾಗಿಸುವ ಬದಲಾಗಿ ಅದನ್ನು ಸುಂದರವಾಗಿ ನೋಡಿಕೊಂಡು ಒಂದಾಗಿ ಎಲ್ಲರೂ ಬಾಳುವುದರಲ್ಲಿ ಜೀವನದ ಸಂತೋಷವಿದೆ ಎನ್ನುವುದನ್ನು ಇಲ್ಲಿ ಸೂಕ್ಷ್ಮವಾಗಿ ಬಿಂಬಿಸಿದ್ದಾರೆ.

‘ಅಂಚಾಯಣ’ ನಾಟಕ ಮೊದಲೇ ಹೇಳಿದಂತೆ ಪ್ರತಿದಿನ ಸಣ್ಣ ಉಳಿತಾಯ ಮಾಡಿದರೂ ಹೇಗೆ ಅಂಚೆ ಇಲಾಖೆಯಲ್ಲಿ ಅದನ್ನು ಇಡಬಹುದು, ಇಲಾಖೆಯ ವಿವಿಧ ಯೋಜನೆ, ಕಾರ್ಯ ವೈಖರಿ, ವಿದೇಶಗಳಿಗೆ ಹಣ ವಿನಿಮಯದ  ಬಗ್ಗೆ ಇದೆ. 

‘ಋಣಾನುಬಂಧ’ ನಾಟಕದಲ್ಲಿ ಮನೆಯನ್ನು ಬಿಟ್ಟು ತವರು ಮನೆಗೆ ಬಂದ ಮಗಳಿಗೆ ತಂದೆ- ತಾಯಿ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಮೂಲಕ ಸೊಸೆಗೆ ಕಿರಿಕಿರಿ ಮಾಡುವುದು, ಸೊಸೆಯನ್ನು ಕೀಳಾಗಿ ಕಾಣುವುದು, ಅವಳ ಬಗ್ಗೆ ತಾತ್ಸಾರದ ಮಾತನಾಡುವುದು, ಕೊನೆಗೆ ಮಿತ್ರರ ಬೋಧನೆಯಿಂದ ತಮ್ಮ ತಪ್ಪನ್ನು ಅರಿತುಕೊಂಡು ಮಗಳನ್ನು ಪುನಃ ಗಂಡನ ಮನೆಗೆ ತಂದೆ- ತಾಯಿ ಕಳಿಸುವುದು, ಮನೆಯ ಸೊಸೆಯನ್ನು ಗೌರವಯತವಾಗಿ ಕಾಣುವುದು ಇದರಲ್ಲಿ ಸುಂದರವಾಗಿ ಚಿತ್ರಿತವಾಗಿದೆ. ಇನ್ನೊಂದು ದೃಶ್ಯದಲ್ಲಿ ಕಾಲೇಜಿನ ಮೂವರು ಮಹಿಳಾ ಉಪನ್ಯಾಸಕರು ನಡೆಸುವ ಚರ್ಚೆಯನ್ನು ಬಹುಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

 ಇಂದಿನ ಸಮಾಜಕ್ಕೆ ಇಂತಹ ನೀತಿಯುತ ನಾಟಕಗಳು ಬಹಳ ಅವಶ್ಯಕವೆನಿಸುತ್ತದೆ. ಓದಿದಾಗ ‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎನ್ನುವ ಗಾದೆ ಮಾತು ಈ ನಾಟಕಗಳನ್ನು ಓದಿದಾಗ ನೆನಪಾಗುತ್ತದೆ. ಒಡೆದ ಕುಟುಂಬಗಳು ಒಂದಾಗಿ ಬಾಳುವ ಮೂಲಕ ಸಾಮರಸ್ಯವನ್ನು ಸ್ಥಾಪಿಸುವುದು, ಬದುಕಿನಲ್ಲಿ ಸ್ವಾರಸ್ಯವನ್ನು ಕಾಣುವುದನ್ನು ನಾಟಕz ಪ್ರಮುಖ ಅಂಶ.  

‘ನಿವೃತ್ತಿ ಯಾವಾಗ’ದಲ್ಲಿ ಹೆತ್ತ ಮಕ್ಕಳು ತಂದೆ-ತಾಯಿಯನ್ನು ಪ್ರೀತಿಯಿಂದ ಕಾಣದೆ ಅವರು ಹೊರೆ ಎಂದು ಭಾವಿಸುವುದು, ತಮ್ಮ ಮಕ್ಕಳಿಗೂ ಅಜ್ಜ-ಅಜ್ಜಿಯ ಪ್ರೀತಿಯನ್ನು ಕೊಡದೆ ಬೆಳೆಸುವುದು, ಕೊನೆಯಲ್ಲಿ ತಂದೆ-ತಾಯಿಗೆ ಅವರ ಕರ್ತವ್ಯದ ಬಗ್ಗೆಯೇ ಪ್ರಶ್ನೆ ಮಾಡುವುದು, ಇದರಿಂದ ನೊಂದ ಉಪಾಧ್ಯಾಯ ದಂಪತಿ ವೃತ್ತಿಯಿಂದೇನೋ ನಿವೃತ್ತಿಯಾದೆವು, ಇನ್ನು ಜೀವನದಿಂದ ನಿವೃತ್ತಿ ಯಾವಾಗ ಎಂದು ದೇವರಲ್ಲಿ ಮೊರೆ ಇಡುವಂತಹ ದಯನೀಯ ಸಂದರ್ಭವನ್ನು ಬಹುಸುಂದರವಾಗಿ ಚಿತ್ರಿಸಿದ್ದಾರೆ.

  ತಂದೆ -ತಾಯಿಯ, ಮಕ್ಕಳ ಸಂಸಾರವನ್ನು ಒರೆಗೆ ಹಚ್ಚುವ, ಪುನರ್ ವ್ಯಾಖ್ಯಾನಿಸುವ ನಾಟಕಗಳು ಇದರಲ್ಲಿವೆ. ಆಡು ಭಾಷೆಯ ಸೊಗಸಿನಲ್ಲಿದ್ದರೂ ಸಂಭಾಷಣೆಯು ಚುರುಕಾಗಿದೆ. ಶಾಲಾ- ಕಾಲೇಜುಗಳಲ್ಲಿ ಯಶಸ್ವಿಯಾಗಿ ಅಭಿನಯಿಸಬಹುದಾದ ಕಿರು ನಾಟಕಗಳು ಇವು. 

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ


Comments

Popular posts from this blog