ಹೆಣ್ಣಿನ ಬದುಕಿನ ತವಕ-ತಲ್ಲಣದ 

‘ಎದೆಗೆ ಬೆಂಕಿ ಬಿದ್ದಾಗಿನ ಬೆಳಕು’ 


ಪದ್ಮಿನಿ ನಾಗರಾಜು ಅವರು ತಮ್ಮ  ಮಹಿಳಾಪರ ಚಿಂತನೆಗಳ ಕೃತಿ ‘ಎದೆಗೆ ಬೆಂಕಿ ಬಿದ್ದಾಗಿನ ಬೆಳಕು’ ಕೃತಿಯಲ್ಲಿ ಆಧುನಿಕ ಮಹಿಳೆ ಎದುರಿಸುತ್ತಿರುವ ಸವಾಲು, ಶೋಷಣೆ, ದೌರ್ಜನ್ಯದ ನಾನಾ ಮುಖಗಳನ್ನು ಉದಾಹರಣೆ ಮತ್ತು ಅಂಕೆ-ಸಂಖ್ಯೆಗಳ ಮೂಲಕ ತೆರೆದಿಟ್ಟಿದ್ದಾರೆ. ಅಸುರಕ್ಷಿತ ಜಗತ್ತು, ಹೆಣ್ಣಿಗೆ ಮರೀಚಿಕೆಯಾದ ನ್ಯಾಯ, ಅಮಾನವೀಯ ವರ್ತನೆಗಳು, ತಂತ್ರಜ್ಞಾನ ಮೂಲಕ ಶೋಷಣೆ ಮೊದಲಾದ  ಬರಹಗಳಲ್ಲಿ  ಧರ್ಮದ ಹೆಸರಿನಲ್ಲಿ ಶೋಷಣೆ , ಆಷಾಢಭೂತಿ ದೇವಮಾನರು   ದೌರ್ಜನ್ಯ ಹೇಗೆ ನಡೆಯುತ್ತಿದೆ ಎನ್ನುವುದನ್ನು ಚಿತ್ರಿಸಿದ್ದಾರೆ. 

‘ ಆಧುನಿಕ ಮಹಿಳೆ ಎದುರಿಸುತ್ತಿರುವ ಸವಾಲುಗಳು’ ಎಂಬ ಮೊದಲ ಅಧ್ಯಾಯದಲ್ಲೇ  ಹೊಸ ಹೊಸ ಸಮಸ್ಯೆಗಳ ಮೂಟೆ  ಹೊತ್ತು ನಡೆಯುವವಳು ಹೆಣ್ಣು ಮಾತ್ರವೇ ಎಂದು ಹೇಳಿದ್ದಾರೆ. ಜೊತೆಗೆ ಹುಟ್ಟಿನಿಂದ ವಿವಿಧ ಹಂತದಲ್ಲಿ ಅಂದರೆ,  ಬೆಳೆಯುವ, ಕಲಿಕೆಯ, ದುಡಿಮೆಯ, ಗೃಹಿಣಿಯಾಗಿ ಮತ್ತು ಸಾರ್ವಜನಿಕ ಸ್ಥಳದಲ್ಲಿ, ಮಾಧ್ಯಮಗಳಲ್ಲಿ  ತಾರತಮ್ಯ ಎದುರಿಸುತ್ತಿರುವುದನ್ನು, ಕೆಟ್ಟದಾಗಿ ಚಿತ್ರಿತಳಾಗುತ್ತಿರುವ ಕಟುಸತ್ಯವನ್ನು ತೆರೆದಿಟ್ಟಿದ್ದಾರೆ.      

ಹೆಣ್ಣಿಗೆ ನ್ಯಾಯ ಮರೀಚಿಕೆ’ ಎನ್ನುವ ಅಧ್ಯಾಯ ಎಲ್ಲರ ಕಣ್ತೆರೆಸುವಂತಿದೆ. ಆ ಅಧ್ಯಾಯದ ಅಂತ್ಯದಲ್ಲಿ,  ‘ಹೆಣ್ಣಿಗೆ ನ್ಯಾಯ ಕೊಡಿಸುವ ಭರದಲ್ಲಿ ಅವಳಿಗೆ ಜೀವನಾಂಶ ಕೊಡುತ್ತಿಲ್ಲವೇ ಎಂಬಂತಹ ಜಜ್ಮೆಂಟ್‌ಗಳ ಮಧ್ಯೆ ಮಕ್ಕಳನ್ನು ನೋಡಿಕೊಳ್ಳುವ ಹೊಣೆ ಹೆಣ್ಣೊಬ್ಬಳದ್ದೇ ಎಂಬ ನ್ಯಾಯ ಎಷ್ಟು ಸರಿ, ಕಾನೂನು, ನ್ಯಾಯಾಲಯಗಳು ಇದರ ಬಗ್ಗೆಯೂ ಚಿಂತಿಸಬೇಕಲ್ಲವೇ ಎಂದು ಪ್ರಶ್ನಿಸುತ್ತಾರೆ. 

ಎಷ್ಟೇ ತಂತ್ರಜ್ಞಾನ ಬಂದರೂ ಯುದ್ಧದಲ್ಲ್ಲಿ ಮಹಿಳೆಯ ಸ್ಥಿತಿ ಬದಲಾಗಲಿಲ್ಲ. ಯಾವ ಅಂತರರಾಷ್ಟೀಯ ಕಾನೂನುಗಳೂ ಸಂಘರ್ಷದ ಸಂದರ್ಭದಲ್ಲಿ  ಮಹಿಳೆಯನ್ನು  ರಕ್ಷಿಸುತ್ತಿಲ್ಲ ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ.  ಕುವೆಂಪು ಹೇಳಿರುವ ‘ಮನೆಮನೆಯಲ್ಲಿ ನೀನಾಗಿಹೆ ಗೃಹಶ್ರೀ ... ಹೆಸರಿಲ್ಲದ ನಿನಗೆ ಹೆಸರು ಗೃಹಸ್ತ್ರೀ’ ಎನ್ನುವ ಮಾತಿನ ಮೂಲಕ ಆರಂಭವಾಗಿರುವ ಕೃತಿಂiಲ್ಲಿ  ದಿಟ್ಟ ಪ್ರತಿಭಟನೆ ಮಾತ್ರ ಅರಿವನ್ನು ಬೆಳೆಸಬಲ್ಲುದು. ಎಲ್ಲೇ ಏನೇ ಘಟನೆ ಮಹಿಳೆ ಮೇಲೆ ನಡೆಯಲಿ ಆ ಕ್ಷಣದಲ್ಲಿ ಪ್ರತಿಭಟಿಸುವುದೇ ಪರಿಹಾರ ಎನ್ನುವ ಸಲಹೆಯನ್ನೂ ಸೂಚಿಸುತ್ತಾರೆ. 

ಆಂತರಿಕ ಸಂಘರ್ಷದಿಂದ ಸ್ತ್ರೀ- ಪುರುಷ ನಡುವಿನ ಸಾಮರಸ್ಯ ಮರೆಯಾಗುತ್ತಿದೆಯೇನೋ ಎಂಬ ವಿಷಯವು ಕೃತಿಯಲ್ಲಿ ಕಂಡುಬರುತ್ತದೆ.  ‘ಯಾಕೋ ನನ್ನತನ ಇಲ್ಲದ ಆ ಮನೆ  ಬ್ಯಾಡ ಎನಿಸ್ತಿದೆ ಎನ್ನುವ ಕಂಪ್ಯೂಟರ್ ಸೈನ್ಸ್ ಓದಿದ ಸೊಸೆಯ ಚಿತ್ರಣ, ಕುಟುಂಬ ಸಂತೋಷದಲ್ಲಿ ತಮ್ಮ ಸಂತೋಷವನ್ನು ಕಾಣುವ ನಮ್ಮ ಹೆಣ್ಣುಮಕ್ಕಳು ತಮ್ಮತನವನ್ನು  ರೂಢಿಸಿಕೊಳ್ಳುವುದು ಯಾವಾಗ ಎಂದು ಪ್ರಶ್ನಿಸುತ್ತಾರೆ.  

ಮೀ ಟೂ- ಮೆನ್ ಟೂ ಎಂಬ ಕೊನೆಯ ಅಧ್ಯಾಯದಲ್ಲಿ, ಮಹಿಳೆ ಅನುಭವಿಸುವ, ಯಾರಲ್ಲೂ ಹೇಳಿಕೊಳ್ಳಲಾಗದ ತಳಮಳವನ್ನು ಚಿತ್ರಿಸಿದ್ದಾರೆ. ಸಬರಮತಿ ಆಶ್ರಮದಲ್ಲಿನ ಕೆಲವು ಹುಡುಗಿಯರು ತಮಗಾದ ಸಂಕಟವನ್ನು ತೋಡಿಕೊಂಡಾಗ ಮಹಾತ್ಮಾ ಗಾಂಧೀಜಿ ಹೇಳಿದ ಮಾತನ್ನು ಅಲ್ಲಿ ಪ್ರಸ್ತಾಪಿಸುತ್ತಾರೆ. ‘ನಿಮ್ಮ ಶಾಲೆಯ ಬ್ಯಾಗಿನಲ್ಲಿ ಒಂದು ಚಾಕುವನ್ನು ತೆಗೆದುಕೊಂಡು ಹೋಗಿ, ಯಾರು ನಿಮ್ಮನ್ನು ಚುಡಾಯಿಸುತ್ತಾರೋ ಅಂತಹವರ ಕರುಳು ಹೊರಬರುವಂತೆ ಚಾಕುವಿನಿಂದ ಚುಚ್ಚಿಬಿಡಿ. ಅಹಿಂಸೆ ಎಂದರೆ ಹೇಡಿತನವಲ್ಲ  ಎಂಬ ಸಲಹೆ ಕೊಡುತ್ತಾರೆ ಗಾಂಧೀಜಿ. ಅಂದರೆ ಸಮಾನವಾಗಿ ನಂಬಿ ಬದುಕುವ ಸಮಾಜ ನಿರ್ಮಾಣವಾಗಬೇಕು. ಮಾನವಿಯತೆಯ ನೆಲೆಯಲಿ  ಅದನ್ನು ಕಟ್ಟಬೇಕೆಂದು ಲೇಖಕಿ ವಿವರಿಸುತ್ತಾರೆ.  

ಒಟ್ಟಿನಲ್ಲಿ, ಈ ಕೃತಿಯು ಮಹಿಳೆಯಲ್ಲಿ ನಿರಂತರವಾಗಿ ಹರಿಯುವ ದುಃಖ, ತಲ್ಲಣದ ಧಾರೆಯನ್ನು ಎಳೆಎಳೆಯಾಗಿ ಬಿಡಿಸಿಡುವಲ್ಲಿ  ಸಫಲವಾಗಿದೆ. ‘ಇದೇ ವೇಳೆ ಅಸ್ಮಿತೆಯ ಹೋರಾಟಕ್ಕೆ  ದುರ್ಗೆಯಂತೆ ನಿಂತು ಹೋರಾಡಬೇಕಿದೆ ಎಂಬ ಮಾತು ಮಹಿಳೆಯರಲ್ಲಿ ಕೆಚ್ಚನ್ನು ಹುಟ್ಟಿಸುತ್ತದೆ. ಅತಿ ಸೂಕ್ಷ್ಮವಾದ  ವಿಚಾರಗಳ ಈ ಕೃತಿಯು ಓದುಗರನ್ನು  ದಟ್ಟವಾದ ಚಿಂತನೆಗೆ ಹಚ್ಚುತ್ತದೆ.

 


Comments

Popular posts from this blog