ಮಕ್ಕಳ ಮನಸ್ಸನ್ನು ವಿಶ್ಲೇಷಿಸುವ
‘ಮಕ್ಕಳ ಮೇಲಿರಲಿ ಕಾಳಜಿ’
ಇಂದು ಸಾಹಿತ್ಯದಲ್ಲಿ ಮಕ್ಕಳ ಸಮಸ್ಯೆಗಳನ್ನು ವಿಶ್ಲೇಷಿಸುವ ಕೃತಿಗಳ ಕೊರತೆ ಇದೆ. ಈ ಬಗ್ಗೆ ಹೆಚ್ಚು ಪುಸ್ತಕಗಳು ಬರುತ್ತಿಲ್ಲ. ಇಂತಹ ಕೊರತೆಯನ್ನು ನೀಗಿಸಲು ಮಾರ್ಪಳ್ಳಿ ಆರ್ ಮಂಜುನಾಥ್ ಅವರು ಒಂದು ಪ್ರಯತ್ನವನ್ನು ತಮ್ಮ ‘ಮಕ್ಕಳ ಮೇಲಿರಲಿ ಕಾಳಜಿ’ ಎನ್ನುವ ಪುಸ್ತಕದ ಮೂಲಕ ಮಾಡಿದ್ದಾರೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಆ ಮನಸ್ಸಿನ ವಿಕಾಸಕ್ಕೆ ಅನುಗುಣವಾಗಿ ಸಾಹಿತ್ಯವನ್ನು ರಚಿಸಿರುವ ಮಂಜುನಾಥ್, ಸುಮಾರು ಇಪ್ಪತ್ತಕ್ಕೂ ಮಿಕ್ಕ ಲೇಖನಗಳ ಮೂಲಕ ಇಲ್ಲಿ ಮಕ್ಕಳ ಕುರಿತ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ.
ನಮ್ಮ ನಡುವೆ ಇರುವ ಮಕ್ಕಳ ಮನೋಭಾವವನ್ನು ಅರಿತಿರುವ ಪೋಷಕರು ಯಾವ ರೀತಿಯಲ್ಲಿ ಮಕ್ಕಳನ್ನು ನೋಡಿಕೊಳ್ಳಬೇಕು ಎನ್ನುವುದನ್ನು ವಿವರವಾಗಿ ಇಲ್ಲಿ ಚರ್ಚೆಗೆ ಎತ್ತಿಕೊಂಡಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡುವುದರಿಂದ ಹಿಡಿದು ಮಕ್ಕಳನ್ನು ನಿಸರ್ಗದ ಜೊತೆಯಲ್ಲಿ ಹೇಗೆ ಬೆಳೆಸಬೇಕು ಎನ್ನುವುದರವರೆಗೆ ಅವರು ಹೇಳುತ್ತಾರೆ. ಮಗುವಿನ ದೈಹಿಕ ಆರೋಗ್ಯ ಸರಿ ಇಲ್ಲದಿದ್ದರೆ ಆ ಮಗುವಿನ ವಿಕಾಸ ಹೇಗೆ ಸಮರ್ಪಕವಾಗಿ ಆಗುವುದಿಲ್ಲವೋ ಹಾಗೆಯೇ ನಿಸರ್ಗದ ಜೊತೆ ಬೆಳೆಯದಿದ್ದರೂ ಅದರ ಪರಿಪೂರ್ಣ ಬೆಳವಣಿಗೆ ಆಗುವುದಿಲ್ಲ ಎಂಬ ಅಂಶವನ್ನು ಲೇಖಕರು ಇಲ್ಲಿ ನಮ್ಮ ಮುಂದಿಡುತ್ತಾರೆ.
ಕೃತಿಯಲ್ಲಿರುವ ‘ಜೀನ್ಸ್ ಮತ್ತು ಎನ್ವಿರಾನ್ಮೆಂಟ್’ ಎನ್ನುವ ಲೇಖನದಲ್ಲಿ ಅವರು ಮಕ್ಕಳ ಮಾನಸಿಕ ವಿಕಾಸದಲ್ಲಿ ಅನುವಂಶೀಯತೆ ಮತ್ತು ಪರಿಸರದ ಪಾತ್ರ ಎಷ್ಟು ಎನ್ನುವ ವಿಷಯವನ್ನು ಕುರಿತು ಚಿಂತಿಸುತ್ತಾರೆ. ಮಕ್ಕಳ ಗುಣ ಅವುಗಳ ಅನುವಂಶೀಯತೆಯಿಂದ ನಿರ್ಧಾರವಾಗುತ್ತದೆಯೋ ಇಲ್ಲವೋ, ಅದು ಬೆಳೆದು ಪರಿಸರದಿಂದ ಅದಕ್ಕೆ ಬರುತ್ತದೆಯೋ ಎನ್ನುವುದು ಇನ್ನೂ ನಿರ್ಧಾರವಾಗಬೇಕಾದ ವಿಷಯವಾಗಿದ್ದರೂ ಇದೊಂದು ಕುತೂಹಲದ ವಿಚಾರವಾಗಿದೆ. ಮಕ್ಕಳನ್ನು ಬೆಳೆಸುವುದು ಒಂದು ಕಲೆ ಎನ್ನುವುದು ಲೇಖಕರ ಅಂಬೋಣ. ಆದರೆ ಈ ಕಲೆ ಮಕ್ಕಳನ್ನು ಪರಸ್ಪರ ಹೋಲಿಸುವುದರಿಂದ, ಸಿರಿವಂತಿಕೆಯ ತಾರತಮ್ಯ ತೋರುವುದರಿಂದ, ಮಕ್ಕಳ ವ್ಯಕ್ತಿತ್ವದಲ್ಲಿನ ವಿಭಿನ್ನತೆಯನ್ನು ಹೋಗಲಾಡಿಸದೇ ಇರುವುದರಿಂದ, ಮಕ್ಕಳಿಗೆ ಬಾಲ್ಯದಲ್ಲಿ ಸನ್ನಡತೆಯನ್ನು ಕಲಿಸದೇ ಇದ್ದರೆ, ಮಕ್ಕಳ ಬೆಳವಣಿಗೆಯಲ್ಲಿ ಹಿರಿಯರು ಪಾತ್ರ ವಹಿಸದೇ ಇದ್ದರೆ, ಡ್ರಗ್ಸ್ ಮತ್ತು ಇತರೆ ಮಾಫಿಯಾಕ್ಕೆ ಮಕ್ಕಳು ಬಲಿಯಾದಾಗ ಮಕ್ಕಳನ್ನು ಬೆಳೆಸುವಲ್ಲಿ ಕಲೆ ತನ್ನ ಸೋಲನ್ನು ಕಾಣುತ್ತದೆ ಎಂಬುದನ್ನು ಪ್ರತ್ಯೇಕ ಲೇಖನಗಳಲ್ಲಿ ಇಲ್ಲಿ ಮನಸೆಳೆಯುವಂತೆ ಚಿತ್ರಿಸಿದ್ದಾರೆ.
ಜೊತೆಗೆ ಅನಾಥ ಮಕ್ಕಳು, ದೌರ್ಜನ್ಯಕ್ಕೊಳಗಾದ ಮಕ್ಕಳು, ತಮ್ಮ ವಯೋಮಿತಿಯನ್ನು ಮೀರಿದ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳ ಕುರಿತು ಅವರು ಇಲ್ಲಿ ಚಿಂತನೆ ಮಾಡಿದ್ದಾರೆ. ಎಲ್ಲಿಯವರೆಗೆ ಅನಾಥ ಮಕ್ಕಳ ಬೆಳವಣಿಗೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಆ ಮಕ್ಕಳು ಬಾಲಾಪರಾಧಕ್ಕೆ ಕಾರಣವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎನ್ನುತ್ತಾರೆ. ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳು ಕೂಡ ಸಮಾಜದಲ್ಲಿ ಬೆಳೆಯುವ ಮುಳ್ಳು ಕಂಟಿಗಳಂತೆ ಎನ್ನುವುದು ಅವರ ಅಭಿಪ್ರಾಯ. ಮಕ್ಕಳು ಯಾವುದೇ ದೌರ್ಜನ್ಯಕ್ಕೆ ಒಳಗಾಗದೆ ಅವರ ಬಾಳು ಹಸನಾಗಲು, ಉತ್ತಮ ಪ್ರಜೆಯಾಗಿ ಅವರು ಬೆಳೆಯಲು, ನಾವು ಅವಕಾಶ ಕಲ್ಪಿಸಿ ಕೊಡಬೇಕು ಎನ್ನುವುದು ಲೇಖಕರ ಆಶಯವಾಗಿದೆ.
ಮಕ್ಕಳನ್ನು ಬೆಳೆಸುವುದರಲ್ಲಿ ತಂದೆ -ತಾಯಿಗಳಿಗೆ ೨೧ ಪ್ರಶ್ನೆಗಳನ್ನು ಅವರು ನೀಡಿದ್ದಾರೆ. ಇಬ್ಬರು ಮಕ್ಕಳಿದ್ದಲ್ಲಿ ಒಂದೇ ಮಗುವನ್ನು ಎಂದಾದರೂ ಪ್ರೀತಿಸಿದ್ದೀರಾ, ನಿಮ್ಮ ಮಗುವಿನ ಆಸಕ್ತಿಯ ಬಗ್ಗೆ ಗಮನಿಸಿದ್ದೀರಾ, ತನ್ನ ಬಯಕೆಯಂತೆ ಕಲಿಯಲು ನಿಮ್ಮ ಮಗುವಿಗೆ ಅವಕಾಶ ಕಲ್ಪಿಸಿದ್ದೀರಾ, ನಿಮ್ಮ ಮಗು ಹಣ ಗಳಿಸುವ ಯಂತ್ರವಾದರೆ ಸಾಕು ಎನ್ನುವ ಆಶಯ ನಿಮ್ಮದೇ... ಇಂತಹ ಪ್ರಶ್ನೆಗಳು ಇಲ್ಲಿವೆ. ಶಿಕ್ಷಕರ ಜವಾಬ್ದಾರಿ ಕುರಿತಂತೆ ಕೆಲವು ಪ್ರಶ್ನೆಗಳನ್ನು ಸಹ ಇಲ್ಲಿ ಶಿಕ್ಷಕರ ಮುಂದಿರಿಸಿದ್ದಾರೆ. ಮಕ್ಕಳು ತಂದೆ -ತಾಯಿಯ ಕೆಲವು ವರ್ತನೆಗಳ ಬಗ್ಗೆ ಅಕ್ಷೇಪಗಳನ್ನು ಎತ್ತಬಹುದು. ಇವುಗಳಿಗೆ ಪೋಷಕರ ಉತ್ತರ ಏನು ಎಂಬ ಬಗ್ಗೆ ಒಂದು ಲೇಖನ ಇಲ್ಲಿದೆ.
‘ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಿ’ ಎಂಬ ಒಂದು ಲೇಖನ ಈ ಕೃತಿಯಲ್ಲಿದೆ. ‘ಹಿರಿಯರೇ ಹಚ್ಚಿರಿ ಮಕ್ಕಳ ಮನದಲಿ ಎಂದೂ ಆರದ ಸಾಹಿತ್ಯ ದೀಪ’ ಎನ್ನುತ್ತಾರೆ. ಈ ಸಾಹಿತ್ಯದ ಅಭಿಮಾನ ಮುಂದಿನ ತಲೆಮಾರಿಗೂ ಹಬ್ಬಲಿ ಎನ್ನುವುದು ಅವರ ಆಶಯ. ಈ ಕಾರಣಕ್ಕಾಗಿ ಮಕ್ಕಳ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು ಎಂದು ಬಯಸುತ್ತಾರೆ. ಮಕ್ಕಳ ಸಾಹಿತ್ಯಕ್ಕೆ ಮನ್ನಣೆ ಇಲ್ಲದಿರುವ ಬಗ್ಗೆಯೂ ಅವರು ಇಲ್ಲಿ ನೋವನ್ನು ತೋಡಿಕೊಂಡಿದ್ದಾರೆ.
ಹೀಗೆ ಇಲ್ಲಿಯ ಲೇಖನಗಳು ಹಲವಾರು ವಿಷಯಗಳನ್ನು ನಿಕಶಕ್ಕೆ ಒಡ್ಡಿವೆ. ನಾವೆಲ್ಲ ಮಕ್ಕಳ ಕುರಿತು ಯೋಚನೆ ಮಾಡುವವರಾಗಿರುವುದರಿಂದ ಈ ಲೇಖನಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಕಾಡುತ್ತವೆ ಮತ್ತು ಗಾಬರಿ ಹುಟ್ಟಿಸುತ್ತವೆ. ಲೇಖನಗಳಲ್ಲಿ ಜೀವಂತ ಉದಾಹರಣೆಗಳನ್ನು ಅಲ್ಲಲ್ಲಿ ನಿರೂಪಿಸುತ್ತ ವಿಷಯಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಅಲ್ಲಲ್ಲಿ ಬಳಸಿಕೊಂಡಿರುವ ವಚನಗಳು, ಪದ್ಯಗಳು ಸಕಾಲಿಕವಾಗಿವೆ. ಲೇಖನಗಳು ಇನ್ನೂ ಹೆಚ್ಚಾಗಿ ವಿವರಣೆಯೊಂದಿಗೆ ಇದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಕೃತಿಯನ್ನು ಓದಿದಾಗ ಅನಿಸುತ್ತದೆ.
ಒಟ್ಟಿನಲ್ಲಿ, ಈ ಕೃತಿಯನ್ನು ನಾವು ಓದಿದಾಗ ಮಕ್ಕಳ ಅನಿಸಿಕೆಗಳಿಗೆ, ಹಿರಿಯರ ಮನೋಭಾವಗಳಿಗೆ ಮತ್ತು ಮಕ್ಕಳನ್ನು ಬೆಳೆಸುವ, ಲಾಲಿಸುವ, ಗಮನಿಸುವವರಿಗೆ ಇದೊಂದು ಸಣ್ಣ ಹಣತೆ ಆಗಬಹುದು, ಒಂದು ಸಣ್ಣ ಕೈಪಿಡಿಯಾಗಿ ಬಳಕೆಯಾಗಬಹುದು. ಬರೆಯುವ, ಚಿಂತಿಸುವ, ಆಲೋಚಿಸುವ ಮನಗಳಿಗೆ ಇನ್ನೂ ಹೆಚ್ಚಿನ ಪ್ರೇರಕವಾಗಬಹುದು. ಒಟ್ಟಾರೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಮನಸ್ಸು ಚಿಂತಿಸಿ ಕಾಳಜಿ ವಹಿಸಬೇಕೆಂಬುದು ಈ ಕೃತಿಯ
ಆಶಯ.
.........................

Comments
Post a Comment