ಸ್ವಸ್ಥ, ಸಮಸಮಾಜದ ಕನಸು ಕಾಣುವ 
‘ನೆತ್ತಿ ಸುಟ್ಟ  ಕಾಲ’ 



ಮಹಿಳೆ- ಪುರುಷ, ಪುರುಷ -ಮತ್ತು ಮಹಿಳೆ ಹೀಗೆ ಎರಡು ಬಗೆಯ ಸಂವೇದನೆಗಳನ್ನು ಸೂಕ್ಷ್ಮವಾಗಿ ಪರಸ್ಪರ ಮುಖ್ಯವಾಗಿಸಿಕೊಂಡು ಬರೆದ ಕವನ ಸಂಕಲನ  ‘ನೆತ್ತಿ ಸುಟ್ಟ ಕಾಲ’.  ಎರಡು ಲೋಕಗಳ ಮನೋವ್ಯಾಪಾರದ ನಿಜಸ್ಥಿತಿಗಳನ್ನು ಇಲ್ಲಿ ಬಯಲುಗೊಳಿಸಲು ಲೇಖಕಿ ಹೊರಟಿದ್ದಾರೆ. ಈ ಕವನ ಸಂಕಲನದ ಕರ್ತೃ ಪ್ರೊ. ಆರ್. ಸುನಂದಮ್ಮ. ಜನಪ್ರಿಯ ಪ್ರಾಧ್ಯಾಪಕರಾಗಿ, ನಂತರ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಆಗಿ ನಿವೃತ್ತರಾದವರು. 

ಕೃತಿಯಲ್ಲಿ ಹೆಣ್ಣು ಗಂಡು ನಡುವಿನ ಕಾಯ, ಕಾಮ, ಪ್ರೇಮ, ಜೀವನದ ಶೋಷಣೆ  ಜೊತೆಗೆ ಭೂಮಿಯ ಮೇಲಿನ ಸಮಸ್ತವನ್ನು ಯಜಮಾನಿಕೆಯ ಧೋರಣೆಯಲ್ಲಿ ಅಧೀನವಾಗಿಸಿಕೊಂಡಿರುವ ಪುರುಷ ಅಹಂಕಾರದ, ಜ್ಞಾನ, ಗರ್ವ, ಧರ್ಮ, ಜಾತಿ, ಲಿಂಗ, ಭೇದ, ರಾಜಕಾರಣ ಇವು ನಮ್ಮ ಬದುಕನ್ನು ನಿಯಂತ್ರಿಸುತ್ತಿರುವ ಕುರಿತು  ವಿಚಾರವಿದೆ. ವ್ಯಕ್ತಿ ಮತ್ತು ಸಮಷ್ಟಿಯ ಜೀವನ ಹೇಗೆ ನರಕವಾಗಿದೆ ಎನ್ನುವುದನ್ನು ಇವರ ಕವಿತೆಗಳಲ್ಲಿ ಕಾಣಬಹುದು. ಇಲ್ಲಿ ಕಲ್ಯಾಣ ಸಮಾಜದ ಕನಸಿದೆ, ಮಾನವೀಯತೆ ಸತ್ತಿರುವ ಎದೆಗಳಲ್ಲಿ ಪ್ರೀತಿ, ಕರುಣೆಯ ಆರ್ದ್ರತೆ ಒಸರಲಿ ಎನ್ನುವ ನಿರೀಕ್ಷೆಯೂ  ಇz. ಒಟ್ಟಿನಲ್ಲಿ ಬದುಕಿಗೆ ಹಿಡಿದ ಕನ್ನಡಿ ರೂಪದ ಬಿಂಬಗಳು ಇಲ್ಲಿನ ಕವಿತೆಗಳಾಗಿವೆ.

ಸಂಕಲನದಲ್ಲಿ ಒಟ್ಟೂ ೪೦ ಕವಿತೆಗಳಿವೆ. ಇವುಗಳನ್ನು ಓದಿದಾಗ ಕವಯಿತ್ರಿ ಒಂದು ಶುದ್ಧ ಸಮಾಜವನ್ನು ಹುಡುಕುತ್ತಿರುವುದು ಕಂಡುಬರುತ್ತದೆ. ಕೆಲವು ಕವಿತೆಗಳು ರಾಜಕೀಯದ ವಿಷಯವನ್ನೇ ಎತ್ತಿ ಆಡಿವೆ. ಇದರ ಹಿಂದೆಯೂ ಒಂದು ಶುದ್ಧತೆಯ ಆಶಯ ಕಂಡುಬರುತ್ತದೆ. ಸಮಾಜದ  ಒಂದು ಬಾಗಿಲು ತೆರೆದುಕೊಳ್ಳಲಿ ಎನ್ನುವ ನಿರೀಕ್ಷೆ ಇರುವುದು ಮತ್ತು ನೋವು, ಸಿಟ್ಟು ಎಲ್ಲವೂ ಮಿಳಿತವಾದ ಅಭಿವ್ಯಕ್ತಿಯನ್ನು ಕಾಣಬಹುದು. ಇಲ್ಲಿನ ಕವಿತೆಗಳಲ್ಲಿ ಅಬ್ಬರವಿಲ್ಲ. ಶಾಂತತೆಯೂ ಇಲ್ಲ. ಸೂಕ್ಷ್ಮ ಮನಸ್ಸು ಮತ್ತು ಅದರ ವಿಷಾದ ಕಂಡುಬರುತ್ತದೆ. 

 ಅಕ್ಕನಂತೆ ಅಲೆದಾಡಿ/ ಮೀರಾಳಂತೆ ಭಜಿಸಿ/ ಹರನೂ ಇಲ್ಲ, ಹರಿಯೂ ಇಲ್ಲ/ ಅರ- ಅರೆದು ಹೋಯಿತು/ ಎನ್ನುವ ಮೂಲಕ ಜೀವನದ ವಿಷಾದವನ್ನು  ಸೂಕ್ಷ್ಮವಾಗಿ ‘ಈ ಲೋಕ’  ಕವನದಲ್ಲಿ ಚಿತ್ರಿಸಿದ್ದಾರೆ. ದ್ವಿಭಾವ ಸಂವೇದನೆಯ ಸೂಕ್ಷ್ಮಗಳನ್ನು ಮುಖಾಮುಖಿಯಾಗಿಸಿದ ಕವನ ಹೀಗಿದೆ. ಎದುರಲ್ಲಿ ಬಂದ ಕಣ್ಣು/ ಎದೆ ತಾಗಿ/ ಕೈ ಸರಕ್ಕನೆ ಜಾರುವುದು ಸೀರೆ ತುದಿಗೆ/ ಮನ ಕಲಕಿ, ನಾನಾಗಿಲ್ಲದ ಸ್ಥಿತಿ/ ಕೆಲವೊಮ್ಮೆ ಜಡವಾಗಿ/ ಮತ್ತೊಮ್ಮೆ ಪುಲಕವಾಗಿ/ ಹೆಣ್ಣಿನ ಹರಯವನ್ನು ಕಾಣುವ ಪುರುಷ ಲೋಕದ ಚಿತ್ರಣ ಇದು. ಇಲ್ಲಿ ಕಾಣುವುದರ ಹಿಂದಿನ ಚಿತ್ರಣವನ್ನು ಗಮನಿಸಬಹುದು. 

ದೇಶಪ್ರೇಮದಂತೆ ಮಾನವ ಪ್ರೇಮವು ದೊಡ್ಡದು. ಆದರೆ ನಮ್ಮೊಳಗಿನ ನನ್ನ ಎನ್ನುವುದನ್ನು ಅರಿಯದೆ ಯಾವ ಗಡಿಗೆರೆಗಳನ್ನೂ ದಾಟಲು ಸಾಧ್ಯವಿಲ್ಲ ಎ ನ್ನುವುದನ್ನು ‘ಎಲೆ’ ಎನ್ನುವ ಕವನದಲ್ಲಿ ಬಿಂಬಿಸಿದ್ದಾರೆ. ‘ಶಾದಿಯ ಯಾದಿ’ ಕವನದಲ್ಲಿ ಹೆಣ್ಣಿನ ಶೋಷಣೆಯ ನೆಲೆಯನ್ನು ತೋರಿಸಿಕೊಟ್ಟಿದ್ದಾರೆ. ನನ್ನ ಗಂಡನ ಮನೆಯಲ್ಲಿ, ಮನದಲ್ಲಿ ನುರಿತ ಸೇವಕಿ ಆಗಿ, ಬೇಕು -ಬೇಡಗಳ ಪಟ್ಟಿ ತಾರದೆ, ಮಾಡುವ ಕೆಲಸಕ್ಕೆ ಕಿಮ್ಮತ್ತು ಕೇಳದೆ, ದೊಡ್ಡ ಮನೆ ಎಂದು ಹೇಳದೆ, ಮಾತಿಗೆ ಮಾತು ಆಡದೆ, ತುಟಿ ಬಿಚ್ಚದೆ ಮೌನವಾಗಿ ಒಳ್ಳೆ ಭಾವದಲ್ಲಿ ಇದ್ದು, ಕೊಟ್ಟಿದ್ದನ್ನು ಉಂಡು ಪರಮಾನ್ನ ಎನ್ನಬೇಕು ಎಂಬ  ಸ್ಥಿತಿಯಲ್ಲಿರಬೇಕಾದ್ದನ್ನುವಿವರಿಸಿದ್ದಾರೆ. ಇಲ್ಲಿ ತನ್ನ ಮದುವೆಯ ಸಂಭ್ರಮವನ್ನೂ ಆಕೆ ಮರೆತು ಬಿಡುವ ಸನ್ನಿವೇಶ ಎದುರಾಗುತ್ತದೆ ಎನ್ನುವುದನ್ನು ಹೇಳುತ್ತಾರೆ. ‘ಬದುಕು’ ಎನ್ನುವ ಇಲ್ಲಿನ ‘ರತಿ’ಕವನ ಉಲ್ಲೇಖನೀಯ.  ಭಾರತೀಯ ಪುರಾಣಗಳಲ್ಲಿ ರತಿ ಎನ್ನುವುದು ಪುರುಷ ನೆಲೆಯ ಲೈಂಗಿಕ ಮಾದರಿಯ ಪ್ರತಿಬಿಂಬ. ಸ್ತ್ರೀಯ ಲೈಂಗಿಕತೆಯನ್ನು ಸದಾ ನಿಷ್ಕ್ರಿಯ ನೆಲೆಯಲ್ಲೇ ಕಾಣುವುದು, ಗುರುತಿಸದಿರುವುದು, ಮಾನ್ಯ ಮಾಡದಿರುವುದು ಕುರಿತಾಗಿದೆ. ಈ ಮೂಲಕ ಹೆಣ್ಣಿನ ಕ್ರಿಯಾಶೀಲ ವ್ಯಕ್ತಿತ್ವಕ್ಕೆ  ತೊಂದರೆ ಮಾಡಲಾಗುತ್ತಿದೆ ಎನ್ನುತ್ತಾರೆ. ‘ನಾರಿಯರು’ ಎನ್ನುವ ಕವನದಲ್ಲಿ ಲೈಂಗಿಕತೆ ಎನ್ನುವುದು ಕೇಳುವ-ಹೇಳುವ  ರೀತಿಯಲ್ಲಿದ್ದಾಗ  ಅರ್ಥಪೂರ್ಣ ಸಂಬಂಧ ತೆರೆದಿಡುತ್ತದೆ. ಇಲ್ಲಿ ಶ್ರೇಷ್ಠ- ಕನಿಷ್ಟ ಎನ್ನುವುದನ್ನು ಇಲ್ಲ. ಬಾಳಪಯಣದಲ್ಲಿ ಇದು ಸಮಗ್ರತೆಯತ್ತ ಇಡುವ ಒಂದು ಹೆಜ್ಜೆ ಎನ್ನುವುದನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ.

‘ಮಾಧವ’ ಎಂಬ ಕವನದಲ್ಲಿ  ಗೋಪಾಲಕನು ಗೋಪಿಕೆಯರು, ರಾಧೆ, ರುಕ್ಮಿಣಿ ಹಾಗೂ ಸತ್ಯಭಾಮೆಯರ ಸಾಂಗತ್ಯದಿಂದ ಪರಿಪೂರ್ಣನಾಗುತ್ತಾ ಸಾಗಿದ. ದೇವತ್ವವನ್ನು ಪಡೆಯುವಂತಾದ ಎಂಬ ಮಾತನ್ನಡುತ್ತಾರೆ. ‘ಭಯ’ ಎನ್ನುವ ಕವನದಲ್ಲಿ ಪೂರ್ವಾರ್ಧ ಹೆಣ್ಣಿ ಮನದಲ್ಲಿ, ಒಡಲಲ್ಲಿ ಇರುವ ಭಯದ ಬಗ್ಗೆ ಇದ್ದರೆ, ಉತ್ತರಾರ್ಧದಲ್ಲಿ  ಬದುಕುವ ಅವಕಾಶವಿಲ್ಲ/ ಇದು ಹುಲ್ಲು, ನೀರು, ಗಾಳಿ/ ಹಣ್ಣು, ಹಾಲು., ಅನ್ನ ರೂಪದಲ್ಲಿ/  ಒಂದು ನಿಂತಿದೆ/ ಎನ್ನುತ್ತಾ  ಆಧುನೀಕರಣದಿಂದಾಗಿ  ನಮ್ಮ ವಾತಾವರಣ. ಆಹಾರ ವಿಷಯಮಯವಾಗುತ್ತಿರುವುದು ಭಯದಿಂದ ಹೇಳುತ್ತಾರೆ.

 ಒಟ್ಟಿನಲ್ಲಿ ಇಲ್ಲಿನ ಕವಿತೆಗಳನ್ನು ಗಮನಿಸಿದಾಗ ನಾವೆಲ್ಲರೂ ‘ನೆತ್ತಿ ಸುಟ್ಟ ಕಾಲ’ದಲ್ಲಿ ಅಂದರೆ ಚಿಂತಿಸುವ ಶಕ್ತಿಯನ್ನು ಕಸಿದುಕೊಂಡ, ಸಮಾನತೆಯ ಕನಸನ್ನು ಚಿವುಟಿ ಹಾಕಿದ, ಬದುಕು ಅವಕಾಶವನ್ನು ಇಲ್ಲವಾಗಿಸಿದ ಕಾಲದಲ್ಲಿ ಇದ್ದೇವೆ ಎನ್ನುವುದನ್ನು ಹೇಳುತ್ತಾರೆ. ಇದೊಂದು ವಿಶಿಷ್ಟ ಮತ್ತು ಅರ್ಥಪೂರ್ಣ ಶೀರ್ಷಿಕೆ ಎನ್ನುವುದು ಸಂಕಲನ ಓದಿದಾಗ ಕಂಡುಬರುತ್ತದೆ. ಆಧುನೀಕರಣ, ಯುದ್ಧೋನ್ಮಾದದ ಪರಿಣಾಮವನ್ನು ಹೇಳುತ್ತಾ, ಅಧಿಕಾರದ ಮತ್ತು ಯಜಮಾನಿಕೆಯ ಹಪಾಹಪಿಗೆ  ನಲುಗುವ ಜೀವ ಮತ್ತು ಜೀವನ, ಕಾಳಜಿ ವಿಷಯಗಳು ಇಲ್ಲಿನ ಅನೇಕ ಕವನಗಳ ತಿರುಳಾಗಿವೆ.  

-ದತ್ತಾತ್ರೇಯ ಹೆಗಡೆ. ಶಿವಮೊಗ್ಗ 

.....................


Comments

Popular posts from this blog