ಭಾವಗಳ ಹೂರಣ ತುಂಬಿದ 

‘ಭಾವ ದರ್ಪಣ’ 


ಇದು ಒಂದು ಹನಿಗವನ ಸಂಕಲನ. ಇದನ್ನು ಕವಯತ್ರಿ ನೀವಿಯಾ ಗೋಮ್ಸ್, ಮುರ್ಡೇಶ್ವರ ಇವರು ರಚಿಸಿದ್ದಾರೆ ಅವರ ಚೊಚ್ಚಲ ಕವನ ಸಂಕಲನವಿದು. ತಮ್ಮ ಮನದಲ್ಲಿ ಹುಟ್ಟಿದ ಪ್ರತಿ ಭಾವಗಳನ್ನು ಹನಿ ನುಡಿಗಳ ಮೂಲಕ ನಲಿಯುವಂತೆ ಮಾಡಿದ್ದಾರೆ. ಇಲ್ಲಿನ ಪ್ರತಿಯೊಂದು ಹನಿಗವನ ಕವಯತ್ರಿಯ ಮನದ ಮಾತುಗಳಾಗಿದ್ದು, ನಮ್ಮನ್ನು ಆವರಿಸುತ್ತಾ ಸಾಗುತ್ತವೆ. ಆಶಯ, ಕನಸು, ದುಃಖ, ನಗು, ಅಮ್ಮನ ಪ್ರೀತಿ, ಅಪ್ಪನ ಕಾಳಜಿ.... ಹೀಗೆ ವಿವಿಧ ಭಾವನೆಯ ಬಿತ್ತರಿಕೆಯನ್ನು ಈ ಸಂಕಲನದಲ್ಲಿ ಮಾಡಿದ್ದಾರೆ.

 ಪ್ರತಿ ಕವನವನ್ನು ಓದಿದಾಗ ಅವು ನಮ್ಮನ್ನು ಒಂದು ಕ್ಷಣ ಯೋಚಿಸುವಂತೆ ಮತ್ತು ಪರಾಮರ್ಶಿಸುವಂತೆ ಮಾಡುತ್ತವೆ. ಅಂದರೆ ಪ್ರತಿ ಹನಿಗವನದಲ್ಲೂ ಭಾವಗಳ ಹೂರಣ ಹೇರಳವಾಗಿ ತುಂಬಿದೆ. ಭಾವನೆಗಳನ್ನು ಪದಗಳಿಂದ ಅತಿ ಚಂದದಿಂದ ಇಲ್ಲಿ ಅಲಂಕರಿಸಿದ್ದಾರೆ. ತುಂಬಾ ಚಂದದ ಹೋಲಿಕೆಗಳ ಮೂಲಕ ಪದದ ಚಿತ್ತಾರವನ್ನು ಬಿಡಿಸಿ ಹನಿಗವನದಲ್ಲಿ ಬಂಧಿಸಿದ್ದಾರೆ. ಒಟ್ಟೂ  ೧೦೭ ಹನಿಗವನಗಳು ಈ ಕೃತಿಯಲ್ಲಿವೆ.

ಮೊದಲ ಹನಿಗವನ  ‘ಅಪ್ಪ’. ಆತ ಜೊತೆಗಿದ್ದರೆ ಯಾವುದೇ ಅಭದ್ರತೆ ಇಲ್ಲ. ತನ್ನ ವಿಶಾಲ ಪ್ರಪಂಚವೇ ಅಪ್ಪ ಎನ್ನುವ ಅದ್ಭುತವಾದ ಮಾತನ್ನು ಇಲ್ಲಿ ದಾಖಲಿಸಿದ್ದಾರೆ. ಅಪ್ಪನಿಗೆ ಮಕ್ಕಳೇ ಪ್ರಪಂಚ. ಮಕ್ಕಳಿಗೂ ಅಪ್ಪನೇ ಪ್ರಪಂಚ. ತಮ್ಮೆಲ್ಲ ಜೀವನವನ್ನು ಮಕ್ಕಳಿಗಾಗಿ ಮೀಸಲಿಡುವ, ಭದ್ರತೆಯನ್ನು ಕೊಟ್ಟು ಆಪ್ತಮಿತ್ರನಾಗಿ, ಸರಳತೆಯ ರೂಪವನ್ನು ಹೊಂದಿರುವವನೇ ಅಪ್ಪ ಎನ್ನುವುದನ್ನು ತುಂಬಾ ಮನೋಹರವಾಗಿ ಇಲ್ಲಿ ವಿವರಿಸಿದ್ದಾರೆ 

   ಅದೇ ರೀತಿ ‘ಅಮ್ಮ’ ಎನ್ನುವ ಇನ್ನೊಂದು ಹನಿಗವನ ಇಲ್ಲಿದೆ. ಅಮ್ಮನು ಕೂಡ ತನ್ನ ನರಕಸದೃಶ ನೋವನ್ನು ಸಹಿಸಿ ನಮ್ಮನ್ನು ಭೂಮಿಗೆ ಪರಿಚಯಿಸಿದವರು. ತನ್ನ ಮಕ್ಕಳಿಗಾಗಿ ಜೀವ ಸವೆಸಿದ ಕೋಮಲ ಮನದವಳು ಎಂದು ವರ್ಣಿಸುತ್ತಾರೆ. ಆಕೆಯ ಆಗಮನದಲ್ಲಿ ಮಕ್ಕಳಿಗೆ ತಂಗಾಳಿ ಅನುಭವವಾಗುವುದು, ಪ್ರೀತಿಯ ಮಹಾಮಿಲನ ಸಿಗುವುದು. ಪ್ರತಿಫಲ ಬಯಸದ ತಾಯಿಯ ತ್ಯಾಗ ಅವರ್ಣನೀಯ. ನಿಷ್ಕಲ್ಮಶ ಪ್ರೀತಿಗೆ ಇನ್ನೊಂದು ಹೆಸರೇ ತಾಯಿ ಎಂದು ಸುಂದರವಾಗಿ ವರ್ಣಿಸಿದ್ದಾರೆ.

 ‘ಹಳ್ಳಿ’  ಹನಿಗವನದಲ್ಲಿ ಹಳ್ಳಿಯೆಂದರೆ ಸುಂದರ ಸ್ವರ್ಗ ಎಂದು ವರ್ಣಿಸಿದ್ದಾರೆ. ಬಾಂಧವ್ಯ ತುಂಬಿದ ನೆಲವೇ ಹಳ್ಳಿ. ಪ್ರೀತಿಯ ಸೊಗಡು, ಹಸಿರು ತುಂಬಿರುವ ಸ್ವರ್ಗವೇ ಹಳ್ಳಿ, ಜನಪದ ಕಲೆಗಳ ತವರು ಹಳ್ಳಿ. ಪ್ರಕೃತಿಯ ಸಿಹಿ ಸೊಬಗ ಉಣಬಡಿಸುವುದೇ ಹಳ್ಳಿ ಎನ್ನುವ ಮೂಲಕ ಹಳ್ಳಿಯ ಸೌಂದರ್ಯವನ್ನು ಕಟ್ಟಿಕೊಟ್ಟಿದ್ದಾರೆ.

 ಮಗಳು ಮನೆಯೊಳಗಿದ್ದರೆ ಮನೆ ನಂದಗೋಕುಲವಾಗುವುದು. ತಂದೆಗೆ ಎರಡನೇ ತಾಯಿಯಾಗುವಳು. ಮಹಾಲಕ್ಷ್ಮಿ ಸ್ವರೂಪಿಣಿಯಾಗಿ ಮನೆಯಲ್ಲಿ ನೆಮ್ಮದಿ, ಸಂಭ್ರಮ ನೆಲೆಸಿರುತ್ತದೆ ಎನ್ನುವುದನ್ನು ‘ಮಗಳು’ ಮೂಲಕ ವಿವರಿಸಿದ್ದಾರೆ. ಹೆಣ್ಣು ಅರ್ಥವಾಗದ ಒಗಟು, ಆದರೆ ಬಾಳಿನ ಕಣ್ಣು. ಕೋಮಲ ಮನಸ್ಸಿನವಳು, ಕುಸುಮದಷ್ಟೇ ಕೋಮಲೆ. ಈಕೆ ತನ್ನೊಡಲೊಳು ಹೊಸ ಜೀವವ ಸೃಷ್ಟಿಸುವಳು ಎಂದು ‘ಹೆಣ್ಣು’ನ  ಚಿತ್ರಣ ಕಟ್ಟಿದ್ದಾರೆ. ‘ಜೀವನ’ದಲ್ಲಿ  ಯಾರಿರಲಿ, ಯಾರಿರದಿರಲಿ/  ಸಾಗುವುದೀ ಜೀವನ/ ಖುಷಿಯ ದಿಬ್ಬಣವಿರಲಿ/ ನೋವಿನ ಕಡಲಿರಲಿ/ ಸಾಗುವುದೀ ಜೀವನ/ ಎಂದು ಸರಳವಾಗಿ , ಮನದಟ್ಟಾಗುವಂತೆ ವಿವರಿಸಿದ್ದಾರೆ.

  ಪ್ರೀತಿ, ಪ್ರೇಮದ ಕುರಿತ ಒಂದಷ್ಟು ಹನಿಗಳಿವೆ. ‘ನೀನಿಲ್ಲದೆ’ ಎನ್ನುವಲ್ಲಿ,  ನೀನಿಲ್ಲದೆ ನಾ ಅಪೂರ್ಣ/ ತಿಳಿಯಲಾರೆ ಪ್ರೀತಿಯ ಮರ್ಮ/ ಆಗುತ್ತಲ್ಲ ಪದಗಳ ಮಿಲನ/ ಕಾಯುತ್ತಿರುವೆ ನಿನ್ನೀ ಆಗಮನ/ ಎಂದರೆ, ‘ಆರಾಧಿಸುವಾಸೆ’ಯಲ್ಲಿ  ನನ್ನ ಜೀವ ನಿನ್ನೀ ಮಡಿಲಲ್ಲಿ/ ಮುಡಿಪಾಗಿಡುವಾಸೆ/ ಕಡಲಂತಿರುವ ನಿನ್ನೊಂದಿಗೆ/ ನದಿಯಂತೆ ನಾ ಸೇರುವಾಸೆ/ ನಿಷ್ಕಲ್ಮಶ ಪ್ರೀತಿಯಲ್ಲಿ/ ಆರಾಧಿಸುವಾಸೆ ಎಂದು ಹೇಳುತ್ತಾರೆ.  

‘ನೀನಿಲ್ಲದೆ’ ಎನ್ನುವ ಹನಿಗವನದಲ್ಲಿ,  ನೀನಿಲ್ಲದೆ/ಇಳಿಸಂಜೆಯಲಿ ಕಡಲ ತೀರಕ್ಕೂ/ ಖುಷಿ ಇಲ್ಲ/ ಬೆಳದಿಂಗಳು ಸೂಸುವ ಶಶಿಗೂ/ಹೊಳಪಿಲ್ಲ/ ನಾ ಮುಡಿದ ಮಲ್ಲಿಗೆಗೂ/ ಕಂಪಿಲ್ಲ/ ಬೀಸುವ ತಂಗಾಳಿಗೂ/ ತಂಪಿಲ್ಲ/ ಎನ್ನುವ ಮೂಲಕ ತಮ್ಮ ಮನದ ಭಾವನೆಗಳನ್ನು ಅತಿ ಚಂದದ ಪದಗಳಿಂದ ಅಲಂಕರಿಸಿರುವುದನ್ನು ಇಲ್ಲಿ ಕಾಣಬಹುದು. ಪ್ರೀತಿಯ ಹಪಹಪಿಕೆಯನ್ನು ಲೇಖಕಿ ಇಲ್ಲಿ ಸುಂದರವಾಗಿ ಕಟ್ಟಿಕೊಟ್ಟಿರುವುದನ್ನು  ಕಾಣಬಹುದು.

 ಕಡಲ ತೀರ ನೀನಾದರೆ/ ಹಾಲುನೊರೆಗೈವ/ ಶಾಂತ ಅಲೆ ನಾನು/ ಅವನಿ ನೀನಾದರೆ/ ಹನಿಯಾಗಿ ನಿನ್ನ/ ಸೇರುವ ಮೇಘ ನಾನು/ ಸಾಗರ ನೀನಾದರೆ/ ಧುಮ್ಮಿಕಿ ಹರಿದು/ ನಿನ್ನ ಸೇರುವ/ ನದಿ ನಾನು/ ಇಲ್ಲಿ ಪ್ರೀತಿಯ ಬಂಧವನ್ನು ಚಿತ್ರಿಸಿರುವುದನ್ನು ಕಾಣಬಹುದು. ತಮ್ಮಲ್ಲಿ ಭೋರ್ಗರೆವ ಭಾವನೆಗಳನ್ನು ಸುಂದರವಾಗಿ ಹೆಣೆದಿರುವುದರ ಜೊತೆಗೆ ಸುಂದರ ಹೋಲಿಕೆ ನೀಡುವಲ್ಲಿಯೂ ತಮ್ಮ ಜಾಣ್ಮೆಯನ್ನು ಇಲ್ಲಿ ಮೆರೆದಿದ್ದಾರೆ.

 ಸುಖ -ದುಃಖದಲ್ಲಿ ಭಾಗಿಯಾಗುವುದು, ನೋವು -ನಲಿವಿನಲ್ಲಿ ಜೊತೆಗಿರುವುದು, ಸರಿ- ತಪ್ಪಿನಲ್ಲೂ ಕ್ಷಮೆ ನೀಡುವುದು, ಸದಾ ಬೆಂಗಾವಲಾಗಿ ನಿಂತು ಸನ್ಮಾರ್ಗದಲ್ಲಿ ನಡೆಸುವುದು ‘ಸ್ನೇಹ’ ಎಂಬ ವ್ಯಾಖ್ಯಾನ ಕೊಡುತ್ತಾರೆ. ‘ಒಡೆದ ಹೃದಯ’ದಲ್ಲಿ ಒಬ್ಬ ಪ್ರೇಮಿಯಲ್ಲಿ ಭಾವನೆಗಳೇ ಇಲ್ಲದಿದ್ದರೆ ಎಷ್ಟು ಪ್ರೀತಿ ವಿಚಾರ ಮಾತನಾಡಿದರೂ ಫಲವಿಲ್ಲ. ಮುದ್ದು- ಪೆದ್ದು ಮಾತುಗಳನ್ನಾಡುತ್ತಾ ಪ್ರೇಮಿಯೊಂದಿಗೆ ತಿರುಗಾಡುವ ಹಂಬಲವಿರುತ್ತದೆ. ಆದರೆ ಆತ ತನ್ನ ಮನಸ್ಸಿನ ಭಾವನೆಗಳಿಗೆ ವಿರುದ್ಧವಾಗಿ ತಿರಸ್ಕಾರ ಕೊಟ್ಟಾಗ ಆಗುವುದು ನೋವು ಎನ್ನುವುದನ್ನು ಅರ್ಥಗರ್ಭಿತವಾಗಿ ಇದರಲ್ಲಿ ಸಾರಿದ್ದಾರೆ. 

 ಒಟ್ಟಿನಲ್ಲಿ, ಸರಳ, ಸುಂದರ ಭಾಷೆಯಲ್ಲಿ, ಎಲ್ಲರ ಮನಸೆಳೆಯುವ, ಅಂದಚಂದದ ಹನಿಗವನಗಳು ಇಲ್ಲಿವೆ. ಅವುಗಳನ್ನು ಓದಿಯೇ ಆನಂದಿಸಬೇಕು. ಕವಯತ್ರಿ ನೀಡುವ ಹೋಲಿಕೆಗಳು ತುಂಬಾ ಸೊಗಸಾಗಿವೆ. ಕವಿತೆಯ ಸೊಗಡನ್ನು ತನ್ನೊಳಗೆ ಬೆರೆಸಿಕೊಂಡು ಹನಿಗವನಗಳ ಮೂಲಕ ಅದರ ಮುತ್ತನ್ನು  ನೀಡಿದ್ದಾರೆ. ಇವು ನಮ್ಮನ್ನು ಆವರಿಸಿಕೊಳ್ಳುತ್ತವೆ.

.......................


Comments

Popular posts from this blog