ಬದುಕಿನ ವಿಭಿನ್ನ ಅನುಭವದ
‘ಸನ್ಯಾಸಿ ಮತ್ತು ಇತರ ಕಥೆಗಳು’
ರಾಷ್ಟ್ರಕವಿ ಕುವೆಂಪು ಅವರ ಕಥ ಸಂಕಲನವಿದು. ಇದರಲ್ಲಿ ಹಳ್ಳಿಯ ಜೀವನ ಬಗ್ಗೆ ಮತ್ತು ಮಲೆನಾಡಿನ ಸುಂದರ ಚಿತ್ರಣಗಳ ವರ್ಣನೆ ಅತ್ಯದ್ಭುತವಾಗಿದೆ. ಕವಿಯ ವರ್ಣನೆಯ ಸಾಲುಗಳು ಎಂತಹವರನ್ನೂ ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಗ್ರಾಮಾಂತರ ಪ್ರದೇಶದವರಾದ ಕುವೆಂಪು ತಮ್ಮ ಬಾಲ್ಯದಲ್ಲಿ ಕಂಡ, ಅನುಭವಿಸಿದ, ಕೇಳಿದ ವಿಚಾರಗಳನ್ನು ಕಥೆಯ ರೂಪದಲ್ಲಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಮೂಢನಂಬಿಕೆ, ಆಸ್ಪತ್ರೆಗಳೇ ಇಲ್ಲದ ಕಾಲದಲ್ಲಿ ಬಡಜನರನ್ನು ಸುಲಿಯುತ್ತಿದ್ದ ವೈದ್ಯರು, ಊರ ಪ್ರಮುಖರ ಏಕಚಕ್ರಾಧಿಪತ್ಯ, ಮಳೆಗಾಲದ ರುದ್ರನರ್ತನದಲ್ಲಿ ಹಳ್ಳಿಯವರು ಕೈಲಿ ಜೀವ ಹಿಡಿದು ಬದುಕುವ ಬಗೆ, ಮಾನವನ ಬದುಕಿನ ಸಂಕೀರ್ಣತೆ, ಬದುಕಿನ ವಿಭಿನ್ನ ಅನುಭವ ಮೊದಲಾದವು ಈ ಕಥೆಯಲ್ಲಿದೆ. ಒಟ್ಟು ೯ ಚಿಕ್ಕ ಕಥೆಗಳು ಇದರಲ್ಲಿವೆ.
ಸನ್ಯಾಸಿ
ಸನ್ಯಾಸ್ವತ್ವ ಹೇಗಿರಬೇಕು, ತಪಸ್ಸು ಮಾಡಿದವರೆಲ್ಲ ಸನ್ಯಾಸಿಯಾಗಲು ಸಾಧ್ಯವಿಲ್ಲ. ಮದುವೆಯಾದರೂ ಜೀವನದಲ್ಲಿ ಶಾಂತಿ ಪಡೆಯಲು ಬಯಸಿ, ನಂತರ ಸನ್ಯಾಸಿಯಾದರೂ ಅದು ಸಾಧ್ಯವಾಗುವುದಿಲ್ಲ ಎನ್ನುವುದಿಲ. ಇಲ್ಲಿ ಚೈತನ್ಯ ಮತ್ತು ಮುಕುಂದ್ ಎನ್ನುವವರ ಪಾತ್ರದ ಮೂಲಕ ಇದನ್ನು ಚಿತ್ರಿಸಿದ್ದಾರೆ.
ಚೈತನ್ಯ ಪ್ರಯಾಗ ಕ್ಷೇತ್ರಕ್ಕೆ ಬಂದು ಸ್ವಾಮಿ ಪ್ರೇಮಾನಂದರ ಶಿಷ್ಯನಾಗಿ ಸನ್ಯಾಸ ಸ್ವೀಕಾರ ಮಾಡಿದಾಗ ಒಂದು ದಿನ ಜನರ ಭಕ್ತರ ಗುಂಪಿನಲ್ಲಿ ಮುಕುಂದನನ್ನು ಕಾಣುತ್ತಾನೆ. ಮುಕುಂದ ಗುರುಗಳ ಬಳಿ ‘ನಾನು ಒಂದು ಭಿಕ್ಷೆ ಬೇಡಲು ಬಂದಿದ್ದೇನೆ’ ಎಂದಾಗ ಹೆದರದೆ ಧೈರ್ಯವಾಗಿ ಹೇಳು ಎನ್ನುತ್ತಾರೆ. ನಾನು ತಮ್ಮೆದುರು ನಿಜವನ್ನು ಹೇಳುತ್ತೇನೆ. ಅದರ ಬಗ್ಗೆ ತೀರ್ಪನ್ನು ಪಡೆಯಲು ನಿರ್ಧರಿಸಿದ್ದೇನೆ. ನೀವು ಅನುಗ್ರಹಿಸಿದರೆ ಇಲ್ಲಿ ಉಳಿಯುತ್ತೇನೆ. ಇಲ್ಲದಿದ್ದರೆ ನಡೆಯುತ್ತೇನೆ ಎಂದು ಹೇಳುತ್ತಾ ತನ್ನ ನೀಳವಾದ ಕೇಶದ ಬೈತಲೆಯನ್ನು ಬಿಚ್ಚಿಟ್ಟು ಸ್ತ್ರೀಯಂತೆ ತೋರುತ್ತಾನೆ. ಮುಂದೆ ಅವರಿಬ್ಬರೂ ಒಂದಾದರೆ? ಸನ್ಯಾಸಿಯಾಗಿ ಉಳಿದರೇ ಎನ್ನುವುದರ ವಿವರಣೆ ಇದರಲ್ಲಿದೆ.
ಕ್ರಿಸ್ತನಲ್ಲ, ಪಾದ್ರಿ ಮಗಳು
ಕ್ರೈಸ್ತ ಪಾದ್ರಿಗಳನ್ನು, ಕ್ರೈಸ್ತ ಮತ ಪ್ರಚಾರಕನ್ನು ಕಂಡರೆ ಉರಿದು ಬೀಳುತ್ತಿದ್ದ ವ್ಯಕ್ತಿ ಹಿಂದೂ ಸಮಾಜವನ್ನು ಸುಧಾರಿಸಬೇಕೆಂದು, ಕ್ರೈಸ್ತರ ಹಾವಳಿಯನ್ನು ನಿಲ್ಲಿಸಬೇಕೆಂದು ದೃಢ ನಿರ್ಧಾರ ಹೊಂದಿರುತ್ತಾನೆ. ಪಾದ್ರಿಗಳೆದುರು ಧರ್ಮಶಾಸ್ತ್ರ, ವೇದಾಂತ, ಭಕ್ತಿಗಳ ಬಗ್ಗೆ ಉಪದೇಶ ಪ್ರಾರಂಭ ಮಾಡಲು ಪ್ರಾರಂಭಿಸಿದಾಗ ಪಾದ್ರಿ ತನ್ನ ಮಗಳನ್ನು ಕರೆತರುತ್ತಾನೆ. ಅವಳಿಗೆ ಮಾರುಹೋದ ಈ ಹಿಂದು ಧರ್ಮ ಪ್ರತಿಪಾದಕ, ಉಪದೇಶ ಜಯಿಸದವರನ್ನು ಸೌಂದರ್ಯ ಜಯಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗುತ್ತಾನೆ. ಅವಳನ್ನು ಮದುವೆಯಾಗುವುದಾದರೆ ಕ್ರೈಸ್ತನಾಗಬೇಕು ಎಂದು ಪಾದ್ರಿ ಹೇಳುತ್ತಾನೆ. ಆದರೆ ಕಾಸಿಲ್ಲದ ಈಕೆ ತನ್ನನ್ನು
ಮದುವೆಯಾಗುವುದಿಲ್ಲ ಎಂದು ತಿಳಿದು ಸಾರಾಯಿ, ಅಫಿಮು ಸೇವಿಸಲಾರಂಭಿಸುತ್ತಾನೆ. ಮುಂದೆ ಆತ ಆಕೆಯನ್ನು ಮದುವೆಯಾದನೇ ಅಥವಾ ಹಿಂದು ಆಗಿ ಉಳಿದನೇ ಎನ್ನುವದು ಕಥೆಯ ಮುಂದಿನ ಭಾಗದಲ್ಲಿದೆ.
ಈಶ್ವರನು ನಕ್ಕಿರಬೇಕು
ಪತ್ರಿಕೆಯಲ್ಲಿ ಬಂದ ಜಾಹೀರಾತು ಒಬ್ಬ ವರನು ಬೇಕಾಗಿದ್ದಾನೆ ಎನ್ನುವುದನ್ನು ನೋಡಿ ಒಂದು ಕಿವಿ ಇಲ್ಲದವನೊಬ್ಬ ತನ್ನ ಅರ್ಜಿಯನ್ನು ವಧುವಿನ ಮನೆಗೆ ಕಳುಹಿಸುತ್ತಾನೆ. ಇದಕ್ಕುತ್ತರವಾಗಿ ಎಡಗೈ ಚೊಟ್ಟವಾಗಿ ಕೆಲಸಕ್ಕೆ ಬಾರದಂತಿದ್ದ ಹುಡುಗಿ ಕಡೆಯಿಂದಲೂ ಪತ್ರ ಬರುತ್ತದೆ, ಇಬ್ಬರೂ ತಮ್ಮ ಅಂಗವೈಕಲ್ಯ ಮರೆಮಾಚಿ ಫೋಟೊ ತೆಗೆಸಿ ಕಳುಹಿಸುತ್ತಾರೆ. ನಂತರ ಇಬ್ಬರೂ ಮದುವೆಯಾಗುತ್ತಾರೆ. ಗಂಡನ ಮೆನಗೆ ಬಂದ ಮನೆಗೆ ಬಂದ ಆಕೆ, ನಾನು ನಿರ್ಭಾಗ್ಯೆ ಎಂದಾಗ ಆತ, ನೀನು ನಿರ್ಭಾಗ್ಯೆ ಅಲ್ಲ. ನನ್ನ ಭಾಗ್ಯದ ಲಕ್ಷ್ಮಿ ಎನ್ನುತ್ತಾನೆ. ಆಕೆ ತನ್ನ ವಕ್ರವಾದ ಕೈಯನ್ನು ತೋರಿಸುತ್ತಾಳೆ. ಈತ ತನ್ನ ಇಲ್ಲದ ಕಿವಿ ತೋರಿಸುತ್ತಾನೆ. ಮುಂದೆ ಇಬ್ಬರೂ ಒಂದಾಗಿ ಉಳಿದರೆ, ಸಂತಸದ ಜೀವನ ಸಾಗಿಸಿದರೇ ಎನ್ನುವದು ಇಲ್ಲಿನ ಕಥಾ ವಸ್ತು.
ಯಾರೂ ಅರಿಯದ ವೀರ
ಊರಿನ ಗೌಡರ ಮನೆಯ ಆಳಾಗಿ ಇದ್ದ ಲಿಂಗ ಮನೆಗೆ ರಾತ್ರೋರಾತ್ರಿ ಪ್ರವಾಹ ಎದುರಾದಾಗ ಅದರಿಂದ ಪಾರಾಗಲು ಗೌಡರ ಮನೆಯವರಿಗೆ ನೆರವಾಗಿದ್ದಲ್ಲದೆ, ದೋಣಿಯಲ್ಲಿ ಕುಟುಂಬ ಸಾಗುವಾಗ ಮುಳುಗುವ ಹಂತಕ್ಕೆ ಅದು ತಲುಪಿದಾಗ ಕುಟುಂಬದ ಜೀವ ಉಳಿಸಲು ತನ್ನ ಪ್ರಾಣವನ್ನೇ ಒತ್ತೆ ಇಟ್ಟು ಪಾರಾಗಿ ಬಂದ ಕಥೆ ಇದು.
ಹೋಳಿಗೆ ಪ್ರತಿಜ್ಞೆ
ಸಮಾಜದಲ್ಲಿ ಜಾತಿಯತೆ ಎಷ್ಟರಮಟ್ಟಿಗೆ ಪ್ರಬಲವಾಗಿದೆ ಎನ್ನುವುದನ್ನು ಬಿಂಬಿಸುವ ಕಥೆ ಇದು. ಶಾಲೆಗೆ ಹೋಗುವಾಗ ಶೂದ್ರ ವಿದ್ಯಾರ್ಥಿಯೊಬ್ಬ ತನ್ನ ಕಿಸೆಯಲ್ಲಿ ಹೋಳಿಗೆ ಇಟ್ಟುಕೊಂಡು ಬಂದಿದ್ದು ಮಾಸ್ಟರ್ ಇದನ್ನು ಕಂಡು ತನಗೆ ಹೊಡೆಯುತ್ತಾರೆ ಎಂದು ಹೆದರಿ ಪಕ್ಕದಲ್ಲಿದ್ದ ಮಿತ್ರನ ಜೇಬಿಗೆ ಹಾಕುತ್ತಾನೆ ಮಾಸ್ತರು ಈ ಹುಡುಗನ ಜೊತೆಯಲ್ಲಿ ಹೋಳಿಗೆ ಇದುನ್ನು ಕಂಡು ಅವಳಿಗೆ ದ್ವಾದಶ ಪೂಜೆ ಅಂದರೆ ೧೨ ಏಟನ್ನು ಹೊಡೆಯುತ್ತಾರೆ. ಇಲ್ಲಿಂದ ಆತ ರೋಷಾ ವೇಷದಿಂದ ಹೋಳಿಗೆ ತಿನ್ನುವುದೇ ಇಲ್ಲವೆಂದು ಪ್ರತಿಜ್ಞೆ ಮಾಡುತ್ತಾನೆ.
ಮಾಯದ ಮನೆ
ವೈದ್ಯ ವೃತ್ತಿ ಹಣ ಮಾಡುವುದಕ್ಕೆ ದಾರಿ ಹಿಡಿದಿರುವುದನ್ನು ಈ ಕಥೆ ವಿವರಿಸುತ್ತದೆ. ಹಣದ ಆಸೆಗಾಗಿ ಬಡವಿಯೊಬ್ಬಳು ಮಗನನ್ನು ಕಳೆದುಕೊಳ್ಳುವಂತೆ ಮಾಡಿದ ವೈದ್ಯ, ಅದೇ ರೀತಿ ಮಗಳ ಹೆರಿಗೆ ಮಾಡಿಸಿ ಎಂದು ತಮ್ಮನ್ನು ಇನ್ನೊಬ್ಬರು ಕರೆದಾಗ ಹೋಗಿ ಪರೀಕ್ಷಿಸಿ, ಮತ್ತೊಬ್ಬ ಪ್ರಸೂತಿ ತಜ್ಞೆಯನ್ನು ಕರೆಸಿದ್ದು ಆ ಮೂಲಕ ರೋಗಿಯ ಮನೆಯವರನ್ನು ಶೋಷಿಸಿದ್ದು, ಸಾಮಾನ್ಯ ಜನರನ್ನು ವೈದ್ಯರು ಹೇಗೆ ಸುಲಿಯುತ್ತಾರೆ ಎನ್ನುವುದನ್ನು ಈ ಕಥೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಶ್ರೀಮನ್ಮೂಕವಾಗಿತ್ತು
ಜನರು ಇಂದಿಗೂ ಮಂತ್ರವಾದಿಗಳನ್ನು, ಮೂಢನಂಬಿಕೆಯನ್ನು ನಂಬಿ ಬದುಕುವುದನ್ನು ಇದರಲ್ಲಿ ಚಿತ್ರಿಸಲಾಗಿದೆ. ಕಳೆದು ಹೋದ ಎಮ್ಮೆ ಸಿಗಲು ಬಡವನೊಬ್ಬ ಮಂತ್ರವಾದಿ ಬಳಿ ಹೋಗುವುದು, ಅದೇ ರೀತಿ ಅನಾರೋಗ್ಯಕ್ಕೆ ತುತ್ತಾದ ಬಾಲಕನ ಜೀವವುಳಿಸಲು ಊರಿನ ಗೌಡ ಊರಿನ ಶಾಸ್ತ್ರಿಗಳ ಮನೆಗೆ ಹೋಗಿ ವಿಭೂತಿಯನ್ನು ಮಂತ್ರಿಸಿ ತಂದು ಅದನ್ನು ಗುಣಪಡಿಸುವುದನ್ನು ಲೇಖಕರು ಇಲ್ಲಿ ಚಿತ್ರಿಸಿದ್ದಾರೆ.
ಆರಾಣೆ, ಮೂರು ಕಾಸು
ಬ್ರಿಟಿಷ್ ಆಳ್ವಿಕೆ ವಕೀಲನೊಬ್ಬನಿಂದಾಗಿ ಸರಕಾರ ನವಾಬನೊಬ್ಬನ ಆಸ್ತಿಯನ್ನೆಲ್ಲಾ ತನ್ನದಾಗಿಸಿಕೊಡಂಡಾಗ ಆತ ಹೊಟ್ಟೆಪಾಡಿಗೂ ಗತಿ ಇಲ್ಲದವನಾಗುತ್ತಾನೆ. ಅವನು ತನ್ನಲ್ಲಿ ಬಂದಾಗ ಅಧಿಕಾರಿಯೊಬ್ಬರು ೮೫೦ ರೂ. ಸಾಲ ಕೊಡುತ್ತಾರೆ. ಇದರಿಂದ ಆತ ನ್ಯಾಯಾಲಯದಲ್ಲಿ ಹೋರಾಡುತ್ತಾನೆ. ಮತ್ತೊಮ್ಮೆ ರೈಲು ನಿಲ್ದಾಣದಲ್ಲಿ ಆತ ಬೇಡುತ್ತಿದ್ದಾಗ ಊಟ ಮಾಡಿಸುವುದು, ಅವನ ಮಕ್ಕಳಿಗೆ ತಿಂಡಿ ಕೊಡಿಸುತ್ತಾರೆ. ನ್ಯಾಯಾಲಯದಲ್ಲಿ ಮತ್ತೆ ತೀರ್ಪು ನವಾಬನ ಪರ ಬರುತ್ತದೆ. ಆಗ ನವಾಬ ತನಗೆ ಸಹಾಯ ಮಾಡಿದ ವ್ಯಕ್ತಿಗೆ ಹಣವನ್ನೆಲ್ಲಾ ವಾಪಸು ಮಾಡಿದನೇ? ಅಥವಾ ಮರೆತನೇ? ಎನ್ನುವುದು ಕಥೆಯ ವಿಚಾರ.
ದೆವ್ವದ ಮನೆ
ತಮ್ಮ ಸ್ವಾರ್ಥಕ್ಕಾಗಿ ಹೇಗೆ ಹಳ್ಳಿಗಳಲ್ಲಿ ಇಲ್ಲದ ದೆವ್ವದ ಕಥೆ ಕಟ್ಟಿ ಮುಗ್ಧ ಜನರನ್ನು ನಂಬಿಸುತ್ತಾರೆ ಎನ್ನುವ ಕಥೆ ಇದು. ನವಿಲೂರಿನಲ್ಲಿ ಮನೆಗಳ ಮೇಲೆ ಕಲ್ಲು ರಾತ್ರಿ ಹೊತ್ತು ಬೀಳುತ್ತಿರುತ್ತದೆ. ಇದನ್ನು ಪತ್ತೆ ಹಚ್ಚಲು ಪೊಲೀಸರು ಬರುತ್ತಾರೆ. ಆದರೆ ಆ ರಾತ್ರಿ ಕಲ್ಲು ಬೀಳುವುದಿಲ್ಲ. ಪೊಲೀಸರು ತಮ್ಮ ಜೊತೆ ಬಂದಿದ್ದ ಊರಿನ ಜನರ ತಪಾಸಣೆಗೆ ಮುಂದಾಗುತ್ತಾರ. ಕೆಲವರ ಕಿಸೆಯಲ್ಲಿ ಏನೂ ಸಿಗುವುದಿಲ್ಲ. ಮುತ್ತಣ್ಣ ಎನ್ನುವವನ ಕಿಸೆಯಲ್ಲಿ ಕಲ್ಲು ಸಿಗುತ್ತದೆ. ಆತ ಏಕೆ ಹೀಗೆ ಮಾಡುತ್ತಿದ್ದ? ಮುಂದೇನಾಯಿತೆನ್ನುವುದು ಕಥೆಯ ಸಾರಾಂಶ.
..........................
Comments
Post a Comment