ಬಾಲ್ಯದ ಅನುಭವಗಳ ಕಥನಗುಚ್ಛ

‘ಸವಿ ಸವಿನೆನಪು ಸವಿನೆನಪೂ’

......................................

ಬಾಲ್ಯದ ನೆನೆಪುಗಳು ಕೇವಲ ನೆನೆಪು ಮಾತ್ರವಲ್ಲ, ನಮ್ಮ ಮುಂದಿನ ಜೀವನದ ಕನ್ನಡಿ  ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ. ನಾವು ಜಗತ್ತನ್ನು ಹೇಗೆ ನೋಡುತ್ತೇವೆ ಎನ್ನುವುದನ್ನು ಬಾಲ್ಯ  ರೂಪಿಸುತ್ತದೆಯಂತೆ. ಈ ಬಾಲ್ಯವೇ ನಮ್ಮ ಮುಂದಿನ  ವ್ಯಕ್ತಿತ್ವವನ್ನೂ ರೂಪಿಸುತ್ತದೆ ಎನ್ನುವುದು ವಿಜ್ಞಾನಿಗಳ ಹೇಳಿಕೆ.
ಪ್ರಸ್ತುತ ಕೃತಿ ‘ಸವಿ ಸವಿನೆನೆಪು ಸವಿನೆನಪೂ’ ಲೇಖಕಿ  ಮಾಲತಿ ಮುದಕವಿ ಅವರ  ಜೀವನಾನುಭವದ  ಕಥನದ ಸೀಮಿತ ಘಟನೆಗಳನ್ನು ಹೊಂದಿದೆ. ಇದರಲ್ಲಿ ೬೩ ವಿಭಿನ್ನ ನೆನೆಪನ್ನು ಕಟ್ಟಿಕೊಟ್ಟಿದ್ದಾರೆ. ಇವೆಲ್ಲ ಅವರ ಹೃದಯಾಳವನ್ನು ತಟ್ಟಿ  ನೆಲೆಯೂರಿದಂತಹವು. ಜೀವನದಲ್ಲಿ ನಡೆಯುವ ಎಷ್ಟೋ ಘಟನೆಗಳು ಎಂದೂ ಮರೆಯಲಾಗದೆ ಹಾಗೆಯೇ ಉಳಿದುಕೊಂಡಿರುತ್ತವೆ. ಇಲ್ಲಿಯೂ ಸಹ ಲೇಖಕಿ  ನೆನಪುಗಳನ್ನು, ಘಟನೆಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ.   ಅವರ ಅನುಭವ ಕಥನದ ಮೂಲಕ  ಓದುಗರ ಮುಂದಿಟ್ಟಿದ್ದಾರೆ. ಈ ಅನುಭವಗಳ ಕಥನ ಗುಚ್ಛ  ಸರಾಗವಾಗಿ ಓದಿಕೊಂಡು ಹೋಗುವಂತದ್ದು. ಈ ಎಲ್ಲ ಎನೆನಪುಗಳು  ಸಮಾಜದ ಕಾಲಘಟ್ಟವನ್ನು ವಿವರಿಸುವ ಇತಿಹಾಸದ ಪುಟಗಳಾಗುತ್ತವೆ. ಕೌಟುಂಬಿಕ ಸಂಬಂಧವೇ ಇಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ.
  ಲೇಖಕಿಯ ಬಾಲ್ಯ, ತನ್ನ ಅಪ್ಪ, ಅಮ್ಮ, ಅಜ್ಜಿ, ಅತ್ತೆಯ ವ್ಯಕ್ತಿತ್ವ, ಶಾಲೆಯಲ್ಲಿನ ನೆನೆಪು, ಮಾಸ್ತರರ ವ್ಯಕ್ತಿತ್ವ, ಪೆನ್ಸಿಲ್ ಕದ್ದಿದ್ದು, ತುಂಟತನ, ಮದುವೆ, ಮದುವೆ ನಂತರದ ಜೀವನ, ಕಾಲೇಜಿನಲ್ಲಿ ಪಾಠ ಮಾಡುವಾಗಿನ ಸಂದರ್ಭ, ಗೆಳತಿಯರೊಂದಿಗಿನ ಕ್ಷಣ, ಧಾರವಾಡದ ನೆನೆಪು, ಅಲ್ಲಿನ ಪ್ರಸಿದ್ಧ ತಿನಿಸುಗಳು, ಸಾಹಿತಿಗಳು, ಕಲಾಕಾರರು, ಕಾರವಾರ ಬೀಚಿನ ನೆನೆಪು, ಗೋಲಿ ಸೋಡಾ,  ಮೊದಲ ಬಾರಿ ಗುಲಾಬ್ ಜಾಮೂನ್ ಮಾಡಿದ್ದು...  ಹೀಗೆ ಸಾಲು ಸಾಲು ನೆನೆಪುಗಳನ್ನು ಸವಿಸವಿಯಾಗಿ ಕಟ್ಟಿಕೊಟ್ಟಿದ್ದಾರೆ. ಇದರಲ್ಲಿ ಅವರ ಕೆಟ್ಟ ನೆನಪುಗಳೂ ಸಹ ಇವೆ. ಜೀವನಶೈಲಿ, ಸಾಂಸ್ಕೃತಿಕ ಪರಂಪರೆ, ಸಮಾಜದ ಏರಿಳಿತ, ಬದುಕಿನಲ್ಲಿ ಎದುರಿಸಿದ ಸವಾಲುಗಳು ಇವೆಲ್ಲ ಸಾಕ್ಷಿಪ್ರಜ್ಷೆಯಂತೆ ನಮ್ಮ ಹೃದಯವನ್ನು ತಟ್ಟುತ್ತವೆ.
 ಒಟ್ಟಿನಲ್ಲಿ, ಈ ಕೃತಿಯನ್ನು ಜೀಬನಕಥದನ ಮೂಲಕ ಮನಮುಟ್ಟುಂತೆ ಅಭಿವ್ಯಕ್ತಿಗೊಳಿಸಿದ್ದಾರೆ. ಬಡತನವಿರಲಿ, ಸಿರಿತನವಿರಲಿ ಎಲ್ಲರೂ ಬಾಲ್ಯದಲ್ಲಿ ಅನುಭವಿಸಿದ  ನೆನಪುಗಳು ಯಾವಾಗಲೂ ಸವಿಯಾಗಿಯೇ ಇರುತ್ತವೆ ಎನ್ನುವುದು ಇಲ್ಲಿನ ಸಾರಾಂಶ.
‘ಎಲ್ಲರಂಥಲ್ಲ ನನ್ನ ಅವ್ವ’ ಎನ್ನುವಲ್ಲಿಂದ ಆರಂಭವಾಗುವ ನೆನೆಪಿನ ಸರಣಿಯಲ್ಲಿ  ಅಮ್ಮನ ಜೀವನ ಪ್ರೀತಿ, ಜ್ಞಾಪಕ ಶಕ್ತಿ, ಜಾಣ್ಮೆ, ಅವಳಿಂದ ಜೀವನ ಪಾಠ ಕಲಿತಿದ್ದನ್ನು,  ಚಾಟಿಗಿಂತ ಬಲವಾದ ಮಾತಿನೇಟಿನ ಮೂಲಕ ಪಾಠ ಕಲಿಸಿದ್ದನ್ನು ವಿವರಿಸಿದ್ದಾರೆ. ಜೀವನದ ವಿಶ್ವವಿದ್ಯಾಲಯದಲ್ಲಿ ಅಮ್ಮ ಪ್ರಥಮ ಸ್ಥಾನ ಪಡೆದಿದ್ದಾಳೆನ್ನುತ್ತ್ತಾರೆ. ಅದೇ ರೀತಿ ‘ಹೀಗಿದ್ದ ಅಪ್ಪ’ದಲ್ಲಿ  ಪೇಟೆಯಿಂದ ಪೇಡೆ  ತರುವಾಗ ಕದ್ದು ತಿಂದು ಸುಳ್ಳು ಹೇಳಬಾರದೆನ್ನುವುದನ್ನು ಕಲಿಸಿದ,  ತನ್ನ ಅಪ್ಪ ಆದರ್ಶ ತಂದೆ, ಆದರ್ಶ ಗುರು. ಮುಗ್ಧ ಮುಗು, ಋಷಿಸದೃಶ ಸ್ವಭಾದವನು ಎಂದು ವರ್ಣಿಸುತ್ತಾರೆ.   
ನಂತರದ ಬರಹಗಳಲ್ಲಿ ಧಾರವಾಡದ ಪ್ರಸಿದ್ಧಿ, ತನಗೆ ಕಲಿಸಿದ ವಿದ್ಯಾಗುರುಗಳಾದ ಎಂ ಎಂ ಕಲಬುರ್ಗಿ, ಎಜರಾ ಮೇಡಂ ಅವರ ಪಾಠ ತನ್ನ ಮನಸಿನ ಮೇಲೆ ಅಚ್ಚಳಿಯದೆ ನೆನಪಿನ ಮುದ್ರೆಯನ್ನು ಒತ್ತಿದೆ ಎನ್ನುತ್ತ್ತಾರೆ.
 ಸುಳ್ಳು ಹೇಳಿದರೆ ಚೇಳು ಕಡಿಯುತ್ತದೆ ಎಂಬ ನಂಬಿಕೆಯಂತೆ ತನಗೆ ನಿಜಕ್ಕೂ ಸುಳ್ಳು ಹೇಳಿದಾಗ ಚೇಳು ಕಡಿದಿದ್ದನ್ನು ನೆನೆಪಿಸುತ್ತ,  ಹೃದಯಾಘಾತ ಆದಾಗ  ಚಿಕಿತ್ಸೆಗೆ ಹೆದರಿದ್ದು, ಸ್ಟೆಂಟ್ ಹಾಕಿದ್ದರಿಂದ  ಸಾವಿನ ದವಡೆಯಿಂದ ಪಾರಾಗಿದ್ದು,  ಗೋಲಿ ಸೋಡಾ ಕುಡಿಯಬೇಕೆಂಬ ಆಸೆ ಬಹಳ ದಿನದಿಂದ ಇದ್ದರೂ ಮನೆಯಲ್ಲಿ ಅದಕ್ಕೆ ಅವಕಾಶ ಕೊಡದಿರುವುದು, ಸೋಡಾ ಬಾಟಲಿ ನೋಡಿದರೆ ಒಮ್ಮೆ ಬಾಯಿಗೆ ಸುರಿಯೋಣ ಎನ್ನಿಸಿದರೂ ಸಾಧ್ಯವಾಗದೇ ಇದ್ದುದು,  ಮದುವೆಯಾಗಿ ಗಂಡನ ಮನೆಗ ಹೋಗುವಾಗ ಗಂಡ ಮೊದಲ ಬಾರಿಗೆ ಗೋಲಿಸೋಡಾ ಕುಡಿಸಿದ ನೆನೆಪನ್ನು, ಹುಣಸೆಹಣ್ಣನ್ನು ಮನೆಯಂಗಳದಲ್ಲಿ  ಒಣಗಿಸಿದಾಗ ಕದ್ದು ಅದಕ್ಕೆ ಬೆಳ್ಳುಳ್ಳಿ,  ಉಪ್ಪು, ಖಾರ ಹಾಕಿ ತಿಂದಿದ್ದು, ದೇವಸ್ಥಾನದಲ್ಲಿ ದೇವರಿಗೆ ತೂಗು ಹಾಕಿದ್ದ ಮಾವಿನಕಾಯಿ ಕದ್ದು ತಂದಿದ್ದು,  ಅವಲಕ್ಕಿ ಒಗ್ಗರಣೆ, ತೋಯಿಸಿದ ಅವಲಕ್ಕಿ ಮೊದಲಾದವುಗಳ ರುಚಿಯ ವರ್ಣನೆ, ಅಮೆರಿಕಾಕ್ಕೆ ಹೋದಾಗ ಮಳೆಯ ಅನುಭವ, ಮದುವೆ ಆಗಿ ಅತ್ತೆ ಮನೆಗೆ ಹೋದಾಗ ಅಲ್ಲಿನ ಬೆಕ್ಕಿನ ಕಾಟ,  ಮೊದಲ ಬಾರಿ ಶ್ಯಾವಿಗೆ ಪಾಯಸ- ಖೀರು ಮಾಡಿ ಸವಿದಿದ್ದು, ಕೊರೊನಾ ಕಾಲದಲ್ಲಿ ಮನೆಯಲ್ಲಿ ವೈವಿಧ್ಯಮಯ ತಿನಿಸು ಮಾಡಿ ತಿಂದಿದ್ದು, ಆಗ ಸಲೂನ್‌ಗಳು ಸಹ ಬಾಗಿಲು ಮುಚ್ಚಿದ್ದರಿಂದ ತಾನೇ ಗಂಡನ ತಲೆಯ ಕ್ಷೌರ ಮಾಡಿದ್ದು, ಫೇಸ್‌ಬುಕ್‌ನಿಂದ ಹಲವು ಕಲಿಕೆಗೆ ಅವಕಾಶ
ವಾದದ್ದು,  ಅತ್ತೆ ಇಡೀ ದಿನ ವಟವಟ ಎನ್ನುತ್ತಿದ್ದರೂ ಅವರಲ್ಲಿ ಅಂತಃಕರಣ ಸೆಲೆ ಇದ್ದುದನ್ನು ಗುರುತಿಸಿ ಸ್ಮರಿಸಿದ್ದಾರೆ.
 ವಿ ಕೃ ಗೋಕಾಕರ ಅಳಿಯ ಮತ್ತು ಮಗಳು ತನ್ನನ್ನು ಕಂಡು ಸಮಾರಂಭದ ವೇದಿಕೆಯಲ್ಲಿ ಪರಿಚಯಿಸಿದ್ದು, ಕಾಲೇಜಿನಿಂದ ಬರುವ ದಾರಿಯಲ್ಲಿ ಗಿರೀಶ್ ಕಾರ್ನಾಡರನ್ನು ಭೇಟಿಯಾಗಿದ್ದು, ಇಂದಿರಾ ಗಾಂಧಿ ಧಾರವಾಡಕ್ಕೆ ಬಂದಾಗ ಅವರನ್ನು ನೋಡಲು ಹೋಗಿದ್ದು, ಆಗ ಸುರಕ್ಷತೆಗಾಗಿ ಮಹಿಳಾ ಪೊಲೀಸ್ ತನ್ನ ಬಳಿ ನಿಲ್ಲಿಸಿಕೊಂಡಿದ್ದು, ಇಂದಿರಾಗೆ ಸೆಲ್ಯುಟ್ ಹೊಡೆದಾಗ ಅವರು ತಮಗೆ ಯಾರೋ ಹಾಕಿದ್ದ ಮಾಲೆಯನ್ನು ತನಗೆ ಕೊಟ್ಟಿದ್ದು,  ಪ್ರಿನ್ಸಿಪಾಲರು ತನ್ನ ಪಾಠಕ್ಕೆ ವಿದ್ಯಾರ್ಥಿಯಾಗಿ ಬಂದು ಹಿಂದಿನ ಸಾಲಿನಲ್ಲಿ ಕುಳಿತು ಪಾಠ ಕೇಳಿದ್ದು, ಮುಂಬೈ, ಕೇದಾರನಾಥಕ್ಕೆ ಹೋದಾಗ ಆದ ಅನುಭವ, ಅಪಘಾತದಲ್ಲಿ  ಗಂಡನ ಕಣ್ಣಿಗೆ, ತುಟಿಗೆ ಪೆಟ್ಟಾಗಿ ಚಸ್ಮಾ ಒಡೆದುಹೋಗಿದ್ದು, ಚಸ್ಮಾ ಮಾಡಿಸಲು ಹೋದಾಗ ಆತನ ಕಣ್ಣಿಗಾದ ಏಟನ್ನು ಕಂಡು ವೃದ್ಧೆಯೊಬ್ಬರು ಎಲ್ಲರಿಗಿಂತ ಮೊದಲು ಒಳಗೆ ಕಳಿಸಿದ್ದು, ಮನೆಗೆ ಬಣ್ಣ ಬಳಿಯಲು ಬಂದವ ಟೇಬಲ್ ಮೇಲಿದ್ದ ಅಲಾರಾಂ ಕದ್ದು ಚೀಲದಲ್ಲಿಟ್ಟಾಗ  ಅದು ಸಂಜೆಯ ವೇಳೆ ಅಲಾರಾಂ ಬಾರಿಸಿದಾಗ ಸಿಕ್ಕಿಬಿದ್ದಿದ್ದು, ತಾನು ಬರೆದಿಟ್ಟಿದ್ದ ಲೇಖನಗಳ ನೋಟ್ ಬುಕ್‌ನ್ನು ತಮ್ಮ ಮಗು ಮತ್ತು ಇನ್ನೊಂದು ಮಗು ಸೇರಿ  ಹರಿದು ದೋಣಿ ಮಾಡಿ ಆಡಿದ್ದು,  ಶಾಲೆಯಲ್ಲಿ ಗಣಿತದ ಶಿಕ್ಷಕರು ಬರುವಾಗ ಬೇಕೆಂತಲೇ ಅವರ ಚೇರನ್ನು ತೆಗೆದು ತಾನು ಹಾಕಿಕೊಂಡು ಕುಳಿತಿದ್ದು,  ಕರೆಂಟ್ ಬಂದಿಲ್ಲ ಎಂದು ಕರೆಂಟ್ ಕಂಬಕ್ಕೆ ಸಿಟ್ಟಿನಿಂದ ಒದ್ದಾಗ ಕರೆಂಟ್ ಬಂದು ಖುಷಿಯಾಗಿದ್ದು.., ಹೀಗೆ ಸಾಲು ಸಾಲು ಸವಿನೆನೆಪಿನ ಘಟನೆಗಳನ್ನು ಕಟ್ಟಿಕೊಟ್ಟಿದ್ದಾರೆ.
ಇವುಗಳನ್ನೆಲ್ಲಾ ಓದುವಾಗ ನಮ್ಮ ಬಾಲ್ಯದ ಘಟನೆಗಳೂ ಸಹ  ನೆನೆಪಾಗುತ್ತವೆ. ತುಂಬಾ ಸರಳವಾಗಿ, ಅಷ್ಟೇ ಸುಂದರವಾಗಿ, ರೋಚಕವಾಗಿ, ಕೆಲವೆಡೆ ಮುಖದಲ್ಲಿ ನಗೆ ಮೂಡುವಂತೆಯೂ  ತಮ್ಮ ಅನುಭವದ ಬುತ್ತಿಯನ್ನು ಇಲ್ಲಿ ಲೇಖಕಿ ನಮ್ಮೆದುರು ಬಿಚ್ಚಿಟ್ಟಿದ್ದಾರೆ.  
......................,      

 

Comments

Popular posts from this blog