ಅಪೂರ್ವ ಮಾಹಿತಿಯ
‘ಪ್ರಸಿದ್ಧ ಸ್ತ್ರೀವಾದಿಗಳ ಸಂಕ್ಷಿಪ್ತ ಪರಿಚಯ’
‘ಪ್ರಸಿದ್ಧ ಸ್ತ್ರೀವಾದಿಗಳ ಸಂಕ್ಷಿಪ್ತ ಪರಿಚಯ’ ಇದು ಹೆಸರೇ ಹೇಳುವಂತೆ ಸ್ತ್ರೀವಾದಿಗಳ ಕುರಿತ ಕೃತಿ ಪುರುಷ- ಮಹಿಳಾ ತಾರತಮ್ಯ ನಮ್ಮ ಸಮಾಜದ ಒಂದು ದುರಂತ. ಮಹಿಳೆಯನ್ನು ಇಂದಿಗೂ ಭೋಗದ ವಸ್ತು ಎಂದು ಪರಿಗಣಿಸುತ್ತಿರುವುದು ಮತ್ತೊಂದು ದುರಂತ. ಈ ಹಿನ್ನೆಲೆಯಲ್ಲಿ ಮೊದಲಿನಿಂದಲೂ ಮಹಿಳಾಪರ ಹೋರಾಟಗಳು ವಿದೇಶದಲ್ಲಿ ನಡೆದು ಬಂದ ಇತಿಹಾಸವಿದೆ. ಅಂತಹ ಪ್ರಸಿದ್ಧ ಸ್ತ್ರೀವಾದಿಗಳನ್ನು ಪರಿಚಯಿಸುವ ಕೃತಿ ಇದು. ಕಲಬುರ್ಗಿಯ ಸ್ತ್ರೀವಾದಿ, ಚಿಂತಕಿ, ಬರಗಾರ್ತಿ, ಶ್ರೀದೇವಿ ಎಲ್. ರಾಠೋಡ್ ಈ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ದೇಶ- ವಿದೇಶದ ೨೭ ಪ್ರಸಿದ್ಧ ಸ್ತ್ರೀವಾದಿಗಳು ನಡೆಸಿದ ಹೋರಾಟ, ಅವರು ಬರೆದ ಕೃತಿಗಳು, ಅವರು ಅನುಭವಿಸಿದ ಕಷ್ಟ -ನಷ್ಟಗಳನ್ನು ತುಂಬಾ ಅಧ್ಯಯನ ಮಾಡಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
sಸ್ತೀವಾದಿ ಚಳವಳಿ ಪಾಶ್ಚಾತ್ಯದಲ್ಲಿ ಮತ್ತು ಭಾರತದಲ್ಲಿ ನಡೆದುಬಂದಿದ್ದು, ಅದಕ್ಕೆ ಚಳವಳಿ ರೂಪ ಕೊಟ್ಟವರು, ಅದರಲ್ಲೂ ವಿಶೇಷವಾಗಿ ಪಾಶ್ಚಿಮಾತ್ಯ ನೆಲದಲ್ಲಿ ಅದನ್ನು ೧೮ನೆಯ ಶತಮಾನದಲ್ಲೇ ಆರಂಭಿಸಿದವರು ಹಲವರು. ಮಹಿಳೆ ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಪುರುಷನ ಅಧೀನದಲ್ಲಿ ನಡೆದು ಬಂದಿದ್ದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಮಹಿಳೆ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದಾಳೆ. ಪಾಶ್ಚಾತ್ಯ ಸ್ತ್ರೀವಾದ ನೋಡಿದಾಗ ಮೇರಿ ಓಲ್ಸ್ಟೋನ್‌ಕ್ರಾಫ್ಟ್ ಎನ್ನುವವರು ಮೊದಲ ಸ್ತ್ರೀವಾದಿ ಎಂದು ಗುರುತಿಸಲಾಗುತ್ತದೆ ಮಹಿಳಾ ಶಿಕ್ಷಣ ಮತ್ತು ಸಮಾನತೆಗಾಗಿ ಹೋರಾಡಿದ ವೀರ ಮಹಿಳೆಯರು ಸಾಕಷ್ಟಿದ್ದಾರೆ. ಎಲ್ಲಾ ಸ್ತ್ರೀವಾದಿಗಳು ಹೋರಾಟ ಮಾಡಿದ್ದು ಸಮಾನ ಅವಕಾಶ, ಹೆಣ್ಣಿನ ಅಸ್ತಿತ್ವ, ಅವಳಿಗೆ ಬೇಕಾದ ಸ್ಥಾನಮಾನ, ಪುರುಷರಿಗೆ ಇರುವಂತಹ ಹಕ್ಕುಗಳು ಮಹಿಳೆಯರಿಗೂ ಇರಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು.
೨೧ನೇ ಶತಮಾನದಲ್ಲಿ ಮಹಿಳೆ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾಳೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಸಮಾನ ಶಿಕ್ಷಣ, ಮತದಾನದ ಹಕ್ಕು, ರಾಜಕೀಯ, ಉದ್ಯೋಗ, ದೌರ್ಜನ್ಯದ ವಿರುದ್ಧ ಕಾನೂನುಗಳು ರಚಿತವಾಗಿದ್ದರೂ ಮಹಿಳೆ ಸುರಕ್ಷಿತವಾಗಿಲ್ಲ, ಸಬಲವಾಗಿಲ್ಲ. ಹಿಂದಿನದೇ ಸ್ಥಿತಿಯಲ್ಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ, ಕಂಡುಬರುತ್ತದೆ ಕೂಡ.
ಮೇರಿ ಓಲ್‌ಸ್ಟೋನ್ ಕ್ರಾಫ್ಟ್ :
ಮಹಿಳೆಯರಿಗೆ ಹಕ್ಕು, ಮತದಾನ, ಸಮಾನತೆ, ಸಮಾನ ಶಿಕ್ಷಣ ನೀಡಬೇಕೆಂದು ಮೊಟ್ಟಮೊದಲ ಬಾರಿಗೆ ‘ವೆಂಡಿಕೇಶನ್ ಆಫ್ ದ ರೈಟ್ ಆಫ್ ವಿಮೆನ್’ ಕೃತಿ ರಚಿಸಿ ಹೋರಾಡಿದ ದಿಟ್ಟೆ. ವಿವಾಹವಾಗಿ ಗಂಡನಿಂದ ದೌರ್ಜನ್ಯಕ್ಕೊಳಗಾಗಿ ಆತನ್ನು ಬಿಟ್ಟು, ಮತ್ತೊಂದು ವಿವಾಹವಾಗಿ, ಅಲ್ಲಿಯೂ ತೊಂದರೆ ಎದುರಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಮತ್ತೆ ಜೀವನವನ್ನು ಕಟ್ಟಿಕೊಂಡವಳು. ಇದರ ಬಳಿಕ ಅವರು ಹಲವಾರು ಪ್ರಮುಖ ಕೃತಿಗಳನ್ನು ರಚಿಸಿದರು. ಮಹಿಳೆಯರಿಗೆ ಹಿಂಸೆ, ಅನ್ಯಾಯದ ವಿರುದ್ಧ ಕೃತಿ ಬರೆದಿದ್ದಾರೆ. ಬ್ರಿಟನ್ ಅಧಿಕಾರಶಾಹಿರಾಜ ಮನೆತನದವರು ಗಂಡು ಮಗುವಿಗೆ ಜನ್ಮ ನೀಡಲೇಬೇಕೆಂದು ಬೇಡಿಕೆ ಇಟ್ಟು ಮಾನಸಿಕವಾಗಿ ಮಹಿಳೆಯನ್ನು ಶೋಷಿಸುವ ಸ್ಥಿತಿಯನ್ನು ಇದರಲ್ಲಿ ವಿವರಿಸಿದ್ದಾರೆ.
ಜಾನ್ ಸ್ಟುವರ್ಟ್ ಮಿಲ್: ಇವರು ಇಂಗ್ಲೆಂಡ್‌ನ ಉದಾರವಾದಿ ರಾಜಕೀಯ ಪಕ್ಷದಲ್ಲಿದ್ದು ಮಹಿಳೆಯರಿಗೆ ಹಕ್ಕು, ಮಹಿಳಾ ಮತದಾನ, ಮಹಿಳಾ ಶಿಕ್ಷಣ, ಮಹಿಳಾ ಸಮಾನತೆ ಇರಬೇಕೆಂದು ವಾದಿಸಿದ ಮೊದಲ ಪುರುಷ ಸ್ತ್ರೀವಾದಿ. ‘ದ ಸಬ್ಜೆಕ್ಷನ್ ಆಫ್ ವಿಮೆನ್’ ಎಂಬ ಕೃತಿಯಲ್ಲಿ ಮಹಿಳೆಯರು ಪುರುಷನ
ಎಲಿಜಬೆತ್ ಕ್ಯಾಡೆ:
ಇವರು ನ್ಯೂಯಾರ್ಕ್‌ನವರಾಗಿದ್ದು ೧೯ನೇ ಶತಮಾನದಲ್ಲಿ ಮಹಿಳಾ ಹಕ್ಕುಗಳ ಚಳವಳಿಯ ನಾಯಕಿಯಾಗಿದ್ದರು. ‘ಸೆನೆಕ ಫಾಲ್ಸ್ ಕನ್ವೆನ್ಷನ್’ ಎಂಬ ಚಳುವಳಿಯ ಪ್ರಮುಖ ಶಕ್ತಿಯಾಗಿದ್ದರು. ‘ಡಿಕ್ಲರೇಶನ್ ಆಫ್ ರೈಟ್ಸ್ ಆಂಡ್ ಸೆಂಟಿಮೆಂಟ್ಸ್’ (ಭಾವನೆಗಳ ಘೋಷಣೆ) ಮೂಲಕ ಮಹಿಳೆಯರ ಹಕ್ಕುಗಳನ್ನು ಚರ್ಚಿಸಿದವರು. ಮಹಿಳಾ ಮತದಾನಕ್ಕಾಗಿ ಬೇಡಿಕೆ ಇಟ್ಟವರು. ‘ನ್ಯಾಷನಲ್ ವಿಮೆನ್ ಸಫ್ರೇಜ್ ಅಸೋಸಿಯೇಷನ್’ ಅಧ್ಯಕ್ಷರಾಗಿ ಹೋರಾಟ ಮಾಡಿದವರು. ‘ದಿ ವಿಮೆನ್ ಬೈಬಲ್’ ಎಂಬ ಮಹತ್ತರ ಕೃತಿಯನ್ನು ರಚಿಸಿದವರು.
ಕಾರ್ಲ್ ಹೆನ್ರಿ ಮಾರ್ಕ್ಸ್
ಇವರು ಜರ್ಮನಿಯ ಪ್ರಸಿದ್ಧ ತತ್ವಜ್ಞಾನಿ, ರಾಜಕೀಯ, ಆರ್ಥಿಕತೆಯ ವಿಮರ್ಶಕ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸ್ತ್ರೀವಾದಿ. ಮಹಿಳೆಯ ದಬ್ಬಾಳಿಕೆಯ ಮೂಲವನ್ನು ತನಿಖೆ ಮಾಡಲು ತೊಡಗಿದಾಗ ‘ಮಾರ್ಕ್ಸ್ ಫೆಮಿನಿಸಂ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಮಹಿಳೆಯರ ಶ್ರಮದ ಶೋಷಣೆ, ಆಡಳಿತ ವರ್ಗದಿಂದ ಮಹಿಳೆಯರ ವ್ಯವಸ್ಥಿತ ತುಳಿತ, ಲಿಂಗ ಬೇಧ ಭಾವ ಮತ್ತು ವರ್ಣನೀತಿ ಸಮಾನ ಹಕ್ಕು ಮೊದಲಾದವುಗಳ ಬಗ್ಗೆ ಸಂಶೋಧನೆ ನಡೆಸಿ ಈ ಬಗ್ಗೆ ಕಾನೂನು ರೂಪಿಸುವಲ್ಲಿ ಮಾತ್ರ ಒತ್ತಡವನ್ನು ಹೇರಿದವರು.
ಸುಸಾನ್ ಬಿ ಅಂಥೋನಿ:
ಸಮಾಜ ಸುಧಾರಕಿ, ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಸ್ತ್ರೀವಾದಿ. ೧೮೬೩ ರಲ್ಲಿ ‘ವಿಮೆನ್ ನ್ಯಾಷನಲ್ ಲಾಯಲ್ ಲೀಗ್’ ನ್ನು ಅಮೆರಿಕದಲ್ಲಿ ಸ್ಥಾಪಿಸಿ ಗುಲಾಮಗಿರಿಯ ನಿರ್ಮೂಲನಕ್ಕಾಗಿ ಹೋರಾಟ ಮಾಡಿ ಸುಮಾರು ನಾಲ್ಕು ಲಕ್ಷ ಸಹಿ ಸಂಗ್ರಹಿಸಿ ಸಮಾನ ಹಕ್ಕುಗಳ ಸಂಘವನ್ನು ಸ್ಥಾಪಿಸಿದರು. ಇದರ ಫಲವಾಗಿ ೧೯೨೦ ರಲ್ಲಿ ಅಮೆರಿಕಾ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಡಲಾಯಿತು. ‘ಹಿಸ್ಟರಿ ಆಫ್ ವುಮನ್ಸ್’ ಎಂಬ ಕೃತಿಯನ್ನು ಇವರು ರಚಿಸಿದ್ದಾರೆ
ಫ್ರೆಡ್ರಿಕ್ ಎಂಗಲ್ಸ್:
ಇವರು ಜರ್ಮನಿಯ ತತ್ವಶಾಸ್ತ್ರಜ್ಞ, ಪತ್ರಕರ್ತ, ಉದ್ಯಮಿ ಮಹಿಳೆಯರ ಕುರಿತು ಚಿಂತನೆ ಮತ್ತು ಸಿದ್ಧಾಂತಗಳನ್ನು ಕಟ್ಟುವ ಜೊತೆಗೆ ಅನಿಷ್ಟ ಪದ್ದತಿಗಳನ್ನು ಹೊಡೆದೋಡಿಸಲು ಹೋರಾಡಿದವರು. ಚರ್ಚ್ ನಿಯಂತ್ರಿತ ವಿವಾಹ ವರ್ಗವನ್ನು ದಬ್ಬಾಳಿಕೆಯ ಒಂದು ರೂಪವೆಂದು ಪರಿಗಣಿಸಿದರು. ಏಕಪತ್ನಿತ್ವವನ್ನು ಸದ್ಗುಣವೆಂದು ಪರಿಗಣಿಸಿದರು. ಮಹಿಳಾ ಕಾರ್ಮಿಕರ ಸ್ಥಿತಿಗತಿಗಳನ್ನು ವಿಶ್ಲೇಷಿಸುವ ‘ಕಂಡಿಷನ್ ಆಫ್ ದಿ ವರ್ಕಿಂಗ್ ಕ್ಲಾಸ್ ಇನ್ ಇಂಗ್ಲೆಂಡ್’ ಎನ್ನುವ ಮಹತ್ತರ ಕೃತಿಯನ್ನು ರಚಿಸಿದರು. ವಿವಾಹ ಎನ್ನುವುದು ಮಹಿಳೆಯ ಶೋಷಣೆಯ ಮೂಲ ಸಂಸ್ಥೆ ಎಂದು ಅವರು ಕರೆದಿದ್ದರು.
ಹ್ಯಾರಿಯರ್ ಟೇಯ್ಲರ್ ಮಿಲ್:
ಇವರು ಮಹಿಳೆಯರಿಗೆ ಮದುವೆಯಾಗುವುದು ಅವರ ಅಸ್ತಿತ್ವದ ಹಕ್ಕು ಎಂದು ವಾದಿಸಿದರು. ಮಹಿಳೆಯರ ಹಕ್ಕುಗಳು, ನೈತಿಕತೆ, ಸಹಿಷ್ಣುತೆ ಮತ್ತು ಮದುವೆಯ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಅವರ ಕೃತಿಗಳಲ್ಲಿ ಮಹಿಳೆಯ ವೈವಾಹಿಕ ಸಂಬಂಧ ಹಕ್ಕುಗಳ ಕುರಿತು ಬರಹಗಳಿವೆ. ‘ದ ಸಬ್ಜೆಕ್ಟ್ ಆಫ್ ಹ್ಯೂಮನ್’ ಎಂಬುದು ಅವರ ಪ್ರಸಿದ್ಧ ಕೃತಿ. ‘ಸೆಕ್ಷುವಲ್ ಇಕ್ವಾಲಿಟಿ’ ಎಂಬ ಪುಸ್ತಕದಲ್ಲಿ ಮಹಿಳೆಯರ ಸಮಾನತೆಯನ್ನು ಉತ್ತೇಜಿಸುವ ಪ್ರೀತಿ, ಲೈಂಗಿಕತೆ, ಮದುವೆ, ಮಕ್ಕಳು, ಆಸ್ತಿ ವಿಚ್ಛೇದನ, ಮತದಾನ ಮುಂತಾದವುಗಳ ಬಗ್ಗೆ ಬರೆದಿದ್ದಾರೆ.
ಸಾವಿತ್ರಿ ಜ್ಯೋತಿರಾವ್ ಫುಲೆ:
ಮಹಾರಾಷ್ಟ್ರದ ಸತಾರಾದವರಾದ ಇವರು ಭಾರತದ ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಸ್ತ್ರೀವಾದಿ. ಜಾತಿ, ಲಿಂಗದ ಮೇಲೆ ಜನರ ಮೇಲಿನ ತಾರತಮ್ಯ ಮತ್ತು ಅನ್ಯಾಯ ಹೊಡೆದೋಡಿಸಲು ಕೆಲಸ ಮಾಡಿದ ಸಾಧಕಿ. ದೇಶದ ಮೊದಲ ಶಿಕ್ಷಕಿಯಾದ ಇವರು, ಹೆಣ್ಣು ಮಕ್ಕಳಿಗಾಗಿಯೇ ಹಲವೆಡೆ ಪ್ರತ್ಯೇಕ ಶಾಲೆ ತೆರೆದು ಕಲಿಸಲು ಹೋದಾಗ ಸೆಗಣಿ, ಕಲ್ಲುಗಳಿಂದ ಹೊಡೆಯುತ್ತಿದ್ದರು. ಅವರ ಆ ಸಾಧನೆ ಇಂದಿನ ಮಹಿಳಾ ಶಿಕ್ಷಣಕ್ಕೆ ನಾಂದಿಯಾಗಿದೆ.
ತಾರಾಬಾಯಿ ಶಿಂಧೆ:
ಮಹಾರಾಷ್ಟ್ರದವರಾದ ಇವರು ೧೯ನೆಯ ಶತಮಾನದಲ್ಲಿ ಇರುವ ಮೌಢ್ಯತೆ, ಪಿತೃಪ್ರಧಾನ, ಜಾತೀಯತೆಯನ್ನು ಪ್ರತಿಭsಟಿಸಿದವರು. ತಮ್ಮ ‘ಸ್ತ್ರೀ ಪುರುಷ ತುಲನಾ’ ಕೃತಿಯಲ್ಲಿ ಮೇಲ್ಜಾತಿಯಲ್ಲಿನ ಪಿತೃಪ್ರಧಾನ ವ್ಯವಸ್ಥೆಯನ್ನು ಟೀಕಿಸಿದ್ದಾರೆ. ಇದನ್ನು ಆಧುನಿಕ ಭಾರತದ ಸ್ತ್ರೀವಾದಿ ಪಠ್ಯವೆಂದು ಪರಿಗಣಿಸಲಾಗಿದೆ. ಮಹಿಳಾ ದಬ್ಬಾಳಿಕೆಯ ಬಗ್ಗೆ ಇದರಲ್ಲಿದೆ. ವಿಧವೆಯರು ಸಂಬಂಧಿಕರಿಂದ ಗರ್ಭ ಧರಿಸುವ ಪದ್ದತಿಯನ್ನು ತೀವ್ರವಾಗಿ ಪ್ರತಿಭಟಿಸಿದ್ದರು.
ಹೀಗೆ ಈ ಕೃತಿಯಲ್ಲಿ ಮಹಿಳಾ ಸಮಾನತೆ, ಹಕ್ಕಿಗಾಗಿ ಹೋರಾಡಿದ ರಮಾಬಾಯಿ ರಾನಡೆ, ಕ್ಲಾರಾ ಝಕಿನ್, ವರ್ಜಿನಿಯಾ ವೂಲ್ಫ್, ಸಿಮೋನ್ ಡೇ, ರೋಸಾ ಪಾರ್ಕ್, ಬೆಟ್ಟಿ ಫ್ರೀಡಾನ್, ಮಾರ್ಗರೇಟ್ ಎಲಿನೇರ್, ಮೇರಿ ಡಾಲಿ, ಆಡ್ರಿಯನ್ ರಿಚ್, ಬೆಲ್ ಹುಕ್ಸ್, ಆಂಡ್ರಿಯಾ ಡ್ವರ್ಕಿನ್, ಶುಲಾಮಿತ್ ಫೈರ್ ಸ್ಟೋನ್, ಜಾನಿಸ್ ರೇಮಂಡ್, ಅಲಿಸನ್ ಜಾಗರ್ ಮೊದಲಾದವರು ಹೋರಾಡಿದ, ಬರೆದ ಕೃತಿಗಳ ಬಗ್ಗೆ ಅಪೂರ್ವವಾದ ಮಾಹಿತಿ ಇದೆ. ನಿಜಕ್ಕೂ ಇದು ಮಹಿಳಾ ಪರ ಹೋರಾಟಗಾರರಿಗೆ, ಸ್ತ್ರೀವಾದಿಗಳಿಗೆ ಮಾರ್ಗದರ್ಶಕ ಕೃತಿಯಾಗಿದೆ. ಮಹಿಳಾ ಸಾಧಕರ ದಾರಿಯಲ್ಲಿ ಸಾಗಲು ಇದು ಪ್ರೇರಣೆಯಾಗಲಿದೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
................................

Comments
Post a Comment