ತಾರುಣ್ಯದ ಅನುಭವಗಳನ್ನು ಕಟ್ಟಿಕೊಡುವ
‘ಇಂತಿ ಪೂರ್ವಿ’
............................
‘ಇಂತಿ ಪೂರ್ವಿ’ ಇದು ಮಧು ವೈ ಎನ್ ಅವರ ಕಾದಂಬರಿ. ಬೆಂಗಳೂರಿನಲ್ಲಿ ಐಬಿಎಂನಲ್ಲಿ ಉದ್ಯೋಗಿ ಆಗಿರುವ ಇವರು, ಈ ಕೃತಿಯನ್ನು ಈ ತಿಂಗಳ ಆರಂಭದಲ್ಲಷ್ಟೇ ಬಿಡುಗಡೆ ಮಾಡಿದ್ದಾರೆ. ಇಲ್ಲಿ ತಾರುಣ್ಯದ ಭಾವಗಳೇ ಪಾತ್ರಗಳು. ಕಾಲೇಜಿನಲ್ಲಿ ಪ್ರೀತಿ- ಪ್ರೇಮ ಎಂದು ತಿರುಗಾಡಿ, ಕೆಲವು ಸಬ್ಜೆಕ್ಟ್‌ಗಳನ್ನು ಬಾಕಿಯಿರಿಸಿಕೊಂಡ ಹಳ್ಳಿಯ ವಿದ್ಯಾರ್ಥಿಗಳು ನಂತರ ಪಾಸು ಮಾಡಿಕೊಂಡರೂ ಜೀವನದಲ್ಲಿ ಹೇಗೆ ಬದುಕುತ್ತಾರೆ. ಅವರ ಕನಸು ನನಸಾಗುತ್ತದೆಯೇ ಎನ್ನುವುದನ್ನು ಸೊಗಸಾಗಿ ಚಿತ್ರಿಸಿದ್ದಾರೆ.
ಬಾಲ್ಯದ ಮುಗ್ಧತೆ, ತಾರುಣ್ಯದ ಮುಗ್ಧತೆ, ತಾರುಣ್ಯದ ಅನುಭವ ಪ್ರಸ್ತುತ ಕೃತಿಯ ಕಥಾ ವಿಷಯ. ಇಲ್ಲಿ ಪೂರ್ವಿ ಮತ್ತು ಶರತ್ ಕಥಾ ನಾಯಕರು. ಶಾಲಾ ದಿನಗಳಲ್ಲಿ ಪ್ರತಿಭಾನ್ವಿತರಾಗಿ ಅಂಕ ಗಳಿಕೆಯ ಜಿದ್ದಾಜಿದ್ದಿನಲ್ಲಿ ಪರಸ್ಪರ ಎದುರಾಳಿಗಳಾಗಿ, ಕಾಲೇಜು ಸೇರಿದ ಮೇಲೆ ಇಬ್ಬರೂ ಒಂದಾಗುವುದು, ಆಪ್ತರಾಗುವುದು, ಪರಸ್ಪರರ ಕಷ್ಟ -ಸುಖಗಳಲ್ಲಿ ಭಾಗಿಯಾಗುವುದು, ಪ್ರೀತಿಸುವುದು, ಅದು ಪ್ರೇಮಕ್ಕೆ ತಿರುಗುವುದು, ಪೂರ್ವಿ ಬಾಲ್ಯದಲ್ಲೇ ಗೊತ್ತುಪಡಿಸಿದವನ ವಿವಾಹವಾಗುವುದು, ಕಂಪನಿಗಳಲ್ಲಿ ಕೆಲಸ ಸಿಕ್ಕಿದರೂ ಶರತ್ ಕಂಪ್ಯೂಟರ್ ರಿಪೇರಿ ಸೆಂಟರ್ ತೆರೆಯುವುದು, ಪೂರ್ವಿ ಮತ್ತು ಆಕೆಯ ಗಂಡನ ಮಧ್ಯೆ ಕಲಹ, ಗಂಡನ ತುಳಿತದಿಂದ ಅಬಾರ್ಷನ್ ಆಗುವುದು, ಆಸ್ಪತ್ರೆಗೆ ಶರತ್ ತೆರಳುವುದು, ಶರತ್ ತನ್ನ ಗಂಡ ಎಂದು ಆಸ್ಪತ್ರೆಯಲ್ಲಿ ಹೇಳುವುದು..... ಹೀಗೆ ಕಥೆ ಸಾಗುತ್ತದೆ.
೧೨ನೆಯ ತರಗತಿಯಲ್ಲಿ ಓದುತ್ತಿದ್ದಾಗ ಪೂರ್ವಿ ಮತ್ತು ಶರತ್ ಜಿದ್ದಾಜಿದ್ದಿಗೆ ಬಿದ್ದು ಅಂಕಗಳಿಸುತ್ತಾರೆ. ರಿಸಲ್ಟ್ ಬಂದಾಗ ಶರತ್ ಫೇಲಾಗಿದ್ದ. ಪೂರ್ವಿ ಮನೆಯಲ್ಲಿ ಬಾಲ್ಯದಿಂದಲೂ ಆಪ್ತನಾದ, ಅಡಿಕೆ ಗೊನೆ ಕೊಯ್ಯುವ ಕೆಲಸ ಮಾಡುವ ಹೊನ್ನೇಶನೊಂದಿಗೆ ಮದುವೆ ನಿರ್ಧಾರವಾಗುತ್ತದೆ. ಪೂರ್ವಿಗೆ ಇಂಜಿನಿಯರಿಂಗ್ ಓದಲು, ಊರಿನ ಮುಖಂಡ ಸಿದ್ದಪ್ಪ ತನ್ನ ಮಗಳು ಚಂದ್ರಿಕಾ ಮನೆ ಬೆಂಗಳೂರಿನಲ್ಲಿದೆ. ಅಲ್ಲಿಯೇ ಇದ್ದು ಓದಬಹುದು ಎನ್ನುತ್ತಾರೆ. ಚಂದ್ರಿಕಾ ಮನೆಯಲ್ಲಿದ್ದು ಕಾಲೇಜಿಗೆ ಹೋಗುತ್ತಾಳೆ. ಆದರೆ ಆಕೆಯನ್ನು ಕೆಲಸದವಳ ರೀತಿ ಕಾಣುತ್ತಾಳೆ ಚಂದ್ರಿಕಾ. ಶರತ್ ಸಹ ಮತ್ತೆ ಪಾಸಾಗಿ ಅದೇ ಕಾಲೇಜಿಗೆ ಪ್ರವೇಶ ಪಡೆಯುತ್ತಾನೆ.
ಕಾಲೇಜಿನಲ್ಲಿ ಮೊದಲು ಇಬ್ಬರೂ ದೂರವೇ ಇದ್ದರೂ ಬರಬರುತ್ತ ಹತ್ತಿರವಾಗುತ್ತಾರೆ. ಆಪ್ತವಾಗುತ್ತಾರೆ. ಶರತ್‌ಗೆ ಒಮ್ಮೆ ಆಕೆ ನೀನೇ ನನ್ನ ‘ಗಂಡ’ ಎಂದು ಹೇಳಿಬಿಡುತ್ತಾಳೆ. ಶರತ್ ಹತ್ತಿರದಲ್ಲಿ ವಾಸವಾಗಿದ್ದರಿಂದ ಇಬ್ಬರೂ ಒಂದೇ ಬಸ್‌ನಲ್ಲಿ ಕಾಲೇಜಿಗೆ ಓಡಾಡುತ್ತಾರೆ. ಒಮ್ಮೆ ಪೂರ್ವಿಯಿದ್ದ ಕೋಣೆಗೆ ಶರತ್ ಬಂದಾಗ ಬಾಳೆಗೊನೆ, ಹಲಸಿನಹಣ್ಣು, ತುಪ್ಪ- ಸಕ್ಕರೆ ಕೊಡುತ್ತಾಳೆ. ಇದನ್ನು ಕಂಡ ಚಂದ್ರಿಕಾ ‘ಮನೆಯಲ್ಲಿದ್ದ ನಿನ್ನೆಯ ಪಲಾವು ತಿನ್ನಬಹುದಿತ್ತು, ಪತಿರಾಯ ಹೊನ್ನೇಶ ತಂದುಕೊಟ್ಟಿದ್ದನ್ನೇ ಕೊಡುತ್ತಿದ್ದಾಳೆ ಎಂದು ಕೂಗಾಡುತ್ತಾಳೆ. ಇದನ್ನು ಕೇಳಿಸಿಕೊಂಡ ಶರತ್ ‘ಹೊನ್ನೇಶ್ ಎಂದರೆ ಯಾರು’ ಎಂದು ಪ್ರಶ್ನಿಸುತ್ತಾನೆ.
ಒಮ್ಮೆ ಅಕ್ಕ ಚಂದ್ರಿಕಾ ಗಲಾಟೆ ಮಾಡಿ ಪೂರ್ವಿಯನ್ನು ಹೌಸ್ ಅರೆಸ್ಟ್ ಮಾಡಿದಾಗ ವಿಷಯ ಅರಿತು ಅವರ ಮನೆಗೆ ಧಾವಿಸಿ, ಹಾಲು ಹಾಕಲು ಮನೆ ಎದುರು ತೂಗು ಹಾಕಿದ್ದ ಚೀಲದಲ್ಲಿ ಚಿಕ್ಕ ಮೊಬೈಲ್ ಇಟ್ಟು ಹೋಗುತ್ತಾನೆ. ಶರತ್ ಮತ್ತು ಪೂರ್ವಿ ಮಧ್ಯೆ ಈಗ ಎಸ್‌ಎಂಎಸ್ ಮೂಲಕ ಸಂಪರ್ಕ ನಡೆಯುತ್ತದೆ. ಎರಡೂವರೆ ವರ್ಷದಿಂದ ಮನೆಗೆ ಹೋಗದ ಕಾರಣ ಪೂರ್ವಿಯ ಅಜ್ಜಿಯು ಮೊಮ್ಮಗಳಲ್ಲಿಗೆ ಬರುತ್ತಾಳೆ. ಐರನ್ ಮಾಡುತ್ತಿದ್ದ ಪೂರ್ವಿ ಅಜ್ಜಿ ಬಂದಳೆಂದು ಹಾಗೆಯೇ ಬಿಟ್ಟು ಬರುತ್ತಾಳೆ. ಆಗ ಚಂದ್ರಿಕಾಳ ಗಂಡ ಹೇಮಂತನ ಜೀನ್ಸ್ ಪ್ಯಾಂಟ್ ಸುಟ್ಟುಹೋಗುತ್ತದೆ. ಹಿಂದೆ ಮುಂದೆ ನೋಡದೆ ಪೂರ್ವಿಯ ತಲೆಗೂದಲು ಹಿಡಿದು ರಪರಪ ಹೊಡೆಯುತ್ತಾಳೆ. ಸಿಟ್ಟಿಗೆದ್ದ ಅಜ್ಜಿ ಚಂದ್ರಿಕಾಳ ಕೈ ಹಿಡಿದು ತಳ್ಳಿ ಬೈದು ಹೋಗುತ್ತಾಳೆ. ಒಂದು ವಾರ ಬಿಟ್ಟು ಬಂದು ಸಿದ್ದಪ್ಪ, ‘ಮೂರು ವರ್ಷದ ಹಿಂದೆಯೇ ಮದುವೆ ನಿಶ್ಚಯ ಆಗಿದೆ. ಮದುವೆ ಮಾಡಿ ನಾವು ಕರಕೊಂಡು ಹೋಗ್ತೀವಿ’ ಎನ್ನುತ್ತ್ತಾರೆ.
ಶರತ್ ಹಾಸ್ಟೆಲ್ ಬಿಟ್ಟು ರೂಮು ಮಾಡಿದಾಗ ಆತನ ರೂಮಿಗೆ ಬರುತ್ತಾಳೆ. ಚಂದ್ರಿಕಾ ದಂಪತಿ ಇಬ್ಬರೂ ಒಟ್ಟಿಗೆ ಇರುವುದನ್ನು ನೋಡಿ ಅವರ ಮನೆಗೆ ಕಾಲ್ ಮಾಡಿ ವಿಷಯ ತಿಳಿಸುತ್ತಾರೆ. ಅವರ ಮನೆಯವರು ಬಂದು ಪೂರ್ವಿ- ಶರತ್ ಅವರಿಗೆ ಹಿಗ್ಗಾ ಮುಗ್ಗಾ ಥಳಿಸಿ ತರಾಟೆಗೆ ತೆಗೆದುಕೊಳ್ಳುತ್ತಾರೆ.
ಪೂರ್ವಿ ಊರಿಗೆ ಮರಳುತ್ತಾಳೆ. ಬಳಿಕ ಶರತ್‌ಗೆ ಪತ್ರ ಬರೆದು, ‘ಹೊನ್ನೇಶ್ ಜೊತೆ ವಿವಾಹ ನಿಶ್ಚಯವಾಗಿದೆ. ಕಾಲೇಜು ಸೇರುವ ಮುನ್ನವೇ ಇದು ನಿರ್ಧರಿತವಾಗಿತ್ತು. ನಿನ್ನಿಂದ ಈ ವಿಷಯ ಮುಚ್ಚಿಟ್ಟಿದ್ದೆ. ಬದುಕಿನಲ್ಲಿ ಎಷ್ಟು, ಏನು ಸಿಕ್ಕಿದೆಯೋ ಅದರಲ್ಲೇ ತೃಪ್ತಿಪಡುತ್ತೇನೆ. ನಿನ್ನಲ್ಲಿ ಎಷ್ಟೋ ವಿಷಯ ಮುಚ್ಚಿಟ್ಟಿದ್ದೆ, ನಿನ್ನ ಜೊತೆ ಇದ್ದಾಗ ಸುರಕ್ಷಿತವಾಗಿದ್ದೆ. ಹೊಸ ಬದುಕಿಗೆ ಕಾಲಿಡುತ್ತಿದ್ದೇನೆ. ಇನ್ನೆಂದೂ ನಾವು ಎದುರಾಗುವುದು ಬೇಡ, ಸಂಪರ್ಕಿಸುವ ಪ್ರಯತ್ನ ಮಾಡಬೇಡ. ನಿನ್ನ ಮೇಲೆ ಇರುವ ದ್ವೇಷ ಎಂದಿಗೂ ಇರುತ್ತದೆ. ಇಂತಿ ಪೂರ್ವಿ’ ಎಂದು ಬರೆಯುತ್ತಾಳೆ.
ಇತ್ತ ಊರಿನಲ್ಲಿ ಪೂರ್ವಿಯ ಮದುವೆ ಹೊನ್ನೇಶನ ಜೊತೆ ನಡೆಯುತ್ತದೆ. ಮಾರನೆಯ ದಿನ ಚಂದ್ರಿಕಾ ಕಾರಿನಲ್ಲಿ ವಾಪಸ್ ಬೆಂಗಳೂರಿಗೆ ಆಕೆಯನ್ನು ಕರೆತಂದು ಸೆಮಿಸ್ಟರ್‌ನಲ್ಲಿ ಬಾಕಿ ಉಳಿದಿದ್ದ ಬ್ಯಾಕ್‌ಲಾಗ್ ಸಬ್ಜೆಕ್ಟ್‌ಗಳನ್ನು ಪಾಸು ಮಾಡಿಕೊಳ್ಳಲು ಸೂಚಿಸುತ್ತಾಳೆ. ಪರೀಕ್ಷೆ ಬರೆಯುವ ದಿನ ಹೊನ್ನೇಶ ಬೈಕಿನಲ್ಲಿ ಬಂದು ಕರೆದೊಯ್ದು ಮತ್ತೆ ವಾಪಸ್ ಕರೆತರುತ್ತಿದ್ದ. ಇತ್ತ ಶರತ್ ಸಹ ಊರಿಗೆ ಮರಳಿದ್ದ. ೪ ಕಂಪನಿಗಳಲ್ಲಿ ಪ್ಲೇಸ್‌ಮೆಂಟ್ ಆಗಿದ್ದರೂ ಆತ ಕೆಲಸಕ್ಕೆ ಸೇರಿರಲಿಲ್ಲ. ಶರತ್ ‘ಕಂಪ್ಯೂಟೆಕ್’ ಎನ್ನುವ ಕಚೇರಿ ತೆರೆದು ಕಂಪ್ಯೂಟರ್ ರಿಪೇರಿ ಕಲಿತು ಅದರಲ್ಲಿ ಯಶಸ್ವಿಯಾಗುತ್ತಾನೆ.
ಪೂರ್ವಿ ಹೊನ್ನೇಶನ ಸಂಸಾರ ಆರಂಭವಾಗುತ್ತದೆ. ಮೊದಮೊದಲು ಸುಗಮವಾಗಿ ಸಾಗುತ್ತದೆ. ಒಂದು ದಿನ ಕೆಲಸದಿಂದ ರಾತ್ರಿ ಲೇಟಾಗಿ, ಕಣ್ಣು ಕೆಂಪಗೆ ಮಾಡಿಕೊಂಡು ಬಂದವನೇ ಹೆಂಡತಿ ಕೊಟ್ಟ ಊಟವನ್ನು ಬಿಸಾಡಿದ. ಬಿಸಿ ಇದ್ದುದರಿಂದ ಅವೆಲ್ಲಾ ಪೂರ್ವಿಗೆ ಮತ್ತು ಆತನಿಗೂ ತಗುಲಿ ಗುಳ್ಳೆಗಳು ಬಂದವು. ಪೂರ್ವಿ ಆತನನ್ನು ಮುಟ್ಟಲು ಹೋದಾಗ ಆಕೆಯನ್ನು ತಳ್ಳಿ ನೆಲಕ್ಕೆ ಹಾಕಿ ತುಳಿದ. ಬೆಳಗ್ಗೆ ಎದ್ದು ಆತನಿಗೆ ಸಾಷ್ಟಾಂಗ ನಮಸ್ಕಾರ ಬಿದ್ದು ಗಂಡನ ಸಹವಾಸವೇ ಬೇಡ ಎಂದು ಬೆಂಗಳೂರಿಗೆ ಹೊರಡಲು ಪೂರ್ವಿ ತೀರ್ಮಾನಿಸಿದ್ದಳು.
ಶರತ್ ಮತ್ತು ಪೂರ್ವಿಯ ಗೆಳೆಯರಾದ ವರುಣ್ ಮತ್ತು ಭಾವನಾ ಪೂರ್ವಿ ಊರಿನ ಹತ್ತಿರ ಇರುವ ಮಧುಗಿರಿ ಕೋಟೆಗೆ ಟ್ರೆಕ್ಕಿಂಗ್ ಹೊರಟಿದ್ದರು. ಶರತ್ ಗೆ ಇದನ್ನು ತಿಳಿಸಿದಾಗ ಆತ ಒಂದು ಕವರ್ ಕೊಟ್ಟು ಪೂರ್ವಿಗೆ ಕೊಡಲು ಹೇಳಿದ. ಪೂರ್ವಿ ಮನೆಗೆ ಇಬ್ಬರೂ ಬಂದಿದ್ದರು, ಅವರನ್ನು ಉಪಚರಿಸಿದ ಪೂರ್ವಿಗೆ ಶರತ್ ಕೊಟ್ಟ ಪೇಪರ್ ಕವರನ್ನು ಭಾವನಾ ಕೊಟ್ಟಳು. ಪೂರ್ವಿಯ ಮುಖ ಅರಳಿತು.
ಇತ್ತ ಹೊನ್ನೇಶ ಕೆಲಸದಿಂದ ಮನೆಗೆ ಬಂದವನೇ, ‘ಯಾರೋ ಬಂದಿದ್ರಂತೆ, ಯಾರು’ ಎಂದ. ‘ಕಾಲೇಜಿನ ಗೆಳೆಯರು’ ಎಂದಾಗ ಸಿಟ್ಟಿನಿಂದ ‘ನಿನ್ನ ಮಿಂಡ ಬರಲಿಲ್ವಾ’ ಎನ್ನುತ್ತಾನೆ. ‘ನೀವು ತಪ್ಪು ತಿಳ್ಕೊಂಡಿದ್ದೀರಿ’ ಅಂದಾಗ ‘ನನ್ನ ಕಿವಿ ಮೇಲೆ ಹೂ ಇಡಬೇಡ’ ಎಂದ. ಇದರಿಂದ ಬೇಸತ್ತು ಪೂರ್ವಿ ಬಾಗಿಲು ತೆರೆದು ಹೊರಗೆ ಹೊರಡಲು ಅನುವಾಗಿ, ‘ನನ್ನ ಮಿಂಡನೂ ಬಂದಿದ್ದ. ನೋಡು ಚಾಕ್ಲೇಟ್ ಕಳಿಸಿದ್ದಾನೆ’ ಎಂದು ತೋರಿಸಿದಳು. ಬಾಗಿಲು ಮುಚ್ಚಲು ಹೊನ್ನೇಶ ಯತ್ನಿಸಿದನಾದರೂ ಒಂದು ಕಾಲನ್ನು ಹೊರಗಿಟ್ಟು ಅಡ್ಡ ನಿಂತ ಪೂರ್ವಿಗೆ ಕೆಟ್ಟದಾಗಿ ನಿಂದಿಸಿ ಒಳ ನೂಕಿದ.
ಶರತ್ ಹಬ್ಬಕ್ಕೆಂದು ಊರಿಗೆ ಹೋಗಿ ಮರಳುವಾಗ ಭಾವನಾ ಕರೆ ಮಾಡಿ ಅರ್ಜೆಂಟಾಗಿ ಮಧುಗಿರಿ ಆಸ್ಪತ್ರೆಗೆ ಬಾ ಎನ್ನುತ್ತಾಳೆ. ಆಸ್ಪತ್ರೆಗೆ ಬಂದಾಗ ಪೂರ್ವಿ ಅಮ್ಮ ಕಾರಿಡಾರಲ್ಲಿ ಕೂತಿದ್ದರು. ಅಲ್ಲಿಯೇ ಇದ್ದ ವರುಣ್, ಭಾವನಾ, ‘ಪೂರ್ವಿಯ ಹೊಟ್ಟೆಗೆ ಪೆಟ್ಟಾಗಿದೆಯಂತೆ, ಬ್ಲೀಡಿಂಗ್ ನಿಲ್ಲುತ್ತಿಲ್ಲವಂತೆ’ ಎಂಬ ಮಾಹಿತಿ ಕೊಡುತ್ತಾರೆ. ಪೂರ್ವಿಯ ಅಮ್ಮಮ್ಮ ಸಹ ಅಳುತ್ತಿದ್ದಳು. ನರ್ಸ್ ಹೊರಬಂದು ‘ಹುಡುಗಿ ಕಡೆಯವರು ಯಾರಿದ್ದೀರಿ, ಸೈನ್ ಹಾಕಬೇಕಿತ್ತು’ ಎಂದಳು. ಅಮ್ಮಮ್ಮ ಹೋದರು. ‘ಆಕೆಯ ಗಂಡ ಇಲ್ವಾ’ ಎಂದು ನರ್ಸ್ ಕೇಳಿದಾಗ ‘ಅವನು ಇಲ್ಲಿಲ್ಲ’ ಎನ್ನುತ್ತಾಳೆ. ‘ಶರತ್ ಎಂದರೆ ಯಾರು? ಆತ ತನ್ನ ಗಂಡ ಅಂತ ಬರೆಸಿದ್ದಾರೆ’ ಎಂದಾಗ ಶರತ್ ಹೋಗಿ ಸೈನ್ ಹಾಕಿದ. ಗಾಜಿನ ಕಿಟಕಿಯಿಂದ ಪೂರ್ವಿಯ ನೋಡಿದ. ಅಂಗಾಲು ಮಾತ್ರ ಕಂಡಿತು. ಕೈಲಿ ಏನೋ ಕಟ್ಟಿ ತಂದ ನರ್ಸು ತೋರಿಸಿ ‘ಇದನ್ನು ತಗೊಂಡು ಹೋಗ್ತೀರಾ, ನಾವೇ ಡಿಸ್ಪೋಸ್ ಮಾಡಬೇಕಾ’ ಎಂದಾಗ ಶರತ್ ಎರಡೂ ಕೈ ಒಡ್ಡಿದ. ಅದು ಅಸ್ಪಷ್ಟ ಆಕಾರದ ಮಾಂಸದ ಮುದ್ದೆಯಾಗಿತ್ತು.
ಹೀಗೆ ಕಾದಂಬರಿಯು ಶರತ್- ಪೂರ್ವಿ ಮಧ್ಯೆ ದ್ವೇಷ, ಆಪ್ತ ಸಂಬಂಧ, ದೂರವಾಗುವುದು, ನಂತರ ಮದುವೆಯಾದವನ ದೌರ್ಜನ್ಯದಿಂದ ಬೇಸತ್ತು ಜೊತೆಗಿದ್ದ ಗೆಳೆಯನೇ ತನ್ನ ಗಂಡ ಎನ್ನುವುದರಲ್ಲಿ ಅಂತ್ಯವಾಗುತ್ತದೆ.
...........................

Comments
Post a Comment