ವೈವಿಧದ, ಸ್ವಾರಸ್ಯಕರ ಪ್ರಬಂಧ
‘ಸಂತೆಯಲ್ಲಿ ಸುಬ್ರಹ್ಮಣ್ಯ’
ಸಂತೆಯಲ್ಲಿ ಸುಬ್ರಹ್ಮಣ್ಯ ಇದೊಂದು ಹಾಸ್ಯ ಸಂಕಲನ. ಎನ್ಕೆ ಸುಬ್ರಹ್ಮಣ್ಯ ಇದರ ಲೇಖಕರು. ತಮ್ಮ ಪ್ರಬಂಧಗಳ ಮೂಲಕವೇ ಚಿರಪರಿತರಾದವರು ಇವರು. ವಿವಿಧ ಪತ್ರಿಕೆಗಳಲ್ಲಿ ಆಗಾಗ ಬರೆದ ಪ್ರಬಂಧಗಳನ್ನೆಲ್ಲ ಸಂಗ್ರಹಿಸಿ ಇದನ್ನು ಕೃತಿಯನ್ನಾಗಿಸಿದ್ದಾರೆ. ಆಕಾಶವಾಣಿಯಲ್ಲೂ ಈ ಹಾಸ್ಯ ಬರಹಗಳು ಪ್ರಸಾರವಾಗಿವೆ.
ಸಂತೆ ಇದರ ಪರಿಕಲ್ಪನೆ ಅದ್ಭುತವಾದದ್ದು. ಈ ಕೃತಿಯಲ್ಲಿ ಜಗತ್ತೇ ಒಂದು ಸಂತೆ ಎನ್ನುವುದನ್ನು ಬಿಂಬಿಸಿದ್ದಾರೆ. ಸೂಪರ್ ಮಾರ್ಕೆಟ್‌ಗಳಲ್ಲಿ, ಅತ್ಯಾಧುನಿಕ ಮಾಲ್‌ಗಳಲ್ಲಿ ಖರೀದಿಸುವ ನಗರವಾಸಿಗಳಿಗೆ ಸಂತೆಯ ಸಂಭ್ರಮ ಸಿಗುವುದಿಲ್ಲ. ಆದರೆ ಹತ್ತಾರು ಹಳ್ಳಿಗಳ ರೈತರು ತಾವು ಬೆಳೆದ ದವಸ -ಧಾನ್ಯಗಳನ್ನು, ಸಾಕಿದ ಜಾನುವಾರುಗಳನ್ನು, ತಯಾರಿಸಿದ ಉತ್ಪನ್ನಗಳನು, ಮಾರಾಟ ಮಾಡಿ ತಮಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಒಯ್ಯುವುದರಲ್ಲಿ ಸಂತೆಯ ಸುಖವಿದೆ. ಸಂತೆ ಹೊಸ ಹೊಸ ವಸ್ತು, ವಿಷಯ ಪರಿಚಯ ಮಾಡಿಕೊಡುತ್ತದೆ. ಹೊಸ ಸುದ್ದಿಯ ವಿನಿಮಯವಾಗುತ್ತದೆ. ಮಾನಸಿಕ ಒತ್ತಡ ನಿವಾರಿಸುವ, ಹೊಸ ನಂಟು ಕುದುರಿಸುವ ಸಂತೆಯಲ್ಲಿ ಏನುಂಟು ಏನಿಲ್ಲ? ಈ ಕಿರು ಲೇಖನಗಳ ಮೂಲಕ ಲೇಖಕರು ಜಗತ್ತೇ ಒಂದು ಸಂತೆಯಾಗಿದೆ. ಇದರಲ್ಲಿ ಆಧುನಿಕ ಕಂಪ್ಯೂಟರ್ನಿಂದ ಹಿಡಿದು ಸ್ಥಳೀಯ ವಿಷಯದವರೆಗೆ ರೋಚಕವಾದ ಮತ್ತು ಸ್ವಾರಸ್ಯಕರವಾದ, ಹಾಸ್ಯಮಯ ಪ್ರಬಂಧಗಳನ್ನು ತೆರೆದಿಟ್ಟು ಮುಖಗಳು ಅರಳುವಂತೆ ಮಾಡಿದ್ದಾರೆ.
ಈ ಕೃತಿಯಲ್ಲಿ ಒಟ್ಟು ೧೭ ಕಿರುಪ್ರಬಂಧಗಳಿವೆ. ಎಲ್ಲವೂ ನಮ್ಮನ್ನು ಹಾಸ್ಯದೆಡೆಗೆ ಕರೆದೊಯ್ಯುವಲ್ಲಿ ಸಫಲವಾಗಿವೆ. ‘ವಿಂಡೋಸ್ ಎಕ್ಸ್ ಎಕ್ಸ್’ ಎಂಬ ಬರಹದಲ್ಲಿ ಕಂಪ್ಯೂಟರ್ ಬಗ್ಗೆ ಗೊತ್ತಿರದೆ ವಿಂಡೋಸ್ ಎಂದರೆ ಕಿಟಕಿ ಎಂದಷ್ಟೇ ತಿಳಿದಿದ್ದ ಲೇಖಕರು, ಮಕ್ಕಳ ಹಠಕ್ಕೆ ಮಣಿದು ಹೊಸ ಕಪ್ಯೂಟರ್ ಖರೀದಿಸಲು ಹೋಗಿ ಪೇಚಾಡಿದ ಬಗ್ಗೆ ಇದೆ.
‘ಸಂತೆಯಲ್ಲಿ ಸುಬ್ರಹ್ಮಣ್ಯ’ ಇದರಲ್ಲಿ ಸಂತೆಗೆ ಹೋದಾಗ ಖರೀದಿಯಲ್ಲಿ ಆದ ವಿವಿಧ ಅನುಭವಗಳನ್ನು ಹಾಸ್ಯವಾಗಿ ಹೇಳಿದ್ದಾರೆ. ‘ಕರೆಂಟು ಕೈ ಕೊಟ್ಟಾಗ’ ಕೊಟ್ಟಾಗ ಆದ ಅನುಭವಗಳನ್ನು ಬಹಳ ಸುಂದರವಾಗಿ ವರ್ಣಿಸುತ್ತಾ ಪಕ್ಕದ ಮನೆಯ ಮಗು ನಮ್ಮ ಮನೆಗೆ ಬಂದು ಹೋದಂತೆ ಕರೆಂಟ್ ದಿನಕ್ಕೆ ೧೦೦ ಸಲ ಬರುತ್ತದೆ ಎಂದು ವರ್ಣಿಸುವ ಮೂಲಕ ಆರಂಭಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿ ದಿನ, ಹೆಂಡತಿ ಇಲ್ಲದಿದ್ದಾಗ ನೆಂಟರು ಬಂದಾಗ, ಮಾರ್ಕೆಟಿಗೆ ಖರೀದಿಗೆ ಹೋದಾಗ, ಸಮಾರಂಭದಲ್ಲಿ ಭಾಷಣ ಮಾಡುವಾಗ, ಎಕ್ಸ್‌ಪೋಗೆ ಹೋದಾಗ ಕರೆಂಟ್ ಕೈಕೊಟ್ಟಾಗ ಏನಾಯಿತೆನ್ನುವುದನ್ನು ನಗು ಉಕ್ಕಿ ಹರಿಯುವಂತೆ ಬರೆದಿದ್ದಾರೆ.
‘ಪ್ರಾತಃಸ್ಮರಣೀಯರು’ ಎಂದರೆ ಸಾಮಾನ್ಯವಾಗಿ ಸದಾ ನಾವು ನೆನಪು ಮಾಡಿಕೊಳ್ಳಬೇಕಾದವರು. ಆದರೆ ಈ ಪ್ರಬಂಧದಲ್ಲಿ ಲೇಖಕರ ಪ್ರ್ರಾತಃಸ್ಮರಣೀಯರೇ ಬೇರೆ. ಇವರು ಯಾಕೆ ತನ್ನ ಪ್ರಾತಃಸ್ಮರಣೀಯರು, ಅಥವಾ ವಿಶೇಷವಾದವರೆನ್ನುವುದನ್ನು ಇಲ್ಲಿ ನಗೆಯ ಹೊನಲು ಹರಿಯುವ ಹಾಗೆ ವರ್ಣಿಸಿದ್ದಾರೆ.
‘ನನ್ನ ವಿಶೇಷ ಅರ್ಹತೆಗಳು’ ಎನ್ನುವಲ್ಲಿ ತಾನು ‘ಡಾಕ್ಟರ್ ಏಟ್’ (ಡಾಕ್ಟರೆಟ್ ಅಲ್ಲ) ಪಡೆದ ಘಟನೆಯನ್ನು ಎರಡು ಘಟನೆಗಳ ಮೂಲಕ ವಿವರಿಸುತ್ತಾ ತಮ್ಮ ಡಾಕ್ಟರ್ ಏಟ್ ಸಾಧನೆಯನ್ನು ಚಿತ್ರ್ರಿಸಿದ್ದಾರೆ. ಇದು ಎಂತಹ ಗಂಭೀರ ಸ್ವಭಾವದವರನ್ನೂ ನಗೆಗೆ ನೂಕುವ ಬರಹ. ‘ನನ್ನ ಇತ್ತೀಚಿನ ಸಂಶೋಧನೆಗಳು’ ಪ್ರಬಂಧದಲ್ಲಿ ಮುಖದಲ್ಲಿ ನವರಸವನ್ನು ಚಿಮ್ಮಿಸುವ ಕಲೆ ಹೆಣ್ಣಿಗೆ ಮಾತ್ರ ಹೇಗೆ ಸಾಧ್ಯ ಎನ್ನುವುದನ್ನು ತಾನು ಸಂಶೋಧನೆಯಿಂದ ಕಂಡುಹಿಡಿದಿದ್ದೇನೆ. ಜೊತೆಗೆ ಲಂಚವನ್ನು ಹುಟ್ಟುಹಾಕಿದ್ದೆ ಸರ್ವೇ ಇಲಾಖೆಯವರು ಎಂಬ ದಾಖಲೆಯೂ ತನ್ನಲ್ಲಿದೆ ಹಾಸ್ಯದ ಉದಾಹರಣೆಯ ಮೂಲಕ ನಮ್ಮೆದುರು ತೆರೆದಿಟಿದ್ದಾರೆ. ಇವೆಲ್ವುಗಳ ಜೊತೆಗೆ ಕ್ರಿಕೆಟ್ ನಘಂಟು, ಡಾಕ್ಟರ್ ಆದ ಪ್ರಸಂಗ, ಆ- ಮೇಲ್, ಮನೆ ನಿರ್ಮಿಸಿದ್ದು, ಗುಜರಿ ಬಜಾರ್ ಪ್ರಬಂಧಗಳು ಸಹ ಒಂದಕ್ಕೊಂದು ಮಿಗಿಲಾದ ಹಾಸ್ಯ ಬರಹಗಳಾಗಿವೆ.
ಇವೆಲ್ಲವನ್ನೂ ಓದುವಾಗ ನಮ್ಮ ಜೀವನದಲ್ಲೂ ಇಂತಹ ನೂರಾರು ಘಟನೆಗಳು ನಡೆದಿರುವುದು ಮನಃಪಟಲದಲ್ಲಿ ಹಾದುಹೋಗುತ್ತದೆ. ಆದರೆ ಲೇಖಕರು ಅವುಗಳನ್ನೇ ಸುಂದರವಾಗಿ ಬರೆದು ಅಚ್ಚಳಿಯದೆ ನಿಲ್ಲುವಂತೆ ಮಾಡುವ ಕುಶಲತೆಯನ್ನು ಈ ಕೃತಿಯಲ್ಲಿ ತೋರಿಸಿದ್ದಾರೆ.
..........................

Comments
Post a Comment